ಮಾರಿಕೊಂಡ ಮಾಧ್ಯಮ ದ್ರೋಹ (ಪ್ರಹಸನ-28)

 (ಪ್ರಹಸನ-28)

ಮಾರಿಕೊಂಡ ಮಾಧ್ಯಮ ದ್ರೋಹ    

*********************************************

 

(ಬೊಗಳೆ ಸುದ್ದಿ ವಾಹಿನಿಯ ಕಚೇರಿ. ಚಾನೆಲ್ ಮಾಲೀಕ ರಂಗಣ್ಣ ಮತ್ತು ಪತ್ರಕರ್ತ ನೌಕರನ ವಾದವಿವಾದ)

 

ರಂಗಣ್ಣ : ಏನ್ರಿ ನಿಮ್ಮ ಗೋಳು. ಇಡೀ ಜಗತ್ತೇ ವಿಶ್ವಗುರುಗಳನ್ನ ತಲೆ ಮೇಲಿಟ್ಟು ಮೆರೆಸ್ತಾ ಇದೆ. ಇದೆಂತಾದ್ದಿದು ನಿಮ್ಮ ಅಪಸ್ವರ.

 

ಪತ್ರಕರ್ತ : ಸರ್.. ತೋರಿಸ್ತಾ ಇರೋದು, ಮೆರಸ್ತಾ ಇರೋದು, ಹಾಡಿ ಹೊಗಳ್ತಾ ಇರೋದು ಜನರಲ್ಲಾ   ಕೇಸರಿಕೃತ ಗೋದಿ ಮಾಧ್ಯಮಗಳು ಮಾತ್ರ ಸರ್

 

ರಂಗಣ್ಣ : ನಾನ್ಸೆನ್ಸ್, ಹಾಗೆಲ್ಲಾ ಮಾಧ್ಯಮಗಳನ್ನ ಬ್ರ್ಯಾಂಡ್ ಮಾಡೋದಕ್ಕೆ ಆಗೋದಿಲ್ಲಾ ತಿಳ್ಕೊಳ್ಳಿ. ಇದೇನಿದು ನೀವು ತಂದಿರೋ ವರದಿ. ಇಂತದನ್ನೆಲ್ಲಾ ಪ್ರಸಾರ ಮಾಡಿದ್ರೆ ನನ್ನ ನ್ಯೂಜ್ ಚಾನೆಲ್ ಮುಳಗೋಯ್ತದೆ ಅಷ್ಟೇ.

 

ಪತ್ರಕರ್ತ : ಇರೋದನ್ನ ತಂದಿದ್ದೀನಿ ಸರ್. ಈಗ ನೋಡಿ ಅಮೇರಿಕಾದಂತಾ ದೊಡ್ಡಣ್ಣ ದೇಶ ವಿಶ್ವಗುರುಗಳನ್ನ ಸ್ಟೇಟ್ ಗೆಸ್ಟ್ ಆಗಿ ಇನ್ವೈಟ್ ಮಾಡಿದ್ದಾರೆ ಅಲ್ವಾ ಸಾರ್. ಅದರ ಹಿಂದೆ ಅಮೇರಿಕಾದ ಹಿತಾಸಕ್ತಿ ಇಲ್ವಾ ಸರ್. ಇದು ಏಷ್ಯಾ ಖಂಡದಲ್ಲಿ ಚೀನಾದ ಪ್ರಭಾವ ನಿಯಂತ್ರಣ ಮಾಡೋದಕ್ಕೆ ಭಾರತವನ್ನ ಎತ್ತಿ ಕಟ್ಟುವ ಶಡ್ಯಂತ್ರ ಅಲ್ವಾ ಸರ್. ದೇಶದ ಸರಕು ಮತ್ತು ಶಸ್ತ್ರಾಸ್ತ್ರಗಳ ಮಾರಾಟಕ್ಕೆ ರೀತಿ ಹೊಗಳಿ ಹೊನ್ನ ಶೂಲಕ್ಕೇರಿಸ್ತಿರೋದು ಅಂತಾ ನಿಮಗೆ ಅನ್ನಿಸ್ತಾ ಇಲ್ವಾ ಸರ್..

 

ರಂಗಣ್ಣ : ತೋ ಥೋ.. ಇರಬಹುದ್ರಿ. ಹಾಗಂತಾ ನಾವು ಪ್ರವಾಹದ ವಿರುದ್ಧ ಈಜೋಕಾಗುತ್ತೇನ್ರಿ. ನಮ್ಮ ದೇಶದ ಪ್ರಧಾನಿಗೆ ವಿಶ್ವಮಾನ್ಯತೆ ಸಿಕ್ಕಿದ್ದಕ್ಕೆ ಹೆಮ್ಮೆ ಪಡಬೇಕಲ್ವೇನ್ರಿ ಹೆಮ್ಮೆ.

 

ಪತ್ರಕರ್ತ : ನೀವು ಪಡಬೇಕಾದದ್ದೇ ಸರ್. ಆದರೆ.. ದೀಪದ ಕೆಳಗಿನ ಕತ್ತಲನ್ನೂ ನಾವು ಮಾಧ್ಯಮದವರು ಬೆಳಕಿಗೆ ತರಬೇಕಲ್ವಾ ಸರ್. ಅದು ನಮ್ಮ ಕರ್ತವ್ಯಾನೂ ಅಲ್ವಾ.

 

ರಂಗಣ್ಣ : ಕತ್ತಲ ಮನೆ ಕತೆ ಹಾಳಾಯ್ತು. ಜಗಮಗಿಸೋ ಬೆಳಕಲ್ಲಿ ನಮ್ಮನೆನೂ ಬೆಳಗಿಸಿಕೊಳ್ಳೋದೇ ಮಾಡರ್ನ್ ಜರ್ನಲಿಸಂ ಅನ್ನೋದು ಕಲ್ಕೊಳ್ಳಿ. ಜರ್ನಲಿಸಂ ಓದಿ ಆದರ್ಶಗಳನ್ನ ತಲೇಲಿ ತುಂಬ್ಕೊಂಡು ಬರ್ತೀರಾ ಬಂದಿಲ್ಲಿ ನಮ್ಮ ತಲೆ ತಿಂತೀರಾ

 

ಪತ್ರಕರ್ತ : ಅದು ಹಾಗಲ್ಲ ಸರ್.. ಇಲ್ಲಿ ನಮ್ಮದೇ ದೇಶದಲ್ಲಿ ಮಣಿಪುರ ಹೊತ್ತಿ ಉರಿದು ಬೂದಿಯಾಗ್ತಿದೆ. ರಕ್ತಪಾತವಾಗಿ ನೂರಾರು ಹೆಣಗಳು ಬಿದ್ದಿವೆ. ಲಕ್ಷಾಂತರ ಜನ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇಂತಾ ಸೂತಕದ ಸಮಯದಲ್ಲಿ ಅಮೇರಿಕದಲ್ಲಿ ನಮ್ಮ ಪ್ರಧಾನಿಗಳ ಶೋಕಿ ಟೂರು, ಬಿಟ್ಟಿ ಬಿಲ್ಡಪ್ಪು, ಟೆಲಿಪ್ರಾಂಪ್ಟರ್ ಭಾಷಣಗಳೆಲ್ಲಾ ಬೇಕಿತ್ತಾ ಅಂತಾ ನಮ್ಮ ಚಾನೆಲ್ನಲ್ಲಿ ಪ್ರಶ್ನೆ ಮಾಡಬಹುದಲ್ವಾ ಸರ್.

 

ರಂಗಣ್ಣ : ಶ್ಏಯ್ ಯಾರಲ್ಲಿ, ಅಮೇರಿಕದ ಸಂಸತ್ತಿನಲ್ಲಿ ಪ್ರಧಾನಿಗಳು ಮಾಡಿದ ಭಾಷಣವನ್ನ ಇವತ್ತು ದಿನವಿಡಿ ರೀಪೀಟ್ ಮಾಡಿ ಟೆಲಿಕಾಸ್ಟ್ ಮಾಡ್ರಿ.‌ 

ಆಲ್ ರೈಟ್ ಮುಂದಕ್ಕೋಗೋಣಾ. ಏನಂದ್ರಿ.. ಬೇಕಿತ್ತು. ವಿಶ್ವಗುರುವಾಗಬೇಕೆಂದರೆ ನಮ್ಮನೇಲಿ ಸೂತಕ ಇದ್ರೂ ಬಿಟ್ಟು ಹೋಗಲೇಬೇಕು. ಇದೆಲ್ಲಾ ಅಂತರಾಷ್ಟ್ರೀಯ ರಾಜತಂತ್ರ. ನಿಮ್ಮಂತಾ ಎಲ್ಬೋರ್ಡ ಎಳಸು ಪತ್ರಕರ್ತರಿಗೆ ಅರ್ಥವಾಗೋದಿಲ್ಲಾ ಸುಮ್ಮನಿರಿ.

 

ಪತ್ರಕರ್ತ : ಇರಲಿ ಸರ್. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಆಕ್ರಮಣ ನಡೀತಿದೆ ಅಂತಾ ಆರೋಪಿಸಿ ಎಂಟು ಜಾಗತಿಕ ಪತ್ರಕರ್ತರ ಸಂಘಟನೆಗಳು ವಾಶಿಂಗ್ಟನ್ ಪೋಸ್ಟ್ ಲ್ಲಿ ಜಾಹೀರಾತನ್ನೇ ನೀಡಿವೆ ಸರ್. ಅದರಲ್ಲಿ ಭಾರತದ ಪತ್ರಕರ್ತರು ದೈಹಿಕ ಆಕ್ರಮಣ, ಕಿರುಕುಳ, ಸುಳ್ಳು ಮೊಕದ್ದಮೆಗಳನ್ನು ಎದುರಿಸಿ ಸಂಕಷ್ಟದಲ್ಲಿದ್ದಾರೆ ಅಂತಾ ಹೇಳಲಾಗಿದೆ. ಅದು ಸತ್ಯವೂ ಆಗಿದೆ. ಸುದ್ದಿಯನ್ನು ನಮ್ಮ ನ್ಯೂಜ್ ಚಾನೆಲ್ನಲ್ಲಿ ಯಾಕೆ ಸರ್  ಪ್ರಸಾರ ಮಾಡಬಾರದು.

 

ರಂಗಣ್ಣ : ಏಕೆ ಮಾಡಬೇಕು? ನಾವೂ ಕಿರುಕುಳಕ್ಕೆ ಒಳಗಾಗಬೇಕಾ? ನಮ್ಮ ಪತ್ರಕರ್ತರೂ ಆಕ್ರಮಣಕ್ಕೆ ಒಳಗಾಗಬೇಕಾ? ಅಮೇರಿಕಾದ ಪತ್ರಕರ್ತರ ಸಂಘಟನೆಗಳು ಬೈಡನ್ ಆಡಳಿತಕ್ಕೆ "ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸಂ" ಅಂತಾ ಕರೆ ಕೊಟ್ರೆ ನಾವ್ಯಾಕ್ರಿ ತಲೆ ಕೆಡಿಸಿಕೊಳ್ಳಬೇಕು. ದೇಶದಲ್ಲಿರೋ ಬಹುತೇಕ ಮಾಧ್ಯಮಗಳು ಯಾರ ಹಿಡಿತದಲ್ಲಿವೆ ಎಂಬುದು ಗೊತ್ತಿದೆ ತಾನೆ. ತಲೆ ಗಟ್ಟಿ ಇದೆ ಅಂತಾ ಬಂಡೆಗೆ ಯಾಕ್ರಿ ಡಿಜ್ಜಿ ಹೊಡೆದು ದೇಶದ್ರೋಹಿ ಅನ್ನಿಸಿಕೊಳ್ಳೋದು.

 

ಪತ್ರಕರ್ತ : ಸರ್, ಮಾಮಾಗಳು ಅಂದ್ರೆ ಮಾರಿಕೊಂಡ ಮಾಧ್ಯಮಗಳು, ಗೋದಿ ಮೀಡಿಯಾಗಳು, ಎಂಜಲು ಪತ್ರಕರ್ತರು.. ಅಂತೆಲ್ಲಾ ನಮ್ಮನ್ನ ಜನ ಗೇಲಿ ಮಾಡ್ತಿದ್ದಾರೆ ಸರ್. ಸತ್ಯ ಸಂಗತಿಗಳನ್ನೂ ತೋರಿಸಿ ಆರೋಪ ಮಾಡುವವರ ಬಾಯಿ ಮುಚ್ಚಿಸಬೇಕಲ್ವಾ ಸರ್.

 

ರಂಗಣ್ಣ : ಆರೋಪ ಮಾಡ್ಕೊಳ್ಳೋರು ಮಾಡ್ಕೊಳ್ಲಿ ಬಿಡ್ರಿ. ಅಂತಾರೆ, ನಂಗೆನೇ ಚಿಪ್ ರಂಗಣ್ಣಾ, ಬಕೆಟ್ ರಂಗಾ, ಸುಳ್ಳುಬುರಕಾ, ಬೊಗಳೇ ದಾಸಯ್ಯಾ ಅಂತಾ ಅಂತಾರೆ. ಹೂ ಕೇರ್ಸ್, ಮೊದಲು ನಾನು ಬದುಕಬೇಕು, ನನ್ನ ಚಾನೆಲ್ ಬೆಳೀಬೇಕು, ಅದರ ಕಡೆ ಗಮನ ಕೊಡ್ರಿ ಆಮೇಲೆ ಸತ್ಯ, ಆದರ್ಶ ಅಂತಾ ಟೈಂಪಾಸ್ ಮಾಡೋಕೆ ಮಾತಾಡಿದರಾಯ್ತು..

 

ಪತ್ರಕರ್ತ : ಅದು ಹಾಗಲ್ಲಾ ಸರ್. ಕಳೆದ 9 ವರ್ಷದಿಂದ ಒಂದೇ ಒಂದು ಸಲವೂ ಪತ್ರಿಕಾಗೋಷ್ಟಿ ಕರೆದು ಪತ್ರಕರ್ತರೊಂದಿಗೆ ಮಾತಾಡದ ಪ್ರಧಾನಿಗಳು ಈಗ ಅಮೇರಿಕಾದ ಪತ್ರಿಕಾಗೋಷ್ಟಿಯಲ್ಲಿ ಮಾಡಿದ್ದಾರಲ್ಲಾ ಇದು ನಮ್ಮ ದೇಶದ ಪತ್ರಕರ್ತರಿಗೆ ಮಾಡಿದ ಅವಮಾನ ಅಲ್ವಾ

 

ರಂಗಣ್ಣ : ಮಾಡ್ಕೊಳ್ಳಲಿ  ಬಿಡ್ರಿ, ಅಮೇರಿಕಾದಲ್ಲಾದ್ರೂ ಪ್ರೆಸ್ ಮೀಟ್ ಮಾಡ್ಲಿ ಇಲ್ಲಾ ಅಟ್ಲಾಂಟಿಕಾದಲ್ಲಾದರೂ ಮಾಡ್ಲಿ, ಅದು ಅವರ ಇಷ್ಟಾ ಕಷ್ಟಾ. ಅಂತಹ ಧರ್ಮಸೂಕ್ಷ್ಮಗಳನ್ನ ಪತ್ರಕರ್ತರಾದ ನಾವು ಕೆದುಕೋದಕ್ಕೆ ಹೋಗಬಾರದು.

 

ಪತ್ರಕರ್ತ : ಅದು ಹೋಗಲಿ, ಅಮೇರಿಕದ ಕಾಂಗ್ರೆಸ್ ಉದ್ದೇಶಿಸಿ ಪ್ರಧಾನಿ ಮಾಡುವ ಭಾಷಣವನ್ನು ಇಬ್ಬರು ಅಮೇರಿಕದ ಸಂಸದರೇ ಬಹಿಷ್ಕರಿಸಿದ್ದಾರಲ್ಲಾ ಅದನ್ನಾದರೂ ಸುದ್ದಿ ಮಾಡಬಹುದಲ್ವಾ ಸರ್.

 

ರಂಗಣ್ಣ : ಜಗತ್ತೇ ಉಘೆ ಉಘೇ ಅನ್ನೋವಾಗ ಯಾರೋ ಒಂದಿಬ್ಬರು ವಿರೋಧಿಸಿದ್ರೆ ಅಂತದನ್ನು ನ್ಯೂಜ್ ಮಾಡೋಕೆ ಆಗುತ್ತೇನ್ರಿ. ಯಾರ್ರಿ ನಿಮಗೆ ಜರ್ನಲಿಸಂ ಹೇಳಿಕೊಟ್ಟಿದ್ದು.

 

ಪತ್ರಕರ್ತ : ನೀವಂತೂ ಅಲ್ಲಾ ಬಿಡಿ . ಅಲ್ಲಾ ಸಾರ್ ಒಂದಿಬ್ಬರಲ್ಲಾ ಒಟ್ಟು 75 ಜನ ಅಮೇರಿಕಾದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಸೆನೆಟರುಗಳು ಹಾಗೂ ಸಂಸದರು ಭಾರತದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯ ಕುರಿತು ವಿಶ್ವಗುರುವನ್ನು ವಿಚಾರಿಸಲು ಬೈಡನ್ ರವರಿಗೆ ಆಗ್ರಹಿಸಿದ್ದಾರಲ್ವಾ ಸರ್ ಇದನ್ನಾದರೂ ಪ್ರಸಾರ ಮಾಡಬಹುದಲ್ವಾ? ಅದು ಪತ್ರಿಕೋದ್ಯಮಿಯಾದವರ ಕರ್ತವ್ಯವೂ ಅಲ್ವಾ?

 

ರಂಗಣ್ಣ : ಇರಬಹುದು, ಆದರೂ ನಾನು ಇಂತದ್ದನ್ನೆಲ್ಲಾ ನನ್ನ ಚಾನಲ್ನಲ್ಲಿ ಪ್ರಸಾರ ಮಾಡೋದಿಲ್ಲ. ಒಂದು ಮೇನಿಯಾದ ಸುನಾಮಿ ಸೃಷ್ಟಿ ಆಗಿರುವಾಗ ಅದರ ವಿರುದ್ದ ಸುದ್ದಿ ಮಾಡುವುದು ಅಪ್ರಬುದ್ದತೆ ಅನ್ನೋದು ನೆನಪಿರಲಿ. ನೀವು ಜರ್ನಲಿಸಂನಲ್ಲಿ ಕಲಿತ ಪಾಠಗಳನ್ನೆಲ್ಲಾ ಮರೆತು ಇಲ್ಲಿ ಹೊಸದಾಗಿ ಪಾಠ ಕಲಿತರೆ ಉದ್ದಾರ ಆಗ್ತೀರಿ.

 

ಪತ್ರಕರ್ತ : ಏನ್ ಸರ್, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಹರಣ ಆಗ್ತಿರೋದರ ಕುರಿತು ಅಮೇರಿಕದ ಮಾಜಿ ಅಧ್ಯಕ್ಷ ಒಬಾಮರವರೇ ತಕರಾರು ಎತ್ತಿದ್ದಾರಲ್ಲಾ ಸರ್ ಇದನ್ನಾದರೂ ನಮ್ಮ ಚಾನೆಲ್ ನಲ್ಲಿ ಬ್ರೇಕಿಂಗ್ ನ್ಯೂಜ್ ಮಾಡಿ ತೋರಿಸಬೇಕಲ್ವಾ ಸಾರ್..

 

ರಂಗಣ್ಣ : ಮಾಜಿಗಳು ಹೇಳಿದ್ದಕ್ಕೆ ಎಲ್ರಿ ಇದೆ ಮಹತ್ವ. ( ಚೀಟಿಯಲ್ಲಿ ಜೋರಾಗಿ ಹೇಳುತ್ತಾ ಬರೆಯುತ್ತಾನೆ)  "ಪ್ರಧಾನಿಗಳ ವಿರುದ್ದ ಒಬಾಮಾರವರು ಹೇಳಿದ್ದು ಕೇಳಿ ಆಘಾತವಾಗಿದೆ. ಭಾರತದ ಮುಸ್ಲಿಂ ಬಗ್ಗೆ ಓಬಾಮ ಹೀಗೆ ಹೇಳಬಾರದಿತ್ತು. ವಿರೋಧ ಪಕ್ಷಗಳು ಸಂಘಟಿತ ಅಪಪ್ರಚಾರ ಮಾಡುತ್ತಿವೆ. ನಾವು ಇದನ್ನು ವಿರೋಧಿಸುತ್ತೇವೆ

 

ಪತ್ರಕರ್ತ : ಇದು ನಿಮ್ಮ ಹೇಳಿಕೆಯಾ ಸರ್.

 

ರಂಗಣ್ಣ : ಚೇ.. ನಂದಲ್ಲರೀ ಕೇಂದ್ರ ಸಚಿವೆ ನಿರ್ಮಲಮ್ಮನವರ ಪತ್ರಿಕಾಗೋಷ್ಟಿಯ ಹೇಳಿಕೆ. ಯಾರಲ್ಲಿನಿರ್ಮಲಮ್ಮನವರ ಹೇಳಿಕೆಯನ್ನು ಆಗಾಗ ಬ್ರೇಕಿಂಗ್ ನ್ಯೂಜ್ ಮಾಡಿ ಪ್ರಸಾರ ಮಾಡಿ.

 

ಪತ್ರಕರ್ತ : ಓಬಾಮಾ ಹೇಳಿದ್ದರಲ್ಲಿ ತಪ್ಪೇನಿದೆ ಸರ್. ಇಲ್ಲಿ ಹಿಜಾಬು ಹಲಾಲು ಆಜಾನು ಮತಾಂತರ, ಗೋ ಹತ್ಯಾ ನಿಷೇಧ, ಏಕರೂಪದ ನಾಗರೀಕ ಕಾನೂನು, ಎನ್ ಆರ್ ಸಿ, ಸಿಎಎ ಅಂತಾ ನೂರೆಂಟು ಬಲೆಗಳಲ್ಲಿ ಮುಸ್ಲಿಂರನ್ನು ಕಟ್ಟಿಹಾಕಿ ಕೋಮುದ್ವೇಷದ ವಾತಾವರಣ ಸೃಷ್ಟಿ ಮಾಡಿದ್ದು ಸತ್ಯ ಅಲ್ವಾ ಸರ್.

 

ರಂಗಣ್ಣ : ಇರಬಹುದು, ಸತ್ಯಾನೇ ಇರಬಹುದು. ಆದರೆ ನಮ್ಮ ದೇಶದ ಆಂತರಿಕ ವಿಚಾರ ಮಾತಾಡಲು ಓಬಾಮಾ ಯಾರು? ವಿಶ್ವಗುರುಗಳ ಮೇಲೆ ಹೀಗೆಲ್ಲಾ ಆರೋಪ ಮಾಡಿದರೆ ನಾವು ಸುಮ್ಮನಿರಬೇಕಾ? ಸಾಧ್ಯವೇ ಇಲ್ಲ.

 

ಪತ್ರಕರ್ತ : ಸತ್ಯ ಯಾರು ಹೇಳಿದ್ರೂ ಅದು ಸತ್ಯವೇ ಅಲ್ವಾ ಸರ್.

 

ರಂಗಣ್ಣ : ಅದಕ್ಕೆ ನಿಮ್ಮಂತವರನ್ನ ಅನುಭವ ಇಲ್ಲದ ಮೂರ್ಖರು ಅನ್ನೋದು.   'ಸತ್ಯ ಅಂತಾ ಸತ್ಯವೇ ಅಣೆ ಪ್ರಮಾಣ ಮಾಡಿ ಹೇಳುತ್ತಿದ್ದಾಗ ಸುಳ್ಳು ಊರ ತುಂಬಾ ಸುತ್ತಿ ಸುಳ್ಳೇ ಸತ್ಯ ಎನ್ನುವ ಹಾಗೆ ಡಂಗೂರ ಹೊಡೀತಂತೆ'. ಸತ್ಯಾನೇ ಹೇಳಬೇಕು ಅಂದ್ರೆ ಮಾಧ್ಯಮ ಎನ್ನುವ ಸುಳ್ಳಿನ ಪ್ರಪಂಚಕ್ಕೆ ಯಾಕ್ರೀ ಬರ್ತೀರಾ? ಹೋಗಿ ವಾಟ್ಸಾಪಲ್ಲೋ ಪೇಸ್ಬುಕ್ಕಲ್ಲೋ ನಿಮ್ಮ ಸತ್ಯ ಬರ್ಕೊಂಡು ಸಾಯ್ರಿ ಯಾರು ಬೇಡಾ ಅಂತಾರೆ. ನಾನ್ಸೆನ್ಸ್ ಗಳನ್ನ ತಂದು.

 

ಪತ್ರಕರ್ತ : ಕ್ಷಮಿಸು ರಂಗಣ್ಣಾ, ಸಾರಿ ಚಿಪ್ ರಂಗಣ್ಣಾ, ಸೋ ಸಾರಿ ಸುಳ್ಳು ಪ್ರಚಾರಕ ಬೊಗಳೇ ರಂಗಾ.. 

 

ರಂಗಣ್ಣ : (ಆಘಾತಗೊಂಡು ) ಏಯ್, ಏನ್ ಮಾತು ಅಂತಾ ಆಡ್ತೀಯಾ? ನಾನು ನಿನಗೆ ಕೆಲಸ ಕೊಟ್ಟ ಮಾಲೀಕ ಅನ್ನೋದು ಅರಿವಿರಲಿ. ನಿನ್ನಂತಾ ಸಾವಿರ ಪತ್ರಕರ್ತರು ನನ್ನ ಕಚೇರಿ ಮುಂದೆ ಸಾಲುಗಟ್ಟಿ ನಿಲ್ತಾರೆ.

 

ಪತ್ರಕರ್ತ : ಅವರು ಬರೋದು ಹೊಟ್ಟೆಪಾಡಿಗಾಗಿ. ಸತ್ಯವನ್ನೇ ನಂಬಿ ಬದುಕುವ ನನ್ನಂತವರು ಯಾರೂ ನಿನ್ನ ಸುಳ್ಳೋತ್ಪಾದಕ ಕಾರ್ಖಾನೆಗೆ ಬರೋದಿಲ್ಲಾ ತಿಳ್ಕೋ ರಂಗಾಛಿ, ನಿನ್ನ ಕೆಲಸಕ್ಕೆ ಬೆಂಕಿ ಬಿತ್ತು. ಥೂ, ಮಾರಿಕೊಂಡ ಮಾಧ್ಯಮದ ಮಾಲೀಕ ನೀನು, ನಿನ್ನ ಪಾಪ ಕೂಪದಲ್ಲಿ ನನಗೇನು ಕೆಲಸ.

 

ರಂಗಣ್ಣ : (ಕೋಪದಿಂದ) ನಂಬಿಕೆದ್ರೋಹಿ ನೀನು, ಅನ್ನ ತಿಂದ ಮನೆಗೆ ದ್ರೋಹ ಮಾಡುವವ, ದೇಶದ್ರೋಹಿ.. ಯಾರಲ್ಲಿ, ವಿದ್ರೋಹಿಯನ್ನು ಹೊರಗೆ ಹಾಕಿ.

 

ಪತ್ರಕರ್ತ: ನೀನೇನೋ ನನ್ನ ಹೊರಗೆ ಹಾಕೋದು, ನಾನೇ ರಾಜೀನಾಮೆ ಬಿಸಾಕಿ ಹೋಗ್ತೇನೆ. ಎಂಜಲು ಪತ್ರಕರ್ತನಾಗಿ ಆತ್ಮಸಾಕ್ಷಿಯನ್ನು ಮಾರಿಕೊಂಡು ಸಂಘಪರಿವಾರದ ಗುಲಾಮನಾದ ನಿನ್ನ ಬಳಿ ನಾನು ಗುಲಾಮನಾಗಿ ಊಳಿಗಮಾಡಿಕೊಂಡು ಇರೋದಕ್ಕಿಂತಾ ಕಥೆ ಕವಿತೆ ಬರ್ಕೊಂಡು ಬಾಳ್ತೇನೆ

 

ರಂಗಣ್ಣ : (ಕಣ್ಣು ಕೆಂಪಗೆ ಮಾಡಿಕೊಂಡು, ಪರಪರ ಎಂದು ದಾಡಿ ಕೆರೆದುಕೊಳ್ಳುತ್ತಾ) ಮೊದಲು ತೊಲಗು ಇಲ್ಲಿಂದಾ.

 

ಪತ್ರಕರ್ತ : ಹೋಗ್ತೇನೆ, ಹೊಗೋಕ್ಮುಂಚೆ ಒಂದು ಮಾತು ಹೇಳ್ತೇನೆ ಕೇಳುವಂತವನಾಗು ರಂಗಾ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಪತ್ರಿಕೋದ್ಯಮ ಒಂದು ಪವಿತ್ರ ಮಾಧ್ಯಮ. ವೃತ್ತಿ ಪತ್ರಕರ್ತರಿಗೆ ತಾಯಿಯಂತೆ, ಒಂದು ಜನವಿರೋಧಿ ಸಿದ್ದಾಂತಕ್ಕೆ, ಸರ್ವಾಧಿಕಾರಿ ಆಡಳಿತಕ್ಕೆ ತಾಯಿಯ ತಲೆ ಹಿಡಿಯುವ ನಿಮ್ಮಂತವರಿಂದಲೇ ಪತ್ರಿಕಾರಂಗ ಅಪವಿತ್ರವಾಗಿ ಜನರ ನಂಬಿಕೆ ಕಳೆದುಕೊಂಡು ತಿರಸ್ಕಾರಕ್ಕೆ ಒಳಗಾಗಿದೆ. ನಿಮ್ಮಂತವರು ಪತ್ರಕರ್ತರಲ್ಲಾ, ಪತ್ರಕರ್ತರ ವೇಷದಲ್ಲಿರುವ ದಲ್ಲಾಳಿಗಳು, ಪ್ರಭುತ್ವದ ಗುಲಾಮರು ನಿಮಗೆ ಧಿಕ್ಕಾರವಿರಲಿ ಥೂ.. ( ಎಂದು ಉಗಿದು ರಾಜೀನಾಮೆ ಪತ್ರ ಬಿಸಾಕಿ ಕೋಪದಿಂದ ಹೊರಗೆ ಹೋಗುತ್ತಾನೆ)

 

ರಂಗಣ್ಣ : (ಗಟಗಟನೆ ನೀರು ಕುಡಿದು ಖುರ್ಚಿಯಲ್ಲಿ ಕುಸಿದು ಕೂತು ಸುಧಾರಿಸಿಕೊಂಡು, ಮುಖಕ್ಕಂಟಿದ ಉಗುಳನ್ನು ಒರೆಸಿಕೊಂಡು ಹುಸಿ ನಗೆ ತಂದುಕೊಳ್ಳುತ್ತಾ)

ಆಲ್ ರೈಟ್ ಮುಂದಕ್ಕೊಗೋಣಾ..

 

- ಶಶಿಕಾಂತ ಯಡಹಳ್ಳಿ

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ