ಗೋಮುಖಗಳ ಪಜೀತಿ (ಪ್ರಹಸನ-20)

 (ಪ್ರಹಸನ-20)

ಗೋಮುಖಗಳ ಪಜೀತಿ    

********************************

 

 ( ಗೋಪಾಲಕ ರೈತನೊಬ್ಬ ತನ್ನ ಮುದಿ ಹಸುವಿನೊಂದಿಗೆ ರಾಜಕಾರಣಿ .ನಾರಾಯಣಸ್ವಾಮಿ ಮನೆಗೆ ಬಂದು)

 

ರೈತ : ಅಡ್ಡಬಿದ್ದೆ ಧನಿ. ನಿಮ್ಮ ಜೊತೆ ಮಾತಾಡ್ಬೇಕಿತ್ತು.

 

.ನಾರಾಯಣಸ್ವಾಮಿ : ಚಿ ಛೀ. ಯಾರ್ರಿ ಇವನು. ಮುದಿ ಹಸುವಿನ ಸಮೇತ ನಮ್ಮನೆಗೆ ಬಂದಿದ್ದಾನೆ.

 

ರೈತ : ನಾನೊಬ್ಬ ರೈತ ಸ್ವಾಮಿ. ಗೋಪಾಲಕ. ಹೈನುಗಾರಿಕೆ ನನ್ನ ಕುಲಕಸಬು.. ಹಾಂ.. ಧನಿ ನಂಜೊತೆ ನಿಮ್ಮೌವನ್ನ ಕರಕೊಂಡು ಬಂದಿದ್ದೀನಿ ಸಾಮಿ ಅದೇ ನಿಮ್ಮ ತಾಯೀನ, ಮನೆ ತುಂಬಿಸ್ಕೊಳ್ಳಿ ದೊರೆ.

 

ನಾ..ಸ್ವಾಮಿ : ನನ್ನ ತಾಯಿ ಸತ್ತು ಎಷ್ಟೋ ವರ್ಷ ಆಯ್ತು. ಏನ್ ಹೇಳ್ತಿದ್ದೀಯಾ

 

ರೈತ : ಇಲ್ಲೇ ಇದೆ ನೋಡಿ ಧನಿ ಮುದಿ ಹಸು. ನಿಮ್ಮ ತಾಯಿ.

 

ನಾ..ಸ್ವಾಮಿ : ತೊ ಥೋ.. ಹಸು ಹೆಂಗಯ್ಯಾ ನನ್ನ ತಾಯಿ ಆಗುತ್ತೆ

 

ರೈತ : ನೀವೇ ಟಿವಿಯಾಗೆ ಹೇಳ್ತಾ ಇದ್ರಲ್ಲಾ ದೊರೆ.. ಗೋವು ನಿಮ್ಮ ತಾಯಿ ಅಂತಾ. ತಗೊಳ್ಳಿ ನಿಮ್ಮ ತಾಯಿಯನ್ನ ಕರ್ಕೊಂಡು ಬಂದಿವ್ನಿ

 

ನಾ..ಸ್ವಾಮಿ : ಯಾರಲ್ಲಿ. ಹಸು ಸಗಣಿ ಹಾಕ್ತಿದೆ. ಥೋ ಹಾಕೇಬಿಡ್ತು. ಮೊದಲು ಹೊರಗೆ ತಗೊಂಡೋಗಿ ಕಟ್ಟಾಕಿ.

 

ರೈತ : ಏನ್ ಸಾರ್ರು.. ಯಾರಾದ್ರೂ ತಮ್ಮ ತಾಯಿನ ಬೀದೀಲಿ ಕಟ್ಟಾಕ್ತಾರಾ? ಅದೇನೋ ಅಂತಾರಲ್ಲಾ ಹಾಂ ಅದು ಮಾತೃ ದ್ರೋಹ ಅಲ್ವಾ? ನಿಮ್ಮನೆಯೊಳಗೆ ಕರಕೊಂಡು ಹೋಗಿ ಸಪರೇಟ್ ಬೆಡ್ರೂಮನಲ್ಲಿ ಮಲಗ್ಸಿ ಹೊಟ್ಟೆ ತುಂಬಾ ಊಟ ಹಾಕ್ಸಿ, ಚಿಕಿತ್ಸೆ ಕೊಡಿಸಿ ಸ್ವಾಮಿ. ಪಾಪ ವಯಸ್ಸಗಿದೆ ಅಲ್ವಾ ನಿಮ್ಮೌವ್ವನಿಗೆ  ( ಹಸುವನ್ನು ಮನೆಯ ಒಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸುವನು)

 

ನಾ..ಸ್ವಾಮಿ : ಏಯ್.. ಒಳಗ್ ಬರಬ್ಯಾಡಾ.. ಅದನ್ನ ಹೊರಗೆ ಹೊಡೀರೋ, ಅಸಹ್ಯ.

 

ರೈತ : ಏನ್ರೀ ಸಾರ್ರು ನೀವೇಳಿದ್ದು. ನಿಮ್ಮ ತಾಯಿ ನಿಮಗೆ ಅಸಹ್ಯಾನಾ? ಕೇಳ್ರಪ್ಪೋ ಕೇಳಿ ಟಿವಿ ಚಾನಲ್ನವರೇ.. ಇವ್ರು ತಾಯಿ ದೇವರನ್ನ ಮನೆಯೊಳಗೆ ಕರೆದೊಯ್ಯದೇ ಬೀದೀಲಿ ಕಟ್ತಾರಂತೆ. ಇದು ನ್ಯಾಯಾನಾ? ಇದು ಧರ್ಮಾನಾ? ಗೋಮಾತೆಗೆ ಮಾಡೋ ಅವ್ಮಾನ ಅಲ್ವರಾ

 

ನಾ..ಸ್ವಾಮಿ : ಅಯ್ಯೋ, ಇವನಿಗೆ ಹೆಂಗಪ್ಪಾ ಹೇಳೋದು. ನೋಡಣ್ಣಾ ಇದಕ್ಕೆಲ್ಲಾ ಗಲಾಟೆ ಮಾಡೋದು ಬೇಕಿಲ್ಲಾ. ಟಿವಿಯವರನ್ನ ಕರೆಯೋದೂ ಬೇಕಿಲ್ಲಾ. ನಿನಗೇನು ಬೇಕು ಹೇಳು.

 

ರೈತ : ನಂಗಾಏನೂ ಬೇಡಾ ಮಾಸ್ವಾಮಿ. ನಿಮ್ಮ ತಾಯಿ, ನಿಮ್ಮ ಮಾತೆ, ನಿಮ್ಮ ಗೋಮಾತೆಯನ್ನು ನಿಮ್ಮನೆಯೊಳಗೆ ಇಟ್ಕೊಂಡು ಚೆಂದಂಗ್ ನೋಡ್ಕೊಳ್ಳಿ ಸಾಕು.

 

ನಾ..ಸ್ವಾಮಿ : ಅದೆಂಗಾಗುತ್ತೆ.. ಯಾವುದು ಎಲ್ಲಿರಬೇಕೋ ಅಲ್ಲೇ ಇರಬೇಕು. ಮನುಷ್ಯರು ಮನೇಲಿರಬೇಕು, ಹಸುಗಳನ್ನ ಕೊಟ್ಟಿಗೇಲಿ ಕಟ್ಟಬೇಕು ಅಲ್ವಾ.

 

ರೈತ : ಏನ್ಸಾರ್ ನೀವು ಮಾತಾಡೋದು. ಗೋಮಾತೆ ನಿಮ್ತಾಯಿ ಅಂತಾ ನೀವು ಟೀವೀಲಿ ಹೇಳಿದ್ದನ್ನ ಎಲ್ಲಾರೂ ನೋಡಿದ್ದಾರಲ್ವಾ. ನಿಮ್ಮ ಮಾತೆಯನ್ನ ನಿಮ್ಮ ಮನೆಗೆ ಸೇರಿಸ್ಕೊಳ್ಳಿ ಅಂದ್ರೆ ಇಲ್ಲಾ ಅಂತೀರಲ್ಲಾ. ಎಲ್ಲಿ ಟಿವಿಯವ್ರು, ಎಲ್ಲಿ ಕ್ಯಾಮರಾಗಳು.. ಬ್ರೇಕಿಂಗ್ ನ್ಯೂಜ್ ಐತೆ ಬನ್ರೋ

 

ನಾ..ಸ್ವಾಮಿ : ಅಯ್ಯೋ ಇದೊಳ್ಳೆ ಪಜೀತಿ ಆಯ್ತಲ್ಲಾ. ನೋಡಣ್ಣಾ ರೈತಣ್ಣಾ.. ಗೋವು ಮಾತೆ ಇದ್ದಂಗೆ ಅಂತಾ ಹೇಳಿದ್ನೇ ಹೊರತು ನನ್ನ ತಾಯಿ ಎಂದಲ್ಲಾ. ಅರ್ಥಾ ಮಾಡ್ಕೋ.

 

ರೈತ : ಹೌದು ಸಾಮಿ, ಅರ್ಥಾ ಮಾಡ್ಕೊಂಡೇ ಬಂದೀವ್ನಿ. ಮಾತೆ ಇದ್ದಂಗೆ ಅಂತಾದ್ರೂ ಒಪ್ಪಕೋತೀರಲ್ವಾ, ಸರಿ ಹಾಗಾದರೆ ನಿಮ್ಮ ಜೊತೆ ಇಟ್ಕೊಂಡು ಚೆನ್ನಾಗಿ ಹುಲ್ಲು ಹಿಂಡಿ ಹಾಕೊಂಡು ಸಾಕೊಳ್ಳಿ. ಸಗಣಿ ಗಂಜಳ ಕಿಲೀನ್ ಮಾಡಿ ನಿಮ್ಮ ಗೋಮಾತೆ ಸೇವೆ ಮಾಡಿ ಪುಣ್ಯ ಕಟ್ಕೊಳ್ಳಿ.

 

ನಾ.. ಸ್ವಾಮಿ : ಅಯ್ಯೋ ಏನಪ್ಪಾ ಮಾಡೋದು. ಹಳ್ಳಿ ಹಠಮಾರಿ ಗಮಾರನಿಗೆ ಹೇಗಪ್ಪಾ ಸಮಜಾಯಿಸಿ ಕೊಡೋದುನೋಡಣ್ಣಾ.. ಹೇಳೋದು ಬೇರೆ. ಸಾಕೋದು ಬೇರೆ. ನಿನ್ನ ಹಸುವನ್ನು ನೀನು ಇಲ್ಲಿಂದ ಮೊದಲು ಹೊಡಕೊಂಡು ಹೋಗು.. ದಾರಿ ಖರ್ಚಿಗೆ ಕಾಸು ಬೇಕಾ ಹೇಳು ಕೊಡ್ತೀನಿ

 

ರೈತ : ಅದೆಂಗಾಯ್ತದೆ ಸಾಮಿ. ನಿಮ್ಮ ತಾಯಿಯನ್ನ ನಾನು ಹೊಡಕೊಂಡು ಹೋದ್ರೆ ಜನಾ ಸುಮ್ಕೆ ಬಿಡ್ತಾರಾ. ಅದೆಲ್ಲಾ ಆಗಾಕಿಲ್ಲ. ನಿಮ್ಮನೆಯೊಳಗೆ ನಿಮ್ಮೌವ್ವನ್ನ ಸೇರಿಸಿಯೇ ನಾನು ಇಲ್ಲಿಂದಾ ಕದಲೋದು.

 

ನಾ..ಸ್ವಾಮಿ : ನೋಡು ಮರ್ಯಾದೆಯಿಂದ ಮುದಿ ಹಸುವನ್ನ ಇಲ್ಲಿಂದಾ ಹೊಡ್ಕೊಂಡು ಹೋದ್ರೆ ಸರಿ. ಇಲ್ಲಾಂದ್ರೆ ಪೊಲೀಸರನ್ನ ಕರೆಸಿ ನಿನ್ನ ಒದ್ದು ಒಳಗೆ ಹಾಕಿಸ್ತೇನೆ. ಯಾರಲ್ಲಿ ಪೋಲೀಸರಿಗೆ ಪೋನ್ ಮಾಡ್ರೋ..

 

ರೈತ : ಸ್ಟೇಶನ್ನೊಳಗ ಹಾಕಿಸ್ತೀರಾ ಹಾಕ್ಸಿ ಧನಿ.. ನಾನೂ ಟಿವಿಯವರಿಗೆ ಪೋನ್ ಮಾಡೇ ಬಂದಿವ್ನಿ. ಅವರೂ ಸ್ವಲ್ಪ ಹೊತ್ನಲ್ಲಿ ಬರ್ತಾರೆ. ಅವರ ಮುಂದೆನೇ ನಿಮ್ದು ನಿಮ್ಮೌವ್ವಂದೂ ಸಮಸ್ಯೆ ಬಗೆಹರೀಲಿ, ಗೋಮಾತೆಗೂ ನ್ಯಾಯಾ ಸಿಗಲಿ.

 

ನಾ..ಸ್ವಾಮಿ : ಮಾತೆತ್ತಿದರೆ ಮೀಡಿಯಾ ಅಂತಿಯಲ್ಲಯ್ಯಾ. ನಿನ್ನ ಹಸು ನೀನೇ ಹೋಗಿ ಸಾಕಿಕೋ. ಇಲ್ಲಿ ಬಂದು ನನ್ನ ತಲಿ ಯಾಕೆ ತಿಂತಾ ಇದ್ದೀಯಾ.

 

ರೈತ : ಅಯ್ಯೋ ನಿಮ್ಮ ಮಾತೆ, ಅದೇ ಗೋಮಾತೆಯನ್ನು ಸಾಕೋಕೆ ನನ್ನ ಹತ್ರ ಸಾಮರ್ಥ್ಯ ಇಲ್ಲಾ ಸ್ವಾಮಿ. ಇದು ಬಡ್ಡಾದ ಹಸು, ದಿನಕ್ಕೆ ಮೂವತ್ತ ಕಿಲೋ ಹುಲ್ಲು, ಹತ್ತು ಕಿಲೋ ಹಿಂಡಿ ತಿಂತದೆ, ನಲವತ್ತು ಲೀಟರ್ ನೀರು ಕುಡೀತದೆ. ಅಷ್ಟೊಂದು ತಂದಾಕೋ ಶಕ್ತಿ ಬಡ ರೈತನಾದ ನನಗೆಲ್ಲಿದೆ. ಇಷ್ಟು ದೊಡ್ಡ ಬಂಗಲೇ ಕಟ್ಕೊಂಡಿದ್ದೀರಾ, ಇದಕ್ಕೂ ಒಂದು ಕೋಣೆ ಕೊಡಿ ಸ್ವಾಮಿ ಪುಣ್ಯಾ ಬತ್ತದೆ.

 

ನಾ.. ಸ್ವಾಮಿ : ಅದನ್ನ ನೋಡಿಕೊಳ್ಳೋರು ಇಲ್ಲಿ ಯಾರೂ ಇಲ್ಲಾ, ನಿಮ್ಮೂರಿಗೆ ಹೊಡಕೊಂಡು ಹೋಗಣ್ಣಾ. ಬೇಕಾದ್ರೆ ಒಂದು ಕ್ವಿಂಟಲ್ ಹಿಂಡಿ ಬೂಸಾ ಕೊಡಿಸ್ತೇನೆ.

 

ರೈತ : ಹೆ ಹ್ಹೇ.. ಅದೆಲ್ಲಾ ಬೇಡ ಸಾರ್ರು. ನನಗೆ ದಿನಕ್ಕಿಷ್ಟು ಸಂಬಳ ಅಂತಾ ಫಿಕ್ಸ್ ಮಾಡಿ ದಿನಕ್ಕೆ ಮೂರು ಹೊತ್ತು ಊಟಕ್ಕೆ ಹಾಕ್ಬಿಡಿ ಸಾಕು. ನಿಮ್ಮನೆ ಆಳಾಗಿದ್ದು ನಿಮ್ಮ ಗೋಮಾತೇನ ಕಣ್ರೆಪ್ಪೆ ಹಂಗೆ ಕಾಪಾಡ್ತೀನಿ. ಬಲಗಾಲಿಟ್ಟು ಮನಿಯೊಳ್ಗೆ ನಡೀ ಗೌರಿ..

 

ನಾ..ಸ್ವಾಮಿ : ಏಯ್. ಅಲ್ಲೇ ನಿಲ್ಲು. ಒಂದೆಜ್ಜೆ ಮುಂದಿಡಬೇಡ. ಅದರ ಜೊತೆ ನಿನ್ನನ್ನೂ ಸಾಕ ಬೇಕಾ. ನಿನಗೇನು ತಲೆಗಿಲೆ ಕೆಟ್ಟಿದೆಯಾ ಇಲ್ಲಾ ನನ್ನ ವಿರೋಧಿಗಳು ನಿನ್ನ ಇಲ್ಲಿಗೆ ಕಳ್ಸಿದ್ದಾರಾ? ಹೋಗೋಗು ಯಾವುದಾದರೂ ಕಸಾಯಿ ಖಾನೆಗೆ ಮುದಿ ಹಸುವನ್ನ ಮಾರಿ ಬಿಡು.

 

ರೈತ : ಮಾತೃ ನಿಂದನೆಯನ್ನು ಮಾತ್ರ ಸಹಿಸಲಾರೆ.. ಅಯ್ಯೊ ಅಯ್ಯಯ್ಯೋ.. ಅನ್ಯಾಯಾನಾ ಕೇಳೋರು ಇಲ್ಲಿ ಯಾರೂ ಇಲ್ವಾ? ತಾಯಿ ಮುದಿಯಾದ ಮಾತ್ರಕ್ಕೆ ಯಾರಾದ್ರೂ ಕಡೀತಾರಾ, ಕೊಲ್ತಾರಾ ಅಂತಾ ಹೇಳಿದ್ ಇವ್ರೆ ಕಸಾಯಿ ಖಾನೆಗೆ ಕಳಿಸಿ ಕೊಲ್ಸು ಅಂತಿದ್ದಾರಲ್ಲಾ.. ಏನ್ ಮಾಡಲಿ. ಗೋಮಾತೆ ಗೋಳು ಯಾರಿಗೆ ಹೇಳ್ಲಿ. ಎಲ್ರಪ್ಪಾ ಬಜರಂಗಿಗಳಾ, ಎಲ್ಲಿದ್ದೀರಪ್ಪಾ ಗೋರಕ್ಷಕರಾ..

 

ನಾ..ಸ್ವಾಮಿ : ಇದೊಳ್ಳೆ ಸಂಕಟ ಆಯ್ತಲ್ಲಾ. ನೋಡಯ್ಯಾ.. ನಿನ್ನ ಹಸು ನೀನೇ ಸಾಕಿಕೋ ಇಲ್ಲಾ ಬೀದಿಗೆ ಬಿಡು ನಮಗೇನು.

 

ರೈತ : ಟಿವಿ ಮುಂದೆ ಗೋಮಾತೆ ಅಂತಾ ಹೇಳಿ ಈಗ ಬೀದಿಗೆ ಬಿಡು ಅಂತಿದ್ದೀರಲ್ಲಾ, ಇಂತಾ ಡಬಲ್ ಗೇಮಾಡೋ ವ್ಯಕ್ತಿನಾ ಕೇಳೋರು ಯಾರೂ ಇಲ್ವಾ. ಎಲ್ಲಿ ಚೀಟಿ ರವಿ, ಎಲ್ಲಿ ನಮ್ಮ ಸೋಬಕ್ಕ, ಎಲ್ಲಿ ನಮ್ಮ ಅಸ್ವಸ್ಥ ನಾಣಿ, ಎಲ್ಲಿದ್ದೀರಿ ಸಾಮ್ರಾಟ ಅಸೋಕಾ.. ಗೋಮಾತೆಗೆ ಅವಮಾನ ಆಗ್ತಿದೆ ಬರ್ರಿ. ನಿಮ್ಮಲ್ಲಿ ಯಾರಾದ್ರೂ ನಿಮ್ಮ ಮಾತೆಯನ್ನ ಕರ್ಕೊಂಡೋಗಿ ನಿಮ್ಮ ಮನೆಯೊಳಗೆ ಸಾಕಿ ಪೂಜೆ ಮಾಡ್ಕೊಳ್ರಿ.

 

ನಾ..ಸ್ವಾಮಿ : ಇದಕ್ಕೆ ಅವರೆಲ್ಲಾ ಯಾಕೆ ಬರಬೇಕು. ಒಂದ್ ಕೆಲ್ಸಾ ಮಾಡು, ಹಣ ತಗೊಂಡು ಯಾವುದಾದರೂ ಟೆಂಪೋದಲ್ಲಿ ಗೋಮಾತೆಯನ್ನು ಹೇರ್ಕೊಂಡು ಊರು ಸೇರ್ಕೋ.

 

ರೈತ : ಯಾಕ್ ಸ್ವಾಮಿ ನಾನು ಬದ್ಕಿರೋದು ನಿಮ್ಗಿಷ್ಟ ಇರದೇ ಇರ್ಬೋದು. ಆದರೆ ನನಗೆ ಸಾಯೋಕೆ ಇಷ್ಟಾ ಇಲ್ಲಾ. ಅಲ್ಲಿ ಗಲ್ಲಿಗಲ್ಲಿಯಲ್ಲಿ ನಿಮ್ಮ ಸ್ವಘೋಷಿತ ಗೋರಕ್ಷಣಾ ಗೂಂಡಾಗಳು ಕಾಯ್ತಾ ಇದ್ದಾರೆ ಸ್ವಾಮಿ. ಹಸು ಸಾಗಿಸೋದನ್ನ ನೋಡಿದ್ರೆ ಸಾಕು ನನ್ನ ಹಿಡ್ದು ಹೊಡ್ದು ಕೊಂದೇ ಬಿಡ್ತಾರೆ. ನಾನಂತೂ ಹೋಗಾಕಿಲ್ಲಾಂದ್ರ ಹೋಗಾಕಿಲ್ಲ.

 

ನಾ..ಸ್ವಾಮಿ : ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲಾ. ಹೋಗಲಿ ಗೋಶಾಲೆಗಳನ್ನ ನಮ್ಮ ಸರಕಾರ ಮಾಡಿದೆ. ಅಲ್ಲಿ ಹೋಗಿ ಇದನ್ನ ಬಿಟ್ಟು ಕೈಮುಗಿದು ನಿಮ್ಮೂರಿಗೆ ಹೋಗು.

 

ರೈತ : ಅದೆಂಗಾಯ್ತದೆ ಸಾಮಿ. ಹನ್ನೆರಡು ವರ್ಸ ತಿನಿಸಿ ಉಣಿಸಿ ಇದನ್ನ ಸಾಕಿವ್ನಿ. ಎಷ್ಟೊಂದು ಕಾಸು ಖರ್ಚು ಮಾಡಿವ್ನಿ. ಈಗ ಹಂಗೆ ಪುಗ್ಸಟ್ಟೆ ನಾನ್ಯಾಕೆ ಬಿಟ್ಟು ಕೊಟ್ಟು ಹೋಗಲಿ

 

ನಾ..ಸ್ವಾಮಿ : ಏಯ್ ಉಚ್ಚೆ ಹೋಯ್ತಿದೆ. ಹೊರಗೆ ಹೊಡ್ಕೊಂಡು ಹೋಗಯ್ಯಾ.. ಹೊಲಸು ನಾತಾ ತಡಿಯೋಕಾಗ್ತಿಲ್ಲ

 

ರೈತ : ಏನ್ ಧನಿ ಒಂದಿನ, ಒಂದಪ ಸಗಣಿ ಹಾಕಿ ಉಚ್ಚೆ ಹೊಯ್ದರೆ ಹೊಲಸು ನಾತಾ ಅಂತೀರಲ್ಲಾ. ನಾವು ಗೋಪಾಲಕರು ದಿನಾಲೂ ಹಸುಗಳ ಜೊತೇಲೇ ಬದುಕ್ತೀವಲ್ಲಾ ನಾವು ಮನುಷ್ಯರಲ್ವಾ. ನಿಮಗೆ ಕುಡಿಯೋಕೆ ಹಾಲು ಬೇಕು ನಾತಾ ಬೇಡಾ. ಸಗಣಿ ಹಾಕಿ ಬೆಳೆದ ಆಹಾರ ತಿನ್ನೋಕೆ ಬೇಕು ಸಗಣಿ ಹಾಕೋ ಹಸು ಬೇಕಾಗಿಲ್ಲ ಅಲ್ವರಾ..

 

ರೈತ : ಆಯ್ತಣ್ಣಾ.. ಈಗ ನೀ ಹಸುವನ್ನ ಇಲ್ಲಿಂದಾ ಹೊಡ್ಕೊಂಡು ಹೋಗಬೇಕಂದ್ರ  ನಾ ಏನ್ ಮಾಡ್ಬೇಕು ಅದನ್ನ ಹೇಳು. ಸುಮ್ಕೆ ಟಾರ್ಚರ್ ಕೊಡಬ್ಯಾಡ.

 

ರೈತ : ಅಲ್ಲಾ ಸ್ವಾಮಿ ನಾವು ಗೋಪಾಲಕರು ಸಾಕಿದ ಹಸೂನ ಸಾಕ್ತೀವೋ ಮಾರ್ತಿವೋ ಕೊಲ್ತಿವೋ ಅದು ನಮಗೆ ಬಿಟ್ಟ ವಿಚಾರ. ಅನುಪಯುಕ್ತ ಹಸುವನ್ನೂ ಹತ್ಯೆ ಮಾಡಬಾರದು ಅಂತಾ ಕಾನೂನು ತರೋಕೆ ನೀವ್ಯಾರು

 

ನಾ..ಸ್ವಾಮಿ : ಅದು ಗೋಮಾತೆಅದರಲ್ಲಿ ಮುಕ್ಕೋಟಿ ದೇವತೆಗಳಿವೆ. ಅದಕ್ಕೆ ಕೊಲ್ಲುವುದು ಮಹಾಪಾಪ.

 

ರೈತ : ಹೌದಾ.. ಹಾಗಾದರೆ ಒಂದಾದರೂ ದೇವರನ್ನ ತೋರ್ಸಿ ನೋಡೋಣಕೋಣ ಎಮ್ಮೆಗಳಲ್ಲಿ ಇಲ್ಲದ ದೇವರ್ಗಳು ಹಸುವಿನಲ್ಲಿ ಎಲ್ಲಿವೆ ತೋರ್ಸಿ ಸ್ವಾಮಿ.

 

ನಾ..ಸ್ವಾಮಿ : ಅದು ಅಸಂಖ್ಯಾತ ಹಿಂದೂಗಳ ಭಾವನೆಯಾಗಿದೆ. ಗೋಮಾತೆ ಹತ್ಯೆ ಮಾಡಿದರೆ ಅವರ ಭಾವನೆಗಳು ಘಾಸಿ ಆಗುತ್ತವೆ ಅರ್ಥ ಮಾಡ್ಕೋ..

 

ರೈತ : ರ್ರೀ ಯಾವುದೊ ವೈದಿಕರ ಭಾವನೆ ನಂಬಿಕೆಗಳನ್ನ ಯಾಕ್ರೀ ಗೋಪಾಲಕರ ಮೇಲೆ ಹೇರ್ತಿದ್ದೀರಿ. ರೈತರಾದ ನಮಗೆ ಭಾವನೆ ಇಲ್ವಾ. ಹಾಲು ಕೊಡುವ ಹಸುವನ್ನು ನಾವು ಕೊಲ್ತೀವಾ? ಮುದಿಯಾದ ಹಸುಗಳನ್ನ ಹೇಗೆ ಸಾಕೋದು. ಮಾರೋಹಂಗೂ ಇಲ್ಲಾ, ಕೊಲ್ಲೋಹಂಗೂ ಇಲ್ಲಾ. ಇದು ನಮ್ಮಂತ ಕೊಟ್ಯಾಂತರ ಗೋಪಾಲಕರ ಭಾವನೆ ಹಾಗೂ ಬದುಕಿಗೆ ದಕ್ಕೆ ಅಲ್ವಾ

 

ನಾ.ಸ್ವಾಮಿ : ಇವನಿಗೆ ಹೇಗಪ್ಪಾ ಹೇಳೋದು. ಅಣ್ಣಾ ರೈತಣ್ಣಾ.. ನಿಮ್ಮಂತವರ ಹಿತರಕ್ಷಣೆಗೆ ಗೋಹತ್ಯಾ ನಿಷೇಧ ಕಾಯ್ದೆ ತಂದಿರೋದು. ನಿಮ್ಮ ಹಸುಗಳು ಕಳ್ಳಸಾಗಣಿಕೆಯಾಗದಂತೆ ಕಾಪಾಡಲೆಂದೇ ಕಾನೂನು ತಂದಿರೋದು.

 

ರೈತ : ಹೌದಾ! ನನಗೊತ್ತೇ ಇರಲಿಲ್ಲ ಸ್ವಾಮಿ. ಈಗ ಕಾಯ್ದೆ ಜಾರಿಗೆ ಬಂದಮ್ಯಾಗೆ ಕಳ್ಳತನ ನಿಂತೋಗಿದೆಯಾ? ದನ ಕಳ್ಳತನ ಆಗೋದಾದ್ರೆ ಅದನ್ನ ನಿಲ್ಲಿಸೋಕೆ ಆಗದಷ್ಟು ನಿಮ್ಮ ಪೊಲೀಸ್ ವ್ಯವಸ್ಥೆ ಅಷ್ಟೊಂದು ದುರ್ಬಲವಾಗಿದೆಯಾ ? ಒಂದು ರಾಜ್ಯದಲ್ಲಿ ನಿಷೇಧ ಇನ್ನೊಂದರಲ್ಲಿ ಇಲ್ಲಾ ಅಲ್ವಾ. ಕರ್ನಾಟಕದಲ್ಲಿ ಹಸು ಕಡೀಬಾರದು ಗೋವಾದಲ್ಲಿ ಕೊಂದು ತಿನ್ನಬಹುದು. ಎರಡೂ ರಾಜ್ಯದಲ್ಲಿ ನಿಮ್ದೇ ಅಲ್ವಾ ಸಾಮಿ ಸರಕಾರ ಇದ್ದದ್ದು. ಹೋಗಲಿ ನಮ್ಮ ದೇಶದಲ್ಲಿ ಗೋಹತ್ಯೆ ನಿಷೇಧಿಸಿದ್ದೀರಲ್ವಾ, ಹಾಗಾದರೆ ವಿದೇಶಕ್ಕೆ ರಪ್ತಾಗುವ ಗೋಮಾಂಸ ಎಲ್ಲಿಂದ ಹುಟ್ತು ದೊರೆಗಳೇ. ಹಾಗೆ ಗೋಮಾಂಸ ರಪ್ತು ಮಾಡೋರು ನಿಮ್ಮದೇ ಪಕ್ಷದವರು, ಸಮರ್ಥಕರು ಅಲ್ವಾ

 

ನಾ..ಸ್ವಾಮಿ : ನೋಡು ಅದೆಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗ ವಾದ ಎಲ್ಲಾ ಬೇಕಾ?

 

ರೈತ : ಅರೆ.. ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೊದ್ದಂಗೆ ಯಾಕಾಡ್ತೀರಾ ಮಾಸ್ವಾಮಿ. ನಾನೇಳೋದ್ರಲ್ಲಿ ತಪ್ಪೇನೈತೆ. ನೀವೇನಾದ್ರೂ ಕಾನೂನು ಮಾಡ್ಕೊಂಡ್ ಸಾಯ್ರಿ. ಗೊಡ್ಡು ದನಗಳನ್ನ ಏನು ಮಾಡಬೇಕು ಅದನ್ನ ಹೇಳ್ರಿ.

 

ನಾ..ಸ್ವಾಮಿ : ಅವುಗಳಿಗಾಗೇ ಗೋಶಾಲೆಗಳನ್ನ ಮಾಡಿದ್ದೀವಲ್ಲಾ? ಅಲ್ಲಿ ಬಿಟ್ಟು ಹೋಗು ಆಯ್ತಾ?

 

ರೈತ : ಅಲೆಲೆಲೆ.. ನಾವ್ಯಾಕೆ ನಮ್ಮ ದನಗಳನ್ನ ಪುಕ್ಸಟ್ಟೆ ಬಿಟ್ಟುಕೊಡಬೇಕು ಸಾರ್ರು.. ನೀವೇನಾದ್ರೂ ಅನುಪಯುಕ್ತ ಹಸುಗೆ ಬೆಲೆ ಕಟ್ಟಿ ರೈತರಿಗೆ ಸರಕಾರದಿಂದ ಕಾಸು ಕೊಡಿಸ್ತೀರಾ? ಪುಗ್ಸಟ್ಟೆ ಕೊಟ್ರೆ ನಮಗಾದ ನಷ್ಟ ತುಂಬಿಕೊಡೋರು ಯಾರು ಸ್ವಾಮಿ.

 

ನಾ..ಸ್ವಾಮಿ : ಹೆ ಹೇ.. ಬರಡು ದನಗಳಿಗೆ ಯಾರು ಹಣ ಕೊಡ್ತಾರಣ್ಣಾ..

 

ರೈತ : ಅವು ನಮಗೆ ಬರಡು ಹಸುಗಳು. ನಿಮಗೆ ಗೋಮಾತೆಯರುಅವ್ವಂದಿರು ತಾಯಂದಿರು ಅಲ್ವರಾ. ನಿಮ್ಮ ತಾಯಿಗಳಿಗೆ ಕನಿಷ್ಟ ಬೆಲೆಯೂ ಇಲ್ವಾ. ನಿಮ್ಮ ತಾಯಿಗೆ ವಯಸ್ಸಾದ್ರೆ ನೀವು ವೃದ್ದಾಶ್ರಮಕ್ಕೆ ಬಿಟ್ಟು ಕೈ ತೊಳೆದುಕೊಳ್ತೀರಾ

 

ನಾ..ಸ್ವಾಮಿ : ಮತ್ತೆ ಮತ್ತೆ ನನ್ನ ತಾಯಿ ವಿಷಯಕ್ಕೆ ಯಾಕೆ ಬರ್ತೀ. ಇದೇ ಬೇರೆ ಅದೇ ಬೇರೆ.

 

ರೈತ : ಹಂಗಂತಾ ಟಿವಿಯವರ ಮುಂದೆ ಹೇಳಬೇಕಾಗಿತ್ತು. ಕ್ಯಾಮರಾ ಮುಂದೆ ಹಸು ನಮ್ಮ ತಾಯಿ, ನಮ್ಮ ಅಮ್ಮ. ಯಾರಾದರೂ ತಾಯಿ ಮುದಿಯಾದಳೆಂದು ಹತ್ಯೆ ಮಾಡುತ್ತಾರೆಯೇ, ಅದಕ್ಕಾಗಿಯೇ ಗೋಹತ್ಯಾ ನಿಷೇಧ ಕಾನೂನು ತಂದಿರೋದು ಅಂತೆಲ್ಲಾ ಪುಂಗಿರೋದು ನೀವೇ ಅಲ್ವಾ ದೊರೆ. ಮತ್ಯಾಕೆ ಹೇಳಿದಂಗೆ ನಡಕೊಳ್ಳೊಲ್ಲಾ.

 

ನಾ..ಸ್ವಾಮಿ : ನೋಡಣ್ಣಾ.. ನಮ್ಮ ಮೇಲಿನವರು ಏನು ಹೆಂಗೆ ಹೇಳು ಅಂತಾರೋ ಹಂಗೆ ನಾವು ಹೇಳ್ತೀವಿ ಅಷ್ಟೇ.

 

ರೈತ : ಅಂದ್ರೆ ನಿಮ್ಗೆ ನಿಮ್ಮೊಂತೋರಿಗೆ ಸ್ವಂತ ಬುದ್ದಿ ಅನ್ನೂದು ಇಲ್ಲಾ ಅಂದಂಗಾತು. ಅವರು ಸಗಣಿ ತಿನ್ನು ಅಂದ್ರೆ ನಾಲಿಗೆಯಿಂದ ನೆಕ್ತೀರಿ ಅಲವ್ರಾ. ನಿಮ್ಗೆ ನಾಚಿಕೆ ಆಗೋದಿಲ್ವಾ. ಅವರು ಮೇಲ್ಜಾತಿ ಜನ ನಿಮ್ಮಂತಾ ದಲಿತರು ಹಾಗೂ ಶೂದ್ರರ ಬಾಯೊಳಗ ಬ್ರಾಹ್ಮಣ್ಯದ ಆಚಾರ ವಿಚಾರಗಳ್ನ ಹೇಳಿಸ್ತಾ ಇದ್ರೆ ನಿಮ್ಗೆ ಅದು ತಪ್ಪು ಅಂತಾ ಅನ್ನಿಸ್ತಿಲ್ವಾ. ನಿಮ್ಮ ಮತಾಂಧ ಸಂಘಿಗಳ ಕೋಮು ದ್ವೇಷಕ್ಕೆ, ಕಾರ್ಪೋರೇಟ್ ಕಟುಕರುಗಳ ಹಿತಾಸಕ್ತಿಗಾಗಿ ಗೋಹತ್ಯಾ ನಿಷೇಧ ಮಾಡಿ ನಮ್ಮಂತಾ ಬಡವರ ಬಾಳನ್ನು ಯಾಕ್ರಯ್ಯಾ ಹಾಳು ಮಾಡ್ತಿದ್ದೀರಿ?

 

ನಾ..ಸ್ವಾಮಿ : ನೀ ಎಷ್ಟು ಬೈದರೂ ಇಲ್ಲಿ ಯಾವುದೂ ಬದಲಾಗೋದಿಲ್ಲ ಸುಮ್ಕಿರಣ್ಣಾ.

 

ರೈತ : ಕುಲಘಾತುಕರಾದ ನಿಮಗೆ ಮಾನ ಮರ್ಯಾದೆ ನಾಚಿಕೆ ಯಾವುದೂ ಆಗೂದಿಲ್ವಾ. ಸತ್ತ ಒಂದು ಹಸು ನಿಮ್ಮ ಜನಾಂಗದ ನೂರು ಜನರ ಹಸಿವು ನೀಗಿಸ್ತಿತ್ತು. ಮುದಿ ಹಸು ಮಾರಿದ್ರೆ ರೈತರ ಮನೇಗೆ ಮೂರು ತಿಂಗ್ಳು ರೇಶನ್ ಸಿಗ್ತಿತ್ತು. ಕೆಲಸಕ್ಕೆ ಬಾರದ ಜೀವವಿರೋಧಿ ಕಾನೂನು ಮಾಡಿ ಕೆಳವರ್ಗದ ಹೊಟ್ಟೆ ಮೇಲೆ ಹೊಡಿದ್ರಿ ಅಂತಾ ನಿಮಗೆ ಅನ್ನಿಸೋದಿಲ್ವಾ. ಅವರು ನಿಮ್ಮ ಸಂಘಿ ನಾಯಕರುಗಳು ಮೈಗೆ ಜನಿವಾರ ಹಾಕ್ಕೊಂಡ್ರೆ ಅವರ ಚೇಲಾ ಬಾಲಗಳಾದ ನೀವು ದಲಿತ ಶೂದ್ರರುಗಳು ಮನಸಿಗೆ ಜನಿವಾರ ಹಾಕ್ಕೊಂಡು ಅವರ ತಾಳಕ್ಕೆ ತಕ್ಕಂತೆ ತಕಾತಕಾ ಅಂತಾ ತಿಕಾ ತಿರುಗಿಸ್ಕೊಂಡು  ಕುಣಿತಾ ನಿಮ್ಮ ವರ್ಗದವರಿಗೆ ವಂಚನೆ ಮಾಡ್ರಾ ಇದ್ದೀರಲ್ಲಾ ನಿಮಗೆ ಪಶ್ಚಾತ್ತಾಪ ಅನ್ನೂದss  ಇಲ್ವಾ..

 

ನಾ..ಸ್ವಾಮಿ : ಹಂಗೆಲ್ಲಾ ನಾಚಿಕೆ ಪಶ್ಚಾತ್ತಾಪ ಇಟ್ಕೊಂಡ್ರೆ ರಾಜಕೀಯ ಮಾಡೋಕಾಗುತ್ತೇನು. ಹೋ.. ಬೇಗ ಬನ್ನಿ ಇನ್ಸಫೆಕ್ಟರೇ ಅನಧೀಕೃತವಾಗಿ ನಮ್ಮನೆ ಪ್ರವೇಶಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆಂದು ದೂರು ದಾಖಲಿಸಿ ಇವನನ್ನ ಮೊದಲು ಜೈಲಿಗೆ ಹಾಕಿ. ಮುದಿ ಹಸುವನ್ನು ನಮ್ಮ ಗೋರಕ್ಷಕರಿಗೆ ಒಪ್ಪಿಸಿ. ಅವರು ಅದಕ್ಕೊಂದು ಗತಿ ಕಾಣಿಸ್ತಾರೆ.

 

ರೈತ : ಬಿಡ್ರಿ.. ಗೋಹತ್ಯೆ ನಿಷೇಧ ಮಾಡಿ ಕೋಟ್ಯಾಂತರ ಜನ ಗೋಪಾಲಕರು ಹಾಗೂ ಮಾಂಸಾಹಾರಿಗಳ ಬದುಕನ್ನೇ ಕಿತ್ತುಕೊಂಡ ಇಂತವರನ್ನ ಮೊದಲು ಬಂಧಿಸಿ..ಬಿಡ್ರಿ.. ನನ್ನ ಬಾಯಿ ಯಾಕೆ ಮುಚ್ತೀರಿ.. ಮಾತಾಡಲು ಬಿಡ್ರಿ.. ಯಾಕೆ ಹೊಡೀತೀರಿ ಬಿಡ್ರಿ.. ( ಪೊಲೀಸರು ರೈತನನ್ನು ಎಳೆದುಕೊಂಡು ಹೋಗುವರು. ಟಿವಿ ವಾಹಿನಿಯವರು ಓಡಿ ಬರುವರು)

 

ನಾ.. ಸ್ವಾಮಿ : ನೋಡಿ.. ನನ್ನ ತಾಯಿಯಾದ ಗೋಮಾತೆಯನ್ನು ವ್ಯಕ್ತಿ ಹತ್ಯೆ ಮಾಡಲು ಎಳೆದೊಯ್ತುತ್ತಿದ್ದ. ಅದನ್ನು ನಾನು ತಡೆದಾಗ ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ. ಗೋಮಾತೆ ರಕ್ಷಣೆಗಾಗಿ ನನ್ನ ಪ್ರಾಣವನ್ನೇ ಕೊಡಬಲ್ಲೆ. ನನ್ನ ತಾಯಿಯನ್ನು ಕೊಲ್ಲಲು ಬಂದರೆ ನಾನು ಸುಮ್ಮನೇ ಕೂಡುವವನಲ್ಲ. ಗೋಮಾತೆಗೆ ಜೈ.. ದೇವಾನುದೇವತೆಗಳ ಒಡಲಲಿಟ್ಟುಕೊಂಡ ಗೋದೇವಿಗೆ ಜೈ.. 

 

*- ಶಶಿಕಾಂತ ಯಡಹಳ್ಳಿ*

 

(ಸಂದರ್ಭ :

ಪಶುಸಂಗೋಪನಾ ಸಚಿವರು ಕೋನ ಎಮ್ಮೆಗಳನ್ನು ಕಡಿಯುವುದಾದರೆ ಹಸುವನ್ನು ಯಾಕೆ ಕಡಿಯಬಾರದು. ಗೋನಿಷೇಧ ಕಾಯಿದೆ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಕ್ಕೆ ಪ್ರತಿಯಾಗಿ

ಜೂನ್ 6 ರಂದು ಚಲವಾದಿ ನಾರಾಯಣಸ್ವಾಮಿಯವರು ಗೋಮಾತೆ ನನ್ನ ಅವ್ವ, ನನ್ನ ತಾಯಿ, ತಾಯಿಯನ್ನು ಯಾರಾದರೂ ಕಡೀತಾರಾ ಅಂತಾ ಟಿವಿ ಮಾಧ್ಯಮಗಳ ಮುಂದೆ ಪ್ರಶ್ನಿಸಿದರು. ಇದರ ಆಧಾರದ ಮೇಲೆ ಪ್ರಹಸನ ರಚಿಸಲಾಗಿದೆ. )

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ