ಪಟಿಂಗ ಪುರೋಹಿತರಿದ್ದಾರೆ ಎಚ್ಚರಿಕೆ ( ಪ್ರಹಸನ-23)

 ಪ್ರಹಸನ-23)

ಪಟಿಂಗ ಪುರೋಹಿತರಿದ್ದಾರೆ ಎಚ್ಚರಿಕೆ 

************************************

 

(ಕುಂಕುಮ ವಿಭೂತಿ ಬಳಿದುಕೊಂಡ ಪುರೋಹಿತನೊಬ್ಬ ಹೋಮಕುಂಡದ ಮುಂದೆ ಕುಳಿತು ಮಂತ್ರ ಪಠಿಸುತ್ತಿದ್ದಾನೆ. ಗಂಡ ಹೆಂಡತಿ ಬರುತ್ತಾರೆ.)

 

ವ್ಯಕ್ತಿ  : ಸ್ವಾಮಿಗೋಳೇ.. ನಮಸ್ಕಾರ.. ರ್ರೀ ಮಹಾತ್ಮರೆ..

 

(ಪುರೋಹಿತ  ಒಂದು ಕಣ್ಣು ಮಾತ್ರ ತೆರೆದು, ಹೂ ಹಣ್ಣು ಕಾಯಿ ಜೊತೆ ವ್ಯಕ್ತಿ ನಿಂತಿದ್ದನ್ನು ನೋಡಿ ಮತ್ತೆ ಕಣ್ಮುಚ್ಚಿ ಮಂತ್ರಪಠಣೆ)

 

ವ್ಯಕ್ತಿ : ಸ್ವಾಮಿಗೋಳೇ.. ನಾವು ಭಕ್ತರು. ನಿಮಗಾಗಿ ಕಾಣಿಕೆಯಾಗಿ  ಹಣ ತಂದಿದ್ದೇವೆ.. ಸ್ವೀಕರಿಸಿ

 

(ಪುರೋಹಿತ ಇನ್ನೊಂದು ಕಣ್ಣು ಮಾತ್ರ ತೆರೆದು ನೋಡಿ ಕಣ್ಮುಚ್ಚಿ ಮಣಮಣ ಮಂತ್ರ ಪಠನ ಮುಂದುವರೆಸುವನು )

 

ವ್ಯಕ್ತಿ : ಸ್ವಾಮಿಗೋಳು ಪೂಜೆಯಲ್ಲಿ ತಲ್ಲೀಣರಾದಂತಿದೆ. ತೊಂದರೆ ಕೊಡೋದು ಬೇಡ, ನಡೀ ಬೇರೆ ಪಂಡಿತರನ್ನ ನೊಡೋಣ.

 

ಹೆಣ್ಣು : ಇರ್ರೀ ನಾನೊಮ್ಮೆ ಪ್ರಯತ್ನ ಮಾಡ್ತೇನೆ. ಸ್ವಾಮಿಗೋಳೇ.. ನಿಮ್ಮ ಪಾದಕ್ಕೆ ಶರಣು. ಕಾಣಿಕೆ ಒಪ್ಪಿಸಿಕೊಳ್ಳಿ..

 

ಪುರೋಹಿತ : (ಒಂದಾದ ಮೇಲೆ ಇನ್ನೊಂದರಂತೆ ಕಣ್ಣುಗಳನ್ನು ತೆರೆದು, ಹೆಂಗಸನ್ನು ನೋಡಿ ಎರಡೂ ಕಣ್ಣುಗಳನ್ನು ಮಿಟುಕಿಸುತ್ತಾ) ಹೋ.. ಏನು ಬಂದಿದ್ದು. ನಾನು ದೈವಸಾಧನೆಯಲ್ಲಿ ಮೈಮರೆತಿದ್ದೆ. ನಿಮ್ಮನ್ನು ಗಮನಿಸಲಿಲ್ಲಾ. ಹೇಳಮ್ಮಾ ನಿನಗೇನಾಗಬೇಕು.

 

ವ್ಯಕ್ತಿ : ಏನಿಲ್ಲಾ ಸ್ವಾಮಿಗೋಳೇ. ನಿಮ್ಮ ಹೆಸರಿನ ಪ್ರಸಿದ್ದಿ ಬಹಳಾ ಕೇಳಿದ್ದೆವು. ಇವತ್ತು ಬೇಟಿ ಆಗಿ ಆಶಿರ್ವಾದ ತಗೊಂಡು ಜನುಮ ಪಾವನ ಮಾಡಿಕೊಂಡು ಹೋಗೋಣಾಂತ  ಬಂದ್ವಿ.

 

ಪುರೋಹಿತ : ಆಶೀರ್ವಾದ ಕೊಡ್ತೀವೆ. ಕೊಟ್ಟೆ ಕೊಡ್ತೇವೆ. ನಾವಿರೋದೆ ಕೊಡೋಕೆ. ಯಾರಿಗೆ ಬೇಕು.. ಕನ್ಯಾಮಣಿಗೋ.. ಕೊಡೋಣ್ವಂತೆ. ಧಾರಾಳವಾಗಿ ಮನಸ್ಸು ಬಿಚ್ಚಿ, ಹೃದಯ ಬಿಚ್ಚಿ ಕೊಡೋಣ್ವಂತೆ

 

ವ್ಯಕ್ತಿ : ಸ್ವಾಮಿಗೋಳು ಮೊನ್ನೆ ಮೈಸೂರಲ್ಲಿ ನೀರಿನ ಪಾತ್ರೆಯೊಳಗೆ ಕುಳಿತು ಮಳೆಗಾಗಿ ಜಪ ಮಾಡಿದ್ರಂತೆ

 

ಪುರೋಹಿತ : ಹೌದೌದು. ನಾವೇ ಮಾಡಿದ್ದು, ಜಪ ತಪ ಪೂಜೆ. ಪ್ರಜ್ಯನ್ಯ ಹೋಮ ಮಾಡಿದರೆ ಮಳೆ ಬರುತ್ತೆಂದು ನಮ್ಮ ವೇದಗಳಲ್ಲಿ ಹೇಳಿದೆ

 

ಮಹಿಳೆ : ಹೋಮ ಮಾಡಿದ್ರೆ ನಿಜವಾಗ್ಲೂ ಮಳೆ ಬರುತ್ತಾ ಸ್ವಾಮಿಗೋಳೆ

 

ಪುರೋಹಿತ : ಬಂದೆ ಬರುತ್ತಮ್ಮಾ. ಬರದೇ ಹೇಗಿರುತ್ತೆ. ವರುಣದೇವನನ್ನು ಪೂಜೆ ಹೋಮ ಮಂತ್ರಗಳಿಂದ ತೃಪ್ತಿಪಡಿಸಿದರೆ ಮಳೆ ಬಂದೇ ಬರುತ್ತೆ. ಹೆಣ್ಣು ಒಲಿದರೆ ಹೇಗೆ ಗಂಡು ತೃಪ್ತನಾಗ್ತಾನೋ ಹಾಗೇನೇ ಮಂತ್ರಗಳಿಗೆ ವರುಣ ಸಂತೃಪ್ತನಾಗ್ತಾನೆ

 

ವ್ಯಕ್ತಿ : ಮಂತ್ರಕ್ಕೆ ಅಂತಾ ಶಕ್ತಿ ನಿಜವಾಗ್ಲೂ ಇರುತ್ತಾ ಶಾಸ್ತ್ರಿಗಳೇ.

 

ಮಹಿಳೆ : ಕೆಲವೊಮ್ಮೆ ಮಂತ್ರ ತಂತ್ರ ಶಕ್ತಿಗಳೂ ವಿಫಲ ಆಗ್ತಾವೆ ಅಂತಾ ಕೆಲವರು ಹೇಳ್ತಾರೆ ಹೌದಾ ಸ್ವಾಮಿ.

 

ಪುರೋಹಿತ : ಹೇಳ್ತಾರಮ್ಮಾ ಹೇಳ್ತಾರೆ. ಅವಿವೇಕಿಗಳು, ನಾಸ್ತಿಕರು ಹೇಳ್ತಾನೇ ಇರ್ತಾರೆ. ಇದೆಲ್ಲದಕ್ಕೂ ನಂಬಿಕೆ ಮುಖ್ಯವಾಗಿರಬೇಕು. ನಂಬಿದವರ ನಾರಾಯಣ ಕಾಪಾಡ್ತಾನೆ.

 

ವ್ಯಕ್ತಿ : ನಾರಾಯಣ ಯಾರು ಸ್ವಾಮಿ?

 

ಪುರೋಹಿತ : (ಸಿಟ್ಟಿನಿಂದ) ದೇವರು ಕಣಯ್ಯಾ ಅನಿಷ್ಟ ಮುಂಡೇದೇ.

 

ಮಹಿಳೆ : ಕ್ಷಮಿಸಿ ಸ್ವಾಮಿ. ಇವರು ಸ್ವಲ್ಪ ಹಿಂಗೇನೇ. ಹೊಟ್ಟೆಗೆ ಹಾಕ್ಕೊಳ್ಳಿ ಪ್ಲೀಜ್.

 

ಪುರೋಹಿತ : ಏನೋ ನೀನು ಬೇಡ್ಕೊತಿದ್ದೀಯಾ ಅಂತಾ ಸುಮ್ಕಿದ್ದೀನಿ. ಇಲ್ಲಾಂದ್ರೆ ಈಗಲೇ ಶತ್ರುಸಂಹಾರ ಮಂತ್ರ ಹೇಳಿ ಭಸ್ಮ ಮಾಡಿ ಬಿಡ್ತಿದ್ದೆ.

 

ಮಹಿಳೆ : ಅಯ್ಯೋ ಹಂಗೇನಾದ್ರೂ ಮಾಡಿದ್ರೆ ನನ್ನ ಗತಿ ಏನು ಸ್ವಾಮೀಜಿ. ಸಧ್ಯಕ್ಕೆ ಇರೋನು ಇವನೊಬ್ಬನೇ ಗಂಡ.

 

ಪುರೋಹಿತ : ಇಂತಾ ಅನಿಷ್ಟಗಳು ಹೋದರೆ ಹೋಗಲಿ ಬಿಡಮ್ಮಾಇವನಲ್ಲದಿದ್ದರೆ ಇನ್ನೊಬ್ಬ ನನ್ನಂತಾ ಗುಂಡಕಲ್ಲಿನಂತಾ ಗಂಡಾ ಸಿಕ್ಕೇ ಸಿಗ್ತಾನೆ. ನೀ ಹೂಂ ಅನ್ಬೇಕು ಅಷ್ಟೇ

 

ವ್ಯಕ್ತಿ : ಸ್ವಾಮಿಗೋಳೆ ಮೊದಲು ನನ್ನ ಸಂದೇಹ ನಿವಾರಣೆ ಮಾಡಿನೀವು ಯಾವಾಗಲೂ ಮಳೆಗಾಲ ನೋಡಕೊಂಡೇ ಯಾಕೆ ಹೋಮ ಪೂಜೆ ಜಪ ಅಂತಾ ಮಾಡ್ತೀರಿ. ಹೇಗೂ ಮಳೆಗಾಲ ಅಂದ್ರೆ ಮಳೆ ಬರೋ ದಿನಮಾನಗಳಲ್ವಾ.

 

ಪುರೋಹಿತ : ಪ್ರಾರಬ್ದ ಮುಂಡೇದೇ. ಮಳೆಗಾಲದಲ್ಲಿ ವರುಣ ದೇವ ಮುನಿಸಿಕೊಂಡ್ರೆ ಮಳೆ ಎಲ್ಲಿಂದಾ ಬರುತ್ತೆ ಹೇಳು. ದೇವನನ್ನ ಮಂತ್ರಗಳಿಂದಾ ಒಲಿಸಿಕೊಳ್ಳಬೇಕು. ಹೋಮ ಹವನಗಳಿಂದ ಆಕರ್ಷಿಸಬೇಕು. ಜಪತಪಗಳಿಂದ ಸಂತಸ ಪಡಿಸಬೇಕು. ಇವೆಲ್ಲವುಗಳಿಂದ ವರುಣ ಸಂಪ್ರೀತನಾದರೆ ಮಳೆ ಬಂದೇ ಬರುತ್ತೆ. ಭೂಮಿಗೆ ಜೀವಕಳೆ ಉಕ್ಕುತ್ತೆ.

 

ವ್ಯಕ್ತಿ : ಮತ್ತೆ ಮೈಸೂರಲ್ಲಿ ನೀವು ನೀರಲ್ಲಿ ಬರೀ ಮೈಯಲ್ಲಿ ಕೂತು ಜಪ ಮಾಡಿ ಮಂತ್ರ ಹೇಳಿ ಮೂರು ದಿನ ಆದ್ರೂ ಇನ್ನೂ ಮಳೆ ಬಂದೇ ಇಲ್ವಲ್ಲಾ ಸ್ವಾಮಿಗೋಳೆ. ಕನ್ನಂಬಾಡಿ ತುಂಬಲೇ ಇಲ್ಲಾ.

 

ಪುರೋಹಿತ : ಅವಿವೇಕಿ. ಸ್ವಿಚ್ ಹಾಕಿದ್ ತಕ್ಷಣ ಲೈಟ್ ಹತ್ತೋಕೆ ವರುಣ ಏನು ಕರೆಂಟಾ. ಅವನು ದೇವ್ರು, ಮಳೆ ದೇವ್ರು. ರಮಿಸಬೇಕು, ಒಲಿಸಿಕೊಳ್ಳಬೇಕು, ಬೇಡಿಕೋಬೇಕು. ಆಮೇಲೆ ಕರುಣೆ ತೋರಿ ಬರ್ತಾನೆ. ಕರೆದ ತಕ್ಷಣ ಬಂದರೆ ದೇವರಿಗೂ ಮರ್ಯಾದೆ ಇರೋದಿಲ್ಲ ತಿಳ್ಕೋ..

 

ವ್ಯಕ್ತಿ : ಹಂಗಾದ್ರೆ ಇನ್ನೂ ನಿಮ್ಮ ವರುಣ ದೇವ್ರು ನಿಮ್ಮ ಮಂತ್ರದಿಂದ ಸಂತುಷ್ಟವಾಗಿಲ್ವಾ ಶಾಸ್ತ್ರಿಗಳೇ

 

ಪುರೋಹಿತ : ಆಗ್ತಾನೆ.. ಆಗೇ ಆಗ್ತಾನೆ. ಯಾಕಾಗೋದಿಲ್ಲ. ಸ್ವಲ್ಪ ನಮ್ಮ ಭಕ್ತಿ ಭಾವಗಳನ್ನ ಪರೀಕ್ಷೆ ಮಾಡ್ತಾನೆ. ಆಮೇಲೆ ಮಳೆ ತಂದೇ ತರ್ತಾನೆ

 

ಮಹಿಳೆ : ನೀವು ಮಹಾತ್ಮರು ಸ್ವಾಮಿ. ನಿಮ್ಮಂತೋರು ಇರೋದರಿಂದಲೇ ಕಾಲಕಾಲಕ್ಕೆ ಮಳೆಯಾಗೋದು ಬೆಳೆ ಬರೋದು

 

ವ್ಯಕ್ತಿ : ಹೌದೌದು. ಸರಕಾರದವರಿಗೆ ಬುದ್ದಿ ಇಲ್ಲಾ. ಇಂತಾ ಮಹಾ ಮೇಧಾವಿಗಳನ್ನ ಮರೆತು ಬಿಟ್ಟು ಮಳೆ ತರಿಸೋಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮೋಡ ಬಿತ್ತನೆ ಮಾಡ್ತಾರಂತೆ

 

ಮಹಿಳೆ : ಮಹಾತ್ಮರದ್ದು ನೋಡು, ಹೆಚ್ಚು ಖರ್ಚಿಲ್ಲದ ಮಳೆ ತರಿಸೋ ವಿದ್ಯೆ.

 

ವ್ಯಕ್ತಿ : ಒಂದು ದೊಡ್ಡಪಾತ್ರೆ ತುಂಬಾ ನೀರು. ಖರ್ಚೇ ಇಲ್ಲದ ಮಂತ್ರಗಳು. ಇಷ್ಟಿದ್ರೆ ಸಾಕು. ಮಳೆ ಬಂದಂಗೇ..

 

ಪುರೋಹಿತ : ಅದರ ಜೊತೆಗೆ ಭಕ್ತಿ ಜಪ ತಪಗಳೂ ಮುಖ್ಯ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕಯ್ಯಾ ಶ್ರದ್ಧೆ.

 

ವ್ಯಕ್ತಿ : ಸ್ವಾಮಿಗೋಳೆ.. ಇಷ್ಟೆಲ್ಲಾ ಶ್ರದ್ದೆ ಇಟ್ಟು ನೀವು ಜಪ ತಪ ಪೂಜೆ ಮಾಡಿದ್ರೂ ಮಳೆ ಬರಲೇ ಇಲ್ಲಾ ಅಂದ್ರೆ ಏನು ಮಾಡೋದು

 

ಮಹಿಳೆ : ಹೌದು ಸ್ವಾಮೀಜಿ ಏನ್ ಮಾಡೋದು

 

ಪುರೋಹಿತ : ನಮ್ಮ ಕಾಯಕ ನಾವು ಮಾಡ್ತೀವಿ. ಫಲಾಫಲ ದೇವರ ಇಚ್ಚೆ. ಇಷ್ಟಕ್ಕೂ ಪುಣ್ಯ ಕಡಿಮೆಯಾಗಿ ಪಾಪದ ಕೊಡ ತುಂಬಿ ತುಳುಕಿ ಹೆಚ್ಚಾದ್ರೆ ನಾವಾದ್ರೂ ಏನು ಮಾಡೋಕಾಗುತ್ತೆ. ಮಳೆ ಮತ್ತು ಮನುಷ್ಯರ ನಡುವೆ ಪಾವಿತ್ರತೆ ಇರಬೇಕು. ಭಯ ಭಕ್ತಿ ಇರಬೇಕು. ನಂಬಿಕೆ ಮೊದಲು ಬೇಕು. ಆಗ ಮಾತ್ರ ದೇವರು ತೃಪ್ತಿ ಆಗೋದು. ಕೇಳಿದ ವರ ಕೊಡೋದು

 

ವ್ಯಕ್ತಿ : ಓಹೋ.. ಪುಣ್ಯ ಅಂತಾ ಇದ್ದಲ್ಲೆಲ್ಲಾ ಪಾಪಾನೂ ಇದ್ದೇ ಇರುತ್ತೆ ಅಲ್ವಾ ಸ್ವಾಮೀಜಿ. ಪಾಪ ಪರಿಹಾರ ಆಗೋಕೆ ಏನ್ಮಾಡಬೇಕು.

 

ಪುರೋಹಿತ : ಅದಕ್ಕೆ ಇನ್ನೊಂದು ಪಾಪ ಪರಿಹಾರ  ಯಜ್ಞ ಮಾಡಬೇಕು. ಅಗ್ನಿದೇವನಿಗೆ ಹವಿಸ್ಸು ಕೊಡಬೇಕು. ಮಂತ್ರಶಕ್ತಿಯಿಂದ ದೇವರನ್ನ ಒಲಿಸಿಕೊಳ್ಳಬೇಕು.

 

ಮಹಿಳೆ : ಮಂತ್ರದಿಂದ ಏನು ಬೇಕಾದರೂ ಮಾಡಬಹುದಂತೆ ಹೌದಾ ಸ್ವಾಮಿಗೋಳೆ.

 

ಪುರೋಹಿತ : ಹೌದೌದು. ನಿನಗೆ ಮಕ್ಕಳಿಲ್ಲಾಂದ್ರೆ ಮಕ್ಕಳನ್ನೂ ಕೊಡುವ ಶಕ್ತಿ ಮಂತ್ರಗಳಿಗೆ ಇದೆಯಮ್ಮಾ. ಪ್ರಯತ್ನ ಮಾಡಿ ನೋಡು.

 

ಮಹಿಳೆ : ಆಗಬಹುದು ಸ್ವಾಮಿ. ಮದುವೆಯಾಗಿ ಎಂಟು ವರ್ಷ ಆಯ್ತು. ನನ್ನ ಹೊಟ್ಟೇಲಿ ಇನ್ನೂ ಒಂದು ಹುಳಾನೂ ಹುಟ್ಟಿಲ್ಲ.

 

ಪುರೋಹಿತ : ಇವನನ್ನು ನಂಬಿದ್ರೆ ಮಕ್ಕಳು ಆಗೋದು ಡೌಟಮ್ಮಾ. ನನ್ನ ನಂಬು. ನನ್ನ ಮಂತ್ರ ಶಕ್ತಿ ನಂಬು. ನಿನಗೆ ಅವಳಿ ಜವಳಿ ಮಕ್ಕಳಾಗದಿದ್ರೆ ಕೇಳು.

 

ವ್ಯಕ್ತಿ : ಸರಿ ಸ್ವಾಮಿಗೋಳೇ. ಆದರೆ ನಿಮ್ಮ ಮೇಲೆ, ನಿಮ್ಮ ಮಂತ್ರ ಶಕ್ತಿ ಮೇಲೆ ನಮಗೆ ನಂಬಿಕೆ ಬರಬೇಕಲ್ಲಾ.

 

ಪುರೋಹಿತ : ನಂಬಿಕೆಯೇ ಎಲ್ಲಾ, ನಂಬದಿದ್ದರೆ ಏನೂ ಸಿಕ್ಕಲ್ಲಾಇವಳನ್ನು ಇಲ್ಲಿಯೇ ಬಿಟ್ಟು ಲಿಸ್ಟಲ್ಲಿರೋ ಪೂಜೆ ಸಾಮಗ್ರಿಗಳನ್ನು ನಿಧಾನಕ್ಕೆ ತೆಗೆದುಕೊಂಡು ಬಾ. ಖರ್ಚು ವೆಚ್ಚವನ್ನೆಲ್ಲಾ ಬರೆಯಲಾಗಿದೆ‌. ಹಣ ಹೊಂದಿಸಿಕೊಂಡು ಬಾ. ಆಮೇಲೆ ನೋಡು ನನ್ನ ಮಂತ್ರದ ಪವಾಡ. ಮಳೆಯನ್ನೇ ತರಿಸುವ ನಾನು ಮಕ್ಕಳನ್ನು ಕೊಡಲಾರೆನೇ.

 

ವ್ಯಕ್ತಿ : ಆಯ್ತು ಸ್ವಾಮಿಗೋಳೇ. ನೀವು ಹೇಳಿದಂಗೆ ಮಾಡ್ತೀನಿ. ಆದರೆ ಅದಕ್ಕೂ ಮೊದಲು ನಮಗೆ ನಂಬಿಕೆ ಬರುವ ಹಾಗೆ ನೀವು ಏನಾದರೂ ಮಾಡಿ ತೋರಿಸಲೇಬೇಕು.

 

ಪುರೋಹಿತ : ಏನು ಮಾಡಲಿ. ತೆಂಗಿನಕಾಯಿ ಒಡೆದು ಒಳಗಿಂದ ಕುಂಕುಮ ಸೃಷ್ಟಿಸಲಾ? ಇಲ್ಲಾ ನಿಂಬೇಹಣ್ಣಿನ ಒಳಗೆ ರಕ್ತ ಹರಿಸಲಾ.

 

ವ್ಯಕ್ತಿ : ಇಂತವನ್ನೆಲ್ಲಾ ಮ್ಯಾಜಿಕ್ ಮಾಡೋರು ಮಾಡ್ತಾರೆ ಸ್ವಾಮೀಜಿ. ನೀವೊಂದು ಕೆಲಸ ಮಾಡಿ. ಮಾವಿನ ಗಿಡ ಇದೆಯಲ್ಲಾ. ನಿಮ್ಮ ಮಂತ್ರಶಕ್ತಿಯಿಂದ ಒಂದೇ ಇಂದು ಮಾವಿನ ಕಾಯಿ ಕೆಳಗೆ ಬೀಳೋ ಹಾಗೆ ಮಾಡಿ ಸಾಕು ನಮಗೆ ನಂಬಿಕೆ ಉಕ್ಕೇರಿ ಬರುತ್ತದೆ.

 

ಮಹಿಳೆ : ಇವನಿಗೆ ಯಾವಾಗಲೂ ಹೀಗೇ ಅನುಮಾನ ಸ್ವಾಮಿ. ಮಂತ್ರದಿಂದ ಮಳೆ ಬರೆಸೋ ಮಹಾತ್ಮರು ನೀವು. ಮಂತ್ರಶಕ್ತಿಯಿಂದ ಮಕ್ಕಳಭಾಗ್ಯ ಕರುಣಿಸುವ ದೇವಮಾನವರು ನೀವು. ಈತ ಹೇಳಿದ ಜುಜುಬಿ ಕೆಲಸ ಚಿಟಿಕೆ ಹೊಡಿಯೋಷ್ಟರಲ್ಲಿ ಮಾಡಿ ಸ್ವಾಮಿ

 

ಪುರೋಹಿತ : ಅದೆಲ್ಲಾ ಆಗೋದಿಲ್ಲ. ನಾವು ಪರಿಶ್ರಮದಿಂದ ಮಂತ್ರಗಳ ಸಿದ್ದಿ ಮಾಡಿಕೊಂಡಿದ್ದು ಇಂತಹ ಕ್ಷುಲ್ಲಕ ಕೆಲಸ ಮಾಡಲೆಂದಲ್ಲ. ಮಾವಿನಕಾಯಿ ಬೇಕಾದರೆ ನನ್ನ ಶಿಷ್ಯರನ್ನು ಕರೆದು ಕಿತ್ತು ಕೊಡಲು ಹೇಳುವೆ.

 

ವ್ಯಕ್ತಿ : ಅದೆಂಗಾಗುತ್ತೆ ಸ್ವಾಮಿಗೋಳೆ. ನನಗೆ ಬೇಕಾದರೆ ನಾನೇ ಕಿತ್ಕೋಬಹುದು. ಆದರೆ ಮಂತ್ರಕ್ಕೆ ಮಾವಿನಕಾಯಿ ಉದರೋದನ್ನ ನಾನು ನೋಡಬೇಕಿದೆ. ಯಾಕಂದ್ರೆ ನಿಮ್ಮ ಮೇಲೆ ನಂಬಿಕೆ ಬರಬೇಕಿದೆ.

 

ಮಹಿಳೆ : ನಿಮ್ಮಂತಾ ಸಿದ್ದಿ ಪುರುಷರಿಗೆ ಅದೇನೂ ಅಸಾಧ್ಯವಲ್ಲಾ ಮಂತ್ರ ಹೇಳಿ ಸ್ವಾಮಿ. ಕಾಯಿ ಉದುರಿಸಿ  ಈತನ ಬಾಯಿ ಮುಚ್ಚಿಸಿ.

 

ಪುರೋಹಿತ : ನಾನು ಸಿದ್ದಿ ಮಾಡಿದ್ದೂ ನಿಜ. ಪುರುಷ ಅನ್ನೋದು ದಿಟ. ಆದರೆ ಯಾವತ್ತೂ ಮಂತ್ರದಿಂದ ಮಾವಿನಕಾಯಿ ಉದುರಿಸೋ ಸಿದ್ದಿ ಮಾಡಿಲ್ಲಾ ತಾಯಿ.. ನೀವಿನ್ನು ಇಲ್ಲಿಂದಾ ಹೊರಡಿ.

 

ವ್ಯಕ್ತಿ : ಅರೆ ಅದೆಂಗಾಗುತ್ತೆ ಸ್ವಾಮೀಜಿ. ನಿಮ್ಮ ಮಂತ್ರಕ್ಕೆ ಆಕಾಶದಿಂದ ಮಳೇನೇ ಉದುರುತ್ತಂತೆ ಇನ್ನು ಮಾವಿನಕಾಯಿ ಉದುರೋದಿಲ್ವಾ. ಓಂ ನಮಃ ಶಿವಾಯ ಅಂತಾ ಶುರು ಹಚ್ಕೊಳ್ಳಿ.

 

ಮಹಿಳೆ : ಏಳಿ ಎದ್ದೇಳಿ. ನನಗೆ ಮಗು ಭಾಗ್ಯ ಕರುಣಿಸಲು ನಿಮಗೆ ಶಕ್ತಿ ಆಸಕ್ತಿ ಇದೆಯೋ ಇಲ್ವೊ

 

ಪುರೋಹಿತ : ಇಷ್ಟೊತ್ತು ಇತ್ತು. ಆದರೆ ಈಗ ಇಲ್ಲಾ. ನಮಗೆ ಅರ್ಜೆಂಟಾಗಿ ಹೋಗಬೇಕಿದೆ. ಕಚೇರಿ ಪೂಜೆ ಮಾಡಿಸಲು ವಿಧಾನಸೌದದಲ್ಲಿ ಮಂತ್ರಿಗಳು ಕಾಯ್ತಿದ್ದಾರೆನೀವಿನ್ನು ಹೋಗಬಹುದು.

 

ವ್ಯಕ್ತಿ : ಅದೆಂಗಾಗುತ್ತೆ ಸ್ವಾಮಿ. ನಿಮಗೆ ಹೂ ಹಣ್ಣು ಕಾಣಿಕೆ ದಕ್ಷಿಣೆ ಎಲ್ಲಾ ತಂದು ಕೊಟ್ಟಾಗಿದೆ. ಈಗ ಹೀಗಂದ್ರೆ ಹೇಗೆ. ನಮಗೆ ಒಂದೇ ಒಂದು ಮಾವಿನಕಾಯಿ ಉದುರಿಸಿ ಕೊಡಿ. ನಮ್ಮ ಕೋರಿಕೆ ನೆರವೇರಿಸಿ.

 

ಪುರೋಹಿತ : ಹೀಗೆಲ್ಲಾ ನಮಗೆ ಬಲವಂತ ಮಾಡುವ ಹಾಗಿಲ್ಲ. ಯಾರಲ್ಲಿ ಧರ್ಮದ್ರೋಹಿ ಪಾಷಂಡಿಗಳನ್ನು ಹಿಡಿದು ಕಟ್ಟಿ ಹಾಕಿ ಪೋಲಿಸರಿಗೆ ಒಪ್ಪಿಸಿ.

 

ವ್ಯಕ್ತಿ : ನಾವೇ ಪೋಲೀಸರನ್ನ ಕರೆಸುತ್ತೇವೆ ಇರು ಸ್ವಾಮಿ. ಪೋನ್ ಮಾಡು ಕೋಮಲಾ.

 

ಪುರೋಹಿತ : ( ಹೆದರಿಕೆಯಿಂದ) ಯಾರು ನೀವು? ನಿಮಗೇನು ಬೇಕು.

 

ವ್ಯಕ್ತಿ : ನಾವು ಟಿವಿ ವಾಹಿನಿಯವರು. ನಿಮ್ಮಂತಾ ನಕಲಿ ಸ್ವಾಮಿಗಳ ಬಂಡವಾಳ ಬಯಲು ಮಾಡಲು ಬಂದಿರೋದು.

 

ಪುರೋಹಿತ : ನೋಡಿ, ನಿಮ್ಮ ಎಲ್ಲಾ ಕಾಣಿಕೆಗಳನ್ನ ವಾಪಸ್ ತಗೊಂಡೋಗಿ. ನಾನೇ ನಿಮಗೆ ಕೇಳಿದಷ್ಟು ಹಣ ಕೊಡುವೆ. ದಯವಿಟ್ಟು ಮರ್ಯಾದೆ ಕಳೀಬೇಡಿ. ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಸಾಕು. ಹೇಗೋ ಗಂಟೆ ಹೊಡೆದುಕೊಂಡು ಬದುಕಿಕೊಳ್ತೇನೆ

 

( ಪುರೋಹಿತ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಾನೆ. ವ್ಯಕ್ತಿ ಆತನನ್ನು ಹಿಡಿದುಕೊಳ್ಳುತ್ತಾನೆ. ಮಹಿಳೆ ತನ್ನ ಚೀಲದಿಂದ ಟಿವಿ ವಾಹಿನಿಯ ಮೈಕನ್ನು ಹೊರಗೆ ತೆಗೆದು)

 

ಮಹಿಳೆ : ನೋಡಿದ್ರಲ್ಲಾ ವೀಕ್ಷಕರೆ. ಇಂತಾ ಕಳ್ಳ ಸ್ವಾಮಿಗಳು, ದಗಲ್ಬಾಜಿ ಪುರೋಹಿತರುಗಳು ಜನರ ನಂಬಿಕೆಗಳನ್ನ ದುರುಪಯೋಗಪಡಿಸಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಅಂತಾ. ಜಪ ತಪ ಹೋಮ ಹವನ ತಂತ್ರ ಮಂತ್ರ ಎಂದೆಲ್ಲಾ ಬಿಲ್ಡಪ್ ಕೊಡುತ್ತಾ ಅಮಾಯಕರನ್ನು ನಂಬಿಸಿ ದೋಚುತ್ತಾರೆ. ಇಂತಹ ಕಳ್ಳ ಪುರೋಹಿತರ ಮುಖವಾಡವನ್ನು ಕಳಚಲೆಂದೇ ನಮ್ಮ ಸುದ್ದಿ ವಾಹಿನಿ ಸ್ಟ್ರಿಂಗ್ ಆಪರೇಶನ್ ಮಾಡಿದ್ದುನಾವು ನೀವೆಲ್ಲಾ ನಮ್ಮ ವಿದ್ಯೆ ಬುದ್ದಿ ಹಾಗೂ ಪರಿಶ್ರಮವನ್ನು ನಂಬೋಣ, ನಂಬಿಸಿ ವಂಚಿಸುವವರಿಂದ ದೂರವಿರೋಣ. ಇಂತಹ ಕದೀಮ ಖಾವಿದಾರಿ ಕಳ್ಳ ಸ್ವಾಮಿಗಳ ಮುಖವಾಡ ಬಯಲುಮಾಡಿ ಕಾನೂನಿಗೆ ಒಪ್ಪಿಸೋಣ. ಕ್ಯಾಮರಾ ಮ್ಯಾನ್ ಪ್ರದೀಪ್ ಜೊತೆ ನಾನು ನಿಮ್ಮ ಕೋಮಲಾ. ಸತ್ಯ ಸುದ್ದಿಗಳಿಗಾಗಿ ಸದಾ ನೋಡುತ್ತಲೇ ಇರಿ ಸೃಷ್ಟಿ ಸುದ್ದಿ ವಾಹಿನಿ.

 

*- ಶಶಿಕಾಂತ ಯಡಹಳ್ಳಿ*

 

( ಮುಂಗಾರು ಮಳೆ ವಿಳಂಬವಾಗಿದ್ದಕ್ಕೆ ಕೆಲವು ಪುರೋಹಿತರು 13-6-2023 ರಂದು ಮೈಸೂರಿನ ಕೆಆರ್ ಎಸ್ ನಲ್ಲಿ ನೀರು ತುಂಬಿದ ಪಾತ್ರೆಯಲ್ಲಿ ಕುಳಿತು ವರುಣನನ್ನು ಮೆಚ್ಚಿಸಿ ಮಳೆ ತರಿಸಲು ಪ್ರರ್ಜನ್ಯ ಪೂಜೆ ಮಾಡಿದರು. ಆದರೂ ಅಂದುಕೊಂಡಂತೆ ಮಳೆ ಬರಲಿಲ್ಲ. ಸನ್ನಿವೇಶವನ್ನಾಧರಿಸಿ ಪಟಿಂಗ್ ಪುರೋಹಿತರು ಹೇಗೆ ಜನರನ್ನು ಯಾಮಾರಿಸುತ್ತಾರೆ ಎಂಬುದರ ಕುರಿತು ಪ್ರಹಸನ.)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ