ಪಿಂಕ್ ನೋಟ್ ಪ್ರಹಸನ (ಪ್ರಹಸನ-13)

 ಪ್ರಹಸನ-13

ಪಿಂಕ್ ನೋಟ್ ಪ್ರಹಸನ 

 

ದೃಶ್ಯ 1,  ಇಸವಿ 2016

 

ಯಾರು ತಿಳಿಯರು ನನ್ನ ಅತಿಬೆಲೆಯ ಪರಾಕ್ರಮ

ದೇಶದೋಳ್ ಆರ್ಭಟಿಸುವ ನನ್ನ ವಿಜಯದ ಮರ್ಮ

ಎಲ್ಲದಕೂ ಕಾರಣನು ನಮ್ಮ ವಿಶ್ವಗುರೂ.. ನಮೋ ವಿಶ್ವಗುರೂ..

( ಎಂದು 2000 ರೂಪಾಯಿಯ ನೋಟು ಬಲು ಬಿಂಕದಿಂದ ರಾಗಬದ್ದವಾಗಿ ಹಾಡತೊಡಗಿತು)

 

ಪಿಂಕ್ ನೋಟ್ : ವಿಶ್ವಗುರುವಿಗೆ ನಮೋ ನಮಃ. ಪರಮಪೂಜ್ಯರಾದ ಜಗದ್ವಂದಿತ ಸ್ವಘೋಷಿತ ವಿಶ್ವಗುರುವಿಗೆ ವಂದಿಸುವೆ. ನನ್ನ ಹುಟ್ಟಿಗೆ ಕಾರಣರಾದ ಮಹಾಮಹಿಮರ ಚರಣಕಮಲ ಪದ್ಮ ಪಾದಾದಿ ಸರ್ವಾಂಗಗಳಿಗೆ ಶಿರಸಾಸ್ಟಾಂಗ್ ವಂದನೆ

 

1000 ನೋಟು : (ಕೆಳಗೆ ಬಿದ್ದು ನರಳುತ್ತಾ) ಪಿಂಕು ಹೆಚ್ಚು ಮೆರೆಯಬೇಡ. ಒಂದಿಲ್ಲಾ ಒಂದಿನಾ ನಿನಗೂ ನನ್ನದೇ ದುಸ್ಥಿತಿ ಬಂದೇ ಬರುತ್ತದೆ ಎಚ್ಚರ.

 

ಪಿಂಕ್ ನೋಟು : ಛೇ ನಾನ್ಸೆನ್ಸ್.. ನಾನೆಲ್ಲಿ? ಚಲಾವಣೆ ಇಲ್ಲದ ಬರೀ ವೇಸ್ಟ್ ಪೇಪರ್ ಆಗಿರುವ ನೀನೆಲ್ಲಿ?. ಶಟಪ್ ಸೇ..

 

1000 ನೋಟು : ಮೂಡುವನು ರವಿ ಮೂಡುವನು. ಏರಿದವ ಕೆಳಗಿಳಿಯಲೇ ಬೇಕೆಂಬ ಸತ್ಯವ ಸಾರುವನು ರವಿ ಮೂಡುವನು

 

ಪಿಂಕ್ ನೋಟು : ತೋ ಥೋ.. ನಿನ್ನದು ಅತಿ ಆಯ್ತು. ದೂರ ಹೋಗು ಅನಿಷ್ಟವೇ. ನಿನ್ನ ಈಗ ಯಾರೂ ಮೂಸುವುದೂ ಇಲ್ಲಾ. ಬಂದ್ಬಿಟ್ಟಾ ನನಗೆ ಬುದ್ದಿ ಹೇಳಲು.. ಓಲ್ಡ್ ಫೆಲೋ..

 

ಹೊಸ 500 ನೋಟು : ಅಣ್ಣಾ.. ದೊಡ್ಡಣ್ಣಾ.. ನಾನು ನೀನು ಜೋಡಿ, ಜೋಡಿ ಎತ್ತಿನ ಗಾಡಿ.. ಕಣಣ್ಣಾ. ನಾವಿಬ್ಬರೂ ಯಾವಾಗಲೂ ಜೊತೆಯಾಗಿ ದೇಶವನಾಳೋಣ.

 

ಪಿಂಕ್ ನೋಟ್ : ಇದಪ್ಪಾ ಮರ್ಯಾದೆ ಅಂದ್ರೆ. ಕೀಪಿಟಪ್. ನಾನಂದ್ರೇನು ನನ್ನ ಬೆಲೆ ಎಷ್ಟು.. ನಾನೇ ಈಗ ಮಾರುಕಟ್ಟೆಯ ಸಾರ್ವಭೌಮ.

 

( ನೂರು, ಐವತ್ತು, ಇಪ್ಪತ್ತು, ಹತ್ತು ರೂಪಾಯಿ ನೋಟುಗಳೆಲ್ಲಾ ಓಡಿ ಬಂದು ಮಂಡಿ ಊರು ಕುಳಿತು ಘೋಷಣೆ ಕೂಗುತ್ತಾರೆ)

ಪಿಂಕ್ ರಾಜನಿಗೆ ಜಯವಾಗಲಿ. ರೂಪಾಯಿಗಳ ದೊರೆಗಳಿಗೆ ಜಯವಾಗಲಿವಿಶ್ವಗುರು ಸಂಜಾತ ಸಾಮ್ರಾಟ ಪಿಂಕ್ ಚಕ್ರವರ್ತಿಗಳಿಗೆ ಜಯವಾಗಲಿ..

 

ಪಿಂಕ್ ನೋಟು : ಹಾ ಹಾಂ ಇರಲಿ ಇರಲಿ.. ಗೌರವ ಹೀಗೇ ಸಿಗಲಿ. ನಾನು ಬರೋವರೆಗೂ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ..

 

( ಎಲ್ಲರೂ ಪಿಂಕ್ ನೋಟನ್ನು ಹೆಗಲ ಮೇಲೆ ಹೊತ್ತುಕೊಂಡು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡುತ್ತಾರೆ)

 

*ದೃಶ್ಯ 2. ಇಸವಿ 2018.*

 

ಹೊಸ 500 ನೋಟು : ಯಾಕೋ ದೊಡ್ಡಣ್ಣನವರು ಬೇಸರದಲ್ಲಿ ಮಂಕಾಗಿ ಇದ್ದಂತೆ ಕಾಣುತ್ತದೆಇತ್ತೀಚೆಗೆ ನಿಮ್ಮ ದರ್ಶನವೇ ಅಪರೂಪ ಆಗಿದೆ..

 

ಪಿಂಕ್ ನೋಟ್ : ಏನಂತಾ ಹೇಳಲೋ ತಮ್ಮಾ. ಸರಕಾರದವರು ನನ್ನ ಮುದ್ರಿಸೋದೇ ನಿಲ್ಲಿಸಿದ್ದಾರೆ. ಹಿಂಗಾದ್ರೆ ನನ್ನ ಸಂತಾನ ಉಳಿಯೋದು ಹೇಗೆ? ಬೆಳಿಯೋದು ಹೇಗೆ? ನನ್ನ ಪ್ರಿಸ್ಟೇಜ್ ಗತಿ ಏನು?

 

ಹೊಸ 500 ನೋಟು : ಇತ್ತೀಚೆಗೆ  ಮಾರ್ಕೆಟಲ್ಲಿ ನಿನ್ನ ಮುಖದರ್ಶನವೇ ಇಲ್ವಲ್ಲಣ್ಣಾ. ಎಲ್ಲಾ ಕಡೆ ನಾನೇ ಇದ್ದೇನೆ.. ನಿನಗೇನಾಯ್ತಣ್ಣಾ.

 

ಪಿಂಕ್ ನೋಟ್ : ಹುಂ,, ಏನ್ಮಾಡೋದು ತಮ್ಮಾ. ನಾನು ನೋಡೋಕೆ ಸುಂದರವಾಗಿದ್ದೀನಲ್ವಾ, ನನ್ನ ಮೌಲ್ಯವೂ ನಿಮ್ಮೆಲ್ಲರಿಗಿಂತಾ ಜಾಸ್ತಿ ಇದೆಯಲ್ವಾ. ಅದಕ್ಕೆ ಶ್ರೀಮಂತರೆಲ್ಲಾ ನನ್ನ ಎತ್ತಾಕೊಂಡೋಗಿ ಮುಚ್ಚಿಟ್ಕೊಂಡಿದ್ದಾರೆ. ಪಿಂಕ್ ಹೋಗಿ ಈಗ ಬ್ಲಾಕ್ಮನಿ ಮಾಡಿ ಅಡಗಿಸಿ ಇಟ್ಟಿದ್ದಾರೆ. ನನಗೂ ನಿನ್ನ ಹಾಗೇ ಹೊರಗೆ ಬಂದು ಮರ್ಯಾದೆ ಗಿಟ್ಟಿಸಿಕೊಳ್ಳೋ ಆಸೆ. ಆದರೆ ನನ್ನ ಹೊರಗೇ ಬಿಡ್ತಲ್ವೇ.. ಚಲಾವಣೆಯಲ್ಲಿದ್ದಾಗಲೇ ನೋಟಿಗೆ ಬೆಲೆ ಅಲ್ವಾ.. ಇಲ್ಲಾಂದ್ರೆ  ಶಿವ ಶಿವಾ..

 

1000 ನೋಟು : ( ಹೂವಿನ ಹಾರ ಹಾಕಿಸ್ಕೊಂಡು ಪೊಟೋ ಪ್ರೇಮ್ ನೊಳಗಿಂದಾ) ಅಯ್ಯೋ ಪಾಪ.. ಹೀಗಾಗಬಾರದಿತ್ತು? ಜಾಸ್ತಿ ಮೆರೀಬೇಡಾ ಅಂತಾ ನಾನಾಗಲೇ ಹೇಳಿರಲಿಲ್ವೆ?

 

ಪಿಂಕ್ ನೋಟ್ : ಇವನೊಬ್ಬ ಬಂದಾ ನಡುವೆ ನಂದೆಲ್ಲಿಡ್ಲಿ ಅಂತಾ. ಥೂ. ಬೆಲೆ ಇಲ್ಲದೇ ನೆಲೆ ಕಳ್ಕೊಂಡು ಹೊಗೆ ಹಾಕಿಸ್ಕೊಂಡ್ರೂ ಇನ್ನೂ ಕೊಂಕಾಡೋದು ಬಿಟ್ಟಿಲ್ಲಾ..

 

500 ನೋಟು : ಏನೇ ಹೇಳು ದೊಡ್ಡಣ್ಣಾನಿನಗೆ ಹೀಗಾಗಬಾರದಿತ್ತು. ಎಷ್ಟು ದೌಲತ್ತಿನಿಂದ ಮೆರದವನು ನೀನು. ಹೌದು.. ಒಂದು ಪ್ರಶ್ನೆ ಕೇಳಬೇಕಾಗಿತ್ತು ಕೇಳ್ಲಾ.

 

ಪಿಂಕ್ ನೋಟ್ : ನನ್ನ ಬದುಕೇ ಪ್ರಶ್ನಾರ್ಥಕ ಚಿನ್ನೆ ಆಗಿದೆ. ಕೇಳಪ್ಪಾ ಕೇಳು

 

500 ನೋಟು : ನಿನ್ನೊಳಗೆ ಚಿಪ್ ಇದೆಯಂತೆ ಹೌದಾ? ಅದೆನೋ ಭೂಮಿಯೊಳಗೆ  200 ಪೂಟ್  ಆಳದೊಳಗಿದ್ರೂ ನಾನಿಲ್ಲಿದ್ದೀನಿ ನಾನು ಇಲ್ಲೇ ಇದ್ದೀನಿ ಅಂತಾ ನೀನು ಸಿಗ್ನಲ್ ಕೊಡ್ತೀಯಂತೆ ಹೌದಾ? ನನ್ನತ್ರ ಇಲ್ಲದ್ದು ನಿನ್ನತ್ರ ಮಾತ್ರ ಯಾಕಿದೆ ಅಂತಾ ಯೋಚ್ನೆ ನಂದು..

 

ಪಿಂಕ್ ನೋಟ್ : ಥೊ ಥೋ.. ಯಾರೋ ತಮ್ಮಾ ಹಂಗೇಳಿದ್ದು.. ನಾನ್ಸೆನ್ಸ್.

 

500 ನೋಟು : ಅದೇ ಪಬ್ಲಿಕ್ ಟಿವಿ ರಂಗಣ್ಣ ಊರ ತುಂಬಾ ಡಂಗುರ ಸಾರಕೊಂಡ ಬರ್ತಿದ್ನಾ, ಅದು ನನ್ನ ಕಿವಿಗೂ ಬಿತ್ತಾ, ಅದಕ್ಕೆ ಕೇಳಿದೆ ಅಷ್ಟೇ.

 

ಪಿಂಕ್ ನೋಟ್ : ಅಂತವರ ವೃತ್ತಿನೇ ಸುಳ್ಳು ಹೇಳೋದು. ಅದನ್ನೆಲ್ಲಾ ನಂಬೋರು ಮೂರ್ಖರು ಅಷ್ಟೇ. ಚಿಪ್ಪೂ ಇಲ್ಲಾ ಸೊಪ್ಪೂ ಇಲ್ಲಾ.. 

 

500 ನೋಟು : ಹೌದಾ.. ಸರಿ ದೊಡ್ಡಣ್ಣಾ.. ನೀನು ಬಂದ ಮೇಲೆ ಭ್ರಷ್ಟಾಚಾರ ಎಲ್ಲಾ ಗಂಟು ಮೂಟೆ ಕಟ್ಕೊಂಡು ಹೋಗುತ್ತೆ ಅಂತಿದ್ರಲ್ಲಾ ಭ್ರಷ್ಟಾಚಾರ ನಿಂತೋಯ್ತಾ? ಆತಂಕವಾದಿಗಳ ಅಟ್ಟಹಾಸ ನಿಲ್ಲುತ್ತೆ ಅಂದ್ರಲ್ಲಾ ಅದೂ ನಿಂತೋಯ್ತಾ? ಹೋಗಲಿ ಕಪ್ಪು ಹಣ ನಿರ್ನಾಮ ಅಗುತ್ತೆ ಅಂದ್ರಲ್ಲಾ ಅದೂ ಆಯ್ತಾ

 

ಪಿಂಕ್ ನೋಟ್ : ಅವರ ಮುಂಡಾ ಮೋಚ್ತು. ಯಾವುದೂ ನಿಂತಿಲ್ಲಾ. ನಿಲ್ಲೋದೂ ಇಲ್ಲಾ, ಜೋಕ್ ಮಾಡಬೇಡಾ ಸುಮ್ಮನಿರು. ಭ್ರಷ್ಟಾಚಾರ ನಿಲ್ಸೋಕೆ ನನ್ನ ಹುಟ್ಸಿದ್ದಾರೆ ಅಂತಾರಲ್ಲಾ, ಅದಕ್ಕೆ ಭ್ರಷ್ಟಾಚಾರಿಗಳೆಲ್ಲಾ ಸೇರಿಕೊಂಡು ನನ್ನ ಎಲ್ಲಾ ಸಂತಾನಗಳನ್ನ ಹಿಡಿದು ಬಚ್ಚಿಟ್ಟು ನನ್ನ ಮುಖಕ್ಕೆ ಕಪ್ಪು ಮಸಿ ಬಳದಿದ್ದಾರೆ. ನೀನೇ ಅದೃಷ್ಟವಂತಾ. ನೀನೇ ಈಗ ಸರ್ವಾಂತರಯಾಮಿ. ಮುಂದೇನಾಗುತ್ತೋ ನೊಡೋಣ ನಮ್ಮ ಕೈಯಲ್ಲಿ ಏನಿದೆ, ಎಲ್ಲಾ ವಿಶ್ವಗುರುವಿನ ಕೈಯಲ್ಲಿದೆ.

 

*ದೃಶ್ಯ 3.   2023 ನೇ ಇಸವಿ*

 

ಪಿಂಕ್ ನೋಟ್ : ( ಪಿಂಕ್ ನೋಟು ನೆಲಕ್ಕೆ ಬಿದ್ದು ಗೋಳಾಡ್ತಿದೆ. ಹಾಡಾಡಿಕೊಂಡು ರಾಗಬದ್ದವಾಗಿ ಅಳ್ತಿದೆಅಯ್ಯೊ ಅಯ್ಯಯ್ಯಯ್ಯೋ.. ನನಗೀ ಗತಿ ಬರಬಾರದಿತ್ತು. ಇವರ ಮನೆ ಹಾಳಾಗಾನನಗೂ ಸಾಯೋ ದಿನ ಘೋಷಣೆ ಮಾಡಿ ಬಿಟ್ರಲ್ಲೋ ಇವರಿಗೆ ಬರಬಾರ್ದ ಬಂದು ಬರಬಾದಾಗಾ, ಹೆಂಗೆ ಮೆರೆದಾಡಿದೋನಿಗೆ ಹಿಂಗೆ ದುಸ್ತಿತಿ ತಂದಿಟ್ರಲ್ಲೋ ಇವರ ಪಟ್ಟ ಚಟ್ಟಾ ಕಟ್ಕೊಂಡು ಹೋಗಾ

 

500 ನೋಟು : ಯಾಕಣ್ಣಾ ಏನಾಯ್ತು, ಮೂರು ದಾರಿ ಸೇರೋವಲ್ಲಿ ಕೂತು ಗೋಳಾಡ್ತಾ ಇದ್ದೀಯಲ್ಲಾ.

 

1000 ನೋಟು : ( ಪೊಟೋ ಪ್ರೇಮ್ ಒಳಗಿಂದಲೇ) ಗೋಳಾಡ್ಲಿ ಬಿಡು. ಮೆರೆದವರು ಮರೆಯಾಗಲೇ ಬೇಕು. ಅಳಪ್ಪಾ ಅಳು.. ಸಾವಿನ ಸುಖವನ್ನ ಇದ್ದಾಗಲೇ ಅನುಭವಿಸು.

 

ಪಿಂಕ್ ನೋಟ್ : ಅಯ್ಯೋ ನನಗಿಂತಾ ಪರಿಸ್ಥಿತಿ ಬರಬಾರದಿತ್ತು. ಹಾದಿ ಬೀದಿಲಿ ಬಿದ್ದ ವೇಸ್ಟ್ ಪೇಪರ್ಗಳು ಆಡ್ಕೋ ಹಾಗೆ ಆಗಬಾರದಿತ್ತು. ಈಗೇನು ಮಾಡ್ಲಿ

 

1000 ನೋಟು : ಏನೂ ಮಾಡೋಕಾಗೋದಿಲ್ಲ. ಅಷ್ಟೊಂದು ದುರಹಂಕಾರದಿಂದ ಮೆರೆದೆ ಅಲ್ಲಾ ಈಗ ಅನಭವಿಸು. ನನಗೋ ಸಾವಿನ ನೋವು ಅರಿವಾಗದ ಹಾಗೇ ರಾತ್ರೋ ರಾತ್ರಿ ಸಾಯಿಸಿ ಬಿಟ್ರು. ನನಗೆ ನೋವಿಲ್ಲದ ಸಾವು ಕೊಟ್ರು. ಆದರೆ ನಿನ್ನ ಗತಿ ನೋಡು, ನಿನಗೆ ಸಾಯೋ ಡೇಟ್ ಸಹ ಫಿಕ್ಸ್ ಮಾಡಿದ್ದಾರೆ. ಇನ್ನು ನಾಲ್ಕೇ ತಿಂಗಳು ಅಷ್ಟೇ. ಹೀಗೆ ನನ್ನ ಪಕ್ಕದಲ್ಲಿ ನೀನೂ ಪೊಟೋ ಪ್ರೇಮ್ ಆಗೋ ದಿನ ದೂರ ಇಲ್ಲಾ ತಿಳಕೋ. ಅಷ್ಟೆ ಮುಗೀತು ನಿನ್ನ ಕಥೆ ಹೊಗೆ ಹಾಕಿಸ್ಕೊಳ್ಳೊ ದಿನ ಬಂದೇ ಬಿಡ್ತು

 

ಪಿಂಕ್ ನೋಟ್ : (ರಾಗಬದ್ದವಾಗಿ) ನೊಂದಿರೋರ ಬುಡಕ್ಕೆ ಬೆಂಕಿ ಹಾಕಿ ಆನಂದ ಪಡ್ತೀಯಲ್ಲೋ ಜೊಕುಮಾರಾ. ಸಾವಿಗಾಗಿ ಕಾಯಿಸೋದಕ್ಕಿಂತಾ ಒಂದೇ ಸಲ ಸಾಯಿಸ್ಬಾರ್ದೇನೋ ಚೌಕೀದಾರಾ. ಸಾವುಕಾರ ಮನೆ ಸೋಫಾದೊಳಗೆ, ಶ್ರೀಮಂತರ ಮನೆ ಸಂದೂಕಿನೊಳಗೆ ಬೆಚ್ಚಗೆ ಇರೋ ಭಾಗ್ಯಾನೂ ನನಗೆ ಇಲ್ಲದೇ ಹೋಯ್ತಲ್ಲೋ ವಿಶ್ವಗುರು..

 

500 ನೋಟು : ಸಮಾಧಾನ ಮಾಡ್ಕೊಳ್ಳಣ್ಣಾ. ಹುಟ್ಟಿದ ಎಲ್ಲರಿಗೂ ಒಂದಿಲ್ಲಾ ಒಂದಿನಾ ಸಾವು ಬಂದೇ ಬರುತ್ತೆ. ನಿನ್ನೆ ಅವನು, ಇಂದು ನೀನು, ಮುಂದೆ ನಾನು.. ಇದೇ ಸತ್ಯ.. ಹುಟ್ಸಿದ್ ದೇವರು ಹುಲ್ಲು ಮೇಯಸದೇ ಹೋದರೂ ತನ್ನ ಕೆಲಸ ಆದ ಮೇಲೆ ಸಾವನ್ನಂತೂ ಕೊಟ್ಟೇ ಕೊಡ್ತಾನೆ.. ಸಹಿಸ್ಕೋ..

 

ಪಿಂಕ್ ನೋಟ್ : ಅಯ್ಯೋ ಸಾವೇ.. ನನಗೂ ಅಂತ್ಯವೇ? ಏನು ಕರ್ಮಾ ಮಾಡಿದ್ದೆನೋ ಯಾರಿಗ್ಗೊತ್ತು. ದೇಶದಾಗ ಹುಟ್ಟ ಬಾರದಿತ್ತು, ಹುಟ್ಟಿದ ಮೇಲೆ ಇಂತಾ ದುಸ್ತಿತಿ ಬರಬಾರದಿತ್ತು. ನಮ್ಮ ಸಾವಿಗೆ ನಾವೇ ಕಾಯೋ ಕರ್ಮ ಯಾರಿಗೂ ಬರದೇ ಇರಲಿ..

 

*ದೃಷ್ಯ 4. 2023 ಸೆಪ್ಟಂಬರ್.*

 

(1000 ರೂ ನೋಟಿನ ಪೊಟೋ ಪ್ರೇಮಿನ ಪಕ್ಕ 2000 ರೂ ನೋಟಿನ ಪ್ರೇಮ ಇಟ್ಟು ಚಲಾವಣೆಯಲ್ಲಿರುವ ಎಲ್ಲಾ ನೋಟುಗಳು ಒಂದೊಂದಾಗಿ ಬಂದು ಪೊಟೊಗೆ ಹಾರ ಹಾಕಿ ಶ್ರದ್ಧಾಂಜಲಿ ಸಭೆ ಮಾಡುತ್ತವೆ.)

 

500 ನೋಟು : ಇವತ್ತು ನಮಗೆಲ್ಲಾ ಸೂತಕದ ದಿನ. ನಮ್ಮೆಲ್ಲರ ದೊಡ್ಡಣ್ಣ ನಾಲ್ಕು ತಿಂಗಳುಗಳ ಕಾಲ ಎಲ್ಲಾ ರೀತಿಯ ನೋವನ್ನು ಅನುಭವಿಸಿ ಕಾಲಾಧೀನರಾಗಿದ್ದಾರೆಂದು ತಿಳಿಸಲು ನಮಗೆಲ್ಲಾ ವಿಷಾದವೆನಿಸುತ್ತಿದೆ.

 

100 ನೋಟು : ನನ್ನಂತಾ ಇಪ್ಪತ್ತು ನೋಟಿಗೆ ನಮ್ಮ ದೊಡ್ಡಣ್ಣ ಒಬ್ಬರೇ ಸಮವಾಗಿದ್ದರು. ಈಗ ನಮ್ಮ ನಡುವೆ ಇಲ್ಲದ ಅಂತಹ ಬಲಶಾಲಿಯಾದ ಅಣ್ಣನವರಿಗೆ ಅಂತಿಮ ನಮನಗಳು.

 

50 ನೋಟು : ನನಗಂತೂ ತುಂಬಾನೇ ದುಃಖ ಆಗ್ತಿದೆ. ತುಂಬಾ ಬೆಲೆಯುಳ್ಳ ನಮ್ಮ ಹಿರಿಯಣ್ಣನನ್ನು ಕಳೆದುಕೊಂಡ ನೋವು ತುಂಬಾ ದಿನಗಳ ಕಾಲ ಕಾಡ್ತಾ ಇರುತ್ತದೆ

 

20 ರೂ ನೋಟು : ಇದನ್ನೆಲ್ಲಾ ನೋಡ್ತಾ ಇದ್ರೆ ದೊಡ್ಡವರಾಗಿ ಮೆರೆದು ಅಲ್ಪಾಯುಷಿಗಳಾಗಿ ಸಾಯೋದಕ್ಕಿಂತಲೂ ನನ್ನಂತೆ ಚಿಕ್ಕವರಾಗಿ ತಗ್ಗಿ ಬಗ್ಗಿ ಬದುಕಿದರೆ ದೀರ್ಘಾಯಸ್ಸು ಇರುತ್ತದೆ ಎಂದು ನಾನು ನಂಬಿದ್ದೇನೆ. ದೊಡ್ಡಣ್ಣನ ಆತ್ಮಕ್ಕೆ ಚಿರಶಾಂತಿಯನ್ನು ಕೊಟ್ಟ ವಿಶ್ವಗುರುಗಳಿಗೆ ವಂದಿಸುತ್ತಾ ನನ್ನ ಮಾತು ಮುಗಿಸುವೆ

 

10 ರೂ ನೋಟು : ನನಗೂ ದುಃಖದ ಸಂಗತಿ. ಹಿರಿಯಣ್ಣ ಹೋದ ಮೇಲೆ ಈಗ ಸ್ಥಾನಕ್ಕೆ ಬಂದ 500 ನೋಟಣ್ಣನವರು ವಂದನಾರ್ಪನೆ ಮಾಡಿ ಶ್ರದ್ಧಾಂಜಲಿ ಸಭೆಯನ್ನು ಮುಕ್ತಾಯಗೊಳಿಸಬೇಕೆಂದು ಎಲ್ಲರಿಗಿಂತಲೂ ಕಿರಿಯನಾದ ನಾನು ಕೋರಿಕೊಳ್ಳುವೆ.

 

500  ನೋಟು : ಏನಂತಾ ವಂದನಾರ್ಪನೆ ಮಾಡಲಿ. ನನ್ನ ಮುಂದಿನ ಭವಿಷ್ಯವನ್ನ ನೆನೆಸಿಕೊಂಡಾಗೆಲ್ಲಾ ದುಃಖ ತಡೆಯೋಕೆ ಆಗ್ತಾ ಇಲ್ಲನನಗೂ ಹಿರಿಯಣ್ಣನಿಗೆ ಬಂದ ಗತಿ ಯಾವಾಗ ಬರುತ್ತದೋ ಎನ್ನುವ ಆತಂಕ ಶುರುವಾಗಿದೆ. ಈಗ ಶ್ರೀಮಂತರ ಮನೆಯ ಸಂದೂಕುಗಳಲ್ಲಿ ದೊಡ್ಡಣ್ಣನ ಬದಲಾಗಿ ನನ್ನನ್ನು ಅಡಗಿಸಿಡಲು ಶುರುಮಾಡಿದ್ದಾರೆ. ನನ್ನನ್ನು ಕಪ್ಪು ಧನವಾಗಿ ಪರಿವರ್ತನೆ ಮಾಡಿದಂತೆಲ್ಲಾ ನನ್ನ ಅಂತ್ಯವೂ ಸಮೀಪಿಸಿದಂತೆಯೇ. ಮೊದಲೇ ತುಘಲಕ್ ಸಾಮ್ರಾಟ. ಯಾವಾಗ ಏನು ಬದಲಾಯಿಸ್ತಾನೋ ಗೊತ್ತಾಗೋದಿಲ್ಲ. ಆದ್ದರಿಂದ ಇಲ್ಲಿ ಸೇರಿರುವ ತರಾವರಿ ನೋಟು ಜಾತಿಯವರೆಲ್ಲಾ ಅಗಲಿದ ಹಿರಿಯಣ್ಣನ ಆತ್ಮಕ್ಕೆ ಶಾಂತಿಯನ್ನೂ ಹಾಗೂ ಈಗ ಅವರ ಜಾಗದಲ್ಲಿರುವ ನನಗೆ ದೀರ್ಘಾಯುಸ್ಸನ್ನೂ ಕೋರಬೇಕೆಂದು ವಿನಂತಿ. ಶ್ರದ್ಧಾಂಜಲಿ ಸಭೆಗೆ ಬಂದ ಎಲ್ಲಾ ಕುಲಬಾಂಧವರಿಗೂ ವಂದನೆಗಳು.

 

100 ನೋಟು : ಮೆರೆದು ಮರೆಯಾದ ಮಮತೆಯ ಹಿರಿಯಣ್ಣನ ಆತ್ಮಕ್ಕೆ

 

ಎಲ್ಲರೂ : ಶಾಂತಿ ಸಿಗಲಿ

 

100 ನೋಟು : ಈಗಿರುವ ದೊಡ್ಡಣ್ಣನವರಿಗೆ ವಿಶ್ವಗುರುಗಳು

 

ಎಲ್ಲರೂ : ದೀರ್ಘಾಯಸ್ಸು ಕೊಡಲಿ.

 

ಹಿನ್ನೆಲೆಯಲ್ಲಿ ಹಾಡು..

 

ಏರಿದವ ಇಳಿಯಲೇ ಬೇಕೆನ್ನುವ ಸತ್ಯವ

ಸಾರುವನು ರವಿ ಮೂಡುವನು..

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ