ಗ್ರಾಮಸಿಂಹನ ಹೊಟ್ಟೆ ಉರಿ ಪ್ರಹಸನ (ಪ್ರಹಸನ – 19)

 (ಪ್ರಹಸನ – 19)

ಗ್ರಾಮಸಿಂಹನ ಹೊಟ್ಟೆ ಉರಿ ಪ್ರಹಸನ     

***************************************

 

( ಮೈಸೂರಿನ ಮತಾಂಧ ಗ್ರಾಮಸಿಂಹ ಟೆನ್ಶನ್ ನಿಂದಾ ಶತಪತ ತಿರುಗಾಡುತ್ತಿದ್ದ. ಕೈಪಕ್ಷದ ಗ್ಯಾರಂಟಿಗಳು ಅಧೀಕೃತವಾಗಿ ಘೋಷಣೆಯಾಗಿದ್ದರಿಂದ ಆತನಿಗೆ ಹೊಟ್ಟೆಉರಿ ಅಟೋಮ್ಯಾಟಿಕ್ ಆಗಿ ಅತಿಯಾಗಿತ್ತು. ಅರ್ಜೆಂಟಾಗಿ ಏನಾದರೂ ಕಾಮೆಂಟ್ ಮಾಡಲೇಬೇಕಿತ್ತು.)

 

ಗ್ರಾಮಸಿಂಹ : ಏನ್ ಮಾಡಲಿ, ಹೆಂಗ್ ಮಾಡ್ಲಿ. ಹೆಂಗ್ ಪುಂಗ್ಲಿಗೆ ಕಾಲ್ ಮಾಡಿ ಕೇಳ್ಲಾ? ಇಲ್ಲಾ ನಾನೇ ಏನಾದರೂ ಹೇಳ್ಲಾ? ಛೆ ಏನೂ ನನ್ನ ದಡ್ಡ ತಲೆಗೆ ಹೊಳೀತಾ ಇಲ್ವೇ

 

ಮನಸ್ಸಾಕ್ಷಿ : ಏನು ಯೋಚನೆ ಮಾಡ್ತಾ ಇದ್ದೀಯಾ

 

ಗ್ರಾಮಸಿಂಹ : ಗ್ಯಾರಂಟಿ ಬಗ್ಗೆ ಗ್ಯಾರಂಟಿಯಾಗಿ ಕಮೆಂಟ್ ಮಾಡಬೇಕು, ಅದೂ ನಾಗಪುರದ ಜಗದ್ಗುರುಗಳು ಮೆಚ್ಚಿ ಹೌದೌದು ಎನ್ನುವಂತಿರಬೇಕು. ಏನಂತಾ ಮಾಡ್ಲಿ. ಹೀಗೆ ಮಾಡಿದ್ರೆ ಹೆಂಗೆನಮ್ಮ ಪಕ್ಷಕ್ಕೆ ಓಟ್ ಹಾಕಿದೋರು ಯಾರೂ ಗ್ಯಾರಂಟಿಗಳನ್ನ ತಗೋಬಾರ್ದು ಅಂತಾ ಹೇಳಿಕೆ ಕೊಡ್ಲಾ

 

ಮನಸ್ಸಾಕ್ಷಿ : ಕೊಡು, ಆಮೇಲೆ ನೋಡು. ಪುಗ್ಸಟ್ಟೆ ಸಿಗುತ್ತೆ ಅಂದ್ರೆ ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಅನ್ನೋ ಭಕ್ತಾದಿಗಳಿಗೆ ಬೇಡಾ ಅಂದ್ರೆ ಕೇಳ್ತಾರಾ

 

ಗ್ರಾಮಸಿಂಹ : ಹೌದಲ್ವಾ. ಮತ್ತೇನು ಮಾಡಲಿ.. ಬಿಟ್ಟಿ ಭಾಗ್ಯಗಳು ನನ್ನ ಬಾಯಿ ಕಟ್ಟಿದ್ದಾವಲ್ಲಾ. ಉಚಿತಗಳನ್ನ ಕೊಟ್ರೆ ದೇಶ ದಿವಾಳಿ ಆಗುತ್ತೆ ಅಂತಾ ಮೋದೀಜಿ ಹೇಳಿದ್ದಾರಲ್ಲಾ, ಅದನ್ನೇ ನಾನೂ ಹೇಳಲಾ.

 

ಮನಸ್ಸಾಕ್ಷಿ : ಗ್ಯಾರಂಟಿಗಳನ್ನ ಕೊಡದೇ ಇದ್ದರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತಾ ನಿಮ್ಮ ಹೂಪಕ್ಷದ ಅಧ್ಯಕ್ಷರೇ ಹೇಳಿದ್ದಾರಲ್ಲಾ

 

ಗ್ರಾಮಸಿಂಹ : ಹೋ, ವಿರೋಧಾಭಾಸ ಆಗುತ್ತಲ್ವಾ. ಏನ್ ಮಾಡ್ಲಿ, ಏನ್ ಹೇಳಲಿ. ಮೊಸರಲ್ಲಿ ಇಲ್ಲದೇ ಇರುವ ಕಲ್ಲುಗಳನ್ನ ಹೇಗೆ ಹುಡುಕಲಿ. ಹಾಂ ಹೊಳೀತು, ಮಸ್ತ ಐಡಿಯಾ ಹೊಳೀತು.

 

ಮನಸ್ಸಾಕ್ಷಿ : ಏನ್ ಏನದು..

 

ಗ್ರಾಮಸಿಂಹ : ಹೇಗೂ ಮನೆಯೊಡತಿಗೆ ತಿಂಗಳಿಗೆ 2000 ರೂಪಾಯಿ ಗ್ಯಾರಂಟಿ ಕೊಡ್ತೀನಂತಾ ಕೈಪಕ್ಷ ಘೋಷಿಸಿದೆ. ಮನೆಯೊಡತಿ ಯಾರು ಅನ್ನೋದೆ ಈಗಿನ ಪ್ರಶ್ನೆ.

 

ಮನಸ್ಸಾಕ್ಷಿ : ಅರೆ, ಆಯಾ ಕುಟುಂಬದವರೇ ಮನೆಯೊಡತಿ ಆಯ್ಕೆ ಮಾಡಿ ನಿರ್ಧರಿಸಲಿ ಅಂತಾ ಸಿಎಂ ಹೇಳಿದ್ದಾರಲ್ಲಾ

 

ಗ್ರಾಮಸಿಂಹ : ಪ್ರಶ್ನೆ ಅದಲ್ಲಾ. ಸಾಬರಿಗೆ ಎರಡು ಮೂರು ಹೆಂಡ್ರು ಇರ್ತಾರಲ್ಲಾ ಅವರಲ್ಲಿ ಮನೆಯೊಡತಿ ಯಾರು ಅಂತಾ ಹೆಂಗೆ ನಿರ್ಧಾರ ಆಗುತ್ತೆ

 

ಮನಸ್ಸಾಕ್ಷಿ : ಯಾವ ಹೆಂಡತಿ ಮನೆಯೊಡತಿ ಅಂತಾ ಮನೆಯ ಯಜಮಾನ ನಿರ್ಧರಿಸ್ತಾನೆ ಬಿಡು. ಗಂಡ ಹೆಂಡಿರ ನಡುವೆ ನೀನ್ಯಾಕೆ ಕಡ್ಡಿ ಅಲ್ಲಾಡಿಸ್ತಿ.. 

 

ಗ್ರಾಮಸಿಂಹ : ಅದೆಂಗಾಗುತ್ತೆ. ಹೆಂಡತಿ ಅಂದ್ರೆ ಮುಗೀತು. ಅವಳೇ ಮನೆ ಯಜಮಾನಿ. ಮೂವರು ಬೀಬಿ ಇದ್ದರೆ ಅವರಲ್ಲಿ ಯಜಮಾನಿ ಯಾರು

 

ಮನಸ್ಸಾಕ್ಷಿ : ವಿಷಯ ಯಾವುದೇ ಇರಲಿ, ಅದನ್ನ ಧರ್ಮದ್ವೇಷದತ್ತ ತಿರುಗಿಸೋದನ್ನ ನಿನಗೆ ನಾನು ಹೇಳಿಕೊಡಬೇಕಾ? ಮಾರಿ ಕಣ್ಣು ಹೋರಿ ಮ್ಯಾಗೆ ಇದ್ದಂಗೆ ನಿಮ್ಮ ಕಣ್ಣು ಯಾವಾಗಲೂ ಸಾಬರ ಮ್ಯಾಗೆ ಅನ್ನೋದು ಜಗತ್ತಿಗೆ ಗೊತ್ತಿರೋ ಸುದ್ದಿ

 

ಗ್ರಾಮಸಿಂಹ : ಇಲ್ಲಿ ಗ್ಯಾರಂಟಿ ಮುಖ್ಯ ಅಲ್ಲಾ. ಸಾಬರು ಮೂರ್ನಾಲ್ಕು ಹೆಂಗಸರನ್ನ ಕಟ್ಕೊಂಡು, ಹತ್ತಾರ ಮಕ್ಕಳನ್ನ ಹೆತ್ಕೊಂಡು, ಮುಂದೊಂದು ದಿನ ಅವರ ಜನಸಂಖ್ಯೆ ಹೆಚ್ಚಿಸಿಕೊಂಡು, ಹಿಂದೂಗಳನ್ನ ಅಲ್ಪಸಂಖ್ಯಾತರನ್ನಾಗಿ ಮಾಡಿ ದೇಶವನ್ನ ಮುಸ್ಲಿಂ ರಾಷ್ಟ್ರ ಮಾಡ್ತಾರೆ ಅಂತಾ ಹಿಂದೂಗಳನ್ನ ನಂಬಿಸೋದು ಮುಖ್ಯ. ಹಿಂದುತ್ವ ಉಳಿಬೇಕಂದ್ರೆ ಮುಸ್ಲಿಂ ದ್ವೇಷ ಕಿಚ್ಚು ಎಂದೂ ಆರದಂಗೆ ನೋಡಕೊಂಡು ಸಮಯ ಸಿಕ್ಕಾಗ ಬೆಂಕಿ ಹಚ್ಚಬೇಕು. ಇದರಲ್ಲೇ ಇರೋದು ಧರ್ಮರಕ್ಷಣೆ, ಆಗಾಗ ಕೆರಳಿಸಲೇ ಬೇಕು ಹಿಂದೂಗಳ ಭಾವನೆ.

 

ಮನಸ್ಸಾಕ್ಷಿ : ಗ್ಯಾರಂಟಿಗೂ ನಿನ್ನ ಧರ್ಮದ್ವೇಷಕ್ಕೂ ಯಾಕೆ ಬೇಕು ನಂಟು.

 

ಗ್ರಾಮಸಿಂಹ : ಬೇಕು. ಎಲ್ಲದಕ್ಕೂ ಇಲ್ಲದ ನಂಟನ್ನು ಗಂಟು ಹಾಕಿ ಗದ್ದಲ ಎಬ್ಬಿಸುವುದರಲ್ಲೇ ನಮ್ಮ ಹಿಂದುತ್ವದ ಅಸ್ತಿತ್ವ ಇದೆ. ದೆಹಲಿ ದೊರೆಗಳ, ನಾಗಪುರದ ಜಗದ್ಗುರುಗಳ ಗಮನವನ್ನು ನನ್ನತ್ತ ಸೆಳೆಯಬೇಕೆಂದರೆ ಅವರಿಗೆ ಪ್ರೀಯವಾದ ಕೋಮುದ್ವೇಷದ ಹೇಳಿಕೆ ನೀಡಲೇಬೇಕಿದೆ. ಸಾಬರ ಪತ್ನಿಯರಲ್ಲಿ ಮನೆಯೊಡತಿ ಯಾರು? ಎನ್ನುವುದೇ ನನ್ನ ಪತ್ರಿಕಾ ಹೇಳಿಕೆಯ ಹೈಲೈಟ್.

 

ಮನಸ್ಸಾಕ್ಷಿ : ನಾನೊಂದು ಪ್ರಶ್ನೆ ಕೇಳಲೇ.

 

ಗ್ರಾಮಸಿಂಹ : ಪ್ರಶ್ನೆ ಕೇಳೋದು ಬಿಟ್ಟು ನಿನಗೆ ಬೇರೆ ಏನ್ ಕೆಲಸ ಇದೆ. ಕೇಳು.

 

ಮನಸ್ಸಾಕ್ಷಿ : ಕೇವಲ ಒಂದು ಸರಕಾರಿ ಸೈಟ್ ಪಡೆಯಲು ನಿನ್ನ ಹೆಂಡತಿಯನ್ನೇ ತಂಗಿ ಅಂತಾ ದಾಖಲಾತಿ ಕೊಟ್ಟವನಲ್ಲವೇ ನೀನು. ಮತ್ತೊಬ್ಬರ ಪತ್ನಿಯರ ಬಗ್ಗೆ ಕಮೆಂಟ್ ಮಾಡುವ ನೈತಿಕತೆ ನಿನಗೆಲ್ಲಿದೆ.

 

ಗ್ರಾಮಸಿಂಹ : ತೋ ಥೋ.. ಅದು ನನ್ನ ವೈಯಕ್ತಿಕವಾದದ್ದು. ನನ್ನ ಹೇಳಿಕೆಗಳು ಸಾರ್ವತ್ರಿಕವಾದದ್ದು. ಸಾರ್ವಜನಿಕ ಜೀವನದಲ್ಲಿರೋರು ವ್ಯಕ್ತಿಗತವಾದದ್ದನ್ನು ಹೋಲಿಸಿಕೊಳ್ಳಲೇಬಾರದು. ನೀನೀಗ ಬಾಯಿ ಮುಚ್ಚಿ ಮೂಲೆಗೆ ಕೂಡದೇ ಇದ್ದರೆ ಸಾಯಿಸಿ ಬಿಡ್ತೀನಿ.

 

ಮನಸ್ಸಾಕ್ಷಿ : ನನ್ನ ಬಾಯಿ ಮುಚ್ಚಿಸಬಹುದು ಆದರೆ ಸಾಯಿಸೋಕೆ ಸಾಧ್ಯವಿಲ್ಲ. ನಿನ್ನ ಸಾವಿನಲ್ಲೇ ನನ್ನ ಸಾವೂ ಇದೆ ತಿಳಕೋ.

 

ಗ್ರಾಮಸಿಂಹ : ಏನಾದರೂ ಬೊಗಳು. ನನಗೆ ನಿನಗಿಂತ ಧರ್ಮರಕ್ಷಣೆ ಮುಖ್ಯ ಧರ್ಮರಕ್ಷಣೆಗೆ ಧರ್ಮದ್ವೇಷ ಹರಡುವುದು ಮುಖ್ಯ. ಮನಸ್ಸಾಕ್ಷಿ ಅಂತೆ ಮನಸ್ಸಾಕ್ಷಿ, ತೊಲಗಾಚೆ. ಯಾರಲ್ಲಿ ಪತ್ರಕರ್ತನನ್ನು ಒಳಗೆ ಬಿಡಿ.

 

ಪತ್ರಕರ್ತ : ಸರ್ಗ್ಯಾರಂಟಿಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಸರ್.

 

ಗ್ರಾಮಸಿಂಹ : ಜನರು ನಮ್ಮ ಹಿಂದುತ್ವ ಬಿಟ್ಟು ಅವರ ಗ್ಯಾರಂಟಿ ನೋಡಿ ಮತ ಹಾಕಿ ಮೊಸ ಮಾಡಿದ್ದಾರೆ. ಗ್ಯಾರಂಟಿ ಯೋಜನೆ  ಮನೆಗಳನ್ನು ಮುರಿಯುವ ಯೋಜನೆಯಾಗಿದೆಈಗ ನೋಡಿ ಎರಡು ಸಾವಿರ ಹಣಕ್ಕೆ ಮನೆಯಲ್ಲಿ ಅತ್ತೆ ಸೊಸೆ ಜಗಳ ಶುರುವಾಗಿದೆ. ಸಾಬರ ಮನೆಯಲ್ಲಿ ಒಬ್ಬರಿಗೆ ಮೂರ್ನಾಲ್ಕು ಪತ್ನಿಯರು ಇರ್ತಾರೆ. ಅವರಲ್ಲಿ ಮನೆಯೊಡತಿ ಯಾರು

 

ಪತ್ರಕರ್ತ : ಯಾರು ಸರ್?

 

ಮನಸ್ಸಾಕ್ಷಿ : ಯಾರಾದರೇನು? ಮತ್ತೊಬ್ಬರ ಮನೆಯ ಸಂಗತಿ ನಿನಗ್ಯಾಕೆ?

 

ಗ್ರಾಮಸಿಂಹ : ಶಟಪ್.. ದೂರ ತೊಲಗು ಅನಿಷ್ಟವೇ.. 

 

( ಹೆದರಿಕೆಯಿಂದ ಪತ್ರಕರ್ತ ಓಡಿ ಹೋಗುತ್ತಾನೆ. ದೂರದಲ್ಲಿ ಆಜಾನ್ ಕೂಗಿದ ಸದ್ದು. ಗ್ರಾಮಸಿಂಹ ಖುರ್ಚಿಯ ಮೇಲೆ ಕುಸಿದು ಕೂರುತ್ತಾನೆ. ಹೊರಗೆ ನಾಯಿಗಳು ಬೊಗಳಿದ ಸದ್ದು)

 

- ಶಶಿಕಾಂತ ಯಡಹಳ್ಳಿ

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ