ಸಾಲದ ಶೂಲ ಅರ್ಥಾತ್ ಸರಕಾರಿ ಕೊಲೆ (ಪ್ರಹಸನ-24)
(ಪ್ರಹಸನ-24)
ಸಾಲದ ಶೂಲ ಅರ್ಥಾತ್ ಸರಕಾರಿ ಕೊಲೆ
****************************************************
(ದೇವಪ್ಪನ ಪುಟ್ಟ ಗುಡಿಸಲಿನ ಮನೆ. ದೇವೂ ಹಾಡುತ್ತಾ ಬರುತ್ತಾನೆ )
ದೇವು : ಸಾಲ ಮಾಡದವ್ರು ಯಾರವ್ರೆ, ಸಾಲ ಕೊಡುವವರು ಎಲ್ಲವ್ರೇ.
ಬದುಕೋದಕ್ಕೆ ಸಾಲ ಬೇಕಾಗುತ್ತೆ
ತೀರ್ಸೊದಕ್ಕೆ ದಾರಿ ಎಲ್ಲೈತೆ..
ಪಾರು : ಮತ್ತೇಷ್ಟು ಸಾಲ ಮಾಡಿ ಬಂದಿ ಮಾರಾಯಾ..
ದೇವು : ನೋಡೇ ಪಾರು, ಸಾವಿಲ್ಲದ ಮನೆಯ ಸಾಸಿವೆ ತರಬಹುದು ಆದರೆ ಸಾಲ ಇಲ್ಲದ ಮನುಷ್ಯ ಕಂದೀಲು ಹಿಡಿದು ಹುಡುಕಿದ್ರೂ ಊಹೂಂ ಸಿಗೋದಿಲ್ಲ.
ಪಾರು : ಹಿಂಗೇ ಏಟು ದಿನಾಂತ ಸಾಲಾ ಮಾಡಿ ಬದುಕೋದು. ಬಂಡ ಬಾಳು. ಮಾನ ಮರ್ಯಾದೆ ಏನು ಇಲ್ವಾ ನಿಂಗೆ.
ದೇವೂ : ಐತೆ, ಎಲ್ಲಾ ಐತೆ. ಆದರೇನು ಮಾಡೋದು ಇಷ್ಟುದ್ದಾ ಓದಿದ್ರೂ ಎಲ್ಲೂ ಕೆಲಸ ಸಿಗಲಿಲ್ಲ. ಹೆಂಗಾದ್ರೂ ಬಾಳ್ವೇ ಮಾಡಬೇಕಲ್ವಾ. ನಿನ್ನ ಮಕ್ಕಳನ್ನ ಸಾಕ ಬೇಕಲ್ವಾ..
ಪಾರು : ದುಡಿದು ತಂದು ಹಾಕೋ ಯೋಗ್ಯತೆ ಇಲ್ಲಾ, ಎಲ್ಲಿ ನೋಡಿದ್ರೂ ಸಾಲಾ ಸಾಲ.. ಇಂತಾ ಬಂಡ ಬಾಳು ಬೇಕಾ..
ದೇವೂ : ಅಲ್ಲಲೇ ಪಾರು.. ಚಾರ್ವಾಕರು ಅಂತಾ ಇದ್ರು. ಅವರು ಏನು ಹೇಳಿದ್ದಾರೆ ಅಂತಾ ಗೊತ್ತಿದೆಯಾ? ಸಾಲವನು ಕೊಂಡಾದರೂ ತುಪ್ಪವನುಂಡು ತೇಗು. ಸತ್ತ ಮೇಲೆ ಈ ದೇಹ ಮತ್ತೆ ಬರದು ಭುವಿಗೆ ಅಂತಾ..
ಪಾರು : ಹೌದಾ ಚೆಲುವಾ.. ನಮ್ಮ ಸರ್ವಜ್ಞ ಏನು ಹೇಳಿದ್ದಾರೆ ಗೊತ್ತಾ. "ಸಾಲವನು ಕೊಂಬಾಗ ಹಾಲೋಗರ ಉಂಡಂತೆ. ಸಾಲಿಗರು ಬಂದೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ" ಅಂತಾ.
ದೇವೂ : ನೋಡೇ ಸಾಲ ಯಾರು ಮಾಡಿಲ್ಲಾ. ನೀನು ಮಾಡಿಲ್ವಾ, ನಿಮ್ಮಪ್ಪ ಮಾಡಿಲ್ವಾ.. ಅವರಪ್ಪಾ ಮಾಡಿಲ್ವಾ.
ಪಾರು : ಚೀಚೀ.. ನಮ್ಮಪ್ಪನ್ನ ಯಾಕೆ ಎಳೆದು ತರ್ತೀ. ನಾನಂತೂ ಒಂದು ನೈಯಾಪೈಸಾ ಸಾಲಾ ಮಾಡಿಲ್ಲ. ಮಾಡೋದೂನೂ ಇಲ್ಲ.
ದೇವೂ : ಹೌದಾ.. ಲೇ ಪೆದ್ದಿ ನಿನ್ನ ತಲೀ ಮೇಲೆ ಲಕ್ಷಾಂತರ ರೂಪಾಯಿ ಸಾಲದ ಹೊರೆ ಐತೆ ಗೊತ್ತಾ.
ಪಾರು : ಅಯ್ಯೊ ಅಯ್ಯೋ ನಿನ್ನ ಮನೆ ಹಾಳಾಗಾ. ನನ್ನ ಹೆಸರಲ್ಲೂ ಸಾಲಾ ಮಾಡಿ ನುಂಗಿ ನೀರು ಕುಡ್ದಿದ್ದೀಯಾ,
ನಿನಗ್ ಬರಬಾರದ್ದ ಬಂದು ಚಾಪಿ ಸುತ್ಕೊಂಡು ಹೋಗಾ.
ದೇವೂ : ಹೊ ಹೋ.. ಹೋಲ್ಡಾನ್.. ಪ್ಲೀಜ್. ನಾನ್ಯಾಕೆ ನಿನ್ನ ಹೆಸರಲ್ಲಿ ಸಾಲಾ ಮಾಡ್ಲಿ.. ಬೇರೆಯವರು ಮಾಡಿಟ್ಟಾರ ನಿನಗ್ ಗೊತ್ತಿಲ್ಲ ಅಷ್ಷss.
ಪಾರು : ನನ್ನ ಹೆಗಲ ಮ್ಯಾಲೆ ಸಾಲದ ಭಾರ ಹೊರಸಿದ ಆ ಕಳ್ಳನನ್ನಮಗ ಯಾರು ಮೊದಲು ಹೇಳು. ಅವನ ಮನಿ ಮಸಾನ ಆಗಾ, ಅವನಿಗೆ ಕರಿನಾಗರ ಕಚ್ಚಾ, ಕರೋನಾ ಬಂದು ಆ ಬೇವಾರ್ಸಿ ಬೀದಿಹೆಣ ಆಗಿ ಹೋಗಾ.
ದೇವೂ : ಓ ಹೋ.. ಸ್ಟಾಪ್ ಸ್ಟಾಪ್. ನೀನಷ್ಟ ಅಲ್ಲಲೇ ಪಾರಿ ಈ ದೇಶದಾಗಿರೋ ಎಲ್ಲಾರ ತಲೀ ಮ್ಯಾಗೂ ಲಕ್ಷಾಂತರ ಸಾಲ ಮಾಡಿ ಇಟ್ಟವ್ರೆ. ನಮ್ಮ ಮಕ್ಕಳ ತಲೀ ಮೇಲೂ ಸಾಲ ಇದೆ ಗೊತ್ತಾ.
ಪಾರು : ಏ ಏನಂತಾ ಹೇಳ್ತಿ. ಒಡಪಿನ ಮಾತು ಸಾಕು. ಬಿಡಿಸಿ ಹೇಳು. ಯಾವನವನು ಸಣ್ಣ ಕಂದಮ್ಮಗಳ ಮೇಲೆ ಸಾಲದ ಭಾರ ಹೊರ್ಸಿದ್ದು.. ಬೇವಾರ್ಸಿ ಹಳೇ ಬೇವಾರ್ಸಿ..
ದೇವೂ : ನೋಡೇ ಪಾರಿ. ಮೋದಿ ಅಂತಾ ಚೌಕೀದಾರ ಇದ್ದಾರಲ್ಲಾ, ಅವರು ಎಲ್ಲರ ತಲೆ ಮೇಲೂ ಸಾಲದ ಹೊರೆ ಹೊರಿಸಿದ್ದಾರೆ ಗೊತ್ತಾ.
ಪಾರು : ಅಯ್ಯಾ, ಅವನ್ ಮುಖಾ ಮುಚ್ಚಾ. ಅವನಿಗೇನು ಹೆಂಡ್ರಾ ಮಕ್ಳಾ. ನಮ್ಮೆಸರಲ್ಲಿ ಸಾಲಾತಗೊಂಡು ಏನ್ ಮಾಡ್ತಾನೆ..
ದೇವೂ : ಅಭಿವೃದ್ದಿಗಾಗಿ ಸಾಲಾ ಅಂತಾರೆ ಆದರೆ ಕಾರ್ಪೊರೇಟ್ ಕುಳಗಳ ಸಾಲ ಮನ್ನಾ ಮಾಡ್ತಾರೆ. ದೇಶದ ಆಸ್ತಿಗಳನ್ನೂ ಮಾರ್ತಾವ್ರೆ ಆದರೂ ಹಣ ಸಾಕಾಗಲ್ಲಾ ಅಂತಾರೆ.
ಪಾರು : ಹೌದಾ.. ಏನ್ ಒಂದತ್ತು ಕೋಟಿ ಸಾಲ ಮಾಡಿರಬೋದಾ?
ದೇವೂ : ಅಯ್ಯೋ ಮೂದೇವಿ. ಹತ್ತಿಪ್ಪತ್ತು ಕೋಟಿ ಅಲ್ಲವೇ ಎಂಟು ವರ್ಷದಲ್ಲಿ ನೂರು..
ಪಾರು : ನೂರು ಕೋಟಿ ಸಾಲವಾ?
ದೇವೂ : ತಡ್ಕೋ ಹೇಳ್ತೀನಿ. ನೂರು ಕೋಟಿ ಅಲ್ವೆ ನೂರು ಲಕ್ಷ ಕೋಟಿ ಸಾಲ ಮಾಡವ್ರೆ ಚೌಕೀದಾರರು.
ಪಾರು : ಅಯ್ಯೋ ಅಯ್ಯೋ.. ಕಳ್ಳನ ಕೈಗೆ ಖಜಾನೆ ಕೀಲೀ ಕೊಟ್ಟಂಗಾತು. ಹಿಂದಿನ ಸರಕಾರಗಳೂ ಇದಕ್ಕಿಂತಾ ಜಾಸ್ತಿ ಸಾಲ ಮಾಡಿರ್ಬೋದಲ್ವಾ.
ದೇವೂ : ಏನ್ ಪ್ರಶ್ನೆ ಅಂತಾ ಕೇಳ್ದೆ ನನ್ನ ಬಂಗಾರಿ. ಸ್ವಾತಂತ್ರ್ತ ಬಂದು 67 ವರ್ಷದೊಳಗ ಒಟ್ಟು 14 ಪ್ರಧಾನಿಗಳು ಬಂದು ಹೋದರು. ಅವರೆಲ್ಲಾ ಸೇರಿ ಮಾಡಿದ ಒಟ್ಟು ಸಾಲ ಎಷ್ಟಂತೀ?
ಪಾರು : ಎಷ್ಟು..? ಬಾಳಾ ಇರಬೇಕಲ್ವಾ?
ದೇವೂ : ಕೇವಲ 55 ಲಕ್ಷ ಕೋಟಿ ರೂಪಾಯಿಗಳು.
ಪಾರು : ಅಂದರೆ ಎಂಟೇ ವರ್ಷದಲ್ಲಿ ಇದರ ಡಬಲ್ ಸಾಲಾ ಮಾಡವ್ರಾ?
ದೇವೂ : ಎಂಟು ವರ್ಷದಲ್ಲಿ ಮಾಡಿದ ಸಾಲವನ್ನ ದೇಶದಲ್ಲಿರೋರಿಗೆಲ್ಲಾ ಹಂಚಿದ್ರೆ ತಲಾ ಒಬ್ಬೊಬ್ಬರಿಗೂ 1.40 ಲಕ್ಷ ಸಾಲ ಆಗತೈತಿ. ನಿನ್ನ ತಲೀ ಮೇಲೂ ಅಷ್ಟು ಸಾಲ, ನಮ್ಮಕ್ಕಳ ತಲೀ ಮೇಲೂ ಅಷ್ಟು ಸಾಲದ ಹೊರೆ, ಅಷ್ಟ ಯಾಕೆ ಇದರ ಬಡ್ಡಿ ಕಟ್ಟೋದು ಸಹ ನಾವು ಕಟ್ಟೋ ತೆರಿಗೆ ಇಂದಾನೇ ಗೊತ್ತೇನಮ್ಮಣ್ಣಿ.
ಪಾರು : ಏ ನಾವ್ಯಾವಾಗ ತೆರಿಗೆ ಕಟ್ತೀವಿ, ಅದೆಲ್ಲಾ ಶ್ರೀಮಂತರು ವ್ಯಾಪಾರಸ್ತರು ಕಟ್ಟೋದಲ್ವಾ.
ದೇವೂ : ಭ್ರಮೆ, ಹೀಗನ್ನೋದು ಶುದ್ದ ಭ್ರಮೆ. ನೀನು ಸೋಪು, ಪೇಸ್ಟು, ಬಟ್ಟೆ ಚಪ್ಪಲಿ ಅದೂ ಇದೂ ಅಂತಾ ಖರೀದಿ ಮಾಡ್ತಿಯಲ್ಲಾ ಅವುಗಳನ್ನೆಲ್ಲಾ ಟ್ಯಾಕ್ಸ್ ಸಮೇತ ಖರೀದಿ ಮಾಡ್ತೀಯಾ. ನಮ್ಮಂತೆ ಹೀಗೆ ಪರೋಕ್ಷ ತೆರಿಗೆ ಕಟ್ಟೋವರಿಂದಲೇ ಅತೀ ಹೆಚ್ಚು ವರಮಾನ ಸರಕಾರಕ್ಕೆ ಬರೋದು. ಅದರಿಂದಲೇ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟೋದು.
ಪಾರು : ಅಯ್ಯೋ ಎಷ್ಟೊಂದು ತಿಳಕೊಂಡಿದ್ದೀಯಾ ನನ್ನೆಜಮಾನಾ. ಇಷ್ಟೊಂದು ಬುದ್ದಿ ಇರೋನು ನೀನ್ಯಾಕೆ ಸಾಲ ಮಾಡ್ಕೊಂಡು ತಲೆ ತಪ್ಪಿಸ್ಕೊಂಡು ತಿರಗ್ತಿದ್ದೀಯಾ?
ದೇವೂ : ನೋಡೇ ನಾನು ಓದಿದ್ದಕ್ಕೆ ಕೆಲಸ ಸಿಗಲಿಲ್ಲ. ಕೇಳಿದ್ರೆ ಪಕೋಡಾ ಮಾರಿ ಬದುಕು ಅಂತಾ ಇದೇ ಚೌಕೀದಾರರು ಹೇಳಿದ್ರು. ಇದ್ದ ತುಂಡ ಭೂಮಿಯಲ್ಲಿ ಬೆಳೆ ಬೆಳೆಯೋಣ ಅಂದ್ರೆ ಸಾಲ ಮಾಡಿ ಹಾಕಿದ ಬೀಜ ಗೊಬ್ಬರ ಆಳು ಕಾಳಿನ ಖರ್ಚಿನ ಹಣವೂ ದಕ್ಕಲಿಲ್ಲ, ಸಾಲ ತೀರಲಿಲ್ಲ. ನನ್ನ ಮತ್ತೇನು ಮಾಡು ಅಂತೀ, ಇವತ್ತಿಲ್ಲಾ ನಾಳೆ ಅಚ್ಚೆ ದಿನ್ ಬರುತ್ತಾ ಅಂತಾ ಕಾಯ್ತಾನೇ ಇದ್ದೀನಿ. ಅದು ಬರಲೇ ಇಲ್ಲಾ, ನಾವು ಸಾಲಗಾರರಾಗೋದು ತಪ್ಪಲೇ ಇಲ್ಲ. ಬದುಕು ಬೆಂಕಿ ಮೇಲೆ ನಿಂತಿದೆ ಅನ್ಸುತ್ತೆ ಕಣೆ ಪಾರಿ.
(ಬಾಗಿಲು ಬಡಿದ ಸದ್ದು)
ದೇವೂ : ಯಾರು ಹೋಗಿ ನೋಡು. ನಾನು ಮನೇಲಿಲ್ಲ ಅಂತಾ ಹೇಳು.
ಪಾರು : (ಬಾಗಿಲು ತೆರೆದಾಗ ಶೆಟ್ಟಿಯನ್ನು ನೋಡಿ ) ನಮ್ಮೆಜಮಾನ್ರು ಮನೇಲಿ ಇಲ್ಲಾ ಶೆಟ್ರೆ.
ಶೆಟ್ಟಿ : ಈ ನವಟಂಕಿ ಆಟ ಎಲ್ಲಾ ಬೇಡಾ ನೋಡು ಪಾರವ್ವಾ. ಮೊದಲು ನನ್ನ ಸಾಲಾ ಬಡ್ಡಿ ತೀರ್ಸೋದಕ್ಕೆ ಹೇಳು.
ಪಾರು : ಆಯ್ತು ಶೆಟ್ರೆ, ಹೇಳ್ತೀನಿ.
ಶೆಟ್ಟಿ : ಅಲೆಲೆಲೇ, ಆ ಕರ್ಟನ್ ಹಿಂದೆ ಕಳ್ಳ ಬೆಕ್ಕು ಅಡಿಕ್ಕೊಂಡು ಕೂತಿದೆ. ಲೇ ದೇವಪ್ಪಾ ಬಾರೋ ಹೊರಗೆ. ಎಲ್ಲೋ ನನ್ನ ಅಸಲು ಬಡ್ಡಿ
ದೇವೂ : ಹೋ ಏನ್ ಶೆಟ್ರೆ. ಕೊಡ್ತೇನೆ ಕೊಟ್ಟೆ ಕೊಡ್ತೇನೆ. ಕೊಟ್ಟೆ ಸಾಯ್ತೇನೆ. ಇಲ್ಲಾ ಸತ್ತಮೇಲಾದ್ರೂ ಕೊಡ್ತೇನೆ.
ಪಾರು : ಅಯ್ಯೋ ಸಾಯೋ ಮಾತು ಯಾಕ್ರಿ ಆಡ್ತೀರಾ?
ದೇವೂ : ಮತ್ತೇನು ಮಾಡಲಿ ಪಾರೂ. ನಾನು ಸತ್ರೆ ಸರಕಾರದವರು ಪರಿಹಾರ ಕೊಡ್ತಾರಲ್ವಾ. ಅದನ್ನ ಸಾಲಗಾರರಿಗೆಲ್ಲಾ ಕೊಟ್ಟು ನನ್ನ ಋಣ ತೀರಿಸಿ ಬಿಡು.
ಶೆಟ್ಟಿ : ಇದೆಲ್ಲಾ ಬೇಡಾ ನೋಡು. ಇನ್ನೊಂದು ವಾರ ಟೈಂ ಕೊಡ್ತೀನಿ ಅಷ್ಟರೊಳಗೆ ನನ್ನ ಸಾಲ ಚುಕ್ತಾ ಮಾಡಲಿಲ್ಲಾ ಅಂದ್ರೆ ಮನೆ ಸಾಮಾನೆಲ್ಲಾ ಹೊರಗೆ ಹಾಕಿ ನಿನ್ನ ಹೆಂಡ್ತಿ ಮಕ್ಕಳನ್ನ ಎಳ್ಕೊಂಡ್ ಹೋಗಿ ಜೀತಕ್ಕಿಟ್ಕೊಳ್ತೀನಿ ಹುಷಾರ್. ( ಹೋಗುವನು)
ಪಾರು : ರ್ರೀ.. ನೀವು ಸಾಯೋ ಮಾತೆಲ್ಲಾ ಮಾತಾಡ್ಬೇಡಿ. ಹೇಗಾದರೂ ಮಾಡಿ ಸಾಲ ತೀರ್ಸೋಣಂತೆ. ಸಾವಿರಾರು ಕೋಟಿ ಸಾಲ ಮಾಡಿದವ್ರೇ ಸುಖವಾಗಿ ಬದುಕ್ತಿದ್ದಾರೆ.
ದೈರ್ಯ ತಂದ್ಕೊಳ್ರಿ.
ದೇವೂ : ಹೆಂಗೆ ತೀರಸೋದು. ಬೇರೆ ದಾರಿ ಯಾವುದಿದೆ ಹೇಳು ತೀರ್ಸೊದಿಕ್ಕೆ. ನನಗೇನೂ ತೋಚ್ತಿಲ್ಲಾ. ( ತಲೆ ಮೇಲೆ ಕೈಯಿಟ್ಟು ಕುಸಿದು ಕೂಡುತ್ತಾನೆ. ಪಾರು ಸಂತೈಸುವಳು)
*******
ಟಿವಿ ವರದಿಗಾರ :
ಬ್ರೇಕಿಂಗ್ ನ್ಯೂಜ್. ಇದು ನಮ್ಮಲ್ಲೇ ಮೊದಲು.
ನೋಡಿ ವೀಕ್ಷಕರೆ, ದೇವಪ್ಪ ಮತ್ತು ಪಾರವ್ವ ಎನ್ನುವ ದಂಪತಿಗಳು ತಮ್ಮ ಇಬ್ಬರು ಮಕ್ಕಳ ಜೊತೆಗೆ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಸಿವು ಬಡತನ ಸಾಲದ ಭಾರ ಇವರ ಸಾವಿಗೆ ಕಾರಣವೆಂದು ತಿಳಿದು ಬಂದಿದೆ. ಸರಕಾರಗಳು ಲಕ್ಷಾಂತರ ಕೋಟಿ ಸಾಲ ಮಾಡಿದರೂ ಬಡವರ ಬದುಕು ಬೆಳಕಾಗಲಿಲ್ಲ.
ಏನೇನೆಲ್ಲಾ ಯೋಜನೆ ಜಾರಿ ಮಾಡಿದರೂ ದುಡಿಯುವ ಜನರಿಗೆ ತಲುಪಲೇ ಇಲ್ಲ. ಇಲ್ಲಿ ಶ್ರೀಮಂತರು ಅತೀ ಶ್ರೀಮಂತರಾಗ್ತಾನೆ ಇದ್ದಾರೆ, ಬಡವರು ರೈತರು ಕೂಲಿ ಕಾರ್ಮಿಕರು ಅಸಹಾಯಕರಾಗಿ ಸಾವಿಗೆ ಶರಣಾಗುತ್ತಲೇ ಇದ್ದಾರೆ. ಇದಕ್ಕೆ ಪರಿಹಾರ ಇಲ್ವಾ. ಬಂಡವಾಳಶಾಹಿ ಪ್ರಭುತ್ವದಲ್ಲಿ ಪ್ರಜೆಗಳಿಗೆ ನೆಮ್ಮದಿಯ ಬದುಕು ಸಿಗೋದಿಲ್ವಾ. ಇವು ಅತ್ಮಹತ್ಯೆಗಳಲ್ಲ,
ಪ್ರಭುತ್ವಗಳು ಮಾಡಿದ ಕೊಲೆಗಳು. ಈ ಕೊಲೆಗಳಿಗೆ ಯಾರು ಹೊಣೆ? ಕಲಿತವರಿಗೆ ಕೆಲಸ ಕೊಡದ ಸರಕಾರಗಳೋ, ಅನ್ನದಾತನ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡದ ಮಾರುಕಟ್ಟೆ ನೀತಿಯೋ? ಅಸಮಾನತೆ ಹೆಚ್ಚಿಸುವ ಆರ್ಥಿಕ ವ್ಯವಸ್ಥೆಯೋ? ಅಪಾರ ಭ್ರಷ್ಟತೆಯೋ? ಹೇಳಿ ಯಾರು ಇಂತಹ ಲಕ್ಷಾಂತರ ಹತ್ಯೆಗಳಿಗೆ ಜವಾಬ್ದಾರರು?
ಕ್ಯಾಮರಾಮನ್ ರಾಜೇಶ್ ಜೊತೆ ನಾನು ವಿಶ್ವರಾಜ್. ನೋಡ್ತಾ ಇರಿ ಸೃಷ್ಟಿ ಸುದ್ದಿ ವಾಹಿನಿ.
ಹಿನ್ನೆಲೆಯಲ್ಲಿ ಹಾಡು
ಎನ್ನ ತನುವಿನೊಳಗೆ ಅನುದಿನವಿದ್ದು
ಎನ್ನ ಮನಕೊಂದು ಮಾತು
ಹೇಳದೇ ಹೋದೆಯಾ ಹಂಸಾ..
- ಶಶಿಕಾಂತ ಯಡಹಳ್ಳಿ
Comments
Post a Comment