ಅಮ್ಮಾ ಎಂದರೆ... ( ಪ್ರಹಸನ-70)

ಪ್ರಹಸನ -70

ಅಮ್ಮಾ ಎಂದರೆ...
-------------------
( ಕಾಶಿರಾಯರ ಮನೆಯ ಹಾಲ್. ಅಪ್ಪ ಅಮ್ಮ ದೇವಸ್ಥಾನಕ್ಕೆ ಹೊರಟಿದ್ದಾರೆ. ಮಗ ಟಿವಿ ಮುಂದೆ ಸೋಪಾದಲ್ಲಿ ಕೂತಿದ್ದಾನೆ. ಅಜ್ಜಿ ಮೂಲೆಯಲ್ಲಿ ಬಿದ್ದುಕೊಂಡಿದ್ದಾಳೆ)

ಅಮ್ಮ : ನೋಡು ರಾಮು, ನಾವು ದೇವಸ್ಥಾನಕ್ಕೆ ಹೋಗಿ ಬರ್ತೀವಿ. ಓದ್ಕೊಂಡು ಕೂತ್ಕೋ.

ಅಪ್ಪ : ಆ ಹಾಳು ಟಿವಿ ಮೊಬೈಲ್ ನೋಡ್ಕೊಂಡು ಕೂಡಬೇಡಾ ಗೊತ್ತಾಯ್ತು. ಅದರಿಂದ ಏನೂ ಲಾಭ ಇಲ್ಲಾ, ಎಲ್ಲಾ ಟೈಂ ವೇಸ್ಟ್. ಅರ್ಥ ಆಯ್ತಾ. ಹೂಂ ಏನು ಅರ್ಥ ಆಯ್ತು?

ಮಗ : ಅರ್ಥ ಆಯ್ತಪ್ಪಾ. ಏನಾದ್ರೂ ಲಾಭ ಇದ್ರೆ ಮಾತ್ರ ಮಾಡಬೇಕು. ಇಲ್ಲಾಂದ್ರೆ ಮಾಡಬಾರದು ಅನ್ನೋದು ಅರ್ಥ ಆಯ್ತಪ್ಪಾ.

ಅಮ್ಮ : ಜಾಣ ಮರಿ. ಅಪ್ಪ ಹೇಳಿದಂಗೆ ಮಾಡು ಬಂಗಾರಾ.

ಮಗ : ಆಯ್ತಮ್ಮಾ.. ಅಪ್ಪಾ ನಂಗೊಂದು ಪ್ರಶ್ನೆ.. ಲಾಭ ಇಲ್ಲದೇ ಏನೂ ಮಾಡಬಾರದೂ ಅಂದ್ಯಲ್ಲಾ. ಮತ್ತೆ ಈಗ ನೀವು ದೇವಸ್ತಾನಕ್ಕೆ ಹೋಗ್ತಿದ್ದೀರಲ್ಲಾ. ಅದರಿಂದಾ ಏನಪ್ಪಾ ಲಾಭ ಇದೆ.

ಅಮ್ಮ : ಅಯ್ಯೋ ಅನಿಷ್ಟ ಮುಂಡೇದೇ. ಹಿಂಗೆಲ್ಲಾ ಕೇಳ್ತೀ ಏನೋ.

ಅಪ್ಪ : ಕೇಳಲಿ ಬಿಡೆ. ನೋಡು ರಾಮು. ದೇವಸ್ಥಾನಕ್ಕೆ ಹೋದ್ರೆ ಪುಣ್ಯ ಬರುತ್ತೆ ಕಣಯ್ಯಾ.

ಅಮ್ಮ : ಮೋಕ್ಷ ಸಿಗುತ್ತೆ. ಸತ್ತ ಮೇಲೆ ಸ್ವರ್ಗ ಸಿಗುತ್ತೆ. 

ಮಗ : ಅದೆಲ್ಲಾ ಸತ್ತ ಮೇಲೆ ಅಲ್ವಾ ಅಮ್ಮಾ. ಸ್ವರ್ಗಕ್ಕೆ ಹೋಗಿ ಬಂದವರು ಯಾರಾದರೂ ಇದ್ದಾರೆನಮ್ಮಾ. ಈಗ ಏನು ಲಾಭ ಇದೆ ಅದನ್ನ ಹೇಳಿ ಅಪ್ಪಾ.

ಅಪ್ಪ : ಏನು ಲಾಭ ಅಂದ್ರೆ.. ಅದು.. 

ಮಗ : ಇಲ್ಲಿಂದಾ ನಾಲ್ಕು ಕಿಮಿ ಹೋಗಿ ಬರೋದಕ್ಕೆ ಪೆಟ್ರೋಲ್ ಖರ್ಚು. ಅಲ್ಲಿ ಪಾರ್ಕಿಂಗ್ ಮಾಡೋದಕ್ಕೆ, ಪೂಜಾ ಸಾಮಗ್ರಿ ಖರೀದಿಗೆ, ಪೂಜೆ ಅರ್ಚನೆ ಮಾಡೋದಿಕ್ಕೆ ಹಣ ಕೊಡಲೇಬೇಕು. ಚಪ್ಪಲಿ ಬಿಡೋದಕ್ಕೂ ಚಿಲ್ಲರೆ ಬಿಚ್ಚಲೇಬೇಕು. ಇದೆಲ್ಲಾ ಖರ್ಚು ಅಲ್ವೇಣಪ್ಪಾ. ಲಾಭ ಅನ್ನೋದು ಏನಿದೆ ಹೇಳಪ್ಪಾ. 

ಅಮ್ಮ : ಶಿವ ಶಿವಾ.. ಏನ್ರಿ ಇವ್ನು ಹಿಂಗೆ ಹೇಳ್ತಾ ಇದ್ದಾನೆ. ಹೋಯ್ತು ಎಲ್ಲಾ ಹೋಯ್ತು. ಶಾಸ್ತ್ರ ಸಂಪ್ರದಾಯ ಎಲ್ಲಾ ಹೋಯ್ತು. ಇನ್ನೂ ಏನೇನು ನೋಡಬೇಕೋ ಈ ಕಣ್ಣುಗಳಿಂದಾ.

ಅಜ್ಜಿ : (ನರಳುತ್ತಾ) ಏನೋ ಅದು ಕಾಶಿ. ನಂಗೆ ಕಣ್ಣು ಮಂಜಾಗಿ ಏನೂ ಕಾಣಿಸ್ತಿಲ್ಲಾ ಆಸ್ಪತ್ರೆಗಾದ್ರೂ ಕರ್ಕೊಂಡೋಗಿ ಕಣ್ಣಾಪರೇಶನ್ ಮಾಡ್ಸೋ.

ಅಮ್ಮ : ಶುರುವಾಯ್ತು, ಈ ಮುದುಕಿದೊಂದು ಗೋಳು. 

ಅಪ್ಪ : ನಮಗೇನೂ ಬೇರೆ ಕೆಲಸಾ ಇಲ್ಲಾ ಅನ್ಕೊಂಡಿದ್ದೀ ಏನಮ್ಮಾ. ವಯಸ್ಸಾಯ್ತು ಬಿಡು. 

ಅಮ್ಮ : ಏ ಮುದುಕಿ, ನಾಡು ಹೋಗನ್ನುತ್ತೆ, ಕಾಡು ಬಾ ಅನ್ನುತ್ತೆ. ಸಾಯೋ ವಯಸ್ಸಲ್ಲಿ ಕಣ್ಣು ತಗೊಂಡು ಏನ್ ಮಾಡ್ತೀ. ಮೂಲೇಲಿ ತೆಪ್ಪಗೇ ಬಿದ್ಕೊಂಡಿರು. ಭೂಮಿಗೆ ಭಾರಾ ಕೂಳಿಗೆ ದಂಡ.. ಕಣ್ಣಂತೆ ಕಣ್ಣು..
ಮಗ : ಹೌದೌದು.. ಇಂದಿಲ್ಲಾ ನಾಳೆ ಬಿದ್ದೋಗೋ ಮರಕ್ಕೆ ಚಿಕಿತ್ಸೆ ಕೊಡ್ಸಿದ್ರೆ ಏನಿದೆ ಲಾಭ. ಸುಮ್ಕಿರಜ್ಜಿ. 

ಅಜ್ಜಿ : ಹಿಂಗಂದ್ರೆ ಹೆಂಗೋ.. 

ಅಪ್ಪ : ಸ್ವಲ್ಪ ಸುಮ್ಮನಿರಮ್ಮಾ. ನೆಮ್ಮದಿಯಾಗಿರೋಕೆ ಬಿಡು. ಹಾಂ ಈಗ ಹೊಳೀತು ಕಣೊ ದೇವಸ್ಥಾನಕ್ಕೆ ಹೋಗೋದರಿಂದ ಆಗೋ ಲಾಭ ಏನೂ ಅಂದ್ರೆ ನೆಮ್ಮದಿ ಕಣೋ ನೆಮ್ಮದಿ ಸಿಗುತ್ತೆ.

ಮಗ : ನೆಮ್ಮದಿ ಅನ್ನೋದು ಮಾನಸಿಕ ಸ್ಥಿತಿ ಅಲ್ವೇನಪ್ಪಾ. ಅದು ಲಾಭ ಹೇಗಾಗುತ್ತೆ? ಅಮ್ಮನಿಗೆ ಅಡುಗೆ ಮಾಡಿ ಹಾಕೋದ್ರಲ್ಲಿ ನೆಮ್ಮದಿ ಇದ್ರೆ, ನಮಗೆ ಪಸಂದಾಗಿ ತಿನ್ನೋದ್ರಲ್ಲಿ ನೆಮ್ಮದಿ. ಅಜ್ಜಿಗೆ ಮಜ್ಜಿಗೆ ಕುಡಿಯೋದರಲ್ಲಿ ನೆಮ್ಮದಿ. ಒಬ್ಬೊಬ್ಬರಿಗೆ ಒಂದೊಂದರಲ್ಲಿ ನೆಮ್ಮದಿ ಸಿಗುತ್ತೆ. ಅದಕ್ಕೆ ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು. ಅದರಿಂದೇನು ಲಾಭ?

ಅಪ್ಪ : ಅದೇನೋ ಸರಿ.. ಆದ್ರೂ..

ಮಗ : ಅಪ್ಪಾ ನಮ್ಮನೇಲಿ ಯಾರಿಗಾದ್ರೂ ಹುಷಾರಿಲ್ಲಾ ಅಂದ್ರೆ ಏನು ಮಾಡ್ತೀವಿ? ಗಾಯಾ ಗೀಯಾ ಆದ್ರೆ? ಅಮ್ಮನಿಗೆ ವಿಪರೀತ ಹೊಟ್ಟೆ ನೋವು ಬಂದ್ರೆ..?

ಅಮ್ಮ : ಇದೂ ಒಂದು ಪ್ರಶ್ನೇನಾ? ಆಸ್ಪತ್ರೆಗೆ ಹೋಗ್ತೀವಿ? ಡಾಕ್ಟರ್ಗೆ ತೋರಿಸ್ತೀವಿ. ಮಾತ್ರೆ ಔಷಧಿ ತಗೋತೀವಿ.

ಮಗ : ಮತ್ಯಾಕೆ ದೇವಸ್ಥಾನಕ್ಕೆ ಹೋಗೋದಿಲ್ವಾ. ಎಲ್ಲಾ ಬಲ್ಲ ದೇವರೇ ಟ್ರೀಟ್ಮೆಂಟ್ ಕೊಡಬಹುದಲ್ವಾ. ತೀರ್ಥ ಪ್ರಸಾದ ಸೇವನೆಯಿಂದ ಗುಣ ಆಗಬೇಕಲ್ವಾ?

ಅಪ್ಪ : ಅದೆಲ್ಲಾ ಅಸಾಧ್ಯ ಸುಮ್ಕಿರೋ..

ಮಗ : ಮತ್ತೆ ನಾನು ಇಂಜನೀಯರೋ ಡಾಕ್ಟರೋ ಆಗಬೇಕಂತಾ ಹೇಳ್ತಾ ಇರ್ತೀರಲ್ಲಾ. ಅದಕ್ಕೆ ಎಲ್ಲಿಗೆ ಕಳಿಸ್ತೀರಿ? 

ಅಮ್ಮ : ಇದೆಂತಾ ಪ್ರಶ್ನೇನೊ ನಿಂದು. ಕಾಲೇಜಿಗೆ ಕಳಿಸ್ತೀವಿ. ಅದೂ ಡೋನೇಶನ್ ಕೊಟ್ಟು, ಪೀಸ್ ಕಟ್ಟಿ ಕಳಿಸ್ತೀವಿ.

ಅಪ್ಪ : ನೀನು ಡಾಕ್ಟರೋ ಇಂಜನೀಯರೋ ಆದ್ರೆ ಬೇಕಾದಷ್ಡು ಸಂಪಾದನೆ ಮಾಡಿ ಲಾಭ ಮಾಡ್ಕೋಬೋದು ಕಣೊ ರಾಮು.

ಮಗ : ಅಷ್ಟೊಂದು ಖರ್ಚು ಮಾಡಿ ಅಲ್ಲಿಗ್ಯಾಕಪ್ಪಾ ಕಳಿಸ್ತೀರಿ, ನಾನ್ಯಾಕಪ್ಪಾ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದಬೇಕು.

ಅಜ್ಜಿ : ಏನು ಕಣ್ಣಿಗೆ ಎಣ್ಣೆ ಬಿಟ್ಕೊಳ್ಲಾ. ಬೇಡ್ರಪ್ಪಾ ಆಸ್ಪತ್ರೆಗಾದ್ರೂ ಕರ್ಕೊಂಡು ಹೋಗ್ರೋ.

ಅಪ್ಪ : ನೀ ಸುಮ್ಕಿರಮ್ಮೋ.. ನೋಡು ರಾಮು. ನೀ ಡಾಕ್ಟರ್ ಆಗ್ತೀನಿ ಅಂದ್ರೆ ಅದೆಷ್ಟೇ ಖರ್ಚಾಗ್ಲಿ ನಾನು ಕೊಡ್ತೀನಿ. ಎಷ್ಟಾದ್ರೂ ಓದು, ನಾನು ಓದಿಸ್ತೀನಿ.

ಮಗ : ಅದೆಲ್ಲಾ ಯಾಕಪ್ಪಾ. ದೇವಸ್ಥಾನಕ್ಕೆ ಹೋಗಿ "ದೇವರೆ ದೇವರೆ ನನ್ನ ಡಾಕ್ಟರ್ ಮಾಡು ಬಂದ ಲಾಭದಲ್ಲಿ 20 ಪರ್ಸಂಟೇಜ್ ನಿನ್ನ ಹುಂಡಿಗೆ ಹಾಕ್ತೇನೆ, ಹೋಮ ಹವನ ಯಜ್ಞ ಮಾಡಿಸ್ತೀನಿ" ಅಂತಾ ಬೇಡಿಕೊಂಡು ಹರಕೆ ಕಟ್ಟಿದ್ರೆ ಆಗೋದಿಲ್ಲೇನಪ್ಪಾ.

ಅಮ್ಮ : ಅದೆಂಗೋ ಆಗುತ್ತೆ. ಡಾಕ್ಟರ್ ಆಗಬೇಕು ಅಂದ್ರೆ ಓದಲೇ ಬೇಕು. ದೇವರ ಆಶಿರ್ವಾದ ಇದ್ರೆ ಸಾಕು.

ಮಗ : ಹಾಂ. ಏನೇ ಸಾಧನೆ ಮಾಡಬೇಕಂದ್ರೂ ನಾವು ಕಷ್ಟ ಪಡಲೇಬೇಕಲ್ವಾ ಅಮ್ಮಾ. ಮತ್ಯಾಕೆ ಈ ದೇವರು ದೇವಸ್ಥಾನ ಪೂಜೆ ಪುನಸ್ಕಾರ ಎಲ್ಲಾ.

ಅಪ್ಪ : ನೋಡು ಭಗವಂತನ ಇಚ್ಚೆ ಇಲ್ಲದೇ ಏನೂ ಆಗೋದಿಲ್ಲ. ದೇವರ ಮೇಲೆ ನಂಬಿಕೆ ಇಟ್ಟು ಕಷ್ಟ ಪಟ್ಟು ಓದು. 

ಮಗ : ಅಕಸ್ಮಾತ್ ನಂಬಿಕೆ ಇಡದೇ ಚೆನ್ನಾಗಿ ಓದಿದ್ರೆ ಮಾರ್ಕ್ಸ ಬರೋದಿಲ್ಲೇನಪ್ಪಾ. ಪಾಸ್ ಆಗೋದಿಲ್ವೇನಪ್ಪಾ. ಡಾಕ್ಟರ್ ಆಗೋಕೆ ಆಗೋದಿಲ್ವೇನಪ್ಪಾ.

ಅಪ್ಪ : ಆಗುತ್ತೆ ಯಾಕಾಗಲ್ಲಾ. ಆವಾಗ್ಲೂ ಆಗುತ್ತೆ. ಶ್ರಮ ಪಟ್ಟರೆ ಎಲ್ಲಾ ಸಾಧ್ಯ.

ಮಗ : ಹಂಗಾದ್ರೆ ನಮಗೆ ಶಾಲೆ ಕಾಲೇಜುಗಳು ಬೇಕಾ ಇಲ್ಲಾ ಗುಡಿ ಗುಂಡಾರ ಮಂದಿರಗಳು ಬೇಕಾ ಹೇಳಿ ಅಪ್ಪಾ.

ಅಪ್ಪ : ಹೌದು ಎಜುಕೇಶನ್ ಬಾಳಾ ಮುಖ್ಯ. ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಓದಲೇಬೇಕು ರಾಮು.

ಅಮ್ಮ : ಆದರೂ ದೇವರ ಮೇಲೆ ಶೃದ್ದೆ ಭಕ್ತಿ ಬೇಕೇ ಬೇಕಲ್ವೇನ್ರೀ.

ಮಗ : ಅವೂ ಇದ್ದರೆ ಇರಲಿ. ದೇವರು ಮನಸಲ್ಲಿರಲಿ. ಕಾಯಕವೇ ಕೈಲಾಸವಾಗಲಿ ಅಲ್ವೇನಮ್ಮಾ.

ಅಮ್ಮ : ಅಯ್ಯೊ ನನ್ನ ಮಗ ಎಷ್ಟೊಂದು ವಿಷಯ ತಿಳ್ಕೊಂಡಿದ್ದಾನೆ ನೋಡ್ರಿ. 

ಅಪ್ಪ : ಇರ್ಲಿ. ಅಲ್ಲಾ ರಾಮು ದೇವರು ಇಲ್ಲಾ ಅಂತೀಯಾ? 

ರಾಮು : ನಾನೆಲ್ಲಿ ಹೇಳಿದೆ ಹಂಗಂತಾ. ಅವರವರ ಭಾವ ಭಕ್ತಿಗೆ ತಕ್ಕಂತೆ ದೇವರು ಇದ್ದರೆ ಇರಲಿ ಅಪ್ಪಾ. ಆದರೆ ಅದಕ್ಕಾಗಿ ದೇವಸ್ಥಾನಗಳಿಗೆ ಅಲೆದಾಡುವುದು, ಮಂದಿರಗಳಲ್ಲಿ ಭಗವಂತನನ್ನು ಹುಡುಕುವುದು, ಅದೇ ನಿಮ್ಮ ಭಾಷೆಯಲ್ಲೇ ಹೇಳೋದಾದ್ರೆ ಟೈಂ ವೇಸ್ಟ್..

ಅಮ್ಮ : ದೇವರು ಇಲ್ಲಾ ಅಂತಾ ಅನ್ಬೇಡ್ವೋ. ಇದ್ದಾನೆ. 

ಮಗ : ನಿಜವಾಗಿಯೂ ಇದ್ದಾನಮ್ಮಾ. ಇರ್ತಾನೆ.

ಅಮ್ಮ : ಹಂಗೇಳು ಮತ್ತೆ. ನನಗೆ ಗಾಬರಿಯಾಗಿತ್ತು.

ಮಗ : ದೇವರು ಕಲ್ಲು ಮಣ್ಣು ಕಟ್ಟಿಗೆ ಲೋಹದ ರೂಪದ ಮೂರ್ತಿಗಳಲ್ಲಿ ಇಲ್ಲಮ್ಮಾ. ಕಲ್ಲು ಕಾಂಕ್ರೀಟಿನ ಮಂದಿರದಲ್ಲೂ ಇಲ್ಲಾ.

ಅಪ್ಪ : ದೇವರು ಇಲ್ಲಾ ಅಂತೀಯಾ, ಇದ್ದಾನೆ ಅಂತೀಯಾ? ನಿನಗೆಲ್ಲೋ ಗೊಂದಲ ಇದೆ ಕಣೋ ರಾಮು.

ಮಗ : ಏನೂ ಗೊಂದಲ ಇಲ್ಲ. ದೇವರು ಇರೋದೇ ಆದರೆ ಮನುಷ್ಯ ರೂಪದಲ್ಲೇ ಇರ್ತಾನೆ ಅಪ್ಪಾ. ಉದಾಹರಣೆಗೆ ಅಮ್ಮಾ.. ಅಂದ್ರೆ  ತಾಯಿಯೇ ದೇವರು ಅಂತಾರಲ್ವಾ. ಆ ತಾಯಿ ರೂಪದಲ್ಲಿ ಇರ್ತಾನೆ. ಅಲ್ಲಿ ಆಡ್ತಿವೆಯಲ್ಲಾ ಮಕ್ಕಳು, ಅವರೂ ದೇವರ ರೂಪ ಅಂತೀರಲ್ವಾ. ಮಕ್ಕಳೇ ದೇವರಲ್ವಾ. ದೀನ ದಲಿತರು, ಅಸಹಾಯಕರು ದೇವರಂತೆ ಅಲ್ವಾ. 

ಅಮ್ಮ : ಅಯ್ಯೋ ನನ್ನ ಕಂದಾ.ನನ್ನನ್ನೇ ದೇವರು ಅಂದ್ಯಲ್ಲಾ, ನಿನ್ನ ಹೆತ್ತಿದ್ದಕ್ಕೂ ಸಾರ್ಥಕ ಆಯ್ತು. ರ್ರೀ ನೋಡ್ರಿ ನಾನೂ ದೇವರಂತೆ. ನಿಮಗೆ ಒಂದಿನಾನಾದ್ರೂ ಹಾಗೆ ಅನ್ಸಿದೆ ಏನ್ರಿ.

ಅಪ್ಪ : ಅನ್ನಿಸ್ದೇ ಏನು. ದಿನಾಲೂ ಅನ್ನಿಸತ್ತೆ. ನೀನು ಬರೀ ದೇವರಲ್ಲಾ ಕಣೆ, ಮುನಿಸಿಕೊಂಡ್ರೆ ಮಾರಿ, ಹೆಮ್ಮಾರಿ, ಚಂಡಿ, ಚಾಮುಂಡಿ..

ಅಮ್ಮ : ನೋಡಿ ನೋಡಿ. ಹಿಂಗೆಲ್ಲಾ ಆಡಿಕೊಂಡ್ರೆ ಸರಿ ಇರೋದಿಲ್ಲ. ರಣಚಂಡಿ ಆಗಬೇಕಾಗುತ್ತೆ.

ಮಗ : ಅಪ್ಪಾ.. ತಾಯಿಯೇ ದೇವರು ಅನ್ನೋದನ್ನಾದ್ರೂ ಒಪ್ತಿ ಏನಪ್ಪಾ.

ಅಪ್ಪ : ಇದರಲ್ಲಿ ಒಪ್ಪೋವಂತಾದ್ದು ಏನಿದೆ ಮಗನೇ. ಅದು ಶಾಸ್ತ್ರ ಪುರಾಣಗಳಲ್ಲೇ ಹೇಳಿದ್ದಾರಲ್ಲ.

ಅಮ್ಮ : ಹಂಗಾದ್ರೆ ಯಾಕಪ್ಪಾ ನಿನ್ನ ತಾಯಿಯನ್ನ, ನಿನಗೆ ಜೀವದಾನ ಮಾಡಿದ ಮಾತೆಯನ್ನ ಹೀಗೆ ನಿರ್ಲಕ್ಷ ಮಾಡ್ತಿದ್ದೀಯಾ?. ಆಸ್ಪತ್ರೆಗೂ ತೋರಿಸದೇ ಆಕೆಯ ಸಾವಿಗಾಗಿ ಕಾಯ್ತಿದ್ದೀಯಾ?

ಅಮ್ಮ : ಅಯ್ಯೋ ಆ ಮುದಿ ಗೂಬೆ ಇದ್ರೆಷ್ಟು ಇರದಿದ್ದರೆಷ್ಟು. ಅವಳ ಪರ ವಹಿಸಿಕೊಂಡು ನೀನು ಬರಬ್ಯಾಡ ರಾಮು. ಸಿಟ್ಟು ನನ್ನ ತಲೆಗೇರುತ್ತೆ ನೋಡು.

ಮಗ : ಹೋಲ್ಡಾನ್.. ಸ್ವಲ್ಪ ತಾಳ್ಮೆ ಇರಲಿ. ನೀನು ನನಗೆ ತಾಯಿ ದೇವರು ಆದರೆ ಅಜ್ಜಿ ನಮ್ಮಪ್ಪನಿಗೆ ತಾಯಿ ದೇವರು ಆಗಬೇಕಲ್ವಾ ಅಮ್ಮಾ. ಮುಂದೆ ನನಗೂ ಒಂದು ಮದುವೆ ಅಂತಾ ಮಾಡ್ತೀರಾ. ನಿಮಗೂ ಸೊಸೆ ಅಂತಾ ಒಬ್ಬಳು ಬರ್ತಾಳೆ. ಆಗ ನಿಮಗೂ ಅಜ್ಜಿಗೆ ಆದಂಗೆ ವಯಸ್ಸಾಗಿರುತ್ತೆ. ಬಂದ ಸೊಸೆ ನೀವು ಅಜ್ಜಿಗೆ ಬೈತಿರಲ್ಲಾ ಹಂಗೆ ನಿಮಗೆ ಮುದಿ ಗೂಬೆ ಅಂತಾ ಬೈದು ಅವಮಾನ ಮಾಡಿ ಮೂಲೆಗೆ ತಳ್ಳಿದ್ರೆ ನಿನಗೆ ಆನಂದ ಆಗುತ್ತೇನಮ್ಮಾ.

ಅಮ್ಮ : ಹಂಗೆಲ್ಲಾ ಆಗುತ್ತೇನೋ. ಬಂದವಳು ನನ್ನ ಬೈತಾ ಇದ್ರೆ ಅದನ್ನ ನೋಡ್ಕೊಂಡು ನೀನು ಸುಮ್ಕೆ ಇರ್ತೀ ಏನೋ. 

ಮಗ : ಮತ್ತೆ, ಈಗ ನೀನು ಹೆಜ್ಜೆ ಹೆಜ್ಜೆಗೂ ಅಜ್ಜಿಗೆ ಮುದಿ ಗೂಬೆ ಹಡಬೆ ನಾಯಿ, ಅಪ್ರಯೋಜಕಿ ಅಂತೆಲ್ಲಾ ಮಾತಿಮಾತಿಗೆ ಮೂದಲಿಸ್ತಾ ಇರ್ತೀಯಲ್ಲಮ್ಮಾ, ಅದನ್ನ ನೋಡಿಯೂ ಅಪ್ಪ ಸುಮ್ಕೆ ಇರೋದಿಲ್ವಾ. ನಿನ್ನ ಜೊತೆ ಸೇರ್ಕೊಂಡು ಅಪ್ಪಾನೂ ಅಜ್ಜಿಗೆ ಅವಮಾನ ಮಾಡ್ತಾನಲ್ವಾ. ಹಾಗೇ ನಾನೂ.. ಮುಂದೆ..

ಅಮ್ಮ : ಮುಂದೇನೂ ಹೇಳಬೇಡಾ ಸುಮ್ಕಿರು. ಮುಂದೇನಾಗಬಹುದು ಅನ್ನೋದು ನನ್ನ ಕಣ್ಣ ಮುಂದೆ ಕಾಣ್ತಾ ಇದೆ.

ಅಜ್ಜಿ : ಕಣ್ಣು ಕಣಪ್ಪಾ. ನನ್ನ ಕಣ್ಣೇ ಕಾಣ್ತಿಲ್ಲಾ.. ಯಾರಾದ್ರೂ ದೊಡ್ಡಾಸ್ಪತ್ರೆಗೆ ಕರ್ಕೊಂಡು ಹೋಗಿ ಪುಣ್ಯ ಕಟ್ಕೊಳ್ರಪ್ಪಾ. ( ಎಂದು ಎದ್ದು ನಿಲ್ಲಲು ಪ್ರಯತ್ನಿಸಿ ಆಗದೆ ಕೆಳಗೆ ಬೀಳುತ್ತಾಳೆ. ಅಮ್ಮ ಓಡಿ ಹೋಗಿ ಆಸರೆಯಾಗುತ್ತಾಳೆ) 

ಅಪ್ಪ : ನೋಡೇ.. ಮಂದಿರ ಗಿಂದರ ಏನೂ ಬೇಡಾ. ನಡೀ ನನ್ನ ಅಮ್ಮನ್ನ ಮೊದಲು ಆಸ್ಪತ್ರೆಗೆ ಕರಕೊಂಡು ಹೊಗೋಣ.

ಅಮ್ಮ : ಆಯ್ತುರೀ.. ಅಹಂಕಾರದಿಂದ ಪೊರೆ ಕಟ್ಟಿದ್ದ ನನ್ನ ಕಣ್ಣನ್ನು ನನ್ನ ಮಗಾನೇ ತೆರೆಸಿದ. ಮುಂದೆ ವಯಸ್ಸಾದಾಗ ನಮ್ಮನ್ನು ನಮ್ಮ ಮಕ್ಕಳು ಕಾಳಜಿ ವಹಿಸಬೇಕು ಅಂದ್ರೆ ನಾವು ವಯಸ್ಸಾದವರನ್ನು ಕಣ್ಣು ರೆಪ್ಪೆ ಹಾಗೆ ನೋಡಿಕೊಳ್ಳಬೇಕು ಅನ್ನೋದು ಗೊತ್ತಾಯ್ತು.

ಅಪ್ಪ : ಹೌದು ಕಣೆ.. ( ಅಜ್ಜಿಗೆ) ಅಮ್ಮಾ ಬಾ ಹೊಗೋಣ ಆಸ್ಪತ್ರೆಗೆ. 

ಅಜ್ಜಿ : ಹೌದೇನೋ. ಈ ಮುದುಕೀನಾ ನಿಜವಾಗಿಯೂ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿ ಏನೋ? ನನ್ನ ಕಣ್ಣಿಗೆ ಆಪರೇಶನ್ ಮಾಡಿಸ್ತೀ ಏನೋ. ನನ್ನ ಮೊಮ್ಮಗನನ್ನ ಕಣ್ತುಂಬಾ ನೋಡೋ ಹಾಗೆ ಮಾಡಿಸ್ತಿಯೇನೋ? 

ಅಪ್ಪ : ಹೂಂ ಅಮ್ಮಾ. ನಿನ್ನ ಮೊಮ್ಮಗನೇ ನಮ್ಮ ಕಣ್ಣು ತೆರೆಸಿದಾ. ನಡೀ ಹೊಗೋಣಾ ಆಸ್ಪತ್ರೆಗೆ. ( ಅಮ್ಮ ಅಪ್ಪಾ ಇಬ್ಬರೂ ಅಜ್ಜಿಯ ತೋಳು ಹಿಡಿದು ನಡೆಸುತ್ತಾರೆ. ಅಜ್ಜಿ ಎಡವಿ ಬೀಳುವಾಗ)

ಅಮ್ಮ : ನಿಧಾನ ಅಮ್ಮಾ.. ಒಂದೊಂದೇ ಹೆಜ್ಜೆ ಇಡಿ. ನಿಮಗೆ ನಾನು ಆರೈಕೆ ಮಾಡ್ತೇನೆ. ಮತ್ತೆ ಮೊದಲಿನಂತೆ ಓಡಾಡೋಹಾಗೇ ಆಗ್ತೀರಾ. ನಿಮಗೆ ಕಣ್ಣೂ ಬರುತ್ತೆ. ನೀವು ನಮ್ಮ ಪಾಲಿಗೆ ದೇವರಿದ್ದಂತೆ.

ಅಪ್ಪ : ದೇವರಿದ್ದಂತೆ ಅಲ್ಲಾ ಕಣೆ. ಇವಳೇ ದೇವರು. ತಾಯಿ ದೇವರು. 

ಅಜ್ಜಿ : (ಕಣ್ಣಲ್ಲಿ ನೀರು ಸುರಿಸುತ್ತಾ) ಆ ದೇವರು ನಿಮ್ಮನ್ನ ಚೆನ್ನಾಗಿಟ್ಟಿರ್ಲಪ್ಪಾ. ಆಯಸ್ಸು ಆರೋಗ್ಯ ಐಶ್ವರ್ಯ ಎಲ್ಲಾ ಕೊಡಲಿ. 

ಮಗ : ಇದೇ ಅಪ್ಪಾ ನಿಜವಾದ ಆಶೀರ್ವಾದ ಅಂದ್ರೆ. ಯಾವ ದೇವಸ್ಥಾನದ ದೇವರೂ ಹೀಗೆ ಆಶೀರ್ವಾದ ಮಾಡೋದಿಲ್ಲ. ಪೂಜಾರಿಗಳೂ ನೀವು ಕೊಡೋ ಕಾಣಿಕೆ ನೋಡಿ ಒಳ್ಳೇದಾಗಲಿ ಅಂತಾರೆ. ಆದರೆ ಯಾವುದೇ ಅಪೇಕ್ಷೆ ಇಲ್ಲದೇ, ಲಾಭದ ಆಸೆ ಇಲ್ಲದೇ ತಾಯಿ ದೇವರು ಮಾಡುವ ಆಶೀರ್ವಾದ ಇದೆಯಲ್ಲಾ ಅದು ನಿಜವಾದ ದೇವರ ಆಶೀರ್ವಾದ.

ಅಪ್ಪ : ಹೌದು ಕಣೋ. ತಾಯಿ ದೇವರ ಆಶೀರ್ವಾದ. 

( ಅಜ್ಜಿಯನ್ನು ಕಾಳಜೀಪೂರ್ವಕ ಕರೆದುಕೊಂಡು ಹೋಗುತ್ತಾರೆ. ಮಗ ಟಿವಿ ಹಾಕುತ್ತಾನೆ. ಟಿವಿಯಲ್ಲಿ ಚಿ.ಉದಯಶಂಕರ್ ರಚಿಸಿದ ಯಾರಿವನು ಸಿನೆಮಾದ ಹಾಡು ಹಾಡು)

ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮನು ತಾನೆ
ಅಮ್ಮಾ ಅಮ್ಮಾ ನನ್ನಮ್ಮ

(ಅಪ್ಪ ಅಮ್ಮಾ ಇಬ್ಬರೂ ಮಗನತ್ತ ತಿರುಗಿ ನೋಡಿ ಮಂದಹಾಸ ಬೀರುತ್ತಾರೆ. ಮಗ ಚಾನೆಲ್ ಬದಲಾಯಿಸುತ್ತಾನೆ. ಮತ್ತೊಂದು ಹಾಡು)

ಅಮ್ಮಾ ಎಂದರೆ ಏನೋ ಹರುಷವೋ
ನಮ್ಮ ಪಾಲಿಗೆ ಅವಳೇ ದೈವವೋ..

( ಈಗ ಅಮ್ಮ ತಿರುಗಿ ನೋಡುತ್ತಾಳೆ. ಅವಳ ಕಣ್ಣಲ್ಲಿ ನೀರು. ಹಾಡು ಮುಂದುವರೆಯುತ್ತದೆ)

- ಶಶಿಕಾಂತ ಯಡಹಳ್ಳಿ
   14-01-2024

Comments

Popular posts from this blog

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ