ಅಮ್ಮಾ ಎಂದರೆ ( ಪ್ರಹಸನ- 33)

 ಪ್ರಹಸನ- 33)

ಅಮ್ಮಾ ಎಂದರೆ   

**********************

 

(ಸಂಜೆ ಪಾನ ಗೋಷ್ಠಿ. ಗೆಳೆಯರೆಲ್ಲ ಕ್ಲಬ್ನಲ್ಲಿ ಸೇರಿದ್ದಾರೆ. ಎಲ್ಲರೂ ತಮ್ಮ ವಿಸ್ಕಿ ಗ್ಲಾಸಗಳನ್ನು ಮೇಲೆತ್ತುವರು.)

 

ಡಾಕ್ಟರ್ : ಎಲ್ಲರಿಗೂ ಹ್ಯಾಪಿ ಮದರ್ಸ್ ಡೇ..

 

ಎಲ್ಲರೂ : ಚೀಯರ್ಸ್ ( ಎಂದು ಹೇಳಿ ವಿಸ್ಕಿ ಗುಟುಕರಿಸುವರು)

 

ಡಾಕ್ಟರ್ : ನಿಮ್ಮ ತಾಯಿ ಜೊತೆ ನೀನು ಇರುವ ನಿನ್ನ ಮೊಬೈಲ್ ಡಿಪಿ ಸಕತ್ತಾಗಿದೆ ಲಾಯರ್ರೆ.

 

ಲಾಯರ್ : ಇವತ್ತು ಮದರ್ಸ್ ಡೇ ಅಂತಾ ಹಾಕಿದ್ದೆಏನೇ ಹೇಳಿ, ನಮ್ಮ ಪ್ರೊಫೆಸರ್ ರವರು ಇವತ್ತು ಪತ್ರಿಕೆಯಲ್ಲಿ ಅಮ್ಮನ ಕುರಿತು ಬರೆದ ಲೇಖನ ಅದ್ಬುತ. ನನಗಂತೂ ಓದಿ ಕಣ್ಣಲ್ಲಿ ನೀರು ಬಂದು

 

ಪ್ರೊ : (ಸಿಗರೇಟ್ ಹೊಗೆ ಉಗುಳುತ್ತಾಥ್ಯಾಂಕ್ಯು.. 

 

ಕಂಟ್ರಾಂಕ್ಟರ್ : ಅಲ್ಲಾ ಮೇಷ್ಟ್ರೆ, ಓದಿದವರ ಕರಳು ಕತ್ತರಿಸುವಂತೆ ಬರೆದಿದ್ದೀರಲ್ಲಾ ಸೂಪರ್. ಓದಿ ನನಗೂ ಗಂಟಲು ಕಟ್ಟಿಬಂತು.

 

ಲಾಯರ್ : ನೀವು ಬರೆದ ಆತ್ಮೀಯ ಬರಹ ಓದಲು ನಿಮ್ಮ ತಾಯಿಯವರು ಇರಬೇಕಿತ್ತು

 

ಪ್ರೊ : ಇರಬೇಕಿತ್ತು ಈಗ ಇಲ್ಲಾ ಏನ್ಮಡೋದು. ಇರಿ ರೆಸ್ಟ್ ರೂಮಿಗೆ ಹೋಗಿ ಬರ್ತೇನೆ.

 

ಡಾಕ್ಟರ್ : ಎಷ್ಟೂಂತಾ ಮೇಷ್ಟ್ರನ್ನ  ಹೊಗಳ್ತೀರಾ? ನಿಮಗೆ ಒಂದು ವಿಷಯ ಗೊತ್ತಾ. ಪ್ರೊಫೆಸರ್ ತಾಯಿ ವೃದ್ದಾಶ್ರಮದಲ್ಲಿದ್ದರು. ನಾನೇ ಆಶ್ರಮದ ವಿಸಿಟಿಂಗ್ ಡಾಕ್ಟರ್.

 

ಲಾಯರ್ : ಹೌದಾ. ಮತ್ತೆ ಏನು ಅಮ್ಮ ಅಂದರೆ ದೇವತೆ, ಅದೆಷ್ಟು ಕಷ್ಟ ಪಟ್ಟು ಸಾಕಿದಳು. ಹಾಗೇ ಹೀಗೆ ಅಂತಾ ಕರಳು ಕತ್ತರಿಸಿಟ್ಟಂತೆ ಬರೆದಿದ್ದಾರೆ. ಇದಾ ವಿಷಯಾ.

 

ಕಂಟ್ರಾಂಕ್ಟರ್ : ಬರೆಯೋದೆ ಅವರ ಕಸಬಲ್ವೇನ್ರಿ. ಬರೀತಾರೆ. ಬರೆದ ಹಾಗೇಯೇ ಇರಬೇಕು ಅಂತೇನೂ ಇಲ್ಲವಲ್ಲ

 

ಡಾಕ್ಟರ್ : ಹೋಗಲಿ ಬಿಡಿ. ವಿಚಾರ ಕೇಳಿ ಪ್ರೆಂಡ್ಸಿಪ್ ಹಾಳು ಮಾಡ್ಕೊಳ್ಳೊದು ಬೇಡ. ಬಂದ್ರು ಸುಮ್ಮನಿರಿ.

 

ಲಾಯರ್ : ಅಂದಾಗೆ ಪ್ರೊಫೆಸರ್ ಸಾಹೇಬರೆ ನಿಜವಾಗಿಯೂ ಲೇಖನ ನಿಮ್ಮ ತಾಯಿಯವರ ಕುರಿತಾಗಿತ್ತಾ

 

ಪ್ರೊ : ಯಾಕೆ ಡೌಟಾ? ಅದ್ಯಾಕೀಗ ಕವಿಗಳು ಇನ್ನೂ ಯಾಕೆ ಬಂದಿಲ್ಲಾ

 

ಕಂಟ್ರಾಂಕ್ಟರ್ : ಬರ್ತಾರೆ ಬರ್ತಾರೆ. ಅವರು ಯಾವಾಗಲೂ ಪಾನಗೋಷ್ಠಿಗೆ ಬಂದು ಸೇರೋದು ರಾತ್ರಿ 9 ಆದ ಮೇಲೇನೇ ಅಲ್ವೆ. ಲಾಯರ್ ಸಾಹೇಬರೇ, ನಿಮ್ಮ ತಾಯಿಯವರಿಗೆ ಹುಷಾರಿಲ್ಲಾ ಅಂತಾ ಕೇಳಿದೆ

 

ಲಾಯರ್ : ಹೌದುರೀ. ಅವರ ಖಾಯಿಲೆಗೆ ಔಷದೀನೇ ಇಲ್ಲಾ ಏನ್ಮಾಡೋದು. ನೋಡ್ಕೊಳ್ಳೋಕೆ ನರ್ಸ್ ಇಟ್ಟಿದ್ದೀನಿ. ದಿನಾ ಸಾಯೋರಿಗೆ ಅಳೋರ್ಯಾರು.

 

ಡಾಕ್ಟರ್ : ಮತ್ತೆ ನಿಮ್ಮ ಶ್ರೀಮತಿಯವರು ನೋಡಿಕೊಳ್ಳೊದಿಲ್ವೆ.

 

ಲಾಯರ್ : ಅವಳಿಗೆ ಇದೆಲ್ಲಾ ಆಗಿ ಬರೋದಿಲ್ಲ. ನರ್ಸ್ ಇದ್ದಾಳಲ್ಲಾ.

 

ಕಂಟ್ರಾಂಕ್ಟರ್ : ವಿಷಯದಲ್ಲಿ ನಾನಂತೂ ಲಕ್ಕಿ. ನನ್ನ ತಾಯಿಗೆ ನಾನು ಥ್ಯಾಂಕ್ಸ್ ಹೇಳಲೇಬೇಕು. ಆದಷ್ಟು ಬೇಗ ನಮಗೆ ಯಾವ ತೊಂದರೆ ಕೊಡದೇ ಕಳಚಿಕೊಂಡ್ರು. ಮನೆ ನೆಮ್ಮದಿಯಾಗಿದೆ.

 

ಪ್ರೊ : ಹೌದು ಕವಿ ಇನ್ನೂ ಯಾಕೆ ಬಂದಿಲ್ಲಾ.

 

ಲಾಯರ್ : ಬರ್ತಾನೆ ಬಿಡಿ. ಇವತ್ತು ತಾಯಿ ಬಗ್ಗೆ ಕವಿತೆ ಓದಿ ಗ್ಯಾರಂಟಿ ತಲೆ ತಿಂತಾನೆ ನೋಡ್ತಾ ಇರಿ

 

(ಎಲ್ಲರೂ ನಗುವರು)

 

ಲಾಯರ್ : ಅಲ್ಲಾ ಡಾಕ್ಟರೇ ಹೀಗೆ ಕೇಳ್ತೀನೀ ಅಂತಾ ತಪ್ಪು ತಿಳಕೋ ಬೇಡಾ. ನಿನ್ನ ತಾಯಿಯವರಿಗೆ ನೀನೇ ದಯಾಮರಣ ಕೊಟ್ಟೆಯಂತೆ ಹೌದಾ?

 

ಡಾಕ್ಟರ್ : ಮತ್ತೇನು ಮಾಡಲಿ ಹೇಳು. ಅವರ ನೋವು ನೋಡೋದಕ್ಕೆ ಆಗ್ತಿರಲಿಲ್ಲ. ಬೆಡ್ ರೀಡನ್ ಆಗಿದ್ರು. ಯಾವುದೇ ಚಿಕೆತ್ಸೆಗೂ ಸ್ಪಂದಿಸ್ತಾ ಇರಲಿಲ್ಲ. ಯಾವಾಗಲೂ ಮಗನೇ ಮಗನೇ ಅಂತಾ ಕನವರಿಸೋಳು. ಪಂಚೇಂದ್ರಿಯಗಳು ಸಾಯ್ತಾ ಇದ್ವು. ಆದರೆ ಗಟ್ಟಿ ಜೀವ ಹೋಗದೇ ಹಠ ಮಾಡ್ತಿತ್ತು. ನಮ್ಮಮ್ಮ ಪಡ್ತಾ ಇದ್ದ ನೋವು ಸಂಕಟ ನೋಡಲಾಗದೇ ನಾನೇ ಮುಕ್ತಿ ಕೊಟ್ಟು ಉಪಕಾರ ಮಾಡಿದೆ. ಧರ್ಮಸ್ಥಳಕ್ಕೆ ಹೋಗಿ ಮುಡಿಕೊಟ್ಟು ಪಾಪ ಪರಿಹಾರ ಮಾಡಿಕೊಂಡೆ.

 

ಪ್ರೊ : ಹಾಗೆಲ್ಲಾ ಮಾಡಬಾರದಿತ್ತು. ಇನ್ನಷ್ಟು ದಿನ ಕಾಯ್ದಿದ್ದರೆ ತನ್ನಿಂತಾನೇ ಉಸಿರು ನಿಲ್ಲುತ್ತಿತ್ತು ಅಲ್ವಾ

 

ಡಾಕ್ಟರ್ : ಒಂದಲ್ಲಾ ಎರೆಡಲ್ಲಾ ನಾಲ್ಕು ವರ್ಷ ಕಾಯ್ದೆ ಮೇಷ್ಟ್ರೇ. ಊಹೂಂ ದೇಹ ಕೊಳೀತಾ ಇದ್ರು ಉಸಿರು ಮಾತ್ರ ನಿಲ್ಲಲಿಲ್ಲ. ದಯಾಮರಣವನ್ನು ಕಾನೂನುಬದ್ದ ಮಾಡುವುದು ಒಳ್ಳೆಯದು.

 

ಕಂಟ್ರ್ಯಾಂಕ್ಟರ್ : ಹೌದು ನಂದೂ ಅದೇ ಅನಿಸಿಕೆ. ನರಳಿ ನರಳಿ ಸಾಯುವುದಕ್ಕಿಂತಲೂ ಒಂದೇ ಸಲ ಸಾವಿನ ಅರಿವೇ ಆಗದಂತೆ ದಯಾಮರಣ ಕೊಡುವುದು ಪುಣ್ಯದ ಕೆಲಸ

 

ಲಾಯರ್ : ನೇಚರ್ ಲಾ ಅಂತಾ ಇದೆ ನಿಮಗೆ ಗೊತ್ತಾ. ಅದೇನಂದ್ರೆ ಪ್ರಕೃತಿಯಲ್ಲಿ ಯಾವುದೇ ಪ್ರಾಣಿ ಪಕ್ಷಿ ಜೀವ ಸಂಕುಲವನ್ನು ಗಮನಿಸಿ. ತಾಯಿ ಆಗಿದ್ದೋಳು ಮಕ್ಕಳನ್ನ ಕಣ್ಣಲ್ಲಿ ಕಣ್ಣಿಟ್ಟು ವೈರಿಗಳಿಂದ ಕಾಪಾಡುತ್ತದೆ. ಎಲ್ಲಿಂದಲೋ ಆಹಾರ ತಂದು ತಿನ್ನಿಸಿ ಬೆಳೆಸುತ್ತೆ.

 

ಡಾಕ್ಟರ್ : ಎಲ್ಲರಿಗೂ ಗೊತ್ತಿರೋದೇ ಇದು ಹೊಸದೇನಿದೆ

 

ಲಾಯರ್ : ಇದೆ. ಗೊತ್ತಿಲ್ಲದೇ ಇರೋದು ಏನಂದ್ರೆ ಯಾವುದೇ ಪ್ರಾಣಿ ಪಕ್ಷಿ ಕುಲ ಮುದಿಯಾದ ತಾಯಿ ತಂದೆಯರ ಬಗ್ಗೆ ಸ್ವಲ್ಪಾನೂ ಕಾಳಜಿ ಮಾಡೋದಿಲ್ಲ. ಹಕ್ಕಿ ರೆಕ್ಕೆ ಬಲಿತ ನಂತರ ಬೇರೆ ಹೋಗುತ್ತೆ, ಪ್ರಾಣಿ ಗಳು ತಮ್ಮ ಪಾಡು ತಾವು ನೋಡಿಕೊಳ್ಳುತ್ತವೆ. ಇದು ಪ್ರಕೃತಿ ಧರ್ಮ.

 

ಪ್ರೊ : ಆದರೆ ಮನುಷ್ಯನಿಗೆ ಬುದ್ದಿ ಇದೆ. ಪ್ರಾಣಿ ಪಕ್ಷಿಗಳ ಹಾಗೆ ಇರೋದಿಕ್ಕೆ ಆಗೋದಿಲ್ಲ.

 

ಲಾಯರ್ : ಆದರೆ ಬೇಸಿಕಲ್ಲಿ ಮನುಷ್ಯನೂ ಕೂಡಾ ಪ್ರಾಣಿನೇ ಅಲ್ವಾ ಪ್ರೊಫೆಸರೇ. ಈಗ ನೋಡಿ ನೀವೂ ನಿಮ್ಮ ಹೆತ್ತವಳನ್ನು ವೃದ್ದಾಶ್ರಮದಲ್ಲಿ ಬಿಟ್ಟಿಲ್ವಾ?

 

ಪ್ರೊ : ಯಾರು ನಿಮಗೆ ವಿಷಯ ಹೇಳಿದವರು? ( ಎಂದು ಡಾಕ್ಟರ್ ಕಡೆ ಕೋಪದಿಂದ ನೋಡುತ್ತಾನೆ)

 

ಕಾಂಟ್ರ್ಯಾಕ್ಟರ್ : ನೋಡ್ರಪ್ಪಾ ಕವಿಗಳು ಬಂದ್ರು. ಬಾ ಬಾ ನಿನಗೆ ಕಾಯ್ತಾ ಇದ್ವಿ. ತಗೋ ಗ್ಲಾಸು ಹಾಕು ಗುಂಡು.

 

ಲಾಯರ್ : ಬೇಗ ಬರೋದಕ್ಕೆ ಏನಾಗಿತ್ತಯ್ಯಾ ನಿನಗೆ ರೋಗ. ಎಂಥಾ ಇಂಪಾರ್ಟಂಟ್ ಟಾಪಿಕ್ ಮಿಸ್ ಮಾಡ್ಕೊಂಡೆ

 

ಕಂಟ್ರ್ಯಾಂಕ್ಟರ್ : ತುಂಬಾ ದಿನದಿಂದಾ ಒಂದು ಡೌಟ್ ಕೇಳಬೇಕು ಅನ್ಕೊಂಡಿದ್ದೆ ಕೇಳಬಹುದಾ ಕವಿಗಳೇ.

 

ಕವಿ : (ಗ್ಲಾಸಿಗೆ ವಿಸ್ಕಿ ಹಾಕಿಕೊಳ್ಳುತ್ತಾ ಕೇಳು ಎನ್ನುವಂತೆ ಸನ್ನೆ ಮಾಡುತ್ತಾನೆ)

 

ಕಂಟ್ರ್ಯಾಂಕ್ಟರ್ : ಅಲ್ಲಯ್ಯಾ ನಾವು ಯಾವಾಗ ಸಂಜೆ ಆಗುತ್ತೋ, ಯಾವಾಗ ಕ್ಲಬ್ಬಿಗೆ ಬಂದು ಗುಂಡು ಹಾಕ್ತಿವೋ ಅಂತಾ ದಿನಾ ಕಾಯ್ತಾ ಇರ್ತೀವಿ. ಆದರೆ ನೀನು ಮಾತ್ರ ಯಾವಾಗಲೂ ಲೇಟಾಗಿ ಬಂದು ಸೇರ್ತಿಯಾ? ಯಾಕೆ?

 

ಕವಿ : ಹೋಗಲಿ ಬಿಡ್ರಯ್ಯಾ ವಿಷಯ ಈಗ್ಯಾಕೆ? ಒಟ್ನಲ್ಲಿ ಬಂದು ನಿಮಗೆ ಕಂಪನಿ ಕೊಡ್ತೀನಲ್ಲಾ.

 

ಡಾಕ್ಟರ್ : ಇಲ್ಲಾ ನೀ ಏನೋ ನಮ್ಮಿಂದಾ ಮುಚ್ಚಿಡ್ತಿದ್ದೀ. ಏನೂ ಅಂತಾ ಹೇಳು ಕವಿ. ನಿನ್ನೆಂಡ್ತಿ ಬಯ್ತಾಳಾ.

 

ಲಾಯರ್ : ಬಯ್ಯೋದಕ್ಕೆ ಅವನ ಹೆಂಡ್ತಿ ಇವನ ಜೊತೆ ಇದ್ರೆ ತಾನೆ. ಯಾವತ್ತೋ ಗಂಟು ಮೂಟೆ ಕಟ್ಕೊಂಡು ಮಗನನ್ನೂ ಕರ್ಕೊಂಡು ಹೊರಟೋದ್ಲು.

 

ಕಂಟ್ರ್ಯಾಂಕ್ಟರ್ : ಅದೃಷ್ಟವಂತಾ. ಹೆಂಡ್ತಿ ಕಾಟದಿಂದ ಮುಕ್ತಿ ಪಡೆದಾ. ಹಂಗಾದ್ರೆ ಎಲ್ಲರಿಗಿಂತಾ ಬೇಗ ಬರಬೇಕಿತ್ತಲ್ವಾ, ಯಾಕಿಂಗೆ ಯಾವಾಗ್ಲೂ ಲೇಟು? ಏನಾದ್ರೂ ಪ್ರಾಬ್ಲಮ್ಮಾ.?

 

ಕವಿ : ಅಂತಾದ್ದೇನಿಲ್ಲಾ ಬಿಡ್ರೋ. ಅದೆಲ್ಲಾ ಈಗ್ಯಾಕೆ

 

ಪ್ರೊ : ಇಲ್ಲಾ ಕವಿಗಳೇ. ಇವತ್ತು ನೀವು ಕಾರಣ ಹೇಳಲೇಬೇಕು? ನಾವು ಕೇಳಲೇಬೇಕು

 

ಕವಿ : ಯಾಕೆ ಹಿಂಗೆ ಹಠ ಮಾಡ್ತೀರಾ? ಇನ್ಯಾವತ್ತಾದ್ರೂ ಹೇಳ್ತೀನಿ ಬಿಡ್ರಪ್ಪಾ.

 

ಕಂಟ್ರ್ಯಾಂಕ್ಟರ್ : ಊಹೂಂ. ಈಗಲೇ ಹೇಳಬೇಕು. ಹೇಳದೇ ಇದ್ರೆ ನಿನ್ನ ತಾಯಿ ಮೇಲೆ ಆಣೆ.

 

ಕವಿ : (ತಾಯಿ ಹೆಸರು ಕೇಳಿ ಭಾವುಕನಾಗಿ ಗ್ಲಾಸ್ ಕೆಳಗಿಟ್ಟು ಎರಡು ಹನಿ ಕಣ್ಣೀರು ಹಾಕುತ್ತಾನೆ

 

ಡಾಕ್ಟರ್ : ಸೋ ಸಾರಿ. ಯಾಕೆ ಅಮ್ಮಾ ಹೋಗಿಬಿಟ್ರಾ. ನೆನಪು ಕಾಡ್ತಾ ಇದೆಯಾ? ಹುಟ್ಟಿದೋರು ಒಂದಿಲ್ಲೊಂದು ದಿನ ಹೋಗಲೇಬೇಕಲ್ವಾ? ಪೀಲ್ ಮಾಡ್ಕೋಬೇಡಾ?

 

ಕವಿ : ನೋ. ಹಾಗೆಲ್ಲಾ ಮಾತಾಡ್ಬೇಡ್ವೋ. ನನ್ನ ತಾಯಿ ಇನ್ನೂ ಬದುಕಿದ್ದಾರೆ. ನನ್ನ ಆಯಸ್ಸು ಅವರಿಗೆ ಇರಲಿ.

 

ಲಾಯರ್ : ಹೋ ಸಾರಿ ಗೆಳೆಯಾ. ತಪ್ಪಾಗಿ ಮಾತಾಡಿದ್ವಿ. ಯಾಕೆ ಇಷ್ಟೊಂದು ಭಾವುಕನಾದೆ.

 

ಪ್ರೊ : ಮೊದಲೆ ಕವಿ ಅಲ್ವಾ, ಭಾವುಕತೆ ಅವನ ಹುಟ್ಟುಗುಣ.

 

ಕವಿ : ( ಕಣ್ಣೊರೆಸಿಕೊಂಡು ನಿಟ್ಟುಸಿರು ಬಿಟ್ಟು) ಕಾರಣ ಹೇಳಲೇಬೇಕಾ

 

ಕಂಟ್ರ್ಯಾಂಕ್ಟರ್ : ಹೌದು ಗೆಳೆಯಾ ಕೇಳುವ ಕುತೂಹಲ ನಮಗೆಲ್ಲಾರಿಗೂ ಇದೆ.

 

ಕವಿ : ನನ್ನಮ್ಮನನ್ನು ಮಲಗಿಸಿ ಇಲ್ಲಿಗೆ ಬರೋದಕ್ಕೆ ಲೇಟಾಗುತ್ತೆ ಕಣ್ರೊ. ಬೇರೆ ಏನಿಲ್ಲಾ.

 

ಲಾಯರ್ : ಹೋ ಇಷ್ಟೇನಾ? ನೀನ್ಯಾಕೆ ಮಲಗಿಸಬೇಕು. ನಿದ್ದೆ ಬಂದ್ರೆ ಅವರೇ ಮಲಗ್ತಾರೆ?

 

ಕವಿ : ಯಾಕೆ ನಿಮ್ಮೆಲ್ಲರ ಅಮ್ಮಂದಿರು ನೀವು ಚಿಕ್ಕವರಿದ್ದಾಗ ನಿಮ್ಮನ್ನು ಮಲಗಿಸೋಕೆ ಎಷ್ಟು ಕಷ್ಟ ಪಡ್ತಿದ್ದರು ಅನ್ನೋದು ನೆನಪಿದೆಯಾ? ಈಗ ನಮ್ಮ ಸರದಿ.

 

ಡಾಕ್ಟರ್ : ಅದೇನೋ ಸರಿ. ಆದರೆ ನಿಮ್ಮ ತಾಯಿಗೆ ನಿದ್ದೆ ಬಂದ್ರೆ ಮಲಗ್ತಾರೆ ಅಲ್ವಾ?

 

ಕವಿ : ನನ್ನ ಅವ್ವನಿಗೆ ಹತ್ತು ವರ್ಷದಿಂದ ಮರೆವಿನ ಖಾಯಿಲೆ ಕಣ್ರೋ. ಯಾವುದೂ ನೆನಪಿರೋದಿಲ್ಲ. ಎಲ್ಲಾ ನಾನೇ ಮಾಡಬೇಕು. ನೆನಪಿಸಿ ಔಷಧಿ ಕೊಡಬೇಕು, ಊಟ ಮಾಡಿಸಬೇಕು. ಹಾಡು ಹಾಡಿ ಮಲಗಿಸಬೇಕು. ಇದೆಲ್ಲಾ ಮಾಡಿ ಅವ್ವ ಮಲಗಿದ ಮೇಲೆ ನಾನು ಇಲ್ಲಿಗೆ ಬರಬೇಕು.

 

ಕಂಟ್ರ್ಯಾಂಕ್ಟರ್ : ಯಾರಾದ್ರೂ ನರ್ಸ್ ಇಡಬೇಕಲ್ವಾ? ಹೇಳಿದ್ರೆ ಡಾಕ್ಟರ್ ಕಳಿಸಿ ಕೊಡ್ತಾ ಇದ್ದ.

 

ಕವಿ : ಇಡಬಹುದಾಗಿತ್ತು. ಆದರೆ ನಾನು ಕೂಸಾಗಿದ್ದಾಗ ಅವ್ವ ನರ್ಸ್ ಇಡಲಿಲ್ಲಾ, ದಾದಿಗಳನ್ನೂ ಕರೆಸಲಿಲ್ಲಾ, ಎಲ್ಲಾ ತಾನೇ ಮಾಡಿದಳಲ್ವಾ. ಈಗ ನನ್ನ ಸರದಿ, ಅವಳ ಋಣ ತೀರಿಸಬಾರದೇನು?

 

ಕಂಟ್ರ್ಯಾಂಕ್ಟರ್ : ಗ್ರೇಟ್ ಕಣಯ್ಯಾ? ಆದರೆ ಅವರು ಹಾಸಿಗೆಯಲ್ಲೇ ಮಲ ಮೂತ್ರ ಮಾಡ್ಕೊಳ್ತಾರಲ್ವಾ, ಅದನ್ನೆಲ್ಲಾ ನೀನೇ ಕ್ಲೀನ್ ಮಾಡ್ತೀಯಾ ?

 

ಕವಿ : ನೀನು ಕೂಸಾಗಿದ್ದಾಗ ಎದ್ದು ಟೈಲಟ್ಟಿಗೆ ಹೋಗಿ ಎಲ್ಲಾ ಮಾಡಿ ತೊಳ್ಕೊಂಡು ಬರ್ತಾ ಇದ್ದೆ ಏನು? ಆಗ ನಮ್ಮವ್ವಂದಿರು ಎಲ್ಲಾ ಬಳಿದು ತೊಳೆದು ಕ್ಲೀನ್ ಮಾಡ್ತಿರಲಿಲ್ವಾ. ಯಾವತ್ತಾದ್ರೂ ಒಂದಿನಾ ಥೂ ಹೊಲಸು ಅಂತಾ ಬಿಟ್ರಾ..

 

ಪ್ರೊ : ವಂಡರ್ಪುಲ್. ಕಾಲದಲ್ಲೂ ನಿನ್ನಂತವರು ಇದ್ದಾರಾ? ಅಲ್ಲಾ ಕವಿಗಳೇ ನಿಮ್ಮ ತಾಯಿಗೆ ಹೇಗೂ ಮರೆವಿನ ಕಾಯಿಲೆ. ನೀನು ಬೇಗ ಬಂದರೆ ಅವರಿಗೆ ಏನು ತಾನೇ ಗೊತ್ತಾಗುತ್ತೆ. ನಾವೆಲ್ಲಾ ಇಲ್ಲಿ ಕಾಯ್ತಿರ್ತೀವಿ ಅಂತಾ ಗೊತ್ತಿಲ್ವಾ?

 

ಕವಿ : ಮರೆವಿನ ಕಾಯಿಲೆ ಇರೋದು ಅಮ್ಮನಿಗೆ ಹೊರತು ನನಗಲ್ಲ. ಅವರು ಕರೆದಾಗ ನಾನು ಮುಂದೆ ಇರಬೇಕು. ಅವರು ಮಲಗಿದ ಮೇಲೆ ನಾನು ಬರೋದು. ಬರುವಾಗಲೂ ನಮ್ಮನೆ ಕೆಲಸದವಳಿಗೆ ನಾನು ಬರುವವರೆಗೂ ಅಮ್ಮನ ಬಳಿ ಇರಲು ಹೇಳಿ ಬಂದಿರ್ತೇನೆ.

 

ಕಂಟ್ರ್ಯಾಂಕ್ಟರ್ : ಅಂದ್ರೆ ನಾವು ಮುಖ್ಯ ಅಲ್ವಾ?

 

ಕವಿ : ಮೊದಲು ಹೆತ್ತವಳು ಆಮೇಲೆ ನೀವೆಲ್ಲಾ. ಹೋಗಲಿ ಬಿಡಿ ಇವತ್ತಿನ ಕವಿತೆ ಓದುವೆ ಕೇಳಿ.

 

ಗೆಳೆಯರು ಗುರುಗಳು ಬಂಧುಗಳು

ಎಲ್ಲರೂ ಸಿಗುವರು ಧರೆಯೊಳಗೆ

ಇರುವಳು ಅಮ್ಮ ಒಬ್ಬಳೇ 

ಜೀವಕೊಟ್ಟವಳು ಧರೆಗೆ ದೊಡ್ಡವಳು

 

ಲಾಯರ್ : ವಾವಾ.. ವಾವಾ..

 

ಕವಿ

ಉಸಿರು ಕೊಟ್ಟಿದ್ಯಾರು ಅಮ್ಮ

ಜೀವ ನೀಡಿದ್ಯಾರು ಅಮ್ಮ

ಜಗಕೆ ನಮ್ಮನು ತಂದಿದ್ಯಾರು ಅಮ್ಮ

ಹಾಲು ಕುಡಿಸಿದ್ತಾರು ಅನ್ನ ತಿನಿಸಿದ್ಯಾರು ಅಮ್ಮ

ನಡೆಸಿದ್ಯಾರು ಬಿದ್ದಾಗ ಎಬ್ಬಿಸಿದ್ಯಾರು ಅಮ್ಮ

ಕಣ್ಣ ರೆಪ್ಪೆಯಂತೆ ನನ್ನ ಕಾಪಾಡಿದ್ಯಾರು ಅಮ್ಮ

 

ಅಮ್ಮನಿಲ್ಲದೇ ನಾವಿಲ್ಲ ಅಮ್ಮನ ಹೊರತು ಜಗವಿಲ್ಲ

ಅಮ್ಮನೆಂದರೆ ಸವಿ ಬೆಲ್ಲ, ಅಮ್ಮನಿರದೆ ಬದುಕಿಲ್ಲ

ಅಮ್ಮನಿಲ್ಲದಿರೆ ಉಸಿರಿಲ್ಲ.

 

(ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ. ಕವಿಯ ಪೋನಿನ ರಿಂಗ್ ಟೋನ್ "ಅಮ್ಮಾ ಎಂದರೆ ಏನೋ ಹರುಷವೋ " ಕೇಳಿಬರುತ್ತದೆ. ಕವಿ ಪೋನ್ ಎತ್ತಿಕೊಳ್ಳುತ್ತಾನೆ. ಕವಿಯ ಮಾತು ಮೌನವಾಗಿ ಕಣ್ಣೀರು ಧಾರೆಯಾಗಿ ಹರಿಯತೊಡಗುತ್ತದೆ

 

ಡಾಕ್ಟರ್ : ಏನಾಯ್ತು ಕವಿ.

 

ಲಾಯರ್ : ಯಾಕೆ ಅಳ್ತಾ ಇದ್ದೀಯಾ?

 

ಕವಿ : ಕೆಳಗೆ ಕುಸಿಯುತ್ತಾನೆ. ಪೋನ್ ಕೈಯಿಂದ ಜಾರಿ ಬೀಳುತ್ತದೆ.

 

ಪ್ರೊ : (ಕವಿಯನ್ನು ಎತ್ತಿ ಹಿಡಿದು) ಏನಾಯ್ತು ಹೇಳೋ..

 

ಕವಿ : ನನಗೆ ಉಸಿರಿತ್ತ ಉಸಿರು ನಿಂತಿತು. ಜೀವ ಕೊಟ್ಟ ಜೀವ ಹಾರಿತು. ಅಮ್ಮ ಹೋದರು. ( ಬಿಕ್ಕಳಿಸಿ ಅಳುತ್ತಾನೆ, ಎಲ್ಲರೂ ಪ್ರತಿಮೆಯ ಹಾಗೆ ನಿಲ್ಲುತ್ತಾರೆಕುಸಿದು ಬಿದ್ದ ಕವಿಯನ್ನು ಎಲ್ಲರೂ ಎತ್ತಿ ನಿಲ್ಲಿಸಲು ನೋಡುತ್ತಾರೆ. ಡಾಕ್ಟರ್ ನಾಡಿ ಚೆಕ್ ಮಾಡುತ್ತಾನೆ.)

 

ಡಾಕ್ಟರ್ : (ತಲೆ ಅಡ್ಡಡ್ಡ ಅಲ್ಲಾಡಿಸುತ್ತಾಕವಿಗಳ ಉಸಿರೂ ನಿಂತೋಗಿದೆ. ( ಎಲ್ಲರ ಕಣ್ಣುಗಳಲ್ಲಿ ನೀರು)

 

(ಯಾರದೋ ಪೋನ್ ನಿಂದ ರಿಂಗ ಟೋನ್ 

"ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

ನಿನ್ನ ಸಂಗ ಆಡಲೆಂದು ಬಂದೆ ನಾನು

ಓಹೋ ಓಹೋ, ಓಹೋ ಓಹೋ,")

 

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ