ನಿಷ್ಟೆ ಇಲ್ಲದ ಅನಿಷ್ಟರು (ಪ್ರಹಸನ-29)

 (ಪ್ರಹಸನ-29)

ನಿಷ್ಟೆ ಇಲ್ಲದ ಅನಿಷ್ಟರು  

******************************

 

ದೃಶ್ಯ 1

 

ಪತ್ರಕರ್ತ : ಸ್ವಾಮಿ ಹೂಪಕ್ಷದ ರಾಜ್ಯಾಧ್ಯಕ್ಷರಾದ ಪಿಟೀಲು ಸಾರ್. 'ಕಾಸು ಕೊಡ್ತೀನಿ ಅಂದ್ರೂ ನಿಮ್ಮ ಕೇಂದ್ರ ಸರಕಾರ ಅಕ್ಕಿ ಕೊಡ್ತಿಲ್ಲಾ' ಅಂತಾ ಕೈಪಕ್ಷದವರು ಹೇಳ್ತಿದ್ದಾರೆ ನೀವೇನಂತೀರಾ?

 

ಪಿಟೀಲು : ಹೇಳ್ತಾರೆ, ಹೇಳದೇ ಏನ್ ಮಾಡ್ತಾರೆ, ಕೇಳಿದ ತಕ್ಷಣ ಅಕ್ಕಿ ಕೊಡೋದಕ್ಕೆ ಕೇಂದ್ರಕ್ಕೆ ಕರ್ನಾಟಕ ಒಂದೇ ಅಲ್ಲಾ, ಇನ್ನೂ ಅನೇಕ ರಾಜ್ಯಗಳಿವೆ. ಹೇಗ್ರಿ ಕೊಡೋಕಾಗಿತ್ತೆ.

 

ಪತ್ರಕರ್ತ : ಸರ್ ನೀವು ಕರ್ನಾಟಕದಿಂದ ಆಯ್ಕೆಯಾದ ಸಂಸದರಲ್ಲವೇ, ನಿಮ್ಮ ನಿಷ್ಟೆ ಬದ್ದತೆ ರಾಜ್ಯದ ಪರವಾಗಿರಬೇಕಲ್ಲವಾ? ನಿಮ್ಮನ್ನು ಓಟು ಹಾಕಿ ಲೋಕಸಭೆಗೆ ಆರಿಸಿ ಕಳಿಸಿದ ಜನರಿಗೆ ಸ್ಪಂದಿಸಬೇಕಲ್ವಾ.

 

ಪಿಟೀಲು : ಹೌದುರೀ. ಆದರೆ ನಾನು ಹೂಪಕ್ಷದ ರಾಜ್ಯಾದ್ಯಕ್ಷ. ನಮ್ಮದೇ ಪಕ್ಷದ ಕೇಂದ್ರ ಸರಕಾರವನ್ನ ಸಮರ್ಥಿಸಿಕೊಳ್ಳೋದು ನನ್ನ ಕರ್ತವ್ಯ. ಜನರಿಗೇನು ಐದು ವರ್ಷಕ್ಕೊಮ್ಮೆ ಓಟ್ ಹಾಕಿ ಮನೇಲಿರ್ತಾರೆ. ನಮಗೆ ಅಧಿಕಾರ ಅಂತಸ್ತು ಕೊಡೋದು ನಮ್ಮ ಪಕ್ಷ. ಸೋ ನಮ್ಮ ನಿಷ್ಟೆ ಏನಿದ್ದರೂ ಅದು ಪಕ್ಷಕ್ಕೇ ಹೊರತು ರಾಜ್ಯಕ್ಕೂ ಅಲ್ಲಾ, ಜನತೆಗೂ ಅಲ್ಲಾ. ತಿಳ್ಕೊಳ್ಳಿ, ಮೊದಲು ಇಲ್ಲಿಂದ ಕಳಚ್ಕೊಳ್ಳಿ.

 

  ದೃಶ್ಯ 2

 

ಪತ್ರಕರ್ತ : ಸಾರ್.. ಲೂಟಿ ರವಿ ಸಾರ್.. ನಿಮ್ಮ ಕೇಂದ್ರ ಸರಕಾರ ತನ್ನ ಗೋದಾಮಿನಲ್ಲಿ ಅಕ್ಕಿ ಸ್ಟಾಕ್ ಇದ್ರೂ ರಾಜ್ಯದ ಬಡಜನತೆಗೆ ಹಂಚಲು ಕೊಡ್ತಿಲ್ಲಾ, ಮುಕ್ತ ಮಾರುಕಟ್ಟೆಯಲ್ಲಿ ಮಾರತಾ ಇದೆ ಅಂತಾ ಕೈಪಕ್ಷದವರು ಅಳ್ತಾ ಇದ್ದಾರಲ್ಲಾ ಸಾರ್.. 

 

ಲೂಟಿ ರವಿ : ಕೇಂದ್ರ ಸರಕಾರ ಅಂದ್ರೆ ಏನಂತಾ ತಿಳ್ಕೊಂಡಿದ್ದೀರಿ. ಇವ್ರು ಕೇಳಿ ಕೇಳಿದ್ದೆಲ್ಲಾ ಕೊಡೋಕೆ ಕೇಂದ್ರ ಸರಕಾರ ಏನ್ ಇವ್ರ ಅತ್ತೆ ಮನೆ ಅಂದ್ಕೊಂಡಿದ್ದಾರಾ

 

ಪತ್ರಕರ್ತ : ಅದು ಯಾರ ಅತ್ತೆ ಮನೇನೂ ಅಲ್ಲಾ ನಿಮ್ಮ ಮಾವನ ಮನೇನೂ ಅಲ್ಲಾ ಬಿಡಿ ಸರ್. ನೀವು ದೇಶದ ಹೂಪಕ್ಷದ ಸ್ಟೇಟ್ ಜನರಲ್ ಸೆಕ್ರಟರಿ ಆಗಿದ್ದು ಕರ್ನಾಟಕವನ್ನು ಪ್ರತಿನಿಧಿಸ್ತಾ ಇದ್ದೀರಿ ಅಲ್ಲವಾ? ನಾಡಿನ ಜನರ ಹಸಿವನ್ನು ನೀಗಿಸೋದಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಅಕ್ಕಿ ಕೊಡಿಸಬಹುದಲ್ವಾ ಸಾರ್.

 

ಲೂಟಿ ರವಿ  : ಅದೆಂಗಾಗುತ್ತೆ. ಹಾಗೇನಾದ್ರೂ ಮಾಡಿದ್ರೆ ಕೈಪಕ್ಷದ ಗ್ಯಾರಂಟಿ ಯೋಜನೆ ಯಶಸ್ವಿ ಆಗುತ್ತೆ. ಕ್ರೆಡಿಟ್  ಪಕ್ಷಕ್ಕೆ ಸಿಗುತ್ತೆ. ಮುಂದೆ ಲೋಕಸಭಾ ಎಲೆಕ್ಷನಲ್ಲಿ ಹೂ ಪಕ್ಷ  ರಾಜ್ಯದಲ್ಲಿ ಸೊಣ್ಣೆ ಸುತ್ತುತ್ತೆ.   ಕೈ ಪಕ್ಷದ ಯೋಜನೆಗಳಿಗೆ ತಡೆ ಒಡ್ಡಿ ಯಶಸ್ಬಿಯಾಗದಂತೆ ನೋಡಿಕೊಳ್ಳೋದರಲ್ಲೇ ನಮ್ಮ ಪಕ್ಷದ ಗೆಲುವಿದೆ.

 

ಪತ್ರಕರ್ತ : ಅಂದ್ರೆ ಕರ್ನಾಟಕದ ಬಡಜನರು ಹಸಿವಿನಿಂದ ಬಳಲಿದರೂ ನಿಮಗೆ ನಿಮ್ಮ ರಾಜಕೀಯ ಮಹತ್ವಾಂಕಾಕ್ಷೆ ಹಾಗೂ ದ್ವೇಷವೇ ಮುಖ್ಯ ಅಂದಂಗಾಯ್ತು. ನಿಮ್ಮ ಪಕ್ಷಕ್ಕೆ ಓಟು ಹಾಕಿದವರಲ್ಲಿ ಬಡವರೂ ಇದ್ದಾರಲ್ಲಾ ಸರ್, ಅವರ ಮೇಲಾದರೂ ಕರುಣೆ ಇಟ್ಟು ಕಾಸು ತಗೊಂಡಾದ್ರೂ ಕೇಂದ್ರದ ಗೋದಾಮಿನಿಂದ ಅಕ್ಕಿ ಕೊಡಿಸಿ ಸಾರ್.

 

ಲೂಟಿ ರವಿ : ಅದೆಂಗ್ರಿ ಆಗುತ್ತೆ. ಇದೇ ಜನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನ ಹೀನಾಯವಾಗಿ ಸೋಲ್ಸಿದ್ದಾರೆ. ನಮ್ಮ ಪಕ್ಷಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಇಂತಾ ಜನರ ಹಸಿವು ನಾವು ನೀಗಿಸಬೇಕಾ. ಅಸಾಧ್ಯ

 

ಪತ್ರಕರ್ತ : ಅಗತ್ಯ ಇರುವಷ್ಟು ಅಕ್ಕಿ ಎಲ್ಲೂ ಸಿಗ್ತಿಲ್ಲಾ. ಈಗ ರಾಜ್ಯ ಸರಕಾರ ಏನು ಮಾಡಬೇಕು? ಅತೀ ಬಡವರ ಹಸಿವನ್ನು ಹೇಗೆ ನೀಗಿಸಬೇಕು ಹೇಳಿ ಸರ್.

 

ಪತ್ರಕರ್ತ : ಅಕ್ಕೀನೇ ಕೊಡಬೇಕು ಅಂತೇನಿದೆ. ಅದರ ಬದಲು ಬಡವರ ಅಕೌಂಟಿಗೆ ಹಣ ಹಾಕಲಿ. ಅವರು ತಮಗೇನು ಬೇಕೋ ಅದನ್ನು ಕೊಂಡಕೊಳ್ಳಲಿ, ಯಾರು ಬೇಡಾ ಅಂತಾರೆ.. ಹೋಗ್ರಿ ಹೋಗಿ ಬೇರೆ ಕೆಲ್ಸಾ ನೋಡ್ಕೊಳ್ಳಿ.

 

ದೃಶ್ಯ 3

 

ಪತ್ರಕರ್ತ : ಅಕ್ಕಾ ಸೋಬಕ್ಕನವರಿಗೆ ನಮಸ್ಕಾರ. ಬಡವರಿಗೆ ಅಕ್ಕಿ ಕೊಡುವಲ್ಲಿ ಕೇಂದ್ರ ಸರಕಾರ ದ್ವೇಷದ ರಾಜಕೀಯ ಮಾಡ್ತಿದೆ ಅಂತಾ ಕೈಪಕ್ಷದವರು ಬೀದಿ ಬೀದಿಯಲ್ಲಿ ಬಾಯಿ ಬಡ್ಕೋತಿದ್ದಾರೆ. ನೀವೇನಂತೀರಿ

 

ಸೋಬಕ್ಕ : ಇವ್ರೆಲ್ಲಾ ಏನ್ ತಿಳ್ಕೊಂಡಿದ್ದಾರೆ? ಗ್ಯಾರಂಟಿ ಘೋಷಣೆ ಮಾಡೋವಾಗ ಇವರ ಬುದ್ದಿ ಎಲ್ಲಿ ಹೋಗಿತ್ತು? ಕೇಂದ್ರ ಸರಕಾರ ರಾಜಕೀಯ ಮಾಡ್ತಿದೆ ಅಂತಾ ಹೇಳೋಕೆ ಇವರಿಗೆ ನಾಚಿಕೆ ಆಗೋಲ್ವಾ?

 

ಪತ್ರಕರ್ತ : ಹಾಗೇನೆ, "ಸ್ವಿಸ್ ಬ್ಯಾಂಕಿನಲ್ಲಿರೋ ಕಪ್ಪು ಹಣ ತಂದು ಪ್ರತಿಯೊಬ್ಬ ದೇಶವಾಸಿಗಳ ಅಕೌಂಟಿಗೆ 15 ಲಕ್ಷ ಹಣ ಹಾಕ್ತೇವೆ ಅಂತಾ ನಿಮ್ಮ ಹೂಪಕ್ಷದ ಅಧಿದೇವರು ಹೇಳಿದ್ರು, ಹಾಗೆ ಘೋಷಣೆ ಮಾಡೋವಾಗ ಅವರ ಬುದ್ದಿ ಎಲ್ಲಿ ಹೋಗಿತ್ತು? ಯಾಕೆ ಕಪ್ಪು ಹಣ ತಂದು ಹಂಚಲಿಲ್ಲಾ?" ಅಂತಾ ನಾನು ಕೇಳ್ತಿಲ್ಲಾ ಮೇಡಂ ಕೈಪಕ್ಷದವರು ಕೇಳ್ತಿದ್ದಾರೆ

 

ಸೋಬಕ್ಕ : ಮಾತು ಬಿಡ್ರಿ, ಈಗ ಅಕ್ಕಿ ಮಾತು ಮಾತಾಡ್ರಿ.

 

ಪತ್ರಕರ್ತ : ಅಕ್ಕಾ ನಿಮ್ಮನ್ನ ಕರ್ನಾಟಕದ ಜನರು ಮತ ಹಾಕಿ ಸಂಸತ್ತಿಗೆ ಕಳಿಸಿದ್ದಾರಲ್ಲಾ, ಬಡಜನರಿಗೋಸ್ಕರನಾದ್ರೂ ನಿಮ್ಮ ಅಧಿದೇವರಿಗೆ ಹೇಳಿ ಕೇಂದ್ರ ಸರಕಾರದಿಂದ ಕಾಸು ತಗೊಂಡು ಅಕ್ಕಿ ಕೊಡೋದಕ್ಕೆ ಹೇಳಬಹುದಲ್ವಾ ಸೋಬಕ್ಕಾ

 

ಸೋಬಕ್ಕ : ಅದೆಲ್ಲಾ ಆಗೋದಿಲ್ಲ. ನಮಗೆ ನಮ್ಮ ಪಕ್ಷ ಮುಖ್ಯ. ಬೇರೆ ಪಕ್ಷದವರು ಕ್ರೆಡಿಟ್ ತಗೊಳ್ಳೋಕೆ ನಾವು ಬಿಟ್ಟಬಿಡ್ತೀವಾ. ನಮಗೂ ಬುದ್ದಿ ಇದೆ. ಮುಂದಕ್ಕೋಗ್ರಿ.

 

ದೃಶ್ಯ 4

 

ಪತ್ರಕರ್ತ : ಸಾರ್ ಗ್ರಾಮಸಿಂಹ ಸರ್. ಅಕ್ಕಿ ಸರ್ ಅಕ್ಕಿ ಕೊಡ್ಸಿ. ಕೇಂದ್ರ ಸರಕಾರದಲ್ಲಿ ನೀವು ರಾಜ್ಯದ ಪ್ರತಿನಿಧಿ ಸಂಸದರಲ್ವಾ. ನೀವಾದರೂ ಅಕ್ಕಿ ಕೊಡಿಸಿ ನಿಮ್ಮನ್ನಾರಿಸಿ ಕಳಿಸಿದ ಜನರ ಋಣ ತೀರಿಸಿ ಸಾರ್.

 

ಗ್ರಾಮಸಿಂಹ : ಪ್ರೀ ಪ್ರೀ ಪ್ರೀ.. ಯಾರನ್ನ ಕೇಳಿ ಪ್ರೀ ಅಂದ್ರು, ಕೊಡ್ಲಿ ತಾಕತ್ತಿದ್ರೆ. ಅನ್ನರಾಮಯ್ಯನವರು ದಮ್ಮು ತಾಕತ್ತು ತೋರಸ್ಲಿ ಈಗ. ವಿಶ್ವಗುರುಗಳನ್ನ ಟೀಕಿಸೋಕೆ ಇವರಿಗೇನಿದೆ ಯೋಗ್ಯತೆ? ಯೋಗ್ಯತೆ ಇದ್ದರೆ ಅಕ್ಕಿ ಕೊಡ್ಲಿ ಗೊತ್ತಾಗುತ್ತೆ

 

ಪತ್ರಕರ್ತ : ಅವರ ಯೋಗ್ಯತೆ ಅತ್ಲಾಗಿರ್ಲಿ ಸರ್. ನೀವು ಕರುನಾಡ ಜನರಿಂದ ಆಯ್ಕೆಯಾದ ಸಂಸದರು. ನಿಮ್ಮ ದಮ್ಮು ತಾಕತ್ತು ತೋರಿಸಿ ಕನ್ನಡದ ಬಡಜನತೆಗೆ ಕೇಂದ್ರದ ಅಕ್ಕಿ ಭಾಗ್ಯ ಕರುಣಿಸಿ ಸರ್.

 

ಗ್ರಾಮಸಿಂಹ : ಅದೆಲ್ಲಾ ಆಗಾಕಿಲ್ಲ. ನುಡಿದಂತೆ ನಡೆಯದೇ ಕೈಪಕ್ಷದ ಹೆಸರು ಹಾಳಾಗಬೇಕು. ಅವರ ಪ್ರೀ ಯೋಜನೆಗಳೆಲ್ಲಾ ಫೇಲಾಗ್ಬೇಕು. ಮುಂದಿನ ಚುನಾವಣೆಯಲ್ಲಿ ನಾನೇ ಗೆಲ್ಬೇಕು ಅಷ್ಟೇ

 

ಪತ್ರಕರ್ತ : ಬಡಜನರು ಹಸಿವೆಯಿಂದ ಸತ್ತರೂ ನಿಮಗೆ ಏನೂ ಅನ್ನಿಸೋದಿಲ್ವಾ ಸಾರ್.

 

ಗ್ರಾಮಸಿಂಹ : ಹಣೆಬರಕ್ಕೆ ಹೊಣೆಯಾರು? ಈಗ ನೋಡಿ ನಮ್ಮ ಪಕ್ಷದ ನಾಯಕರೇ ಬೇರೆ ಪಕ್ಷದವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೂಪಕ್ಷಕ್ಕೆ ಮಣ್ಣು ಮುಕ್ಕಿಸಿದ್ರು. ಏನ್ ಮಾಡೋಕಾಗುತ್ತೆ? ಹೋಗ್ಲಿ ಬಿಡ್ರಿ. ಏನೇ ಆದ್ರೂ ನಾವು ಅಕ್ಕಿ ಕೊಡೋದಿಲ್ಲಾ, ಗ್ಯಾರಂಟಿ ಯೋಜನೆ ಗೆಲ್ಲೋದಿಕ್ಕೆ ಬಿಡೋದಿಲ್ಲಾ. ಸಾಕು ಮುಂದಕ್ಕೋಗಿ.

 

ದೃಶ್ಯ 5

 

ಪತ್ರಕರ್ತ : ಬ್ರೇಕಿಂಗ್ ನ್ಯೂಜ್. ಅಕ್ಕಿ ಬದಲಾಗಿ ರೊಕ್ಕಾ ಕೊಡಲು ಕೈಪಕ್ಷದ ಸರಕಾರ ನಿರ್ಧಾರ.

 

ಹೂಪಕ್ಷ : ಅರೆ ಅದೆಂಗಾಗುತ್ತೆ. ಪ್ರೀ ಅಕ್ಕಿ ಕೊಡ್ತೇನೆ ಅಂತಾ ಹೇಳಿದ್ದಾರೆ ಕೊಡ್ಬೇಕು ಅಷ್ಟೇ. ಇದು ವಚನ ಭ್ರಷ್ಟ ಸರಕಾರ. ನುಡಿದಂತೆ ನಡೆಯದ ಸರಕಾರ ಸರಕಾರಕ್ಕೆ ಧಿಕ್ಕಾರ

 

ಪತ್ರಕರ್ತ : ಅರೆ ರೊಕ್ಕಾ ಕೊಡ್ತೀವಿ ಅಂದ್ರೂ ಕೇಂದ್ರದಿಂದ ಅಕ್ಕಿ ಕೊಡಿಸ್ತಿಲ್ಲಾ. ಗೋದಾಮಿನಲ್ಲಿರೋ ಅಕ್ಕೀನಾ  ವ್ಯಾಪಾರಿಗಳಿಗೆ ಮಾರಾಟ ಮಾಡ್ತೀರೇ ಹೊರತು ರಾಜ್ಯಕ್ಕೆ ಮಾರಾಟ ಮಾಡ್ತಿಲ್ಲಾ. ರಾಜ್ಯದ ಎಲ್ಲಾ ಬಡವರಿಗೂ ಕೊಡೋವಷ್ಟು ಅಕ್ಕಿ ಕೇಂದ್ರದ ಗೋದಾಮು ಹೊರತುಪಡಿಸಿ ದೇಶದಲ್ಲೇ ಎಲ್ಲೂ ಸಿಗ್ತಿಲ್ಲಾ. ಮತ್ತೇನು ಮಾಡಬೇಕು. ಅದಕ್ಕೆ ಅಕ್ಕಿ ಬದಲಾಗಿ ಸರಕಾರ ರೊಕ್ಕಾ ಕೊಡ್ತಿದೆ, ಅದಕ್ಯಾಕೆ ನಿಮ್ಮ ತಕರಾರು ?

 

ಹೂಪಕ್ಷ : ಅದೆಲ್ಲಾ ನಮಗೆ ಗೊತ್ತಿಲ್ಲಾ. ಅಕ್ಕಿ ಕೊಡ್ತೇವೆ ಅಂದಿದ್ದಾರೆ ಕೊಡಬೇಕು ಅಷ್ಟೇ. ಕೇಂದ್ರ ಕೊಡುವ 5 ಕೆಜಿ ಜೊತೆಗೆ ರಾಜ್ಯ ಸರಕಾರ ಹತ್ತು ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳು ಕೊಡಬೇಕು ಅಂದ್ರೆ ಕೊಡಬೇಕು. ಇದರಲ್ಲಿ ಒಂದೇ ಒಂದು ಗ್ರಾಂ ಅಕ್ಕಿ ಕಡಿಮೆ ಆದ್ರೂ ನಾವು ಸುಮ್ಮನಿರೋದಿಲ್ಲವಿಧಾನ ಸಭೆಯ ಒಳಗೆ ಹೊರಗೆ ಹೋರಾಟ, ಉಗ್ರ ಹೋರಾಟ ಮಾಡ್ತೀವಿಧಿಕ್ಕಾರಾ ಧಿಕ್ಕಾರ, ವಚನಭ್ರಷ್ಟ ಸರಕಾರಕ್ಕೆ ಧಿಕ್ಕಾರ.  

 

ಪತ್ರಕರ್ತ : ನೋಡಿದ್ರಲ್ಲಾ ವೀಕ್ಷಕರೆ ನೀವು ಮತ ಹಾಕಿ ಆರಿಸಿ ಕಳಿಸಿದವರ ಬಂಡವಾಳಾ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡ್ತಾ ಹಸಿದ ಒಡಲ ಬೆಂಕಿಯಲ್ಲಿ ತಮ್ಮ ಮತದ ಬೇಳೆ ಬೇಯಿಸಿಕೊಳ್ಳಲು ನೋಡ್ತಿದ್ದಾರೆ. ಸರಕಾರ ಯಾವುದೇ ಇರಲಿ, ಯಾರೇ ಜನಪರ ಯೋಜನೆ ಘೋಷಣೆ ಮಾಡಲಿ ಪ್ರಯೋಜನ ಆಗುವುದು ನಾಡಿನ ಜನರಿಗೇ ತಾನೆ. ರಾಜ್ಯದ ಜನರಿಂದ ಆಯ್ಕೆಯಾಗಿ ಸಂಸದರಾದವರಿಗಾದರೂ ಜನರ ಹಸಿವೆಗೆ ಸ್ಪಂದಿಸಿ ಅವರ ಋಣ ತೀರಿಸಬೇಕು ಎನ್ನುವ ಕನಿಷ್ಟ ಕರ್ತವ್ಯ ಪ್ರಜ್ಞೆಯೂ ಇಲ್ಲದೇ ಹೋಯಿತೆ. ಇಂತಹ ಜೀವವಿರೋಧಿಗಳನ್ನು ಕನ್ನಡಿಗರು ಕ್ಷಮಿಸಬೇಕಾ? ಜನವಿರೋಧಿ ನಾಯಕರಿಗೆ ಮತ್ತೆ ಮತ ಹಾಕಿ ಸಂಸತ್ತಿಗೆ ಕಳಿಸಬೇಕಾ? ಅಂತಿಮ ತೀರ್ಮಾನ ಮಹಾಜನರದ್ದು. ಅಲ್ಲಿವರೆಗೂ ಅಕ್ಕಿ ಕದನ ಮುಂದುವರೆಯುತ್ತದೆ. ತಪ್ಪದೇ ವೀಕ್ಷಿಸಿ ಸೃಷ್ಟಿ ಸುದ್ದಿ ವಾಹಿನಿ, ಸದಾ ಜನಪರ ದ್ವನಿ.

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ