ಕಮಲ ಬ್ರ್ಯಾಂಡ್ ವಾಷಿಂಗ್ ಮಷೀನ್ (ಪ್ರಹಸನ-34)

  (ಪ್ರಹಸನ-34)

ಕಮಲ ಬ್ರ್ಯಾಂಡ್ ವಾಷಿಂಗ್ ಮಷೀನ್  

*************************************************

 

( ಅಂಗಡಿಯ ಮೇಲೆ ಕಮಲ ಡ್ರೈ ಕ್ಲೀನರ್ಸ ಬೋರ್ಡು, ಅಂಗಡಿಯ ಮುಂದೆ ಇರುವ ಬ್ಯಾನರಲ್ಲಿ " ಭ್ರಷ್ಟರನ್ನು ಹಾಗೂ ರಾಜಕೀಯ ಕಳಂಕಿತರನ್ನು ಶುದ್ದೀಕರಣ ಮಾಡಲಾಗುವುದುಎಂದು ಬರೆದಿದ್ದು ಕೆಳಗೆ ಸ್ಟಾರ್ ಮಾರ್ಕ ಹಾಕಿ ಕಂಡೀಶನ್ ಅಪ್ಲೈ ಅಂತಾ ಮಬರೆಯಲಾಗಿದೆ, ಪ್ರೀ ರೆಕಾರ್ಡೆಡ್ ಜಾಹಿರಾತಿನ ಹಾಡು ಪ್ರಸಾರವಾಗುತ್ತದೆ)

 

ವಾಷಿಂಗ್ ಮಷಿನ್ ಕಮಲ

ವಾಷಿಂಗ್ ಮಷಿನ್ ಕಮಲ

ಕಳಂಕವೆಲ್ಲಾ ಕಳೆದು ಶುದ್ದಮಾಡುವ ಯಂತ್ರ

ಭ್ರಷ್ಟತೆಯಲ್ಲಾ ತೊಳೆದು ಪವಿತ್ರ ಮಾಡುವ ತಂತ್ರ

ವಾಷಿಂಗ್ ಮಷಿನ್ ಕಮಲ

 

ಖಾಕಿ ಚೆಡ್ಡಿದಾರಿ : (ಕತ್ತಿಗೆ ಕೇಸರಿ ಬಟ್ಟೆ ಹಾಕಿಕೊಂಡು ಕೈಯಲ್ಲಿ ಮೈಕ್ ಹಿಡಿದು ಕೂಗುತ್ತಿದ್ದಾನೆ) ಬನ್ನಿ ಅಣ್ಣಾ, ಬನ್ನಿ ತಮ್ಮಾ, ನಿಮ್ಮ ರಾಜಕೀಯ ಭ್ರಷ್ಟಾಚಾರ ಮತ್ತು ಅದರಿಂದ ಮೆತ್ತಿಕೊಂಡ ಕಳಂಕಗಳನ್ನೆಲ್ಲಾ ನಿವಾರಿಸಿ ಶುದ್ದೀಕರಣ ಮಾಡುವ ಮೆಷಿನ್ ನಮ್ಮಲ್ಲಿದೆ. ಬನ್ನಿ.. ಒಮ್ಮೆ ಟ್ರಯಲ್ ಮಾಡಿ ನೋಡಿ.

 

ಗಣ್ಯವ್ಯಕ್ತಿ  : ( ಮೈಮುಖವೆಲ್ಲಾ ಕೆಸರು ಮೆತ್ತಿಕೊಂಡವ) ನಮಗೇನೂ ನಿಮ್ಮ ಸರ್ವೀಸ್ ಬೇಕಾಗಿಲ್ಲ ಹೋಗ್ರಿ..

 

ಚಡ್ಡಿದಾರಿ : ನೋಡಿ ನೀವಾಗಲೇ ಬಂದರೆ ನಿಮಗೆ ತಿನ್ನೋದಕ್ಕೆ ಬೇಕಾದ್ದನ್ನ ಕೊಡ್ತೇವೆ. ಚಲಾಯಿಸೋದಕ್ಕೆ ಅಧಿಕಾರ ಕೊಡ್ತೇವೆ. ಆಗೋದಿಲ್ಲ ಅನ್ನೋಹಾಗಿಲ್ಲ. ಹಾರು ಶಾಲು ಹಾಕಿ ಸನ್ಮಾನ ಮಾಡ್ತೇವೆ.

 

ಗಣ್ಯವ್ಯಕ್ತಿ  :  ಅದೆಲ್ಲಾ ಬೇಕಾಗಿಲ್ಲ. ಬಿಡ್ರಿ ಅರ್ಜೆಂಟ್ ಮೀಟಿಂಗ್ ಇದೆ ಹೋಗಬೇಕು ನಾನು.

 

ಚಡ್ಡಿದಾರಿ : ಹೋ ಅದೆಂಗಾಗುತ್ತೆ? ಬರಬೇಕು ಅಂದ್ರೆ ಬರಬೇಕು. ಬರದೇ ಇದ್ದರೆ  ಅಲ್ಲಿವೆಯಲ್ಲಾ ನಮ್ಮ ಸಾಕು ನಾಯಿಗಳು ಅವುಗಳನ್ನ ನಿಮ್ಮ ಮೇಲೆ ಒಂದೊಂದಾಗಿ ಚೂ ಬಿಡ್ತೇವೆ. ಆಮೇಲೆ ಅವು ನೀವು ಹಾಕಿರೋ ಚೆಡ್ಡಿನೂ ಬಿಡದೇ ಬೆತ್ತಲೆ ಮಾಡ್ತಾವೆ ಹುಷಾರ್

 

ಗಣ್ಯವ್ಯಕ್ತಿ  :  ಅರೆ ಏನು ಹೆದರಿಸ್ತೀಯಾ? ದಮಕಿಗೆಲ್ಲಾ ನಾನು ಮಣೆಯೋನಲ್ಲಾ ಹೋಗ್ರಿ.

 

ಚಡ್ಡಿದಾರಿ : ಹಂಗಾ, ಈಡಿ.

 

ವ್ಯಕ್ತಿ : ಈಡಿ ಯಾರು? ಬೌನ್ಸರ್ರಾ? ಗುಂಡಾನಾ?

 

( ಭಯಾನಕ ನಾಯಿಯೊಂದು ಓಡಿ ಬಂದು ವ್ಯಕ್ತಿಯನ್ನು ಗುರಾಯಿಸಿ ಬೊಗಳುತ್ತದೆ. )

 

ಗಣ್ಯವ್ಯಕ್ತಿ  :  (ಬೆಚ್ಚಿಬಿದ್ದು) ಈಡಿ ಅಂದ್ರೆ ಇದೇನಾ? ಭಯಾ ಆಗ್ತಿದೆ ಆಚೆ ಕಳಿಸ್ರಿ.

 

ಚಡ್ಡಿದಾರಿ : ಐಟಿ ಚಾರ್ಜ್..

( ಇನ್ನೊಂದು ಸೀಳು ನಾಯಿ ಬಂದು ವ್ಯಕ್ತಿಯ ಮೇಲೆ ಎಗರಲು ನೋಡುತ್ತದೆ. ಚಡ್ಡಿದಾರಿ ಅದರ ಕತ್ತಿನ ಬೆಲ್ಟ್ ಹಿಡಿದು ಹಿಂದಕ್ಕೆಳೆಯುತ್ತಾ)

 

ಚಡ್ಡಿದಾರಿ : ಇವಿಷ್ಟೇ ಅಲ್ಲಾ, ಇನ್ನೂ ಬೇಕಾದಷ್ಟು ಇವೆ. ನಾಯಿಗಳನ್ನ ಬಿಡಬೇಕಾ ಇಲ್ಲಾ ನನ್ನ ಮಾತು ಕೇಳಿ ಒಳಗೆ ಬರ್ತೀರಾ?

 

ಗಣ್ಯವ್ಯಕ್ತಿ  :  (ಆತಂಕದಿಂದ) ಅಯ್ಯೋ ಬರ್ತೀನಿ ಬರ್ತೀನಿ. ಮೊದಲು ಪೀಡೆಗಳನ್ನು ದೂರ ಕಳಿಸಿ.

 

( ಈಡಿ ವ್ಯಕ್ತಿಯ ಮೈಮೇಲೆ ಏರಿ ಹೋಗಲು ನೋಡುತ್ತದೆ. ಚಡ್ಡಿದಾರಿ ಅದರ ಬೆಲ್ಟ್ ಹಿಂದಕ್ಕೆಳೆದು

 

ಚಡ್ಡಿದಾರಿ : ಹಾಗೆ ಬನ್ನಿ ದಾರೀಗೆ. ಹೋಗಿ ಒಳಗೆ, ವಾಷಿಂಗ್ ಮೆಷಿನ್ ನಲ್ಲಿ ಇಳಿದು ಕೂತುಕೊಳ್ಳಿ. ಸ್ವಲ್ಪ ಸಮಯದಲ್ಲಿ ನಿಮ್ಮ ಮೈ ಮುಖಕೆ ಮೆತ್ತಿದ ಕೊಳೆಯಲ್ಲಾ ತೊಳೆದು ಶುದ್ದವಾಗಿ ಹೊರಗೆ ಬರ್ತೀರಾ?

 

ಗಣ್ಯವ್ಯಕ್ತಿ  :  ಮತ್ತೆ ಬ್ಯಾನರ್ ಕೆಳಗೆ ಕಂಡೀಷನ್ ಅಪ್ಲೈ ಅಂತಿದೆಯಲ್ಲಾ ಏನದು?

 

ಚಡ್ಡಿದಾರಿ : ಅದು ಏನಪಾಂತಂದ್ರೆ. ಒಮ್ಮೆ ನೀವು ಕಳಂಕರಹಿತವಾಗಿ ಹೊರಗೆ ಬಂದ ನಂತರ ನಾವು ಹೇಳಿದಂತೆ ಕೇಳಿಕೊಂಡಿರಬೇಕು. ನಾವು ಹೇಳಿದವರನ್ನು ದೂಷಿಸಬೇಕು, ನಾವು ತೋರಿದವರನ್ನು ದ್ವೇಷಿಸಬೇಕು. ನಮ್ಮ ಪರಿವಾರದ ನಿಬಂಧನೆಗಳಿಗೆ ಬದ್ದರಾಗಿರಬೇಕು.

 

ಗಣ್ಯವ್ಯಕ್ತಿ  :  ಅದೆಲ್ಲಾ ಆಗೋದಿಲ್ಲಾ. ನಾನ್ಯಾಕೆ ನೀವು ಹೇಳಿದಂಗೆ ಕೇಳಿಕೊಂಡಿರಲಿ. ನಾನೂ ಪ್ರಭಾವಶಾಲಿ ನಾಯಕ.

 

ಚಡ್ಡಿದಾರಿ : ಪ್ರಭಾವಿ ಅಂತಾನೇ ನಿಮಗೆ ಆಫರ್ ಕೊಡ್ತಿರೋದು. ನಿಮಗೆ ಹೂಹಾರ ಸನ್ಮಾನ, ಹಣ ಸಂಪತ್ತು ಅಧಿಕಾರ ಬೇಕಾಗಿಲ್ವಾ?

 

ಗಣ್ಯವ್ಯಕ್ತಿ  :  ಅವೆಲ್ಲಾ ಈಗಾಗಲೇ ನನ್ನ ಹತ್ತಿರ ಇವೆಯಲ್ಲಾ. ಅವುಗಳನ್ನೆಲ್ಲಾ ಅಡ್ಡದಾರಿಯಲ್ಲಿ ಪಡಿಯೋದಕ್ಕೆ ಹೋಗಿ ಹೀಗೆ ಸರ್ವಾಂಗಕ್ಕೂ ಮಸಿ ಬಳ್ಕೊಂಡು ಭ್ರಷ್ಟನಾಗಿ ಕಳಂಕಿತನಾಗಿದ್ದೇನೆ.

 

ಚಡ್ಡಿದಾರಿ : ಅದನ್ನೆಲ್ಲಾ ಕ್ಲೀನ್ ಮಾಡೋಕೆ ನಾವಿರೋದು, ನಮ್ಮ ಪರಿವಾರ ಇರೋದು. ಹೇಳೋದನ್ನ ಕೇಳಿ. ಮಸಿ ಅಳಿಸಿ ಖುಷಿಯಾಗಿರಲು ಇದೇ ಉತ್ತಮ ಅವಕಾಶ. ಇಲ್ಲದೇ ಹೋದರೆ ಸರ್ವನಾಶಾ.

 

ಗಣ್ಯವ್ಯಕ್ತಿ  : ಅದೇನೂ  ಬೇಕಾಗಿಲ್ಲ, ನಿಮ್ಮ ಆಪರೇಶನ್ನಿನಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಬಿಟ್ಟು ಬಿಡಿ ಸಾಕು.

 

ಚಡ್ಡಿದಾರಿ : ಚಿಂತೆ ಮಾಡಬೇಡಿ. ನಾವು ಆಪರೇಶನ್ ಮಾಡೋದರಲ್ಲಿ ಎಕ್ಸಪರ್ಟ್ ಆಗಿದ್ದೇವೆ. ಸಕ್ಸಸ್ ರೇಟೂ ಜಾಸ್ತಿ ಇದೆ.

 

ಗಣ್ಯವ್ಯಕ್ತಿ  : ಅದಕ್ಕೆ ಬೇರೆ ಯಾರನ್ನಾದರೂ ನೋಡ್ಕೊಳ್ರಿ. ನಾನು ಹೊರಡ್ತೇನೆ.

 

ಚಡ್ಡಿದಾರಿ : ಹೋಗ್ತೀರಾ ಹೋಗಿ. ಆದರೆ ನಮ್ಮ ಸಾಕು ನಾಯಿಗಳಿಗೆ ಭ್ರಷ್ಟರು, ದುಷ್ಟರು, ಕಳಂಕಿತರ ಕಂಡರೆ ಹುಚ್ಚು ಹಿಡಿಯುತ್ತದೆ. ಸಿಕ್ಕಸಿಕ್ಕಲ್ಲೇ ಕಚ್ಚತಾವೆ. ನಮ್ಮ ಕಮಲ ಬ್ರ್ಯಾಂಡಿನ ವಾಶಿಂಗ್ ಮಶೀನಿನಲ್ಲಿ ಶುದ್ದೀಕರಣಗೊಂಡಲ್ಲಿ ಇವು ಏನೂ ಮಾಡೋದಿಲ್ಲ. ಈಗಾಗಲೇ ದೇಶಾದ್ಯಂತ ಇರುವ ನಮ್ಮ ಶಾಖೆಗಳಲ್ಲಿ ಶುದ್ದೀಕರಣಗೊಂಡವರು ಬೇಕಾದಷ್ಟು ಜನರಿದ್ದಾರೆ. ಮರ್ಯಾದೆಯಿಂದ ಒಪ್ಪಿಕೊಂಡರೆ ಸರಿ..

 

ಗಣ್ಯವ್ಯಕ್ತಿ  :  ಊಹೂಂ ಆಗೋದಿಲ್ಲ..

 

ಚಡ್ಡಿದಾರಿ : ಹಾಗಾದರೆ ಅನುಭವಿಸಿ. ಈಡಿ, ಐಟಿ ಇವನನ್ನ ವಿಚಾರಿಸಿಕೊಳ್ರೋ ( ಎಂದು ಚೂ ಬಿಡುತ್ತಾನೆ. ನಾಯಿಗಳು ವಿಕಾರವಾಗಿ ಬೊಗಳುತ್ತಾ  ವ್ಯಕ್ತಿಯ ಮೇಲೆಗರುತ್ತವೆ. ಒಂದೆರಡು ಸುತ್ತು ಅಟ್ಟಿಸಿಕೊಂಡು ಹೋಗುತ್ತವೆ. ವ್ಯಕ್ತಿ ಹೆದರಿ ಚಡ್ಡಿದಾರಿಯ ಬೆನ್ನ ಹಿಂದೆ ಅಡಗಿ ನಿಂತು )

 

ಗಣ್ಯವ್ಯಕ್ತಿ  : ಚೀ ದೂರ ಹೋಗಿ. ಅಯ್ತು, ನೀವು ಹೇಳಿದಂಗೆ ಕೇಳ್ತೇನೆ. ಮೊದಲು ಇವುಗಳನ್ನು ದೂರ ಕಳಿಸಿ.

 

ಚಡ್ಡಿದಾರಿ : (ನಾಯಿಗಳ ಬೆಲ್ಟ್ ಹಿಡಿದು ) ಹಾಂ ಹಂಗ್ ಬನ್ನಿ ದಾರಿಗೆ. ನಮ್ಮ ಟ್ರೇನ್ಡ್ ಶ್ವಾನಗಳು ಎಂತೆಂಥವರನ್ನೇ ಹೆದರಿಸಿವೆ ಇನ್ನು ನೀವ್ಯಾವ ಲೆಕ್ಕನಡೀರಿ ಒಳಗೆ. ಅಲ್ಲಿದೆ ಶುದ್ದೀಕರಣ ಮಾಡುವ ಮಾಡರ್ನ ಕಮಲ ವಾಷಿಂಗ್ ಮಷಿನ್. ಹೋಗಿ ಅದರಲ್ಲಿ ಕೂತುಕೊಳ್ಳಿ. ನಾನು ಸ್ವಿಚ್ ಆನ್ ಮಾಡುವೆ. ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಸರ್ವಾಂಗಗಳೂ ಶುದ್ದೀಕರಣಗೊಂಡು ಪವಿತ್ರವಾಗ್ತೀರಾ? ಹೋಗಿ ಹೋಗಿ ನಾಯಿಗಳು ಮೊದಲೇ ಹಸಿದಿವೆ.

 

( ಗಣ್ಯವ್ಯಕ್ತಿ ಒಳಗೆ ಹೋಗುತ್ತಾನೆ.) 

 

ಚಡ್ಡಿದಾರಿ : ( ಮತ್ತೆ ಜಾಹಿರಾತಿನ ಹಾಡು. ಆಮೇಲೆ ಮೈಕ್ ಹಿಡಿದು) ಬನ್ನಿ ಅಣ್ಣಾ, ಬನ್ನಿ ತಮ್ಮಾ. ನಿಮ್ಮ ಕಳಂಕಗಳನ್ನೆಲ್ಲಾ ನಿವಾರಿಸಿ ಶುದ್ದೀಕರಣ ಮಾಡುವ ಮಷಿನ್ ನಮ್ಮಲ್ಲಿದೆ. ಇಂದೇ ಇದರ ಪ್ರಯೋಜನ ಪಡೆಯಿರಿ,

 

( ವ್ಯಕ್ತಿ ಶುಭ್ರವಾದ ವಸ್ತ್ರ ದಾರಿಯಾಗಿ ಹೊರಗೆ ಬರುತ್ತಾನೆ)

 

ಚಡ್ಡಿದಾರಿ : ಹಾಂ ನೋಡಿದ್ರಾ. ಎಷ್ಟೊಂದು ಶುಭ್ರವಾಗಿ ಲಕಲಕ ಅಂತಾ ಹೊಳೀತಾ ಇದ್ದೀರಿ. ಈಗ ನಿಮಗೆ ಕಮಲ ಬ್ರ್ಯಾಂಡ್ ಕಳೆ ಬಂತು. ಕೇಸರಿ ಶಾಲು ಹಾಕಿಕೊಳ್ಳಿ. ವಾರೆವ್ವಾ.. 

 

( ಆಗ ವ್ಯಕ್ತಿಯ ಬಳಿ ಬಾಲ ಅಲ್ಲಾಡಿಸುತ್ತಾ ಮೂರೂ ನಾಯಿಗಳು ಬರುತ್ತವೆ

 

ಗಣ್ಯವ್ಯಕ್ತಿ  :  (ಹೆದರುತ್ತಾ) ಅಯ್ಯೋ ಇವು ಮತ್ತೆ ಬಂದಿವೆ. ಹಿಡ್ಕೊಳ್ಳಿ, ದೂರ ಕರ್ಕೊಳ್ಳಿ.

 

ಚಡ್ಡಿದಾರಿ : ಏನೂ ಭಯಪಡಬೇಡಿ. ಶುದ್ದವಾಗಿರುವವರ ಕಂಡರೆ ಇವುಗಳಿಗೆ ಪ್ರೀತಿ ಜಾಸ್ತಿ. ಅವು ಈಗ ನಿಮಗೇನೂ ಮಾಡೋದಿಲ್ಲ. ಡೋಂಟ್ ವರಿ, ಬೀ ಹ್ಯಾಪಿ.. ನೋ ಬಿಪಿ..

 

ಗಣ್ಯವ್ಯಕ್ತಿ  :  ನಾನಿನ್ನು ಹೋಗಬಹುದಾ?

 

ಚಡ್ಡಿದಾರಿ : ಅಯ್ಯೋ ಅದೆಂಗಾಗುತ್ತೆ. ಇನ್ಮೇಲೆ ಹಾಗೆಲ್ಲಾ ಎಲ್ಲೂ ಹೋಗುವಂತಿಲ್ಲಾ. ಅಲ್ಲಿ ಕಾಣುತ್ತಲ್ಲಾ ಅದು ನಮ್ಮ ಟ್ರೇನಿಂಗ್ ಸೆಂಟರ್. ಅಲ್ಲಿ ನಿಮಗೆ ದೀಕ್ಷೆ ಕೊಡಲಾಗುತ್ತದೆ. ಯಾರನ್ನು ದೂಷಿಸಬೇಕು, ಯಾರನ್ನು ದ್ವೇಷಿಸಬೇಕು ಅನ್ನುವ ಕುರಿತು ತರಬೇತಿ ಕೊಡಲಾಗುತ್ತದೆ. ಈಗ ನೀವು ಅಲ್ಲಿ ಹೋಗಬೇಕು. ನಾವು ಹೇಳಿದಂತೆ ಕೇಳಬೇಕು.

 

ಗಣ್ಯವ್ಯಕ್ತಿ  :  ನಾನೀಗ ಶುದ್ದೀಕರಣಗೊಂಡಿದ್ದೇನಲ್ಲಾ. ನೀವು ಹೇಳಿದ್ದನ್ನು ವಿರೋಧಿಸಲೂಬಹುದಲ್ಲಾ.

 

ಚಡ್ಡಿದಾರಿ : ಹೋ ವಿರೋಧಿಸಬಹುದು, ದಿಕ್ಕರಿಸಬಹುದು. ಆದರೆ ನಾವು ಮತ್ತೆ ನಿಮ್ಮ ಮೇಲೆ ಕೊಚ್ಚೆ ಹಾಕಿಸಿ, ಕಳಂಕ ಮೆತ್ತಿಸಿ ನಮ್ಮ ನಾಯಿಗಳನ್ನು ಚೂ ಬಿಡುತ್ತೇವೆ. ಆಗಬಹುದಾ?

 

ಗಣ್ಯವ್ಯಕ್ತಿ  :  ಅಯ್ಯೋ ಅದೆಲ್ಲಾ ಬೇಕಾಗಿಲ್ಲ. ನಿಮ್ಮ ತರಬೇತಿ ಶಿಬಿರಕ್ಕೆ ಹೋಗುತ್ತೇನೆ. ( ಎನ್ನುತ್ತಾ ಹೋಗುವನು. ಇತ್ತ ಮತ್ತೆ ಮೈಕ್ ಹಿಡಿದ ಚಡ್ಡಿದಾರಿಯು)

 

ಚಡ್ಡಿದಾರಿ : ಬನ್ನಿ ಅಣ್ತಮ್ಮಾ ಬೇಗ ಬನ್ನಿ, ಬನ್ನಿ . ನಿಮ್ಮ ಮೈ ಮುಖಕ್ಕೆ ಅಂಟಿದ ಭ್ರಷ್ಟಾಚಾರದ ಕಳಂಕಗಳನ್ನೆಲ್ಲಾ ನಿವಾರಿಸಿ ಶುದ್ದೀಕರಣ ಮಾಡುವ ಮಷಿನ್ ನಮ್ಮಲ್ಲಿದೆ. ಇಂದೇ ಇದರ ಪ್ರಯೋಜನ ಪಡೆಯಿರಿ. ಮರೆಯದಿರಿ, ಮರೆತು ಮರುಗದಿರಿ.

 

(ರಿಕಾರ್ಡೆಡ್ ಹಾಡು ಪ್ಲೇ ಮಾಡುತ್ತಾನೆ)

 

ವಾಷಿಂಗ್ ಮಷಿನ್ ಕಮಲ

ವಾಷಿಂಗ್ ಮಷಿನ್ ಕಮಲ

ಕಳಂಕವೆಲ್ಲಾ ಕಳೆದು ಶುದ್ದಮಾಡುವ ಯಂತ್ರ

ಭ್ರಷ್ಟತೆಯಲ್ಲಾ ತೊಳೆದು ಪವಿತ್ರ ಮಾಡುವ ತಂತ್ರ

ವಾಷಿಂಗ್ ಮಷಿನ್ ಕಮಲ

 

( ನಾಯಿಗಳು ಬೊಗಳಲು ಶುರುಮಾಡುತ್ತವೆ)

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ