ಮೆದುಳಿಲ್ಲದ ಕತ್ತೆ ಪ್ರಸಂಗ


ಪ್ರಹಸನ - 79

ಮೆದುಳಿಲ್ಲದ ಕತ್ತೆ ಪ್ರಸಂಗ

(ಯಥಾಪ್ರಕಾರ ಅಮವಾಸ್ಯೆಯಂದು ರಾಜಾ ವಿಕ್ರಮಾದಿತ್ಯನು ಸ್ಮಶಾನಕ್ಕೆ ಬಂದು ಹುಣಸೆಮರದ ಕೊಂಬೆಗೆ ನೇತಾಡುತ್ತಿದ್ದ ಬೇತಾಳನನ್ನು ಇಳಿಸಿ ತನ್ನ ಬೆನ್ನ ಮೇಲೆ ಹೊತ್ತು ಮೌನವಾಗಿ ಸಾಗುತ್ತಾನೆ. ಆಗ ಬೇತಾಳವು ರಾಜನನ್ನು ಉದ್ದೇಶಿಸಿ)

ಬೇತಾಳ : ರಾಜಾ ಈಗ ಬಂತು ನೋಡು ಮಜಾ. ಈ ಬೇತಾಳನ ಹೊತ್ತೊಯ್ದು ಬೈರಾಗಿಗೆ ಒಪ್ಪಿಸಲು ಮತ್ತೆ ಬಂದೆಯಾ? ಇರಲಿ ಬೈರಾಗಿಯ ಬಳಿ ಹೋಗಿ ತಲುಪುವ ಮುನ್ನ ನಿನ್ನ ಹಾದಿಯ ಬೇಸರವನ್ನು ಕಳೆಯಲು ಕಥೆಯೊಂದನ್ನು ಹೇಳುವೆ ಕೇಳುವಂತವನಾಗು..

ರಾಜಾ ಅದೊಂದು ಕಾಡು. ಆ ಕಾಡಿಗೆ ಬಲಿಷ್ಟನಾದ ಸಿಂಹನೇ ರಾಜ. ರಾಜನಾದ ಮೇಲೆ ಆ ಸಿಂಹ ಬೇಟೆಯಾಡುವುದನ್ನೇ ಮರೆತಿತ್ತು. ಮಂತ್ರಿಯಾಗಿ ಸದಾ ಜೊತೆಗಿರುತ್ತಿದ್ದ ನರಿಯೊಂದು ನಿತ್ಯ ರಾಜನ ಆಹಾರಕ್ಕೆ ವ್ಯವಸ್ಥೆ ಮಾಡುತ್ತಿತ್ತು. ಏನು ಮಾಡುತ್ತಿತ್ತು?

ವಿಕ್ರಮ : (ಮೌನವಾಗಿದ್ದ)

ಬೇತಾಳ : ಸರಿ ಮುಂದೆ ಕೇಳುವಂತವನಾಗು. ಒಮ್ಮೆ ಕಾಡಿನ ರಾಜನಿಗೆ ಜೋರಾಗಿ ಹಸಿವೆಯಾಯ್ತು. "ನನಗೆ ಹಸಿವಾಗಿದೆ. ಏನಾದರೂ ತಿನ್ನಲು ತಂದು ಕೊಡು" ಎಂದು ಮಂತ್ರಿ ನರಿಗೆ ಆಜ್ಞಾಪಿಸಿತು.

ಆ ಕುತಂತ್ರಿ ನರಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು:  "ಸಿಂಹ ರಾಜನಿಗೆ ವಯಸ್ಸಾಗಿದೆ. ನಿನ್ನಂತಹ ನಿಷ್ಠಾವಂತನಿಗೆ ಪಟ್ಟ ಕಟ್ಟುತ್ತಾರಂತೆ.  ನೀನೇ ಈ ಕಾಡಿನ ರಾಜನಾಗುವಂತೆ ಬಾ ನನ್ನ ಜೊತೆ." ಎಂದು ಹೇಳಿದಾಗ ಕತ್ತೆ ಸಂತಸದಿಂದ ಒಪ್ಪಿ ಕಿರುಚಿತು.

ಕತ್ತೆಯನ್ನು ಕಂಡ ತಕ್ಷಣ ಹಸಿದ ಸಿಂಹ ಅದರ ಮೇಲೆ ಆಕ್ರಮಣ ಮಾಡಿ ಕತ್ತೆಯ ಕಿವಿಯನ್ನು ಕಚ್ಚಿ ಕತ್ತರಿಸಿತು. ಆಗ ಕತ್ತೆ ಏನು ಮಾಡಿತು?. ಜೋರಾಗಿ ಕಿರುಚಿಕೊಂಡು ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು. 

ತನ್ನ ಹಿಂದೆಯೇ ಓಡಿ ಬಂದ ನರಿಯನ್ನು ಕತ್ತೆ ಕೇಳಿತು "ನೀನು ನನಗೆ ಮೋಸ ಮಾಡಿ ಬಿಟ್ಟೆ ಅಲ್ವಾ?...! "

 "ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಸಿಂಹರಾಜ ಕತ್ತರಿಸಿದ್ದು, ನೀನು ಆತುರಕ್ಕೆ ಬಿದ್ದು ರಾಜನ ಪಟ್ಟ ಕಳೆದುಕೊಳ್ಳುತ್ತಿ ನೋಡು. ಬಾ ನನ್ನ ಜೊತೆಗೆ" ಎಂದು ನರಿ ಕರೆಯಿತು.
ಕತ್ತೆಗೆ ನರಿಯ ಮಾತು  ಸತ್ಯವಾಗಿರಬಹುದು ಎಂದು ಭಾವಿಸಿ ಮತ್ತೆ  ಸಿಂಹದ ಬಳಿ ಹೋಯಿತು...

ಹಸಿದ ಸಿಂಹ ಮತ್ತೆ ಕತ್ತೆಯನ್ನು ಆಕ್ರಮಿಸಿ ಅದರ  ಬಾಲವನ್ನು ಕಚ್ಚಿ ಕತ್ತರಿಸಿ ಹಾಕಿತು..!,  ಆ ಕತ್ತೆ ಮತ್ತೊಮ್ಮೆ ಹೆದರಿ ಅಲ್ಲಿಂದ ಪಾರಾಗಿ ಓಡಿ ಹೋಯ್ತು. ಮತ್ತೆ ಅದರ ಹಿಂದೆಯೇ ಓಡಿ ಬಂದ ನರಿಯನ್ನು ಕೇಳಿತು "ನೀನು ನನ್ನಲ್ಲಿ ಸುಳ್ಳು ಹೇಳಿದೆ ಅಲ್ವಾ?

ನರಿ ಹೇಳಿತು: "ಅಯ್ಯೋ ಪೆದ್ದುಮುಂಡೇದೇ, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಅನುಕೂಲವಾಗಲಿ ಎಂದು ನಿನ್ನ ಬಾಲವನ್ನು ಕತ್ತರಿಸಿದ್ದು" ಬಾ ನನ್ನ ಜೊತೆ ರಾಜನಾಗುವಂತೆ.

ನರಿಯ ಮಾತಿಗೆ ಮರುಳಾಗಿ ರಾಜನಾಗುವ ಆಸೆಯಿಂದ ಕತ್ತೆ ಮತ್ತೆ ಮರಳಿ ಸಿಂಹದ ಬಳಿ ಬಂತು. 
ಹೊಟ್ಟೆ ಹಸಿವಿನಿಂದ ಸಿಟ್ಟಿಗೆದ್ದ ಸಿಂಹ ಈ ಸಲ ಕತ್ತೆಯನ್ನು ಹಿಡಿದು ಕೊಂದು ಹಾಕಿ ನರಿಗೆ ಹೇಳಿತು. 

 "ನಿಜವಾದ ಚಾಣಕ್ಯ  ಅಂದ್ರೆ ನೀನೇ. ಹೇಗೆ ಮತ್ತೆ ಮತ್ತೆ ಯಾಮಾರಿಸಬೇಕು ಅನ್ನೋದನ್ನ ನಿನ್ನಿಂದ ಕಲೀಬೇಕು. ಈಗ ಹೋಗಿ ಈ ಕತ್ತೆಯ ಚರ್ಮ ಸುಲಿದು ಹಾಕಿ ಮಾಂಸವನ್ನು ನನಗೆ ತಂದು ಕೊಡು" ಎಂದು ಮಂತ್ರಿಗೆ ರಾಜ ಆಜ್ಞಾಪಿಸಿತು.

ನರಿ ಕತ್ತೆಯ ಚರ್ಮ ಸುಲಿದು, ಹಸಿವು ತಾಳಲಾಗದೇ ಕತ್ತೆಯ ಮೆದುಳನ್ನು ಮಾತ್ರ ತಿಂದು ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು...

ಸಿಂಹ ಅವೆಲ್ಲವನ್ನೂ ತಿಂದಾದ ನಂತರ ಕೋಪದಿಂದ ಕೇಳಿತು "ಇದರ ಮೆದುಳು ಎಲ್ಲಿ...?"

ನರಿ ಉತ್ತರಿಸಿತು: "ಅದಕ್ಕೆ ಮೆದುಳು ಎಂಬುದೇ ಇರಲಿಲ್ಲ ಪ್ರಭು...,ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ಈ ಕತ್ತೆ ಮತ್ತೆ ವಾಪಸ್ ಬರ್ತಿತ್ತಾ???...!!!

ಇಷ್ಟೇ ಕತೆ ರಾಜಾ. ಈಗ ನಾನೂ ಇದೇ ಪ್ರಶ್ನೆಯನ್ನು ನಿನಗೆ ಕೇಳುತ್ತಿದ್ದೇನೆ, ಉತ್ತರ ಕೊಡು. ಉತ್ತರ ಗೊತ್ತಿದ್ದೂ ಕೊಡದೇ ಹೋದರೆ ನಿನ್ನ ತಲೆ ಇಲ್ಲಿಯೇ ಸಾವಿರ ಹೋಳಾಗುತ್ತದೆ.

ವಿಕ್ರಮರಾಜ : ( ಮೌನ ಮುರಿದು) ಗೊತ್ತಿದೆ. ನನಗೆ ಉತ್ತರ ಗೊತ್ತಿದೆ ಬೇತಾಳಾ. ಅದೇನೆಂದರೆ.. ಸರ್ವಾಧಿಕಾರಿ ರಾಜ ಹಾಗೂ ಕುತಂತ್ರಿ ಮಂತ್ರಿ ಇದ್ದ ದೇಶದಲ್ಲಿ ಈ ಕತ್ತೆಯಂತಹ ಅಂಧಭಕ್ತರು ಇದ್ದೇ ಇರ್ತಾರೆ. ಪ್ರಜೆಗಳ ಭಾವನೆಗಳನ್ನು ಕೆರಳಿಸಿ ರಾಜನ ಮೇಲೆ ಭಕ್ತಿಯನ್ನು ಹೆಚ್ಚಿಸುವ ಯುಕ್ತಿಯ ಕಾರ್ಯ ಪ್ರಭುತ್ವದ ಮೊದಲ ಆದ್ಯತೆ ಆಗಿರುತ್ತದೆ. ಜನರಲ್ಲಿ ಅಂಧಾಭಿಮಾನವನ್ನು ಹುಟ್ಟಿಸಲಾಗುತ್ತದೆ. ಪ್ರಜೆಗಳಲ್ಲಿ ಭಕ್ತಿ ಭಾವ ಪರವಶತೆ ಹೆಚ್ಚಾದಷ್ಟೂ ಪ್ರಭುತ್ವ ಬಲಿಷ್ಟವಾಗುತ್ತದೆ. ಪ್ರಜೆಗಳ ಮೇಲಿನ ದಮನವೂ ಅತಿಯಾಗಿರುತ್ತದೆ. 

ಬೇತಾಳ : ಮುಂದೆ ಏನಾಗುತ್ತದೆ ಅದನ್ನು ಹೇಳು ರಾಜಾ..

ವಿಕ್ರಮರಾಜ : ಮುಂದೆ ಆಗೋದೇನು. ಆಗಾಗ ರಾಜನ ಆದೇಶಗಳು ಜಾರಿಯಾಗುತ್ತಲೇ ಇರುತ್ತವೆ.. ಉದಾಹರಣೆಗೆ ಹೇಳಬೇಕೆಂದರೆ. "ಪ್ರಾಣಿ ಹತ್ಯೆ ಮಹಾಪಾಪಾ ಯಾರೂ ಇನ್ಮೇಲೆ ಮಾಂಸಾಹಾರ ತಿನ್ನಕೂಡದು, ಎಲ್ಲರೂ ಸಸ್ಯಾಹಾರಿಗಳಾಗಬೇಕು" ಅಂತಾ ರಾಜ ಆದೇಶಿಸುತ್ತಾನೆ. ಅಷ್ಟೇ ಮಾಂಸಾಹಾರ ತಿನ್ನುವವರ ಮೇಲೆ ಮತಾಂಧ ಪ್ರಜೆಗಳು ದೌರ್ಜನ್ಯ ಮಾಡುತ್ತಾರೆ.

ಬೇತಾಳ : ಮಾಂಸಾಹಾರವನ್ನು ಯಾಕೆ ತ್ಯಜಿಸಬೇಕಂತೆ ರಾಜನ್.

ವಿಕ್ರಮರಾಜ : ಯಾಕೆಂದರೆ ಎಲ್ಲರೂ ಪ್ರಾಣಿಗಳನ್ನು ಕೊಂದು ತಿಂದರೆ ಆಳುವ ವರ್ಗದವರಿಗೆ ಮಾಂಸದ ಅಭಾವ ಆಗುತ್ತಲ್ಲಾ ಅದಕ್ಕೆ. ಹೀಗೆ ರಾಜನ ಆಜ್ಞೆಯನ್ನು ಪ್ರಶ್ನಿಸದೇ ಪಾಲಿಸುವ ಪ್ರಜೆಗಳ ಪಡೆ ಒಂದಾಗುತ್ತದೆ. ಪ್ರಶ್ನಿಸುವವರ ಮೇಲೆ ದಾಳಿ ಮಾಡಲು ಮುಂದಾಗುತ್ತವೆ. ರಾಜ ಕೊಟ್ಟ ಎಲ್ಲ ಭರವಸೆಗಳೂ ಹುಸಿಯಾದರೂ ಮುಂದೆ ಇಂದಿಲ್ಲಾ ನಾಳೆ ಸರಿಹೋಗಬಹುದೇನೋ ಎನ್ನುವ ಆಸೆಯಲ್ಲಿ ಪ್ರಜೆಗಳು ತಮ್ಮದೆಲ್ಲವನ್ನೂ ಕಳೆದುಕೊಳ್ಳುತ್ತಾರೆ. ಮನಸಿನ ತುಂಬ ದೇಶಭಕ್ತಿ, ರಾಜಭಕ್ತಿಗಳನ್ನು ತುಂಬಿಕೊಂಡ ಅಂಧಭಕ್ತರು ಮೆದುಳನ್ನು ಬಳಸುವುದನ್ನೇ ನಿಲ್ಲಿಸುತ್ತಾರೆ. 

"ನಾನು ನಿಮ್ಮ ಸೇವಕ, ನಾನು ನಿಮ್ಮ ಚೌಕೀದಾರ, ನಾನು ನಿಮ್ಮ ರಕ್ಷಕ, ನೀವೇ ಅಸಲಿ ರಾಜರುಗಳು" ಎಂದು ಪದೆ ಪದೇ ಹೇಳುವ ರಾಜನ ಸುಳ್ಳನ್ನೇ ಪರಮ ಸತ್ಯವೆಂದು ನಂಬುವ ಮೆದುಳಿಲ್ಲದ ಪ್ರಜಾಪಡೆ ಎಲ್ಲೂ ಸಲ್ಲದವರಾಗುತ್ತಾರೆ. ಅಷ್ಟೇ, ಈ ನಿನ್ನ ಕಥೆಯ ಕತ್ತೆಗಾದ ಗತಿ ಅವರಿಗೂ ಆಗುತ್ತದೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಅಪಾಯ ಅಂತಾ ಗೊತ್ತಿದ್ದರೂ ಮತ್ತೆ ಮತ್ತೆ ಮೋಹಕ ಮಾತುಗಳಿಗೆ ಬೆರಗಾಗಿ ಮೋಸಕ್ಕೆ ಒಳಗಾಗುವ ಕತ್ತೆಗಳಂತಾ ಪ್ರಜೆಗಳ ಸಂಖ್ಯೆ ಕಡಿಮೆ ಏನಿಲ್ಲ. ಅಂತಹ ಮೆದುಳಿಲ್ಲದ ಭಕ್ತರು ಇರುವವರೆಗೂ ಕಂತ್ರಿ ರಾಜರು, ಕುತಂತ್ರಿ ಮಂತ್ರಿಗಳು ಅಟ್ಟಹಾಸದಿಂದ ಆಳುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಮೋಸ ಹೋಗುವ ಕತ್ತೆಗಳ ಸುತ್ತ ನಿನ್ನ ಕಥೆಯ ಚಿತ್ತ ಇದೆ ಹೌದಲ್ವಾ ಬೇತಾಳಾ.

ಬೇತಾಳ : ಆಹಾ ಮೆಚ್ಚಿದೆ ರಾಜಾ ನಿನ್ನ ಪ್ರತಿಭೆಗೆ. ನಿನ್ನ ಮನಮೋಹಕ ವಿಶ್ಲೇಷಣೆಗೆ. ಶಹಬ್ಬಾಸ್ ರಾಜಾ.. 

ಆದರೆ ಕಥೆಯ ಮೋಹಕೆ ಮರುಳಾಗಿ ಮಾತಾಡಿದ ನೀನು ಮೌನ ಮುರಿದು ಮತ್ತೆ ಸೋತೆ. ಇದೋ ನಾನು ಹೊರಟೆ.. ( ಎಂದು ಜೋರಾಗಿ ಗಹಗಹಿಸಿ ನಗುತ್ತಾ ಬೇತಾಳ ಹಾರಿ ಹೋಗುತ್ತದೆ. ವಿಕ್ರಮರಾಜ ಪೆಚ್ಚಾಗಿ ನಿಂತುಕೊಳ್ಳುತ್ತಾನೆ. 

ಹಿನ್ನಲೆಯಲ್ಲಿ ಹಾಡು..

ಕತ್ತೆಗಳೋ ಇವರು ಕತ್ತೆಗಳೋ ಅವರು ಕತ್ತೆಗಳೋ
ಭಕ್ತಿಭಾವದಲಿ ಮೈಮರೆತ ಮೆದುಳಿಲ್ಲದ ಕತ್ತೆಗಳೋ

ಮೆದುಳಿಲ್ಲದ ಜನ ತಮ್ಮನ್ನೇ ಮಾರಿಕೊಂಡರೋ
ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡರೋ
ಕಂತ್ರಿ ರಾಜ, ಕುತಂತ್ರಿ ಮಂತ್ರಿ ಆಳುತಿರುವರೋ
ಅಂಧಭಕ್ತರು ಭಜನೆ ಮಾಡುತಿರುವರೋ

ಕತ್ತೆಗಳೋ ಇವರು ಕತ್ತೆಗಳೋ ಅವರು ಕತ್ತೆಗಳೋ
ಭಕ್ತಿಯಲಿ ಮೈಮರೆತ ಮೆದುಳಿಲ್ಲದ ಕತ್ತೆಗಳೋ

-ಶಶಿಕಾಂತ ಯಡಹಳ್ಳಿ
    29-03-2024

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ