ಧರ್ಮೋರಕ್ಷತಿ ಪ್ರಹಸನ (ಪ್ರಹಸನ-17)

 (ಪ್ರಹಸನ-17)

ಧರ್ಮೋರಕ್ಷತಿ  ಪ್ರಹಸನ   

***************************

 

ಕಮಲಾಂಗಿ : ನಾವು ಅಧಿಕಾರಕ್ಕೆ  ಬರದೇ ಹೋದರೆ ನಮ್ಮ ಹಿಂದೂ ದೇಶ ಇಸ್ಲಾಂ ರಾಷ್ಟ ಆಗುತ್ತದೆ. ಭಯೋತ್ಪಾದನೆ ಹೆಚ್ಚುತ್ತದೆ. ಎಚ್ಚರ ಎಚ್ಚರಾ..

 

ಮಾನವೀಯತೆ : ಆಮೇಲೆ

 

ಭಜರಂಗಿ : ಲವ್ ಜಿಹಾದ್ ಹೆಚ್ಚುತ್ತದೆ, ಮತಾಂತರ ಮಿತಿ ಮೀರುತ್ತದೆ. ಅತಂಕವಾದ ಅತಿಯಾಗುತ್ತದೆ. ಹುಷಾರೋ ಹುಷಾರು..

 

ಮಾನವೀಯತೆ : ಮುಂದೆ..

 

ಸಂಘಿ : ಹಿಂದೂ ಸಂಸ್ಕತಿಗೆ ದಕ್ಕೆ ಬರುತ್ತದೆ, ಹಿಂದೂ ಧರ್ಮಕ್ಕೆ ಅಪಾಯ ತಪ್ಪಿದ್ದಲ್ಲ.

 

ಮಾನವೀಯತೆ : ಹೌದಾ, ಮತ್ತೆ

 

ಭಜರಂಗಿ : ದೇವರ ಮೇಲೆ ಭಕ್ತಿ ನಶಿಸುತ್ತದೆ. ಹಿಂದುಗಳಿಗೆ ರಕ್ಷಣೆ ಇಲ್ಲವಾಗುತ್ತದೆ. ಹಿಂದೂಗಳ ಭಾವನೆ ಘಾಸಿಯಾಗುತ್ತದೆ.

 

ಮಾನವೀಯತೆ: ಇಷ್ಟೆಲ್ಲಾ ಆಗುವಷ್ಟು ಹಿಂದೂ ಧರ್ಮ ದುರ್ಬಲವಾಗಿದೆಯಾ

 

ಸಂಘಿ : ಹೌದು, ಹಿಂದುತ್ವ ಹಿಂದೆಂದಿಗಿಂತಲೂ ಈಗ ಅಪಾಯದಲ್ಲಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

 

ಮಾನವೀಯತೆ : ತನ್ನನ್ನು ತಾನು ರಕ್ಷಿಸಿಕೊಳ್ಳದ ಧರ್ಮ ದೇವರುಗಳು ಇದ್ದರೆಷ್ಟು, ಇರದಿದ್ದರೆಷ್ಟು

 

ಭಜರಂಗಿ : ಇಂತಹ ಧರ್ಮದ್ರೋಹಿಗಳನ್ನು ಹೊಡೆದು ಹಾಕಿ.

 

ಕಮಲಾಂಗಿ : ರೀತಿಯ ದೈವದ್ರೋಹಿಗಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ.

 

ಸಂಘಿ : ಇಂತಹ ಪಾಷಂಡಿಗಳನ್ನು ನರಕಕ್ಕಿಳಿಸಿ ನಾಲಿಗೆ ಸೀಳಿಸಿ.

 

ಮಾನವೀಯತೆ : ಹೋ.. ಶಾಂತಿ, ಶಾಂತಿ. ಈಗ ನೀವು ಮಾಡ್ತಿರೋದೇ ಹೆದರಿಸುವ ಕೆಲಸ, ಅಂದರೆ ಭಯ ಹುಟ್ಟಿಸುವ ಕೃತ್ಯ, ಅರ್ಥಾತ್ ಭಯೋತ್ಪಾದನೆ

 

ಕಮಲಾಂಗಿ : ಇಂತಹ ದೇಶದ್ರೋಹಿಗಳನ್ನು ಕಾರಾಗ್ರಹಕ್ಕೆ ತಳ್ಳಿ.

 

ಮಾನವೀಯತೆ : ಇದಕ್ಕೆ, ರೀತಿ ನೀವು ಆತಂಕ ಹುಟ್ಟಿಸೋದಕ್ಕೆ ನಿಮಗೂ ಆತಂಕವಾದಿಗಳು ಅನ್ನೋದು

 

ಸಂಘಿ : ಇವನು ನಗರ ನಕ್ಸಲ್, ಹೊಡೆದು ಓಡಿಸಿ

 

ಭಜರಂಗಿ : ಇವನು ಧರ್ಮದ್ರೋಹಿ, ಹಿಡಿದು ನಿಂದಿಸಿ

 

ಕಮಲಾಂಗಿ : ಈತ ಕಮ್ಯೂನಿಸ್ಟಾ.. ಈತನನ್ನು ದೇಶಾಂತರಗೊಳಿಸಿ

 

ಸಂಘಿ : ಇಂತವರು ಅತ್ಯಂತ ಅಪಾಯಕಾರಿ, ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳಿಸಿ.

 

ಮಾನವೀಯತೆ : ಇದೇ.. ಇದಕ್ಕೇನೇ ಭಯೋತ್ಪಾದನೆ ಅನ್ನೋದು, ಅದನ್ನೇ ನೀವು ಮಾಡ್ತಿರೋದು. ಮಾಡುತ್ತಾ ಬಂದಿರೋದು. ನಾನು ನಕ್ಸಲ್ ಅಲ್ಲಾ, ಯಾವುದೇ ಜಾತಿ ಧರ್ಮದ ಪರವೂ ಅಲ್ಲಾ, ವಿರೋಧಿಯೂ ಅಲ್ಲಾ. ದೈವದ್ರೋಹಿಯಂತೂ ಮೊದಲೇ ಅಲ್ಲಾ. ನಾನು ಮತಾಂಧ ಮನುವಾದಿಯಲ್ಲಾ ಮಾನವೀಯತಾವಾದಿ, ಧರ್ಮ ಜಾತಿಗಳನ್ನು ಮೀರಿ ಮನುಷ್ಯರನ್ನು ಮನುಷ್ಯರನ್ನಾಗಿ ಪ್ರೀತಿಸುವ ಜೀವಿ.

 

ಸಂಘಿ : ಹಿಡೀರೋ ಇವನನ್ನು.

 

ಕಮಲಾಂಗಿ : ಹೊಡೀರೋ ಅವನನ್ನು.

 

ಭಜರಂಗಿ : ಬಿಡಬೇಡಿ ಸಾಯಿಸ್ರೋ ದುಷ್ಟನನ್ನ. ಯಾರಲೇ ನೀನು

 

ಮಾನವೀಯತೆ: .. ಸುಮ್ಕಿರ್ರೋ ಕಂಡಿದ್ದೀನಿ. ಧರ್ಮದ ಹೆಸರಲ್ಲಿ ನಿಮ್ಮ ಶತಶತಮಾನಗಳ ಕ್ರೌರ್ಯವನ್ನ ಅನುಭವಿಸಿದ್ದೀನಿ. ನಿಮ್ಮ ಜಾತಿ ಧರ್ಮ ಕುಲ ಮತಗಳ ಶ್ರೇಷ್ಟತೆಯ ಬೆಂಕಿಯಲ್ಲಿ ಬೆಂದಿದ್ದೀನಿ. ನನಗೆ ಜಾತಿ ಇಲ್ಲ, ಧರ್ಮವಿಲ್ಲ, ಮೌಢ್ಯಗಳಿಲ್ಲ, ಹುಸಿ ನಂಬಿಕೆಗಳ ಜಾಢ್ಯಗಳಿಲ್ಲ. ಯಾಕೆಂದರೆ ನಾನು ಮನುಷ್ಯ. ಅಪ್ಪಟ ಮಾನವೀಯತೆ ಇರುವ ಮನುಷ್ಯ. ನಿಮ್ಮ ಕ್ರೌರ್ಯ ದೌರ್ಜನ್ಯ ಶೋಷಣೆ ಎಲ್ಲವುಗಳನ್ನೂ ಕಾಲಕಾಲಕ್ಕೆ ಮೆಟ್ಟಿ ನಿಂತು ಪ್ರೀತಿ ಹಂಚುವ ಮನುಷ್ಯ. ನಾನು ಮಾನವೀಯತೆ..

 

ಸಂಘಿ : ಹೋ ಮನುಷ್ಯನಂತೆ, ಹಿಂದುತ್ವ ಇಲ್ಲದ ಮೇಲೆ ನೀನಿದ್ದರೂ ಸತ್ತಂತೆ.

 

ಭಜರಂಗಿ : ಹಿಂದೂ ಸಂಸ್ಕೃತಿ ಗೊತ್ತಿಲ್ಲವಾದರೆ ನಿನ್ನ ಬದುಕೆ ವ್ಯರ್ಥ.

 

ಕಮಲಾಂಗಿ : ಅನ್ಯ ಧರ್ಮಗಳ ದ್ವೇಷಿಸದೇ ಹೋದರೆ ನೀನಿರೋದೇ ಅನರ್ಥ.

 

ಮಾನವೀಯತೆ: ಹಾಗಾದರೆ ಇಲ್ಲಿ ಕೇಳಿ.. ನಾನು ಹಿಂದೂ ಅಲ್ಲಾ, ಹಿಂದುತ್ವವಾದಿಯೂ ಅಲ್ಲಾ. ಯಾವ ಜಾತಿ ಧರ್ಮದ ಅಡಿಯಾಳೂ ಅಲ್ಲಾ, ಸರ್ವ ಜನಾಂಗದ ಶಾಂತಿಯ ತೋಟದಲಿ ನೆಮ್ಮದಿಯಾಗಿರಬೇಕೆನ್ನುವ ಮನುಷ್ಯ. ದ್ವೇಷ ಕಾರುವ ಧರ್ಮ, ತಾರತಮ್ಯ ಮಾಡುವ ದೇವರು, ಶೋಷಣೆ ಮಾಡುವ ಪುರೋಹಿತಶಾಹಿಗಳನ್ನು ವಿರೋಧಿಸುವ ಮನುಷ್ಯ. ನೀವು ಜನಮನದಲಿ ಬಿತ್ತಿದ ವಿಷದ ಬಿಜಗಳನ್ನು ಕಿತ್ತೆಸೆದು ಮಾನವೀಯ ಮೌಲ್ಯಗಳನ್ನು ಬೆಳೆಯುವ ಮನುಷ್ಯ.

 

ಸಂಘಿ : ಹೋ ಈತ ಕುಲಕಂಟಕ

 

ಭಜರಂಗಿ : ಹೌದು ಕುಲಪಾತಕ.

 

ಕಮಲಾಂಗಿ : ನಮ್ಮ ಜೊತೆ ಬದುಕುವುದಕ್ಕೆ ಅರ್ಹತೆ ಇಲ್ಲದ ಅಯೋಗ್ಯ

 

ಭಜರಂಗಿ : ಈಗ ಇಂತವರನ್ನು ಇಲ್ಲವಾಗಿಸಲು ಏನು ಮಾಡುವುದು?

 

ಸಂಘಿನಮ್ಮ ಕುಲಪುರೋಹಿತರನ್ನೇ ಕೇಳಿ

 

ಪುರೋಹಿತ : ಬುದ್ದನನ್ನು ಕೊಂದು ಬೌದ್ದಧರ್ಮವನ್ನ ದೇಶಾಂತರ ಮಾಡಿದವರು ಯಾರು

 

ಎಲ್ಲರೂ : ನಾವು

 

ಪುರೋಹಿತ : ಬಸವಣ್ಣನನ್ನು ಕೊಂದು ಲಕ್ಷಾಂತರ ಶರಣರನ್ನು ಹತ್ಯೆ ಮಾಡಿದವರು ಯಾರು?

 

ಎಲ್ಲರೂ : ನಾವು

 

ಪುರೋಹಿತ : ಹಿಂದುತ್ವದ್ರೋಹಿ ಗಾಂಧಿಯನ್ನು ಕೊಂದವರು ಯಾರು ?

 

ಎಲ್ಲರೂ : ನಾವು..

 

ಪುರೋಹಿತ : ವರ್ಣಾಶ್ರಮದ ವಿರೋಧಿ, ಮನುಧರ್ಮಶಾಸ್ತ್ರದ ಶತ್ರು ಅಂಬೇಡ್ಕರ್ ರವರನ್ನು ಇನ್ನಿಲ್ಲದಂತೆ ಹಿಂಸಿಸಿದವರು ಯಾರು

 

ಎಲ್ಲರೂ : ನಾವು..

 

ಪುರೋಹಿತ : ಮಾನವೀಯತೆ ಅಂತಾ ಜನರ ತಲೆ ಕೆಡಿಸಲುಹುಟ್ಟಿ ಬಂದ ಸಮಾಜ ಸುಧಾರಕರ  ಹುಟ್ಟಡಗಿಸಿದವರು ಯಾರು?

 

ಎಲ್ಲರೂ : ನಾವು..

 

ಕಮಲಾಂಗಿ :   ಹಾಗಾದರೆ ಧರ್ಮದ್ರೋಹಿಗೆ ಏನು ಮಾಡೋಣ

 

ಸಂಘಿನಿಂದಿಸೋಣ, ಹಂಗಿಸೋಣ, ಶಫಿಸೋಣ, ಹೆದರಿಸೋಣ

 

ಭಜರಂಗಿ : ಹಲ್ಲೆ ಮಾಡೋಣ, ಸುಳ್ಳುಗಳನ್ನು ಸೃಷ್ಟಿಸಿ ಅಪಪ್ರಚಾರ ಮಾಡೋಣ, ಧರ್ಮದ್ರೋಹದ ಆರೋಪ ಹೊರಿಸೋಣ, ದೈವನಿಂದನೆಯ ಅಪರಾಧಿಯನ್ನಾಗಿಸೋಣ, ಜನರನ್ನು ಇಂತವರ ವಿರುದ್ದ ಎತ್ತಿಕಟ್ಟೋಣಆಗಲೂ ನಮ್ಮ ದಾರಿಗೆ ಬರದಿದ್ದರೆ ಕೊನೆಗೆ ಇದ್ದೇ ಇದೆಯಲ್ಲಾ ಸಂಹಾರ.. ಶತ್ರು ಸಂಹಾರ.

 

ಕಮಲಾಂಗಿ : ನಮ್ಮ ಧರ್ಮ ರಕ್ಷಣೆಗಾಗಿ ಪಡೆಯಲೇ ಬೇಕಿದೆ ಮಾನವೀಯತೆಯ ಬಲಿ.

 

ಭಜರಂಗಿ : ಸನಾತನ ಸಂಸ್ಕೃತಿಯ ಉಳಿವಿಗಾಗಿ ಮಾಡಲೇಬೇಕಿದೆ ದುಷ್ಟ ಸಂಹಾರ

 

ಸಂಘಿ : ಹಿಂದುತ್ವದ ಉಳಿವಿಗಾಗಿ ಆಗಲೇಬೇಕಿದೆ ಮನುಷ್ಯತ್ವದ ಹರಣ, ಪ್ರತಿರೋಧದ ಮರಣ

 

ಎಲ್ಲರೂ : ಹಿಡೀರಿ ಹೊಡೀರಿ  ಜೈಶ್ರೀರಾಂಬಂಧಿಸಿ ಕೊಂದು ಹಾಕಿ  ಜೈಭಜರಂಗಬಲಿ.

 

( ಮಾನವೀಯತೆಯ ಹೆಣ ಬೀಳುತ್ತದೆ. ಎಲ್ಲರೂ ಸುತ್ತಲೂ ಕುಣಿಯುತ್ತಾ ಹಾಡು)

 

ನಾವೇ ಶ್ರೇಷ್ಠರೂ, ನಾವೇ ವರಿಷ್ಟರು

ಅನಿಷ್ಟರನು ಸಂಹರಿಸಿ ಧರ್ಮನಿಷ್ಟೆ ತೋರುವ

ನಾವೇ ಶ್ರೇಷ್ಠರೂ, ನಾವೇ ವರಿಷ್ಟರು

 

ಋತುಮಾನಗಳೇ ಕಳೆಯಲಿ, ಶತಮಾನಗಳೇ ಉರುಳಲಿ

ನಾವೇ ಶ್ರೇಷ್ಠರೂ, ನಾವೇ ವರಿಷ್ಟರು

 

ವರ್ಣಾಶ್ರಮ ನಮ್ಮ ಧರ್ಮ, ಧರ್ಮರಕ್ಷಣೆ ನಮ್ಮ ಕರ್ಮ

ನಾವೇ ಶ್ರೇಷ್ಠರೂ, ನಾವೇ ವರಿಷ್ಟರು

 

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ..

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ