ಭಾರತರತ್ನ
ಪ್ರಹಸನ - 74
ಭಾರತರತ್ನ
(ಕಾಲೇಜೊಂದರ ತರಗತಿ. ಶಿಕ್ಷಕಿ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿದ್ದಾರೆ)
ಮೇಡಂ : ಏ ಬಸು.. ದೊಡ್ಡವನಾದ ಮೇಲೆ ನೀ ಏನಾಗಬೇಕಂತ ಮಾಡಿದ್ದೀ.
ಬಸ್ಯಾ : ನಾನಾ ಮೇಡಂ. ನಾನೂ ನಾನು ಬಸ್ ಕಂಡಕ್ಟರ್ ಆಗಬೇಕಂತಾ.. ನಂದೊಂದು ಇದು ಐತೆ..
ಮೇಡಂ : ಯಾಕೋ.. ಓದಿ ಕಲೆಕ್ಟರ್ ಆಗೋದು ಬಿಟ್ಟು ಇದೇನಿದು ಕಂಡಕ್ಟರ್ರು..
ಬಸ್ಯಾ : ಹೌದು ಮೇಡಂ. ರೊಕ್ಕಾ.. ಜಣಜಣ ರೊಕ್ಕಾ ದಿನಾಲೂ ಎಣಿಸಬೋದು. ಟಿಕೇಟ್ ಕೊಡೋದು ರೊಕ್ಕಾ ಇಸ್ಕೊಳ್ಳೋದು..
ಮೇಡಂ : ಹೋಗಲಿ ಬಿಡು. ಏ ಇವ್ನೆ.. ಸೋಮಾ.. ಸೋಮಣ್ಣಾ.. ನೀನೇನಾಗಬೇಕಂತೀ..
ಸೋಮ : ನಾನಾ ಮೇಡಂ. ನಾನು ನಾನೂ ಭಾರತರತ್ನ ಆಗಬೇಕು ಅಂತಾ ಅನ್ಕೊಂಡಿರುವೆ ಮೇಡಂ.
ಮೇಡಂ : (ಶಾಕ್ ಒಳಗಾಗಿ) ಭಾರತರತ್ನಾನಾ. ಅದು ಪ್ರಶಸ್ತಿ ಕಣಯ್ಯಾ ಕೆಲಸ ವೃತ್ತಿ ಅಲ್ಲಾ.
ಸೋಮ : ಏನಾದ್ರೂ ಇರ್ಲಿ ಮೇಡಮ್ಮು. ಭಾರತರತ್ನ ತಗೊಳ್ಳಲೇ ಬೇಕು. ದೇಶದ ಜನ ನನ್ನ ಕೊಂಡಾಡಲೇಬೇಕು.
ಮೇಡಂ : ಶಹಬ್ಬಾಸ್ ಸೋಮು. ಮಹತ್ವಾಂಕಾಕ್ಷೆ ಅಂದ್ರೆ ಹಿಂಗಿರಬೇಕು. ಭಾರತರತ್ನ ತಗೊಳ್ಳೋಕೆ ಏನು ಮಾಡಬೇಕಂತಾ ಮಾಡಿದ್ದೀ..
ಸೋಮ : ಅದು ಬಹಳಾ ಸುಲಭ ಮೇಡಮ್ಮು. ಒಂದಿಷ್ಟು ಜನಗಳನ್ನ ಸೇರಿಸಬೇಕು. ಮಸೀದಿ ಕೆಳಗೆ ದೇವಸ್ಥಾನ ಇದೆ ಅಂತಾ ತಲಿ ಕೆಡಿಸ್ಬೇಕು. ಮುಸ್ಲಿಮರ ವಿರುದ್ದ ಹಿಂದೂಗಳನ್ನ ಎತ್ತಿ ಕಟ್ಟಬೇಕು. ಮತಾಂಧತೆ ಹುಟ್ಟು ಹಾಕಬೇಕು.
ಮೇಡಂ : ಆಮೇಲೆ..
ಸೋಮ : ದೇವಜನ್ಮಭೂಮಿ ರಥ ಯಾತ್ರೆ ಮಾಡಬೇಕು. ಈ ಮೂಢ ಜನರಲ್ಲಿ ಮತಾಂಧತೆಯ ಹುಚ್ಚೆಬ್ಬಿಸಿ ಎಲ್ಲಾ ದಿಕ್ಕಿನಿಂದ ಮಸೀದಿ ಮೇಲೆ ಆಕ್ರಮಣ ಮಾಡಿಸಬೇಕು. ಕೈಗೆ ಸಿಕ್ಕ ಹಾರೆ ಗುದ್ದಲಿಗಳಿಂದ ಮಸೀದಿಯ ಗುಂಬಜಗಳನ್ನು ದ್ವಂಸ ಮಾಡಬೇಕು. ಇದು ದೇಶಾದ್ಯಂತ ಸುದ್ದಿ ಆಗಬೇಕು. ದೇಶಕ್ಕೆ ದೇಶವೇ ಹೊತ್ತಿ ಉರೀಬೇಕು. ಸಾವಿರಾರು ಜನರ ಸಾವಾಗಬೇಕು.ರಕ್ತ ಬೀದಿಬೀದಿಯಲ್ಲಿ ಹರಿಯಬೇಕು.
ಮೇಡಂ : ಅದೆಲ್ಲಾ ಹಿಂಸೆ ಅಲ್ವಾ..
ಸೋಮ : ಹಿಂಸೆ ಇಲ್ಲದೇ ಮಗು ಕೂಡಾ ಹುಟ್ಟೋದಿಲ್ಲಾ ಮೇಡಂ. ಹಿಂಸೆಯಿಂದಲೇ ಹೊಸ ಸೃಷ್ಟಿ. ಹಿಂಸೆಯೇ ಮತಾಂಧತೆಗೆ ದೃಷ್ಟಿ. ಹಿಂಸೆ ಆಗಲಿ. ನೆತ್ತರು ಹರಿಯಲಿ. ಕೋಮುದ್ವೇಷ ದಳ್ಳುರಿ ಹೆಚ್ಚಲಿ. ಶಾಂತಿ ಭಂಗ ಆಗಲಿ. ಆಗಲೇ ಹೊಸ ರಾಷ್ಟ್ರ ಕಟ್ಟಲು ಸಾಧ್ಯ. ಅಂತಹ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕುವ ಮಹತ್ಕಾರ್ಯವನ್ನು ನಾನು ಮಾಡುತ್ತೇನೆ.
ಮೇಡಂ : ತಪ್ಪು ತಪ್ಪು.
ಸೋಮ : ತಪ್ಪುಗಳನ್ನ ಮಾಡುತ್ತಲೇ ಹೋದಾಗ ಮುಂದೆ ಅದೇ ಸರಿ ಅನ್ನಿಸುತ್ತದೆ ಮೇಡಂ. ತಪ್ಪನ್ನ ಸರಿ ಎಂದು ಸಾಧಿಸಿ ನಂಬಿಸುವುದೇ ಧರ್ಮಕಾರಣ. ನೋಡ್ತಾ ಇರಿ. ನಾನು ಮಾಡುವ ಈ ಹಿಂದೂರಾಷ್ಟ್ರ ಕಟ್ಟುವ ಸಾಧನೆಗೆ ಮುಂದೆ ಎಂದಾದರೂ ಭಾರತ ರತ್ನ ಪ್ರಶಸ್ತಿ ನನಗೆ ಸಿಗಲೇಬೇಕು. ನನ್ನ ಸಿದ್ದಾಂತದ ಅನುಯಾಯಿಗಳು ಅದನ್ನು ಕೊಡಲೇಬೇಕು.
ಮೇಡಂ : ನೋ.. ಇದೆಲ್ಲಾ ಸರಿ ಅಲ್ಲಾ. ಯಾರೂ ಹಿಂಸೋತ್ಪಾದಕರಿಗೆ, ದ್ವೇಷೋತ್ಪಾದಕರಿಗೆ ಭಾರತರತ್ನ ದಂತಹ ಅತ್ಯುನ್ನತ ಪ್ರಶಸ್ತಿ ಕೊಡಲು ಸಾಧ್ಯವೇ ಇಲ್ಲ. ಅದನ್ನು ಜನರು ಒಪ್ಪುವುದೂ ಇಲ್ಲ.
ಸೋಮ : ( ಜೋರಾಗಿ ನಕ್ಕು) ಯಾಕೆ ಮೇಡಂ ಇವತ್ತು ಬೆಳಿಗ್ಗೆ ಪೇಪರ್ ಓದಿಲ್ವಾ. ಈ ಸಲ ಭಾರತರತ್ನ ಪ್ರಶಸ್ತಿ ಘೋಷಣೆ ಬಗ್ಗೆ ಗೊತ್ತಾಗಲಿಲ್ಲವಾ.
ಮೇಡಂ : ಅದು ದೇಶ ಕಟ್ಟಿದ ಲೋಹ ಪುರುಷನಿಗೆ ಕೊಟ್ಟ ಗೌರವ ಸೋಮಾ.
ಸೋಮ : ಹಾಂ. ಯಾವಾಗ ಮೇಡಂ ಈ ಲೋಹಪುರುಷರು ದೇಶ ಕಟ್ಟಿದ್ದು. ಕೆಡವಿದ್ದೇ ಹೆಚ್ಚಿದೆಯಲ್ವಾ. ಜನರಲ್ಲಿ ಮತಾಂಧತೆ ಬೀಜ ಬಿತ್ತಿ ಕೆರಳಿಸಿದ್ದು ಯಾರು? ಮುಸ್ಲಿಂ ಸಮುದಾಯದವರ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟಿದ್ದು ಯಾರು? ದೇವಜನ್ಮಭೂಮಿ ಹೆಸರಲ್ಲಿ ಆರು ಸಲ ರಥಯಾತ್ರೆ ಮಾಡಿದ್ದು ಯಾರು? ಮಸೀದಿ ಒಡೆಯುವುದಕ್ಕೆ ಪ್ರಚೋದಿಸಿ ಮುಂದಾಳತ್ವ ವಹಿಸಿದ್ದು ಯಾರು? ಈ ಜನ್ಮಭೂಮಿ ಗಲಾಟೆ ಹುಟ್ಟುಹಾಕಿ ಸಾವಿರಾರು ಜನರ ಸಾವಿಗೆ ಕಾರಣ ಆಗಿದ್ದು ಯಾರು? ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಯಾರು?
ಮೇಡಂ : ಏನು ಮಾತು ಅಂತಾ ಹೇಳ್ತೀಯಾ ಸುಮ್ಮನಿರು ಸೋಮಾ ಯಾರಾದ್ರೂ ಕೇಳಿಸಿಕೊಂಡಾರು.
ಸೋಮ : ಯಾಕೆ ಅವರ ಹೆಸರು ಹೇಳೋಕೆ ಭಯಾನಾ ಮೇಡಂ. ಅವರೇ ನಮ್ಮ ಮೆಟಲ್ ಮ್ಯಾನ್ ಅಂದರೆ ಲೋಹ ಪುರುಷರು. ಇವತ್ತು ಅಂತವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಲಾಗಿದೆ. ಅವರೇ ನನಗೆ ಮಾದರಿ, ಅವರೇ ನನಗೆ ದೇವರು. ಅವರು ಹಾಕಿಕೊಟ್ಟ ದಾರಿಯಲ್ಲೇ ನಾನು ಸಾಗಬೇಕೆಂದಿರುವೆ. ಒಂದಿಲ್ಲಾ ಒಂದು ದಿನ ನನಗೂ ಭಾರತರತ್ನ ಸಿಗೋದು ಗ್ಯಾರಂಟಿ ಮೇಡಂ. ನೀವು ಬದುಕಿದ್ದರೆ ಬಂದು ನೋಡೋರಂತೆ.
ಮೇಡಂ : ಅಯ್ಯೋ ಸೋಮು.. ಇರಲಿ ಸುಮ್ಮನಿರೋ. ಯಾರಾದ್ರೂ ಇದನ್ನೆಲ್ಲಾ ಕೇಳಿ ಊರಲ್ಲಿ ಸುದ್ದಿ ಮಾಡಿದ್ರೆ ನನ್ನ ನೌಕರಿ ಹೋಗುತ್ತೆ. ಇಂತಾದ್ದನ್ನೆಲ್ಲಾ ಕಾಲೇಜಲ್ಲಿ ಚರ್ಚೆ ಮಾಡ್ತಾರಂತಾ ಮೀಡಿಯಾದಲ್ಲಿ ಬಂದರೆ ನನ್ನ ಗತಿ ಗೋವಿಂದ.
ಎಲ್ಲಾ ವಿದ್ಯಾರ್ಥಿಗಳು : ಗೋವಿಂದ ಗೋವಿಂದ ಗೋವಿಂದಾ..
ಸೋಮ : ಏ ಸುಮ್ಕಿರ್ರೋ.. ನೀವೇ ಕೇಳಿದ್ರಲ್ಲಾ ಮೇಡಂ. ಏನಾಗ್ತೀ ಅಂತಾ. ಭಾರತರತ್ನ ನನ್ನ ಗುರಿ ಅಂತಾ ಹೇಳ್ತಾ ಇದ್ದೆ ಅಷ್ಟೇ.
ಮೇಡಂ : ನಿನ್ನ ಗುರಿಯೇನೋ ಸರಿ. ಆದರೆ ದಾರಿ.. ನೆನೆಸಿಕೊಂಡರೆ ನಿಜವಾಗಿಯೂ ಭಯವಾಗುತ್ತೆ. ಹೋಗಲಿ ಬಿಡು, ನಾನು ಕೇಳಿದ್ದೇ ತಪ್ಪಾಯ್ತು. ನೋಡ್ರಪ್ಪಾ ಇಲ್ಲಿ ಏನು ನಡೀತೋ ಯಾರೂ ಹೊರಗೆ ಹೋಗಿ ಯಾರಿಗೂ ಏನೂ ಹೇಳಬ್ಯಾಡ್ರಪ್ಪಾ.
ಎಲ್ಲರೂ : ಆಯ್ತು ಮೇಡಂ.
ಮೇಡಂ : ಏನು ಹೇಳಬಾರದು ಹೇಳಿ.
ಬಸ್ಯಾ : ಅದೇ ಮೇಡಂ. ಹಿಂಗಿಂಗೇ.. ಮೇಡಂ ಹಿಂಗೆ ಕೇಳಿದ್ರು. ಸೋಮಾ ಹಿಂಗಿಂಗೆ ಹೇಳಿದಾ ಅಂತಾ ಯಾರಿಗೂ ಹೇಳಬಾರದು ಅಂತಾ ಮೇಡಂ ಹೇಳಿದ್ರು ಅಂತಾ ಅಷ್ಟೇ ಹೇಳ್ತೀವಿ ಮೇಡಂ.
ಮೇಡಂ : ಅಯ್ಯೋ ಹಂಗೆಲ್ಲಾ ಹೇಳಬ್ಯಾಡ್ರೋ. ನಿಮಗೆ ಪರೀಕ್ಷೇಲೀ ಒಳ್ಳೆ ಮಾರ್ಕ್ಸ ಕೊಡ್ತೇನೆ..
ಎಲ್ಲರೂ : ಸರಿ ಮೇಡಂ. ಯಾರಿಗೂ ಹೇಳೋದಿಲ್ಲ.
( ಅಷ್ಟರಲ್ಲಿ ಕಾಲೇಜ್ ಬೆಲ್ ಆಗುತ್ತದೆ. ಎಲ್ಲರೂ ಎದ್ದು ಹೊರಡುತ್ತಾರೆ)
ಲಕ್ಯಾ : ಮುಂದಿನ ಭಾರತರತ್ನ ಸೋಮನಿಗೆ..
ಎಲ್ಲರೂ : ಜೈ..
ಸೋಮ: ಇರಲಿ ಇರಲಿ.. ಲೇ ಯಾರೂ ಮನೆಗೆ ಹೋಗಬ್ಯಾಡ್ರೋ. ಸಂಘದ ಬೈಟಕ್ ಇದೆ ಅಲ್ಲಿಗೆ ಹೊಗೋಣ. ನಾಳೆ ಮನೆಮನೆಗಳ ಮೇಲೆ ಕೇಸರಿ ಬಾವುಟ ಹಾರಿಸುವ ಕಾರ್ಯಕ್ರಮ ಇದೆ.
ಬಸ್ಯಾ : ನೀನೇ ಹೋಗಪ್ಪಾ. ಈ ಬಾವುಟ ಹಾರಿಸಿದ್ರೆ ನನಗೆ ಊಟ ಸಿಗುತ್ತಾ. ನಮ್ಮನೆ ಹಸುಗಳಿಗೆ ನೀರು ಮೇವು ಬರುತ್ತಾ. ನಾ ಹೋಗ್ತಿನಪ್ಪಾ ನಮ್ಮಪ್ಪಾ ಬೈತಾನೆ.
ಸೋಮ : ಲೇ ಬಸ್ಯಾ.. ನಿಮ್ಮಪ್ಪನೇ ಕಣೋ ಸಂಘದ ಸದಸ್ಯ. ಬಾ ಕೇಸರಿ ಬಾವುಟವೇ ನಮ್ಮ ದಾರಿ. ಹಿಂದೂರಾಷ್ಟ್ರವೇ ನಮ್ಮ ಗುರಿ. ಜೈ ಶ್ರೀರಾಮ್..
ಲಕ್ಯಾ : ಭಾವೀ ಭಾರತರತ್ನ ಸೋಮನಿಗೆ.
ಎಲ್ಲರೂ : ( ಸೋಮನನ್ನು ಮೇಲೆತ್ತಿ ) ಜೈ..
ಮೇಡಂ : ಮಕ್ಕಳ ಮೆದುಳಿಗೂ ಮತಬೇಧದ ಬೀಜ ಬಿತ್ತಿದ್ದಾರಲ್ಲಾ. ಈ ದೇಶದ ಸಾಮರಸ್ಯ ಸೌಹಾರ್ಧತೆಯ ಗತಿ ಗೋವಿಂದ.
ಎಲ್ಲರೂ : ಗೋವಿಂದ ಗೋವಿಂದ ಗೋವಿಂದಾ.
ಹಾಡು.
ಕೇಸರಿ ಬಾವುಟ ಗೋವಿಂದಾ
ಹಿಂದುರಾಷ್ಟ್ರ ... ಗೋವಿಂದಾ
ರಾಮರಾಜ್ಯ ಗೋವಿಂದಾ
ಓದು ಶಿಕ್ಷಣ ಗೋವಿಂದಾ ಗೋವಿಂದಾ
ಹಿಜಾಬು ಬೇಡ... ಗೋವಿಂದಾ
ಅಜಾನ್ ಕಿರಿಕಿರಿ... ಗೋವಿಂದಾ
ಹಲಾಲು ಬೇಕಿಲ್ಲ.. ಗೋವಿಂದಾ
ವಿದ್ಯೆ ಎಂಬುದು ಗೋವಿಂದಾ ಗೋವಿಂದಾ..
ಗೋವು ದೇವರು.. ಗೋವಿಂದಾ
ಹಿಂದೂ ಧರ್ಮ ಶ್ರೇಷ್ಠ.. ಗೋವಿಂದಾ
ಗುಡಿ ಗೋಪುರ ಬೇಕು ಗೋವಿಂದಾ
ಶಾಲೆ ಕಾಲೇಜು ಗೋವಿಂದಾ ಗೋವಿಂದಾ..
- ಶಶಿಕಾಂತ ಯಡಹಳ್ಳಿ
03-02-2024
Comments
Post a Comment