ಗೋಮೂತ್ರ ವ್ಯಾಧಿಗಳ (ಪ್ರಹಸನ-12)

 

ಪ್ರಹಸನ-12

ಗೋಮೂತ್ರ ವ್ಯಾಧಿಗಳ  

 

ಪರಮ : ಮುಗೀತು, ಎಲ್ಲಾ ಹೊರಟೋಯ್ತು.. ನಂದೊಂದು ಓಟು ವೇಸ್ಟಾಯ್ತು ( ಎಂದು ಪರಮ ಕಟ್ಟೆ ಮೇಲೆ ಕೂತು ಬಾಯಿ ಬುಡ ಬಡಿದುಕೊಳ್ಳ ತೊಡಗಿದ

 

ಸಣ್ಣೀರ : ಏನಾಯ್ತಲಾ ಪರ್ಮಾ ಇಂಗಾಡ್ತಿದ್ದೀ. ವಾರದಿಂದ ಕೈಪಕ್ಷ ಪಟ್ಟಕ್ಕ ಬಂತೂಂತ ರೆಕ್ಕೆಪುಕ್ಕ ಕಟ್ಕೊಂಡು ತಕಾತಕಾ ಕುಣಿತಿದ್ದೆ..

 

ಪರಮ : ಅಷ್ಟೇ ಕಣ್ಲಾ, ವಾರದೊಳಗೆ ಇವರೂ ಅವರೇ ಅಂತಾ ಗೊತ್ತಾತು

 

ಸಣ್ಣೀರ : ಅದೇನು ವಸಿ ಬಿಡಿಸಿ ಬೊಗಳ್ಲಾ.

 

ಪರಮ : ಏನೂಂತಾ ಹೇಳ್ಲೋ ಸಣ್ಣೀರಾ? ಮತ್ತದss ದನದ ಗಂಜಲದ ಸುದ್ದಿ..  ಶಿವ ಶಿವಾ.. 

 

ಸಣ್ಣೀರ : ಲೇ ಯಪ್ಪಾ ಪರಮಾತ್ಮಾ.. ಏನ್ಲಾ ನಿನ್ನ ಗೋಳು.

 

ಪರಮ : ಏನಂತಾ ಹೇಳ್ಲಿ ಹೇಳ್ಲಾ. ಸಂಘಿಗಳು ಮಾತೆತ್ತಿದ್ರೆ ಗೋಮಾತೆ ಪವಿತ್ರ, ಸರ್ವರೋಗ ನಿವಾರಕ ಗೋಮೂತ್ರ ಅಂತಿದ್ರು. ಈಗ ಇವರೂ ಹಂಗೇಯಾ? ಮೊನ್ನೆ ಕಾಂಗಿಗಳು ಮೈಸೂರಲ್ಲಿ ಮೋದಿ ರ್ಯಾಲಿ ಮಾಡಿದ ದಾರಿಗೆ ಗೋಮೂತ್ರ ಹಾಕಿ ಶುದ್ದ ಮಾಡಿದ್ರಂತೆ, ಇವತ್ತು ವಿಧಾನಸೌಧಕ್ಕೆ ಗಂಜಲ ಸಿಂಪಡಿಸಿ ಅಪವಿತ್ರೋ ಪವಿತ್ರಃ ಅಂದರಂತೆ. ಹಿಂಗಾದ್ರೆ ಹೆಂಗೆ.. ಅವರ್ಗೂ ಇವರ್ಗೂ ಏನ್ಲಾ ವ್ಯತ್ಯಾಸಾ..

 

ಸಣ್ಣೀರ : ಹಂಗೂ ಇಲ್ಲಾ, ಹಿಂಗೂ ಇಲ್ಲಾ. ಇಲ್ಲಿ ಕೇಳ್ಲಾ. ಭಕ್ತಾಸುರರು ಎಲ್ಲಾ ಕಡೆ ಇದ್ದ ಇರ್ತಾರಾ. ಮೌಢ್ಯಾಚರಣೆಗೆ ಜಾತಿ ಮತ ಧರ್ಮ ಪಕ್ಷ ಅನ್ನೋ ಬೇಧಭಾವ ಇಲ್ಲಾ ತಿಳ್ಕೋ. ಅದೇನಿದ್ರು ಯುನಿವರ್ಸಲ್ ಕಾಯಿಲೆ..

 

ಪರಮ : ನೀ ಹೇಳೂದು ಖರೇ ಅನ್ಸತೈತಿ ನೋಡ್ಲಾ ಸಣ್ಣಿ. ಸಂಘಿಗಳು ಗೋವು, ಮೂತ್ರ ಪವಿತ್ರ ಅಂತೆಲ್ಲಾ ಹೇಳಿ ಮಂದೀ ತಲೆ ಕೆಡ್ಸಿ ದನಗಳಿಗೂ, ಹಿಂದುತ್ವಕ್ಕೂ ಲಿಂಕ್ ಇಟ್ಟು ಅದ್ವಾನ ಮಾಡಿ ಹೋದ್ರು. ಅದನ್ನೆಲ್ಲಾ ವಿರೋಧಿಸುವ ನಮ್ಮ ಸಿದ್ದಣ್ಣ ಸಾಹೇಬ್ರೇ ಈಗ ಸಿಎಂ ಆಗಿರೋವಾಗ ಅವರು ತಮ್ಮ ಕಾರ್ಯಕರ್ತರನ್ನೆಲ್ಲಾ ಕರ್ದು ನೋಡ್ರಪ್ಪಾ ಅದು ಹಂಗಲ್ಲಾ ಹಿಂಗಿಂಗೆ ಅಂತಾ ಬುದ್ದಿ ಹೇಳಬೇಕಿತ್ತಲ್ವಾ

 

ಸಣ್ಣೀರ : ಅಯ್ಯೋ ಪೆಕರನನ್ನಮಗನೇ. ನಿಮ್ಮ ಸಿದ್ದಣ್ಣನವರೇ ಮೊನ್ನೆ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರಲ್ಲೋ..

 

ಪರಮ : ಥೋ ಥೋ.. ಸತ್ತೋಗಿದ್ದ ಕೈ ಪಕ್ಷಕ್ಕ ಜೀವದಾನ ಮಾಡಿದೋರು ಕರ್ನಾಟಕದ ಮಾಜನಗಳು. ಅವ್ರ ಹೆಸರ್ನಾಗ ಪ್ರಮಾಣ ವಚನ ಸ್ವೀಕರಿಸೂದು ಬಿಟ್ಟು ದೇವರಂತೆ ದೇವರು

 

ಸಣ್ಣೀರ : ನೋಡ್ಲಾ ಅಣ್ಣತಮ್ಮಾ. ಅದೇನಪಾಂದ್ರ, ಮುಳ್ಳನ್ನ ಮುಳ್ಳಿಂದ ತಗಿಯೋ ಪಾಲಸಿ ಇದು. ಗೋಮೂತ್ರಕ್ಕೆ ಪ್ರಾಮುಖ್ಯತೆ ಕೊಟ್ರ ಇನ್ನಷ್ಟು ಹೂಪಕ್ಷದವರನ್ನ ಸೆಳಿಬೋದು, ದೇವ್ರ ಹೆಸ್ರ ಹೇಳಿದ್ರ ಭಾವನಾತ್ಮಕವಾಗಿ ಹೂಪಕ್ಷದಲ್ಲಿ ಐಕ್ಯರಾದವರನ್ನ ಕೈಯತ್ತ ಎಳಿಬೋದು ಅನ್ನೋ ದೂರದೃಷ್ಟಿ ಇದ್ರೂ ಇರಬೋದು. ಯಾಕಂದ್ರ ಕಣ್ಮುಂದ ಲೋಕಸಭಾ ಎಲೆಕ್ಷನ್ ಕುಣೀತೈತಲ್ಲಾ.

 

ಪರಮ : ಮನುಷ್ಯಾ ಆದವಂಗ ಸಿದ್ದಾಂತ ಮುಖ್ಯ . ನೀ ಏನರ ಹೇಳ್ಲಾ, ನಂಗಂತೂ ಕೈನೋರೂ ಐನೋರ್ನ ಕರಕೊಂಡ್ ಬಂದು ಗೋಮೂತ್ರ ಸಿಂಪಡಿಸಿದ್ದು ತಪ್ಪು ತಪ್ಪು ತಪ್ಪು. ಇನ್ಮೇಲೆ ಗೋವು ಮೂತ್ರ ಪವಿತ್ರ ಅಂತೆಲ್ಲಾ ಸಂಘಿ ಸಂತಾನ್ಗಳು ಹಾದಿ ಬೀದ್ಯಾಗ ಚಡ್ಡಿ ಬಿಚ್ಕೊಂಡ್ ಕುಣಿದಾಡಿದ್ರೂ ಕಾಂಗಿಗಳು ಮೂರು ಮುಚ್ಕೊಂಡಿರ್ಬೇಕಾಗುತ್ತಲ್ವಾ.

 

ಸಣ್ಣೀರ : ಅಲ್ಲಲೇ ನಮ್ಮ ಬಸವಣ್ಣನವರು ಏನಪಾ ಹೇಳಿದ್ರು. ಇಷ್ಟ ಲಿಂಗ ಬಿಟ್ಟು ಬ್ಯಾರೇ ದೇವರಿಲ್ಲಾ, ದೇಹವೇ ದೇಗುಲ, ದೇವಸ್ಥಾನಕ್ಕೆ ಹೋಗಬ್ಯಾಡ್ರಿ, ಭಗವಂತ ಮತ್ತು ಭಕ್ತರ ನಡುವಿನ ದಲ್ಲಾಳಿಗಳನ್ನ ಬಹಿಷ್ಕರಿಸಿ ಅಂತಾ ಹೌದಲ್ಲೋ

 

ಪರಮ : ಹೌದು.

 

ಸಣ್ಣೀರ : ಮತ್ತೆ ಬಸವಧರ್ಮದ ಲಿಂಗಾಯತ್ರುಗಳು ಏನ್ಲಾ ಮಾಡ್ತಾವ್ರೆ.. ಒಬ್ಬೊಬ್ಬರ ಮನೇಲೂ ಹತ್ತಾರ ದೇವರ ಪೊಟೋ ಮೂರ್ತಿ ಇರ್ತಾವಲ್ವಾ. ಅವರೂ ಗುಡಿ ಗುಂಡಾರ ಸುತ್ತಾರಲ್ವಾ, ತಮ್ಮ ಮನೆಯಲ್ಲಿ ಏನೇ ಸುಭಕಾರ್ಯ ಆದ್ರೂ ಭಟ್ರು, ಪುರೋಹಿತರನ್ನ ಕರ್ದು  ಪೂಜೆ ಮಾಡಿಸ್ತಾರಲ್ವಾ. ಹಂಗೆನೇ ಕಣ್ಲಾ, ಎಲ್ಲಾರೂ. ಹೇಳೋದು ಒಂದು ಮಾಡೋದು ಇನ್ನೊಂದು. ಸಿದ್ದಾಂತಾ ಗಿದ್ದಾಂತಾ ಎಲ್ಲಾ ಬಾಯಿಮಾತಿನ ಬೊಗಳೆ ಅಷ್ಟೇಯಾ?

 

ಸಣ್ಣೀರ : ನಾನು ಹಂಗಲ್ಲಲೇ ಸಣ್ಣೀರಾ? ಸಿದ್ದಾಂತ ಅಂದ್ರೆ ಸಿದ್ದಾಂತ. ಮೌಢ್ಯಾಚರಣೆಗಳಂದ್ರೆ ನನಗೆ ಆಗಿ ಬರಾಂಗಿಲ್ಲ.

 

( ಪರಮನ ಹೆಂಡತಿ ಪ್ರವೇಶಿಸಿ)

 

ಪರಮಿ : ರೀ.. ರ್ರೀ.. ಪೂಜೆಗೆ ರೆಡಿ ಮಾಡಿದ್ದೀನಿ. ಎಲ್ಲಾದ್ರೂ ಗಂಜಲಾ ಸಿಕ್ಕರ ತಗೊಂಡು ಬನ್ರಿ..ಮನೆ ಸುತ್ತಲೂ ಚಿಮುಕಿಸಿ ಪವಿತ್ರ ಮಾಡ್ಬೇಕು..

 

ಪರಮ : ಥೋ ನೀನss ಹೋಗಿ ತಗೊಂಡು ಬಂದು ಏನಾದ್ರೂ ಮಾಡ್ಕೋ ಹೋಗು ಹೋಗೇ..

 

ಸಣ್ಣೀರ : ನೋಡ್ದೇಣ್ಲಾ ಪರಮಾ.. ನಿಂದ ಮನ್ಯಾಗ ನಿನ್ನ ಹೆಂಡ್ತಿನ ಬದಲಾಯ್ಸೋಕೆ ನಿನ್ನಿಂದ ಆಗಿಲ್ಲಾ.. ಬ್ಯಾರೇಯವರು ಬದ್ಲಾಗಬೇಕು, ಮೌಢ್ಯಾಚಾರ ಬಿಡ್ಬೇಕು ಅಂತಾ ಬೀದೀಲಿ ನಿಂತು ಬಾಯಿ ಬಡ್ಕೋತಿದ್ದೀಯಲ್ಲಾ.. ಹಿಂಗಾದ್ರ ಹೆಂಗ್ಲಾ..

 

ಪರಮ : ಸುಮ್ಕಿರಲಾ ಮೊದಲss ತಲಿ ಕೆಟ್ಟು ಹೊಗೈತಿ. ನಿನ್ನ ಉಪದೇಸಾ ಬೇರೆ ಕೇಡು. ಬುದ್ದ ಬಸವಾದಿಗಳೇ ಕ್ಷಮಿಸಿ ಬಿಡ್ರಿ. ನೀವು ಹಾಕಿಕೊಟ್ಟ ಹಾದಿಯೊಳಗ ನಮಗೆ ನಡೆಯಾಕ್ ಆಗ್ತಿಲ್ಲ, ಶತಮಾನಗಳ ಸನಾತನ ಮೌಢ್ಯಾಚರಣೆಗಳ ನಿಲ್ಲಿಸಾಕ ಅಸಾಧ್ಯ ಆಗೈತಿ.

 

ಪರಮಿ : ರೀ.. ಗಂಜಲಾ.. 

 

ಪರಮ : ಆಯ್ತು  ಸುಮ್ಕಿರೇ.. ನೀನು ಹೋಗಿರು ನಾನು ತರ್ತೀನಿ. ( ಹೋಗ್ತಾನೆ)

 

ಸಣ್ಣೀರ : ನೋಡಿದ್ರಲ್ಲಾ ಬ್ರದರ್ಸ್ ಮತ್ತು ಸಿಸ್ಟರ್ಸ್. ವೈದಿಕರು ಬಿತ್ತಿದ ಮೌಢ್ಯದ ಬೀಜಗಳು ಎಲ್ರ ಮನಸಲ್ಲೂ ಮೊಟ್ಟೆ ಇಟ್ಟು ಮರಿ ಹಾಕ್ತಾನೇ ಇರ್ತಾವೆ. ಬುದ್ದ ಬಸವ ಅಂಬೇಡ್ಕರ್ ಕುವೆಂಪುರವರಂತಹ ಸಾವಿರಾರು ಮಂದಿ ದಾರ್ಶನಿಕರು ಬಂದ್ರು ಹೋದ್ರು.. ಆದರ ನಮ್ಮ ಮಾಜನಗೋಳು ಬದಲಾಗ್ತಿಲ್ಲ. ಬದಲಾಬೇಕಂದ್ರೂ ಸ್ವಾಮಿಗೋಳು, ಮಠಾಧೀಶರುಗಳು, ಪುರೋಹಿತರು ಬಿಡೂದಿಲ್ಲ. ಏನ್ಮಾಡೂದು.. ಆಳೋಮಂದಿನss ಹಿಂಗ ಗುಡಿ ಗುಂಡಾರ ಸುತ್ತಿದ್ರ, ಜೋತಿಷ್ಯ ಭವಿಷ್ಯ ನಂಬಿದ್ರ, ಮೌಢ್ಯಾಚಾರ ಆಚರಿಸಿದ್ರ ಜನರ ಗತಿ ಏನು ಎತ್ತ.. ಗೋವಿಂದಾ ಗೋವಿಂದಾ..

 

(ಹಾಡು ಹೇಳುವನು ) ಹೇಳುವುದು ಒಂದೂ, ಮಾಡುವುದು ಇನ್ನೊಂದು. ನಂಬುವುದು ಹೇಗೋ ಕಾಣೆ ಪದ್ಮಾವತಿ ಪತಿ, ತಿರುಪತಿ ಶ್ರೀವೆಂಕಟಾಚಲಪತಿ..

 

*- ಶಶಿಕಾಂತ ಯಡಹಳ್ಳಿ*

 

((2023, ಮೇ 10 ರಂದು ನಡೆದ ಚುನಾವಣೆಯಲ್ಲಿ ಗೆದ್ದ  ನಂತರ ಮೈಸೂರಲ್ಲಿ ಮೋದಿ ರ್ಯಾಲಿ ಮಾಡಿದ ರಸ್ತೆ ಹಾಗೂ ವಿಧಾನಸೌಧದ ಮುಂಬಾಗ ಕಾಂಗ್ರೆಸ್ ಕಾರ್ಯಕರ್ತರುಗಳು ಗೋಮೂತ್ರ ಸಿಂಪಡಿಸಿ ಪವಿತ್ರಗೊಳಿಸಿದ ಸಂದರ್ಭದಲ್ಲಿ   ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ