ಪನೌತಿ ಪ್ರಸಂಗ(ಪ್ರಹಸನ - 64)

(ಪ್ರಹಸನ - 64)

 ಪನೌತಿ  ಪ್ರಸಂಗ

*******************

 

ಕಮಲಮ್ಮ : ಅಯ್ಯೋ ನೋಡಿ ನಮ್ಮನೆಯ ಅಧಿನಾಯಕರಿಗೆ ಬೈದು ಅಪಮಾನ ಮಾಡಲಾಗಿದೆ. ತಡಕೊಳ್ಳೋಕಾಗ್ತಿಲ್ಲ ಉರಿ ಕಿತ್ಕೊಂಡ್ ಬರ್ತಿದೆ.. ಉರಿ ಉರಿ ಎಲ್ಲಾ ಕಡೆ ಉರಿ. ಅಡಿಯಲ್ಲಿ ಉರಿ, ಬುಡದಲ್ಲಿ ಉರಿ.. 

 

ಮಾರಿಕೊಂಡ ಮಾಧ್ಯಮ ( ಮಾಮಾ) : ಉರಿ ಎಲ್ಲದೆ ಉರಿ. ಉರಿಗೆ ಉರಿ. ಏನಿಲ್ಲಾ ಸುಮ್ಮನಿರಿ.

 

ಕಮಲಮ್ಮ : ಮಾಮಾ.. ಬಾ. ನೋಡಲ್ಲಿ ಬೈಗಳುಗಳ ಉರಿ. ಕೇಳಲ್ಲಿ ಅಪಮಾನದ ಉರಿ.. ವಿಶ್ವಗುರುವಿಗೆ ನಿಂದನೆಯ ಉರಿ

 

ಮಾಮಾ : ಯಾರು ಏನೆಂದರು ಈಗ? ವಿಶ್ವಗುರುಗಳನ್ನು ನಿಂದಿಸುವಷ್ಟು ಧೈರ್ಯ ಯಾರಿಗಿದೆ?

 

ಕಮಲಮ್ಮ : ಅದೇ ಪಪ್ಪು ಇದ್ದಾನಲ್ಲಾ ಬಾಲಕ, ಅವನು ಪನೌತಿ ಅಂತಾ ಬೈಕೊಂಡು ತಿರಗ್ತಾ ಇದ್ದಾನೆ. ನಮ್ಮ ಸಂಘಿ ಕುಟುಂಬ ಪರಿವಾರಕ್ಕೆ ಇದು ಅವಮಾನ.. ಏನ್ ಮಾಡ್ಲಿ.. 

 

ಮಾಮಾ : ಪನೌತಿ ಅಂದ್ರೆ ಮರ್ಮಕ್ಕೆ ನಾಟುವಂತಾ ಬೈಗಳಾ. ನನಗೆ ಗೊತ್ತೇ ಇರಲಿಲ್ಲ.

 

ಕಮಲಮ್ಮ : ಅಪಶಕುನ ಮುಂಡೇದೇ, ಪನೌತಿ ಅಂದ್ರೆ ಅಪಶಕುನ, ದರಿದ್ರ, ನತದೃಷ್ಟ ಅಂತಾ, ಅಷ್ಟೂ ಗೊತ್ತಾಗೋದಿಲ್ವಾ?

 

ಮಾಮಾ : ಹೋಗಲಿ ಬಿಡಿ ಏನೋ ಬಾಲಕ ಹೇಳಿದ್ದಾನೆ, ಎಷ್ಟೇ ಆದರೂ ಪಪ್ಪು ಅಲ್ವಾ, ಹೊಟ್ಟೆಗಾಕೊಳ್ಳಿ. ಹುಡುಗನ ಮಾತನ್ನ ಯಾಕೆ ನಂಬತೀರಿ?

 

ಕಮಲಮ್ಮ : ನಾವು ನಂಬದೇ ಇದ್ರೆ ಏನಾಯ್ತು. ಜನಾ.. ದೇಶದ ಜನಾ ನಂಬ್ತಾರಲ್ಲಾ. ವಿಶ್ವಗುರುಗಳು ಯಜಮಾನಿಕೆ  ವಹಿಸಿಕೊಂಡ ಮೇಲೆ ಬರೀ ಅಪಶಕುನಗಳೇ ಆಗಿವೆ ಅಂತಾ ಜನಾ ಆಡ್ಕೋತಾ ಇದ್ದಾರಲ್ಲಾ. ಐರನ್ ಲೆಗ್ ಅಂತಾನೂ ಕಿಚಾಯಿಸ್ತಾ ಇದ್ದಾರಲ್ಲಾ. ಈಗೇನಪ್ಪಾ ಮಾಡೋದು. ವಿಶ್ವಗುರುಗಳು ಕಾಲಿಟ್ಟಲ್ಲೇ ಚಂದ್ರಯಾನ ನೆಗೆದು ಬಿತ್ತು, ಭಾರತ ವಿಶ್ವಕಪ್ ಸೋತಿತು ಅಂತೆಲ್ಲಾ ಆರೋಪಿಸ್ತಾ ಇದ್ದಾರಲ್ಲಾ. ಕಾಲ್ಗುಣ ಚೆನ್ನಾಗಿಲ್ಲ ದೇಶಕ್ಕೆ ಅಪಶಕುನ ಅಂತಾನೂ ಹೇಳ್ತಿದ್ದಾರಲ್ಲಾ. ಅದಕ್ಕೆ ಪಪ್ಪು ಕೂಡಾ ಪನೌತಿ ಪನೌತಿ ಅಂತಾ ಡಂಗುರ ಹೊಡೀತಾ ಇದ್ದಾನಲ್ಲಾ. ಅದನ್ನ ಜನರೂ ನಂಬ್ತಾ ಇದ್ದಾರಲ್ಲಾ ಈಗೇನ್ ಮಾಡೋದು? ಮಾಡೋದೇನು? ( ಬಾಲ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡುತ್ತಾಳೆ)

 

ಮಾಮಾ : ಇರಬೋದೇನೋ. ಜನರು ಈಗ ಬಾಳಾ ಬುದ್ದಿವಂತರಾಗಿದ್ದಾರೆ ಅಲ್ವಾ. ಅವರಿಗೆ ಆಗಾಗ ಕೊಡ್ತಾ ಇದ್ದ ಧರ್ಮ ದೇವರುಗಳ ಡೋಜ್ ಪವರ್ ಕಡಿಮೆ ಆದಂತಿದೆ. ಇದಕ್ಕೆ ಏನಾದ್ರೂ ಮಾಡಲೇಬೇಕು. ಜನಾ ಎಚ್ಚರಾದ್ರೆ ಪಟ್ಟಕ್ಕೆ ಸಂಚಕಾರ. ಕಮಲಮ್ಮ ಮತ್ತೆ ನಿನಗೆ ಕೆಸರೇ ಗತಿ.

 

ಮಾಮಾ : ಅದಕ್ಕೆ ನಿನ್ನ ಕರೆಸಿದ್ದು. ನಿನ್ನಂತಾ ಮೀಡಿಯಾದವರನ್ನು ನಾವು ಸಾಕಿದ್ದೇ ಜನರ ಭಾವನೆಗಳನ್ನ ವಿಶ್ವಗುರುಗಳ ಪರವಾಗಿ ಪ್ರಚೋದಿಸೋಕೆ ಅಲ್ವಾ

 

ಮಾಮಾ ಕೆಲಸವನ್ನ ನಾಯಿಗಿಂತಾ ನಿಯತ್ತಾಗಿ ಮಾಡ್ತಾನೇ ಇದ್ದೀವಲ್ಲಾ. ಆದರೆ ಎಷ್ಟೂಂತ ಸುಳ್ಳನ್ನ ಹೇಳಿ ಹೇಳಿ ಸತ್ಯ ಅಂತಾ ನಂಬಿಸೋದು. ನಾವೆಷ್ಟೇ ಕೂಗಿ ಹೇಳಿದ್ರೂ ಜನಾ ನಂಬ್ತಾನೇ ಇಲ್ವಲ್ಲಾ. ಅದರಲ್ಲಿ ಈಗ ಪನೌತಿ ಕಾಟ ಬೇರೆ. ಒಂದು ಕೆಲಸಾ ಮಾಡಿ ಕಮಲಮ್ಮಾ ವಾಪಸ್ ನಿಮ್ಮ ಪರಿವಾರದವರೆಲ್ಲಾ ಸೇರಿ ಪಪ್ಪುಗೆ ಪನೌತಿ ಪನೌತಿ  ಅಂತಾ ನೂರು ಸಲ ಹೇಳಿ. ನಾವು ಗೋದಿ ಮೀಡಿಯಾದವ್ರು ಲಕ್ಷ ಸಲ ಹೇಳ್ತೀವಿ. ಆಗಲಾದರೂ ಜನ ನಮ್ಮ ಮಾತು ನಂಬಬಹುದೇನೋ. ಪಪ್ಪು ತೆಪ್ಪಗಿರಬಹುದೇನೋ?

 

ಕಮಲಮ್ಮ : ಈಗೆಲ್ಲಿಯ ಪಪ್ಪು. ನಾವೇ ಪಪ್ಪು ಅಂತಾ ನಾಮಕರಣ ಮಾಡಿ ಅದನ್ನ ನೂರು ಕೋಟಿ ಜನರು ನಂಬುವಂತೆ ಮಾಡೋದಿಕ್ಕೆ ಐಟಿ ಸೆಲ್ ಮೂಲಕ ಅಪಪ್ರಚಾರ ಮಾಡಿದ್ವಿ. ಅದಕ್ಕೆ ಮೂರು ಸಾವಿರ ಕೋಟಿ ಖರ್ಚು ಮಾಡಿದ್ವಿ. ಆದರೆ ಪಪ್ಪು ಬೆಳೀತಾನೇ ಹೋದ. ಕನ್ಯಾಕುಮಾರಿಯಿಂದಾ ಕಾಶ್ಮೀರದ ವರೆಗೆ ಭಾರತ್ ಜೋಡೋ ಪಾದಯಾತ್ರೆ ಮಾಡಿ ನಮ್ಮ ಪ್ಲಾನೆಲ್ಲಾ ಹಾಳು ಮಾಡಿದಾ. ಮೂರುಸಾವಿರ ಕೋಟಿಗೆ ತಿರುಪತಿ ನಾಮ ಹಾಕಿದಾ. ವಾಮನನಂತಿದ್ದ ಪಪ್ಪು ಈಗ ಮುಗಿಲಗಲ ಬೆಳೆದು ವಿಶ್ವಗುರುವಿನ ತಲೆ ಮೇಲೆ ತನ್ನ ರಕ್ಕಸ ಪಾದ ಊರಲು ಸಿದ್ದನಾಗಿದ್ದಾನೆ. ಅದೇ ನಮಗೆಲ್ಲಾ ಆತಂಕ ತಂದಿರೋದು.

 

ಮಾಮಾ : ಅಷ್ಟೇ ಅಲ್ಲಾ. ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆಗೆಯುತ್ತೇನೆ ಎಂದು ಬೇರೆ ಹೇಳಿ ಜನರನ್ನು ನಂಬಿಸ್ತಾ ಇದ್ದಾನೆ. ನಿಮ್ಮ ದ್ವೇಷ ರಾಜಕಾರಣಕ್ಕೆ ಉನ್ಮಾದಗೊಂಡ ಜನ ಈಗ  ಪ್ರೀತಿಯ ಅಂಗಡಿಗಾಗಿ ಕಾಯ್ತಾ ಇದ್ದಾರೆ. ನಮಗೆ ಮೊದಲೇ ಗೊತ್ತಿತ್ತು ದ್ವೇಷಕ್ಕೆ ಆಯಸ್ಸು ಕಡಿಮೆ ಅರ್ಭಟ ಜಾಸ್ತಿ ಅಂತಾ.

 

ಕಮಲಮ್ಮ : ಅದು ನಮಗೂ ಗೊತ್ತಯ್ಯಾ. ಈಗೇನು ಮಾಡೋದು ಅದನ್ನಾದ್ರೂ ಹೇಳು

 

ಮಾಮಾ : ಎಲ್ಲಾ ಮಸೀದಿಗಳ ಮೇಲೆ ದಾಳಿ ಮಾಡಿಸಿ ದಂಗೆ ಹುಟ್ಟಿಸಿದರೆ ಹೆಂಗೆ?

 

ಕಮಲಮ್ಮ : ಅದಕ್ಕೂ ಧರ್ಮ ದ್ವೇಷದ ಕತೆ ಕಟ್ತಾರೆ

 

ಮಾಮಾ : ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರೆ?

 

ಕಮಲಮ್ಮ : ಈಗದು ಹಳೇ ಟ್ರಿಕ್ ಆಯ್ತು

 

ಮಾಮಾ : ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಬಾಂಬ್ ಹಾಕಿದರೆ ಆಗುತ್ತಲ್ವಾ?

 

ಕಮಲಮ್ಮ : ಆಗ ಚೀನಾದವರು ನಮ್ಮೇಲೆ ಬಾಂಬ್ ಹಾಕ್ತಾರೆ. ಅದೆಲ್ಲಾ ವರ್ಕೌಟ್ ಆಗೋದಿಲ್ಲ

 

ಮಾಮಾ : ನೀವು ಸಾಕಿದ  ಇಡಿ ಐಟಿ  ಗಳನ್ನ ಚೂಬಿಟ್ಟು ಎಲ್ಲಾ ವಿರೋಧಿಗಳನ್ನ ಜೈಲಿಗೆ ಹಾಕಿದರೆ ವಿರೋಧಿಗಳೇ ಇರೋದಿಲ್ಲವಲ್ಲಾ.

 

ಕಮಲಮ್ಮ : ಅದೆಲ್ಲಾ ಮಾಡಿ ನೋಡಿ ಆಯ್ತು. ಯಾಕೋ ಅಂದುಕೊಂಡ ರಿಜಲ್ಟ್ ಬರ್ತಿಲ್ಲಾ

 

ಮಾಮಾ : ನಿನ್ನೆ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಒಳಗಾಗಿ ಐದು ಜನ ನಮ್ಮ ಯೋಧರು ಹುತಾತ್ಮರಾಗಿದ್ದಾರಲ್ಲಾ, ಅದನ್ನೇ ದೊಡ್ಡದು ಮಾಡಿ ಜನರ ಭಾವನೆ ಕೆರಳಿಸಿದರೆ ಸಾಕಲ್ವಾ

 

ಕಮಲಮ್ಮ : ನಾವೇ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಅಂತಾ ಹೇಳಿ ಈಗ ಅಶಾಂತಿ ಅಂದ್ರೆ ಜನ ಹೇಗೆ ನಂಬ್ತಾರೆ

 

ಮಾಮಾ : ಭಾವಪ್ರಚೋದನೆಯ ಎಲ್ಲಾ ಅಸ್ತ್ರಗಳೂ ವಿಪಲವಾದಾಗ ಇರುವುದೊಂದೇ ದಾರಿ. ಎದುರಾಳಿಗಳ ತಂತ್ರಗಳನ್ನೇ ನೀವೂ ಅನುಸರಿಸೋದು. ಜನರನ್ನು ಯಾಮಾರಿಸೋದು?

 

ಕಮಲಮ್ಮ : ಏನು ಹಾಗಂದ್ರೆ?

 

ಮಾಮಾ : ಜನರು ಸಂಕಷ್ಟದಲ್ಲಿದ್ದಾರೆ. ಪನೌತಿಯೇ ಅದಕ್ಕೆಲ್ಲಾ ಕಾರಣ ಅಂತಾ ಪಪ್ಪು ಪಟಾಲಂ ಬೇರೆ ಪ್ರಚಾರ ಮಾಡ್ತಿದೆ. ಈಗ ನೀವು ಏನು ಮಾಡಬೇಕಂದ್ರೆ ಜನರಿಗೆ ಬೇಕಾದ್ದನ್ನೆಲ್ಲಾ ಉಚಿತವಾಗಿ ಕೊಡುತ್ತೇವೆ ಅಂತಾ ಹೇಳಿದ್ರೆ ಜನರು ಮತ್ತೆ ನಿಮ್ಮತ್ತ ಒಲಿಯಬಹುದು. ಮತ್ತೆ ದೇಶಾದ್ಯಂತ ಕಮಲ ಅರಳಬಹುದು.

 

ಕಮಲಮ್ಮ : ಉಚಿತ ಕೊಡುಗೆಗಳಿಂದ ದೇಶ ದಿವಾಳಿ ಆಗುತ್ತದೆ ಅಂತಾ ನಮ್ಮ ವಿಶ್ವಗುರುಗಳು ಹೇಳಿಯಾಗಿದೆಯಲ್ಲಾ. ಅಷ್ಟಕ್ಕೂ ಎಲ್ಲಾ ಉಚಿತಗಳಿಗೆ ಎಲ್ಲಿಂದಾ ಹಣ ತರೋದು? ಈಗಾಗಲೇ ಹತ್ತು ವರ್ಷದಿಂದಾ ಲಾಭದಾಯಕವಾಗಿದ್ದ ಸಾರ್ವಜನಿಕ ಸಂಸ್ಥೆಗಳನ್ನೆಲ್ಲಾ ಮಾರಿಕೊಂಡು ದೇಶ ನಡೆಸಿದ್ದೇವೆ. ಇನ್ನು ಉಚಿತಗಳನ್ನು ಕೊಟ್ಟರೆ ಏನೇನೆಲ್ಲಾ ಮಾರಬೇಕಾಗುತ್ತೋ ಏನೋ?

 

ಮಾಮಾ : ಹೇಳಿದ ಕೂಡಲೇ ಕೊಟ್ಟಂಗೆ ಆಯ್ತಾ. ಹಿಂದೆ ಕೊಟ್ಟ ಯಾವುದಾದರೂ ಭರವಸೆ ಈಡೇರಿಸಿದ್ದೀರಾ. ಇಲ್ವಲ್ಲಾ? ಹಂಗೆ ಭರವಸೆ ಕೊಡೋದು. ಜನರನ್ನ ನಂಬಿಸೋದು. ಅಧಿಕಾರ ಸಿಕ್ಕ ಮೇಲೆ 'ಎಲ್ಲಾ ಎಲೆಕ್ಷನ್ ಜುಮ್ಲಾ' ಅಂತಾ ಹೇಳಿ ಸುಮ್ಮನಿರೋದು. ಇದನ್ನ ನಾವು ನಿಮಗೆ ಹೇಳಿಕೊಡಬೇಕಾ.

 

ಕಮಲಮ್ಮ : ಜನರನ್ನು ನಂಬಿಸಲು ಇದೊಂದೇ ಈಗ ಉಳಿದಿರುವ ಮಾರ್ಗ. 'ಉಚಿತ ಯೋಜನೆ, ಖಚಿತ ಮತಕ್ರೂಢಿಕರಣೆ'.  ಆದರೆ ಏನು ಮಾಡೋದು ಯಾಕೋ ನಮ್ಮ ವಿಶ್ವಗುರುವಿನ ಟೈಂ ಈಗ ಸರಿ ಇಲ್ಲಾ. ಕಾಲಿಟ್ಟಲ್ಲೆಲ್ಲಾ ಅಪಶಕುನ.

 

(ಹಿಂದಿನಿಂದ ಜೋರಾಗಿ ಪನೌತಿ ಪನೌತಿ ಅಂತಾ ಕೂಗಿದ ಸದ್ದು. ಒಂದು ದ್ವನಿ ನೂರಾರು ದ್ವನಿಯಾಗುತ್ತಾ ಪನೌತಿ ಪನೌತಿ ಅಂತಾ ಮಾರ್ಧನಿಸ ತೊಡಗುತ್ತದೆ)

 

ಮಾಮಾ : ಅಯ್ಯೋ ಯಾರೋ ಬಂದಂತೆ ಕಾಣುತ್ತದೆ ನಾನೀಗ ಹೊರಡುವೆ. ನಿಮ್ಮ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುವೆ ( ಹೊರಡುತ್ತಾನೆ. ಮತ್ತೆ ಪನೌತಿ ಎನ್ನುವ ದ್ವನಿಗಳು)

 

ಕಮಲಮ್ಮ : ಅನಿಷ್ಟ ಮುಂಡೇವಾ ತೊಲಗಿ. ನೀವೇ ಅಪಶಕುನ.. ನಿಮ್ಮದೇ ಪನೌತಿ ( ಎಂದು ಕಿರಚುತ್ತಾಳೆ)

( ಅಷ್ಟರಲ್ಲಿ ಯಾವುದೋ ಒಂದು ದೊಡ್ಡದಾದ ವಾಮನ ಪಾದ ಕಮಲಮ್ಮಳ ತಲೆ ಮೇಲೆ ಬಂದು ನಿಲ್ಲುತ್ತದೆ. ಕಮಲಮ್ಮ ಇನ್ನೂ ಜೋರಾಗಿ ಕಿರುಚಿ ಸ್ಥಬ್ದವಾಗಿ ನಿಲ್ಲುತ್ತಾಳೆ.) 

 

ಹಿನ್ನೆಲೆಯಲ್ಲಿ ಹಾಡು.

 

ಅಪಶಕುನ ದೇಶಕೆ ಅಪಶಕುನ

ಹೇಳಿ ಯಾರು ಇದಕೆಲ್ಲಾ ಕಾರಣ 

ಸಂಕಷ್ಟದಲ್ಲಿದೆ ಬಹುಜನರ ಜೀವನ

ಹೇಳಿ ಇದಕೆಲ್ಲಾ ಕಾರಣ ಯಾರ ಕಾಲ್ಗುಣ.

 

- ಶಶಿಕಾಂತ ಯಡಹಳ್ಳಿ

25-11-2023

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ