ನೋಟಿಗೆ ಓಟು (ಪ್ರಹಸನ-2)
ಪ್ರಹಸನ-2
ನೋಟಿಗೆ ಓಟು
ಹೂವಯ್ಯ
: ಯಾರಿಗ್ಲಾ ಓಟ್ ಒತ್ತಿ ಬಂದೆ.
ಸಿದ್ದಯ್ಯ
: ಪುಲ್ ಕನ್ಪೂಜ್ ಕಣ್ಲಾ. ಹೂ ಪಕ್ಷದವರು ನಮ್ಮನೇಲಿರೋ ತಲೆ ಎನಿಸಿ ತಲಾ ಎರಡು ಸಾವಿರ ಕೊಟ್ಟವರೆ.
ಕೈ ಪಕ್ಷದವರೂ ಎರಡು ಸಾವಿರ ಕೊಟ್ಟವರೆ. ಜೆಡಿಎಸ್ ನವರೂ ಒಂದು ಸಾವಿರ ಕೊಟ್ಟವ್ರೆ. ಪಕ್ಷೇತರದವರೂ
ಮುಂದೆ ಕೊಡ್ತೀವಿ ಅಂತಾ ಹೇಳವ್ರೆ. ಎಲ್ರೂ ಅವರ ಪರವಾಗಿಯೇ ಓಟಾಕಬೇಕು ಅಂತಾ ಆಣೆ ಪ್ರಮಾಣ ಬೇರೆ ಮಾಡಿಸ್ಕೊಂಡವ್ರೆ
ಕಣಣ್ಣಾ.
ಹೂವಯ್ಯ
: ಅಲಾ ಬಡ್ಡಿ ಮಕ್ಳಾ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕೆನ್ನೆಗೆ ಸುಣ್ಣ ಹಚ್ಚಬಹುದಾ. ನನಗೆ ಎರಡೂ ಪಕ್ಷದವರು ತಲಾ ಸಾವಿರ ಕೊಟ್ಟವ್ರೆ , ಮೂರನೇ ಪಕ್ಷದವರು
ಐನೂರು ಮಡಗಿ ಹೋಗವ್ರೆ ಕಣ್ಲಾ. ಹೋಗ್ಲಿ ಯಾರಿಗ್ ಓಟ್ ಒತ್ತಿದೆ ಹೇಳು.
ಸಿದ್ದಯ್ಯ
: ಮತ ಹಾಕೋಕೆ ಅಂತಾ ಹೋದ್ನಾ. ಬೆರಳಿಗೆ ಮಸಿ ಹಚ್ಚಿಸ್ಕೊಂಡ್ನಾ. ಓಟ್ ಮಶಿನ್ ಮುಂದೆ ನಿಂತ್ಕೊಂಡ್ನಾ.
ಇನ್ನೇನು ಬಟನ್ ಒತ್ತಬೇಕು ಅನ್ನೊದರೊಳಗೆ ಹೊಟ್ಟಯೊಳಗಿಂದಾ ಅಸರೀರವಾಣಿಯೊಂದು ಎಚ್ಚರಿಸಿತು.
ಹೂವಯ್ಯ
: ಪ್ರಜಾವಣಿ, ಉದಯವಾಣಿ ಕೇಳಿದ್ದೀನಿ. ಅದೆಂತಾದ್ಲಾ ಅಸರೀರವಾಣಿ?
ಸಿದ್ದಯ್ಯ
: ಅದೇ ಕಣ್ಲಾ ಮನ್ ಕೀ ಬಾತು. ನಮಗ್ ನಾವೇ ಹೇಳ್ಕೊಳ್ಳೋದಿಲ್ವಾ ಅದು. ಅಸರೀರವಾಣಿ ಹೇಳ್ತು. “ಲೇ ಸಿದ್ದಾ
ಏನ್ ಮಾಡ್ತಿದ್ದೀಯಾ? ನಿಯತ್ತು ಅನ್ನೋದು ಇಲ್ವಾ? ಹಣ ತಗೊಂಡಿದ್ದೀಯಾ, ಆಣೆ ಪ್ರಮಾಣ ಮಾಡಿದ್ದೀಯಾ.
ಈಗ ಒಬ್ಬನಿಗೆ ಓಟ್ ಹಾಕಿದ್ರೆ ಇನ್ನೂ ಇಬ್ಬರಿಗೆ ಮೋಸಾ ಮಾಡಿದಂಗೆ ಆಗೋದಿಲ್ಲವೇನ್ಲಾ” ಅಂತು. ನನಗೂ
ಅದೂ ಸರಿ ಅನ್ನಿಸ್ತು. ಯಾರ ಋಣಾನೂ ಇಟ್ಕೊಬಾರದು ಅಂತಾ ಮೂರು ಪಕ್ಷದ್ ಮುಂದಿರೋ ಬಟನ್ ಒತ್ತಿ ಹಗುರಾಗಿ
ಹೊರಗೆ ಬಂದೆ ಕಣಯ್ಯಾ. ನಿಂದೇನ್ಲಾ ಕಥೆ..
ಹೂವಯ್ಯ
: ಅಸರೀರವಾಣಿ ನಿನಗೆ ಮಾತ್ರಾನಾ ಇರೋದು, ನನಗೂ ಮನ್ ಕೀ ಬಾತ್ ಐತೆ. ಅದು ಒಳಗಿಂದಾ ಗುದ್ದಕೊಂಡು ಬಂದು ಹೇಳ್ತು. “ನೀಯತ್ತು
ಮೀರಬೇಡಾ ಅಂತಾ. ಅದಕ್ಕೆ ನಾನು ಕಣ್ಮುಚ್ಚಿದ್ನಾ. ನನ್ನನ್ನ ಧರ್ಮಸಂಕಟದಲ್ಲಿ ಸಿಕ್ಕಿಸ್ಬೇಡಾ ಎಂಕಟರಮಣ
ಅಂತಾ ಬೇಡಕೊಂಡ್ನಾ. ಮಷಿನ್ ಮ್ಯಾಗೆ ಕೈಯಾಡಿಸಿ ಯಾವುದೋ ಒಂದು ಬಟನ್ ಟನ್ ಅಂತಾ ಒತ್ತಿ ಹೊರಗೆ ಓಡಿ
ಬದ್ನಾ. ಯಾರಿಗೆ ಓಟ್ ಬಿತ್ತು ಅಂತಾ ನನಗೂ ಗೊತ್ತಿಲ್ಲಾ ಬಿಡು. ಎಷ್ಟೇ ಆದ್ರೂ ಗುಪ್ತ ಮತದಾನ ಅಲ್ವಾ.
ಎಲ್ಲಾ ದೇವರೇ ನೋಡ್ಕೋತಾನೆ. ನಮ್ಮ ಕೈಯಲ್ಲೇನಿದೆ ಹೇಳು ಒತ್ತೋದು ಬಿಟ್ಟು.
ಸಿದ್ಧಯ್ಯ
: ಅರೆರೆ.. ಭಾರೀ ಕಿಲಾಡಿ ನನ್ಮಗ ಕಣ್ಲಾ ನೀನು. ದೇವರಿಗೆ ಯಾಮಾರಿಸೋನು. ಹೌದು ಈ ಕಂತ್ರಿ ನನ್ನಮಕ್ಕಳೇನು
ಹಣ ತಂದು ಮನೆಮನೆಗೆ ಹಂಚತಾವ್ರಲ್ಲಾ ಅವ್ರು ದುಡಿದ ಕಾಸೇನ್ಲಾ ಅದು. ಜನರಿಂದ ಲೂಟಿ ಮಾಡದ್ದೇ ಅಲ್ವಾ.
ಥೂ ನಿಮ್ಮ ಪಾಪದ ಹಣ ನನಗ್ ಬ್ಯಾಡಾ ಹೋಗ್ರೋ ಅಂತಾ ಉಗಿದ್ ಕಳಿಸ್ಬೇಕಾಗಿತ್ತು.
ಹೂವಯ್ಯ
: ನಾನೂ ಹಂಗೇ ಕೇಳೋಣಾ ಅನ್ಕೊಂಡಿದ್ದೆ. ಆದ್ರೆ ದುಡೀದೆ ದುಃಖ ಪಡದೇ ಕಾಸ್ ಬರುತ್ತೆ ಅಂದ್ರೆ ಯಾರು
ಬ್ಯಾಡಾ ಅಂತಾರೆ ಅಣ್ತಮ್ಮಾ. ಕೈ ಕಡೀಯೋಕೆ ಶುರುವಾಯ್ತು ಇಸ್ಕೊಂಡೆ. ಆದ್ರೆ ನನ್ನ ಹೆಂಡ್ರು ರಾಂಗ್
ಆಗಿ ಏ ಆ ಪಾಪದ ಹಣ ಮುಟ್ಟಬ್ಯಾಡ ಬಿಟ್ಟಬಿಡು ಅನ್ನೋದಾ?
ಸಿದ್ದಯ್ಯ
: ಹಾಂ. ಹಂಗಂದ್ಲಾ..
ಹೂವಯ್ಯ
: ಅಷ್ಟೇ ಅಲ್ಲಾ ಹೂವಯ್ಯಾ. ರೊಕ್ಕ ಕೊಡೋಕೆ ಬಂದೋರ್
ಜನುಮಾನೇ ಜಾಲಾಡಿಸಿಬಿಟ್ಲು ಅಂತೀನಿ. “ ಏ ಹೋಗ್ರಯ್ಯಾಹೋಗಿ. ಅಧಿಕಾರ ಕೊಟ್ಟಾಗ ನೆಟ್ಟಗೆ ಜನರಿಗಾಗಿ ಕೆಲಸಾ ಮಾಡಿ ಒಳ್ಳೆ
ಹೆಸರು ಗಳಿಸಿದ್ರೆ ಹಿಂಗೆ ಕಳ್ಳರಂಗೆ ಬಂದು ಕಾಸು ಹಂಚೋ ಹೊಲಸು ಕೆಲಸ ಮಾಡ್ಬೇಕಾಗಿತ್ತಾ. ಭ್ರಷ್ಟಾಚಾರ
ಮಾಡಿ ಲಂಚಾ ಹೊಡದು ಕೋಟಿ ಕೋಟಿ ಲೂಟಿ ಮಾಡಿದವ್ರಿಗೆ ಎಲ್ಲಯ್ಯಾ ಇದೆ ಓಟು ಕೇಳೋಕೆ ಮುಖ. ನಾವಿಲ್ಲಿ
ದಿನಾ ದುಡಕೊಂಡು ಬಡತನದಾಗಿ ಬೆಯ್ತಾ ಇದ್ದೀವಿ. ನಿಮ್ಮ ನಾಯಕರಿಗೆ ದೊಡ್ಡ ಬಂಗಲೇ, ಎಸಿ ಕಾರು, ನಾಡಿನ
ತುಂಬಾ ಬೇನಾಮಿ ಆಸ್ತಿ. ಥೂ ಅವ್ರ ಜನ್ಮಕ್ಕ ಬೆಂಕಿ ಹಾಕಾ.” ಅಂತಾ ಅದೇನೋ ಅಂತಾರಲ್ಲಾ ವಾಚಾಮಗೋಚರವಾಗಿ
ಬೈದಾಕಿದ್ಲು ಕಣ್ಲಾ.
ಸಿದ್ದಯ್ಯ
: ಎಷ್ಟೇ ಆದ್ರೂ ನಿನ್ನ ಹೆಂಡ್ತಿ ಓದಿಕೊಂಡವ್ಳಲ್ಲಾ. ಅವ್ಳು ಹೇಳಿದ್ರಲ್ಲೂ ದಿಟ ಐತೆ ಬಿಡ್ಲಾ. ನನ್ನೆಂಡ್ತಿ
ಹಂಗಲ್ಲಾ ಬಿಡು. ರ್ರೀ.. ಯಾರೇ ಬಂದು ಎಷ್ಟೇ ಕಾಸು, ಕುಕ್ಕರು, ಸೀರೆ ಪಂಚೆ ಅಂತಾ ಏನೇ ಕೊಟ್ರೂ ಬ್ಯಾಡಾ
ಅನ್ಬ್ಯಾಡ್ರಿ. ಅದೆಲ್ಲಾ ನಮ್ಮಂತವರಿಂದಲೇ ಲೂಟಿ ಮಾಡಿದ್ದು. ಮುಚ್ಚಿಟ್ಟಿದ್ದನ್ನ ಈಗಲಾದರೂ ಬಿಚ್ಚಲಿ
ಬಿಡ್ರಿ. ಕೊಟ್ಟಿದ್ದನ್ನೆಲ್ಲಾ ಇಸ್ಕೊಂಡು ನಿಮಗೆ ಯಾರಿಗೆ ಸರಿ ಅನ್ಸುತ್ತೋ ಅವ್ರಿಗೆ ಓಟ್ ಒತ್ತಿ
ಬನ್ರಿ” ಅಂದ್ರು.
ಹೂವಯ್ಯ
: ನಿನ್ನ ಹೆಂಡ್ರು ಹೇಳಿದ್ರಲ್ಲೂ ಪಾಯಿಂಟ್ ಐತೆ. ಆದ್ರೆ ನಾನು ನಿಯತ್ತಿನ ಮನುಷ್ಯ ಅದೀನಿ. ಅದಕ್ಕೆ
ಯಾರು ಕೊಟ್ರೂ ಬ್ಯಾಡಾ ಅಂದಿಲ್ಲಾ. ನಿಯತ್ತು ಕೆಡದಂಗೆ ಕಣ್ಮುಚ್ಚಿ ಬಟನ್ ಒತ್ತಿ ಬಂದೆ ಅಷ್ಟೇಯಾ.
ಸಿದ್ದಯ್ಯ
: ನೀನೇನೋ ನಿಯತ್ತಾಗಿ ಇದ್ದೀಯಾ ಹೂವಯ್ಯಾ ಆದರೆ ನಮ್ಮ ಓಟು ತಗೊಂಡು ಆರಿಸಿ ಬರ್ತಾರಲ್ಲಾ ಅವ್ರಿಗೆಲ್ಲಿದೆ
ನಿಯತ್ತು. ನೋಡ್ತಾ ಇರು. ಅತಂತ್ರ ಫಲಿತಾಂಶ ಬಂದ್ರೆ ಯಾರ್ಯಾರು ಮಾರಾಟಕ್ಕೆ ಇರ್ತಾರೆ ಅಂತಾ. ನೂರಾರು
ಕೋಟಿ ಕೊಟ್ಟು ಶಾಸಕರನ್ನು ಖರೀದಿಸ್ತಾರೆ ಅಂತಾ. (ಅಷ್ಟರಲ್ಲಿ ಸತ್ಯಪ್ಪ ಬರ್ತಾನೆ)
ಹೂವಯ್ಯ
: ಏನ್ ಸತ್ಯಾ ಓಟ್ ಹಾಕಿ ಬಂದ್ಯಾ. ಅರೆ ಎಲ್ಲಿ ನಿನ್ನ ಬೆರಳಿಗೆ ಮಸೀನೆ ಮಡಗಿಲ್ಲಾ.
ಸತ್ಯಪ್ಪ
: ಹೋಗಿದ್ಮಪ್ಪಾ ಓಟ್ ಹಾಕೋಕೆ ಪ್ಯಾಮಲಿ ಸಮೇತ. ಓಟರ್ ಲಿಸ್ಟಲ್ ನಮ್ಮ ಹೆಸರೇ ಇರಲಿಲ್ಲ. ಬಂದ ದಾರಿಗೆ
ಸುಂಕ ಇಲ್ಲಾಂತ ವಾಪಸ್ ಬಂದ್ವಿ.
ಸಿದ್ದಯ್ಯ
: ದೊಡ್ಡ ಸತ್ಯ ಹರಿಶ್ಚಂದ್ರನ ಹಾಂಗೆ ಮಾತಾಡ್ತಿದ್ದೆ. ಹಿಂದಿನ ಎಲೆಕ್ಷನ್ ದಾಗೆ ಮನೆಗೆ ಕಾಸು ಕಾಣಿಕೆ ಕೊಡೋಕೆ ಬಂದವ್ರಿಗೆಲ್ಲಾ ಬೈದು ಕಳಿಸಿದ್ದೆ.
ಈಗ ನೋಡು ಅವ್ರೆಲ್ಲಾ ಸೇರಿ ನಿನ್ನ ಕುಟುಂಬದವರ ಹೆಸರನ್ನೇ ಲಿಸ್ಟ್ ನಿಂದ ಅಬೇಸ್ ಮಾಡ್ಸಿದ್ದಾರೆ.
ಅದಕ್ಕೆ ಹೇಳೋದು ಕೊಟ್ಟಷ್ಟು ತಗೋ, ಇಷ್ಟಾ ಬಂದವರಿಗೆ ಓಟು ಒಗಾಯ್ಸು ಅಂತಾ.
ಸತ್ಯಪ್ಪ
: ಅದೆಲ್ಲಾ ನನಗಾಗೋದಿಲ್ಲ ಬಿಡಯ್ಯಾ. ನಾವು ಪ್ರಾಮಾಣಿಕರಾಗಿದ್ರೆ ಪ್ರಾಮಾಣಿಕವಾಗಿರೋ ಪ್ರತಿನಿಧಿ
ಆಯ್ಕೆ ಆಗ್ತಾನೆ. ಕಳ್ಳ ಕಾಸು ಇಸ್ಕೊಂಡು ಓಟ್ ಹಾಕಿದ್ರೆ ಕಳ್ಲನನ್ಮಕ್ಕಳು ಆರಿಸಿ ಬಂದು ಧರೋಡೆ ಮಾಡ್ತವ್ರೆ.
ಬೇರೆಯವರ ಮಾತು ಬಿಡು, ನನ್ನ ಆತ್ಮಸಾಕ್ಷಿಗಾದರೂ ನಾನು ಉತ್ತರ ಕೊಡಬೇಕಲ್ಲಾ.
ಹೂವಯ್ಯ
: ಹೋ.. ಮನ್ ಕೀ ಬಾತ್..
ಸತ್ಯಪ್ಪ
: ಹೌದಯ್ಯಾ.. ನನ್ನ ಮನ್ ಕೀ ಬಾತ್, ಜನ್ ಕೀ ಬಾತ್ ಆದಾಗಲೇ ನಿಯತ್ತಿರೋರು ಆರಿಸಿ ಬರೋದು. ಉತ್ತಮ
ಜನಪರ ಸರಕಾರ ಸಿಗೋದು. ಇಲ್ಲಾಂದ್ರೆ ಕಳ್ರು ಸುಳ್ರು ಮನೆಹಾಳ್ರು ಗೂಂಡಾಗಳು ಜಾತಿವಾದಿಗಳು ಕೋಮುವಾದಿಗಳು
ಭ್ರಷ್ಟರು ಪಟ್ಟಕ್ಕೆ ಬಂದು ದೇಶಾನ್ನ ಲೂಟಿ ಮಾಡ್ತಾರೆ.
ಸಿದ್ದಪ್ಪ
: ಸತ್ಯಪ್ಪ ಹೇಳಿದ್ರಲ್ಲೂ ಪಾಯಿಂಟ್ ಐತೆ. ನಾನಂತೂ ಇನ್ಮುಂದೆ ಯಾರೇ ಏನೇ ಕೊಟ್ಟು ಓಟು ಹಾಕು ಅಂದ್ರೂ
ಅಂತವರಿಗೆ ಹಾಕೋದಿಲ್ಲಾ ಅಂದ್ರೆ ಹಾಕೋದಿಲ್ಲ. ಇದು ನಮ್ಮ ಮನೆದೇವ್ರಾದ ವೆಂಕಟರಮಣಸ್ವಾಮಿ ಮೇಲಾಣೆ.
ಹೂವಯ್ಯ
: ನಾನೂ ಅಷ್ಟೇಯಾ. ಅಮೀಷಕ್ಕೆ ಬಲಿಯಾಗಿ ಭ್ರಷ್ಟರು ಕೊಡುವ ನೋಟಿಗೆ ಓಟು ಮಾರಿಕೊಳ್ಳೋದಿಲ್ಲಾ ಅಂತಾ
ಶಪಥ ಮಾಡ್ತೇನೆ.
ಸತ್ಯಪ್ಪ
: ಹೌದು.. ಎಲ್ಲರೂ ಬದಲಾಗಬೇಕಿದೆ. ಸ್ವಚ್ಚ ಭ್ರಷ್ಟಾಚಾರ ರಹಿತ ಪ್ರಭುತ್ವ ಬೇಕೆಂದರೆ ಮೊದಲು ಪ್ರಜೆಗಳು
ಬದಲಾಗಬೇಕಿದೆ. ಭ್ರಷ್ಟರು ಒಡ್ಡುವ ಆಸೆ ಆಮಿಷಗಳೆನ್ನೆಲ್ಲಾ ತಿರಸ್ಕರಿಸಿ ಇರುವುದರಲ್ಲೇ ಒಳ್ಳೆಯ ವ್ಯಕ್ತಿಗೆ
ಮತ ಹಾಕಿ ಆರಿಸಿ ಕಳುಹಿಸಬೇಕಿದೆ. ಕಾಸಿಗೆ ಆಸೆಗೆ ಮತ ಮಾರಿಕೊಂಡರೆ ಭ್ರಷ್ಟರನ್ನು ಪ್ರಶ್ನಿಸುವ ಹಕ್ಕನ್ನೇ
ಕಳೆದುಕೊಂಡಂತೆ. ಎಲ್ಲರೂ ನಿರ್ಧರಿಸಿ ಸುಳ್ಳು ಭರವಸೆ ಆಶ್ವಾಸನೆಗಳಿಗೆ ಒಳಗಾಗುವುದಿಲ್ಲವೆಂದು. ಎಲ್ಲರೂ
ಘೋಷಿಸಿ ನಮ್ಮ ಮತ ಮಾರಾಟಕ್ಕಿಲ್ಲವೆಂದು.
ಎಲ್ಲರೂ
: ನಮ್ಮ ಮತ ಮಾರಾಟಕ್ಕಿಲ್ಲ. ನಮ್ಮ ಹಕ್ಕು ಬಿಟ್ಟುಕೊಡುವುದಿಲ್ಲ.
ಹಾಡು:
ನೋಟಿಗೆ
ಓಟು ಮಾರಿಕೊಳ್ಳದಿರಿ ಭ್ರಷ್ಟತೆಗದುವೆ ದಾರಿ
ಪ್ರಜೆಗಳೇ
ಭ್ರಷ್ಟರಾದರೆ ಪ್ರಜಾಪ್ರಭುತ್ವಕ್ಕದುವೇ ಗೋರಿ
-ಶಶಿಕಾಂತ ಯಡಹಳ್ಳಿ
(2023,
ಮೇ 10 ರಂದು ನಡೆದ ಚುನಾವಣೆಯ ಮತದಾನದ ನಂತರ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗುವ ಮತದಾರರನ್ನು
ಕುರಿತು ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)
Comments
Post a Comment