ಬಸ್ಸು ಬಂತು ಸರಕಾರಿ ಬಸ್ಸು ( ಪ್ರಹಸನ-22)

 ಪ್ರಹಸನ-22)

ಬಸ್ಸು ಬಂತು ಸರಕಾರಿ ಬಸ್ಸು 

****************************************

 

( ಸ್ಥಳ: ಗ್ರಾಮವೊಂದರ ಬಸ್ ನಿಲ್ದಾಣ)

 

ಸೂರಿ : ಏನ್ ಚಿಗವ್ವಾ.. ಈಟೊಂದು ತಯಾರಿ ಮಾಡ್ಕೊಂಡು ಎತ್ಲಾಗ್ ಹೊಂಟ್ತು ಸವಾರಿ.

 

ಶಾಂತವ್ವ : ಯಾಕ್ಲಾ ಮೂದೇವಿ. ನೀವಷ್ಟ ಮೇರಿಬೇಕೇನ್ಲಾ. ನಾವು ಹೆಂಗ್ಸುರ್ ಹೋದರ ನಿಮಗ್ ಹೊಟ್ಯಾಗೇನು ಹಾವು ಹೊಕ್ಕಂಗ್ ಆಗತೈತಾ.

 

ಸೂರಿ : ಹಂಗಲ್ಲಬೇ.. ಬಿಟ್ಟಿ ಬಸ್ಸು, ಎಲ್ಲಿ ಹೋದ್ರು ಕಾಸು ಕರಿಮಣಿ ಏನೂ ಕೊಡಾಂಗಿಲ್ಲಾ. ಹೊಡ್ದೆಲ್ಲಾ ಚಾನ್ಸು. ಇನ್ನ ಹೆಂಗ್ಸರ್ನ ಹಿಡಿಯಾಕಾದೀತಾ?

 

ನಿಂಗವ್ವ : ಅಲ್ಲಪಾ ಸೂರಣ್ಣಾ. ಹುಟ್ಟಿದಾಗಿಂದಾ ಶಾಂತವ್ವ ಊರ ಬಿಟ್ಟು ಹೋಗಿಲ್ಲಾ. ಹೋಗಬೇಕಂದ್ರ ಬಸ್ಚಾರ್ಜ್ ಕೊಡೋರು ದಿಕ್ಕಿರಲಿಲ್ಲ. ಈಗರ ಯಾರ್ದೋ ಪುಣ್ಯಾದಿಂದ ತವರಿಗೆ ಹೊಂಟಾಳ ಹೋಗಿಬರ್ಲಿ ಬಿಡು.

 

ಸೂರಿ : ಹೋಗ್ತೀರಿ ಹೋಗ್ದ ಏನ್ ಮಾಡ್ತೀರಿ. ಬಿಟ್ಟಿ ಸಿಕ್ರ ಬಿಡ್ತೀರಾ? ಯಾರದss ರೊಕ್ಕ ಎಲ್ಲಮ್ಮನ ಜಾತ್ರಿ.. ಮಾಡ್ರಿ ಮಾಡ್ರೀ.

 

ನಿಂಗವ್ವ : ಯಾಕಣ್ಣಾ.. ಹಿಂಗಂತೀ.. ನಾವೇನ್ ಸುಮ್ಕ ಕುಂತು ತಿಂತೀವಾ ನಿಮ್ಮಂಗ್. ನಿನ್ನ ಹೆಂಡ್ರು ಹೊಲಮನಿ ಕೆಲ್ಸಾ ಮಾಡಿ ದುಡಕೊಂಡ್ ಬರ್ತಾಳ. ನೀಯೇನ್ ಮಾಡ್ತೀ ಲುಂಗಿ ಕಟ್ಕೊಂಡು ಗುಡಿ ಕಟ್ಟಿ ಮ್ಯಾಗ ಕುಂತಗೊಂಡು ಪಟ್ಟಾಂಗ್ ಹೊಡೀತಿ. ಬಾಯಿಬಿಟ್ರ ಮೋದಿ ಅಂತೆ  ಸಂಘಾ ಅಂತೆ. ನಿನಗೇನಾರಾ ಉದ್ಯೋಗಾ ಕೊಟ್ರಾ? ಅಕ್ಕಿ ಕೊಟ್ರಾ? ರೊಕ್ಕಾ ಕೊಟ್ರಾ

 

ಸೂರಿ : ನೋಡು ನಿಂಗವ್ವಾ. ಅವ್ರು ಏನೂ ಕೊಟ್ಟಿಲ್ಲಾ ಖರೆ. ಆದರss ನಮ್ಮ ಹಿಂದೂ ಧರ್ಮ ಉಳಿಸ್ತಾರ. ಸಾಬರ ಸೊಕ್ಕ ಮುರೀತಾರ. ವಿಶ್ವಕ್ಕ ಗುರು ಆಗ್ಯಾರಾ? ಇನ್ನೇನ್ ಬೇಕ್ ಹೇಳವ್ವಾ.

 

ಶಾಂತವ್ವ : ಲೇ ತಮ್ಮಾ. ಹೊಟ್ಟಿಗೆ ತಿನ್ನಾಕ ಅನ್ನಾ ಬೇಕಲಾ, ನಿನ್ನ ಧರ್ಮಾ ತಗೊಂಡು ಉಪ್ಪಿನಕಾಯಿ ಹಾಕಿ ನೆಕ್ತಿ ಏನ್ಲಾ? ಸಾಬರೇನು ಮನುಷ್ಯಾರಲ್ವಾ? ನಂಗೆ ಹುಷಾರಿಲ್ದೇ ಸಾಯ್ತಿರುವಾಗ್ ಹುಸೇನ್ಬಿ ಬಂದು ಕಾಪಾಡಿದ್ಲು, ನೀನೂ ಅಲ್ಲಾ ನಿನ್ನ ಮೋದೀನೂ ಅಲ್ಲಾ..

 

ಸೂರಿ : ಹಂಗಲ್ಲಬೇ ಚಿಗವ್ವಾ. ಹಿಂಗ್ ಅಕ್ಕಿ ಪ್ರೀ, ಬಸ್ ಪ್ರೀ, ರೊಕ್ಕ ಪ್ರೀ ಅಂತಾ ಕೊಟ್ರ ದೇಶ ದಿವಾಳಿ ಆಗ್ತದಂತಾ ವಿಶ್ವಗುರುಗಳು ಹೇಳ್ಯಾರಲ್ಲಾ.. 

 

ನಿಂಗವ್ವ : ನಿನ್ನ ವಿಸ್ವ ಗುರೂನ ಬಾಯಾಗ್ ಬಾಡ್ ತುರಕ್ಲಿ. ಇದ್ದ ಬದ್ದ ಸರಕಾರಿ ಸಂಸ್ಥೆಗಳನ್ನೆಲ್ಲಾ ಮಾರ್ಕೊಂಡವ್ನಂತೆ. ಅದೆಷ್ಟೋ ಅಂದ್ರೆ ನೂರೈವತ್ತು ಲಕ್ಸಾ ಕೋಟಿ ಸಾಲ ಮಾಡಿ ನಮ್ಮ ತಲೆ ಮೇಲೆ ಹಾಕವ್ನಂತೆ. ದೊಡ್ಡ ದೊಡ್ಡ ಕಂಪನಿಗಳ ಸಾಲಾ ಸೂಟ್ ಮಾಡವ್ನಂತೆ. ಅದರ ಮುಂದೆ ಉಚಿತ ಭಾಗ್ಯಗಳೆಲ್ಲಾ ಜುಜಬಿ ಬಿಡಣ್ಣೋ

 

ಶಾಂತವ್ವ : ಇವಂದು ಇದ್ದದ್ದೇ ಬಿಡು ನಿಂಗವ್ವಾ. ಯಾಕ್ ಇನ್ನೂ ಕೆಂಪ್ಬಸ್ ಬಂದಿಲ್ಲಾ

 

ಸೂರಿ : ಬರತೈತಿ ಇರಬೇ. ಏನ್ ಇನ್ಮ್ಯಾಲೆ ದಿನಾ ಬಸ್ ಸಂಚಾರ ಅನ್ನು. ದುಡಿಯುದು ಬಿಟ್ಟು ಬರೀ ದೇಶಾವರಿ ತಿರುಗೂದss ತಿರುಗೂದು. ದಿನಕ್ಕೊಂದೂರು ನೋಡಿದ್ದೇ ನೋಡಿದ್ದು..

 

ನಿಂಗವ್ವ : ನಮ್ಮನ್ನೇನು ನಿಮ್ಮ ಸಂಘದ ಸೋಂಬೇರಿಗಳು ಅಂತಾ ಅನ್ಕೊಂಡಿ ಏನಣ್ಣಾ, ಮನಿ ಮಾರು ಬಿಟ್ಟು ಬರೀ ಬಾಯಿ ಬಡ್ಕೊಂಡು ತಿರಗಾಕ. ನಾವು ದಿನಾಲೂ ನಮ್ಮ ಹೊಲ್ಮನಿ ಕೆಲ್ಸಾನೂ ಮಾಡ್ತೀವಿ, ಅಗತ್ಯ ಬಂದ್ರ ಊರಿಗೂ ಹೋಗ್ತೀವಿ. ಕೇಳಾಕ್ ನೀವ್ಯಾರು?

 

ಸೂರಿ : ಹಿಂಗ್ ಬಸ್ನಾಗ ಬಿಟ್ಟಿ ಹೋಗಾಕ್ ಇಷ್ಟು ದಿನಾ ಕಾಯ್ತಿದ್ದೇನಬೇ ಚಿಗವ್ವ.

 

ಶಾಂತವ್ವ : ಹೂಂ ತಮ್ಮಾ. ಒಂಬತ್ ವರ್ಸದಿಂದಾ ನಿಮ್ಮ ಮೋದಿ ಸಾಹೇಬ್ರ ಬುಲೆಟ್ ರೈಲು ಇಂದ್ ಬರತೈತಿ, ನಾಳೆ ಬರತೈತಿ ಅಂತಾ ಕಾದು ಕಾದು ಸಾಕಾತು. ಕಡಿಗೂ ಬರ್ಲೇ ಇಲ್ಲ. ಕೆಂಪ್ ಬಸ್ಸಾದ್ರೂ ಬಂತಲ್ಲಾ. ಟಿಕೆಟ್ ಇಲ್ದೇ ಹೋಗ್ಬೋದಲ್ವಾ

 

ಸೂರಿ : ಆತಬಿಡು ಬೈಬ್ಯಾಡಾ. ನಿಮ್ಮ ಟಿಕೀಟ್ ರೊಕ್ಕಾ ಯಾರು ಕೊಡ್ತಾರ? ಸರಕಾರ. ಸರಕಾರಕ್ಕ ರೊಕ್ಕ ಏನು ಆಕಾಸದಾಗಿಂದಾ ಉದರತೈತೇನು ಬಿಟ್ಟಿ ಕೊಡಾಕ.

 

ನಿಂಗವ್ವ : ಅಲ್ಲಾಪಾ ಎಣ್ಣಾ. ದೊಡ್ಡ ದೊಡ್ಡ ಮಂದಿರಾ ಕಟ್ಸಾಕ್ ಸಾವಿರಾರು ಕೋಟಿ ಎಲ್ಲಿದಪಾ ರೊಕ್ಕ ಬಂತು? ಆಕಾಸದೆತ್ತರ ಪ್ರತಿಮೆಗಳ ಇಡ್ಸಿದ್ದಾರಲ್ಲಾ ಅದಕ್ಕೆಲ್ಲಿಂದಾ ಹಣಾ ಬಂತು? ಮಠ ಪೀಠ ಅಂತೆಲ್ಲಾ ಸಿಕ್ಕಸಿಕ್ಕಂಗ್ ರೊಕ್ಕಾ ಹಂಚಿದ್ರಲ್ಲಾ ಹಿಂದಿನ ಸರಕಾರ.. ಆಗ ರೊಕ್ಕ ಎಲ್ಲಿಂದಾ ಉದುರ್ತುಏನೋ ಬಡವರಿಗೆ ಉಪಯೋಗ ಆಗ್ಲಿ ಅಂತಾ ಯೋಜನೆ ತಂದ್ರ ಅದ್ಯಾಕಿಷ್ಟು ಹೊಟ್ಟೆ ಉರ್ಕೊಂಡು ಸಾಯ್ತೀರೀ

 

ಸೂರಿ : ಅದು ಹಂಗಲ್ಲಬೇ. ಹಿಂಗss ಪುಗ್ಸಟ್ಟೆ ಕೊಡ್ತಾ ಹೋದ್ರ ಸರಕಾರ ಹೆಂಗ್ ನಡೀತೈತಿ? ಅಭಿವೃದ್ದಿ ಹೆಂಗ್ ಆಕೈತಿ

 

ಶಾಂತವ್ವ : ಯಾವನ್ಲಾ ಅವ್ನು ಪುಗ್ಸಟ್ಟೆ ಅನ್ನೋನು? ನಾವ್ ಹೆಂಗ್ಸೂರು ಮನಿ ಒಳಗss, ಹೊಲದೊಳಗss ಬೆವ್ರು ಬಸ್ದು ದುಡಿಯಾಂಗಿಲ್ವಾ. ಕೂಲಿ ಎಷ್ಟ್ರಯ್ಯಾ ಕೊಡ್ತೀರಿ? ಮನ್ಯಾಗ ಪುಗ್ಸಟ್ಟೆ ದುಡೀಬೇಕು. ಹೊಲದಾಗ ಮೂರು ಕಾಸಿಗೆ ದೇಗಬೇಕು. ನೀವು ಗಂಡಸ್ರು ಮಾತ್ರ ಊರೂರು ತಿರುಗಿ ದೇಸಾ ಉದ್ದಾರ ಮಾಡಬೇಕು. ಹೌದಲೇ. ಯಾವತ್ತಾರಾ ಕಟ್ಟಿಗಿ ಕಡಕೊಂಡು ಬಂದೀರಾ? ಕಸಾ ಮುಸರೆ ಕೆಲಸಾ ಮಾಡೀರಾ? ಆಡು ಹಸಾ ನೋಡ್ಕೊಂಡೀರಾ? ಹಾಲು ಹಿಂಡಿ ಕಾಯ್ಸಿದ್ದೀರಾ? ಕೂಸಿನ ಕುಂಡಿ ತೊಳದು ಸಾಕೀರಾ? ಹೆಂಗ್ಸರ ಶ್ರಮಾ ಇಲ್ಲಾಂದ್ರ ನೀವೇನ್ಲಾ ತಿಂತೀರಿ ಹೊಟ್ಟಿಗೇ, ನಿಮ್ಮ  ಜಾತಿ ಧರ್ಮ ದೇವಸ್ಥಾನಗಳು ನಿಮ್ಮಂತಾ ತಿರಬೋಕಿಗಳಿಗೆ ಅನ್ನ ಬೇಯಿಸಿ ಹಾಕ್ತಾವಾ? ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕಾ? ನಿಂಗವ್ವಾ ಬಸ್ ಬಂತಾ ನೋಡವ್ವಾ.

 

ಸೂರಿ : ಬರತೈತಿ ಇರು. ಹಿಂಗ್ಯಾಕ್ ಬೈತಿಬೇ. ನೀ ಹೇಳುದ್ರಾಗೂ ಪಾಯಿಂಟ್ ಇತೆನೀವು ಬೇಯ್ಸಿ ಹಾಕಲಿಲ್ಲಾಂದ್ರ ನಮಗ್ ಉಪವಾಸಾನೇ ಗತಿ. ಬೇ ಚಿಗವ್ವಾ.. ಅಲ್ಲಿ ನೋಡು ಚಿಕ್ಕಪ್ಪಾ ರಾಂಗ್ ಆಗಿ ಬರ್ತಾವ್ನೆ. ಕುಡಕೊಂಡು ಜೋಲಿ ಹೊಡೀತಾವ್ನಲ್ಲವ್ವೋ.

 

ಯಮನಪ್ಪ : ಶಾಂತಿ.. ಏನೇ ಅವನ್ಯಾವನೋ ಬಸ್ ಬಿಟ್ಟಿ ಅಂದನಂತೆ, ಇವ್ಳು ಮೆರವಣಿಗೆ ಹೊಂಟ್ಳಂತೆ. ನಡೀ ಮನೀಗೆ.. ಒಲಿ ಹಚ್ಚಿಲ್ಲಾ ಅಡುಗೆ ಮಾಡಿಲ್ಲಾ

 

ಶಾಂತವ್ವ : ಇವತ್ತೊಂದಿನಾ ಮಾಡ್ಕೊಂಡು ತಿಂದ್ರೆ ನೀ ಏನ್ ಸಾಯಾಕಿಲ್ಲ.. ಹೋಗೋಗ್.. ನಾ ನನ್ನ ತಂಗಿ ಮನೀಗ್ ಹೋಗಿ ಸಂಜೀಕ್ ಬರ್ತೀನಿ.

 

ಯಮನಪ್ಪ : ಹಂಗಂದ್ರ ಹೆಂಗಲೇ. ಹೆಂಗ್ಸು ಊರಿ ಸುತ್ತಿ ಕೆಟ್ಳಂತೆ. ಬಾರೇ ಮನೀಗೆ.

 

ಸೂರಿ : ಹೋಗಲಿ ಬಿಡು ಚಿಗಪ್ಪಾ. ಬಸ್ಟ್ಯಾಂಡನಾಗ ಇದೆಲ್ಲಾ ಬ್ಯಾಡಾ ನಡಿ

 

ಯಮನಪ್ಪ : ಅಲ್ಲಲೇ ಸೂರಿ. ಗೌರ್ಮೆಂಟನೋರು ಬರೀ ಹೆಂಗ್ಸರಿಗೇ ಯಾಕಪ್ಪಾ ಪ್ರೀ ಬಸ್ಸು, ಪ್ರೀ ಕಾಸು ಕೊಟ್ರು. ನಾವೇನ್ ಗಂಡಸ್ರು ಲೆಕ್ಕಕ್ಕಿಲ್ವಾ.

 

ನಿಂಗವ್ವ : ಯಮನಪ್ಪಣ್ಣಾ. ನಿಮಗೂ ಕೊಟ್ಟಿದ್ರ ಏನ್ ಮಾಡ್ತಿದ್ರಿ. ಪ್ರೀಯಾಗಿ ಸಿಟಿಗೆ ಹೋಗಿ, ಪ್ರೀ ಅಂತಾ ಕೊಟ್ಟ ರೊಕ್ಕಾನ ಸರಾಯಿ ಅಂಗಡಿಗೆ ಸುರದ್ ಬರ್ತಿದ್ರಿ. ನಾವು ಹೆಣ್ಮಕ್ಕಳು ಏನss ಕೊಟ್ರು ಮತ್ತ ಮನಿಗೆ ಮಕ್ಕಳಿಗೆ ಅಂತಾನೇ ಖರ್ಚು ಮಾಡಿ ಮನೀ ಮಾನಾ ಕಾಪಾಡ್ತೀವಿ. ಅಲ್ಲೇನು ಶಾಂತವ್ವಾ.

 

ಶಾಂತವ್ವ : ಥೂ ಕುಡುಕ್ ಮುಂಡೇವಕ್ಕೆ ಎಷ್ಟು ಸಿಕ್ರು ಹಾಳಮಾಡ್ತಾವೆ, ಮನಿ ಬ್ಯಾಡಾ, ಮಕ್ಕಳು ಬ್ಯಾಡಾ. ಮಾನಾ ಮರ್ಯಾದಿ ಅಂತೂ ಮೊದಲss ಬ್ಯಾಡಾ.

 

ಯಮನಪ್ಪ : ಅಲ್ಲಲಾ ಸೂರಿ. ದೇಶಕ್ಕ ಅತೀ ಹೆಚ್ಚು ಟ್ಯಾಕ್ಸ್ ಕಟ್ಟೋರು ಯಾರು

 

ಸೂರಿ : ಆದಾನಿ ಅಂಬಾನಿ..

 

ಯಮನಪ್ಪ : ಸುಳ್ಳು.. ಜಾಸ್ತಿ ತೆರಿಗೆ ಕಟ್ಟೋವ್ರು ನಾವು.. ಕುಡುಕ್ರು. ನಮ್ದು ಬಾಳಾ ದೊಡ್ಡ ಬಳಗ ಐತಿ ಅನ್ನೋದು ಹೆಂಗ್ಸರಿಗ್ಗೇನು ಗೊತೈತಿ ನೀನರ ಹೇಳು. ನಮಗಾಗಿ ಅಬಕಾರಿ ಇಲಾಖೆ ಅಂತಾ ಐತೆ, ಅದಕ್ಕೊಬ್ಬ ಮಂತ್ರಿನೂ ಇದಾನೆ. ನಾವು ಕುಡದಷ್ಟೂ ಸರಕಾರಕ್ಕ ಲಾಭ. ಲಾಭದೊಳಗ ನಮಗ್ಯಾಕಪ್ಪ ಏನೂ ಬಿಟ್ಟಿ ಭಾಗ್ಯ ಕೊಡ್ತಾ ಇಲ್ಲಾ? ನಮಗೂ ಬಸ್ ಪ್ರೀ ಅಂದ್ರೆ ನಾವು ಪಟ್ಟಣಕ್ಕ ಹೋಗಿ ವಿಲಾಯಿತಿ ಮಾಲು ಕುಡಕುಡದ್ ಸರಕಾರದ ಬೊಕ್ಕಸ ತುಂಬಿಸ್ತೀವಿ ಅಲ್ವಾ

 

ಶಾಂತವ್ವ : ಕುಡ್ದ ಕುಡ್ದ ಮನಿ ಹಾಳ್ ಮಾಡಿದ್ದು ಸಾಕು, ಇನ್ನ ಬಿಟ್ಟಿ ಭಾಗ್ಯ ಬೇರೆ ಕೊಡ್ಬೇಕಾ ಥೂ.

 

ಯಮನಪ್ಪ : ಹಂಗೆಲ್ಲಾ ಕುಡುಕರನ್ನ ಕಂಡಮ್ ಮಾಡಬೇಡ್ವೇ. ನಿಮಗೆ ಕೊಡ್ತಾರಲ್ಲಾ ಬಿಟ್ಟಿ ಯೋಜನೆ ಗೀಜನೆ ಅವೆಲ್ಲಾ ಕುಡುಕ್ರು ಕುಡ್ದು ಕುಡ್ದೂ ಕಟ್ಟಿದ ತೆರಿಗೆ ರೊಕ್ಕದಿಂದಾ ಬಂದಿದ್ದು ಗೊತ್ತಾ.. ನಿನಗೆ ಗೊತ್ತಾ? ಟ್ಯಾಕ್ಸು ನಮ್ದು, ಭಾಗ್ಯ ನಿಮ್ದು.. ಹಿಂಗಾದ್ರ ಕುಡುಕ್ರು ಬದುಕೋದು ಹೆಂಗೆಚುನಾವಣೆ ಬಂದಾಗ ನಮ್ಗೆ ಪುಗ್ಸಟ್ಟೆ ಕುಡ್ಸಿ ಕುಡ್ಸಿ ಓಟ್  ಒತ್ತಿಸಿಕೊಂಡು ಗೆದ್ದು ಬರೋರು ಯಾರಾದ್ರೂ ಕುಡುಕರಿಗೆ ಏನಾದ್ರೂ ಪ್ರೀ ಕೊಡ್ತಾರಾ? ಕೊಟ್ಟಿದ್ದಾರಾ? ಹೋಗ್ಲಿ ಬಿಟ್ಟಿಯಾಗಿ ಉಪ್ಪಿಕಾಯಿ ಚಿಪ್ಸ್ ಪಾಕೆಟಾದ್ರೂ ಕೊಡಬೇಕಲ್ವಾ ಸರಕಾರ. ಅನ್ಯಾಯಾ.. ಅಯ್ಯಯ್ಯೋ ಅನ್ಯಾಯಾ. ಅನ್ಯಾಯಾನಾ ಕೇಳೋರು ಯಾರೂ ಇಲ್ವಾಅಖಿಲ ಭಾರತ ಕುಡುಕರ ಸಂಘ ಮಾಡ್ಕೊಂಡು ಸರಕಾರಕ್ಕ ಬಿಸಿ ಮುಟ್ಟಿಸ್ತೀವಿ. ಹೆಂಗಸ್ರಿಗೆ ಭಾಗ್ಯ, ಗಂಡಸರಿಗೆ ಬರೀ ದೌರ್ಬಾಗ್ಯ. ಒಂದು ಕಣ್ಣಿಗೆ ಬೆಣ್ಣಿ, ಕುಡುಕರ ಕಣ್ಣಿಗೆ ಸುಣ್ಣ.. ಅಯ್ಯೋ ಅನ್ಯಾಯಾ. ( ಎಂದು ಕೂಗಾಡುತ್ತಾ ಕೆಳಕ್ಕೆ ಬೀಳುವನು, ಅದೇ ಸಮಯಕ್ಕೆ ಸರಿಯಾಗಿ ಬಸ್ ಬರುವುದು

 

ಶಾಂತವ್ವ : ಸೂರಿ. ಇವಂದೂ ದಿನಾ ಒಂದು ನಾಟಕ ಇದ್ದಿದ್ದss. ನಿಶೆ ಇಳ್ದು ಎದ್ದ ಮ್ಯಾಗ ಮನಿಕಡೆ ಕರ್ಕೊಂಡು ಹೋಗಿ ಬಿಸಾಕು. ನಿಂಗವ್ವಾ ನಡೀ ಬಸ್ ಹತ್ತು. ಹಂಗಲ್ಲವ್ವಾ. ಬಸ್ಸಿನ ಮೆಟ್ಟಲಿಗೆ ಮೊದಲು ನಮಸ್ಕಾರ ಮಾಡು. ನಮ್ಮ ಕನಸಿಗೆ ಕಿಂಡಿ ಬೆಳಕು ತೋರಿಸಿದವರಿಗೆ ಒಳ್ಳೇದಾಗಲಿ ಅಂತಾ ಹೇಳು. ನಡಿ ನಡೀ.. ಹತ್ತು.. 

 

ಯಮನಪ್ಪ : ( ಬಿದ್ದಲ್ಲೇ ಗೊಣಗುವನು? ಅಯ್ಯೋ ಅನ್ಯಾಯಾ? ಅಯ್ಯಯ್ಯೋ..

 

ಕಂಡಕ್ಟರ್ : ರೈಟ್ ರೈಟ್.. ಮುಂದಕ್ಕೋಗಿ ಮುಂದಕ್ಕ.

 

(ಯಾರದೋ ಮೊಬೈಲಲ್ಲಿ ಹಾಡು

 

ಮುಂದೆ ಬನ್ನಿ, ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ

ಕಮಾನ್ ಕಮಾನ್ ಇನ್ನೂ ಮುಂದೆ ಬನ್ನಿ.

 

ಬೇರೆ ಯಾರೂ ಮಾತನ್ನ ಹೇಳೋದಿಲ್ಲ

ಹಿಂದೆ ತಳ್ಳೋ ಜನರೇ ಹೆಚ್ಚು ಊರಲ್ಲೆಲ್ಲಾ

ಮುಂದೆ ಬನ್ನಿ..

 

*- ಶಶಿಕಾಂತ ಯಡಹಳ್ಳಿ*

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ