ಸಿಂಹಗಳ ಪಜೀತಿ ( ಪ್ರಹಸನ)

ಪ್ರಹಸನ - 76

ಸಿಂಹಗಳ ಪಜೀತಿ


(ಝೂನಲ್ಲಿ ಒಂದು  ಗಂಡು ಸಿಂಹವನ್ನು ಇನ್ನೊಂದರಲ್ಲಿ ಹೆಣ್ಣು ಸಿಂಹವನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ. ಕೋಣೆಯ ಹೊರಗೆ ನರಿಯೊಂದು ಬಂದು ನಿಂತು)

ನರಿ : ಏನು ಕಾಡಿನ ರಾಜರು ಹೇಗಿದ್ದೀರಿ?

ಸಿಂಹ : ( ಕೆಕ್ಕರಿಸಿ ನೋಡುತ್ತಾ) ಕಾಡಲ್ಲಿ ರಾಜನಾಗಿದ್ದೆ. ಈಗ ಈ ಕೋಣೆಯಲ್ಲಿ ಬಂಧಿಯಾಗಿರುವೆ. ಕಾಣ್ತಾ ಇಲ್ವಾ.

ನರಿ : ಹೋಗಲಿ ನಮ್ಮ ಸಿಂಹಿನಿಯವರು ಹೇಗಿದ್ದಾರೆ? 

ಸಿಂಹಿನಿ : (ಗುರಾಯಿಸುತ್ತಾ) ಏಯ್ ಅನಿಷ್ಟವೇ. ನಾವಿಬ್ಬರೂ ಬಂಧನದಲ್ಲಿದ್ದರು ಒಂದೇ ಕೋಣೆಯಲ್ಲಿ ಆನಂದಬಾಗಿದ್ದೆವು. ನಮ್ಮನ್ಯಾಕೆ ಬೇರೆ ಬೇರೆ ಮಾಡಿದ್ದಾರೆ ಅದನ್ನು ಬೊಗಳು ಮೊದಲು.

ನರಿ : ಅಯ್ಯೋ ಅದೇನು ಅಂತಾ ಹೇಳಲಿ. ಎಲ್ಲಾ ಹೆಸರಿನ ಮಹಿಮೆ. ಈಗ ನಿಮ್ಮ ಹೆಸರು ಏನು ಹೇಳಿ ರಾಜರೇ?

ಸಿಂಹ : ನಾನು ಕಾಡಿನ ರಾಜನಾಗಿದ್ದ ಸಿಂಹ.

ನರಿ : (ಪಕಪಕನೇ ನಕ್ಕು) ನೋ.. ನಿಮ್ಮ ಹೆಸರು ಸಿಂಹ ಅಲ್ಲಾ. ಅಕ್ಬರ್.. ಅಂತಾ. 

ಸಿಂಹ : ಯಾರಯ್ಯಾ ಅದು ನನ್ನ ಕೇಳದೇ ನನ್ನ ಹೆಸರು ಬದಲಾಯಿಸಿದವರು.

ನರಿ : ಇನ್ಯಾರು.. ಮನುಷ್ಯರು. ನಿಮ್ಮ ಹೆಸರು ಏನು ಅಂತಾ ಗೊತ್ತಾ ಮಹಾರಾಣಿಯವರೇ.

ಸಿಂಹಿನಿ : ನನ್ನ ಹೆಸರು ಸಿಂಹಿನಿ.

ನರಿ : ( ಮತ್ತೆ ಗಹಗಹಿಸಿ ನಕ್ಕು) ಅಲ್ಲಾ.. ನಿಮ್ಮ ಹೆಸರು ಸೀತಾ..‌ ಅದನ್ನೂ ಮನುಷ್ಯರೇ ನಾಮಕರಣ ಮಾಡಿದ್ದು.

ಸಿಂಹ : (ಗರ್ಜಿಸಿ) ಅವರು ಏನಾದರೂ ಕರೆದುಕೊಳ್ಳಲಿ ನಮಗೇನು. ನಾವು ಸಿಂಹ ಅನ್ನುವುದು ಸುಳ್ಳೆನು?

ನರಿ : ಹೌದೌದು.. ನೀವು ಸಿಂಹಗಳೇ. ಆದರೆ ಹೆಸರು ಮಾತ್ರ ಮನುಷ್ಯರದ್ದು.

ಸಿಂಹಿನಿ : ಒಟ್ಟಿಗಿದ್ದ  ನಮ್ಮನ್ಯಾಕೆ ಬೇರೆ ಬೇರೆ ಕೋಣೆಯಲ್ಲಿ ಬಿಟ್ಟಿದ್ದಾರೆ ಅದನ್ನು ಮೊದಲು ಹೇಳಯ್ಯಾ.

ನರಿ : ಯಾಕೆಂದರೆ.. ಅದು.. ಅದಕ್ಕೆ ಕಾರಣ ನಿಮ್ಮ ಹೆಸರು..

ಸಿಂಹ : (ಮತ್ತೆ ಹೂಂಕರಿಸಿ) ಹೆಸರಿಗೂ ಇದಕ್ಕೂ ಏನಯ್ಯಾ ಸಂಬಂಧ?

ನರಿ : ಇದೆ.. ಸಂಬಂಧ ಇದೆ. ನಿಮ್ಮ ಹೆಸರು ಅಕ್ಬರ್. ಅಂದರೆ ಮುಸ್ಲಿಂ ರಾಜನ ಹೆಸರು.. ಮತ್ತೆ ಇವರ ಹೆಸರು ಸೀತಾ. ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರ ಪತ್ನಿಯ ಹೆಸರು.

ಸಿಂಹಿನಿ : ಅದಕ್ಕೂ ಇದಕ್ಕೂ ಏನು ಲಿಂಕಿದೆ ?

ನರಿ : ಇದೆ ಲಿಂಕ್ ಇದೆ. ಮುಸ್ಲಿಂ ಹೆಸರಿಗೂ ಹಿಂದೂ ಹೆಸರಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಅದರಲ್ಲೂ ಹಿಂದಿತ್ವವಾದಿಗಳ ಪವಿತ್ರ  ಸೀತಾ ಹೆಸರಿನ ಇವರನ್ನು ಪ್ರೀತಿಸಲು ಅಕ್ಬರ್ ಎಂಬ ಮುಸ್ಲಿಂ ಹೆಸರಿನ ನಿಮಗೆ ಅವರು ಅವಕಾಶ ಕೊಡುವುದಿಲ್ಲ. 

ಸಿಂಹ : ಯಾರಯ್ಯಾ ಹಂಗಂತಾ ಹೇಳೋದು? ನಮ್ಮ ಜೋಡೀನಾ ಬೇರೆ ಮಾಡಿದ್ದು.

ನರಿ : ಅವರು ಸನಾತನಿಗಳು. ಅನ್ಯ ಧರ್ಮದ್ವೇಷ ಪ್ರವೀಣರು. ಹಿಂದೂ ಮುಸ್ಲಿಂ ಜೊತೆಯಾದರೆ ಅವರ ಭಾವನೆಗಳಿಗೆ ಬೆಂಕಿ ಬೀಳುತ್ತದಂತೆ. ಅದಕ್ಕೆ ಎಲ್ಲಿಯೇ ಹಿಂದೂ ಮುಸ್ಲಿಂ ಹುಡುಗ ಹುಡುಗಿ ಜೊತೆಯಲ್ಲಿ ನಿಂತು ಮಾತಾಡಿದ್ರೂ ಹಲ್ಲೆ ಕೊಲೆ ದೌರ್ಜನ್ಯ ಶುರುಮಾಡುತ್ತಾರೆ.

ಸಿಂಹಿನಿ : ಅವರು ಏನಾದರೂ ಮಾಡಿಕೊಂಡು ಸಾಯಲಿ. ನಾವೇನೂ ಮನುಷ್ಯರಲ್ಲವಲ್ಲಾ ನಮಗೆಂತಾ ಕಟ್ಟುಪಾಡು.

ನರಿ : ಇದೆ..ಈ ನೀಚ ಮನುಷ್ಯರ ಕೈಲಿ ಸಿಕ್ಕಾಕಿಕೊಂಡಮೇಲೆ, ಹಿಂದೂ ಮುಸ್ಲಿಂ ಹೆಸರು ನಾಮಕರಣಗೊಂಡ ಮೇಲೆ ನಿಮಗೂ ಗ್ರಹಚಾರ ಕಾದಿದೆ ಅಂತಾ ಅರ್ಥ.

ಸಿಂಹ : ಈಗೇನಯ್ಯಾ ಮಾಡೋದು?

ನರಿ : ಏನು ಮಾಡೋಕಾಗೋದಿಲ್ಲ ಬಿಡಿ. ಸನಾತನಿಗಳು ಕೋರ್ಟಿಗೆ ಹೋಗಿದ್ದಾರೆ. ಸೀತಾ ಎನ್ನುವ ಪವಿತ್ರ ಹೆಸರಿನ ಸಿಂಹಿನಿಯ ಜೊತೆಗೆ ಅಕ್ಬರ್ ಎನ್ನುವ ಆಕ್ರಮಣಕೋರ ರಾಜನ ಹೆಸರಿನ ಸಿಂಹವನ್ನು ಒಂದೇ ಕೋಣೆಯಲ್ಲಿ ಇರಿಸಿ ಧರ್ಮಕ್ಕೆ ಅಪಚಾರ ಮಾಡಬಾರದು ಅಂತಾ ದೂರು ಕೊಟ್ಟಿದ್ದಾರೆ.

ಸಿಂಹಿನಿ : ಅದಕ್ಕೆ

ನರಿ‌: ಅದಕ್ಕೆ ನಿಮ್ಮಿಬ್ಬರನ್ನೂ ಒಂದೇ ಕೋಣೆಯಲ್ಲಿ ಇರಿಸಬಾರದಂತೆ. ಹಿಂದೂ ಮುಸ್ಲಿಂ ಒಂದಾಗಬಾರದಂತೆ. ಅದಕ್ಕೆ ನಿಮಗೆ ಈ ಒಂಟಿತನದ ವಿರಹ ವೇದನೆಯ ಶಿಕ್ಷೆ.

ಸಿಂಹ : (ಸಿಟ್ಟಿಗೆದ್ದು ಗರ್ಜಿಸಿ) ಯಾರಯ್ಯಾ ಆ ಸನಾತನಿ ಸಂತಾನಗಳು. ನನ್ನ ಮುಂದೆ ಬರಲಿ ಸಿಗಿದು ರಕ್ತ ಕುಡಿಯುತ್ತೇನೆ.

ಸಿಂಹಿನಿ : ಒಬ್ಬೊಬ್ಬರ ಕರಳು ಬಗೆದು ಮಾಲೆ ಹಾಕಿಕೊಳ್ಳುತ್ತೇನೆ. 

ನರಿ : ಅವರ್ಯಾರಿಗೂ ನಿಮ್ಮ ಮುಂದೆ ಬರುವ ದೈರ್ಯ ಇಲ್ಲ ಬಿಡಿ. ಹೇಡಿಗಳು. ಎಲ್ಲೋ ಮರೆಯಲ್ಲಿ ನಿಂತು ದ್ವೇಷದಾಟ ಆಡುತ್ತಲೇ ಇರುತ್ತಾರೆ.

ಸಿಂಹ : ನಮಗೆ ಇಂತಾ ಹೆಸರು ಇಡಿ ಅಂತಾ ನಾವೇನಾದ್ರೂ ಹೇಳಿದ್ದೇವಾ? 

ಸಿಂಹಿನಿ : ನಮ್ಮದು ವ್ಯಾಗ್ರ ಕುಲ. ನಮಗ್ಯಾಕೆ ಬೇಕು ಮನುಕುಲದವರ ಹೆಸರು.

ನರಿ : ಅರೆ ಯಾರಾದ್ರೂ ಕುರಿ ಕೇಳಿ ಮಸಾಲೆ ಅರೀತಾರಾ?

ಸಿಂಹ : ನಾಲಿಗೆ ಹಿಡಿತದಲ್ಲಿರಲಿ. ನಾವು ಕುರಿಗಳಲ್ಲ ಸಿಂಹಗಳು.

ನರಿ : ಸಾರಿ.. ಯಾರಾದ್ರೂ ಸಿಂಹಗಳ ಕೇಳಿ ಹೆಸರಿಡ್ತಾರಾ? 

ಸಿಂಹಿನಿ : ಈ ಧರ್ಮಾಂಧರ ಮತಾಂಧತೆಗೆ ನಾವ್ಯಾಕೆ ಬಲಿಯಾಗಬೇಕು? ಅವರ ಹೆಸರು ಅವರೇ ಇಟ್ಕೊಳ್ಳಲಿ. ನಮ್ಮ ಸ್ವಾತಂತ್ರ್ಯ ನಮಗೆ ಕೊಡಲಿ.

ನರಿ : ಅದೆಲ್ಲಾ ಆಗಾಕಿಲ್ಲ. ಧರ್ಮ ಅಂದ್ರೆ ಸುಮ್ಕೆ ಅಲ್ಲಾ. ಸೀತೆ ಜೊತೆ ಅಕ್ಬರನನ್ನ ಇರಲು ಬಿಟ್ಟರೆ ರಕ್ತಪಾತವೇ ಆಗಬಹುದು. ಧರ್ಮಕಲಹ ಹೆಚ್ಚಾಗಬಹುದು. ನಮ್ಮ ಅಕ್ಬರ್ ದಿ ಗ್ರೇಟ್ ಅಂತಾ ಮುಸ್ಲಿಮರು ಸೆಡ್ಡು ಹೊಡೆದು ನಿಂತರೆ, ನಮ್ಮ ಪರಮ ಪವಿತ್ರ ಸೀತಾ ಮಾತೆ ಅಂತಾ ಹಿಂದುತ್ವವಾದಿಗಳು ತೊಡೆ ತಟ್ಟಿ ನಿಲ್ಲುವರು. ದಂಗೆ ಶುರುವಾದರೆ ಹೆಣಗಳು ಬೀಳುವುದಂತೂ ಗ್ಯಾರಂಟಿ.

ಸಿಂಹಿನಿ : ಹೊಡೆದಾಡಿಕೊಂಡು ಸತ್ತರೆ ಸಾಯಲಿ ಬಿಡು.  ಎಲ್ಲಾ ಮನುಷ್ಯರು ಒಂದೇ ಅಂತಾರೆ ಅವರವರಲ್ಲೇ ಬೇಧ ಮಾಡ್ತಾರೆ. ಜಾತಿಯಂತೆ, ಧರ್ಮವಂತೆ ಮತವಂತೆ ಪಂಥವಂತೆ. ಥೂ ಇವರ ಜನ್ಮಕ್ಕೆ ಬೆಂಕಿ ಹಾಕಾ..

ಸಿಂಹ : ಸರಿಯಾಗಿ ಹೇಳಿದೆ. ಉಗಿ.. ಇನ್ನೂ ಉಗಿ. ನೆಟ್ಟಗೆ ಒಟ್ಟಿಗೆ ಬದುಕೋಕೆ ಆಗದ ದುಷ್ಟರಿಗೆ ಮೆಟ್ಟು ತಗೊಂಡು ಹೊಡೆದು ಹೇಳು.

ನರಿ : ಅದು ಮನುಷ್ಯ ಲೋಕ ಮಹಾರಾಜಾ. ಬಿನ್ನ ಬೇಧವೇ ಅಲ್ಲಿಯ ರೀತಿ ರಿವಾಜು. ಧರ್ಮ ಅಂದ್ರೆ ದ್ವೇಷ. ಜಾತಿ ಅಂದ್ರೆ ಜಗಳ. ಈ ಮನುಷ್ಯರಿಗಿಂತಾ ನಾವು ಮೃಗಗಳೇ ವಾಸಿ. 

ಸಿಂಹ : ಈ ಸನಾತನಿಗಳು ತಮ್ಮ ರೋಗವನ್ನು ತಂದು ನಮಗೆ ಯಾಕೆ ತಗಲಿಸುತ್ತಿದ್ದಾರೆ? ನಾನಂತೂ ಇಲ್ಲಿರಲಾರೆ..

ಸಿಂಹಿನಿ : ನಮಗೂ ಈ ವಿಷಮಾನವರ ಬಂಧನದಲ್ಲಿ ಇರಲು ಸಾಧ್ಯವೇ ಇಲ್ಲ. ಇಲ್ಲಿಂದ ಹೇಗಾದರೂ ಹೊರಗೆ ಹೋಗೋಣ.

ಸಿಂಹ : ಇವತ್ತು ಈ ಕೋಣೆಯ ಸ್ವಚ್ಚತೆಗಾಗಿ ಕೂಲಿಯಾಳು ಬಂದಾಗ ತಪ್ಪಿಸಿಕೊಂಡು ಕಾಡು ಸೇರಿಕೊಳ್ಳೋಣ.

ನರಿ : ನಾನೂ ನಿಮ್ಮ ಜೊತೆಗೇ ಬರುತ್ತೇನೆ..

*  *  *  *  *  *

ಮರುದಿನ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಒಂದೇ ಸುದ್ದಿ. ಚಾನೆಲ್ ಚರ್ಚೆಯೊಂದರಲ್ಲಿ..

ಹಿಂದೂ ಮತಾಂಧ :  ಸೀತಾಳನ್ನು ಅಕ್ಬರ್ ಓಡಿಸಿಕೊಂಡು ಹೋಗಿದ್ದು ಬಹುದೊಡ್ಡ ಅಪರಾಧ, ಹಿಡಿದು ತಂದು ಮರಣದಂಡನೆ ವಿಧಿಸಬೇಕು.

ಮುಸ್ಲಿಂ ಮತಾಂಧ: ಇಲ್ಲಾ.. ನಮ್ಮ ಅಕ್ಬರನನ್ನು ಮರಳು ಮಾಡಿ ಸೀತೆಯೇ ಹಾರಿಸಿಕೊಂಡು ಹೋಗಿರಬೇಕು. ಮೊದಲು ಸೀತಾಳಿಗೆ ಶಿಕ್ಷೆಯಾಗಲಿ. 

ಹಿಂದೂ ಮತಾಂಧ : ನಾವು ಹೀಗೆ ಧರ್ಮ ಸಂಕರವಾಗಲು ಬಿಡುವುದಿಲ್ಲ. ಇದರಿಂದ ಕೋಟ್ಯಾಂತರ ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ.

ಮುಸ್ಲಿಂ ಮತಾಂಧ : ನಾವೂ ಸುಮ್ಮನಿರುವುದಿಲ್ಲ. ಸೇಡಿಗೆ ಸೇಡು. 

ಹಿಂದೂ ಮತಾಂಧ : ರಕ್ತಕ್ಕೆ ರಕ್ತ. 

(ಇಬ್ಬರೂ ಕೈಮಿಗಿಲಾಯಿಸಿ ಕಿತ್ತಾಡುತ್ತಾರೆ. ನಾಟಕ ಅಂತ್ಯವಾಗುತ್ತದೆ)

- ಶಶಿಕಾಂತ ಯಡಹಳ್ಳಿ
  20-02-2024


( ಮೃಗಾಲಯದಲ್ಲಿ ಗಂಡು ಸಿಂಹ ಅಕ್ಬರ್ ಮತ್ತು ಹೆಣ್ಣು ಸಿಂಹ ಸೀತಾ ಎರಡನ್ನೂ ಒಂದೇ ಕೋಣೆಯಲ್ಲಿ ಇಟ್ಟಿರುವುದನ್ನು ವಿರೋಧಿಸಿ VHP ಕೊಲ್ಕತ್ತಾ ಹೈಕೋರ್ಟ್ ಮೆಟ್ಟಲೇರಿದೆ. ಈ ಘಟನೆ ಆಧರಿಸಿದ ಪ್ರಹಸನ ಇದು)

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ