ಬೇತಾಳ ಪ್ರಶ್ನೆ (ಪ್ರಹಸನ-27)

 (ಪ್ರಹಸನ-27)

ಬೇತಾಳ ಪ್ರಶ್ನೆ   

*********************

 

( ಯಥಾ ಪ್ರಕಾರ  ಅಮವಾಸ್ಯೆಯಂದು ರಾಜಾ ವಿಕ್ರಮಾದಿತ್ಯನು ಹುಣಿಸೆ ಮರದ ಕೊಂಬೆಗೆ ನೇತಾಡುತ್ತಿದ್ದ ಹೆಣವನ್ನು ಕೆಳಕ್ಕಿಳಿಸಿದ್ದೇ ತಡ ಬೇತಾಳ ಅವನ ಹೆಗಲೇರಿ ಮಾತಾಡತೊಡಗಿತು)

 

ಬೇತಾಳ : ನಿನಗಾಗಿಯೇ ಕಾಯುತ್ತಿದ್ದೆ ರಾಜನ್. ಇಲ್ಲಿಂದಾ  ಮಸಣಕ್ಕೆ ನನ್ನ ಹೆಣ ಹೊತ್ತೊಯ್ಯಲು ಸಮಯವಿದೆ, ದಾರಿ ಸಾಗಲೆಂದು ಒಂದು ಕಥೆ ಹೇಳುತ್ತೇನೆ ಸಹನೆಯಿಂದಾ ಕೇಳುವಂತವನವಾಗು.

 

ರಾಜ : ಆಯ್ತು ಹೇಳುವಂತಾಗು.

 

ಬೇತಾಳ : ಶರತ್ತು ಗೊತ್ತಿದೆಯಲ್ಲಾ. ಯಾವುದೇ ಕಾರಣಕ್ಕೂ ನೀನು ಮೌನ ಮುರಿಯುವಂತಿಲ್ಲ, ನಡುವೆ ಮಾತಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಮತ್ತೆ ಹಾರಿ ಹೋಗಿ ಮರವ ಸೇರಿಕೊಳ್ಳುವೆ ಅರ್ಥವಾಯ್ತಾ ರಾಜಾ.

 

ರಾಜ : ಆಯ್ತು, ಗೊತ್ತಿದೆ. ನೀನು ಮುಂದುವರೆಸು.

 

ಬೇತಾಳ : ಸಾವಿರಾರು ವರ್ಷಗಳ ನಂತರದಲ್ಲಿ ಕರುನಾಡು ಎಂಬ ರಾಜ್ಯದಲ್ಲಿ ಕೋಮುವಾದಿ ಹೂಪಕ್ಷವನ್ನು ಸೋಲಿಸಿ ಕೈಪಕ್ಷವು ಸರಕಾರ ರಚಿಸಿತು. ಏನು ರಚಿಸಿತು?

 

ರಾಜ : (ಮಾತಾಡದೇ ತಲೆ ಅಲ್ಲಾಡಿಸುತ್ತಾ ಅವಸರದಲ್ಲಿ ಮುನ್ನಡೆಯುತ್ತಾನೆ.)

 

ಬೇತಾಳ : ಅದೇ ಪಕ್ಷದಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯರು ಯಾರೂ ಸಭಾಧ್ಯಕ್ಷರಾಗಲು ಒಪ್ಪದೇ ಖಾದರ್ ಎನ್ನುವ  ಅಲ್ಪಸಂಖ್ಯಾತ ಸಮುದಾಯದ ಶಾಸಕನನ್ನು ಸಭಾಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತಾರೆ. ಯಾರನ್ನು ಆಯ್ಕೆ ಮಾಡುತ್ತಾರೆ?

 

ರಾಜ : (ಮತ್ತೆ ತಲೆ ಅಲ್ಲಾಡಿಸಿ ನಡಿಗೆ ತೀವ್ರಗೊಳಿಸುತ್ತಾನೆ.)

 

ಬೇತಾಳ : ಇಂತಿಪ್ಪ ಖಾದರ್ ಸಾಹೇಬರಿಗೆ ಎಲ್ಲಾ ಹೊಸದಾಗಿ ಆಯ್ಕೆಯಾದ ಶಾಸಕರನ್ನು ಸೇರಿಸಿ ಆಡಳಿತಾತ್ಮಕ ತರಬೇತಿ ಕೊಡಿಸಬೇಕೆಂಬ ಉಮೇದು ಹೆಚ್ಚಾಗಿ ತರಬೇತಿ ದಿನವನ್ನು ಘೋಷಣೆ ಮಾಡುತ್ತಾನೆ. ಇಷ್ಟೇ ಆಗಿದ್ದರೆ ಯಾರದ್ದೂ ತಕರಾರಿರಲಿಲ್ಲ. ಆದರೆ ಹೂಪಕ್ಷದ ಸಮರ್ಥಕರಾಗಿದ್ದ ಹಿಂದುತ್ವವಾದಿ ಯೋಗ ವ್ಯಾಪಾರಿ ಶ್ರೀಶ್ರೀಶ್ರೀಗಳನ್ನ, ಜೈನ ಸಮುದಾಯದ  ಧರ್ಮಕ್ಷೇತ್ರದ ಧರ್ಮಾಧಿಕಾರಿಗಳನ್ನ  ಸಂಪನ್ಮೂಲ ವ್ಯಕ್ತಿಯಾಗಿ ಅಹ್ವಾನಿಸುತ್ತಾನೆಯಾರನ್ನು ಆಹ್ವಾನಿಸುತ್ತಾನೆ?

 

ರಾಜ : (ಅದೇ ಮೌನ, ಅದೇ ನಡಿಗೆ.)

 

ಬೇತಾಳ : ಪ್ರಗತಿಪರರು, ಹೋರಾಟಗಾರರು, ಸಾಹಿತಿಗಳು, ಬುದ್ದಿವಂತರು ಇದನ್ನು ತೀವ್ರವಾಗಿ ವಿರೋಧಿಸುತ್ತಾರೆ. ಶಾಸಕಾಂಗದ ತರಬೇತಿಯಲ್ಲಿ ಧಾರ್ಮಿಕ ವ್ಯಾಪಾರಿಗಳಿಗೇನು ಕೆಲಸವೆಂದು ಪ್ರಶ್ನಿಸುತ್ತಾರೆ. ಕೈಪಕ್ಷದವರು ನಿನ್ನ ಹಾಗೆ ಮೌನಕ್ಕೆ ಶರಣಾಗುತ್ತಾರೆ. ಹೂಪಕ್ಷದವರು ಹುರುಪಿಗೇಳುತ್ತಾರೆ. ಯಾಕೆ ಹುರುಪು?

 

ರಾಜ : ( ದಿವ್ಯ ಮೌನ,)

 

ಬೇತಾಳಯಾಕೆಂದರೆ ತಮ್ಮ ಧಾರ್ಮಿಕ ವ್ಯಾಪಾರಿಗಳು ಶಾಸಕರ ತರಬೇತಿಯಲ್ಲಿ ಧರ್ಮ ಕರ್ಮದ ಪಾಠ ಮಾಡುತ್ತಾರೆ. ಹೀಗೆ ಪಾಠದಿಂದ ಪ್ರೇರಿತರಾದ ಶಾಸಕರನ್ನು ತಮ್ಮತ್ತ ಸೆಳೆದು ಈಗಿರುವ ಸರಕಾರ ಬೀಳಿಸಿ ಆಪರೇಶನ್ ಕಮಲದ ಮೂಲಕ ಮತ್ತೆ ಹಿಂಬಾಗಿಲಿನಿಂದ ತಮ್ಮ ಪಕ್ಷದ ಸರಕಾರ ರಚಿಸಬಹುದೆಂಬ ದೂರದೃಷ್ಟಿಯಿಂದಾ ಹೂಪಕ್ಷದವರಿಗೆ ಖುಷಿಯಾಗುತ್ತದೆ. ಧರ್ಮದ ವ್ಯಾಪಾರಿಗಳನ್ನು ವಿರೋಧಿಸುವವರು ಖಾದರ್ ಸಾಹೇಬರ ನಿರ್ಣಯದ ವಿರುದ್ದ ತಿರುಗಿ ಬೀಳುತ್ತಾರೆ. ಯಾರು ತಿರುಗಿ ಬೀಳುತ್ತಾರೆ?

 

ರಾಜ : (ಉತ್ತರ ಕೊಡದೇ ಎತ್ತರದ ರಸ್ತೆ ಏರತೊಡಗುತ್ತಾನೆ.)

 

ಬೇತಾಳ : ಈಗ ನಾನು ಕೇಳುವ ಪ್ರಶ್ನೆಗಳಿಗೆ ರಾಜಾ ನೀನು ಉತ್ತರಿಸಲೇಬೇಕು. ನಿನಗೆ ಉತ್ತರ ನಿಜವಾಗಿಯೂ ಗೊತ್ತಿಲ್ಲದೇ ಹೋದರೆ ಪರವಾಗಿಲ್ಲ ಆದರೆ ಗೊತ್ತಿದ್ದೂ ಉತ್ತರಿಸದೇ ಹೋದರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ ಎಚ್ಚರ.

 

ರಾಜ : (ಅಸಹನೆಯಿಂದ ತಲೆ ಅಲ್ಲಾಡಿಸುತ್ತಾನೆ)

 

ಬೇತಾಳ : ಕೈಪಕ್ಷದ ಸಿದ್ದಾಂತಕ್ಕೆ ಬದ್ದನಾದ ಸಭಾದ್ಯಕ್ಷ ಖಾದರ್ ಸಾಹೇಬರು ಯಾಕೆ ಹೂಪಕ್ಷದ ಪರವಿರುವ ಧರ್ಮಾಂಧ ವ್ಯಾಪಾರಿಗಳನ್ನು ಶಾಸಕರ ತರಬೇತಿ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಾನೆಇದಕ್ಕೆ ಬಂದ ವಿರೋಧಗಳನ್ನು ಲೆಕ್ಕಿಸದೇ ಕೈಪಕ್ಷದವರು ಯಾಕೆ ಮೌನವಾಗಿರುತ್ತಾರೆ? ಹೇಳು ರಾಜಾ ಹೇಳು. ನಿನಗೆ ಉತ್ತರ ಗೊತ್ತಿದೆ. ಗೊತ್ತಿದ್ದೂ ಹೇಳದೇ ಹೋದರೆ ನಿನ್ನ ತಲೆ ಸಾವಿರ ಹೋಳಾಗುವುದು ನಿಶ್ಚಿತ.

 

ರಾಜ : ಇದರಲ್ಲಿ ಗೊತ್ತಿಲ್ಲದೇ ಇರುವುದು ಏನಿದೆ ಬೇತಾಳಾ. ಕೇವಲ ಖಾದರ್ ರವರ ಮೇಲೆ ಯಾಕೆ ಗೂಬೆ ಕೂರಿಸುತ್ತೀಯಾ? ಕೈಪಕ್ಷದವರ ಅಂತರಂಗದ ಅಭೀಷ್ಟೆಯೂ ಸಭಾಧ್ಯಕ್ಷರ ನಿರ್ಣಯದಲ್ಲಡಗಿದೆ. ದೇವರು ಹಾಗೂ ಧರ್ಮದ ವಿಷಯದಲ್ಲಿ ಹೂಪಕ್ಷ ಹಾಗೂ ಕೈಪಕ್ಷ ಬೇರೆ ಬೇರೆ ಅಲ್ಲವೇ ಅಲ್ಲ. ಎಲ್ಲಾ ಪಕ್ಷದವರೂ ಧರ್ಮದ ವ್ಯಾಪಾರಿಗಳ ಭಕ್ತಾದಿಗಳು ಹಾಗೂ ಪೋಷಕರೇ ಆಗಿದ್ದಾರೆ. ಧರ್ಮದ ಅಧಾರದ ಮೇಲೆ ಜನರನ್ನು ಒಡೆದಾಳುವ ಹುನ್ನಾರವನ್ನು ಹೂಪಕ್ಷ ಮಾಡುತ್ತಲೇ ಬಂದಿದೆ. ಅದೇ ಪಕ್ಷದ ಪಕ್ಷಪಾತಿ ಧರ್ಮಗುರುಗಳನ್ನು ಆಹ್ವಾನಿಸಿದರೆ ಒಂದಿಷ್ಟು ಹೂಪಕ್ಷದ ಪರವಾಗಿರುವ ಮತಗಳನ್ನು ಸೆಳೆಯಬಹುದು ಹಾಗೂ ತಮ್ಮ ಪಕ್ಷ ಹಿಂದೂ ವಿರೋಧಿ ಅಲ್ಲವೆಂದು ಸಾಬೀತು ಪಡಿಸುವುದು ಕೈಪಕ್ಷದ ಲೆಕ್ಕಾಚಾರ.

 

ಬೇತಾಳ : ಶಹಬ್ಬಾಸ್ ರಾಜಾ. ಮೆಚ್ಚಿದೆ ನಿನ್ನ ರಾಜಕೀಯ ವಿಶ್ಲೇಷಣೆಗೆ. ಮುಂದೆ ಹೇಳುವಂತವನಾಗಿ.

 

ರಾಜ : ಏನೆಂದು ಹೇಳಲಿ. ಎಲ್ಲಾ ಪಕ್ಷಗಳ ದಾರಿಯಾವುದೆಂದರೆ ಹೇಗಾದರೂ ಮಾಡಿ ಮತದಾರರನ್ನು ಮರಳುಮಾಡಿ ಮತಗಳನ್ನು ಕ್ರೂಢೀಕರಿಸುವುದು. ಹೂಪಕ್ಷದವರು ಹಿಂದುತ್ವದ ಹೆಸರಲ್ಲಿ ಮತಾಂಧತೆ ಹುಟ್ಟುಹಾಕಿ ಜನರ ಭಾವನೆ ಕೆರಳಿಸಿದರೆ, ಕೈಪಕ್ಷದವರು ಅಹಿಂದ ಹೆಸರಲ್ಲಿ ಮತಗಳ ಕ್ರೂಡೀಕರಣ ಮಾಡುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳ ಗುರಿಯೂ ಒಂದೇ ಅದು ಅಧಿಕಾರವನ್ನು ದಕ್ಕಿಸಿಕೊಳ್ಳುವುದು. ಅದಕ್ಕಾಗಿ ಕಾಲಕಾಲಕ್ಕೆ ಹತ್ತಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿ ಮತದಾರರನ್ನು ಯಾಮಾರಿಸುತ್ತಲೇ ಬಂದಿದ್ದಾರೆ.

 

ಬೇತಾಳ : ಅಷ್ಟೇನಾ? ಅಂದರೆ ಎರಡೂ ಪಕ್ಷಗಳೂ ಜಿಗಣಿಗಳಾ ಜನರ ನೆತ್ತರಿಗೆ.

 

ರಾಜ : ಅಲ್ಲಾ. ಎರಡೂ ಪಕ್ಷಗಳ ಸಿದ್ದಾಂತಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. ಕೈಪಕ್ಷ ಸಾಧ್ಯವಾದಷ್ಟೂ ಸಂವಿಧಾನದ ಚೌಕಟ್ಟಲ್ಲಿ ರಾಜಕಾರಣ ಮಾಡುತ್ತದೆ. ಆದರೆ ಹೂಪಕ್ಷವನ್ನು ಹಿನ್ನಲೆಯಲ್ಲಿ ನಿಂತು ನಿಯಂತ್ರಿಸುವ ಸಂಘ ಅಂತಾ ಒಂದಿದೆಯಲ್ಲಾ ಅದು ಅತೀ ಹೆಚ್ಚು ಅಪಾಯಕಾರಿ. ಅದಕ್ಕೆ ಸಂವಿಧಾನ ಪ್ರಜಾಪ್ರಭುತ್ವ ಎಂದರೆ ಆಗದು. ಅಸಮಾನತೆಯನ್ನು ಸಾರುವ, ಹಿಂದುತ್ವವಾದಿ ಬ್ರಾಹ್ಮಣ್ಯದ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಮನುಧರ್ಮಶಾಸ್ತ್ರದ ಅನುಷ್ಟಾನವೇ ಸಂಘದ ಮಹಾಗುರಿ. ಅದಕ್ಕಾಗಿ ಅದು ಏನು ಬೇಕಾದರೂ ಮಾಡಬಲ್ಲುದು. ಆದ್ದರಿಂದಲೇ ಸಂಘಪರಿವಾರದ ರಾಜಕೀಯ ಅಂಗವಾಗಿರುವ ಹೂಪಕ್ಷ ಜನತೆಯ ಶತ್ರು. ಜನತಂತ್ರ ಉಳಿಯಬೇಕೆಂದರೆ ಸಂಘದ ಮನುವಾದಿ ಸಿದ್ದಾಂತವನ್ನು ಶತಾಯ ಗತಾಯ ವಿರೋಧಿಸಬೇಕು ಹಾಗೂ ಅಗತ್ಯವಿಲ್ಲದಿದ್ದರೂ ಅನಿವಾರ್ಯವಾಗಿ ಕೈಪಕ್ಷವನ್ನು ಬೆಂಬಲಿಸಬೇಕಾದ ಅಸಹಾಯಕತೆ ಪ್ರಜ್ಞಾವಂತರದ್ದಾಗಿದೆ.

 

ಬೇತಾಳ : ಬಲೆ ಬಲೇ.. ಮೆಚ್ಚಿದೆ ನಿನ್ನ ಪ್ರಖರ ವಿಚಾರಗಳನ್ನು. ಆದರೆ ರಾಜಾ ಮೌನವನ್ನು ಮುರಿದು ಮಾತಾಡಿ ನನ್ನ ಮಾತನ್ನು ಮೀರಿರುವೆ. ನಾನಿನ್ನು ಹೊರಟೆ ಸಾಕಿನ್ನು ಕಾಡು ಹರಟೆ. ಕಥೆ ಕಥೆ ಕಾರಣ, ಮುದುಕಿ ಹೂರಣ, ತಿಂದ್ಯಾ ಬಿಟ್ಯಾ.. ( ಎನ್ನುತ್ತಾ ವಿಚಿತ್ರವಾದ ದ್ವನಿಯನ್ನು ಹೊರಡಿಸುತ್ತಾ ಬೇತಾಳ ಹಾರಿ ಹೋಗುತ್ತದೆ. ರಾಜ ಪೆಚ್ಚಾಗಿ ನೋಡುತ್ತಾನೆ)

 

- ಶಶಿಕಾಂತ ಯಡಹಳ್ಳಿ

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ