ಕರೆಂಟ್ ಪ್ರೀ ಪ್ರಹಸನ (ಪ್ರಹಸನ-14)

 ಪ್ರಹಸನ-14

ಕರೆಂಟ್ ಪ್ರೀ ಪ್ರಹಸನ   

**********************

 

ಹೂ ಪಕ್ಷ : ಕರೆಂಟ್ ಕೊಡಿ, ಇಲ್ಲವೇ ಜಾಗ ಖಾಲಿ ಮಾಡಿ..

 

ಜೆಡಿಎಸ್ಸು : ಗ್ಯಾರಂಟಿ ಈಡೇರಿಸಿ, ಇಲ್ಲಾ ಹೋರಾಟ ಎದುರಿಸಿ

 

ಜನರು : ಕರೆಂಟ್ ಬಿಲ್ ಕಟ್ಟೋದಿಲ್ಲ, ಗ್ಯಾರಂಟಿ ಬಿಡೋದಿಲ್ಲ.. 

 

ಕೈ ಪಕ್ಷಕೊಟ್ಟ ಮಾತು ತಪ್ಪೋದಿಲ್ಲ. ಆತುರ ಬೇಕಾಗಿಲ್ಲ.

 

ಪತ್ರಕರ್ತ : ಇಷ್ಟೇ ನೋಡಿ ವೀಕ್ಷಕರೆ ಇದುವೇ ಗ್ಯಾರಂಟಿ ಗುದ್ದಾಟ. ಆಳುವ ಪಕ್ಷಕ್ಕೆ ಪೀಕಲಾಟ, ವಿರೋಧಿಗಳಿಗೆ ಹಬ್ಬದೂಟ. ಅವರು ಕೊಡೆ, ಇವರು ಬಿಡೆ ಅನ್ನುವುದೇ ಈಗಿನ ಬ್ರಹನ್ನಾಟಕ

 

ಸೀನ : ಮೊದಲು  ಟಿವಿ ಆಪ್ ಮಾಡೇ ಪಾರು..

 

ಪಾರು : ನಾನ್ಯಾಕೆ ಆಪ್ ಮಾಡ್ಲಿ. ಹೆಂಗೂ ಕರೆಂಟ್ ಪ್ರೀ ಕೊಡ್ತಾರಂದಮ್ಯಾಲೆ ಇನ್ಮೇಲೆ 24 ಬಾರ್  7 ಟಿವಿ ನೋಡೋದೇನೇ.

 

ಸೀನ : ನೋಡ್ ನಿಂಗಿ.. ಕೊಡ್ತೀವಿ ಅಂದ ತಕ್ಷಣವೇ ಕೊಡೋಕಾಗೋದಿಲ್ಲ. ಸ್ವಲ್ಪ ಟೈಂ ಬೇಕುಕ್ಯಾಬಿನೆಟಲ್ಲಿ ಚರ್ಚೆ ಆಗಿ ತೀರ್ಮಾನ ಆಗ್ಬೇಕು. ಅಲ್ಲಿವರೆಗೂ ತಡ್ಕೋಬೇಕು ನಿಂಗಿ. ನೀನೂ ವಿರೋಧ ಪಕ್ಷದವರ ತರ  ಗ್ಯಾರಂಟಿ ಈಗಲೇ ಬೇಕೂ ಅಂತಾ ರಚ್ಚೆ ಹಿಡಿದು ಬಾಯಿಬಡ್ಕೋಬೇಡಾ ಮಾರಾಯ್ತಿ.

 

ಪಾರು : ರ್ರೀ ಅದೆಲ್ಲಾ ನನಗೆ ಗೊತ್ತಿಲ್ಲಾ. ಪ್ರೀ ಬೇಕು ಅಂದ್ರೆ ಬೇಕು.. ಇವತ್ತೇ ಬೇಕು, ಈಗಲೇ ಬೇಕು.

 

ಸೀನ : ಥೊ ಥೋಥೊ. ಕೇಳಿಲ್ಲಿ. ಸರಕಾರ ಅಂದ್ರ ನಿನ್ನ ಗಂಡ ಅಂತಾ ತಿಳ್ಕೊಂಡಿ ಏನು, ಹಠಮಾಡಿದ ಕೂಡಲೇ ಬೇಡಿಕೆ ಈಡೇರಿಸೋಕೆ. ಪ್ರೀ ಕರೆಂಟ್ ಕೊಡಬೇಕಂದ್ರೆ ಮೊದಲು ಇಡೀ ರಾಜ್ಯದೊಳಗೆ ಎಷ್ಟು ಬಳಕೆದಾರರು ಇದ್ದಾರೆ, ಅದರಲ್ಲಿ ಮನೆಗಳೆಷ್ಟು, ಕಮರ್ಶಿಯಲ್ ಎಷ್ಟು, ಹಿಂದಿನ ಬಿಲ್ ಪೆಂಡಿಂಗ್ ಇದೆಯಾ, ಕ್ಲಿಯರ್ ಆಗಿದೆಯಾ ಅಂತಾ ಸರ್ವೆ ಮಾಡಬೇಕು. ಪ್ರೀ ಕರೆಂಟ್ ಬೇಕಾದವರಿಂದ ಅರ್ಜಿ  ಕರೀಬೇಕು. ಬಜೆಟ್ ಅಲೋಕೇಟ್ ಮಾಡಬೇಕು. ಹಣ ಹೊಂದಿಸಿಕೊಳ್ಳಬೇಕು. ಇಷ್ಟೆಲ್ಲಾ ಆದಮೇಲೆ ಪ್ರೀ ಕರೆಂಟ್ ಕೊಡಬೇಕು

 

ಪಾರು : ಇಷ್ಟೆಲ್ಲಾ ರೀತಿ ನೀತಿ ಅದಾವಾ.. ಹಂಗಾದ್ರೆ ಈಗಲೇ ಪ್ರೀ ಕರೆಂಟ್ ಸಿಗೂದಿಲ್ಲಾ..?

 

ಸೀನ : ಅಲ್ಲಾ ಕಣಮ್ಮಿ, ಕೇಂದ್ರ ಸರಕಾರದವರು ಗ್ಯಾಸ್ ಸಬ್ಸಿಡಿ ರದ್ದು ಗೊಳಿಸಿದ್ರು, ತಿಂಗಳಿಗೊಮ್ಮೆ ರೇಟ್ ಏರ್ಸಿದ್ರು, ಆಗ ಏನೂ ಕೇಳಿಲಿಲ್ಲ ನೀನು. ಈಗ್ಯಾಕೆ ಗ್ಯಾರಂಟಿ ಗ್ಯಾರಂಟಿಯಾಗಿ ಬೇಕೇ ಬೇಕು ಅಂತೀಯಾ

 

ಪಾರು : ಅವ್ರ ಮಾತು ಬಿಡ್ರಿ. ಸರಕಾರ ಇರೋದೇ ಸುಳ್ಳು ಹೇಳೋಕೆ. ಆದ್ರೆ ಸಿದ್ರಾಮಣ್ಣನವರು ಹಿಂದೆ ಭಾಗ್ಯಗಳನ್ನ ಕೊಟ್ಟು ನಮ್ಮಂತಾ ಬಡವರಿಗೆ ಅನುಕೂಲ ಮಾಡಿಕೊಟ್ರು. ಈಗಲೂ ನೋಡ್ತಾ ಇರಿ ಕೊಟ್ಟ ಮಾತು ಉಳಿಸಿಕೊಳ್ತಾರೆ. ಆದರೆ ಪ್ರೀ ಕರೆಂಟ್ ಈಗಲೇ ಕೊಡೋಕೇನ್ರಿ..

 

ಸೀನ : ಸಿಗುತ್ತೆ.. ಸಿಕ್ಕೆ ಸಿಗುತ್ತೆ. ಈಗಲೇ ಅಂದ್ರೆ ಆಗೂದಿಲ್ಲ. ಈಕೂಡಲೇ ಅಂದ್ರೆ ಸಿಕ್ಕೂದಿಲ್ಲ ಸುಮ್ಕಿರುಒಂದು ಮನೆಗೆ ಕರೆಂಟ್ ಕನೆಕ್ಷನ್ ತಗೊಳ್ಳೊದಿಕ್ಕೆ ತಿಂಗಳಾನುಗಂಟಲೇ ಸುತ್ತಬೇಕುಅಂತಾದ್ರಲ್ಲಿ ಕೋಟ್ಯಾಂತರ ಮನೆಗಳಿಗೆ ಉಚಿತ ವಿದ್ಯುತ್ ಕೊಡಬೇಕಂದರೆ, ಅದೂ ನಿಂತ ಕಾಲ ಮೇಲೆ ಆಗಬೇಕಂದ್ರ ಹೆಂಗಾದೀತು, ಸ್ವಲ್ಪ ಪ್ರ್ತಾಕ್ಟಿಕಲ್ ಆಗಿ ಯೋಚನೆ ಮಾಡು ಚಿನ್ನಾ..

 

ಪಾರು : ಹೌದಲ್ವಾ, ಮತ್ತೆ ವಿರೋಧ ಪಕ್ಷದವರು ಈಗಲೇ ಕೊಡಿ ಅಂತಾ ಬಾಯಿ ಬುಡ ಬಡಕೋತಿದ್ದಾರಲ್ರೀ..

 

ಸೀನ : ಅವರ ಕೆಲಸವೇ ಅದು. ಅವರ ಸರಕಾರ ಇದ್ದಾಗ ಅದೇನು ಕಡದು ಕಟ್ಟೆ ಹಾಕಿದ್ರು ಹೇಳು. ಕೊಟ್ಟ ಮಾತು ಎಷ್ಟು ನಡೆಸಿಕೊಟ್ರು ಹೇಳು. ಅಲ್ಲಲೆ 9 ವರ್ಷದ ಹಿಂದೆ ತಲಾ 15 ಲಕ್ಷ ಕೊಡ್ತಾರಂತ ಕುಣಿದಾಡ್ಕೊಂಡು ಓಟಾಕಿದ್ಯಲ್ಲಾ ಇಲ್ಲಿವರೆಗೂ  ಕೊಟ್ರಾ. ಹೋಗಲಿ ವರ್ಷಕ್ಕೆ  2 ಕೋಟಿ ಉದ್ಯೋಗ ಕೊಡ್ತೀವಿ ಅಂದಿದ್ರಲ್ಲಾ ಸಿಕ್ತಾತನಗೂ ಒಂದು ಉದ್ಯೋಗ ಸಿಗುತ್ತೆ ಅಂತಾ ನಿನ್ಮ ತಮ್ಮ ಊರ ಜನರ ಓಟು ಒತ್ತಿಸಿದ್ದನಲ್ಲಾ ಯಾರಿಗಾದರೂ ಉದ್ಯೋಗ ಸಿಕ್ತಾ. ಇಲ್ಲಾ ಹೌದಲ್ಲೊ. ಮತ್ತೆ ಯಾವ ಮಾರಿ ಇಟ್ಕೊಂಡು ಗ್ಯಾರಂಟಿ ಕೊಡಿ ಅಂತಾ ಹೂಪಕ್ಷದವರು ಕೇಳ್ತಾರ.. ಅವರಿಗೆ ಸ್ವಲ್ಪರ ಮಾನ ಮರ್ಯಾದಿ ಐತೇನು

 

ಪಾರು : ನೀವೇಳುದ್ರಾಗೂ ಪಾಯಿಂಟ್ ಐತ್ರಿ.‌ ಅಂದ್ರ ಪ್ರೀ ಕರೆಂಟ್ ಸಿಗೂದು ಇನ್ನೂ ಲೇಟಾಗುತ್ತಂದಗಾತು

 

ಸೀನ : ದೇಶದೊಳಗ ಹೇಳಿದ್ ಕೂಡಲೇ ಏನೂ ಆಗೂದಿಲ್ಲಾ ನಿಂಗಿ. ಸ್ವಲ್ಪ ದಿನ ಕಾಯೂನಂತ. ಆಮೇಲೂ ಹೇಳಿದ ಮಾತು ಉಳಿಸಿಕೊಳ್ಳದಿದ್ರ ಬೀದಿಗಿಳಿದು ಕೇಳೂನಂತ. ಅಲ್ಲಿವರೆಗೂ ಸಹನೆ ತಾಳ್ಮೆ ಇರಲಿ.

 

ಪಾರು : ಮತ್ತೆ ನ್ಯೂಜ್ ಚಾನೆಲ್ ನವರು ಈಗಲೇ ಗ್ಯಾರಂಟಿ ಕೊಡಲೇಬೇಕು ಅಂತಾ ಹಗಲು ರಾತ್ರಿ ಬುಲಿಟಿನ್ ಬಿಡ್ತಾ ಇದ್ದಾರಲ್ಲಾ, ಚರ್ಚೆ ಮೇಲೆ ಚರ್ಚೆ  ಇದ್ದಾರೆ. ಅವರಿಗೆ ತಾಳ್ಮೆ ಸಹನೆ ಇಲ್ವಾ.

 

ಸೀನ : ಅವು ಎಲ್ಲಾ ಮಾರಿಕೊಂಡ ಮಾಧ್ಯಮಗಳು ಕಣೆ, ತಮ್ಮ ಧನಿಗಳ ಸೋಲಿನಿಂದ ಕಂಗೆಟ್ಟು ಕೂಗ್ತಿದ್ದಾವೆ. ಸಾಕಿದವರ ಋಣ ತಿರಸಾಕಬೇಕಲ್ಲಾ. ಅದಕ್ಕೆಲ್ಲಾ ನೀ ತಲಿ ಕೆಡಿಸ್ಕೋ ಬೇಡಾ. ಇಷ್ಟು ದಿನಾನೇ ಹಂಗೂ ಹಿಂಗೂ ಬಾಳುವೆ ಮಾಡಿದ್ದೀವಿ. ಇನ್ನೂ ಸ್ವಲ್ಪ ದಿನ ತಡಕೋ. ನೋಡೂಣಂತ

 

ಈರಣ್ಣ : ಅಕ್ಕಾ.. ನಾಳೆ ಬೆಳಿಗ್ಗೆ  ಸಂದರ್ಶನಕ್ಕ ಹೋಗಬೇಕು ಐನೂರು ರೂಪಾಯಿ ಇದ್ರೆ ಕೊಡಕ್ಕಾ, ನನ್ನ ನಿರುದ್ಯೋಗ ಬತ್ಯೆ ಸರಕಾರ ಕೊಟ್ಟ ತಕ್ಷಣ ವಾಪಸ್ ಕೊಡ್ತೀನಿ.

 

ಪಾರು : ಆಯ್ತು ತಗೊಳ್ಳೊ ಈರ. ಹೇಗಾದರೂ ಮಾಡಿ ಉದ್ಯೋಗ ಹುಡುಕಿ ನಿನ್ನ ಕಾಲ ಮ್ಯಾಗ ನೀ ನಿಲ್ಲು ಸಾಕು.

 

ಅತ್ತೆ : ನನ್ನ ಶುಗರ್ ಮಾತ್ರೆ ತರಿಸಿಕೊಡೇ ಪಾರು, ಯಾಕೋ ತ್ರಾಸಾಗ್ತಾ ಐತೆ

 

ಪಾರು : ಆಯ್ತು ಅತ್ತೆ. ಮುಂದಿನ ತಿಂಗಳಿಂದ ಸರಕಾರ ಎರಡು ಸಾವಿರ ರೂಪಾಯಿ ಕೊಡುತ್ತಂತೆ. ಇನ್ಮೆಲೆ ಅವರಿವರ ಹತ್ರ ಸಾಲಾ ಮಾಡಿ ಆಸ್ಪತ್ರೆಗೆ ಹೊಗೋದು ಬೇಡಾ, ಔಷಧಿ ತರೋದು ಬೇಕಾಗೋದಿಲ್ಲ. ಬಸ್ ಚಾರ್ಜ್ ಕೂಡಾ ಹೆಣ್ಮಕ್ಕಳು ಕೊಡಬೇಕಾಗಿಲ್ಲ

 

ಅತ್ತೆ : ಅಯ್ಯೋ ಅಷ್ಟಾದ್ರೆ ಸಾಕು ಬಡಜನರು ಬದುಕ್ತೀವಿ

 

ಪಾರು : ಪ್ರತಿ ತಿಂಗಳು ತಲಾ ಹತ್ತತ್ತು ಕೆಜಿ ಅಕ್ಕಿ ಕೂಡಾ ಪ್ರೀ ಕೊಡ್ತಾರಂತೆ ಅತ್ತೆ. ಇನ್ಮೇಲೆ ಹೊಟ್ಟೆ ತುಂಬಾ ತಿನ್ನಬಹುದು. ಉಳಿದ್ ಅಕ್ಕಿ ಮಾರಿ ಬೇಳೆ ಕಾಳು ಕೊಳ್ಳಬಹುದು

 

ಅತ್ತೆ : ಹೌದಾ.. ನಡಿ ಮತ್ತೆ ರೇಶನ್ ಅಂಗಡಿಗೆ ಹೋಗಿ ಅಕ್ಕಿ ತರೋಣಂತೆ.

 

ಸೀನ : ಹೂಂ ಅಂದ ತಕ್ಷಣ ಕೂಸು ಹೆರೋದಕ್ಕೆ ಆಗುತ್ತೇನವ್ವಾ. ಇರು.. ಕೊಡೋವರೆಗೂ ಕಾಯೋಣಂತೆ

 ಇಷ್ಟು ದಿನಾ ಬಾದೆ ಪಟ್ಟಕೊಂಡೇ ಬದುಕಿಲ್ವಾ. ಇನ್ನೊಂದು ಸ್ವಲ್ಪ ದಿನ ಇರು..

 

ಪಾರು : ಆಯ್ತು ಬಿಡ್ರಿ. ಚಾ ತರ್ತೇನಂತೆ ಇರ್ರಿ.

 

ಸೀನ : ಪ್ರೀ ಗ್ಯಾರಂಟಿ ಮೇಲೆ ಎಷ್ಟೊಂದು ಬಡಜನರ ಬದುಕು ಬೆಳಕಾಗುವುದು. ಹೊಟ್ಟೆ ತುಂಬಿದವರಿಗೇನು ಬಿಡಿ, ಪ್ರೀ ಕೊಟ್ರೆ ಜನ ಆಲಸಿಗಳಾಗ್ತಾರೆ, ದುಡಿಯೋದಕ್ಕೆ ಜನ ಸಿಗೋದಿಲ್ಲಾ" ಅಂತಾ ಆರೋಪ ಮಾಡ್ತಾನೇ ಇರ್ತಾರೆ. ಆದರೆ ನಮ್ಮನೇಲಿ ಹಿಟ್ಟಿಲ್ಲದಾಗ ಯಾರಾದ್ರೂ ಒಂದು ಸೇರು ಅಕ್ಕಿ ಕೊಡ್ತಾರಾ? ಕೆಲಸ ಇಲ್ಲದೇ ಖಾಲಿ ಕೂತಾಗ ಯಾರಾದ್ರೂ ಕರದ್ ಕೆಲ್ಸಾ ಕೊಡ್ತಾರಾ. ನೀವೇ ಹೇಳಿ, ಸರಕಾರಿ ನೌಕರದಾರರಿಗೆ, ಕೆಲಸದ ಗ್ಯಾರಂಟಿ, ತಿಂಗಳ ಸಂಬಳ, ರಜೆ ರಜೆ ಅಂತೆಲ್ಲಾ ಇರುತ್ತೆ ಅಲ್ವಾ. ದುಡಕೊಂಡು ತಿನ್ನೋ ಜನರ ಬದುಕಿಗೆ ಏನೈತೆ ಗ್ಯಾರಂಟಿ. ಸಿದ್ದರಾಮೇಶ್ವರ ಗ್ಯಾರಂಟಿಗಳನ್ನ ಆದಷ್ಟು ಬೇಗ ಗ್ಯಾರಂಟಿಯಾಗಿ ಕೊಡು ತಂದೆ. ಅಷ್ಟು ಮಾಡಿದ್ರೆ ಲೋಕಸಭಾ ಚುನಾವಣೆಯಲ್ಲಿ ಕಪ್ಪು ನಿಮ್ದೆ..

 

 

*- ಶಶಿಕಾಂತ ಯಡಹಳ್ಳಿ..*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ