ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಪ್ರಹಸನ - 72

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ
( ಹೊಸದಾಗಿ ಕಟ್ಟಿದ ಭವ್ಯ ಮಂದಿರದ ಮುಖ್ಯ ಅರ್ಚಕರು ತಮ್ಮ ಮನೆಯ ವರಾಂಡದಲ್ಲಿ ಕೂತು ಸುತ್ತಲೂ ನೆರೆದ ಭಕ್ತರಿಗೆ ದೇವರ ಮಹಿಮೆ ಬಗ್ಗೆ ಪ್ರವಚನ ಕೊಡುತ್ತಿದ್ದಾರೆ)

ಅರ್ಚಕ : ನೋಡಿ ಭಕ್ತರೇ. ಇದು ತುಂಬಾ ಪವರ್ ಪುಲ್ ದೇವರು.‌ ಗರ್ಭಗುಡಿಯಲ್ಲಿರುವ ಮೂರ್ತಿ ಇದೆಯಲ್ಲಾ ಅದಕ್ಕೆ ಜೀವಂತ ಕಳೆ ಬಂದಿದೆ.

ಭಕ್ತ 1 : ಎಲ್ಲಾ ಮೂರ್ತಿಗಳನ್ನೂ ಶಿಲ್ಪಿಗಳೇ ತಾನೆ ಕೆತ್ತಿದ್ದು ಅರ್ಚಕರೇ?

ಅರ್ಚಕ : ಹೌದು. ದೇವರು ಶಿಲ್ಪಿಗಳ ಮೈಮನಸಲ್ಲಿ ಅವತರಿಸಿ ಹೀಗೀಗೆ ಮೂರ್ತಿ ಕೆತ್ತಬೇಕು ಅಂತಾ ಆದೇಶಿಸುತ್ತಾನೆ. 

ಭಕ್ತ 2 : ಆದರೆ.. ಎಷ್ಟೇ ಆದರೂ ಅದೂ ಕಲ್ಲಿನ ಮೂರ್ತಿ ಅಲ್ವಾ ಆಚಾರ್ಯರೇ.

ಆಚಾರ್ಯ : ಹೌದು. ನಿಮ್ಮ ಸಂದೇಹ ಸರಿಯಾಗಿದೆ. ಮೊದಲು ಕಲ್ಲೇ ಆಗಿತ್ತು. ಶಿಲ್ಪಿಯ ಕೈಚಳಕದಲಿ ಮೂರ್ತಿ ಆಯಿತು. ಮಂತ್ರಗಳಿಂದಾಗಿ ದೇವರಾಯಿತು. ಅದು ಹೇಗೆಂದರೆ ನಮ್ಮ ದೇವಸ್ಥಾನಕ್ಕೆ ಆ ನಿರ್ಜೀವ ಮೂರ್ತಿ ತಂದ ಮೇಲೆ ಪವಿತ್ರ ನದಿಗಳ ನೀರಿನಿಂದ ಶುದ್ಧೀಕರಿಸಿ, ಹೋಮ ಹವನ ಯಜ್ಞಾದಿಗಳನ್ನು ಮಾಡಿ, ಮಂತ್ರ ಶಕ್ತಿಯಿಂದಾ ಆ ಮೂರ್ತಿಯ ಒಳಗೆ ಪ್ರಾಣವನ್ನು ಆಹ್ವಾನಿಸಿ ಪ್ರತಿಷ್ಠಾಪನೆ ಮಾಡಿದ್ದೇನೆ. 

ಭಕ್ತ 1 : ಅದಕ್ಕೇ ನಮ್ಮ ವಿಗ್ರಹಕ್ಕೆ ಜೀವ ಕಳೆ ಬಂದಿದೆ.

ಭಕ್ತ 2 : ನೊಡೋಕೆ ಎರಡು ಕಣ್ಣೂ ಸಾಲದು.

ಅರ್ಚಕ : ಶಿಲ್ಪಿಯ ಕೈಯಲ್ಲಿ ಉಳಿ ಏಟು ತಿಂದು ನೊಂದ ಕಲ್ಲಿನ ಮೂರ್ತಿಯನ್ನು ಪವಿತ್ರ ಗೊಳಿಸಿರುವೆ. ಈಗ ಅದು ಬರೀ ಮೂರ್ತಿಯಲ್ಲಾ. ಜೀವಕಳೆ ಇರುವ ದೇವರು. 

( ಅಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಅಳುತ್ತಾ ಅರ್ಚಕನ ಹೆಂಡತಿ ಮನೆಯೊಳಗಿಂದ ಬಾಯಿ ಬಡಿದುಕೊಳ್ಳುತ್ತಾ ಓಡಿ ಹೊರಗೆ ಓಡಿ ಬರುತ್ತಾಳೆ)

ಹೆಂಡತಿ : ಏನೂ ಅಂದ್ರೆ. ಇಲ್ಲಿ ನೋಡಿ ಅಂದ್ರೆ. ನಮ್ಮ ಮಗು ಅಲ್ಲಾಡುತ್ತಿಲ್ಲ. ಉಸಿರಾಡುತ್ತಿಲ್ಲಾ. ಇಲ್ಲಿ ನೋಡ್ರಿ, ಅಯ್ಯೋ..

ಅರ್ಚಕ : (ಆತಂಕದಿಂದ ಎದ್ದು ಮಗುವಿನ ನಾಡಿ ಪರಿಶೀಲಿಸಿ ಕಣ್ಣಲ್ಲಿ ನೀರು ತುಂಬಿಕೊಂಡು) ಮಗು ರಾಮನ ಪಾದ ಸೇರಿಕೊಂಡಿದೆ ಕಣೆ.

ಹೆಂಡತಿ : ಅಯ್ಯೋ ಹಂಗೆಲ್ಲಾ ಅನ್ನಬ್ಯಾಡ್ರಿ. ಮೂರು ದಿನದಿಂದ ಜ್ವರ ಇತ್ತಷ್ಟೇ. ನೀವು ಮಂತ್ರಿಸಿ ಕೊಟ್ಟ ತಾಯಿತ ಕಟ್ಟಿದ್ದೀನಿ ನೋಡ್ರಿ. ಹುಷಾರಾಗ್ತಾನೆ ಅಂತಾ ನೀವೇ ಹೇಳಿದ್ರಲ್ಲಾ.. ಈಗೇನಾಯ್ತುರೀ.

ಅರ್ಚಕ : ದೇವರ ಇಚ್ಚೆ ಮುಂದೆ ನಾವೇನು ಮಾಡೋಕಾಗುತ್ತೆ. ಮಗುಗೆ ಜಗತ್ತಿನ ಋಣ ಇಷ್ಟೇ ಇತ್ತು.  ಪ್ರಾಣ ಹೋಗಿ ಬಿಡ್ತು. ಅಯ್ಯೋ ರಾಮಾ.. 

ಭಕ್ತ 1 : ವೈದ್ಯರ ಹತ್ತಿರ ತೋರಿಸಿದ್ರೆ ಮಗು ಉಳೀತಿತ್ತೇನೋ?

ಅರ್ಚಕ : ಎಲ್ಲಿ ತೋರಿಸಿದ್ರೂ ಅಷ್ಟೇ. ಆ ಭಗವಂತ ಬಾ ಅಂದ್ರೆ ಹೋಗಬೇಕಷ್ಟೇ. 

ಹೆಂಡತಿ : ರೀ ಹಂಗಂದ್ರೆ ಹೆಂಗೇರಿ. ಹತ್ತು ವರ್ಷ ದೇವರಿಗೆ ಹರಿಕೆ ಕಟ್ಟಿ ಹೆತ್ತ ಮಗುರೀ ಇದು. ಅದೇನೋ ಕಲ್ಲಿನ ಮೂರ್ತಿಗೆ ಮಂತ್ರ ಹೇಳಿ ಪ್ರಾಣ ತುಂಬಿ ಜೀವ ಕೊಟ್ಟೋರು ನೀವು. ಇದು ನಿಮ್ಮ ಮಗೂರಿ. ಸತ್ತೋಗಿದೆ. ಬೇಗ ಬೇಗ ಮಂತ್ರ ಹೇಳ್ರಿ, ಅವನ ಪ್ರಾಣ ಇಲ್ಲೆ ಎಲ್ಲೋ ಇರುತ್ತೆ. ಮತ್ತೆ ಇವನೊಳಗೆ ತುಂಬಿ ಜೀವ ಕೊಡ್ರಿ.. ನಿಮ್ಮ ಕಾಲಿಗೆ ಬೀಳ್ತೀನಿ.

ಭಕ್ತ 2 :  ಹೌದು ಅರ್ಚಕರೆ. ಕಲ್ಲಿಗೆ ಜೀವ ಕೊಡುವ ಪವಾಡ ಪುರುಷರು ನೀವು. ಮಂತ್ರ ಹೇಳಿ ನಿಮ್ಮ ಮಗನಿಗೂ ಪ್ರಾಣದಾನ ಮಾಡಿ ಸ್ವಾಮಿಗಳೇ..

ಹೆಂಡತಿ : ತಗೊಳ್ರಿ ಅರಿಸಿನ ಕುಂಕುಮ. ಅಲ್ಲಿವೆ ನೋಡಿ ಪೂಜಾ ಸಾಮಗ್ರಿ. ಹೋಮ ಮಾಡಿ, ಹವನ ಮಾಡಿ. ಯಜ್ಞ ಬೇಕಾದ್ರೂ ಮಾಡಿ. ನನ್ನ ಮಗನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡ್ರೀ. ಒಬ್ಬನೇ ಮಗಾರೀ..

ಪೂಜಾರಿ : ಪೂಜೆಗೆ ಸಿದ್ದತೆ ಮಾಡಲಾ ಅರ್ಚಕರೇ.

ಅರ್ಚಕ : ( ಆಕಾಶ ನೋಡುತ್ತಾ) ಅದೆಲ್ಲಾ ಆಗದ ಕೆಲಸಾ ಗೋವಿಂದಾ. ದೇವರ ಇಚ್ಚೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ. 

ಹೆಂಡತಿ : ಮತ್ತೆ ಮಂತ್ರದಿಂದ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೆಲ್ಲಾ ಬರೀ ನಾಟಕಾನಾ?

ಭಕ್ತ 1 : ನಿರ್ಜೀವ ಕಲ್ಲಿಗೆ ಜೀವ ತುಂಬಿದ್ದೀರಿ ಅಂತಾ ನೀವು ಹೇಳಿದ್ದೆಲ್ಲಾ ಸುಳ್ಳಾ ಅರ್ಚಕರೇ..

ಭಕ್ತ 2 : ಮಾತಾಡಿ ಅಯ್ಯನೋರೆ.. 

ಅರ್ಚಕ : ಏನಂತಾ ಮಾತಾಡ್ಲೋ. ಎಲ್ಲಿಯ ಮೂರ್ತಿ, ಎಲ್ಲಿಯ ಪ್ರಾಣ, ಎಲ್ಲಿಯ ಪ್ರತಿಷ್ಠಾಪನೆ.. ಎಲ್ಲಾ ಶಾಸ್ತ್ರದಲ್ಲಿ ಬರೆದಿದೆ ಕಣ್ರೋ. ಅದರಲ್ಲಿರೋದನ್ನ ಮಾಡೋದಷ್ಟೆ ಪುರೋಹಿತರಾದ ನಮ್ಮ ಕೆಲಸ.

ಹೆಂಡತಿ : ಈಗಲೂ ಶಾಸ್ರ್ತ ಹೇಳಿದಂಗೆ ಮಾಡ್ರೀ. ಅದೇ ಮಂತ್ರ ಹೇಳ್ರೀ. ನಮ್ಮ ಮಗನ ಪ್ರಾಣ ಉಳಿಸ್ರೀ.

ಅರ್ಚಕ : ಇನ್ನೆಲ್ಲಿಯ ಮಗ, ಇನ್ನೆಲ್ಲಿಯ ಪ್ರಾಣ. ಹೋಯ್ತು.. ಎಲ್ಲಾ ಮುಗಿದೇ ಹೋಯ್ತು. ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲಾ.. ಹೋದ ಪ್ರಾಣ ವಾಪಸ್ ಬರೋದಿಲ್ಲಾ. ಹೋಗ್ರೋ ಎಲ್ಲಾ ದೂರ ಹೋಗ್ರೋ. ನಿಮ್ಮ ಪ್ರಾಣ ಉಳಿಸ್ಕೊಳ್ಳಿ. ಅಗೋ ಕಾಲಯಮ ಬರ್ತಿದ್ದಾನೆ..ಓಡ್ರೋ ಓಡ್ರಿ.

ಭಕ್ತ 1 : ಏ ಅರ್ಚಕರಿಗೆ ಏನಾಯ್ತೋ.. ಹುಚ್ಚೇನಾದ್ರೂ ಹಿಡೀತಾ?

ಹೆಂಡತಿ : ರ್ರೀ ಏನಾಯ್ತರೀ.. ಬೇಗ ಮಂತ್ರ ಹೇಳ್ರಿ. ಅದೇನೋ ಚಿರಂಜೀವಿ ಮಂತ್ರ ಹೇಳ್ರಿ, ಸಂಜೀವಿನಿ ಮಂತ್ರ ಹೇಳ್ರಿ. ಇಲ್ಲಾಂದ್ರೆ ಪ್ರಾಣ ಪ್ರತಿಷ್ಠಾನ ಮಂತ್ರಾನಾದ್ರೂ ಹೇಳ್ರಿ. ಹೋಗಿರೋ ಪ್ರಾಣ ವಾಪಸ್ ಬರೋಹಾಗೆ ಮಾಡ್ರಿ..

ಅರ್ಚಕ : (ಪೂಜಾ ಸಾಮಗ್ರಿಗಳನ್ನು ಎತ್ತಿ ಬಿಸಾಕುತ್ತಾ) ಇಲ್ಲಾ.. ಅದು ಸಾಧ್ಯವಿಲ್ಲಾ. ಪ್ರಾಣಾನೂ ಇಲ್ಲಾ ಪ್ರತಿಷ್ಠಾಪನೆಯೂ ಇಲ್ಲಾ. ಎಲ್ಲಾ ಸುಳ್ಳು.. ಎಲ್ಲಾ ಕಣ್ಕಟ್ಟು. ಅಯ್ಯೋ ಮಗನೇ.. ( ಎನ್ನುತ್ತಾ ಕುಸಿದು ಬೀಳುವನು)

ಹೆಂಡತಿ : ಅಯ್ಯೋ.. ಏನಾಯ್ತುರೀ.. ರ್ರೀ ಏಳ್ರೀ. ನೀವೇ ಹಿಂಗೆ ಬಿದ್ರೆ ಮಂತ್ರಾ ಹೇಳೋರು ಯಾರ್ರೀ.

ಭಕ್ತ 1: (  ಅರ್ಚಕನ ನಾಡಿ ಪರಿಶೀಲಿಸಿ ಊಹೂಂ ಎಂದು ಅಡ್ಡಡ್ಡ ತಲೆ ಅಲ್ಲಾಡಿಸುತ್ತಾನೆ)

ಪೂಜಾರಿ : ( ಆತಂಕದಿಂದ ಮೂಗಿಗೆ ಬೆರಳಿಟ್ಟು ಉಸಿರಾಟ ಪರಿಶೀಲಿಸಿ) ಅರ್ಚಕರೂ ದೇವರ ಪಾದ ಸೇರಿಕೊಂಡ್ರು..

ಹೆಂಡತಿ : ಅಯ್ಯೋ.. ನೀವೂ ಹೋಗೇ ಬಿಟ್ರಾ. ಅಯ್ಯಯ್ಯೋ ( ಎಂದು ಕುಸಿದು ಗಂಡನ ಎದೆ ಮೇಲೆ ಬೀಳುವಳು) 

ಪೂಜಾರಿ : ಮುಗೀತು, ಎಲ್ಲಾ ಮುಗೀತು. ಅರ್ಚಕರ ಕುಟುಂಬ ದೇವರ ಪಾದಕ್ಕೆ ಅರ್ಪಿತವಾಯ್ತು. ಮುಂದಿನ ಸಂಸ್ಕಾರ ಕಾರ್ಯ ಶುರು ಮಾಡೋಣ.

ಭಕ್ತ 1 : ನೀವಾದ್ರೂ ಮಂತ್ರ ಹೇಳಿ ಅರ್ಚಕರ ಪ್ರಾಣವನ್ನ ಮರಳಿ ಪ್ರತಿಷ್ಠಾಪನೆ ಮಾಡಿ ಪೂಜಾರರೇ.

ಪೂಜಾರಿ : ಅಯ್ಯೋ ನಾನು ಅಷ್ಟು ದೊಡ್ಡ ಸಾಧಕ ಅಲ್ಲಾ.‌ ದೊಡ್ಡವರೇ ಹೀಗೆ ಹೋದಮೇಲೆ ನಾನೆಷ್ಟರವನು.  ಶಂಖಾ ಊದಿ, ಮನೆ ಮುಂದೆ ಹೊಗೆ ಹಾಕಿ. ಶಾಸ್ತ್ರೋಕ್ತವಾಗಿ ಶವ ಸಂಸ್ಕಾರ ಮಾಡಿ ಸತ್ತವರನ್ನು ಸ್ವರ್ಗಕ್ಕೆ ಕಳಿಸಿ ಕೊಡೋಣ.

ಭಕ್ತ 2 : ಚೇ.. ನಿಮ್ಮ ಮಂತ್ರ ಶಾಸ್ತ್ರದ ಕಥೆ ನೋಡಿದ್ದಾಯ್ತಲ್ಲಾ ಸುಮ್ಕಿರ್ರೀ.. ಸಂಸ್ಕಾರ ಅಂತೆ, ಸ್ವರ್ಗ ಅಂತೆ.. 

ಭಕ್ತ 3 : ಅಲ್ಲಾ ಪೂಜಾರ್ರೇ ತಮ್ಮ ಮಗನ ಪ್ರಾಣ ಉಳಿಸೋಕಾಗದೇ ಇರುವ ಅರ್ಚಕರು ಇನ್ನು ಮೂರ್ತಿಗೆ ಅದೆಂಗ್ರಿ ಪ್ರಾಣ ಕೊಡ್ತಾರೆ.

ಭಕ್ತ 1 : ಅದೆಲ್ಲಾ ಬೋಗಸ್ ಕಣ್ರೋ, ಮಂತ್ರ ಹೋಮ ಹವನ ಪೂಜೆ ಹೆಸರಲ್ಲಿ ನಮ್ಮಂತಾ ಮೂಢ ಭಕ್ತರನ್ನ ನಂಬಿಸೋಕೆ ಈ ಶಾಸ್ತ್ರ ಸಂಪ್ರದಾಯ ಮಾಡಿರೋದು.. 

ಭಕ್ತ 2 : ನಂಬೋರು ಇರೋವರೆಗೂ ನಂಬಿಸೋರು ಇದ್ದೇ ಇರ್ತಾರೆ. ತಪ್ಪು ಅವರದ್ದಲ್ಲಪಾ ನಮ್ದು.. ಹಿಂದೆ ಮುಂದೆ ಯೋಚನೆ ಮಾಡ್ದೇ ಶಾಸ್ತ್ರ ಸಂಪ್ರದಾಯ ನಂಬ್ತೀವಲ್ಲಾ ಅದೂ ನಮ್ಮ ಮೌಢ್ಯ ಅಲ್ವೇನೋ. ನಡಿ ನಡೀ ಶವಕ್ಕೊಂದು ಗತಿ ಕಾಣಿಸೋಣ.
 
( ನಾಲ್ಕು ಜನ ಬಂದು ಶವಗಳನ್ನು ಹೊತ್ತುಕೊಂಡು ಒಂದು ಸುತ್ತು ಸುತ್ತುತ್ತಾರೆ. ಹಿನ್ನೆಲೆಯಲ್ಲಿ  ಭಜನೆ ಹಾಡು)

ಎನ್ನ ತನುವಿನೊಳಗನುದಿನ ಇದ್ದು ಒಂದು ಮಾತು ಹೇಳದೇ ಹೋದೆಯಾ ಹಂಸಾ.. ಹಂಸಾ

- ಶಶಿಕಾಂತ ಯಡಹಳ್ಳಿ

22-01-2024

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಭಾರತರತ್ನ