ಕುಂದಾಪುರದ ಕೆಂಬೂತ (ಪ್ರಹಸನ-21)
(ಪ್ರಹಸನ-21)
ಕುಂದಾಪುರದ ಕೆಂಬೂತ
******************************
(ನಿನ್ನೆ
ಕುಡಿದ ಸರಾಯಿ ಮತ್ತಿನಲ್ಲಿ ಕುಂದಾಪುರದ ಕೆಂಭೂತವೊಂದು ಲಿಬರಲ್ ಎನ್ನುವ ನವಿಲುಗರಿಗಳನ್ನು ಮೈಮನಸಿಗೆ
ಕಟ್ಟಿಕೊಂಡು ಯಥಾಪ್ರಕಾರ ತಕತಕವೆಂದು ಕುಣಿಯುತ್ತಾ ವೀರಗಾಸೆ ಕುಣಿತ ಆರಂಭಿಸಿತು.)
ಕೆಂಭೂತ
: ಆಹಾ ರುದ್ರಾ.. ನನ್ನ ಕೋಳಿ ಕೂಗಬೇಕು ಆಗಲೇ ಬೆಳಕಾಗಬೇಕು. ಇಲ್ಲವಾದರೆ ಕೋಳಿ ಕೋಳಿಯಲ್ಲಾ, ಳಕು
ಬೆಳಕಲ್ಲಾ. ಓಹೋ ರುದ್ರಾ.. ಇಲ್ಲಿ ನನ್ನ ಸಮ ಯಾರಿದ್ದೀರಿ ಇಲ್ಲಿ ನನ್ನ ಸರಿಸಮ . ನಾನೇ ಎಲ್ಲಾ ಬಲ್ಲ
ಸರ್ವಜ್ಞ, ಫೇಸ್ ಬುಕ್ ಎನ್ನುವುದೇ ನನ್ನ ಸಾಮ್ರಾಜ್ಯ. ಆಹೋ ರುದ್ರ. ನನ್ನಲ್ಲಿ ಸಲ್ಲುವವರು ಎಲ್ಲ
ಕಡೆ ಸಲ್ಲುವರು, ನನಗೆ ಸಲ್ಲದವರು ಎಲ್ಲಿಯೂ ಸಲ್ಲರೂ.
ಮೇಳದವ
: ಹೌದಪ್ಪಾ ಹೌದು. ಮುಂದೆ..
ಕೆಂಭೂತ
: ಇವತ್ತು ಯಾರ ಚಾರಿತ್ರ್ಯ ವಧೆ ಮಾಡಬೇಕು ಎಂಬುದನ್ನು ನಿನ್ನೆ ರಾತ್ರಿ ನಡೆದ ಪಾನಗೋಷ್ಠಿಯಲ್ಲೇ ಯೋಚಿಸಿ
ಇಟ್ಟಿರುವೆ. ಈಗಾಗಲೇ ಟಾರ್ಗೆಟ್ ಫಿಕ್ಸ್ ಮಾಡಿರುವೆ. ಅದು ರಂಗಭೂಮಿ ಉಡುಪಿ. ಹೌದು ರುದ್ರಾ.. ಉಡುಪಿಯ
ರಂಗಭೂಮಿ ಹಿಂದುತ್ವವಾದಿ ನಿಲುವಿನ ಸಂಸ್ಥೆ. ಬಿಜೆಪಿ ಶಾಸಕರಿಗೆ, ಮುಸುಕಿನ ಪ್ರಗತಿಪರರಿಗೆ ವೇದಿಕೆ
ಕೊಡುವ ಸಂಸ್ಥೆ. ನನ್ನಂತಹ ಮೇಧಾವಿಗಳ ಮಹತ್ವ ಅರಿಯದಲೇ ಮೂಲೆಗುಂಪು ಮಾಡಿದ ಸಂಸ್ಥೆ. ಇದು ಅನ್ಯಾಯ..
ಅನ್ಯಾಯ ಅಂದ್ರೆ ಇದು.
ಮೇಳದವ
: ಹೌದೌದು.. ನಿಮ್ಮಂತಾ ಪ್ರಕಾಂಢ ಪಂಡಿತ, ಗಂಡಬೇರುಂಡ, ಭೂಮಿಗೆ ಭಾರ ಕೂಳಿಗೆ ದಂಡಪಿಂಡನಿಗೆ ಮಾಡಿದ
ಅವಮಾನ, ಇದು ಘನಘೋರ ಅಪಮಾನ.
ಕೆಂಭೂತ
: ಆಹಾ ರುದ್ರ. ಮಂಡ್ಯ ರಮೇಶನಿಗೆ ಪ್ರಗತಿಪರ ನಿಲುವಿಲ್ಲ, ಅಡ್ಡಂಡನಿಗೆ ಬೆಂಬಲ ಘೋಷಿಸಿದವ. ಇಂತವರು
ಪ್ರಗತಿಪರರಿಗೆ ಇಷ್ಟವಾಗುವುದು ನನಗೆ ಇಷ್ಟವಿಲ್ಲ. ಯಾಕೆಂದರೆ ನಾನೇ ಎಲ್ಲಾ, ನನ್ನ ಬಿಟ್ರೆ ಇಲ್ಲಿ
ಬೇರೆ ಏನೂ ಇಲ್ಲ.
ಮೇಳದವ
: ಭಲೆ ಭಲೆ, ಒಪ್ಪಬೇಕಾದ ಮಾತು.. ಭಳಾರೆ ಭಲೆ..
ಕೆಂಭೂತ
: ಹೌದೌದು ರುದ್ರ. ಉಡುಪಿಯಲ್ಲಿ ಪರೋಕ್ಷ ಹಿಂದುತ್ವವಾದಿಯಾಗಿರುವ ರಥಬೀದಿ ಗೆಳೆಯರು ಅಂತಾ ರಂಗತಂಡವಿದೆ.
ಹಿಂದುತ್ವವಾದಿಗಳಿಗೆ ವೇದಿಕೆ ಒದಗಿಸುತ್ತದೆ. ನಾ.ಮೊಗಸಾಲೆಯಂತಹ ಲಿಬರಲ್ ಅಲ್ಲದ ವ್ಯಕ್ತಿಗೆ ಮತ್ತೆ
ಮತ್ತೆ ಮಣೆ ಹಾಕಲಾಗುತ್ತದೆ. ಆದರೆ ನನ್ನಂತ ನಿಂದನಾ ಪ್ರವೀಣನಾದ ಟೀಕಾಸ್ತ್ರವಾದಿಗಳನ್ನು ದೂರವಿಡುತ್ತದೆ.
ಇದು ಅನ್ಯಾಯ, ಅಕ್ಷಮ್ಯ. ಇಂತವರನ್ನು ಯಾರು ಕ್ಷಮಿಸಿದರೂ ನಾನು ಕ್ಷಮಿಸುವವನಲ್ಲಾ. ಸುಮ್ಮನಿರುವವನೂ
ಅಲ್ಲಾ
ಮೇಳದವ
: ಹೌದಲ್ವಾ.. ತಪ್ಪು ತಪ್ಪು. ಉಡುಪಿ ಜಿಲ್ಲೆಯಲ್ಲಿ ನಿಮ್ಮಂತಾ ಕಲಾಕೋವಿದರನ್ನು ಬಿಟ್ಟು ಬೇರೆಯವರನ್ನು
ಕರೆಸುವುದಾ.. ಸಲ್ಲದು ಸಲ್ಲದು.
ಕೆಂಭೂತ
: ಆಹಾ ರುದ್ರಾ.. ಯಾಕೆ ಹೀಗಾಗಿದೆ? ರಂಗಭೂಮಿ ತಂಡಗಳ ಒಟ್ಟಾರೆ ಉದ್ದೇಶ ಯಾಕಿಷ್ಟು ಶಿಥಿಲವಾಗಿದೆ.
ಕಾಲದ ಬಿಕ್ಕಟ್ಟು ರಾಡಿಕಲ್ ಸ್ಪೇಸ್ ಒಳಗೂ ಪ್ರವೇಶಿಸಿದೆಯೇ? ನನ್ನ ಪ್ರಶ್ನೆಗೆ ಉತ್ತರಿಸುವವರು ಯಾರೂ
ಇಲ್ಲವೇ?
ಮೇಳದವ
: ಯಾಕಿಲ್ಲಾ.. ಇದ್ದೇವೆ. ಇಷ್ಟೊತ್ತು ನಿನ್ನ ಆಟಾಟೋಪಕ್ಕೆ ಉಘೇ ಅಂದಿದ್ದಾಯ್ತು. ಈಗ ಸತ್ಯ ಹೇಳುತ್ತೇವೆ
ಕೇಳುವಂತವನಾಗು ಕುಂದಾಪುರದ ಕೆಂಭೂತವೇ. ರಂಗಭೂಮಿ ಎಂದರೆ ನಿನ್ನ ಮೂಗಿನ ನೇರಕ್ಕೆ ಇರುವಂತಹುದಲ್ಲಾ.
ಎಲ್ಲಾ ವಿಭಿನ್ನ ಯೋಚನೆ, ಆಲೋಚನೆ, ವಿಚಾರ, ಆಚಾರ ಸಿದ್ದಾಂತಗಳನ್ನು ಹೊಂದಿದವರಿಂದ ಕೂಡಿದೆ. ಇಲ್ಲಿ
ನಾಟಕದ ಆಕೃತಿ ಆಶಯ ಮುಖ್ಯವೇ ಹೊರತು ವ್ಯಕ್ತಿಗತ ವಿಚಾರಗಳಲ್ಲ. ಎಡ ಬಲ ನಡುಗಳ ಹಂಗಿಲ್ಲದೇ ಎಲ್ಲರನ್ನೂ
ಎಲ್ಲವನ್ನೂ ಒಳಗೊಂಡಿದ್ದೇ ರಂಗಭೂಮಿ. ನಿನ್ನಂತಾ ಶ್ರೇಷ್ಟತೆಯ ವ್ಯಸನ ಪೀಡಿತ ಅರೆಹುಚ್ಚರಿಗೂ ಆಶ್ರಯಕೊಟ್ಟಿದ್ದೂ
ಸಹ ಇದೇ ರಂಗಭೂಮಿ.
ಕೆಂಭೂತ
: (ಅಹಮಿಕೆ ಘಾಸಿಗೊಂಡು ಎರಡು ಸುತ್ತು ತಕತಕ ಕುಣಿದು ಮುಂದೆ ಕುಣಿಯಲಾಗದೇ ನಿಟ್ಟುಸಿರಿಡುತ್ತಾ) ಯಾರು
ಯಾರದು ನನ್ನ ವಿರುದ್ಧ ಮಾತಾಡುವುದು. ಅತಳ ವಿತಳ ಸುತಳ ತಳಾತಳ ಪಾತಾಳದಲ್ಲಿ ನನ್ನಂತಾ ಲಿಬರಲ್ ಜ್ಞಾನಿ
ಇನ್ನೊಬ್ಬನಿಲ್ಲ. ಇಲ್ಲಿ ನಾನು ಹೇಳಿದ್ದೇ ವೇದವಾಕ್ಯ, ನಾನು ಬರೆದಿದ್ದೇ ಶಾಸನ. ಇಂತಹ ನನ್ನನ್ನು
ವಿರೋಧಿಸುವ ಶಕ್ತಿ ತಾಕತ್ತು ದಮ್ಮು ಯಾರಿಗಿದೆ. ಅಂತಹ ವಿರೋಧಿಗಳನ್ನು ಫೇಸ್ಬುಕ್ನಲ್ಲಿ ನಿಂದಿಸಿ
ವಾಟ್ಸಾಪ್ನಲ್ಲಿ ಮಾನ ಹರಾಜು ಹಾಕಿಬಿಡುತ್ತೇನೆ. ವಸಂತ ಕಾಲದಲಿ ಲಿಬರಲ್ ಆಗಿ ಬಿನ್ನಾಣ ತೋರಿ ಕುಣಿಯುವ
ನವಿಲು ನಾನು. ನನಗೇ ಪ್ರತಿರೋಧವೇ..?
ಮೇಳದವ
: ಮೂರ್ಖಾ.. ನೀನು ನವಿಲೆಂಬುದು ನಿನ್ನ ಭ್ರಮೆ. ಲಿಬರಲ್ ಎಂದು ಸ್ವಘೋಷಣೆ ಮಾಡಿಕೊಂಡು, ಸ್ವಯಂಕೃತವಾಗಿ
ನವಿಲಿನ ಪ್ರಗತಿಪರತೆಯ ಪುಕ್ಕಗಳ ಕಟ್ಟಿಕೊಂಡು ಕುಣಿದರೂ ನೀನೂ ಕೆಂಭೂತವೇ. ಅದರಲ್ಲೂ ಕುಡುಕ ಕೆಂಬೂತ.
ಕೆಲವೊಮ್ಮೆ ಕೆಡುಕ ಕೆಂಭೂತ. ರಂಗಭೂಮಿ ಎನ್ನುವ ಅವಿಭಕ್ತ ಮನೆಯಲ್ಲಿ ಒಡಕು ಹುಟ್ಟಿಸುವ ತೊಡಕು ಕೆಂಭೂತ.
ನಿನ್ನ ಆಟಾಟೋಪವನ್ನು ಸಾಹಿತ್ಯ ಕ್ಷೇತ್ರದಲ್ಲಿ ಇಟ್ಟುಕೋ ರಂಗಭೂಮಿಯಲ್ಲಲ್ಲಾ ತಿಳಿದುಕೋ.
ಕೆಂಭೂತ
: ಆಹಾ ರುದ್ರ, ಪ್ರಕಾಂಡ ಪಂಡಿತನಿಗೆ ಇದೆಂತಹಾ ಅಪಮಾನ. ನಾನು ಟೀಕೆ ಮಾಡದ ಕ್ಷೇತ್ರವೇ ಇಲ್ಲವೆಂಬುದು
ಈ ಮೇಳದವರಿಗೆ ಯಾರಾದರೂ ತಿಳಿಸಿ ಹೇಳಬೇಕಿದೆ. ನಾನ್ಯಾರು? ನನ್ನ ತಾಕತ್ತೇನು? ಕುಂದಾಪುರದಲ್ಲಿ ಕುಳಿತು
ಇಡೀ ಜಗತ್ತನ್ನೇ ನನ್ನ ಫೇಸ್ಬುಕ್ ಸಾಮ್ರಾಜ್ಯದಲ್ಲಿ ಮನಬಂದಂತೆ ಟೀಕಿಸುವ ನವಿಲು. ನನ್ನ ಟೀಕಾಸ್ತ್ರವೇ
ನನಗೆ ಕಾವಲು. ನಿಂದನಾಸ್ತ್ರವೇ ನನಗೆ ಹುಲ್ಲುಗಾವಲು.
ಮೇಳದವ
: ಎಲ ಎಲವೋ ನವಿಲೆಂಬ ಭ್ರಮೆಯಲ್ಲಿರುವ ಕೆಂಭೂತವೇ. ಇಲ್ಲಿ ಕೇಳು. ನೀನು ಏನೇ ಮಾಡಿದರೂ ರಂಗಭೂಮಿಯ
ಒಂದೇ ಒಂದು ಕೂದಲನ್ನೂ ಕೀಳಲು ಸಾಧ್ಯವಿಲ್ಲ. ಎಲ್ಲ ಪಂಥದವರೂ ಕಂತು ಕಂತಾಗಿ ಜೊತೆಗೂಡಿ ಕಟ್ಟಿದ ರಂಗಪರಂಪರೆ
ಇದು. ಎಲ್ಲ ಜಾತಿ ಮತ ಕುಲ ಧರ್ಮದವರೂ ಸೇರಿ ಶತಮಾನಗಳಿಂದ ಬೆಳೆಸಿ ಉಳಿಸಿದ ಜನರ ಕಲೆ ಇದು. ಕೆಲಸಗೇಡಿಯಾದ
ನೀನು ಮಾಡುವ ನಿನ್ನ ನಿಂದನೆ, ಟೀಕಾಸ್ತ್ರಗಳೆಲ್ಲಾ ಇಲ್ಲಿ ವ್ಯರ್ಥ. ನಿನ್ನ ದುರುದ್ದೇಶದ ಹಿಂದಿರುವುದು
ಬರೀ ಸ್ವಾರ್ಥ.
ಕೆಂಭೂತ
: ಅಲೆಲೆಲೇ.. ಈ ಮಾತುಗಳನ್ನು ಹದಿನೈದು ವರ್ಷಗಳ ಹಿಂದೆ ಹೇಳಿದ್ದರೆ ನಾನು ಒಪ್ಪಬಹುದಾಗಿತ್ತು. ಆದರೆ
ಈಗಿನ ಪ್ರಶ್ನೆಗಳೇ ಬೇರೆ. ಬಲಪಂಥೀಯ ನಟ ನಿರ್ದೇಶಕರುಗಳು ಪ್ಯಾಸಿಸಂ ಬೆಳೆಸುತ್ತಾರೆ ಎಂಬುದೇ ನನ್ನ
ಆತಂಕ. ಬಿಜೆಪಿ ಮನೋಭಾವ ಹೊಂದಿ ಯಾರೋ ಒಳ್ಳೆಯ ನಾಟಕ ಆಡಿಸುತ್ತಾನೆಂದರೆ ಅಂತವರನ್ನು ಲಿಬರಲ್ ಆಗಿ
ಸ್ವೀಕರಿಸಲು ನನಗೆ ಆಗುವುದಿಲ್ಲ. ಇಂತದ್ದೆಲ್ಲವನ್ನೂ ಸರಳ ರೇಖೆಯಲ್ಲಿ ಚಿಂತಿಸಲು ಆಗುವುದಿಲ್ಲ ಅಂದ್ರೆ
ಆಗುವುದಿಲ್ಲ.
ಮೇಳದವ
: ಬಲೆ ಭಲೆ, ನೀನು ರಂಗಭೂಮಿಗೆ ದೃಷ್ಟಿಬೊಟ್ಟಿನ ಕಲೆ. ಆಗುವುದಿಲ್ಲವೆಂದರೆ ಅದು ನಿನ್ನ ಸಮಸ್ಯೆ.
ನಿನ್ನ ಲಿಬರಲ್ ಮುಸುಕಿನಲ್ಲಿ ವಿಜ್ರಂಭಿಸುತ್ತಿರುವುದು ನಿನ್ನ ಶ್ರೇಷ್ಟತೆಯ ವ್ಯಸನ ಅಷ್ಟೇ. ಹೋಗಲಿ ಕೆಂಭೂತವೇ ನಿನ್ನ ಮಾನದಂಡಕ್ಕೆ ಪೂರಕವಾಗಿರುವ ಬದ್ದತೆ
ಇರುವ ಯಾವುದಾದರೂ ಐದಾರು ಲಿಬರಲ್ ಎಡಪಂಥೀಯ ನಿಲುವಿನ ರಂಗಸಂಸ್ಥೆಗಳ ಹೆಸರು ಹೇಳು, ಹೋಗಲಿ ಅಂತಹ ರಂಗನಿರ್ದೇಶಕ
ಹೆಸರನ್ನಾದರೂ ಹೇಳುವಂತವನಾಗು. ನಿನ್ನ ಹರಕು ಬಾಯಿಯಿಂದ ಹೊರಬರುವ ಹೆಸರುಗಳನ್ನು ಕೇಳಿ ಆನಂದಪಡುತ್ತೇವೆ.
ಕೆಂಭೂತ
: ಓಹೋ ಹಾಗೋ. ಹಾಗಾದರೆ ಕೇಳುವಂತವನಾಗು. ಇದು ಬರೇ ಪಟ್ಟಿ ಮಾಡುವ ಪ್ರಶ್ನೆ ಅಲ್ಲ. ವಾಸ್ತವವನ್ನು
ಗ್ರಹಿಸುವ ವಿಷಯ. ಅಂತಹ ಸಂಸ್ಥೆಗಳು ಇಲ್ಲವೆಂದರೆ ಅದು ಸಾಧ್ಯವಾಗಬೇಕು. ಆಗದೇ ಹೋದರೆ ಅನಾಹುತ. ರಂಗಭೂಮಿ
ತನ್ನ ಜೀವಂತಿಕೆಯನ್ನು ಕಳೆದುಕೊಂಡಿದೆ ಎಂದೇ ಅರ್ಥ. ಹಾಗಾದರೆ ನನ್ನ ಲಿಬರಲ್ ಶ್ರಮವೆಲ್ಲಾ ವ್ಯರ್ಥ.
ಹೀಗೆ ಎಲ್ಲಾ ರೀತಿಯ ತಾತ್ವಿಕತೆಯನ್ನೂ ಒಪ್ಪಿಕೊಳ್ಳುವ ರಂಗಸಂಸ್ಥೆ ಜಡತ್ವದ ಹಾದಿಯಲ್ಲಿದೆ ಎಂದೇ ಅರ್ಥ.
ಮೇಳದವ
: ಅಲ್ಲಾ ಶತಮೂರ್ಖ ಕೆಂಭೂತವೇ. ಎಲ್ಲಾ ಕಾಲಕ್ಕೂ ಎಲ್ಲಾ
ವಿಚಾರಧಾರೆಗಳನ್ನು ಅರಗಿಸಿಕೊಂಡೇ ರಂಗಭೂಮಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿ
ಹಿಂದುತ್ವದ ಮೌಲ್ಯಗಳನ್ನೇ ಬಹುತೇಕ ಪ್ರತಿಪಾದಿಸುವ ಯಕ್ಷಗಾನ ಪ್ರಸಂಗಗಳು ಅಂದಿನಿಂದ ಇಂದಿನವರೆಗೂ
ಪ್ರದರ್ಶನ ಕಾಣುತ್ತಲೇ ಬಂದಿವೆ. ಪೌರಾಣಿಕ ರಂಗಭೂಮಿ ಮತ್ತೇ ರಾಮಾಯಣ ಮಹಾಭಾರತಗಳ ಫೂಡಲ್ ಮೌಲ್ಯಗಳನ್ನೇ
ಹೇಳುತ್ತಾ ಬಂದಿವೆ. ಅವುಗಳು ಏನೇ ಹೇಳಿದರೂ ಕೊನೆಗೆ ನೈತಿಕ ಪ್ರಜ್ಞೆಯನ್ನೇ ಪ್ರತಿಪಾದಿಸುತ್ತಾ ಬಂದಿವೆ.
ಇಷ್ಟಿದ್ದರೂ ರಂಗಭೂಮಿಗೆ ಎಂದಾದರೂ ಕುತ್ತು ಕುಂದು ಬಂದಿದೆಯಾ. ನಿನ್ನ ಲಿಬರಲಿಸಂ ಎನ್ನುವುದು ಸಾಮೂಹಿಕ
ಕಲೆಯಾದ ರಂಗಭೂಮಿಗೆ ಅನ್ವಯಿಸುವುದಿಲ್ಲ. ಮೊದಲು ಕಿತ್ತು ಹೋಗುತ್ತಿರುವ ನಿನ್ನ ನವಿಲುಗರಿಗಳನ್ನು
ಸರಿಪಡಿಸಿಕೋ.
ಕೆಂಭೂತ
: ಹೋ…. ಇದೆಂತಾ ವಿಪರ್ಯಾಸ. ನನ್ನ ಶತ್ರುಗಳ ಅಟ್ಟಹಾಸ. ಹೋ…ಯಾರೂ ಸರಿಯಿಲ್ಲಾ, ನನ್ನ ಹೊರತು ಇಲ್ಲಿ
ಯಾರು ನೆಟ್ಟಗಿಲ್ಲ. ಮಂಡ್ಯ ರಮೇಶ್ ಅವಕಾಶವಾದಿ, ಉಡುಪಿ ರಂಗಭೂಮಿಯವರು ಹಿಂದುತ್ವವಾದಿಗಳು. ರಂಗಭೂಮಿಯಲ್ಲಿರುವವರು
ಮುಸುಕಿನ ಪ್ರಗತಿಪರರು.. ಇದನ್ನು ನಾನು ಗಂಟಾಘೋಷವಾಗಿ ನನ್ನ ಫೇಸ್ಬುಕ್ ಎನ್ನುವ ಪ್ರಪಂಚದಲ್ಲಿ ಪ್ರಚಾರ
ಮಾಡುತ್ತಲೇ ಇರುತ್ತೇನೆ. ಯಾಕೆಂದರೆ ನಾನು ಲಿಬರಲ್, ರಾತ್ರಿಯಾದರೆ ಬೀಯರನ್ನೇ ಹೀರಿ ಪರರನ್ನು ಬೈಯುವ ಕಾಯಕ ಮಾಡುವ ಬೀರಬಲ್.
ಮೇಳದವ
: ಓಹೋ ಹಾಗಾದರೆ.. ರಂಗಭೂಮಿಯಲ್ಲಿ ಯಾರೂ ಸರಿಯಿಲ್ಲವೆನ್ನುವ ನೀನು ಎಷ್ಟು ರಂಗತಂಡವನ್ನು ಕಟ್ಟಿ ಬೆಳೆಸಿರುವೆ
ಕೆಂಭೂತವೆ? ಬಂಡಾರ್ಕರ್ ಕಾಲೇಜಿನ ಕೃಪಾಕಟಾಕ್ಷ ಇಲ್ಲದೇ
ಹೋಗಿದ್ದರೆ ನಿನ್ನ ರಂಗಶಾಲೆಗೂ ಅಸ್ತಿತ್ವ ಇರಲಿಲ್ಲ ನಿನಗೂ ಸಹ. ಹೋಗಲಿ ನಿನ್ನ ರಂಗಶಾಲೆಯಿಂದ ಅದೆಷ್ಟು
ಜನ ಲಿಬರಲ್ ಗಳು ತಯಾರಾಗಿ ಹೊರಗೆ ಬಂದಿದ್ದಾರೆ ಅಂತಾ ನಾವು ಕೇಳ್ತಿಲ್ಲಾ ಜನರ ಕೇಳ್ತಿದ್ದಾರೆ. ಇರಲಿ,
ಆ ರಂಗಶಾಲೆಗೆ ಯಾರೂ ಕಲಿಯಲು ಬರದೇ ಇದ್ದಾಗ ಆಸಕ್ತರನ್ನು ಕಳಿಸಿ ಎಂದು ಎಲ್ಲರಿಗೂ ಕಾಲ್ ಮಾಡಿ ಕಾಡಿಬೇಡುತ್ತಿದ್ದ
ನೀನು ಅದೇ ನಾಟಕ ಶಾಲೆಯಲ್ಲಿ ಕೇವಲ ಲಿಬರಲ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕೊಟ್ಟಿದ್ದೀಯಾ? ಸೈದ್ದಾಂತಿಕತೆ
ಪರಿಶೀಲಿಸಿ ಎಡ್ಮಿಶನ್ ಮಾಡಿಕೊಂಡಿದ್ದೀಯಾ? ಹೋಗಲಿ ಆ ಶಾಲೆಯಲ್ಲಿ ಪಾಠ ಮಾಡಿದವರೆಲ್ಲಾ ಲಿಬರಲ್ ಗಳಾ?
ನಿಮ್ಮದು ಲಿಬರಲ್ ಗಳನ್ನು ತಯಾರು ಮಾಡಿ ಲೇಬಲ್ ಹಚ್ಚಿ ಕಳುಹಿಸುವ ಕಾರ್ಖಾನೆಯಾ? ಇಲ್ಲಿ ಕೇಳು ಮೂರ್ಖ
ಕೆಂಭೂತವೇ. ಯಾರ ವಿಚಾರಗಳನ್ನು ಯಾರೂ ಇಲ್ಲಿ ಹೇರಲಾಗುವುದಿಲ್ಲ. ರಂಗಭೂಮಿ ಎನ್ನುವುದು ಜನಪರವಾಗಿರುವ
ಜೀವಪರವಾಗಿರುವ ಕಲಾತ್ಮಕ ಮಾಧ್ಯಮ. ಇಲ್ಲಿ ನಿನ್ನ ಲಿಬರಲ್ ಇಟೋಪಿಯಾ ಕೆಲಸಕ್ಕೆ ಬಾರದು. ನಾಟಕವೊಂದೇ
ಸತ್ಯ, ಪ್ರದರ್ಶನಗಳಷ್ಟೇ ಇಲ್ಲಿ ನಿತ್ಯ. ಯಾವ ಮಾನದಂಡಗಳಿಗೂ ಒಳಗಾಗದೇ ಬೆಳೆಯುವ ಮಾಧ್ಯಮವೇನಾದರೂ
ಇದ್ದರೆ ರಂಗಭೂಮಿ.
ಕೆಂಭೂತ
: ಹೋ.. ಅವಮಾನ.. ಘನಘೋರ ಅಪಮಾನ. ಅಕಿಲ ಕೋಟಿ ಬ್ರಹ್ಮಾಂಡದ ಏಕ್ಯಕ ಉದ್ದಂಡ ಪಂಡಿತನಿಗೆ ಆದ ಅವಮಾನ.
ಇಲ್ಲಿ ಈ ರಂಗಭೂಮಿಯಲ್ಲಿ ಯಾರೆಂದರೆ ಯಾರೂ ಲಿಬರಲ್ ಅಲ್ಲಾ. ಎಲ್ಲರೂ ನನ್ನ ಹಾಗೆಯೇ ಲಿಬರಲ್ ಆಗಬೇಕೆಂಬುದೇ
ನನ್ನ ಆಸೆ, ನನ್ನ ಆಶಯ, ನನ್ನ ಉದ್ದೇಶ. ಅದಕ್ಕಾಗಿ ನಾನೂ ಈ ಲಿಬರಲ್ ಎನ್ನುವ ಲೇಬಲ್ ಇರುವ ರೆಕ್ಕೆ
ಪುಕ್ಕಗಳನ್ನು ಹಾಕಿಕೊಂಡು ತಕತಕ ಕುಣಿಯುತ್ತಿರುವೆ. ಎಲ್ಲರೂ ಇದನ್ನೇ ಮಾಡಲಿ ಎಂದು ಆದೇಶಿಸುತ್ತಿರುವೆ.
ನನ್ನ ಆಜ್ಞೆಯನ್ನು ದಿಕ್ಕರಿಸುವವರ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡಿ ಸರ್ವನಾಶಮಾಡಿಬಿಡುವೆ.
ಮೇಳದವ
: ಅಲ್ಲ ಲಿಬರಲ್ಲು, ನೀನು ಭ್ರಷ್ಟಾತಿ ಭ್ರಷ್ಟ ರಂಗನಿರ್ದೇಶಕನ ಸಹವರ್ತಿಯಾದಾಗಲೇ ನಿನ್ನ ಸೋಕಾಲ್ಡ್
ಲಿಬರಲಿಸಂ ಮಣ್ಣು ಪಾಲಾಯಿತು. ಅಂತವನ ಸಹಕಾರದಿಂದಲೇ ಎನ್ ಎಸ್ ಡಿ ಯಿಂದ ಫಲಾನುಭವಿಯಾದಾಗಲೇ ನಿನ್ನ
ಪ್ರಾಮಾಣಿಕತೆ ಹಳ್ಳಹಿಡಿಯಿತು. ಆರ್ಥಿಕ ಅನಾಚಾರ ಹಾಗೂ ಹಿಂದುತ್ವವಾದಿಯಾಗಿದ್ದ ನಾಯರಿಯಂತಹ ನಸಗುನ್ನಿ
ರಂಗಕರ್ಮಿಯ ಗೆಳೆತನ ಮುಂದುವರೆಸಿದಾಗಲೇ ನಿನ್ನ ತೋರಿಕೆಯ ಹುಸಿ ಸಿದ್ಧಾಂತ ಬಟಾಬಯಲಾಯಿತು. ಈ ಇಬ್ಬರೂ
ಭ್ರಷ್ಟರನ್ನು ಹೊಗಳಲೆಂದೇ ನೀನು ಆರು ತಿಂಗಳಿಗೊಮ್ಮೆ ತರುತ್ತಿದ್ದ ಸ್ಥಬ್ದಗಣ ಪತ್ರಿಕೆಯ ಮೊದಲ ಸಂಚಿಕೆಯೇ
ನಿನ್ನ ಹೊಗಳುಬಟ್ಟತನವನ್ನು ಸಾಬೀತುಪಡಿಸಿತು. ಮುಖಕ್ಕೆಲ್ಲಾ ಮಸಿ ಬಳಿದುಕೊಂಡಿರುವ ನೀನು ಅವರಿವರ
ಮೂಗಿನ ಮೇಲಿನ ಕಪ್ಪು ಕಲೆಯ ಬಗ್ಗೆ ನಿಂದಿಸುವುದರಲ್ಲಿ ಏನಿದೆ ಅರ್ಥ. ಒಮ್ಮೆ ಕನ್ನಡಿಯ ಮುಂದೆ ಬೆತ್ತಲಾಗಿ
ನಿಂತು ನೋಡಿಕೋ, ಆತ್ಮಾವಲೋಕನ ಮಾಡಿಕೋ. ನಿನ್ನ ಮೈಮನಕ್ಕಂಟಿಸಿಕೊಂಡಿರುವ ನಕಲಿ ಗರಿಗಳನ್ನು ಕಿತ್ತು
ಬಿಸಾಕು. ಆಮೇಲೆ ನಿನ್ನ ಮಾತಿಗೂ ಕಿಮ್ಮತ್ತು ಬರಬಹುದು. ನಿನ್ನ ವಿಮರ್ಶೆಗೂ ಗೌರವ ದಕ್ಕಬಹುದು. ನಿನ್ನ
ಕುಕಾವ್ಯಕ್ಕೂ ಮಹತ್ವ ಸಿಗಬಹುದು.
ಕೆಂಭೂತ
: (ಕಾಂತಾರದ ಗುಳಿಗೆ ದೈವ ಮೈಮೇಲೆ ಬಂದವರಂತೆ ದೊಡ್ಡ ಬಾಯಿ ತೆಗೆದು ಹೋ ಎನ್ನುತ್ತಾ ವಿಲಕ್ಷಣವಾಗಿ
ಕುಣಿದು) ಹೋ.. ಕೇಳಿ ಗುತ್ತಿನಾರೇ, ನನ್ನ ಜಗಳವೇನಿದ್ದರೂ ಗಟ್ಟಿ ತಾತ್ವಿಕತೆ ಇರುವವರ ಜೊತೆಗೆ. ಈ
ರೀತಿಯ ವೈಯಕ್ತಿಕ ಟೀಕೆಗೆ ಇಳಿಯುವ ಅವಕಾಶವಾದಿಗಳು, ಎಡಬಿಡಂಗಿಗಳು ನನ್ನಲ್ಲಿ ಆಸಕ್ತಿ ಹುಟ್ಟಿಸುವುದಿಲ್ಲ.
ನನ್ನ ತಾತ್ಮಿಕತೆಯ ಗಟ್ಟಿತನವನ್ನು ನಾನೇ ಪರೀಕ್ಷೆಗೆ ಒಡ್ಡಿಕೊಳ್ಳಬೇಕು ಎನ್ನುವವನು ನಾನು.
ಮೇಳದವ
: ಹೌದೋ ಹುಲಿಯಾ.. ನೀನು ಕಟ್ಟಿಕೊಂಡ ಭ್ರಮೆಗೆ ನನ್ನ ಧಿಕ್ಕಾರ. ಯಾರೂ ಇಲ್ಲಿ ನಿನ್ನ ಕುಡುಕುತನದ
ಬಗ್ಗೆ, ರಸಿಕತನದ ಬಗ್ಗೆ, ವೈಯಕ್ತಿಕ ಖಯಾಲಿಗಳ ಬಗ್ಗೆ
ಟೀಕೆ ಮಾಡುತ್ತಿಲ್ಲ. ಸಾರ್ವತ್ರಿಕವಾಗಿ ನೀನು ಭ್ರಷ್ಟರೊಂದಿಗೆ ಕೈಜೋಡಿಸಿ ಭ್ರಷ್ಟತೆಯ ಫಲಾನುಭವಿಯಾದದ್ದನ್ನು
ಪ್ರಶ್ನಿಸಲಾಗುತ್ತಿದೆ. ನಿನಗೆ ಬೇಕಾದ ಹಿಂದುತ್ವವಾದಿಗಳ ಹೊಗಳಿ ಹೊನ್ನ ಶೂಲಕ್ಕೇರಿಸುವ ನೀನು ನಿನಗಾಗದವರನ್ನು
ಅವಕಾಶವಾದಿಗಳು, ಹಿಂದುತ್ವವಾದಿಗಳು ಎಂದು ಟೀಕಿಸುವ ಎಡಬಿಡಂಗಿತನವನ್ನು ಟೀಕಿಸಲಾಗುತ್ತಿದೆ. ನೈತಿಕತೆಯನ್ನು
ಕಳೆದುಕೊಂಡು ಗಾಜಿನ ಮನೆಯಲ್ಲಿರುವ ನೀನು ಬೇರೆಯವರ ಮೇಲೆ ಆರೋಪ ಮಾಡಿ ಕಲ್ಲೆಸೆಯುವ ಕೆಲಸ ಮಾಡದಿರು.
ಯಾರಾದರೂ ಒಬ್ಬರು ನೀನೆಸೆದ ಕಲ್ಲನ್ನೇ ನಿನಗೆ ಎಸೆದು ನೀನು ಕಟ್ಟಿಕೊಂಡ ನಕಲಿ ಲಿಬರಲ್ ಗಾಜಿನ ಗೋಡೆಗಳನ್ನು
ಒಡೆದು ಹಾಕಿಯಾರು. ನಿನ್ನನ್ನು ನೀನು ವಿಮರ್ಶೆಗೆ ಒಳಪಡಿಸಿಕೊಂಡು ತಿದ್ದಿಕೊಳ್ಳದೇ ಹೋದರೆ ನಿನ್ನನ್ನು
ವಿಮರ್ಶಿಸುವವರು ಹೊರಗೆ ಹುಟ್ಟಿಕೊಳ್ಳುವರು ಹುಷಾರು.
ಕೆಂಭೂತ
: ಟೀಕೆಗೆ ಟೀಕೆಯೇ?, ನಿಂದಕನಿಗೆ ನಿಂದನೆಯೇ? ಇಂತಹದನ್ನು ಸಹಿಸಲಾರೆ.. ಹೋ.. (ಮತ್ತೆ ಕುಣಿ ಕುಣಿದು
ಸುಸ್ತಾಗಿ ಮೂರ್ಚಿತನಾಗಿ ಧರೆಗೆ ಬೀಳುವನು.)
(ಮೇಳದವರು
ಕೆಂಭೂತದ ಮೈಗೆಲ್ಲಾ ಕಟ್ಟಿಕೊಂಡಿದ್ದ ಲಿಬರಲ್ ಎಂದು ಬರೆದಿದ್ದ ರೆಕ್ಕೆಪುಕ್ಕಗಳನ್ನು ಒಂದೊಂದಾಗಿ
ಕಿತ್ತು ಹಾಕುವರು. ತಲೆಗೆ ಹಾಗೂ ಮುಖಕ್ಕೆ ನೀರನ್ನು ಚಿಮುಕಿಸುವರು. ಕೆಂಭೂತ ಸಾವಕಾಶವಾಗಿ ಕಣ್ಣುಬಿಟ್ಟು
ಮೇಳದವರ ಸಹಾಯದಿಂದ ಮೇಲಕ್ಕೆದ್ದು ನಿಲ್ಲುವುದು.)
ಕೆಂಭೂತ
: ಯಾರು ನಾನು? ನೀವು ಯಾರು? ನಾನೇಕೆ ಇಲ್ಲಿ ಬಂದೆ? ಆಹಾ ಈ ಪ್ರಕೃತಿ ಎಷ್ಟೊಂದು ಮನಮೋಹಕವಾಗಿದೆ.
ಹೋ ಅಲ್ಲಿ ಹೊರಹೊಮ್ಮುವ ರಂಗಸಂಗೀತ ಎಷ್ಟೊಂದು ಕರ್ಣಾನಂದವನ್ನುಂಟು ಮಾಡುವಂತಿದೆ.
ಮೇಳದವ:
ಹೋ ಸಧ್ಯ ಎಲ್ಲ ಅಹಮಿಕೆ ಕಳಚಿಕೊಂಡು ಮತ್ತೆ ಮನುಷ್ಯರಾದಿರಲ್ಲಾ. ನೋಡಿ ಅದು ರಂಗಭೂಮಿ ಉಡುಪಿಯವರು
ಮಾಡುತ್ತಿರುವ ನಾಟಕ. ಈಗ ತಾನೇ ನಾ.ಮೊಗಸಾಲೆಯವರು ಅತಿಥಿಯಾಗಿದ್ದ ವೇದಿಕೆ ಕಾರ್ಯಕ್ರಮ ಮುಗಿದು ಮಂಡ್ಯ
ರಮೇಶರವರ ನಾಟಕ ಶುರುವಾಗಿದೆ.
ಕೆಂಭೂತ
: ಹೋ.. ಮೆಚ್ಚಬೇಕಾದದ್ದೆ. ಯಾರು ಅತಿಥಿಯಾದರೇನು, ಅವರು ಕಲೆಬಗ್ಗೆ ಏನು ಹೇಳುತ್ತಾರೆಂಬುದಷ್ಟೇ ನನಗೆ
ಮುಖ್ಯ. ನಾಟಕ ಮಾಡಿಸುವವರು ಯಾವ ಸಿದ್ದಾಂತದವರಾದರೇನು? ಎಂತಹ ನಾಟಕ ಆಡಿಸುತ್ತಿದ್ದಾರೆಂಬುದೇ ಇಂದಿನ
ಅಗತ್ಯ. ಮಂಡ್ಯ ರಮೇಶರವರ ಹೆಸರು ಕೇಳಿದರೇ ಪುಳಕವಾಗುತ್ತದೆ. ಅದೆಂತಹಾ ರಂಗನಿಷ್ಟೆ, ಅದೆಂತಹಾ ರಂಗಬದ್ದತೆ,
ಅವರ ರಂಗಕೊಡುಗೆಗೆ ಕೋಟಿ ನಮಸ್ಕಾರ ಹೇಳಲೇಬೇಕಿದೆ. ಯಾಕೆ ಸುಮ್ಮನೇ ನಿಂತಿದ್ದೀರಿ. ನಡೀರಿ ನಾಟಕ ನೊಡೋಣ.
ನಾಟಕ ಮಾಡುವವರಿಗೆ ಮಾಡಿಸುವವರಿಗೆ ಅಭಿನಂದನೆ ತಿಳಿಸೋಣ.
ಮೇಳದ
ಇನ್ನೊಬ್ಬ : ಇದೆಂತಹಾ ಬದಲಾವಣೆ. ಸಧ್ಯ ಇವರಿಗೆ ಹಿಡಿದ ಆಷಾಡ ಮುಗಿದು ವಸಂತ ಚಿಗುರಿತು. ಲಿಬರಲ್
ಭ್ರಮೆಯ ಭೂತ ತೊಲಗಿ ಮನುಷ್ಯರಾಗುವ ಕಾಲ ಬಂದೇ ಬಿಟ್ಟಿತು. ಒಬ್ಬ ಪ್ರತಿಭಾವಂತ ತನ್ನ ಅಹಮಿಕೆ ಹಾಗೂ
ಪೂರ್ವಗ್ರಹಗಳನ್ನು ಕಳೆದುಕೊಂಡರೆ ಹೇಗೆ ಸಕಾರಾತ್ಮಕವಾಗಿ ಬದಲಾಗಬಹುದು ಎನ್ನುವುದಕ್ಕೆ ಇವರೇ ಉದಾಹರಣೆ
ಅಲ್ಲವೇ..
ಮೇಳದವ
: ಹೌದೌದು. ಆದರೆ ಈ ಬದಲಾವಣೆ ತಾತ್ಕಾಲಿಕ ಮಾತ್ರ. ಮತ್ತೆ ಇವತ್ತು ರಾತ್ರಿ ಪಾನಗೋಷ್ಟಿಯಲ್ಲಿ ಸುರಾಪಾನಪೀಡಿತನಾದ
ತಕ್ಷಣ ಮತ್ತೆ ಕಳಚಿಟ್ಟಿ ಗರಿಗಳು ಮೈಮನಸಿಗೆ ಸುತ್ತಿಕೊಳ್ಳುತ್ತವೆ. ಬಿಸಾಕಲ್ಪಟ್ಟ ನಿಂದನಾಸ್ತ್ರಗಳು
ನಾಮುಂದು ತಾಮುಂದು ಎಂದು ಸಾಲುಗಟ್ಟುತ್ತವೆ. ಮತ್ತೆ ಟಾರ್ಗೆಟ್ ಫಿಕ್ಸ್ ಆಗುತ್ತದೆ. ಮತ್ತದೇ ಶ್ರೇಷ್ಟತೆಯ
ವ್ಯಸನ ತಲೆಗೇರುತ್ತದೆ.
ಮೇಳದ
ಇನ್ನೊಬ್ಬ : ಯಾಕೆ ಈ ರೋಗಕ್ಕೆ ಔಷಧಿ ಇಲ್ಲವೇ?
ಮೇಳದವ
: ಈ ರೋಗಕ್ಕೆ ಐಡೆಂಟಿಟಿ ಕ್ರೈಸಿಸ್ ಕಾಯಿಲೆ
ಅಂತಾ ಮನೋವ್ಯದ್ಯರು ಹೇಳುತ್ತಾರೆ. ಯಾವಾಗ ಒಬ್ಬ ವ್ಯಕ್ತಿಗೆ ತನ್ನನ್ನು ಯಾರೂ ಗುರುತಿಸುತ್ತಿಲ್ಲ,
ಯಾರೂ ಗೌರವಿಸುತ್ತಿಲ್ಲ ಎಂದು ಪದೇ ಪದೇ ಅನ್ನಿಸಲು ಆರಂಭವಾಗುತ್ತದೋ ಆಗ ಈ ಕಾಯಿಲೆ ಉಲ್ಬಣವಾಗುತ್ತದೆ.
ಯಾರು ಸಮಾಜದಲ್ಲಿ ಗುರುತಿಸಲ್ಪಡುತ್ತಾರೋ ಅಂತವರ ಮೇಲೆ ಈ ರೋಗಪೀಡಿತ ಯಾವುಯಾವುದೋ ರೀತಿಯಲ್ಲಿ ನಿಂದನಾಕ್ರಮಣ
ಶುರುಮಾಡುತ್ತಾನೆ. ತನಗೆ ಸಿಗದೇ ಇರುವುದು ಅವರಿಗೆ ಸಿಕ್ಕಿದೆಯಲ್ಲಾ ಎಂದು ಅಸಹನೆಯಿಂದ ಕುದಿಯುತ್ತಾನೆ.
ತಾನು ಮಾತ್ರ ಪ್ರಾಮಾಣಿಕ, ತನಗೆ ಮಾತ್ರ ಎಲ್ಲವೂ ಗೊತ್ತಿದೆ. ಬೇರೆಯವರೆಲ್ಲಾ ಅವಕಾಶವಾದಿಗಳು, ಹಿಂದುತ್ವವಾದಿಗಳು
ಎಂದು ಎಲ್ಲರನ್ನೂ ನಿಂದಿಸುವ ಕಾಯಿಲೆ ಉಲ್ಬಣಿಸುತ್ತಲೇ ಹೋಗುತ್ತದೆ. ಇವರಿಗೂ ಆಗಿದ್ದು ಅದೇ.
ಮೇಳದ
ಇನ್ನೊಬ್ಬ : ಅಲ್ಲಿ ನೋಡಿ. ಕೆಂಭೂತ ತನ್ನ ಬಗಲಚೀಲದಿಂದ ಬಾಟಲಿ ಎತ್ತಿ ಕುಡಿಯ ತೊಡಗಿದೆ. ತೂರಾಡುತ್ತಿದೆ.
ಅರೆ ಅದರ ಮೈಮೇಲೆ ಗರಿಗಳು ಮೂಡುತ್ತಿವೆ. ನವಿಲಿನಂತೆ ತಕತಕ ಕುಣಿಯತೋಡಗಿದೆ.
ಕೆಂಭೂತ
: ಥೂ ಬೇವಾರ್ಸಿಗಳು. ಇದೂ ಒಂದು ನಾಟಕವಾ? ಪ್ರಗತಿಪರತೆಯ ಮುಖವಾಡ ಹಾಕಿದವರು ಇಲ್ಲಿ ಅತಿಥಿಗಳು. ರಂಗಸಂಘಟನೆ
ಮಾಡಿದವರು ಹಿಂದುತ್ವವಾದಿಗಳು. ನಾಟಕ ಆಡುತ್ತಿರುವವರು ಅವಕಾಶವಾದಿಗಳು. ಯಾರಲ್ಲಿ ಇಂತಹ ನಾಟಕ ನಮಗೆ
ಬೇಕಾ. ಇಂತಹ ತಂಡಗಳಿಂದ ರಂಗಭೂಮಿಯಲ್ಲಿ ಜಡತ್ವ ಬರುತ್ತದೆ ಮೊದಲು ನಿಲ್ಲಿಸಿ. ಲಿಬರಲ್.. ಲಿಬರಲ್..
ಎಲ್ಲವೂ ಲಿಬರಲ್ ಆಗಿರಬೇಕು. ಲಿಬರಲ್ ಅಲ್ಲದ್ದೂ ಎನೂ ಇರಕೂಡದು. ಲಿಬರಲ್.. ಲಿಬರಲ್.. (ಎನ್ನುತ್ತಾ
ಜೋಲಿಹೊಡೆದು ಪ್ರಜ್ಞೆ ತಪ್ಪಿ ರಸ್ತೆಯಲ್ಲಿಯೇ ಬೀಳುತ್ತಾನೆ. ಮೇಳದವರು ಹೊತ್ತುಕೊಂಡು ಹೋಗುತ್ತಾರೆ.
ಇಲ್ಲಿಗೆ ಈ ಪ್ರಹಸನ ಮುಗಿಯುತ್ತದೆ)
-ಶಶಿಕಾಂತ ಯಡಹಳ್ಳಿ
(
ಮಾನ್ಯ ವಸಂತ ಬನ್ನಾಡಿಯವರು ಫೇಸ್ಬುಕ್ನಲ್ಲಿ ಆರಂಭಿಸಿದ ರಂಗಭೂಮಿ ಉಡುಪಿ ಕುರಿತ ವಿವಾದ ಹಾಗೂ ಆ ನಂತರ
ಅದಕ್ಕೆ ನಾನು ಕೊಟ್ಟು ಪ್ರತಿಕ್ರಿಯೆಗಳನ್ನು ಆಧರಿಸಿ ಈ ಪ್ರಹಸನ ರಚಿಸಲಾಗಿದೆ.)
Comments
Post a Comment