ಹೆಣ ಬಿತ್ತು ಹೆಣ (ಪ್ರಹಸನ- 38)
(ಪ್ರಹಸನ- 38)
ಹೆಣ ಬಿತ್ತು ಹೆಣ
*********************
(ಹೂಪಕ್ಷದ ಅತೃಪ್ತರ ಸಭೆ)
ಪಿಟೀಲು : ಛೇ ಏನ್ ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲಾ. ಏನ್ಮಾಡಲಿ.
ಲೂಟಿ ರವಿ : ಈ ಗ್ಯಾರಂಟಿ ಯೋಜನೆಗಳನ್ನ ನಾವು ವಿರೋಧಿಸಿದಷ್ಟೂ ಕೈಪಕ್ಷಕ್ಕೆ ಲಾಭ ಆಗ್ತಿದೆಯಲ್ಲಾ, ಏನ್ಮಾಡೋದು?
ಬೊಮ್ಮಣ್ಣ : ಇಲ್ಲಾ ಹೀಗೇ ಆದರೆ ನಮ್ಮ ಅಸ್ತಿತ್ವಕ್ಕೆ ದಕ್ಕೆ, ಏನಾದ್ರೂ ಮಾಡಲೇಬೇಕಲ್ಲಾ?
ಅಸೋಕ : ಹೈಕಮಾಂಡ ಬೇರೆ ನಮ್ಮ ಮೇಲೆ ಮುನಿಸಿಕೊಂಡು ಕೂತಿದೆ. ಅವರನ್ನ ಮೆಚ್ಚಿಸೋಕೆ ಏನ್ ಮಾಡಬಹುದು ಯೋಚಿಸಿ.
ಅಸ್ವಸ್ಥ : (ಖುಷಿಯಿಂದ ಓಡಿ ಬಂದು) ಬ್ರೇಕಿಂಗ್ ನ್ಯೂಜ್.. ಹೆಣ ಬಿತ್ತು ಹೆಣ. ಹಿಂದೂ ಕಾರ್ಯಕರ್ತನ ಹೆಣ.
ಈಸಪ್ಪ : ಹೆಣ ಎಲ್ಲಿ ಹೆಣ. ಅದಕ್ಕಾಗಿಯೇ ಇಷ್ಟು ದಿನ ಕಾಯ್ತಾ ಇದ್ದೆ. ಏಳಿ ಎದ್ದೇಳಿ, ರಣಹದ್ದುಗಳ ಹಾಗೆ ಮುನ್ನುಗ್ಗೋಣ.
ಒಂದೊಂದು ಶವ ಲಕ್ಷ ಮತಗಳಿಗೆ ಸಮ.
ಅಸ್ವಸ್ಥ : ಹನುಮ ಜಯಂತಿ ಆಚರಣೆಯಂತೆ, ಸೇಡಿಗೆ ಹಿಂದೂ ಕಾರ್ಯಕರ್ತ ಕೊಲೆಯಾದನಂತೆ.
ಈಸಪ್ಪ : ಆಹಾ ಎಂತಾ ಸುದ್ದಿ. ಮುಳುಗ್ತಿರೋರಿಗೆ ಹುಲ್ಲುಕಡ್ಡಿಯ ಬದಲಾಗಿ ಹೆಣ ಸಿಕ್ಕಂಗಾಯ್ತಲ್ಲಾ.
ಕಾರ್ಯಕರ್ತ: (ಓಡಿ ಬಂದು) ಅಣ್ಣಾ ಜೈನ ಮುನಿಯನ್ನು ಕೊಂದು ತುಂಡುತುಂಡಾಗಿ ಕತ್ತರಿಸಿ ಕೊಳವೆ ಭಾವಿಗೆ ಹಾಕಿದ್ದಾರಂತೆ. ನಾರಾಯಣ ಮಾಳಿ ಮತ್ತು ಹಸನ್ ದಲಾಯತ್ ಎನ್ನುವವರು ಕೊಲೆಗಾರರಂತೆ.
ಈಸಪ್ಪ : ಮುಸ್ಲಿಂ ಹೆಸರು ಇದೆಯಲ್ಲಾ ಅಷ್ಟು ಸಾಕು ಬಿಡು ಕಡ್ಡಿ ಗೀರಿ ಬೆಂಕಿ ಹಚ್ಚಲು. ವಾವ್ ಮತ್ತೊಂದು ಹೆಣ, ಜೈನ ಮುನಿಯ ಶವ. ಸಾಧು ಸಂತನ ಹತ್ಯೆ..
ಲೂಟಿ ರವಿ : ಬಿಡಬಾರದು ಈ ಅವಕಾಶವನ್ನಂತೂ ಬಿಡಲೇ ಬಾರದು. ಮುಸ್ಲಿಂ ವ್ಯಕ್ತಿ ಕೊಲೆಪಾತಕ ಅಂದ್ರೆ ಇನ್ನು ನಾವು ಸುಮ್ಮನಿರಬಾರದು.
ಅಸೋಕ : ಡಬಲ್ ದಮಾಕಾ ಸುದ್ದಿ.. ಇದನ್ನು ಸುಮ್ಕೆ ಬಿಡೋಕೆ ಆಗುತ್ತಾ. ಸತ್ಯ ಶೋಧನಾ ಸಮಿತಿ ಮಾಡೋಣ.
ಈಸಪ್ಪ : ಹಿಂದೂಗಳ ಭಾವನೆ ಕೆರಳಿಸೋಣ.
ಅಸ್ವಸ್ಥ : ಸರಕಾರದ ಉಸಿರು ಕಟ್ಟಿಸೋಣ.
ಅಸೋಕ : ವಿಶ್ವಗುರುವಿನ ಕೃಪೆಗೆ ಪಾತ್ರರಾಗೋಣ.
ಲೂಟಿರವಿ : ನಾನು ಸತ್ತ ಹಿಂದೂ ಕಾರ್ಯಕರ್ತನ ಮನೆಕಡೆ ಹೋಗುತ್ತೇನೆ. ಪರಿಹಾರದ ಚೆಕ್ ಕೊಟ್ಟು ಹಿಂದೂ ವಿರೋಧಿ ಸರಕಾರ ಎಂದು ಬಾಯಿ ಬಡಿದುಕೊಳ್ಳುವೆ.
ಪಿಟೀಲು : ನಾನು ಜೈನ ಮುನಿಯ ಹತ್ಯೆ ಪತ್ತೆ ಮಾಡಲು ಹೋಗುತ್ತೇನೆ. ಸಂತರಿಗೂ ಸುರಕ್ಷೆ ಇಲ್ಲ ಎಂದು ಪ್ರಚಾರ ಮಾಡುತ್ತೇನೆ.
ಯತ್ನಣ್ಣ : ನಾನು ಸುಮ್ಮನಿರ್ತೀನಾ. ವಿರೋಧ ಪಕ್ಷದ ನಾಯಕನಾಗಬೇಕಾದವ ನಾನು. ಹಿಂದೂ ಜಪ ಶುರು ಮಾಡ್ತೇನೆ.
ಬೊಮ್ಮಣ್ಣ : ನನ್ನ ಪ್ರೀತಿಯ ರಣಹದ್ದುಗಳೇ ನಿದ್ದೆ ಮಾಡಿದ್ದು ಸಾಕು. ಏಳಿ ಎದ್ದೇಳಿ, ಶತ್ರು ಪಕ್ಷದ ಮೇಲೆ ಮುಗಿಬೀಳಲು ಸಿದ್ದರಾಗಿ. ಹಿಂದೂಗಳನ್ನು ಪ್ರಚೋದಿಸಲು ಬದ್ದರಾಗಿ.
ಈಸಪ್ಪ : ಹೌದು, ಹೆಣಗಳ ಮೇಲೆ ನಮ್ಮ ರಾಜಕಾರಣ ನಿಂತಿದೆ ನಡೀರಿ ಹೊಗೋಣ. ಶವಗಳೇ ನಮಗೆ ಅಧಿಕಾರದ ಮೆಟ್ಟಿಲು, ಪಟ್ಟಕ್ಕೆ ತೊಟ್ಟಿಲು.
( ಎಲ್ಲರೂ ಉತ್ಸಾಹದಿಂದ ಹೊರಡುವರು)
*************
ಲೂಟಿ ರವಿ : ನೋಡ್ರಣ್ಣಾ.. ನೋಡಿ. ಕೈಪಕ್ಷ ಅಧಿಕಾರಕ್ಕೆ ಬಂದಮೇಲೆ ಮುಸ್ಲಿಂನ ಒಂದು ವರ್ಗಕ್ಕೆ ಮದ ಬಂದಿದೆ. ಹಿಂದೂಗಳನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗ್ತಿದೆ.
ಪತ್ರಕರ್ತ : ಅಲ್ಲಾ ಸರ್. ಮಂಗಳೂರಿನ ವಿನಯ್ ಬಾಳಿಗ ಹತ್ಯೆ ಆದಾಗಲೂ ನೀವು ಹೀಗೇ ಹೇಳಿದ್ರಿ ಆದರೆ ಆ ಕೊಲೆಯನ್ನು ಹಿಂದೂ ಯುವ ಬ್ರಿಗೇಡ್ ನವನೇ ಆದ ಸಂಘಪರಿವಾರದ ಮುಖಂಡ ಮಾಡಿ ಸಿಕ್ಕಾಕಿಕೊಂಡನಲ್ಲಾ ಅದಕ್ಕೇನು ಹೇಳ್ತೀರಿ?
ಲೂಟಿ ರವಿ : ಅದೆಲ್ಲಾ ಮುಗಿದ ಕಥೆ. ಈಗ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲನ ಕೊಲೆಯಾಗಿದೆ. ಈದೀಗ ತಾನೆ ಅವರ ಮನೆಯವರಿಗೆ 5 ಲಕ್ಷ ಹಣದ ಚೆಕ್ ಕೊಟ್ಟು ಸಾಂತ್ವನ ಹೇಳಿ ಬಂದಿರುವೆ. ಈ ಸರಕಾರ ಬಂದ ಮೇಲೆ ನಮ್ಮವರ ಕೊಲೆಗಳಾಗ್ತಿವೆ. ಇದು ಹಿಂದೂ ವಿರೋಧಿ ಸರಕಾರ.
ಪತ್ರಕರ್ತ : ಅಲ್ಲಾ ಸರ್, ಸರಕಾರಕ್ಕೂ ಕೊಲೆಗೂ ಹೇಗೆ ಲಿಂಕ್ ಮಾಡ್ತೀರಾ?
ಲೂಟಿ ರವಿ : ನೋಡಿ, ವೇಣುಗೋಪಾಲ ಹತ್ಯೆ ಪೂರ್ವಯೋಜಿತ ಕೃತ್ಯ. ಇದಕ್ಕೆಲ್ಲಾ ಸರಕಾರದ ಕುಮ್ಮಕ್ಕು ಕಾರಣ. ಈ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ ತಂದಿದೆ. ರಾಜ್ಯದಲ್ಲಿ ತಾಲಿಬಾನ್ ಸರಕಾರವಿದೆ ಅನ್ನಿಸ್ತಿದೆ.
ಪತ್ರಕರ್ತ : ಸರ್.. ನಮಗೆ ಇದೀಗ ಬಂದ ಮಾಹಿತಿಯಂತೆ, ಹನುಮ ಜಯಂತಿಯಲ್ಲಾದ ಮನಸ್ತಾಪದಿಂದ ಹಿಂದೂ ಸಂಘಟನೆಯ ಕಾರ್ಯಕರ್ತರೇ ಸೇಡಿಗಾಗಿ ವೇಣು ಹತ್ಯೆ ಮಾಡಿದ್ದಾರಂತೆ.
ಲೂಟಿ ರವಿ : ನೋಡಿ ಅದೆಲ್ಲಾ ಸುಳ್ಳು ಸುದ್ದಿ. ಕೈಪಕ್ಷದವರ ಕುಮ್ಮಕ್ಕಿನಿಂದಲೇ ಈ ಕೊಲೆ ಆಗಿದ್ದು.
ಪತ್ರಕರ್ತ : ಸರ್.. ಕೊಲೆಗಾರರಲ್ಲಿ ಒಬ್ಬ ನಿಮ್ಮ ಪಕ್ಷದ ಕಾರ್ಪೋರೇಟರ್ ತಮ್ಮನಂತೆ. ಈಗಾಗಲೇ ಪೋಲೀಸರು ಬಂಧಿಸಿದ್ದಾರೆ.
ಇದಕ್ಕೇನಂತೀರಿ.
ಲೂಟಿ ರವಿ : ನೋಡಿ ಇದೆಲ್ಲಾ ಆಳುವ ಪಕ್ಷದ ಕುತಂತ್ರ. ಸತ್ಯ ಶೋಧನಾ ಸಮಿತಿಯ ಮುಖಂಡನಾಗಿ ನಾನು ಮತ್ತೆ ಅಲ್ಲಿಗೆ ಹೋಗಿ ಸತ್ಯವನ್ನು ಕಂಡು ಹಿಡಿದು ನಿಮಗೆ ಹೇಳುತ್ತೇನೆ. ಏನೇ ಆಗಲಿ ಈ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲಾ. ಇದು ಕೊಲೆಗಡುಕ ಸರಕಾರ. ಈಗ ಹೆಚ್ಚಿಗೇನೂ ಹೇಳಲಾರೆ.
**********
ಪತ್ರಕರ್ತ : ಸರ್.. ಜೈನ ಮುನಿಗಳ ಹತ್ಯೆಯ ಬಗ್ಗೆ ಏನು ಹೇಳ್ತೀರಾ?
ಬೊಮ್ಮಣ್ಣ : ಇದು ಕೊಲೆಯಲ್ಲಾ ಬರ್ಬರ ಹತ್ಯೆ. ಈ ಸರಕಾರ ಬಂದ ಮೇಲೆ ಸಾಧು ಸಂತರ ಮೇಲೆ ಅಸಹನೆ ಹೆಚ್ಚುತ್ತಿದೆ.
ಸರ್ವಸಂಘ ಪರಿತ್ಯಾಗಿಗಳನ್ನೇ ಬಿಡದ ಈ ಕೊಲೆಪಾತಕರು ಸಾಮಾನ್ಯ ಹಿಂದೂ ಕಾರ್ಯಕರ್ತರನ್ನ ಬಿಡ್ತಾರಾ? ಈಗ ನಮ್ಮ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೋಮುದ್ವೇಷ ಹೆಚ್ಚುತ್ತಿದೆ.
ಈ ಕೇಸನ್ನು ಸಿಬಿಐ ಗೆ ಒಪ್ಪಿಸಬೇಕು.
ಪತ್ರಕರ್ತ : ಇದೆಲ್ಲಾ ಸರಕಾರದ ಶಡ್ಯಂತ್ರ ಅಂತೀರಾ?
ಬೊಮ್ಮಣ್ಣ : ಹೌದು.. ಜೈನ ಮುನಿಗಳಿಗೆ ವಿದ್ಯುತ್ ಶಾಕ್ ನೀಡಿದ್ದಾರೆ ಎಂದರೆ ಇದು ಪೂರ್ವನಿಯೋಜಿತ ಕೃತ್ಯ. ಇದರ ಹಿಂದೆ ದೊಡ್ಡ ಶಡ್ಯಂತ್ರ ಇದೆ. ಪ್ರಕರಣದ ಹಿಂದಿರುವ ಕೆಲವರನ್ನು ರಕ್ಷಿಸಲಾಗುತ್ತಿದೆ ಎಂಬ ಸಂಶಯ ಇರುವುದರಿಂದ ಸಿಬಿಐ ತನಿಖೆಗೆ ವಹಿಸಬೇಕು.
ಪತ್ರಕರ್ತ : ಅಲ್ಲಾ ಸರ್. ಜೈನ ಮುನಿಗಳ ಹತ್ಯೆ ಹಣಕಾಸಿನ ವ್ಯವಹಾರಕ್ಕಾಗಿ ಆಗಿದೆ ಎಂದು ಕೊಲೆಗಾರನೇ ಒಪ್ಪಿಕೊಂಡಿದ್ದಾನಲ್ಲಾ. ಇದರಲ್ಲಿ ಕೋಮು ದ್ವೇಷ ಎಲ್ಲಿದೆ?
ಬೊಮ್ಮಣ್ಣ : ಎಲ್ಲಿದೆ ಅಂದ್ರೆ. ಕೊಲೆಗಾರನಿಗೆ ಸಹಾಯ ಮಾಡಿದ್ದು ಹಸನ್ ಎನ್ನುವ ಮುಸ್ಲಿಂ ವ್ಯಕ್ತಿ. ಆತನ ಹೆಸರನ್ನು ಮುಚ್ಚಿಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದು ಖಂಡಿತಾ ಖಂಡನೀಯ. ಕೇಸ್ ಸಿಬಿಐ ಗೆ ಕೊಡಲಿ.
ಪತ್ರಕರ್ತ : ಸರಿ ಸರ್. ಯಾವುದೇ ಕೊಲೆ ಆದ್ರೂ ಕೋಮುಬಣ್ಣ ಬಳೀತೀರಲ್ಲಾ. ಇದರಿಂದ ಸಮಾಜದಲ್ಲಿ ಅಶಾಂತಿ ಅಸಹನೆ ಹೆಚ್ಚಾಗೋದಿಲ್ವಾ.
ಬೊಮ್ಮಣ್ಣ : ಆಗಲಿ ಬಿಡಿ. ಹತ್ಯೆಗಳು ಆಗಿದ್ದು ನಿಜ ಹೌದಲ್ಲೊ. ಕೊಲೆ ಆಗೋದು ದ್ವೇಷದಿಂದ ಹೌದಲ್ಲೋ. ಈ ಸರಕಾರ ಬಂದ ಮೇಲೆ ಸೇಡಿನ ಮನೋಭಾವ ಹೆಚ್ಚಾಗಿದೆ. ಹಿಂದೂ ಕಾರ್ಯಕರ್ತರ ಕೊಲೆ ಆಗ್ತಿವೆ. ಸಾಧು ಸಂತರ ಹತ್ಯೆ ಆಗ್ತಿದೆ. ಇದನ್ನ ನಾವು ಖಂಡಿಸ್ತೇವೆ. ಇವತ್ತಿಗೆ ಇಷ್ಟು ಸಾಕು ಹೋಗಿ.
***************
ಯತ್ನಣ್ಣ : ನೀವು ಕೇಳೋಕು ಮುಂಚೆ ನಾನೇ ಹೇಳ್ತೀನಿ ಕೇಳಿ. ನಮ್ಮ ಹಿಂದೂ ಧರ್ಮ ಅಪಾಯದಲ್ಲಿದೆ.
ಎಲ್ಲಾ ಕಡೆ ಪಾಕಿಸ್ಥಾನದ ದ್ವಜಗಳು ಹಾರಾಡ್ತಿವೆ. ಭಯೋತ್ಪಾದನೆ ಹೆಚ್ಚಾಗ್ತಿದೆ. ಹೆಣಗಳು ಬೀಳ್ತಿವೆ. ಇದೊಂದು ಹಿಂದೂ ವಿರೋಧಿ ಸರಕಾರ.
ಪತ್ರಕರ್ತ : ಎಲ್ಲಿ ಸರ್ ಪಾಕಿಸ್ಥಾನದ ದ್ವಜಗಳು ಹಾರಾಡ್ತಿವೆ ಕಾಣ್ತಾನೇ ಇಲ್ಲ.
ಯತ್ನಣ್ಣಾ : ನಮ್ಮ ಕಣ್ಣಿಗಂತೂ ಎಲ್ಲಿ ನೋಡಿದಲ್ಲಿ ಅವೇ ಕಾಣ್ತಿವೆ. ನಿಮಗೆ ಬೇಕಾದರೆ ಹುಡುಕಿ ನೋಡಿ. ಇದರ ಬಗ್ಗೆ ಹೆಚ್ಚು ಮಾತಾಡೂದಿಲ್ಲ. ನಮಸ್ಕಾರ.
***********
ಅಸೋಕ : ನೋಡ್ರಿ, ಮತ್ತೆ ಎರಡು ಜೋಡಿ ಕೊಲೆಗಳಾಗಿವೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಈ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲಾ ಅಂತಾ.
ಪತ್ರಕರ್ತ : ಸರ್ ಫಣೇಂದ್ರ ಹಾಗೂ ವಿನುಕುಮಾರ್ ರ ಕೊಲೆಗಳು ವ್ಯವಹಾರದಲ್ಲಾದ ವ್ಯಯಕ್ತಿಕ ಸೇಡಿನಿಂದ ಆಗಿವೆ ಅಂತಲ್ಲಾ ಸರ್.
ಅಸೋಕ : ಕೊಲೆ ಯಾವುದೇ ಕಾರಣಕ್ಕೆ ಆಗಿರಲಿ ಕೊಲೆ ಆದವರು ಯಾರು? ಹಿಂದೂಗಳು. ಫಣೇಂದ್ರ ಹಿಂದೂ ಸಂಘಟನೆಯ ಕಾರ್ಯಕರ್ತ ಅಂತಾ ಈಗ ಮಾಹಿತಿ ಬಂದಿದೆ. ಹಿಂದೂಗಳ ಕೊಲೆಯನ್ನು ನಾವು ಖಂಡಿಸುತ್ತೇವೆ. ಈ ಹಿಂದೂ ವಿರೋಧಿ ಸರಕಾರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂಬುದು ಗೊತ್ತಾಗಿದೆ. ಇದಕ್ಕಿಂತ ಹೆಚ್ಚಿಗೇನೂ ಹೇಳಲಾರೆ.
*********
ಪತ್ರಕರ್ತ : ನೋಡಿದ್ರಲ್ಲಾ ವೀಕ್ಷಕರೇ. ಕೊಲೆಗಳು ಯಾವುದೇ ಕಾರಣಕ್ಕೇನೇ ಆಗಿರ್ಲಿ. ಹೆಣ ಬಿದ್ದ ತಕ್ಷಣ ರಣಹದ್ದುಗಳಂತೆ ಈ ಜನ ಓಡಿ ಬರ್ತಾರೆ. ವಿಚಾರಣೆ ಆಲೋಚನೆ ಮಾಡದೇ ಜಾತಿ ಧರ್ಮದ ಬಣ್ಣ ಬಳೀತಾರೆ. ರಾಜಕೀಯದ ಲಾಭಕ್ಕಾಗಿ ಸೂತಕದ ಮನೆಯಲ್ಲಿ ಹೈಡ್ರಾಮಾ ಶುರುಮಾಡ್ತಾರೆ. ಹಿಂದೆ ಮುಂದೆ ಗೊತ್ತಿಲ್ಲದ ಜನರ ಮನಸಲ್ಲಿ ಕೋಮು ವಿಷ ಬೀಜ ಬಿತ್ತಿ ಅವರ ಭಾವನೆಗಳನ್ನು ಕೆರಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹಿಂದುಳಿದ ಶೂದ್ರ ದಲಿತ ಯುವಕರ ಮೆದುಳಲ್ಲಿ ಹಿಂದೂ ಮತಾಂಧತೆ ತುಂಬಿ ಹಲ್ಲೆ ಹತ್ಯೆಗೆ ಪ್ರಚೋದಿಸುತ್ತಾರೆ. ಇವರಿಂದಾಗಿ ಮೆದುಳು ತೊಳೆದುಕೊಂಡ ಕಾರ್ಯಕರ್ತ ಸತ್ತರೆ ಅದನ್ನೇ ಬಂಡವಾಳ ಮಾಡಿಕೊಂಡು ಹೆಣಗಳನ್ನೇ ಅಧಿಕಾರದ ಪಟ್ಟ ಗಿಟ್ಟಿಸಲು ಮೆಟ್ಟಲು ಮಾಡಿಕೊಳ್ಳುತ್ತಾರೆ.
ಇಂತವರ ಹುನ್ನಾರವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ದ್ವೇಷದ ಅಂಗಡಿ ತೆರೆದಿರುವವರನ್ನು ವಿರೋಧಿಸುತ್ತಲೇ ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಿದೆ.
ಕ್ಯಾಮರಾಮನ್ ಸತೀಶ್ ಜೊತೆ ನಾನು ಸೃಷ್ಟಿ ಟಿವಿಯ ರಾಘವ್. ನೋಡ್ತಾ ಇರಿ ಇದು ನಿಮ್ಮ ಟಿವಿ. ಸತ್ಯ ಪ್ರತಿಪಾದನೆಯೇ ನಮ್ಮ ಗುರಿ..
*- ಶಶಿಕಾಂತ ಯಡಹಳ್ಳಿ*
Comments
Post a Comment