ಕನ್ನಡಿಯೊಳಗಿನ ಸತ್ಯ (ಪ್ರಹಸನ-16)

 (ಪ್ರಹಸನ-16)

ಕನ್ನಡಿಯೊಳಗಿನ ಸತ್ಯ   

(ಕಮಲದ ನಾಯಕ ತನ್ನ ಪಕ್ಷದ ಕಚೇರಿಯ ನಿಲುವು ಕನ್ನಡಿ ಮುಂದೆ ನಿಂತು ಕೈಪಕ್ಷಕ್ಕೆ ಕೇಳಬಹುದಾದ ಪ್ರಶ್ನೆಗಳ ಕುರಿತು ರಿಹರ್ಸಲ್ ಮಾಡ್ತಾ ಇದ್ದರು. ಆದರೆ ಇವರು ಒಂದು ಪ್ರಶ್ನೆ ಕೇಳಿದರೆ ಕನ್ನಡಿಯೊಳಗಿಂದ ಇನ್ನೊಂದು ಪ್ರಶ್ನೆ ವಾಪಸ್ ಕೇಳಿಬರುತ್ತಿತ್ತು. ಅದು ಹೇಗಪ್ಪಾ ಅಂದ್ರೆ)

 

ಕಮಲ ನಾಯಕ : ಅಯ್ಯೋ ಇದು ಅನ್ಯಾಯಾ.. ಭರವಸೆ ಕೊಟ್ಟಂತೆ 200 ಯುನಿಟ್ ಕರೆಂಟ್ ಪ್ರೀ ಇನ್ನೂ ಯಾಕೆ ಕೊಟ್ಟಿಲ್ಲ?

 

ಕನ್ನಡಿ : ಕೊಡಬಹುದು. ಆದರೆ ವಿದೇಶದಿಂದ ಕಪ್ಪು ಹಣ ತಂದು ದೇಶವಾಸಿಗಳೆಲ್ಲರ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂತಾ ನೀವು ಹೇಳಿದ್ರಲ್ಲಾ ಹಾಕಿದ್ರಾ?

 

ಕಮಲ ನಾಯಕ : ಅದು ಹೋಗಲಿ, ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಉಚಿತವಾಗಿ ಕೊಡ್ತೇನೆ ಅಂದ್ರು ಕೊಟ್ರಾ..?

 

ಕನ್ನಡಿ : ಇನ್ನೂ ಕೊಟ್ಟಿಲ್ಲಾ, ಕೊಡ್ತಾರೆ. ನೀವು ರೈತರ ಆದಾಯ ದುಪ್ಪಟ್ಟು ಮಾಡ್ತೇನೆ ಅಂತಾ ಹೇಳಿದ್ರಲ್ಲಾ ಮಾಡಿದ್ರಾ

 

ಕಮಲ ನಾಯಕ : ತೊ ಥೋ.. ಮೋಸ.. ಇದು ಮಹಾ ಮೋಸ..  ನಿರುದ್ಯೋಗ ಬತ್ತೆ ಕೊಡ್ತೇನೆ ಅಂದಿದ್ರಿ ಕೊಡದೇ ಮೋಸ ಮಾಡಿದ್ದು ಮಹಾ ಮೋಸ.

 

ಕನ್ನಡಿ : ಕೊಡದಿದ್ದಾಗ ಮೋಸ. ಆದರೆ ನೀವು ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಅಂತಾ ಹೇಳಿ ಒಂದಲ್ಲಾ ಒಂಬತ್ತು ವರ್ಷ ಆಯ್ತಲ್ಲಾ ಎಲ್ಲಿದೆ ಉದ್ಯೋಗ ಸೃಷ್ಟಿ. ಪಕೋಡಾ ಮಾರಿ ಎಂಬುದೇ ನಿಮ್ಮ ದೂರದೃಷ್ಟಿ.

 

ಕಮಲ ನಾಯಕ : ಚೆ ಛೆಛೆ. ದ್ರೋಹ, ನಂಬಿಕೆ ದ್ರೋಹ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಆಶ್ವಾಸನೆ ಕೊಟ್ಟಿದ್ದೀರಲ್ಲಾ ಯಾಕೆ ಜಾರಿಗೆ ಮಾಡಿಲ್ಲ. ಇದು ಅತೀ ದೊಡ್ಡ ನಂಬಿಕೆದ್ರೋಹ.

 

ಕನ್ನಡಿ : ಇಂದಲ್ಲಾ ನಾಳೆ ಜಾರಿ ಮಾಡಿದರೂ ಮಾಡಬಹುದು. ಆದರೆ.. ಬಡವರಿಗೆ ಉಚಿತ ಸಿಲಿಂಡರ್ ಯೋಜನೆ ಅಂದ್ರಿ, ಇರುವ ಸಬ್ಸಿಡಿ ಸ್ವಾಹಾ ಮಾಡಿದ್ರಿ. ಐನೂರು ರೂಪಾಯಿ ಗ್ಯಾಸ್ ಸಿಲಿಂಡರ್ ಸಾವಿರದಿನ್ನೂರು ರೂಪಾಯಿ ಮಾಡಿದ್ರಿ. ಇದು ನಂಬಿಕೆ ದ್ರೋಹ ಅಲ್ಲವಾ

 

ಕಮಲ ನಾಯಕ : ಚೇ ಏನನ್ಯಾಯಾ? ಎಲ್ಲಿದೆ ನ್ಯಾಯಾ? ಪ್ರತಿ ತಿಂಗಳು ತಲಾ ಹತ್ತು ಕೆಜಿ ಉಚಿತ ಅಕ್ಕಿಯನ್ನ ಖಚಿತವಾಗಿ ಕೊಡ್ತೇನೆ ಅಂತಾ ಹೇಳಿದವರು ಇಲ್ಲಿವರೆಗೂ ಯಾಕೆ ಕೊಟ್ಟಿಲ್ಲಾ? ಅನ್ಯಾಯ ಕೇಳುವವರು ಯಾರೂ ಇಲ್ವಾ

 

ಕನ್ನಡಿ : ಇದ್ದಾರೆ, ಕೇಳೇ ಕೇಳ್ತಾರೆ. ಬಡವರ ಉಚಿತ ಅಕ್ಕಿ ಭಾಗ್ಯ ನೀವು ಯಾಕೆ ಕಡಿತ ಮಾಡಿದ್ರೀ ಅಂತಾ ನಿಮ್ಮನ್ನ ಕೇಳೇ ಕೇಳ್ತಾರೆ.   ಕೂಲಿ ಕಾರ್ಮಿಕರ ಹಸಿವಿಗೆ ದಾರಿಯಾದ ಇಂದಿರಾ ಕ್ಯಾಂಟೀನ್ಗಳನ್ನ ಯಾಕೆ ಮುಚ್ಚಿಸಿದ್ರಿ ಅಂತಾನೂ ಕೇಳ್ತಾರೆ. ಮುನ್ನೂರು ಅನ್ನಪೂರ್ಣ ಕ್ಯಾಂಟೀನ್ ಆರಂಭಿಸ್ತೀರಿ ಅಂತಾ ಭರವಸೆ ಕೊಟ್ಟು ಯಾಕೆ ಒಂದನ್ನೂ ಶುರುಮಾಡಿಲ್ಲಾ ಅನ್ನೋದನ್ನೂ ಕೇಳ್ತಾರೆ.. ಉತ್ತರ ಇದೆಯಾ ನಿಮ್ಮ ಹತ್ರ.

 

ಕಮಲ ನಾಯಕ : ನಾವಿರೋದೆ ಪ್ರಶ್ನೆ ಕೇಳೋಕೆ, ಉತ್ತರಿಸೋಕಲ್ಲಾ.. ಎಲ್ಲಿ ಎಲ್ಲಿ ಗ್ಯಾರಂಟಿಗಳು. ಮೊದಲು ಜಾರಿ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ.

 

ಕನ್ನಡಿ : ಹೌದು, ಎಲ್ಲಿ  ನಿಮ್ಮ ಅಚ್ಚೇ ದಿನ್ಎಲ್ಲಿ ರೈತರ ಸಾಲ ಮನ್ನಾ, ಎಲ್ಲಿ ಎಲ್ಲರಿಗೂ ಮನೆ? ಯಾವಾಗ ಕೊಟ್ರಿ, ಯಾರಿಗೆ ಕೊಟ್ರಿ? ಕೊಟ್ಟಿಲ್ಲಾ ಅಂದ್ರೆ ಬೇರೆಯವರನ್ನ ಕೇಳೋಕೆ ನಾಚಿಕೆ ಆಗೋದಿಲ್ವಾ? ನಿಮಗೆ ಮಾನ ಮರ್ಯಾದೆ ಏನಾದ್ರೂ ಇದೆಯಾ

 

ಕಮಲ ನಾಯಕ : ಅವರು ಸುಳ್ಳು ಭರವಸೆ ಕೊಟ್ಟು ದ್ರೋಹ ಮಾಡಿದ್ದಾರೆ

 

ಕನ್ನಡಿ : ನೀವೂ ಸುಳ್ಳು ಭರವಸೆ ಕೊಟ್ಟು ಮಹಾದ್ರೋಹ ಮಾಡಿದ್ದೀರಿ.

 

ಕಮಲ ನಾಯಕ : ಗ್ಯಾರಂಟಿ ಕೊಡ್ತೀವಿ ಅಂತಾ ಹೇಳಿದ ಕೈಪಕ್ಷದವರು ಜನರಿಗೆ ಕೈ ಕೊಟ್ಟಿದ್ದಾರೆ.

 

ಕನ್ನಡಿ : ಅಚ್ಚೆ ದಿನ್ ತರ್ತೇವೆ ಅಂತಾ ಹೇಳಿದ ಕಮಲ ಪಕ್ಷದವರು ಜನರ ಕವಿಗೆ ಹೂ ಮುಡಿಸಿದ್ದಾರೆ.

 

ಕಮಲ ನಾಯಕ : ಯಾರಲ್ಲಿ.. ನಮ್ಮ ಕಚೇರಿಯ ಕನ್ನಡಿ ನನ್ನ ವಿರುದ್ದವೇ ಮಾತಾಡ್ತಿದೆ..

 

ಆಪ್ತ ಸಹಾಯಕ : ಅದು.. ಅದು.. ಕೈಪಕ್ಷದ ನಾಯಕರು ಬಳಸ್ತಾ ಇದ್ದ ಕನ್ನಡಿ ಯಜಮಾನ್ರೆ. ನೋಡಲು ಚೆನ್ನಾಗಿತ್ತು ಅಂತಾ ನಿಮ್ಮ ಕಚೇರಿಯಲ್ಲಿ ಹಾಕಿದ್ದೇವೆ

 

ಕಮಲ ನಾಯಕ : ಮೊದಲು  ಸತ್ಯ ಹೇಳುವ ಅನಿಷ್ಟವನ್ನು ತೆಗೆದು ಬಿಸಾಕು. ಸುಳ್ಳು ಹೇಳುತ್ತಿದ್ದ ಮೊದಲಿನ ಕನ್ನಡಿಯನ್ನ ತಂದಿಲ್ಲಿ ತಗಲಾಕು

 

ಸಹಾಯಕ : ನಿಮ್ಮ ಸುಳ್ಳುಗಳ ಭಾರಕ್ಕೆ ಕನ್ನಡಿ ತಾನಾಗೇ ಒಡೆದು ಚೂರಾಯ್ತು ಯಜಮಾನರೆ. ಕಸದ ತೊಟ್ಟಿಗೆ ಹಾಕಿದ್ದಾಯ್ತು.

 

ಕಮಲ ನಾಯಕ : ನಾನು ಆದೇಶಿಸುತ್ತೇನೆ. ಇನ್ನು ಮೇಲೆ ನಮ್ಮ ಪಕ್ಷದ ಕಛೇರಿಗಳಲ್ಲಿ, ನಾಯಕರ ಮನೆಗಳಲ್ಲಿ ಸತ್ಯವನ್ನು ತೋರುವ ಯಾವುದೇ ಕನ್ನಡಿ ಇರಕೂಡದು. ಎಲ್ಲಾ ಕನ್ನಡಿಗಳನ್ನೂ ಕೂಡಲೇ ನಾಶಗೊಳಿಸಿ. ಅವುಗಳ ಬದಲಾಗಿ ಎಲ್ಲಾ ಕಡೆ  ಸುಂದರ ಸುಳ್ಳುಗಳನ್ನು ತೋರಿಸುವ ಟಿವಿ ಪರದೆಗಳನ್ನು ಅಳವಡಿಸಿ.

 

ಸಹಾಯಕ : ಆಯಿತು ಯಜಮಾನ್ರೆ. ಎಲ್ಲಾ ನೀವು ಹೇಳಿದಂಗೆ ಆಗಲಿ. ಆದರೆ ಕೊಟ್ಯಾಂತರ ಜನರ ಕಣ್ಣುಗಳೂ ಕನ್ನಡಿಯ ಹಾಗೆ ಪ್ರತಿಫಲಿಸುತ್ತಾ ಕುರೂಪವನ್ನು ಪ್ರಶ್ನಿಸುತ್ತವೆಯಲ್ಲಾ ಅವುಗಳಿಗೇನು ಮಾಡುವುದು?

 

ಕಮಲ ನಾಯಕ : ಕಣ್ಣುಗಳಿಗೆಲ್ಲಾ ಮಂಕು ಬೂದಿ ಎರಚಿರಿ. ಜಾತಿ ಧರ್ಮ ದೇವರುಗಳ ಮಿಶ್ರಣ ಅರೆದು ಕಣ್ಣುಗಳಿಗೆ ಸುರಿಯಿರಿ. ಧರ್ಮದ್ವೇಷದ ಕಿಡಿಗಳನ್ನು ಪ್ರತಿ ಕಣ್ಣುಗಳಲ್ಲಿ ಹುಟ್ಟು ಹಾಕಿರಿ. ಎಲ್ಲರ ಕಣ್ಣುಗಳ ತುಂಬಾ ಸನಾತನ ಸಂಸ್ಕೃತಿಯ ಮನುಸ್ಮೃತಿಯ ಭ್ರಮೆಗಳನ್ನು  ಬಿತ್ತಿ ಬಿಡಿ. ಪ್ರತಿಯೊಬ್ಬರ ಕಣ್ಣುಗಳ ಮುಂದೆ ಕೇಸರಿ ಕನ್ನಡಕವನ್ನು ಖಡ್ಡಾಯವಾಗಿ ಅಳವಡಿಸಿ. ಆಗ ಅದು ಹೇಗೆ ಜನರ ಕಣ್ಣುಗಳಲ್ಲಿ ಪ್ರಶ್ನೆಗಳು ಏಳುತ್ತವೆ ಎಂದು ನಾನೂ ನೋಡುವೆ? ಅಷ್ಟಕ್ಕೂ ಪ್ರಶ್ನಿಸುವ ಕಣ್ಣು ಕನ್ನಡಿಗಳು ಅಲ್ಲಲ್ಲಿ ಉಳಿದರೆ ಧರ್ಮದ್ರೋಹಿ ಕಣ್ಣುಗಳನ್ನು ನಾಶಪಡಿಸಿ. ದೇಶದ್ರೋಹದ ಆರೋಪದಲ್ಲಿ ಬಂಧಿಸಿ. ಕಮಲದ ವಿರುದ್ದ ಕಿಡಿ ಕಾರುವ ಕಣ್ಣುಗಳನ್ನೇ ನಂದಿಸಿ. ಇದೇ ನಮ್ಮ ಭವ್ಯ ಭವಿಷ್ಯದ ಅಜೆಂಡಾ.. ಪ್ರತಿಯೊಬ್ಬರ ಕಣ್ಣುಗಳಲ್ಲಿ ಹಾರುತಿರಲಿ ಕೇಸರಿ ಜಂಡಾ. ಕೇಸರಿಯೇ ಸತ್ಯ, ಕಮಲವೇ ನಿತ್ಯ. ಜೈ ಸಾವರ್ಕರೇಶ್ವರ

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ