ಸಂಬಂಧ ಅನ್ನೋದು ದೊಡ್ದು ಕಣಾ ( ಪ್ರಹಸನ-31)
( ಪ್ರಹಸನ-31)
ಸಂಬಂಧ ಅನ್ನೋದು ದೊಡ್ದು ಕಣಾ
**********************************************
(ನ್ಯಾಯಾಲಯದ ವಿಚಾರಣಾ ಹಾಲ್. ನ್ಯಾಯಾಧೀಶರು ಆಗಮಿಸುತ್ತಾರೆ.
ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಾರೆ.
ನ್ಯಾಯಾಧೀಶರು ನಮಸ್ಕರಿಸಿ ಕೂಡುತ್ತಾ..)
ಜಜ್ : ಇವತ್ತಿನ ವಿಚಾರಣೆ ಶುರುವಾಗಲಿ.
ಸರಕಾರಿ ವಕೀಲ : ಮಹಾಸ್ವಾಮಿ ಈ ಜಗತ್ತಿನಲ್ಲಿ ಜೀವಂತ ದೇವರು ಅಂದರೆ ತಾಯಿ ತಂದೆಯರು. ಇಲ್ಲಿ ಕಟಕಟೆಯಲ್ಲಿ ನಿಂತಿದ್ದಾನಲ್ಲ ಈ ಶ್ರವಣ ಎನ್ನುವ ಹೆಸರಿನ ವ್ಯಕ್ತಿಯು ತನ್ನ ವಯೋವೃದ್ದ ಹೆತ್ತವರನ್ನು ನೋಡಿಕೊಳ್ಳಲಾಗದೆ ವೃದ್ದಾಶ್ರಮಕ್ಕೆ ಬಿಟ್ಟು ಬಂದಿದ್ದಾನೆಂಬ ಎಂಬ ಆರೋಪವನ್ನು ಎದುರಿಸುತ್ತಿದ್ದಾನೆ. ಇದು ಘನಘೋರ ಕ್ರೌರ್ಯ. ಮಾನವೀಯತೆಗೆ ಮೇಲೆ ಮಾಡಿದ ಅಪಚಾರ. ಈ ಅಪರಾಧಕ್ಕೆ ಕಠಿಣ ದಂಡನೆ ಅಗಲೇಬೇಕಿದೆ.
ಜಜ್ : ನಿನ್ನ ಪರವಾಗಿ ವಾದಿಸಲು ವಕೀಲರು ಬಂದಿಲ್ಲವೇ.
ಶ್ರವಣ : ಇಲ್ಲಾ ಸ್ವಾಮಿ. ನಾನೇ ನನ್ನ ವಾದ ಮಂಡಿಸುವೆ.
ವಕೀಲ : ಇದರಲ್ಲಿ ವಾದ ಮಂಡಿಸೋದೇನಿದೆ.
ಹೆತ್ತವರನ್ನು ತಕ್ಕಡಿಯಲ್ಲಿಟ್ಟು ಹೊತ್ತುಕೊಂಡು ಹೋಗಿ ತೀರ್ಥಕ್ಷೇತ್ರ ದರ್ಶನ ಮಾಡಿಸಿದ ಆ ಶ್ರವಣಕುಮಾರನ ಹೆಸರನ್ನು ಈ ವ್ಯಕ್ತಿಗೆ ಇಡಲಾಗಿದೆ ಮಹಾಸ್ವಾಮಿ. ಅದರೆ ಈತ ಮಾಡಿದ್ದೇನು. ಹೆತ್ತವರನ್ನು ಕತ್ತಲಿಗೆ ದೂಡುವುದು ಅಂದರೇನು? ಈ ವೃದ್ದರ ಶಾಪ ತಟ್ಟದೇ ಬಿಟ್ಟೀತೆ.
ಜಜ್ : ಅವರಿಗೂ ಮಾತಾಡಲು ಅವಕಾಶ ಕೊಡಿ ವಕೀಲರೆ.
ವಕೀಲ : ಹೆತ್ತವರ ಹೊಟ್ಟೆ ಉರಿಸುವ ಇಂತವರನ್ನು ನೋಡಿದರೆ ನನ್ನ ಮೈ ಉರಿಯುತ್ತದೆ ಯುವರ್ ಹಾನರ್.
ಜಜ್ : ನಿಮ್ಮ ಕೋಪ ಕಡಿಮೆಯಾಗಿದ್ದರೆ ಆರೋಪಿಗೂ ಮಾತಾಡಲು ಅವಕಾಶ ಕೊಡಿ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಭಾವನೆಗಳು ನಿಯಂತ್ರಣದಲ್ಲಿರಲಿ.
ಮಿಸ್ಟರ್ ಶ್ರವಣ್ ಈಗ ನಿಮ್ಮ ವಾದ ಮಂಡಿಸಬಹುದು.
ಶ್ರವಣ : ಮಹಾಸ್ವಾಮಿ ನನಗೆ ಜೀವಕೊಟ್ಟ ತಾಯಿಯವರನ್ನು ಮೊದಲು ಪ್ರಶ್ನಿಸಲು ಬಯಸುವೆ. ಅವಕಾಶ ಮಾಡಿ ಕೊಡಿ. ( ಜಜ್ ಸನ್ನೆ ಮೂಲಕ ಸಮ್ಮತಿಸುತ್ತಾರೆ)
ಕೇಸ್ ವರ್ಕರ್ : ಮಹಾದೇವಮ್ಮಾ, ಮಹಾದೇವಮ್ಮಾ..
ವಕೀಲ : ಇದರಲ್ಲಿ ವಿಚಾರಣೆ ಮಾಡುವಂತಹುದೇನಿದೆ ಸ್ವಾಮಿ.
ಜಜ್ : ಮೊದಲು ಅವರಿಗೆ ಪ್ರಶ್ನಿಸಲು ಅವಕಾಶ ಕೊಡಿ. ಆಮೇಲೆ ನೀವು ಮಾತಾಡಿ.
ಶ್ರವಣ : ಅಮ್ಮಾ ನಾನು ನಿಮಗೆ ಕೆಲವು ಪ್ರಶ್ನೆ ಕೇಳುವೆ. ಸತ್ಯವನ್ನೇ ಹೇಳಿ.
ಅಮ್ಮ : ಆಯ್ತು, ಈ ನೊಂದಿರುವ ಜೀವಕ್ಕೆ ಅದೇನು ಕೇಳ್ತಿಯೋ ಕೇಳು.
ಶ್ರವಣ : ಅಮ್ಮಾ ನಾನು ಚಿಕ್ಕವನಿದ್ದಾಗ ಮನೆಯಲ್ಲಿ ನನ್ನನ್ನು ನೋಡಿಕೊಳ್ಳಲೆಂದು ಕೆಲಸದಾಳು ಇಟ್ಟಿದ್ದೀರಲ್ಲಾ ಅವಳ ಹೆಸರೇನು.
ಅಮ್ಮ : ದಾನಮ್ಮ ಅಂತಾ.
ಶ್ರವಣ : ಹಾಂ ನೆನಪಿಗೆ ಬಂತು. ಅವಳ ಕೈಗೆ ಟ್ರಜರಿಯ ಕೀಲಿಕೈಯನ್ನು ಯಾವಾಗಲಾದರೂ ಕೊಟ್ಟಿದ್ದೀರಾ?
ವಕೀಲ : ಇರ್ರೆಲೆವಂಟ್ ಕ್ವಶ್ಚನ್. ಇವನ ಪ್ರಶ್ನೆಗೂ ಈ ಕೇಸಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಮಹಾಸ್ವಾಮಿ.
ಶ್ರವಣ : ಇದೆ ಸ್ವಾಮಿ ಸಂಬಂಧ ಇದೆ. ಹೇಳಿಯಮ್ಮಾ ಕೊಡ್ತಿದ್ರಾ.
ಅಮ್ಮ : ಇಲ್ಲಾ ನಾನೇ ಭದ್ರವಾಗಿ ನನ್ನ ಹತ್ರಾ ಇಟ್ಕೊಳ್ತಿದ್ದೆ.
ಶ್ರವಣ : ಯಾಕೆ ಕೊಡ್ತಿರಲಿಲ್ಲ.
ಅಮ್ಮ : ಯಾಕೆಂದರೆ ಟ್ರಜರಿಯಲ್ಲಿ ಒಂದುಷ್ಟು ಬೆಲೆಯುಳ್ಳ ಸೀರೆ ಆಭರಣಗಳು ಇದ್ದವು.
ಶ್ರವಣ : ಎಲ್ಲಿ ದಾನಮ್ಮ ಕದ್ದು ಬಿಡ್ತಾಳೋ ಅನ್ನೋ ಭಯ ನಿಮಗೆ. ಬೆಲೆಬಾಳುವ ವಸ್ತುಗಳ ಮೇಲೆ ಅಷ್ಟೊಂದು ಪ್ರೀತಿ ಇತ್ತು ಅಲ್ಲವಾ?
ಅಮ್ಮ : ಹೌದು..
ಶ್ರವಣ : ನಿಮ್ಮ ಪರ್ಸು ಇಲ್ಲವೇ ಎಟಿಎಂ ಕಾರ್ಡ್ ಗಳನ್ನ ಯಾವತ್ತಾದರೂ ದಾನಮ್ಮನಿಗೆ ಕೊಟ್ಟಿದ್ರಾ. ಅಥವಾ ಅವಳ ಕಣ್ಣಿಗೆ ಕಾಣುವಂತೆ ಇಡ್ತಾ ಇದ್ರಾ?
ವಕೀಲ : ಆಬ್ಜೆಕ್ಷನ್ ಆಬ್ಜೆಕ್ಷನ್ ಯುವರ್ ಹಾನರ್
ಜಜ್ : ಕೇಳಲಿ ಬಿಡ್ರಿ. ಸ್ವಲ್ಪ ಹೊತ್ತು ಸುಮ್ಮನೇ ಇರಿ. ಮಹದೇವಮ್ಮಾ ನೀವು ಉತ್ತರಿಸಿ.
ಅಮ್ಮ : ಯಾವತ್ತೂ ಕೊಟ್ಟಿಲ್ಲಾ ಸ್ವಾಮಿ. ಅದರಲ್ಲಿರೋ ಹಣವನ್ನ ಲಪಟಾಯಿಸುತ್ತಾಳೆ ಅಂತಾ ಆತಂಕವಿತ್ತು.
ಶ್ರವಣ : ಅಂದರೆ ಎಲ್ಲಿ ನಿಮ್ಮ ಬೆಲೆಬಾಳುವ ವಸ್ತು ವಡವೆ ಹಣವನ್ನು ದಾನಮ್ಮ ಕದ್ದುಕೊಂಡು ಹೋಗುತ್ತಾಳೋ ಎಂಬ ಭಯದಲ್ಲಿ ಅವುಗಳ ರಕ್ಷಣೆ ಮಾಡ್ತಾ ಇದ್ರಿ ಹೌದಲ್ವಾ ಅಮ್ಮಾ.
ಅಮ್ಮ : ಹೌದು. ಅದು ಬಹಳ ಮುಖ್ಯವಾಗಿತ್ತು. ಅವುಗಳೆಲ್ಲಾ ನಾವು ಕಷ್ಟ ಪಟ್ಟು ಸಂಪಾದಿಸಿದ್ದಾಗಿತ್ರು.
ಶ್ರವಣ : ಹಾಗಾದರೆ ಬೆಳಿಗ್ಗೆಯಿಂದಾ ಸಂಜೆವರೆಗೂ ನನ್ನನ್ನು ಅಂದರೆ ಪುಟ್ಟ ಮಗುವನ್ನು ಆ ದಾನಮ್ಮನ ಕೈಗೆ ಒಪ್ಪಿಸಿ ಕೆಲಸಕ್ಕೆ ಹೋಗ್ತಿದ್ದೆಯಲ್ಲಮ್ಮಾ, ನಾನು ಆ ನಿನ್ನ ವಸ್ತು ವಡವೆಯಷ್ಟೂ ಬೆಲೆ ಇಲ್ಲದವನಾಗಿದ್ದೇನಾ?
ನೀ ಕಷ್ಟ ಪಟ್ಟು ಹೆತ್ತ ಮಗುವನ್ನು ರಕ್ಷಿಸ ಬೇಕಾದ್ದು ನಿನ್ನ ಕರ್ತವ್ಯ ಆಗಿತ್ತಲ್ಲವೇನಮ್ಮಾ. ಅಮ್ಮಾ ಅಮ್ಮಾ ಅಂತಾ ನಾನು ನಿನಗಾಗಿ ಅತ್ತು ಕರೆದು ಹಂಬಲಿಸುತ್ತಿದ್ದಾಗ ನೀನೇ ಜೊತೆಗೆ ಇರುತ್ತಿದ್ದಿರಲಿಲ್ಲವಲ್ಲಮ್ಮಾ. ತಾಯಿ ದೇವರ ಕರುಣೆ ಆಗ ಎಲ್ಲಿ ಹೋಗಿತ್ತಮ್ಮಾ. ಹೇಳಮ್ಮಾ ಏನೂ ಅರಿಯದ ಕಂದಮ್ಮನಾದ ನನಗೆ ಏನೇನು ಬೆಲೆ ಇದ್ದಿರಲಿಲ್ಲವೇನಮ್ಮಾ.
ಅಮ್ಮ : ಅದು ಅದು (ಎನ್ನುತ್ತಾ ಕಣ್ಣಲ್ಲಿ ನೀರು)
ವಕೀಲ : ಅದು ಅನಿವಾರ್ಯವಾಗಿತ್ತು.ನಿನ್ನ ತಾಯಿಗೆ ಹೊರಗೆ ಹೋಗಿ ದುಡಿದು ತರುವ ಅಗತ್ಯತೆ ಇತ್ತು. ಮಗುವನ್ನು ನೋಡಿಕೊಳ್ಳಲು ಆಗುತ್ತಿರಲಿಲ್ಲ. ಕೆಲಸದಾಕೆಯ ಕೈಗೆ ಒಪ್ಪಿಸಿ ಹೋಗಬೇಕಾಗಿತ್ತು. ಇವರೊಬ್ಬರೇ ಅಲ್ಲಾ ಅನೇಕ ದುಡಿಯುವ ತಾಯಂದಿರು ಅದನ್ನೇ ಮಾಡೋದು. ತಾಯಿ ದೇವರು ಅನ್ನೋದನ್ನ ಮರೆತು ಕೂಸಿದ್ದಾಗಿನ ಕಥೆ ಕಟ್ಟಿ ನಿನ್ನ ತಪ್ಪಿಗೆ ಸಮರ್ಥನೆ ಕೊಡುವುದೇ ತಪ್ಪು.
ಶ್ರವಣ : ನನಗೂ ಈಗ ಕೆಲಸಕ್ಕೆ ಹೋಗಲೇ ಬೇಕಾದ ಅವಶ್ಯಕತೆ ಇದೆ ಸರ್. ನಾನೂ ಬದುಕಬೇಕಾಗಿದೆ. ಹೆತ್ತವರನ್ನು ಸದಾ ಜೊತೆಯಲಿದ್ದು ನೋಡಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ಇವರನ್ನು ನಾನು ಬೀದಿಪಾಲು ಮಾಡದೇ ವೃದ್ದಾಶ್ರಮದಲ್ಲಿ ಸೇಫಾಗಿ ಇರಲಿ ಎಂದು ಬಿಟ್ಟಿರೋದು. ಸಂಪಾದನೆಗಾಗಿ ನಾನು ಮಾಡಿದ್ದು ತಪ್ಪು ಎನ್ನುವುದಾದರೆ,
ಅದೇ ಸಂಪಾದನೆಗಾಗಿ ಪುಟ್ಟ ಮಗುವಾಗಿದ್ದ ನನ್ನನ್ನು ಕೆಲಸದವಳ ಕೈಗೆ ಒಪ್ಪಿಸಿದ್ದೂ ತಪ್ಪಲ್ಲವೇ. ಏನು ಬೇಕು ಬೇಡವೆಂದು ಬಾಯಿಬಿಟ್ಟು ಕೇಳಲಾಗದ ಅಸಹಾಯಕ ಕೂಸನ್ನು ಸಂಬಂಧವೇ ಇಲ್ಲದ ಕೆಲಸದವಳ ಪಾಲನೆಗೆ ಬಿಟ್ಟಿದ್ದು ತಪ್ಪಲ್ಲವೇ.
ವಕೀಲ : ತಾಯಿ ದೇವರು ಅನ್ನೋದನ್ನ ಮರೀಬಾರದು.
ಶ್ರವಣ : ನಿಜ ಆದರೆ ಮಕ್ಕಳೂ ಸಹ ದೇವರು ಅಂತಾ ಹೇಳೋದನ್ನ ನೀವೂ ಮರೀಬಾರ್ದು ಅಲ್ಲವೇ.?
ವಕೀಲ : ಅವರು ಕೆಲಸಕ್ಕೆ ಹೋಗದೇ ಇದ್ದಿದ್ದರೆ ನಿನ್ನ ಖರ್ಚಿಗೆ ಹಣ ಎಲ್ಲಿಂದಾ ಬರ್ತಿತ್ತು?
ಶ್ರವಣ : ನಾನೀಗ ಕೆಲಸಕ್ಕೆ ಹೋಗದೇ ಇದ್ದರೆ ಅವರ ವೃದ್ದಾಶ್ರಮಕ್ಕೆ ಪ್ರತಿ ತಿಂಗಳೂ ಕಟ್ಟುವ ಪೀಸ್ ಹಣ ಎಲ್ಲಿಂದಾ ಬರ್ತಿತ್ತು ಸಾರ್. ಕೆಲಸಕ್ಕೆ ಹೋಗದೇ ಹೆತ್ತವರ ಸೇವೆ ಮಾಡುತ್ತಾ ಕೂತರೆ ಬದುಕವುದಾದರೂ ಹೇಗೆ ಸರ್. ಅವರಿಗೆ ಮಾತ್ರ ಅನಿವಾರ್ಯತೆ ಇದ್ದರೆ ನಮಗಿರುವುದು ಇನ್ನೇನು ಸರ್. ಹೆತ್ತವರನ್ನು ಕಳಕಳಿಯಿಂದಾ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾದರೆ, ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ ಅಲ್ಲವಾ ಸಾರ್..
ವಕೀಲ : ಬೀಜ ಬಿತ್ತಿ ಮರ ಬೆಳೆಸುವುದು ಮುಂದೊಂದು ದಿನ ನೆರಳು ಫಲ ಕೊಡುತ್ತೆ ಅಂತಾ.
ಶ್ರವಣ : ನೆಟ್ಟಗೆ ನೀರು ಗೊಬ್ಬರ ಹಾಕದೇ ಕೆಲಸದಾಳಿಗೆ ಹೇಳಿ ಹೋದರೆ ಯಾವ ಮರ ದಟ್ಟವಾಗಿ ಬೆಳೆಯುತ್ತದೆ, ಫಲಕೊಡುತ್ತದೆ ಹೇಳಿ ಸರ್.
ವಕೀಲ : ಹೆತ್ತವರಿಗೂ ಭಾವನೆಗಳಿರುತ್ತವೆ, ಅವುಗಳನ್ನು ಮಕ್ಕಳು ಘಾಸಿಮಾಡಬಾರದು, ಅದು ಘೋರ ಪಾಪ.
ಶ್ರವಣ : ಮಕ್ಕಳಿಗೆ ಭಾವನೆಗಳಿರೋದಿಲ್ವಾ ಸರ್. ವಯಸ್ಸಾದವರಿಗೆ ಬೇಡಿ ಪಡೆದು ತಿನ್ನಲು ಬಾಯಾದರೂ ಇರುತ್ತದೆ. ಪುಟ್ಟ ಮಕ್ಕಳಿಗೆ ಬೇಡಿಕೊಳ್ಳಲೂ ಬಾಯಿ ಬುದ್ದಿ ಜ್ಞಾನ ಎಲ್ಲಿರುತ್ತೆ ಹೇಳಿ ಸರ್. ನೀನಾದರೂ ಹೇಳಮ್ಮ.
ಅಮ್ಮ : (ಬರೀ ಕಣ್ಣೀರು ಹಾಕುತ್ತಾ, ಸೀರೆ ಸೆರಗಿನಿಂದ ವರೆಸಿಕೊಳ್ಳುತ್ತಾಳೆ.)
ವಕೀಲ : ಈ ವಿತಂಡವಾದಿಯ ಜೊತೆ ವಾದ ಮಾಡಲು ನನ್ನಿಂದ ಆಗದು ಯುವರ್ ಹಾನರ್.
ಜಜ್ : ಅವನು ಹೇಳುವುದರಲ್ಲೂ ಅರ್ಥ ಇದೆ ಅಲ್ವಾ ವಕೀಲರೆ. ಕಾಳಜಿ ಕಳಕಳಿ ಎರಡೂ ಕಡೆ ಇರಬೇಕಲ್ಲವೆ. ಮಾಡಿದ್ದುನ್ನೋ ಮಹಾರಾಯ ಅಂತಾ ಗಾದೆ ಮಾತು ಕೇಳಿದ್ದೀರೇನ್ರಿ. ಸಾಕುವ ಯೋಗ್ಯತೆ ಬಂದ ನಂತರ ಮಕ್ಕಳನ್ನು ಹುಟ್ಟಿಸಬೇಕು. ಹುಟ್ಟಿಸಿದ ಮೇಲೆ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ಆಗ ಮಗ ಹೆತ್ತವರನ್ನು ಅಷ್ಟೇ ಕಳಕಳಿಯಿಂದ ನೋಡಿಕೊಳ್ಳಲು ಸಾಧ್ಯ. ಹಾಗೆ ನೋಡಿಕೊಳ್ಳದೇ ಹೋದರೆ ಅದು ಅಪರಾಧ ಅಲ್ಲವೇ ವಕೀಲರೆ.
ವಕೀಲ : ಹೌದು ಮಹಾಸ್ವಾಮಿ. ನೀವು ಹೇಳುವುದರಲ್ಲೂ ಅರ್ಥವಿದೆ. ಆದರೆ..
ಜಜ್ : ಆದರೆ ಏನೂ ಇಲ್ಲಾ ಈ ಕೇಸಿನ ವಿಚಾರಣೆ ಮುಗಿದಂತಾಯ್ತಲ್ಲಾ..
ಶ್ರವಣ : ಇಲ್ಲಾ ಸ್ವಾಮಿ, ಇನ್ನೂ ನನ್ನ ತಂದೆಯನ್ನು ವಿಚಾರಿಸಬೇಕಿದೆ.
ಜಜ್ : ಸರಿ ಅವರನ್ನೂ ಕರೆಸಿ ವಕೀಲರೆ.
ಕೇಸ್ ವರ್ಕರ್ : ಶರಣಪ್ಪಾ ಶರಣಪ್ಪಾ..
ಶ್ರವಣ : ಅಪ್ಪಾ ವೃದ್ದಾಶ್ರಮದಲ್ಲಿರೋದು ತುಂಬಾ ಕಷ್ಟ ಆಗ್ತಿದೆ ಏನಪ್ಪಾ. ಮಗನ ಜೊತೆ ಮನೆಯಲ್ಲಿ ಇರಬೇಕೆಂದು ಅನ್ನಿಸೋದಿಲ್ಲೇನಪ್ಪ. ಮಗನ ನೆನಪು ನಿನಗೆ ಕಾಡೋದಿಲ್ಲೇನಪ್ಪಾ.
ಅಪ್ಪ : ಹುಂ.. ಯಾವಪ್ಪನಿಗೆ ಹಾಗೆ ಅನ್ನಿಸೋದಿಲ್ಲ ಹೇಳಪ್ಪಾ.
ಶ್ರವಣ : ಹಾಗಾದರೆ ಹೆತ್ತವರ ಜೊತೆ ಆಡಿಕೊಂಡು ನಿಮ್ಮ ಪ್ರೀತಿ ವಾತ್ಸಲ್ಯದ ಜೊತೆ ಬೆಳೆಯಬೇಕಾಗಿದ್ದ ನನ್ನನ್ನು ಯಾಕಪ್ಪಾ ಬಲವಂತವಾಗಿ ಬೋರ್ಡಿಂಗ್ ಶಾಲೆಗೆ ಸೇರಿಸಿದ್ರಿ.
ಅಪ್ಪ : ಅದು.. ಅದೂ
ಶ್ರವಣ : ಹೇಳಿ ಅಪ್ಪಾ. ನಿಮ್ಮ ಮನೆಯಂಗಳದ ಹೂಗಿಡವನ್ನು ಕಿತ್ತು ಬೇರೆ ಯಾರೋ ಬೆಳಸಲಿ ಎಂದು ಬೇರೆಲ್ಲೋ ನೆಟ್ಟು ಬಂದಿರಲ್ಲಾ, ಹುಟ್ಟಿದ ನೆಲದ ಸೊಗಡು ಬೇರೆ ಮಣ್ಣಲ್ಲಿ ಹೇಗಪ್ಪಾ ಸಿಗುತ್ತೆ. ನನಗೂ ಆ ವಸತಿ ಶಾಲೆ ಬಂಧನವಾಗಿತ್ತು. ನನ್ನ ನೋವು ನಲಿವಿಗೆ ಸ್ಪಂದಿಸುವ ನನ್ನದೆನ್ನುವ ಜೀವ ಜೊತೆಯಲ್ಲಿರದ ಕೊರಗು ಕಾಡುತ್ತಿತ್ತು. ಈಗ ನಿಮಗಾಗುತ್ತಲ್ಲಾ ಹಾಗೆಯೇ ಮರೆತೆನೆಂದರೆ ಮರೆಯಲಾಗದೇ ಮನಸ್ಸು ಸದಾ ಮನೆಯತ್ತಲೇ ಎಳೆಯುತ್ತಿತ್ತು. ಅಮ್ಮನ ಕೈತುತ್ತಿಗೆ, ಅಪ್ಪನ ಹೆಗಲಿಗೆ ಈ ಜೀವ ಹಂಬಲಿಸುತ್ತಿತ್ತು. ತಂದೆ ಮಗುವಿನ ಸಂಬಂಧ ಹೆಚ್ಚೆಚ್ಚು ಗಟ್ಟಿಗೊಳ್ಳುವ ಮುನ್ನವೇ ನನ್ನನ್ನು ದೂರಮಾಡಿದಿರಲ್ಲಾ ನಾನೇನು ತಪ್ಪು ಮಾಡಿದ್ದೆ. ಹೇಳಿ ಅಪ್ಪಾ ಹೇಳಿ.
ಅಪ್ಪ : (ಉತ್ತರಿಸಲಾಗದೇ ತಲೆ ತಗ್ಗಿಸಿ ನಿಲ್ಲುತ್ತಾನೆ)
ವಕೀಲ : ನಿನ್ನ ವಿದ್ಯಾಭ್ಯಾಸ ಕ್ಕಾಗಿ, ನಿನ್ನ ಮುಂದಿನ ಬದುಕಿನ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ತಂದೆ ನಿನ್ನನ್ನು ವಸತಿ ಶಾಲೆಗೆ ಸೇರಿಸಿದ್ದು.
ಶ್ರವಣ : ಏನ್ ಸರ್.. ಇನ್ನೂ ಬೇರು ಬಲಿಯದ ಸಸಿಯನ್ನು ಕಿತ್ತು ಬೇರೆಲ್ಲಿಯೋ ನೆಟ್ಟು ಬಂದರೆ ಅದು ಸುಖವಾಗಿರುತ್ತದಾ.
ಹೆತ್ತವರಿದ್ದೂ ಅವರಿಂದ ದೂರವಾಗಿ ಬದುಕುವ ವಸತಿ ಶಾಲೆಯ ವಿದ್ಯಾರ್ಥಿಗಳ ಸಂಕಟಗಳನ್ನು ಹೋಗಿ ಕೇಳಿ. ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರು ಅಂತಾ ಹೇಳ್ತಾರಲ್ಲಾ ಆ ವಯಸ್ಸಲ್ಲಿ ಮನೆಯೂ ಇಲ್ಲಾ ಮೊದಲ ಗುರೂವೂ ಜೊತೆಗಿಲ್ಲದ ಹಾಗೆ ಮಾಡಿದಿರಲ್ಲಾ. ಇನ್ನು ಬಾಂಧವ್ಯವೇ ಇಲ್ಲದ ಕಡೆ ವಿದ್ಯಾಭ್ಯಾಸ ಯಾಂತ್ರಿಕವೆನ್ನಿಸುತ್ತದೆ ಎಂಬ ಅರಿವು ಅನುಭವಿಸಿದವರಿಗೆ ಗೊತ್ತು.
ವಕೀಲ : ಬಾಂಧವ್ಯಕ್ಕೂ ವಸತಿ ಶಾಲೆಗೂ ಏನು ಸಂಬಂಧ. ಇದರಿಂದ ರಕ್ತ ಸಂಬಂಧದಲ್ಲಿ ಏನಾದರೂ ಎಂದಾದರೂ ಬದಲಾವಣೆ ಆಗಲು ಸಾಧ್ಯವೆ?
ಶರಣ : ಬದಲಾವಣೆ ಆಗುವುದು ರಕ್ತಸಂಬಂಧದಲ್ಲಿ ಅಲ್ಲಾ ಸರ್, ಭಾವನೆಗಳಲ್ಲಿ.
ಹೆತ್ತವರ ಪ್ರೀತಿ ಮಮತೆಯ ಕೊರತೆಯಲ್ಲಿ ಹೇಗೋ ಬೆಳೆದ ಮಗುವಿನ ಭಾವನೆಗಳೇ ಜಡವಾಗಿ ಕರುಳು ಬಳ್ಳಿಯ ಬೇರುಗಳು ಸಡಿಲವಾಗುತ್ತವೆ.
ವಕೀಲ : ನಿನ್ನನ್ನೇನೂ ಅನಾಥವಾಗಿ ಬೀದಿಗೆ ಬಿಟ್ಟಿಲ್ಲವಲ್ಲ. ಅಗತ್ಯವಿರುವಷ್ಟು ಅನುಕೂಲತೆ ಮಾಡಿಕೊಟ್ಟು, ಕಾಲಕಾಲಕ್ಕೆ ಸ್ಕೂಲಿನ ಪೀಸ್ ಕಟ್ಟಿದ್ದಾರಲ್ಲವೇ.
ಶ್ರವಣ : ನಾನೂ ಅದನ್ನೇ ಮಾಡಿರುವೆ. ವೃದ್ದಾಶ್ರಮದಲ್ಲಿ ಇರಲು ಅಗತ್ಯ ಅನುಕೂಲತೆ ಮಾಡಿಕೊಟ್ಟಿರುವೆ. ಪ್ರತಿ ತಿಂಗಳೂ ತಪ್ಪದೇ ಫಿಜನ್ನೂ ಕಟ್ಟುತ್ತಿರುವೆ. ವಸತಿ ಶಾಲೆಯಲ್ಲಿದ್ದಾಗ ಮೂರು ತಿಂಗಳಿಗೊಮ್ಮೆ ಬಂದು ನೋಡಿ ಹೋಗುತ್ತಿದ್ದ ಇವರಂತೆಯೇ ನಾನೂ ಸಹ ಆಗಾಗ ಹೋಗಿ ವಿಚಾರಿಸಿಕೊಳ್ಳುತ್ತಲೇ ಇದ್ದೇನೆ. ಇವರು ಮಾಡಿದ್ದು ಸರಿ ಅನ್ನುವುದಾದರೆ ನಾನು ಮಾಡಿದ್ದು ಹೇಗೆ ತಪ್ಪು ಹೇಳಿ ಸರ್..
ವಕೀಲ : ಏನೇ ಆದರೂ ರಕ್ತ ಸಂಬಂಧ ಅಲ್ಲವೇ? ವಯಸ್ಸಾದವರ ಜೊತೆ ಹೀಗೆ ಸೇಡು ತೀರಿಸಿಕೊಳ್ಳುವುದು ಅಮಾನವೀಯತೆ.
ಶ್ರವಣ : ಹಾಗಾದರೆ ಬುದ್ದಿ ಬಲಿಯದ ಮಗನನ್ನು ವಿದ್ಯೆಯ ನೆಪದಲ್ಲಿ ದೂರವಿರಿಸುವುದು ಮಾನವೀಯತೆ ಅನ್ನುವುದೇ ನಿಜವಾದರೆ ಬದುಕಿನ ಅನುಭವ ಗಳಿಸಿದ ಹೆತ್ತವರ ಅನುಕೂಲಕ್ಕಾಗಿ ಆಶ್ರಮದಲ್ಲಿಟ್ಟರೆ ಅಮಾನವೀಯತೆ ಆಗುತ್ತದೆಯಾ ಸಾರ್. ಬಂದ ಚೆಂದ ಸಂಬಂಧ ಎರಡೂ ಕಡೆಯಿಂದಾ ಇರಬೇಕಲ್ಲವೇ ಸರ್.
ವಕೀಲ : ನಿಮ್ಮ ವಾದ ಯಾಕೋ ಅತಿಯಾಯ್ತು.
ಶ್ರವಣ : ಇದರಲ್ಲಿ ಅತಿ ಏನಿದೆ ಸರ್. ಪ್ರೀತಿಗೆ ಬದಲಾಗಿ ಪ್ರೀತಿ, ಕಾಳಜಿಗೆ ಬದಲಾಗಿ ಕಳಕಳಿ ಬೇಕೆಂದರೆ ಹೆತ್ತವರು ಮಕ್ಕಳ ಜೊತೆ ಹಾಸುಹೊಕ್ಕಾಗಿ ಬದುಕಬೇಕಿದೆ. ಅದು ಬಿಟ್ಟು ತಮ್ಮ ಕೆಲಸದ ಒತ್ತಡದ ಹೆಸರಲ್ಲಿ ಕರ್ತವ್ಯ ಲೋಪ ಮಾಡಿಕೊಂಡು ವಯಸ್ಸಾದಾಗ ಅಯ್ಯೋ ನನ್ನ ಮಗ ದೂರಾಗಿದ್ದಾನೆ,
ನಮ್ಮಿಂದಾ ಬೇರೆಯಾಗಿದ್ದಾನೆ,
ಮಾತೃದ್ರೋಹಿ, ಪಿತೃದ್ರೋಹಿ ಅಂತೆಲ್ಲಾ ದೂರಿಕೊಂಡು ಅಲಿಯಬೇಕಾಗುತ್ತದೆ.
ಯಾವಾಗಲೂ ಸಮಾಜದ ಸೆಂಟಿಮೆಂಟ್ ಹೆತ್ತವರ ಪರವಾಗಿಯೇ ಇರುತ್ತದೆ ಸರ್, ಆದರೆ ಮಕ್ಕಳ ದೃಷ್ಟಿಕೋನದಲ್ಲೂ ಒಮ್ಮೆ ನೋಡಿ ಸರ್. ತಾಯಿ ತಂದೆಯಿಂದ ದೂರಾಗಿ ಯಾವುದೋ ಊರಿನ ಯಾವುದೋ ವಸತಿ ಶಾಲೆಯಲ್ಲಿ ಅನಾಥರಂತೆ ಬೆಳೆಯುವ ಮಕ್ಕಳ ಛಿದ್ರಗೊಂಡ ಭಾವನೆಗಳನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಿ ಸರ್.
ಜಜ್ : ಕೊನೆಯದಾಗಿ ಏನು ಹೇಳಲು ಬಯಸ್ತೀರಾ ?
ಶ್ರವಣ. : ಹೇಳುವಂತಹುದೇನೂ ಇಲ್ಲಾ ಮಹಾಸ್ವಾಮಿ. ಎಲ್ಲಾ ತಂದೆ ತಾಯಿಗಳಿಗೆ ನಾನು ಕೇಳಿಕೊಳ್ಳುವುದಿಷ್ಟೇ. ನಿಮ್ಮದೇ ಕೂಸನ್ನು ಕಣ್ಣಿನ ರೆಪ್ಪೆಯಂತೆ ನೀವೇ ಕಾಪಾಡಿ. ಬುದ್ದಿ ಬಲಿಯುವ ವಯಸ್ಸಲ್ಲಿ ಪ್ರೀತಿ ಮಮತೆ ಕೊಟ್ಟು ಜೊತೆಯಲ್ಲಿಟ್ಟುಕೊಂಡು ತಪ್ಪಾದಾಗ ತಿದ್ದಿ ಬೆಳೆಸಿ. ನಿಮಗೆ ವಯಸ್ಸಾದಾಗ ನಿಮ್ಮ ಮಕ್ಕಳು ನಿಮ್ಮನ್ನು ಹಾಗೆಯೇ ರೆಪ್ಪೆಯಂತೆ ನೋಡಿಕೊಳ್ಳುತ್ತಾರೆ.
ನೋಡಿಕೊಳ್ಳದೇ ಹೋದರೆ ಮುಂದೆ ಅವರ ಮಕ್ಕಳಿಂದಾಗಿ ಪಶ್ಚಾತ್ತಾಪ ಪಡುತ್ತಾರೆ.
ಜಜ್ : ಈಗ ಸಮಯವಾಯ್ತು. ವಿಚಾರಣೆ ವಾದ ಇಲ್ಲಿಗೆ ಸಾಕು. ಜಜ್ಮೆಂಟ್ ನ್ನು ಪೆಂಡಿಂಗ್ ಇಟ್ಟು ಇವತ್ತಿನ ಕೋರ್ಟ್ ಕಲಾಪ ಇಲ್ಲಿಗೆ ಮುಗಿಸುವೆ. ( ಎಂದು ಹೇಳಿ ಕೈಮುಗಿದು ನಿರ್ಗಮಿಸುತ್ತಾನೆ)
( ನ್ಯಾಯಾಧೀಶ ತನ್ನ ಚೆಂಬರಿಗೆ ಲಗುಬಗೆಯಿಂದ ಬಂದವನೇ ಮೊಬೈಲ್ ನಂಬರ್ ಡಯಲ್ ಮಾಡಿ)
ನ್ಯಾಯಾಧೀಶ : ಹಲೋ.. ಹೇ ಸಕ್ಕೂ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ನಮ್ಮ ಮಗನನ್ನು ಬೋರ್ಡಿಂಗ್ ಶಾಲೆಗೆ ಸೇರಿಸೋದು ಬೇಡ.
ಸಕ್ಕೂಬಾಯಿ : ನೀವೇ ಹಠ ಹಿಡಿದು ಅರ್ಜಿ ಫಾರಂ ತರಿಸಿ ಫಿಲಪ್ ಮಾಡಿಟ್ಟಿದ್ದೀರಲ್ಲಾರಿ.
ನ್ಯಾಯಾಧೀಶ : ನೋ, ಈಗ ಅದೆಲ್ಲಾ ಬೇಕಾಗಿಲ್ಲಾ. ಆ ಅರ್ಜಿ ಫಾರಂಗಳನ್ನು ಹರಿದು ಬಿಸಾಕು. ಅದೆಷ್ಟೇ ಕಷ್ಟ ಆದರೂ ನಮ್ಮ ಮಗ ನಮ್ಮ ಜೊತೆಗೇ ಬೆಳೆಯಲಿ.
ಸಕ್ಕೂಬಾಯಿ : ಮತ್ತೆ ಆತನ ಶಿಕ್ಷಣದ ಗತಿ?
ನ್ಯಾಯಾಧೀಶ : ಮೊದಲು ನಮ್ಮಿಬ್ಬರ ವೃದ್ಯಾಪ ಕಾಲದ ಭವಿಷ್ಯದ ಬಗ್ಗೆ ಯೋಚಿಸೆ. ನಾವೀಗ ಅವನನ್ನು ಮನೆಯಿಂದಾ ಹೊರಗಿಟ್ಟರೆ ಮುಂದೆ ಅವನು ನಮ್ಮನ್ನು ಮನೆಯಿಂದ ಮನಸಿಂದ ಹೊರಗಿಡಬಹುದು. ನೋ, ಹಾಗೆಲ್ಲಾ ಆಗಬಾರದು. ನಮ್ಮ ಮಗ ನಮ್ಮ ಜೊತೆನೇ ಇರಬೇಕು, ಜೊತೆಗಿದ್ದೇ ಕಲೀಬೇಕು ಆಟ ಊಟ ಪಾಠಾ ಮಾಡಬೇಕು. ಅಷ್ಟೇ..
ಸಕ್ಕೂಬಾಯಿ : ಅಯ್ಯೋ ಶಿವನೆ.. ಏನಾಯ್ತ್ರಿ ನಿಮಗೆ ಏನೇನೋ ಮಾತಾಡ್ತಿದ್ದೀರಿ.
ಜಜ್ : ಏನೂ ಇಲ್ಲಾ ಬಿಡು. ನಾನೀಗಲೇ ಮನೆಗೆ ಬರ್ತೇನೆ, ಬಂದು ಎಲ್ಲಾ ಹೇಳ್ತೇನೆ, ಪೋನ್ ಕಟ್ ಮಾಡು.
( ಎಂದು ಹೇಳಿ, ಕೋಟನ್ನು ಬಿಚ್ಚಿಟ್ಟು ಲಗುಬಗೆಯಿಂದಾ ಹೊರಟು ಕಾರನ್ನು ಏರುತ್ತಾನೆ. ಡ್ರೈವರ್ ಕಾರನ್ನು ಚಲಾಯಿಸುತ್ತಾನೆ.
ಸ್ವಲ್ಪ ದೂರ ಹೋದ ನಂತರ..)
ಜಜ್ : ಏ ಡ್ರೈವರ್ ಸ್ವಲ್ಪ ಕಾರು ನಿಲ್ಲಿಸು. ಹಾಗೆ ಮುಂದಕ್ಕೆ ಆ ಮೂವರೂ ಹೋಗ್ತಿದ್ದಾರಲ್ಲಾ ಅಲ್ಲಿ ಕಾರು ನಿಲ್ಲಿಸು.
ಡ್ರೈವರ್ : ಆಯ್ತು ಸರ್.
( ಮುಂದೆ ಹೋಗಿ ಕಾರು ನಿಲ್ಲುತ್ತದೆ. ಅಲ್ಲಿ ಶ್ರವಣ ತನ್ನ ತಂದೆ ತಾಯಿಯರ ಕೈ ಹಿಡಿದುಕೊಂಡು ರಸ್ತೆ ದಾಟಿಸಲು ಕಾಯುತ್ತಿರುತ್ತಾನೆ.
ಕಾರಿನ ಗ್ಲಾಸ್ ಇಳಿಸಿದ ಜಜ್)
ಜಜ್ : ಹೇ ಶ್ರವಣ್, ಇಲ್ಲಿ ನೋಡಿ. ಈಕಡೆ. ಹಾಂ. ಯಾವಕಡೆ ಹೋಗಬೇಕಿದೆ?
ಶ್ರವಣ : ಸರ್ ನೀವು. ನಾವು ಇಲ್ಲೇ ನಾಲ್ಕನೇ ಸರ್ಕಲ್ ಕಡೆಗೆ ಹೋಗಬೇಕು ಸರ್. ವೃದ್ದಾಶ್ರಮಕ್ಕೆ ಹೋಗಿ ಇವರ ಲಗೇಜನ್ನು ತೆಗೆದುಕೊಂಡು ನನ್ನ ಮನೆಗೆ ಕರೆದುಕೊಂಡು ಹೋಗ್ಬೇಕು ಸರ್. ನೀವು ಹೊರಡಿ ಸರ್.
ಜಜ್ : ನಾನೀಗ ಜಜ್ ಅಲ್ಲಾ, ಇದು ಕೋರ್ಟ ಅಲ್ಲಾ. ಆ ಇಬ್ಬರನ್ನೂ ಕರೆದುಕೊಂಡು ಬಾ, ಕಾರು ಹತ್ತು. ನಾನೇ ಡ್ರಾಪ್ ಮಾಡ್ತೇನೆ.
ಶ್ರವಣ : ಅಯ್ಯೋ, ನಾವು..ನಿಮ್ಮ ಜೊತೆ.. ಕಾರಲ್ಲಿ.. ಎಲ್ಲಾದರೂ ಉಂಟೆ ಸರ್.
ಜಜ್ : ಅದೆಲ್ಲಾ ಮುಜಗರ ಬಿಡು ಶ್ರವಣ್. ಏ ಡ್ರೈವರ್.. ಆ ಹಿರಿಯರನ್ನು ಹುಷಾರಾಗಿ ಕಾರಿಗೆ ಹತ್ತಿಸಿಕೊ..
( ಡ್ರೈವರ್ ಅಚ್ಚರಿಯಿಂದಾ ಆ ಕೆಲಸ ಮಾಡುತ್ತಾನೆ. ಆ ಮೂರೂ ಜನ ಮುಜುಗರದಿಂದ ಹಿಂದಿನ ಸೀಟಲ್ಲಿ ಕೂರುತ್ತಾರೆ.)
ಜಜ್ : ಯಾಕೆ ಶ್ರವಣ್ ಇನ್ನೂ ನಿನ್ನ ಕೇಸಿನ ಜಜ್ಮೆಂಟ್ ಆಗಿಲ್ಲಾ. ಅಷ್ಟರಲ್ಲೇ ಮನಸ್ಸು ಬದಲಾಯಿಸಿ ಹೀಗೆ ಹೆತ್ತವರ ಜೊತೆ..
ಶ್ರವಣ : ಎಲ್ಲಾ ನಿಮ್ಮ ಮಾತಿನ ಪ್ರಭಾವ ಸರ್. ನೀವು ಕೊನೆಗೆ ಹೇಳಿದ್ರಲ್ಲಾ " ಆಗಿದ್ದು ಆಗಿ ಹೋಯ್ತು, ತಪ್ಪುಗಳಿಂದಾ ಪಾಠ ಕಲಿತು ಜೊತೆಯಾಗಿರಿ" ಎಂದು. ಆಮೇಲೆ ಕೊನೆಯದಾಗಿ ಇನ್ನೊಂದು ಮಾತು ಹೇಳಿದ್ರಿ ಏನಂದ್ರೆ
(ಪ್ಲಾಶ್ ಬ್ಯಾಕ್ ಕೋರ್ಟಲ್ಲಿ ಜಜ್ ಹೇಳಿದ ಮಾತುಗಳು) "ಶರಣ್ ನೀವು ಈಗ ಹೆತ್ತವರ ತಪ್ಪುಗಳ ಮರೆತು ಒಂದಾಗಿ, ತಪ್ಪುಗಳಿಗೆ ತಪ್ಪು ಉತ್ತರವಲ್ಲ. ಸೇಡಿಗೆ ಸೇಡೆ ಉತ್ತರವಾದರೆ ಮುಂದೆ ನಿನ್ನ ಮಕ್ಕಳಿಂದಾ ನೀವು ಇವರಂತೆ ಪಶ್ಚಾತ್ತಾಪ ಪಡಬೇಕಾಗಬಹುದು,
ಸಂಬಂಧ ಅನ್ನೋದು ದೊಡ್ಡದು ಕಣೋ"
ಜಜ್ : ಹಾಂ ಈಗ ನೆನಪಾಯ್ತು. ಸಧ್ಯ ನಿಮ್ಮ ಸಂಬಂಧಗಳ ನಡುವಿನ ಬಿರುಕು ಮಾಯವಾಗಿ ಅನುಬಂಧ ಮೂಡಿತಲ್ಲಾ ಅಷ್ಟು ಸಾಕು.
ಶರಣ್ : ನೀವು ಕಲಿಸಿದ ಪಾಠದಿಂದಾ ಇದೆಲ್ಲಾ ಸಾಧ್ಯವಾಯ್ತು ಸರ್
ಜಜ್ : ನಾನೂ ನಿಮ್ಮಿಂದ ಪಾಠ ಕಲಿತೆ. ಮಾಡಬಹುದಾಗಿದ್ದ ತಪ್ಪನ್ನು ಸರಿಪಡಿಸಲು ಹೋಗುತ್ತಿದ್ದೇನೆ. ನೀವು ಹೇಳಿದ ಸರ್ಕಲ್ ಬಂತು, ಹುಷಾರಾಗಿ ಇಳೀರಿ. ಹಿಂದಾಗಿದ್ದನ್ನೆಲ್ಲಾ ಮರೆತು ಮುಂದೆ ಚೆಂದಾಗಿ ಕೂಡಿ ಬಾಳುವುದನ್ನ ಮರೆಯದಿರಿ.
( ಮೂರೂ ಜನ ಕಾರಿಳಿದು ಕೈ ಮುಗಿದು ದೈನ್ಯತೆಯಿಂದ ನಿಲ್ಲುತ್ತಾರೆ. ತಾಯಿಯ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತದೆ.
ತಂದೆಯ ಕಣ್ಣು ತುಂಬಿ ಬರುತ್ತದೆ. ಕಾರು ಮುಂದೆ ಚಲಿಸುತ್ತದೆ. ಜಜ್ ಕೈ ಕಿಟಿಕಿಯಾಚೆ ಬಂದು ವೇವ್ ಮಾಡುತ್ತದೆ. ಜಜ್ ಕಾರಿನ ಎಪ್ ಎಂ ಆನ್ ಮಾಡುತ್ತಾನೆ. ಹಾಡೊಂದು ಹರಿದು ಬರುತ್ತದೆ)
ಕೈತುತ್ತು ಕೊಟ್ಟೋಳೆ ಐಲವ್ ಮದರ್ ಇಂಡಿಯಾ, ಮದರ್ ಇಂಡಿಯಾ..
(ಎಪ್ ಎಂ ಚಾನೆಲ್ ಬದಲಾಯಿಸುತ್ತಾನೆ.)
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ಅಪ್ಪ… ಐ ಲವ್ ಯೂ ಪಾ
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ
ಅಪ್ಪ… ಐ ಲವ್ ಯೂ ಪಾ
ಮುಂದೆ ಹೋಗುತ್ತಿದ್ದ ಆಟೋದ ಹಿಂದಿನ ಬರಹ
ಅಪ್ಪನಾಗುವುದು ಎಂದರೆ ನಿಮ್ಮ ಮಗನಿಗೆ ನೀವು ಮಾದರಿಯಾಗಿರಬೇಕು ಮತ್ತು ಗೌರವಿಸಬಹುದಾದ ವ್ಯಕ್ತಿಯಾಗಬೇಕು - ವೇಯ್ನ್ ರೂನೇ
( ಈ ವಾಕ್ಯಗಳನ್ನು ಓದುತ್ತಲೇ ಜಜ್ ಕಣ್ಣಲ್ಲಿ ನೀರು ಬಂದು ಮುಂದಿನ ದಾರಿ ಮಂಜಾಗಿ ಕಾಣುವುದು)
- ಶಶಿಕಾಂತ ಯಡಹಳ್ಳಿ
Comments
Post a Comment