ಪ್ಯಾಸಿಸಂ ಕಾಲ ಗುಪ್ತ ಮತದಾನ (ಪ್ರಹಸನ-1)

ಪ್ರಹಸನ - 1

ಪ್ಯಾಸಿಸಂ ಕಾಲದಲಿ ಗುಪ್ತ ಮತದಾನ 


(
ಅದು 2029 ಇಸವಿ. ಭಾರತದ ಸಾರ್ವತ್ರಿಕ ಚುನಾವಣೆ. ಮತದಾನ ಕೇಂದ್ರದ ಮುಂದಿರುವ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತ ವ್ಯಕ್ತಿ ಕೂತಿದ್ದಾನೆ. ಇನ್ನೊಬ್ಬ ವ್ಯಕ್ತಿ ಜೋತುಮುಖ ಹಾಕಿಕೊಂಡು ಮತಕೇಂದ್ರದಿಂದ ಹೊರಗೆ ಬಂದು )

ವ್ಯಕ್ತಿ 2: ಏನಣ್ಣಾ ಮತ ಹಾಕಿದ್ಯಾ..

ವ್ಯಕ್ತಿ 1 : ಅದನ್ಯಾಕೆ ಕೇಳ್ತಿ ತಮ್ಮಾ.. ಬಾ ಕೂತ್ಕೊ. ಒಳಗಡೆ ಹೋದ್ನಾ.. ಓಟರ್ ಐಡಿ ತೋರಿಸಿದ್ನಾ. ಓಟ್ ಹಾಕೋಕೆ ಎರಡನೇ ಸಲ ಬಂದಿದ್ದೀಯಾ ಅಂತಾ ಬೈದು ಪೋಲೀಸರನ್ನ ಕರೆಸಿ ಹೊರಗೆ ಎಳದಾಕಿದ್ರೂ ತಮ್ಮಾ. ನಾನು ಬರೋಕ್ಮುಂಚೆನೆ ಯಾರೋ ನನ್ನ ಓಟ್ ಹಾಕಿದ್ರು. ನೀನಾದ್ರೂ ಓಟ್ ಹಾಕಿದ್ಯಾ..?

ವ್ಯಕ್ತಿ 2 : ನನ್ನ ಕಥೆ ಏನಂತಾ ಹೇಳ್ಲಿ ಕಣಣ್ಣಾ. ನಾನೂ ಹೋದ್ನಾ. ಐಡಿ ಕಾರ್ಡ್ ತೋರಿದ್ನಾ. ನನಗಿಂತ ಮುಂದೆ ಜುಬ್ಬಾ ಹಾಕಿದೋರೊಬ್ಬರಿದ್ರು. ಓಟು ನನ್ನ ಹಕ್ಕು.. ಅಂತಾ ಕಿರುಚಾಡಿದ್ರು. ಅಷ್ಟರಲ್ಲೇ ಮಾರ್ಶಲ್ ಗಳು ಬಂದು ಜುಬ್ಬಾ ಕಿತ್ತೋಗುವಂತೆ ಹೊಡೆದು ದೇಶದ್ರೋಹಿ ಅಂತಾ ಅದೇನೋ ಬೈದು ಆರೆಸ್ಟ್ ಮಾಡಿಕೊಂಡು ಹೋದ್ರಣ್ಣಾ. ನನಗಂತೂ ಎಷ್ಟು ಭಯವಾಯ್ತು ಗೊತ್ತಾ.

ವ್ಯಕ್ತಿ 1: ಆಮೇಲೆ ಏನಾಯ್ತು. ಹೆದರಿಕೊಂಡು ಓಡಿ ಬಂದ್ಯಾ. 

ವ್ಯಕ್ತಿ 2 : ಹೆಂಗೋ ದೈರ್ಯ ಮಾಡಿ ಬೆರಳಿಗೆ ಮಸಿ ಹಚ್ಚಿಸ್ಕೊಂಡು ಓಟ್ ಮಶಿನ್ ಮುಂದೆ ನಿಂತೆ. ನಾಮ ಹಾಕ್ಕೊಂಡಿರೋ ದಡಿಯಾ ವ್ಯಕ್ತಿ ಪಕ್ಕದಲ್ಲೇ ನಿಂತಿದ್ದ. ಹಿಂದಕ್ಕೆ ತಿರುಗು ಅಂದಾ ತಿರುಗಿದೆ. ಟಿಂವ್ ಅಂತಾ ಸೌಂಡ್ ಬಂತು. ಇನ್ನು ಹೊರಡು ಅಂದಾ, ಓಟ್ ಹಾಕಿ ಹೋಗುವೆ ಅಂದೆ. ಓಟ್ ಹಾಕಿ ಆಯ್ತು ಹೊರಡು ಅಂತಾ ಕಣ್ಣಲ್ಲೆ ಕೆಂಡ ಕಾರಿದ. ನಾನಿನ್ನೂ ಒತ್ತೇಯಿಲ್ಲ ಅಂದೆ. ಇದು ಗುಪ್ತ ಮತದಾನ. ಯಾರೂ ನೋಡೋ ಹಾಗಿಲ್ಲ. ನೀನೂ ಕೂಡಾ. ಹೊರಡ್ತೀಯೊ ಇಲ್ಲಾ ಜುಬ್ಬಾದವನಿಗಾದ ಗತಿ ನಿನಗೂ ಆಗಬೇಕಾ ಎಂದು ಬೆದರಿಸಿದ. ಹೆದರಿ ಹೊರಗೆ ಓಡಿ ಬಂದೆ ಅಷ್ಟೆ (ಎಂದು ಬೆರಳಿನ ಇಂಕ್ ನೋಡತೊಡಗಿದ, ಅಷ್ಟರಲ್ಲಿ ತಲೆಗೆ ಮುಸ್ಲಿಂ ಟೋಪಿ ಹಾಕಿದ ಮೂರನೇ ವ್ಯಕ್ತಿ ಬಂದ)

ವ್ಯಕ್ತಿ 3 : ಥೂ ಇವರ್ದು ಮನೆ ಮಸಾನಾ ಆಗಾ. ಎಲ್ಲರೂ ಓಟಾಕಿ ಅದು ನಿಮ್ದುಕಿ ಹಕ್ಕು ಅಂತಾ ಬಾಯಿ ಬಡ್ಕೋತಾರೆ. ಓಟ್ ಡಾಲನೆಕೆ ಪುಲ್ ಪ್ಯಾಮಲಿಕಾ ಸಾತ್ ಬಹುತ್ ದೂರಸೆ ಬಂದರೆ ಓಟರ್ ಲಿಸ್ಟಲ್ಲಿ ಹೆಸರೆ ಲಾಪತ ಮಾಡಿದ್ದಾರೆ. ಯಾ ಅಲ್ಲಾ.. ( ಕಟ್ಟೆ ಮೇಲೆ ಕೂತ್ಕೋತಾನೆ)

( ಹಿಂದೆ ಕುಳಿತು ಸಿಗರೇಟು ಹೊಗೆ ಬಿಡುತ್ತಿದ್ದ ಗಡ್ಡದಾರಿ ವ್ಯಕ್ತಿ ಎದ್ದು ಬಂದು) 

ಗಡ್ಡದಾರಿ : ಅಣ್ಣಂದಿರಾ ನಿಮ್ಮ ಮಾತುಗಳನ್ನೆಲ್ಲಾ ಕೇಳಿದೆ. ಇದು ನಿಮ್ಮೊಬ್ಬರ ಕಥೆಯಲ್ಲಾ. ಈಗಿರೋದು ಪ್ಯಾಸಿಸ್ಟ್ ಸರಕಾರ. ಸುಳ್ಳುಗಳನ್ನೇ ಸತ್ಯ ಅಂತಾ ನಂಬಿ ಪ್ರತಿ ಸಲ ಆಯ್ಕೆ ಮಾಡಿ ಕಳಿದ್ರಲ್ಲಾ ಅದರ ಪರಿಣಾಮ ಇದು. ಈಗ ಅನುಭವಿಸಿ

ವ್ಯಕ್ತಿ 1 : ( ಆತಂಕದಿಂದ) ಪ್ಯಾಸಿಸ್ಟ್ ಅಂದರೆ ಏನಣ್ಣಾ..

ಗಡ್ಡದಾರಿ : ಅಂದ್ರೆ ಸರ್ವಾಧಿಕಾರ ಅಂತಾ.

ವ್ಯಕ್ತಿ 2 : ಮತ್ತೆ ಪ್ರಜಾಪ್ರಭುತ್ವ ಅಂತಾ ಹೇಳ್ತಾರೆ?

ಗಡ್ಡದಾರಿ : ಹೌದು. ಇದು ಡೆಮಾಕ್ರಸಿ ಮುಖವಾಡದ ಡಿಕ್ಟೇಟರ್ ಸರಕಾರ. ಬಲವಂತದಿಂದ ಹೀಗೇನೇ ಮತ ಹಾಕಿಸಿಕೊಂಡು ಅವರೇ ಬಹುಮತ ಪಡೆದು ದೇಶ ಆಳ್ತಿದ್ದಾರೆ. ನಮ್ಮ ಸಂವಿಧಾನವನ್ನೇ ಬದಲಾಯಿಸಿ ಸನಾತನ ಸಂವಿಧಾನ ಜಾರಿಗೆ ಮಾಡ್ತಿದ್ದಾರೆ. ಇರೋ ಬರೋ ಸ್ವಾತಂತ್ರ್ಯ ಎಲ್ಲಾ ಹೊರಟೋಯ್ತು.

ವ್ಯಕ್ತಿ 1 : ಅದೆಂಗಾಗುತ್ತೆ.. ಜನ ಸುಮ್ಕಿರ್ತಾರಾ.. ದಂಗೆ ಏಳ್ತಾರೆ ಅಷ್ಟೇಯಾ?

ಗಡ್ಡದಾರಿ : ಪ್ರಶ್ನೆ ಮಾಡಿದವರಿಗೆ ಜುಬ್ಬಾದಾರಿಗೆ ಆಯ್ತಲ್ಲಾ ಹಂಗೆ ಆಗುತ್ತೆ. ದೇಶದ್ರೋಹಿ ಎಂದು ಆರೋಪಿಸಿ ಜೈಲಿಗಟ್ಟಲಾಗುತ್ತೆ. ಹಿಂಸಿಸಿ ಹತ್ಯೆ ಮಾಡಲಾಗುತ್ತೆ.

ವ್ಯಕ್ತಿ 3 : ಅರೆ ಇಸ್ಕಿ.. ನಮ್ದುಕೆ ಜನ ಹರತಾಳ್ ಮಾಡ್ತಾರೆ, ಸುಮ್ಕೆ ಇರಾಕಿಲ್ಲ.

ಗಡ್ಡದಾರಿ : ಆತಂಕವಾದಿ ಭಯೋತ್ಪಾದಕರು ಅಂತಾ ಹೇಳಿ ನಿಮ್ಮನ್ನ ಮೊದಲು ಎನ್ಕೌಂಟರ್ ಮಾಡಿ ಕೊಲ್ತಾರೆ ಅಷ್ಟೇ.

ವ್ಯಕ್ತಿ 3 : ಐಸಾ ಹೈ ಕ್ಯಾ. ಈಗ ಕ್ಯಾ ಕರನಾ ಸಾಬ್.

ಗಡ್ಡದಾರಿ : ಏನು ಮಾಡೋದು ಅಂದ್ರೆ.. ಹದಿನೈದಿಪ್ಪತ್ತು ವರ್ಷದ ಹಿಂದೆ ಯೋಚಿಸಬೇಕಿತ್ತು. ಅವರು ಧರ್ಮಗಳ ಮಧ್ಯೆ ದ್ವೇಷದ ಬೆಂಕಿ ಹಚ್ಚಿ ಬೇಳೆಬೇಯ್ಸಿಕೊಳ್ಳೋವಾಗ ನೀವು ಪರಸ್ಪರ ಕಾದಾಟ ಮಾಡಿದ್ರಿ. ಜಾತಿಗಳನ್ನ ಎತ್ತಿ ಕಟ್ಟಿದಾಗ ಜಾತಿ ಜಗಳ ಶುರುಮಾಡ್ಕೊಂಡ್ರಿ. ಅವರು ನೂರಾರು ಸಲ ಹೇಳಿದ ಸುಳ್ಳನ್ನೇ ಹೇಳ್ತಿದ್ದಾಗ ಅದನ್ನೇ ಸತ್ಯ ಅಂತಾ ನಂಬಿ ಸುಳ್ಳರನ್ನೇ ಬೆಂಬಲಿಸಿದ್ರಿ. ಹಿಜಾಬ್ ಹಲಾಲ್ ಆಜಾನ್ ಜಿಹಾದ್ ಅಂತಾ ಕಿಚ್ಚು ಹಚ್ಚಿದಾಗ ಸಾಬರ ಸಂಹಾರಕ್ಕೆ ಕತ್ತಿ ಮಸಿದ್ರಿ.

ವ್ಯಕ್ತಿ 2 : ತಪ್ಪಾಯ್ತು ಸರ್. ನಮಗೆ ಗೊತ್ತಾಗಲಿಲ್ಲ. ಈಗೇನು ಮಾಡೋದು ಸರ್.

ಗಡ್ಡದಾರಿ : ಏನು ಮಾಡ್ತೀರಾ? ಮೊದಲು ಹಿಂದೂ ಮುಸ್ಲಿ ಕ್ರಿಶ್ಚಿಯನ್ ಸಹಿತ ಎಲ್ಲಾ ಧರ್ಮದವರು ಒಂದಾಗಿ. ಎಲ್ಲಾ ಶೂದ್ರರು ಮತ್ತು ದಲಿತರು ಒಂದಾಗಿ. ಹೋರಾಟಕ್ಕೆ ರೆಡಿಯಾಗಿ. ಅಂಬೇಡ್ಕರ್ ರವರ ಸಮಾನತೆ ಸಾರುವ ಸಂವಿಧಾನದ ಪುನರ್ ಸ್ಥಾಪನೆಗೆ ಜನಾಂದೋಲನ ಮಾಡಲು ರಾಜಿರಹಿತವಾಗಿ ಮುಂದಾಗಿ. ಆಗ ಮಾತ್ರ ಪ್ಯಾಸಿಸ್ಟ್ ಆಡಳಿತದಿಂದ ಬಿಡುಗಡೆ ಸಿಗಬಹುದು. ಸಂವಿಧಾನ ಉಳಿಸಬಹುದು.

ವ್ಯಕ್ತಿ 1 : ನೀವು ಹೇಳಿದ್ದು ಸರಿಯಾಗಿದೆ ಸರ್. ಸಂವಿಧಾನ ಚಿರಾಯುವಾಗಲಿ.

ವ್ಯಕ್ತಿ 2 : ನಿಜವಾದ ಪ್ರಜಾಪ್ರಭುತ್ವ ಜಾರಿಯಾಗಲಿ.

ವ್ಯಕ್ತಿ 3 : ನಮ್ದು ಎಲ್ಲಾ ಭಾಯಿ ಭಾಯಿ. ಸಂವಿಧಾನವೇ ನಮ್ಮದು ಎಲ್ಲರ ತಾಯಿ.

ಗಡ್ಡದಾರಿ : ಸಂವಿಧಾನ ಉಳಿಸಲು ಎಲ್ಲರೂ ಒಂದಾಗಿ. ಜನಾಲೋಂದನಕ್ಕೆ ಮುಂದಾಗಿ.

( ಎಂದು ಬಲಗೈ ಮುಂದೆ ಚಾಚುತ್ತಾನೆ. ಮೂರೂ ಜನ ಆತನ ಕೈಮೇಲೆ ತಮ್ಮ ಕೈ ಇಟ್ಟು)

ಎಲ್ಲರೂ : ಪ್ಯಾಸಿಸಂ ಅಳಿಯಲಿ. ಸಂವಿಧಾನ ಉಳಿಯಲಿ. ( ಎಂದು ಪ್ರತಿಜ್ಞೆ ಮಾಡುತ್ತಾರೆ)

 

(ಹಿನ್ನೆಲೆಯಲ್ಲಿ ಹಾಡು..)

ದೇಶದ ಜನರು ನಾವೆಲ್ಲ ಹಿಂದುಗಳು

ಜಾತಿ ಮತ ಏನೇ ಇರಲಿ ನಾವೆಲ್ಲ ಬಂಧುಗಳು.

ಸಂವಿಧಾನ ಉಳಿದರೆ ನಾವು ಉಳಿಯುವೆವು

ಪ್ರಜಾಪ್ರಭುತ್ವ ಉಳಿದರೆ

ಪ್ಯಾಸಿಸಂನ ಸಾವು.. ಆಹಾ ನಾಸೀಜಂ ಸಾವು..

( ಪ್ರಹಸನ ಕೊನೆಯಾಗುವುದು)

- ಶಶಿಕಾಂತ ಯಡಹಳ್ಳಿ

(ಇದೊಂದು ಊಹಾತ್ಮಕ ಪ್ರಸಂಗ. 2029 ರಲ್ಲಿ ಲೋಕಸಭಾ ಚುನಾವಣೆ ಸರ್ವಾಧಿಕಾರಿ ಆಡಳಿತದಲ್ಲಿ ನಡೆದರೆ ಹೇಗಿರುತ್ತದೆ ಎನ್ನುವ ಕುರಿತ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ