ಏನೋ ಮಾಡಲು ಹೋಗಿ (ಪ್ರಹಸನ-32)
(ಪ್ರಹಸನ-32)
ಏನೋ ಮಾಡಲು ಹೋಗಿ
**********************************
( ಮೊಬೈಲ್ ಅಡಿಕ್ಟ ಬಾಲರಾಜ್ ಮನೆ.)
ಅಮ್ಮ : ಬಾಲು, ಏ ಬಾಲು.. ಅಪ್ಪನ ಶುಗರ್ ಮಾತ್ರೆ ಖಾಲಿ ಆಗಿ ಮೂರು ದಿ ಆಯ್ತು ಹೋಗಿ ತಗೊಂಡು ಬಾರೋ.
ಬಾಲು : (ಮೊಬೈಲ್ ನೋಡುತ್ತಾ) ಹೋಗಮ್ಮಾ ಯಾರು ಅಷ್ಟು ದೂರ ಹೋಗಿ ತರೋದು.
ಅಮ್ಮ : ಹೀಗಂದ್ರೆ ಹೇಗೋ ಯಾರಾದರೂ ನಿನ್ನ ಗೆಳೆಯರಿದ್ದರೆ ತರೋಕೆ ಹೇಳೋ.
ಬಾಲು : ಗೆಳೆಯರಾ? ಬೇಕಾದಷ್ಟು ಜನರಿದ್ದಾರೆ. ನಿಮ್ಮ ಹೊಟ್ಟೇಲಿ ಹುಟ್ಟಿದ್ದಕ್ಕೆ ಬಡತನಕ್ಕೇನು ಕೊರತೆ ಇಲ್ಲಮ್ಮಾ ಆದರೆ ನಾನು ಗೆಳೆಯರ ವಿಚಾರದಲ್ಲಿ ತುಂಬಾ ಶ್ರೀಮಂತ.
ಅಮ್ಮ : ಏನೋ ಹಾಗಂದ್ರೆ.
ಬಾಲು : ಇಲ್ಲಿ ನೋಡಮ್ಮಾ ನನ್ನ ಈ ಮೊಬೈಲಲ್ಲಿ. ಟ್ವಿಟರ್ನಲ್ಲಿ ಒಂದೂವರೆ ಸಾವಿರ ಗೆಳೆಯರು, ವಾಟ್ಸಾಪಲ್ಲಿ
250 ಪ್ರೆಂಡ್ಸು, ಇನ್ಸ್ಟಾಗ್ರಾಮ್ ನಲ್ಲಿ ಐನೂರು, ಫೆಸ್ಬುಕ್ನಲ್ಲಿ ಐದು ಸಾವಿರ ಸ್ನೇಹಿತರಿದ್ದಾರೆ ಗೊತ್ತಾ.
ಅಮ್ಮಾ : ನೀನೋ ನಿನ್ನ ಪ್ರೆಂಡ್ಸೋ. ಮೊದಲು ಔಷದಿ ತಂದು ಕೊಡಪ್ಪಾ ದೊರೆ.
ಬಾಲು : ನೀನೇ ಹೋಗಮ್ಮಾ. ಇಲ್ಲಿ ನೋಡು ನನ್ನ ಪೊಟೋಗೆ ಎಷ್ಟು ಲೈಕ್ಸು, ಅದೆಷ್ಟು ಕಾಮೆಂಟ್ಸು, ಇಷ್ಟು ಒಳ್ಳೆಯ ಗೆಳೆಯರನ್ನು ಪಡೆದ ನಾನೇ ಧನ್ಯ.
ಅಮ್ಮಾ : ಲೋ ಮನೇಲಿ ದಿನಸಿ ಖಾಲಿ ಆಗಿದೆ. ತಗೋ ಈ ಹಣ ಮತ್ತು ಲಿಸ್ಟು. ಕಿರಾಣಿ ಅಂಗಡಿಗೆ ಹೋಗಿ ಅದನ್ನಾದ್ರೂ ತಗೊಂಡು ಬಾರೋ.
ಬಾಲು : ಹೋ ಅದೆಲ್ಲಾ ಆಗಾಕಿಲ್ಲ. ನೀನಿವತ್ತು ಅಡುಗೆ ಮಾಡದಿದ್ರೂ ಪರವಾಗಿಲ್ಲ, ನಾನಂತೂ ಇಲ್ಲಿಂದಾ ಕದಲೋದಿಲ್ಲಾ ಅಂದರೆ ಕದಲೋದಿಲ್ಲ.
ಅಪ್ಪ : (ಕೆಮ್ಮುತ್ತಾ ಬಂದು) ಅವನೆಲ್ಲೇ ಹೋಗ್ತಾನೆ. ಅವನಿಗೆ ಮೊಬೈಲೇ ದೇವರು, ಮೊಬೈಲೇ ಧರ್ಮ, ಅದೇ ಅಪ್ಪಾ ಅದೇ ಅಮ್ಮಾ. ಪ್ರೆಂಡ್ಸಂತೆ ಪ್ರೆಂಡ್ಸು. ಕೊಡು ನಾನೇ ಹೋಗಿ ತಗೊಂಡು ಬರ್ತೇನೆ. (ಹೊರಗೆ ಹೋಗ್ತಾನೆ, ಸುಬ್ಬು ಒಳಗೆ ಬರ್ತಾನೆ)
ಸುಬ್ಬು : ಅಮ್ಮಾ ಬಾಲು ಮನೇಲಿ ಇದ್ದಾನಾ?
ಅಮ್ಮ : ಇದ್ದಾನಪ್ಪಾ ಇದ್ದಾನೆ, ಇದ್ದೂ ಇಲ್ದಂಗೆ ಇದ್ದಾನೆ. ಬಾ ಒಳಗೆ.
ಸುಬ್ಬು : ಏ ಬಾಲು ಏನಯ್ಯಾ ಮಾಡ್ತಿದ್ದೀಯಾ?
ನಿನ್ನ ನೋಡಿ ಎಷ್ಟು ದಿನ ಆಯ್ತು, ಅದಕ್ಕೆ ನೋಡಿಕೊಂಡು ಹೊಗೋಣಾ ಅಂತಾ ಬಂದೆ.
ಬಾಲು : (ಸುಬ್ಬುನತ್ತ ತಿರುಗಿಯೂ ನೋಡದೆ) ಹಾಂ, ಬಂದಾಯ್ತು, ನೋಡಾಯ್ತು, ಬಿಡು ನಿನ್ನ ಗಾಡಿ, ನಡಿ..
ಸುಬ್ಬು : ಯಾಕೋ ಬಾಲು, ನನ್ನ ಕುಚುಕು ಗೆಳೆಯ ನೀನು. ಈಗ ನೋಡಿದ್ರೆ ಯಾರೋ ನಾನು ಅನ್ನೋ ಹಾಗೆ ಅಲಕ್ಷ್ಯ ಮಾಡ್ತಿದ್ದೀಯಲ್ಲಾ?
ಬಾಲು : ಮತ್ತೇನು, ಕರೆದು ಕೂಡ್ಸಿ ಆರತಿ ಮಾಡ್ಬೇಕಿತ್ತೇನು. ನೋಡಯ್ಯಾ ನಂಗೆ ಈಗ ಒಬ್ಬರಲ್ಲಾ ಇಬ್ಬರಲ್ಲಾ ಸಾವಿರಾರು ಜನ ಪ್ರೆಂಡ್ಸ ಸಿಕ್ಕಿದ್ದಾರೆ. ಅದರಲ್ಲಿ ಹುಡುಗೀರೂ ಬೇಕಾದಷ್ಟು ಜನ ಇದ್ದಾರೆ. ದಿನಾಲೂ ಚಾಟ್ ಮಾಡ್ತಾರೆ, ಜೋಕ್ಸ್ ಕಳಿಸ್ತಾರೆ, ನಗ್ತಾರೆ, ನಗಸ್ತಾರೆ.
ಸುಬ್ಬು : ಹೌದಾ. ಯಾರಪ್ಪಾ ಅದು ಅಷ್ಟೊಂದು ಪ್ರೆಂಡ್ಸು. ಎಲ್ಲಿದ್ದಾರೆ ( ಸುತ್ತ ಮುತ್ತ ನೋಡುತ್ತಾನೆ)
ಬಾಲು : ಲೋ ಅಲ್ಲೆಲ್ಲೋ ಹುಡುಕ್ತೀಯಾ? ಇಲ್ಲಿ ಈ ಮೊಬೈಲಲ್ಲಿ. ಪ್ರೆಂಡ್ಸೋ ಪ್ರೆಂಡ್ಸು. ಚಡ್ಡಿ ದೋಸ್ತಾಗಿದ್ದ ನೀನು ಯಾವತ್ತಾದ್ರೂ ನನ್ನ ಟ್ಯಾಲೆಂಟ್ ಗುರುತಿಸಿ ಹೊಗಳಿದ್ದೀ ಏನೋ.
ಸುಬ್ಬ : ಹೊಗಳಬೇಕಿತ್ತಾ.
ಏನು ಕಡಿದು ಕಟ್ಟೆ ಹಾಕಿದ್ದೀಯಂತಾ ಹೋಗಳಬೇಕಿತ್ತು
ಬಾಲು : ಹೂಂ ಮತ್ತೆ. ನೋಡಿಲ್ಲಿ ನಾನು ಮಾಡಿದ ರೀಲ್ಸಿಗೆ ಎಷ್ಟು ಜನ ವಾವ್, ಸೂಪರ್, ವೋವ್ಸಮ್, ಎಕ್ಟ್ರಾರ್ಡಿನರಿ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ ಗೊತ್ತಾ. ಹೆಚ್ಚು ಪ್ರೆಂಡ್ಸುಗಳು ಹೊಗಳಿದಷ್ಟೂ ಹಕ್ಕಿ ಹಾಗೆ ಹಾರಿದಂತೆ ಅನಿಸುತ್ತೆ ಗೊತ್ತಾ..
ಸುಬ್ಬ : ಸರಿ ಅಯ್ತಪ್ಪಾ. ಹಾರ್ತಾನೇ ಇರು, ಆದರೆ ಹುಷಾರು ಹೆಚ್ಚು ಕಮ್ಮಿ ಆದರೆ ಕೆಳಗೆ ಬಿದ್ದು ಹಲ್ಲು ಮುರ್ಕೊಳ್ತೀಯಾ.
ನಾನು ಬರ್ತೀನಯ್ಯಾ.
ಬಾಲು : ಸರಿ ಕಳಚಿಕೋ.
ಅಮ್ಮ : ಏ ಸುಬ್ಬು ಜನೌಷಧಿ ಕೇಂದ್ರಕ್ಕೆ ಹೋಗಿ ನಮ್ಮೆಜಮಾನ್ರ ಔಷಧಿ ತಂದು ಕೊಟ್ಟು ಹೋಗಪ್ಪಾ ಪುಣ್ಯಾ ಬರುತ್ತೆ. (ಹಣ ಹಾಗೂ ಚೀಟಿ ತೋರಿಸುತ್ತಾಳೆ)
ಸುಬ್ಬ : ಅರೆ ಕೊಡಿ ಆಂಟಿ. ಅದಕ್ಕೇನಂತೆ.
ಅಮ್ಮ : ಇದ್ರೆ ನಿನ್ನಂತಾ ಮುತ್ತಿನಂತಾ ಸ್ನೇಹಿತ ಇರಬೇಕು ನೋಡು. ಬಂಗಾರಾ ಅಪ್ಪಟ ಬಂಗಾರ ನೀನು. ತಗೋ
ಸುಬ್ಬ : ಆಯ್ತಮ್ಮಾ ಒಂದು ಗಂಟೇಯೊಳಗೆ ತಂದು ಕೊಡ್ತೀನಿ. ನೀವೇನೂ ಚಿಂತೆ ಮಾಡ್ಬೇಡಿ.
(ಅರ್ಧ ಗಂಟೆ ನಂತರ)
(ಆಸ್ಪತ್ರೆ, ಬಾಲುನ ತಂದೆ ರಸ್ತೆಯಲ್ಲಿ ತಲೆಸುತ್ತು ಬಂದು ಬಿದ್ದು ರಕ್ತಸ್ರಾವವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲು ಆತಂಕದಿಂದ)
ಬಾಲು : ಡಾಕ್ಟರ್ ನಮ್ಮಪ್ಪನಿಗೆ ಏನೂ ಆಗೋದಿಲ್ಲ ಅಲ್ವಾ.
ಡಾಕ್ಟರ್ : ಅಲ್ರಿ, ಅಪ್ಪಾ ಅಂತೀರಿ ಸ್ವಲ್ಪಾದರೂ ಕಾಳಜಿ ಮಾಡಬೇಕಲ್ವಾ. ಮಾತ್ರೆ ತಿನ್ನದೇ ಶುಗರ್ ಲೇವಲ್ ಹೆಚ್ಚಾಗಿ ದಾರಿಯಲ್ಲೇ ಬಿದ್ದು ತಲೆಗೆ ಪೆಟ್ಟು ಮಾಡ್ಕೊಂಡಿದ್ದಾರೆ.
ವಿಪರೀತ ರಕ್ತ ಹೋಗಿದೆ. ಇನ್ನರ್ಧ ಗಂಟೇಲಿ ಆಪರೇಶನ್ ಮಾಡಬೇಕು. ಎರಡು ಲಕ್ಷ ರೂಪಾಯಿ ಮೊದಲೇ ಕಟ್ಟಬೇಕು. ಓ ಪಾಸಿಟಿವ್ ಬ್ಲಡ್ ಬೇಕು. ಯಾರಾದರೂ ನಿಮ್ಮ ಪ್ರೆಂಡ್ಸಗಳಿದ್ದರೆ ಬರಹೇಳ್ರಿ.
ಬಾಲು : ಓ ಅದಕೇನಂತೆ. ಬೇಕಾದಷ್ಟು ಜನ ಪ್ರೇಂಡ್ಸ್ ಇದ್ದಾರೆ ಡಾಕ್ಟ್ರೆ. ಈಗಲೇ ಎಲ್ಲಾ ಆರೇಂಜ್ ಮಾಡ್ತೇನೆ. ಆಪರೇಶನ್ನಿಗೆ ರೆಡಿ ಮಾಡ್ಕೊಳ್ಳಿ.
(ಎಂದು ಹೇಳಿ ಮೊಬೈಲ್ ತೆಗೆದು ಸೆಲ್ಪಿ ವಿಡಿಯೋ ಮಾಡುತ್ತಾನೆ.)
ಬಾಲು : ಹಾಯ್ ಪ್ರೆಂಡ್ಸ್. ನಾನೀಗ ತೊಂದರೆಯಲ್ಲಿದ್ದೇನೆ. ನನ್ನ ತಂದೆಯವರು ಆಸ್ಪತ್ರೆಯಲ್ಲಿ ಸೀರೀಯಸ್ ಕಂಡೀಶನಲ್ಲಿದ್ದಾರೆ.
ಅರ್ಜೆಂಟಾಗಿ ಎರಡು ಲಕ್ಷ ಹಣ ಬೇಕಿದೆ ಯಾರಾದರೂ ಸಹಾಯ ಮಾಡಿ. ನನ್ನ ಅಕೌಂಟ್ ನಂಬರ್ ಶೇರ್ ಮಾಡಿದ್ದೇನೆ, ಹಣ ಕಳಿಸಿ ಹೆಲ್ಪ ಮಾಡಿ ಪ್ಲೀಜ್. ಹಾಗೆಯೇ ಓ ಪಾಸಿಟಿವ್ ಇರೋ ಯಾರಾದರೂ ಸ್ನೇಹಿತರು ರಕ್ತದಾನ ಮಾಡಲು ಅರ್ಜೆಂಟಾಗಿ ಜಿಜಿ ಆಸ್ಪತ್ರೆಗೆ ದಯವಿಟ್ಟು ಬನ್ನಿ. ನನ್ನ ಅಪ್ಪನ ಜೀವ ಉಳಿಸಿ ಪ್ಲೀಜ್ ಪ್ಲೀಜ್ ಪ್ಲೀಜ್.
ಅಮ್ಮ : ಏ ಬಾಲು. ಏನಾದರೂ ಮಾಡು. ಎಲ್ಲಾ ನಿನ್ನಿಂದಲೇ ಆಗಿದ್ದು. ಹೇಳಿದ ತಕ್ಷಣ ಔಷಧಿ ತಂದು ಕೊಟ್ಟಿದ್ರೆ ನಿಮ್ಮಪ್ಪಂಗೆ ಇಂತಾ ಗತಿ ಬರ್ತಿತ್ತಾ. ನೀನು ದಿನಸಿ ತರಲು ಹೋಗಿದ್ರೆ ನಿಮ್ಮಪ್ಪ ಹೀಗೆ ಬಿಳ್ತಾ ಇದ್ರಾ.
ಬಾಲು : ಏನಮ್ಮಾ ನೀನು. ಅವರ ಹಣೇಯಲ್ಲಿ ಹೀಗಾಗಬೇಕು ಅಂತಾ ಬರ್ದಿತ್ತು ಆಯ್ತು. ಅದನ್ನ ಯಾರಾದ್ರೂ ತಪ್ಪಿಸಲು ಆಗುತ್ತಾ. ಎಲ್ಲಾದಕ್ಕೂ ನಾನೇ ಕಾರಣ ಅಂತಾ ಯಾಕಮ್ಮಾ ಬೈತೀಯಾ.
ಅಮ್ಮ : ಈಗ ಅಷ್ಟೊಂದು ಹಣಕ್ಕೆ ಏನು ಮಾಡ್ತೀಯೋ? ಅದು ಅಪರೂಪದ ರಕ್ತ ಕಣೋ. ಯಾರು ಕೊಡ್ತಾರೋ.
ಬಾಲು : ಎಲ್ಲಾ ವ್ಯವಸ್ಥೆ ಮಾಡಿದ್ದೀನಿ. ಈಗ ನೋಡು ನನ್ನ ಪ್ರೆಂಡ್ಸ್ ಗಳು ಹಣ ಕಳಿಸ್ತಾರೆ. ಒಂದಲ್ಲಾ ಹತ್ತಾರು ಜನ ನನ್ನ ರಕ್ತ ತಗೋ, ನಾನು ಬ್ಲಡ್ ಕೊಡ್ತೀನಿ ಅಂತಾ ಓಡೋಡಿ ಬರ್ತಾರೆ ನೋಡ್ತಾ ಇರು. ನೀನು ಅಪ್ಪನ ಹತ್ರ ಇರು ಹೋಗು.
ಅಮ್ಮ : ಅದೇನು ಮಾಡ್ತೀಯೋ ಮಾಡೋ. ನಿನ್ನಿಂದಲೇ ಆಗಿದ್ದು ಈಗ ನೀನೇ ಸರಿ ಮಾಡು ( ಆತಂಕದಿಂದ ಹೊರಡುವಳು)
ಬಾಲು : (ಮೊಬೈಲ್ ಹಿಡಕೊಂಡು ಕ್ಷಣಕ್ಷಣಕ್ಕೂ ನೋಡ್ತಾನೇ ಇರ್ತಾನೆ. ಮೆಸೇಜ್ ಬಂದ ಶಬ್ದ ಬರುತ್ತದೆ. ಗಟ್ಟಿಯಾಗಿ ಒಂದೊಂದೇ ಮೆಸೇಜ್ ಓದುತ್ತಾನೆ)
ಅಯ್ಯೋ ಹೀಗಾಬಾರದಿತ್ತು.
ಗೆಟ್ ವೆಲ್ ಸೂನ್. ತಂದೇನ ಹುಷಾರಾಗಿ ನೋಡ್ಕೋ. ಏನೂ ಆಗೋದಿಲ್ಲ ದೈರ್ಯವಾಗಿರು. ದೇವರಿದ್ದಾನೆ ಡೋಂಟ್ ವರಿ. ಬ್ಲಡ್ ಬೇಕಿದ್ದರೆ ಬ್ಲಡ್ ಬ್ಯಾಂಕಿಗೆ ಕಾಲ್ ಮಾಡಿ.
ಅರೆ ಎಷ್ಟೊಂದು ಕಾಮೆಂಟ್ಸುಗಳು. ಆದರೆ ಯಾರೂ ಹಣ ಕಳಿಸ್ತೀನಿ ಅಂತಿಲ್ವೆ? ಯಾರೂ ರಕ್ತ ಕೊಡೋಕೆ ಬರ್ತಿಲ್ವೇ. ಏನ್ ಮಾಡ್ಲಿ.
( ಮತ್ತೆ ಮೊಬೈಲ್ ಕ್ಯಾಮರಾ ಆನ್ ಮಾಡಿ ವಿಡಿಯೋ ಮೆಸೇಜ್ ಮಾಡ್ತಾನೆ)
ಬಾಲು : ಪ್ರೆಂಡ್ಸ್. ನಿಮ್ಮೆಲ್ಲರ ಕಾಳಜಿ ಕಳಕಳಿ ಸಲಹೆ ಉಪದೇಶಗಳಿಗೆ ಥ್ಯಾಂಕ್ಸ್. ಆದರೆ ತುಂಬಾ ಎಮರ್ಜನ್ಸಿ ಇದೆ. ನನ್ನಪ್ಪಾ ಆಸ್ಪತ್ರೆ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಡ್ತಿದ್ದಾರೆ.
ಹಣ ಕಳಿಸಿ ಪ್ಲೀಜ್, ದಯವಿಟ್ಟು ಬಂದು ರಕ್ತದಾನ ಮಾಡಿ ಜೀವ ಉಳಿಸಿ. ಕೇವಲ ಅರ್ಧ ಗಂಟೆ ಅಷ್ಟೇ ಸಮಯವಿರೋದು. ಪ್ರೇಂಡ್ಸ್ ನಿಮ್ಮನ್ನೇ ನಂಬಿದ್ದೇನೆ. ನನ್ನ ತಂದೆಯನ್ನು ಉಳಿಸಿಕೊಡಿ.
ಈ ವಿಡಿಯೋ ಮೆಸೇಜ್ ನೋಡಿದವರು ಹಣ ಕಳಿಸಿಯೇ ಕಳಿಸ್ತಾರೆ. ಯಾರಾದರೂ ರಕ್ತ ಕೊಡಲು ಬಂದೇ ಬರುತ್ತಾರೆ. ( ಎನ್ನುತ್ತಾ ಒಮ್ಮೆ ಮೊಬೈಲನ್ನೂ ಮತ್ತೊಮ್ಮೆ ಆಸ್ಪತ್ರೆ ಗೇಟ್ ಕಡೆಗೂ ದೃಷ್ಟಿ ಬದಲಾಯಿಸುತ್ತಾ ಆತಂಕದಿಂದ ಕಾಯುತ್ತಿರುತ್ತಾನೆ.
ಒಂದು ಗಂಟೆ ಕಳೆದರೂ ಯಾರೂ ಹಣ ಕಳಿಸೋದಿಲ್ಲ, ರಕ್ತಕೊಡಲೂ ಬರೋದಿಲ್ಲ, ಅಲ್ಲೇ ಇದ್ದ ಬೆಂಚಿನ ಮೇಲೆ ಕುಸಿದು ಕೂಡುತ್ತಾ)
ಅಯ್ಯೋ ನಾನೇನು ಮಾಡಿದೆ. ಎಂತಾ ಭ್ರಮೆಯಲ್ಲಿ ಬದುಕಿದೆ. ವಾಟ್ಸಪ್ ಪೆಸ್ಬುಕ್ ನಲ್ಲಿದ್ದವರನ್ನ ನಿಜವಾದ ಗೆಳೆಯರೆಂದು ನಂಬಿ ಮೋಸಹೋದ್ನಲ್ಲಾ. ಈಗ ನನ್ನಪ್ಪ ಸಾಯ್ತಿದ್ದರೂ ಯಾರೂ ಸಹಾಯಕ್ಕೆ ಬರ್ತಿಲ್ಲವಲ್ಲಾ. ಏನ್ ಮಾಡಲಿ, ಈಗ ಎಲ್ಲಿ ಹೋಗಲಿ. ಎಲ್ಲೋ ಇರುವವರನ್ನು ಗೆಳೆಯರೆಂದು ನಂಬಿ ಜೊತೇಲಿರೋ ಹೆತ್ತವರಿಂದ ಅಂತರ ಕಾಪಾಡಿಕೊಂಡೆ.
ಜೊತೆಗಿದ್ದ ನಿಜವಾದ ಗೆಳೆಯರನ್ನು ಅಲಕ್ಷಿಸಿ ದೂರಾದೆ. ಈ ಮೊಬೈಲ್ ನೆಚ್ಚಿಕೊಂಡು ಅಪ್ಪನಿಗೆ ಒಳ್ಳೆಯ ಮಗನಾಗಲಿಲ್ಲ, ಹೆತ್ತಮ್ಮನಿಗೆ ಹೆಮ್ಮೆಯ ಕಂದನಾಗಲಿಲ್ಲ.
ಜೀವಕ್ಕೆ ಜೀವ ಕೊಡುವಂತಾ ಗೆಳೆಯರಿಗೆ ಆತ್ಮೀಯತೆ ತೋರಲಿಲ್ಲ. ಭ್ರಮೆಯ ಹಿಂದೆ ಹೋಗಿ ಎಲ್ಲರಿಂದಲೂ ದೂರಾದೆ. ಲೈಕು ಕಮೆಂಟ್ಸಗಳನ್ನೇ ನೆಚ್ಚಿ ನಕಲಿ ಲೋಕದಲ್ಲಿ ಕೊಚ್ಚಿ ಹೋದೆ. ನೋ.. ಇದೆಲ್ಲಾ ಆಗಿದ್ದು ಈ ಮೊಬೈಲಿಂದ. ನನ್ನ ಜೀವದ ಗೆಳೆಯ ಸುಬ್ಬು ಅವತ್ತೇ ಹೇಳಿದ್ದಾ, ನೀರೊಳಗಿನ ಹಾಲನ್ನು ಮಾತ್ರ ಹೀರಿಕೊಳ್ಳುವ ಹಂಸದ ಹಾಗೆ ಮೊಬೈಲನ್ನು ಬಳಸಬೇಕು ಅಂತಾ. ನಾನೇ ಮೋಸಹೋದೆ, ಕಳದೋದೆ. ಈಗ ಅಪ್ಪನನ್ನೂ ಕಳಕೊಂಡೆ. ( ಎನ್ನುತ್ತಾ ಸಿಟ್ಟಿನಿಂದಾ ಮೊಬೈಲನ್ನು ನೆಲಕ್ಕೆ ಬೀಸಾಕುತ್ತಾನೆ)
ಅಮ್ಮ : ಬಾಲು.. ಏ ಬಾಲು
ಬಾಲು : ಅಮ್ಮಾ ತಪ್ಪಾಯ್ತಮ್ಮಾ. ನನಗೆ ಹಣದ ವ್ಯವಸ್ಥೆ ಮಾಡೋದಕ್ಕೆ ಆಗಲಿಲ್ಲಮ್ಮ. ಯಾರೂ ಬಂದು ರಕ್ತದಾನ ಮಾಡಲಿಲ್ಲಮ್ಮಾ. ಅಪ್ಪನನ್ನ ಉಳಿಸಿಕೊಳ್ಳೋಕೆ ನನ್ನಿಂದಾ ಆಗಲೇ ಇಲ್ಲಮ್ಮಾ. ಕ್ಷಮಿಸಮ್ಮಾ ಕ್ಷಮಿಸು ( ಎನ್ನುತ್ತಾ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾನೆ)
ಅಮ್ಮ : ಬಾಲು.. ಸಾಕು ನಿಲ್ಲಿಸು ಮಗನೇ. ನಿಮ್ಮಪ್ಪ ಬದುಕಿದ್ದಾರೆ. ಮತ್ತೆ ಪುನರ್ಜನ್ಮ ಪಡೆದಿದ್ದಾರೆ. ನಿನ್ನ ಪ್ರೆಂಡ್ಸಗಳು ನನ್ನ ಮಾಂಗಲ್ಯ ಭಾಗ್ಯ ಕಾಪಾಡಿದರು ಕಣೋ.
ಬಾಲು : ( ಖುಷಿಯಿಂದ ತಿರುಗಿ ನೋಡಿ) ಹಾಂ. ಹೌದೇನಮ್ಮಾ. ನನಗೆ ಗೊತ್ತಿತ್ತು, ನನ್ನ ಅಂತರಾತ್ಮ ಹೇಳ್ತಿತ್ತು. ನನ್ನ ಸಾವಿರಾರು ಜನ ಸೋಷಿಯಲ್ ಮೀಡಿಯಾ ಪ್ರೆಂಡ್ಸಗಳು ನನ್ನ ಕೈಬಿಡೋದಿಲ್ಲಾ ಅಂತಾ ಗೊತ್ತಿತ್ತಮ್ಮಾ. ಕೊನೆಗೂ ಸಹಾಯ ಮಾಡಿದ್ರಲ್ಲಾ.
ಅಮ್ಮ : ನಿನ್ನ ಯಾವ ಮೀಡಿಯಾ ಪ್ರೆಂಡ್ಸು ಬರಲಿಲ್ಲಪ್ಪಾ. ಸಹಾಯಕ್ಕೆ ಬಂದವರು, ಹೇಗೋ ಹೊಂದಿಸಿ ಹಣ ಕಟ್ಟಿದವರು, ರಕ್ತಕೊಟ್ಟು ನಿನ್ನ ತಂದೆಯನ್ನ ಕಾಪಾಡಿದವರು ಈ ನಿನ್ನ ಗೆಳೆಯರು ಬಾಲು.
( ಬಾಲು ಅಮ್ಮ ತೋರಿಸಿದ ದಿಕ್ಕಿನತ್ತ ನೋಡುತ್ತಾನೆ. ಅಲ್ಲಿ ಸುಬ್ಬು, ರಾಮು ಹಾಗೂ ಕವಿತಾ ನಗುತ್ತಾ ನಿಂತಿರುತ್ತಾರೆ)
ಬಾಲು : ಅಯ್ಯೋ ನೀವಾ? ( ಕಣ್ಣೀರು ಸುರಿಸುತ್ತಾ ಓಡಿ ಹೋಗಿ ತಬ್ಬಿಕೊಂಡು) ನನ್ನ ಕ್ಷಮಿಸಿ ಬಿಡ್ರೋ. ನಿಮ್ಮಂತಾ ಜೊತೆಗಿದ್ದ ಜೀವದ ಗೆಳೆಯರನ್ನ ದೂರಮಾಡಿ, ಎಂದೂ ಕಾಣದ ಕಣ್ಕಟ್ಟಿನ ಪ್ರೆಂಡ್ಸಗಳನ್ನ ನಂಬಿ ಕೆಟ್ಟೆ. ಇನ್ಮೇಲೆ ಈ ಮೊಬೈಲ್ ಸಹವಾಸವನ್ನೇ ಬಿಟ್ಟೆ. ನೀವೆಲ್ಲಾ ನನ್ನ ಕಣ್ಣು ತೆರಿಸಿದ್ರಿ ಕಣ್ರೊ, ನಿಜವಾದ ಗೆಳೆತನ ಅಂದ್ರೆ ಏನು ಅಂತಾ ತೋರ್ಸಿದ್ರಿ. ನನ್ನ ತಂದೇನ ಉಳಿಸಿ ಕೊಟ್ರಿ. ( ಎನ್ನುತ್ತಾ ಪ್ರತಿಯೊಬ್ಬರ ಕೈಗಳನ್ನು ಹಿಡಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುತ್ತಾನೆ. ಸ್ನೇಹಿತರು ಸಂತೈಸುತ್ತಾರೆ. ಕೆಳಗೆ ಬಿದ್ದ ಮೊಬೈಲನ್ನು ಸುಬ್ಬು ಎತ್ತಿಕೊಂಡು ಸರಿಪಡಿಸುತ್ತಾ )
ಸುಬ್ಬು : ನೋಡು ಬಾಲು. ಈ ತಂತ್ರಜ್ಞಾನ ಅನ್ನೋದು ಅಗತ್ಯ ಸಂಪರ್ಕ ಹಾಗೂ ಅನಿವಾರ್ಯ ಕೆಲಸಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನೇ ಭಾವ ಬದುಕು ಭವಿಷ್ಯ ಅಂದು ಕೊಂಡರೆ ತೊಂದರೆ ತಪ್ಪಿದ್ದಲ್ಲ. ಇನ್ನರ್ಧ ಗಂಟೆ ಬಿಟ್ಟು ಹೋಗು ನಿಮ್ಮ ತಂದೆಯವರನ್ನು ನೋಡಿ ಬಾ.
ಅಮ್ಮ : ಹೌದು ಹೋಗು ಬಾಲು. ಅವರೀಗ ಅಪಾಯದಿಂದ ಪಾರಾಗಿದ್ದಾರೆ. ನೋವಲ್ಲೂ ನಿನ್ನದೇ ಹೆಸರನ್ನು ಕನವರಿಸುತ್ತಾ ಇದ್ದರು.
ಬಾಲು : ಇನ್ಮೇಲೆ ನಾನು ನಿಮ್ಮಿಬ್ಬರಿಗೂ ಒಳ್ಳೆಯ ಮಗನಾಗಿ ಇರುತ್ತೇನಮ್ಮಾ. (ಗೆಳೆಯರನ್ನು ತಬ್ಬಿಕೊಂಡು) ಕಣ್ಕಟ್ಟು ಪ್ರೆಂಡ್ಸಗಳ ಸಹವಾಸ ಬಿಟ್ಟು, ಕಣ್ಮುಂದೆ ಇರುವ ಗೆಳೆತನವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಹೋಗ್ತೇನಮ್ಮಾ.
ಇದು ಹೆತ್ತ ತಾಯಿಯಾದ ನಿನ್ನ ಮೇಲೆ ಆಣೆ ಪ್ರಮಾಣ ಮಾಡಿ ಹೇಳ್ತಿದ್ದೇನೆ. (ಎಲ್ಲರೂ ನಗುವರು. ಮೆಸೇಜ್ ಅಲರ್ಟ್ ಸೌಂಡ ಕೇಳಿಸುವುದು)
ಸುಬ್ಬು : ನೋಡೋ ಬಾಲು. 'ಸಾರಿ ಊರಲಿಲ್ಲ ಬರೋಕಾಗೋದಿಲ್ಲ' ಅಂತಾ ಯಾರೋ ಮೇಸೇಜ್ ಹಾಕಿದ್ದಾರೆ. ಇಲ್ಲೊಬ್ಬಳು ಹುಡುಗಿ 'ನಿನ್ನ ಕಷ್ಟಕ್ಕೆ ನೀನೇ ಹೊಣೆ ಬೇರೆಯವರ ಯಾಕೆ ಕೇಳ್ತೀರೋ ನಾ ಕಾಣೆ' ಎಂದು ಕಮೆಂಟ್ ಮಾಡಿದ್ದಾಳಲ್ಲೋ. ( ಎಲ್ಲರೂ ಜೋರಾಗಿ ನಗುತ್ತಾರೆ)
ಬಾಲು : ಥೂ ರೇಗಸ್ಬೇಡ್ವೋ ಕೊಡು ನನ್ನ ಮೊಬೈಲು. ಮೊದಲು ಈ ಸೋಷಿಯಲ್ ಮೀಡಿಯಾಗಳನ್ನೆಲ್ಲಾ ಡಿಲೀಟ್ ಮಾಡ್ತೇನೆ.
ಕವಿತಾ : ಎಲ್ಲಾನೂ ಡಿಲೀಟ್ ಮಾಡಿದ್ರೆ ನಿನ್ನಪೊಟೋ ವಿಡಿಯೋ ರೀಲ್ಸ್ ಗಳನ್ನ ಯಾರಿಗೆ ತೋರಿಸ್ತೀಯೋ ( ಕಿಚಾಯಿಸ್ತಾಳೆ)
ಸುಬ್ಬು : ನೋಡು ಬಾಲು. ಇರಲಿ ಎಲ್ಲಾ ಇರಲಿ, ಆದರೆ ಅರಿವನ್ನು ಹೆಚ್ಚಿಸಿಕೊಳ್ಳಲು, ಸಕಾರಾತ್ಮಕವಾದ ಚರ್ಚೆ ಸಂವಾದ ಮಾಡಲು, ಅಗತ್ಯವಾದ ಮಾಹಿತಿ ಸಂಗ್ರಹಿಸಲು ಸೋಷಿಯಲ್ ಮಾಧ್ಯಮಗಳು ಬಳಕೆ ಯಾಗಲಿ.
ಬಾಲು : ಸರಿ ಕಣೋ. ತಪ್ಪಿದಾಗ ತಿದ್ದಿ ಹೇಳಲು, ಬಿದ್ದಾಗ ಎದ್ದು ನಿಲ್ಲಿಸಲು ನಿಮ್ಮಂತಾ ನಿಜವಾದ ಗೆಳೆಯರು ಬೇಕು ಕಣ್ರೊ.
(ಯಾರದೋ ಮೊಬೈಲ್ ರಿಂಗ್ ಆಗಿ ರಿಂಗ್ ಟೋನ್ ಹಾಡು ಕೇಳಿಬರುತ್ತದೆ)
ಗೆಳೆಯಾ ಗೆಳೆಯಾ ಗೆಲುವೆ ನಮದಯ್ಯಾ
ಹೇಗಿದ್ದರೆ ಏನು ಜೊತೆಯಾಗಿ ಹೀಗೆ ಇರುವಾ ಎಂದೆಂದೂ
*- ಶಶಿಕಾಂತ ಯಡಹಳ್ಳಿ*
Comments
Post a Comment