ಇದು ಎಂಥಾ ಲೋಕವಯ್ಯಾ ( ಪ್ರಹಸನ-25)
( ಪ್ರಹಸನ-25)
ಇದು ಎಂಥಾ ಲೋಕವಯ್ಯಾ
****************************
ಹಾಡು :
ಎಂಥ ಲೋಕವಯ್ಯ ....
ಇದು ಎಂಥಾ ಲೋಕವಯ್ಯ....
ಸಿರಿತನವು ಮೆರೆವ, ಬಡತನವು ಇರುವ
ದೊರೆತನವು ಉರಿವ, ಹಸಿವು ಉದರ ಬಗೆವ
ಅಸಮಾನತೆ ಇರುವ ಇದು ಎಂಥಾ ಲೋಕವಯ್ಯ
ಬೆವರಿಗೆ ಬೆಲೆ ಅರಸಿ ಅಲೆದಾಡುವ,
ಬದುಕುವ ಹಕ್ಕಿಗೆ ದಿನವು ಹೋರಾಡುವ,
ದುಡುಮೆ ಹುಡುಕಿ ಸೆಣಸಾಡುವ,
ಭರವಸೆಗಳೇ ತುಂಬಿ ಮೆರೆವಾ ..
ಇದು ಎಂಥ ಲೋಕವಯ್ಯ
ಕೂಲಿಯವ : ಅಯ್ಯಾ ಹಸಿವು. ಅನ್ನ ಬೇಕು ಅನ್ನ. ಅಕ್ಕಿ ಕೊಡಿ ಅಕ್ಕಿ.
ರೈತ : ಅಣ್ಣಾ ಬೀಜ ಗೊಬ್ಬರ ದರ ಹೆಚ್ಚಾಗಿದೆ, ಬೆಳೆಗೆ ಬೆಲೆ ಸಿಗ್ತಿಲ್ಲ, ಸಹಾಯ ಮಾಡಿ
ಮಹಿಳೆ : ಮನೆ ತುಂಬಾ ಮಕ್ಕಳು. ಕಿತ್ತು ತಿನ್ನೋ ಬಡತನ ಸಂಸಾರ ಹೇಗೆ ನಡೆಸಲಿ.
ಕೈಪಕ್ಷ : ಚಿಂತೆ ಬಿಡಿ ಬಂಧುಗಳೇ, ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ಹತ್ತು ಕಿಲೋ ಅಕ್ಕಿ ಗ್ಯಾರಂಟಿಯಾಗಿ ಕೊಡ್ತೇವೆ.
ಹೂಪಕ್ಷ : ಗ್ಯಾರಂಟಿ ಅಕ್ಕಿ ಈಗಲೇ ಕೊಡಿ ಇಲ್ಲಾ ಜಾಗ ಖಾಲಿ ಮಾಡಿ.
ಕೈಪಕ್ಷ : ನುಡಿದಂತೆ ನಡೆಯುತ್ತೇವೆ. ಕಾಸು ಕೊಡ್ತೇವೆ ಅಂದರೂ ಹೂಪಕ್ಷದ ಕೇಂದ್ರ ಸರಕಾರ ಅಕ್ಕಿ ಕೊಡ್ತಿಲ್ಲಾ ನಾವೇನು ಮಾಡೋದು.
ಕೂಲಿಯವ : ಅಯ್ಯಾ ಹಸಿವು.. ಅನ್ನ ಬೇಕು ಅನ್ನ
ಕೈ ಪಕ್ಷ : ಕೊಟ್ಟ ಮಾತಿನಂತೆ ಅಕ್ಕಿ ಕೊಟ್ಟೇ ಕೊಡ್ತೇವೆ. ಆದರೆ ನೋಡಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮೊದಲು ಅಕ್ಕಿ ಕೊಡ್ತೇನೆ ಅಂತಾ ಒಪ್ಪಿ ಈಗ ಆಗೋದಿಲ್ಲ ಅಂತಾ ಹೇಳ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೀತಿದ್ದಾರೆ. ನಾವೇನು ಮಾಡೋದು?
ಹೂಪಕ್ಷ : ಯಾರನ್ನ ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಿ. ಹತ್ತು ಕೆಜಿಗೆ ಒಂದೇ ಒಂದು ಗ್ರಾಂ ಕಡಿಮೆ ಕೊಟ್ಟರೂ ಹೋರಾಟ ಶುರು ಮಾಡ್ತೇವೆ ಎಚ್ಚರ.
ರೈತ : ಬೆಲೆ ಏರಿಕೆಯಿಂದಾಗಿ ಬದುಕೋದೇ ಕಷ್ಟ ಆಗಿದೆ. ಸಹಾಯ ಮಾಡಿ.
ಕೈಪಕ್ಷ : ಮಾಡ್ತೇವೆ, ಮಾಡೇ ಮಾಡ್ತೇವೆ. ಆದರೆ ಕೇಂದ್ರ ಸರಕಾರ ಮೋಸ ಮಾಡ್ತಿದೆ. ಬೇರೆ ರಾಜ್ಯಗಳಲ್ಲೂ ನಮಗೆ ಬೇಕಾದಷ್ಟು ಅಕ್ಕಿ ಸಿಗ್ತಿಲ್ಲಾ. ಕೇಂದ್ರ ಸರಕಾರದ ಗೋದಾಮುಗಳಲ್ಲಿ ಅಕ್ಕಿ ಕೊಳೀತಾ ಬಿದ್ದಿದೆ. ಆದರೂ ಕೊಡ್ತಿಲ್ಲ. ನಾವೂ ಹೋರಾಟ ಮಾಡ್ತೇವೆ.
ಮಹಿಳೆ : ಅಣ್ಣಂದೀರಾ. ಮನೇಲಿ ಬಡತನ. ತುಂಬಾ ಕಷ್ಟ ಇದೆ. ಏನಾದ್ರೂ ಮಾಡಿ..
ಕೈಪಕ್ಷ : ತಾಳ್ಮೆ ಇರಲಿ. ನುಡಿದಂತೆ ನಡೆಯುತ್ತೇವೆ. ನಿಮ್ಮ ಈ ದುಸ್ತಿತಿಗೆ ಆ ದುಷ್ಟ ಕೇಂದ್ರ ಸರಕಾರವೇ ಕಾರಣ. ನಾವು ಸುಮ್ಮನಿರುವುದಿಲ್ಲ. ನಿಮ್ಮ ಹಕ್ಕಿಗಾಗಿ ನಾವು ಹೋರಾಡುತ್ತೇವೆ.
ಹೂಪಕ್ಷ : ನೀವೇನು ಹೋರಾಡೋದು ಮಣ್ಣು. ಮತ್ತೆ ನಾವಿರೋದ್ಯಾಕೆ. ಅಕ್ಕಿ ಕೊಡಿ ಇಲ್ಲಾ ಪಕ್ಕಕ್ಕೆ ಸರಿದು ಹೋಗಿ.
ಕೂಲಿಯವ : ಅಣ್ಣಾ ಹಸಿವು.. ಅನ್ನ ಬೇಕು ಅನ್ನ.
ಕೈಪಕ್ಷ : ಇರಿ, ನಾವೂ ಅದೇ ಪ್ರಯತ್ನದಲ್ಲಿ ಇದ್ದೇವೆ, ಆದರೆ ಈ ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ನೀವು ಪಾಠ ಕಲಿಸಲೇಬೇಕು.
ಹೂಪಕ್ಷ : ಕಲಿಸ್ತಾರೆ, ಪಾಠ ಕಲಿಸಿಯೇ ಕಲಿಸ್ತಾರೆ. ಗ್ಯಾರಂಟಿ ಕೊಡ್ತೇವೆ ಅಂತಾ ಹೇಳಿ ಕೊಡದೇ ಹೋದರೆ ಜನಾ ನಿಮಗೆ ಮುಟ್ಟಿನೋಡುವಂತಾ ಪಾಠ ಕಲಿಸ್ತಾರೆ, ನೋಡ್ತಾ ಇರಿ.
ಕೈಪಕ್ಷ : ಇದಕ್ಕೆ , ಈ ದುರಹಂಕಾರಕ್ಕೆ ಜನರು ನಿಮ್ಮನ್ನ ಮನೆಗೆ ಕಳಿಸಿದ್ದಾರೆ ಅನ್ನೋದು ನೆನಪಿರಲಿ.
ಹೂಪಕ್ಷ : ಜನಾದೇಶವನ್ನ ನಾವು ಒಪ್ಪಿಕೊಂಡಿದ್ದೇವೆ.
ನಿಮ್ಮ ಗ್ಯಾರಂಟಿಗಳನ್ನ ನಂಬಿ ಜನತೆ ನಮಗೆ ಮಣ್ಣು ಮುಕ್ಕಿಸಿದ್ದಾರೆ. ಈಗ ಅದೇ ಗ್ಯಾರಂಟಿಗಳ ನೀವು ಕೊಡದೇ ಇದ್ದರೆ ನಿಮಗೂ ಮಣ್ಣು ತಿನ್ಸಿಯೇ ತಿನ್ನಿಸ್ತಾರೆ.
ರೈತ : ಅಯ್ಯೋ ಸಾಲ ಬಾಧೆ ತಾಳಲಾರೆ. ಸಹಾಯ ಮಾಡಿ.
ಕೈಪಕ್ಷ : ಸಹನೆ ಇರಲಿ. ನೀವು ಉಸಿರಾಡೋಕೆ ಏನು ಬೇಕೋ ಅಷ್ಟು ಸಹಾಯ ನಾವು ಮಾಡೇ ಮಾಡ್ತೇವೆ. ಅದಕ್ಕೇ ಗ್ಯಾರಂಟಿ ಜಾರಿ ಮಾಡ್ತಿದ್ದೇವೆ.
ಆದರೆ ಈ ಹೂಪಕ್ಷದವರು ಅಡ್ಡಿ ಮಾಡ್ತಿದ್ದಾರೆ.
ಮಹಿಳೆ : ಇನ್ನು ಆಗೋದಿಲ್ಲ. ಮಕ್ಕಳು ಹಸಿವೆಯಿಂದ ನರಳ್ತಾ ಇದ್ದಾರೆ. ಏನಾದ್ರೂ ಮಾಡಿ..
ಕೈಪಕ್ಷ : ಮಹಿಳೆಯರಿಗೆ ಬಸ್ ಉಚಿತ ಮಾಡಿದ್ದೇವೆ. ಎಲ್ಲಿಗಾದರೂ ಹೋಗಿ ಬರಬಹುದು ಪ್ರೀಯಾಗಿ. ದೇವಸ್ಥಾನ ತೀರ್ಥಕ್ಷೇತ್ರಗಳಿಗೆ ಹೋಗಿ ಬನ್ನಿ.
ಕೂಲಿಯವ : ನನಗೆ ಅಕ್ಕಿ ಕೊಡಿ ಅಕ್ಕಿ.
ಕೈಪಕ್ಷ : ಪ್ರತಿ ಮನೆಗೂ ಉಚಿತವಾಗಿ ಕರೆಂಟ್ ಕೊಡ್ತಿದ್ದೇವೆ. ಲೈಟು ಪ್ಯಾನು ಉರಿಸಿ ಆರಾಮಾಗಿರಿ.
ರೈತ : ನಮಗೆ ಬದುಕೋದೇ ಕಷ್ಟ ಆಗ್ತಿದೆ. ಏನಾದರೂ ಪರಿಹಾರ ಕೊಡಿ.
ಕೈಪಕ್ಷ : ನಿಮ್ಮನೇಲಿರುವ ನಿರುದ್ಯೋಗಿ ಪದವಿಧರನಿಗೆ ಎರಡು ವರ್ಷದವರೆಗೂ ನಿರುದ್ಯೋಗ ಭತ್ಯೆ ಕೊಡ್ತಿದ್ದೇವೆ ತಡಕೊಳ್ಳಿ.
ಹೂಪಕ್ಷ : ಕೊಡ್ತಾರೆ ಕೊಡ್ತಾರೆ. ಇವರಪ್ಪನ ಮನೆಯಿಂದಾ ಕೊಡ್ತಾರಾ. ಒಂದು ಕಡೆ ಕರೆಂಟ್ ಬಿಲ್ ಜಾಸ್ತಿ ಮಾಡಿದ್ದಾರೆ, ಇನ್ನೊಂದು ಕಡೆ ಉಚಿತ ಅಂತಾರೆ. ದ್ರೋಹ, ನಂಬಿಕೆ ದ್ರೋಹ.
ಕೈಪಕ್ಷ : ಕರೆಂಟ್ ಬಿಲ್ ಜಾಸ್ತಿ ಮಾಡಿದ್ದು ನಾವಲ್ಲಾ, ಈ ಹಿಂದಿದ್ದ ಹೂಪಕ್ಷದ ಸರಕಾರ. ನಮ್ಮ ಮೇಲೆ ಗೂಬೆ ಕೂರಿಸ್ತಿದ್ದಾರೆ. ನಾವಿದನ್ನು ವಿರೋಧಿಸುತ್ತೇವೆ.
ಹೂಪಕ್ಷ : ನಾವೂ ಪ್ರತಿಭಟಿಸುತ್ತೇವೆ.
ಕೈಪಕ್ಷ : ನೀವು ಮಾಡಿದ ಕೋಮುವಾದಿ ಪಠ್ಯಗಳನ್ನು ನಾವು ಪರಿಷ್ಕರಿಸುತ್ತೇವೆ.
ಹೂಪಕ್ಷ : ಅದು ಹೇಗೆ ಪರಿಷ್ಕಾರ ಮಾಡ್ತೀರೋ ನಾವೂ ನೋಡುತ್ತೇವೆ.
ಕೈಪಕ್ಷ : ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ.
ಕೂಲಿಯವ : ಅಣ್ಣಂದಿರಾ, ಊಟ ಕೊಡಿ ಹಸಿವು..ಹಸಿವು..
ಹೂಪಕ್ಷ : ಏ ಸುಮ್ಕಿರೋ. ಇಲ್ಲಿ ನಮ್ಮ ಧರ್ಮ ಅಪಾಯದಲ್ಲಿದೆ,
ಇವನಿಗೆ ಬರೀ ತಿನ್ನೋ ಚಿಂತೆ. ಅಯ್ಯೋ ಅಯ್ಯೋ.. ಇದು ಹಿಂದೂ ವಿರೋಧಿ ಸರಕಾರ. ಹಿಂದೂಗಳನ್ನ ಮತಾಂತರ ಮಾಡಲಾಗುತ್ತೆ. ಲವ್ ಜಿಹಾದ್ ಹೆಚ್ಚಾಗುತ್ತೆ. ಯಾವುದೇ ಕಾರಣಕ್ಕೂ ನಾವು ಸುಮ್ಮನಿರೋದಿಲ್ಲ.
ಕೈಪಕ್ಷ : ನಾವು ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ಪಡೀತೇವೆ.
ಮಹಿಳೆ : ಅಪ್ಪಂದಿರಾ, ನನ್ನ ಮಕ್ಕಳನ್ನ ಕಾಪಾಡಿ. ಬಡವರಿಗೆ ಬದುಕಲು ಅವಕಾಶ ಕೊಡಿ.
ಹೂಪಕ್ಷ : ಏ ಇರಮ್ಮಾ. ನಮ್ಮ ಗೋಮಾತೆಯನ್ನ ಹತ್ಯೆ ಮಾಡೋಕೆ ಪರ್ಮಿಶನ್ ಕೊಡ್ತಿದ್ದಾರೆ. ಮಕ್ಕಳಂತೆ ಮಕ್ಕಳು. ಅಯ್ಯಯ್ಯೋ ಇದು ಅನ್ಯಾಯಾ. ಗೋಮಾತೆ ನಮ್ಮ ತಾಯಿ. ತಾಯಿಯನ್ನು ಕೊಲ್ಲಲು ನಾವು ಬಿಡುವುದಿಲ್ಲ. ಹೋರಾಟ ಮಾಡ್ತೇವೆ. ಉಗ್ರ ಹೋರಾಟ ಮಾಡ್ತೇವೆ.
ಕೈಪಕ್ಷ : ಎಪಿಎಂಸಿ ಕಾಯ್ದೆ ಬದಲಾಯಿಸ್ತೇವೆ.
ರೈತ : ಆಯ್ತು, ಆಮೇಲೆ ಬದಲಾಯಿಸೊರಂತೆ.
ಈಗ ನಮಗೆ ಬದುಕೋಕೆ ಏನಾದರೂ ಮಾಡಿ.
ಹೂಪಕ್ಷ : ಸ್ವಲ್ಪ ಇರ್ರಿ. ಈ ಕಾಯಿದೆಗೂ ಬದಲಾವಣೆ ತಂದ್ರೆ ನಮ್ಮ ಕಾರ್ಪೋರೇಟ್ ಉದ್ಯಮಿಗಳಿಗೆ ನಷ್ಟ ಆಗುತ್ತೆ. ನಾವು ಸುಮ್ಕಿರೋದಿಲ್ಲ. ನಾವು ತಂದ ಕಾಯಿದೆಗಳನ್ನ ರದ್ದು ಮಾಡುವುದರ ವಿರುದ್ದ ಹೋರಾಡುತ್ತೇವೆ.
ಪತ್ರಕರ್ತ 1 : ಇದೀಗ ಬಂದ ಸುದ್ದಿ. ಕೂಲಿಕಾರ್ಮಿಕನೊಬ್ಬ ಹಸಿವೆಯಿಂದ ಸಾವಿಗೀಡಾಗಿದ್ದಾನೆ.
ಪತ್ರಕರ್ತ 2: ಬ್ರೇಕಿಂಗ್ ನ್ಯೂಜ್. ಸಾಲದ ಸುಳಿಗೆ ಸಿಕ್ಕ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ರಕರ್ತ 3 : ನಮ್ಮ ಚಾನಲ್ನಲ್ಲೇ ಮೊದಲು. ಬಡತನದಿಂದ ನೊಂದು, ಹಸಿವೆಯಿಂದ ಬಳಲಿದ ಮಹಿಳೆಯು ಮಕ್ಕಳ ಜೊತೆ ತಾನೂ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೂಪಕ್ಷ : ಈ ಎಲ್ಲಾ ದಾರುಣ ಘಟನೆಗಳಿಗೆ ಈ ಕೈಪಕ್ಷವೇ ಕಾರಣ. ಹೇಳಿದಂತೆ ಗ್ಯಾರಂಟಿ ಅಕ್ಕಿ ಕೊಟ್ಟಿದ್ದರೆ ಈ ಸಾವುಗಳೇ ಸಂಭವಿಸುತ್ತಿರಲಿಲ್ಲ. ಇದು ಕೊಲೆಗಡುಕ ಸರಕಾರ. ಇದನ್ನು ಖಂಡಿಸುತ್ತೇವೆ ಹಾಗೂ ಸತ್ತವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
ಕೈಪಕ್ಷ : ನುಡಿದಂತೆ ನಡೆಯುವ ಸರಕಾರ ನಮ್ಮದು. ಹೂಪಕ್ಷದವರ ದ್ವೇಷ ರಾಜಕಾರಣದಿಂದಾಗಿ ಹೇಳಿದಂತೆ ಅಕ್ಕಿ ಕೊಡಲಾಗಲಿಲ್ಲ. ಹೇಗಾದರೂ ಮಾಡಿ ನುಡಿದಂತೆ ನಡೆಯುತ್ತೇವೆ, ನಡೆಯುವುದನ್ನೇ ನುಡಿಯುತ್ತೇವೆ. ಸತ್ತವರ ಕುಟುಂಬದವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಈಗಲೇ ಘೋಷಿಸುತ್ತೇವೆ.
(ತಮಟೆ ಸದ್ದು, ಕೂಲಿ, ರೈತ, ಮಹಿಳೆ ಮತ್ತು ಮಕ್ಕಳ ಶವಗಳ ಮೆರವಣಿಗೆ ಹಾಗೂ ಅವರ ಕುಟುಂಬ ವರ್ಗದವರ ಅರ್ತನಾದ ತಾರಕಕ್ಕೇರುತ್ತದೆ)
ಹಿನ್ನೆಲೆಯಲ್ಲಿ ಹಾಡು.
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಹಸಿವಾಯಿತು ಎಂದು ಅಕ್ಕಿ ಕೇಳಲು ಹೋದೆ
ಅಕ್ಕಿಯ ಕದನದಲಿ ಪ್ರಾಣಪಕ್ಷಿ ಹಾರಿಹೋಯಿತೋ ಹರಿಯೇ..
ಬೆಲೆ ಹೆಚ್ಚಾಯಿತೆಂದು ಪರಿಹಾರ ಕೇಳಲು ಹೋದೆ
ಭರವಸೆಗಳ ಭಾರಕ್ಕೆ ಬದುಕು ಬರಡಾಯಿತೋ ಹರಿಯೇ
ದುಡಿವವಗೆ ಕೆಲಸ, ಬೆವರಿಗೆ ಬೆಲೆ ಕೊಟ್ಟರೆ
ಉಚಿತ ಭಾಗ್ಯಗಳು ಬೇಕಿಲ್ಲ ಹರಿಯೇ
ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೋ ಹೊತ್ತಿಗೆ ಯಾರೂ ಕಾಯಲಾರರು ಹರಿಯೆ
*- ಶಶಿಕಾಂತ ಯಡಹಳ್ಳಿ*
Comments
Post a Comment