ಹಾವು ಏಣಿ ಆಟ (ಪ್ರಹಸನ -35)
(ಪ್ರಹಸನ -35)
ಹಾವು ಏಣಿ ಆಟ
***********************
(ಅಧಿವೇಶನ ನಡೀತಾ ಇದೆ. ಹಾವಾಡಿಗನೊಬ್ಬ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಇನ್ನೊಂದು ಕೈಯಲ್ಲಿ ಪುಂಗಿ ಹಿಡಿದು ಬಾರಿಸಿದ ನಂತರ)
ಹಾವಾಡಿಗ : ನೋಡಿ ಬ್ರದರ್ಸ್, ಇಲ್ನೋಡಿ ಸಿಸ್ಟರ್ಸ್. ನನ್ನ ಹಾವಿನಾಟ ನೋಡಿ. ಭ್ರಷ್ಟತೆಯ ಕಥೆ ಹೇಳುವೆ ಕೇಳಿ.
ಸಭಾದ್ಯಕ್ಷ : ಆಯಿತು ಅದೇನು ಹೇಳ್ತಿರೋ ಹೇಳಿ ಸ್ವಾಮಿ.
ಹಾವಾಡಿಗ : ( ಲಯಬದ್ದವಾಗಿ ಪುಂಗಿಯೂದಿ) ಹೇಳುವುದಕ್ಕೂ ಕೇಳುವುದಕ್ಕೂ ಇದೇ ಸರಿಯಾದ ಸಮಯ. ಯಾರೇನೇ ಹೇಳಲಿ ಹೇಳಬೇಕಾದ್ದನ್ನು ಹೇಳಿಯೇ ತೀರುವೆ. ಎದುರಾಡಿದವರ ಜಾತಕ ಬಿಚ್ಚಿಡುವೆ.
ಆಳುವ ಪಕ್ಷದ ನಾಯಕ (ಆಪನಾ): ಆಯ್ತು ಅದೇನು ಮಾಡ್ರೀರೋ ಮಾಡಿ.
ಹಾವಾಡಿಗ : ಮಾಡ್ತೇನೆ, ಬಿಚ್ಚಿಡ್ತೇನೆ. ಬ್ರಹ್ಮಾಂಡ ಭ್ರಷ್ಟಾಚಾರದ ಬಂಡವಾಳ ಬಿಚ್ಚಿ ತೋರಿಸ್ತೇನೆ.
ವಿರೋಧ ಪಕ್ಷದ ನಾಯಕ (ವಿಪನಾ): ನಾನು ಈ ಪುಂಗಿದಾಸಯ್ಯನನ್ನು ಸಂಪೂರ್ಣವಾಗಿ ಬೆಂಬಲಿಸ್ತೇನೆ.
ಹಾವಾಡಿಗ : ನೋಡಿ ಬ್ರದರ್ಸ್, ಈ ಆಳುವ ಪಕ್ಷದ ಭ್ರಷ್ಟಾಚಾರದ ಗುಟ್ಟು ಈ ನನ್ನ ಬುಟ್ಟಿಯಲ್ಲಿದೆ.
ಬಿಡ್ತೇನೇ ಬುಟ್ಟಿ ತೆರೆದು ಹೊರಗೆ ಬಿಡ್ತೇನೆ.
ಆಪನಾ : ಸರಿ ಅದೇನು ಬಿಡ್ತಿರೋ ಈಗಲೇ ಬಿಡಿ, ಇಲ್ಲಿಯೇ ಬಿಡಿ. ಭ್ರಷ್ಟತೆಯ ಆರೋಪಕ್ಕೆ ಸಾಕ್ಷಿ ಕೊಡಿ.
ಹಾವಾಡಿಗ : ಸಾಕ್ಷಿ ಬೇಕಾ ನಿಮಗೆ ಸಾಕ್ಷಿ. ಇದೆ, ಈ ಬುಟ್ಟಿಯಲ್ಲಿ ಎಲ್ಲಾ ಇದೆ.
ಆಪನಾ : ಆಯ್ತು, ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸ್ತೇವೆ. ತಪ್ಪಿತಸ್ತರಿದ್ದರೆ ಶಿಕ್ಷೆ ಕೊಡಿಸ್ತೇವೆ.
ಹಾವಾಡಿಗ : ನೋಡಿ, ನನ್ನ ರೇಗಿಸಬೇಡಿ. ( ಬುಟ್ಟಿ ಎತ್ತಿ ತೋರಿಸುತ್ತಾ) ಜಾಸ್ತಿ ಮಾತಾಡಿದ್ರೆ ಬುಟ್ಟಿ ಮುಚ್ಚಳ ತೆರೆದು ಬಿಡ್ತೀನಿ. ಒಳಗೆ ಎಂತೆಂಥಾ ಹಾವುಗಳಿವೆ ಗೊತ್ತಾ?
ವಿಪನಾ : ಹೌದೌದು, ವಿಷದ ಹಾವುಗಳಿವೆ ಹುಷಾರು. ಹೊರಗೆ ಬಂದ್ರೆ ಅವು ಸಾಕ್ಷಿ ಪುರಾವೆ ಎಲ್ಲಾ ಹೇಳ್ತಾವೆ.
ಆಪನಾ: ಆಯ್ತು. ಹಾವು ಹೊರಗೆ ಬರಲಿ. ಸಾಕ್ಷಿ ಹೇಳಲಿ. ನಾವು ತನಿಖೆ ಮಾಡಿಸ್ತೀವಿ.
ಹಾವಾಡಿಗ : ನಾನ್ಯಾಕೆ ನನ್ನ ಬುಟ್ಟಿ ಬಿಚ್ಚಲಿ. ಸಮಯ ಬಂದಾಗ ಬಿಚ್ಚಿ ತೋರಿಸ್ತೇನೆ. ಈಗ ಸಾಕ್ಷಿ ಪುರಾವೆ ಇದೆ ಅಂತಾ ಹೇಳ್ತೇನೆ. ನಾನು ಪುರಾವೆ ಇಲ್ಲದೇ ಮಾತಾಡೋದಿಲ್ಲಾ ಗೊತ್ತಾಯ್ತಾ.
ಆಪನಾ : ಬರೀ ಬಾಯಲ್ಲಿ ಆರೋಪ ಮಾಡಿದ್ರೆ ಹೆಂಗೆ. ಪುರಾವೆ ಕೊಡಿ.
ಹಾವಾಡಿಗ : ನಾನ್ಯಾಕೆ ಕೊಡಲಿ ಪುರಾವೆ. ನೀವು ತನಿಖೆ ಮಾಡಿಸಿ, ಸತ್ಯ ಏನು ಅಂತಾ ಹೊರಗೆ ಬರುತ್ತೆ.
ವಿಪನಾ : ಹೌದೌದು, ಹೊರಗೆ ಬರುತ್ತೆ, ಬರಲೇಬೇಕು. ಇದು ಭ್ರಷ್ಟ ಸರಕಾರ, ವಚನಭ್ರಷ್ಟ ಸರಕಾರ. ನಾವು ಇದನ್ನು ಖಂಡಿಸ್ತೇವೆ. ತನಿಖೆ ಆಗಲೇ ಬೇಕು.
ಆಪನಾ : ಯಾವುದೇ ಆಧಾರ ಪುರಾವೆ ಇಲ್ಲದೇ ಹೆಂಗೆ ತನಿಖೆ ಮಾಡಿಸೋದು?
ಹಾವಾಡಿಗ : ಆಹಾ.. ಈ ಹಿಂದೆ ನೀವು ಆರೋಪ ಮಾಡಿದಾಗ ಸಾಕ್ಷಿ ಕೊಟ್ಟಿದ್ರಾ. ನಾನ್ಯಾಕೆ ಕೊಡಬೇಕು ಸಾಕ್ಷಿ. ನಾನು ಕೊಡೋದಿಲ್ಲಾ ಅಂದರೆ ಕೊಡೋದಿಲ್ಲ. ನೀವು ತನಿಖೆ ಮಾಡಿಸದೇ ಇದ್ದರೆ ನಾನು ಇಲ್ಲೇ ನನ್ನ ಹಾವುಗಳ ಜೊತೆ ಅಹೋರಾತ್ರಿ ಧರಣಿ ಮಾಡ್ತೇನೆ. ( ಎಂದು ಹಾವಿನ ಬುಟ್ಟಿಯನ್ನು ತಲೆದಿಂಬು ಮಾಡಿಕೊಂಡು ಮಲಗ್ತಾನೆ)
ಸಭಾಧ್ಯಕ್ಷ : ಏನ್ರಿ ಇದು ಹಾವಿನಾಟ. ಅದೇನಿದೆ ಅದರಲ್ಲಿ ಹೊರಗೆ ಬಿಡ್ರಿ ನಾವೂ ನೋಡ್ತೇವೆ?
ಹಾವಾಡಿಗ : ಸಭಾಧ್ಯಕ್ಷರೂ ಆಳುವ ಪಕ್ಷದ ಜೊತೆ ಶಾಮೀಲಾಗಿದ್ದಾರೆ ನೋಡಿ ಬ್ರದರ್ಸ್ ಆಂಡ್ ಸಿಸ್ಟರ್ಸ್. ತನಿಖೆ ಮಾಡಿ ಅಂದ್ರೆ ಹಾವು ಬಿಡಿ ಅಂತಾರೆ. ನನ್ನ ಹಾವು ನಾ ಬಿಡೋದಿಲ್ಲ. ಬುಟ್ಟಿ ಮುಚ್ಚಳ ತೆಗೆಯೋದಿಲ್ಲ.
ವಿಪನಾ : ಹೌದೌದು, ಅವರೇಕೆ ಹಾವು ಬಿಡಬೇಕು. ತನಿಖೆ ಆಗಬೇಕು ತನಿಖೆ. ನಮ್ಮ ಬೆಂಬಲ ಪುಂಗಿದಾಸಯ್ಯನಿಗೆ.
ಹಾವಾಡಿಗ : ನಾನು ನನ್ನ ಸರ್ವಿಸಲ್ಲಿ ಎಂತೆಂಥಾ ಹಾವು ಹಿಡಿದಿದ್ದೇನೆ. ನನ್ನ ವಿರುದ್ದ ಮಾತಾಡಿದವರಿಗೆ ಹಾವು ತೋರಿಸಿ ಹೆದರಿಸಿದ್ದೇನೆ. ಇನ್ನು ನಿಮ್ಮನ್ನ ಬಿಡ್ತೀನಾ? ಎಂದು ಪುಂಗಿ ಊದುತ್ತಾ ನಾಗಿನಿ ಡಾನ್ಸ್ ಮಾಡತೊಡಗುತ್ತಾನೆ.
ವಿಪನಾ : ಹಾಂ, ಈಗ ಹಾವು ಎಚ್ಚರವಾಗುತ್ತೆ,
ಬುಸುಗುಡುತ್ತೆ, ಸಿಟ್ಟಿಗೇಳುತ್ತೆ.
ಬುಟ್ಟಿಯಿಂದಾ ಹೊರಗೆ ಬರುತ್ತೆ... ನೋಡ್ತಾ ಇರಿ.. ಕಾಯ್ತಾ ಇರಿ.. ಬಂತು ಬಂತು..
ಹಾವಾಡಿಗ : ( ಪುಂಗಿ ಡಾನ್ಸ್ ನಿಲ್ಲಿಸಿ) ಹಾಂ.. ಅಷ್ಟು ಸುಲಬಕ್ಕೆ ನನ್ನ ಹಾವನ್ನ ನಾನು ಹೊರಗೆ ಬಿಟ್ಟು ಬಿಡ್ತೀನಾ? ಸಾಧ್ಯವೇ ಇಲ್ಲಾ. ಸಮಯ ಬರೋವರೆಗೂ ನನ್ನ ಸಾಕ್ಷಿ ನನ್ನತ್ರಾನೇ ಇರಲಿ. ಭ್ರಷ್ಟಾಚಾರದ ತನಿಖೆ ಆಗಲಿ ತನಿಖೆ.
ವಿಪನಾ : ಹೌದು ಮೊದಲು ತನಿಖೆ ಆಗಲೇಬೇಕು ತನಿಖೆ. ಭ್ರಷ್ಟ ಸರಕಾರಕ್ಕೆ ದಿಕ್ಕಾರ. ವಚನಭ್ರಷ್ಟ ಸರಕಾರಕ್ಕೆ ದಿಕ್ಕಾರ.
ಆಪನಾ : ( ಒಂದು ಬದಿಯಲ್ಲಿ ಬುಟ್ಟಿ ಹಿಡಿದು ಎಳೆಯುತ್ತಾ) ಸಾಕ್ಷಿ ಕೊಡಿ ಸಾಕ್ಷಿ ( ಆತನ ಸಪೋರ್ಟಿಗೆ ಕೆಲವರು ಬರುತ್ತಾರೆ)
ಹಾವಾಡಿಗ : (ಇನ್ನೊಂದು ಕಡೆ ಬುಟ್ಟಿ ಬಿಗಿಯಾಗಿ ಹಿಡಿಯುತ್ತಾನೆ, ಆತನ ಸೊಂಟ ಹಿಡಿದು ವಿರೋಧಪಕ್ಷದ ನಾಯಕರುಗಳು ಇತ್ತ ಎಳೆಯುತ್ತಾರೆ) ನಾ ಕೊಡೋದಿಲ್ಲಾ.
ಆಪನಾ : ನಾವು ಬಿಡಾಕಿಲ್ಲ..
ವಿಪನಾ : ನಾವು ಕೊಡಾಕಿಲ್ಲ.
ಆಪನಾ : ನಾವು ಬಿಡಾಕಿಲ್ಲ..
( ಇದೇ ರೀತಿ ನಾಲ್ಕಾರು ರೌಂಡ್ ಕಸರತ್ತು ನಡೆಯುತ್ತದೆ. ಅಷ್ಟರಲ್ಲಿ ಬೇಸರಗೊಂಡ ಸಭಾಧ್ಯಕ್ಷರು)
ಸಭಾಧ್ಯಕ್ಷ : ಅವರು ಕೊಡೋದಿಲ್ಲ, ಇವರು ಬಿಡೋದಿಲ್ಲಾ. ಹೀಗಾದ್ರೆ ಹಗ್ಗ ಹರಿಯೋದಿಲ್ಲ ಹಾವೂ ಸಾಯೋದಿಲ್ಲ.
ಹಾವಾಡಿಗ : ನನ್ನ ಹಾವಿನ ಬಗ್ಗೆ ಹೀಗೆಲ್ಲಾ ಕ್ಷುಲ್ಲಕವಾಗಿ ಮಾತಾಡಿದ್ರೆ ನಾನು ಸುಮ್ಮನಿರೋದಿಲ್ಲ. ಹಾವುಗಳ ಜೊತೆಗೆ ಇಲ್ಲೇ ಮಲಗಿ ಅಹೋರಾತ್ರಿ ಧರಣಿ ಮಾಡ್ತೇನೆ.
ಸಭಾಧ್ಯಕ್ಷ : ಏನಾದರೂ ಮಾಡ್ಕೊಳ್ಳಿ. ನಾನು ಇವತ್ತಿನ ಕಲಾಪವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ. ( ಎಂದು ಹೇಳಿ ಪೀಠದಿಂದ ಎದ್ದು ಹೊರಡುತ್ತಾರೆ,
ಅವರ ಹಿಂದೇನೇ ಆಳುವ ಪಕ್ಷದವರೂ ಹೊರಡುತ್ತಾರೆ)
ವಿಪನಾ : ಇವತ್ತಿನ ಹಾವುಏಣಿ ಆಟ ಎಷ್ಟು ಪಸಂದಾಗಿತ್ತಲ್ವಾ?
ಹಾವಾಡಿಗ : ನೋಡಿದ್ರಾ ನಾನೊಬ್ಬನೇ ಅವರಿಗೆ ಹೆಂಗೆ ಚಳ್ಳೆಹಣ್ಣು ತಿನ್ನಿಸಿದೆ.
ವಿಪನಾ : ನೀವು ಬಿಡಿ. ಪುಂಗಿ ಊದೋದರಲ್ಲಿ, ಹಾವು ಬಿಡೋದರಲ್ಲಿ ನಿಸ್ಸೀಮರು.
ಹಾವಾಡಿಗ : ನಾನು ಯಾರ ತಂಟೆಗೂ ಹೋಗೋದಿಲ್ಲ. ನನ್ನ ತಂಟೆಗೆ ಬಂದ್ರೆ ನನ್ನ ಹಾವು ಸುಮ್ಮನಿರೋದಿಲ್ಲ.
ವಿಪನಾ : ನಮಗೂ ನಿಮಗೂ ಈಡು ಜೋಡಿ ಸರಿಯಾಗಿರುತ್ತೆ ಅಲ್ವಾ. ನಾವು ಒಂದಾಗೋಣ, ಅವರು ಸುಸೂತ್ರವಾಗಿ ಆಡಳಿತ ನಡೆಸದ ಹಾಗೆ ನೋಡಿಕೊಳ್ಳೋಣ.
ಹಾವಾಡಿಗ : ಆಯ್ತು ಬ್ರದರ್, ಹಿಡ್ಕೊಳ್ಳಿ ಈ ಬುಟ್ಟಿ. ನನ್ನತ್ರಾನೆ ಇರಲಿ ಈ ಪುಂಗಿ.
ವಿಪನಾ: ( ಹೆದರಿಕೆಯಿಂದಾ)
ನೀವೇ ಹಿಡ್ಕೊಳ್ರಿ. ಹಾವು ಹೊರಗೆ ಬಂದ್ರೆ..
ಹಾವಾಡಿಗ : (ಬುಟ್ಟಿ ಮುಚ್ಚಳ ಬಿಚ್ಚಿ ತೋರಿಸುತ್ತಾ) ಹಾವಾ, ಎಲ್ಲಿದೆ ಹಾವು.
ವಿಪನಾ : ಅರೆ ಬುಟ್ಟಿ ಖಾಲಿ ಇದೆ. ಹಾವು ಎಲ್ಲೊಯ್ತು?
ಹಾವಾಡಿಗ : ಹಾವನ್ನ ಆಳುವ ಪಕ್ಷದವರ ತಲೇಲಿ ಬಿಟ್ಟಿರುವೆ. ಅವರು ನನ್ನತ್ರ ಯಾವ ಸಾಕ್ಷಿ ಪುರಾವೆ ಇರಬೋದು ಅಂತಾ ರಾತ್ರಿ ನಿದ್ದೆಗೆಟ್ಟು ಯೋಚಿಸ್ತಾರೆ. ಹಾವನ್ನ ಟಿವಿ ಮಾಧ್ಯಮಗಳ ಮೆದುಳಲ್ಲೇ ಬಿಟ್ಟಿರುವೆ. ಅವರು ಇನ್ನು 24 ಗಂಟೆ ಹಾವು ಬುಟ್ಟಿ ತೋರಿಸುತ್ತಾ, ಸಾಕ್ಷಿ ಪುರಾವೆಗಳು ಏನೇನಿವೆ ಅಂತಾ ಕತೆ ಕಟ್ತಾನೇ ಇರ್ತಾರೆ. ಉಳಿದ ಹಾವುಗಳನ್ನ ಜನರ ಮೆದುಳಲ್ಲೇ ಬಿಟ್ಟಿರುವೆ. ಅವರೂ ಕುತೂಹಲದಿಂದ ಬುಟ್ಟಿಯಲ್ಲಿ ಎಂತೆಂಥಾ ಹಾವುಗಳಿರಬಹುದು ಅಂತಾ ತಲೆಕೆಡಿಸ್ಕೊಂಡು ಕಾಯ್ತಾ ಇರ್ತಾರೆ. ಇದೇ ಹಾವುಏಣಿ ಆಟ. ರಾಜಕೀಯದ ಚದುರಂಗದಾಟ.
ವಿಪನಾ : ಹೌದೌದು.. ಇದೇ ಅಸಲಿ ರಾಜಕೀಯ. ಗಾಳಿಯಲ್ಲಿ ಗುಂಡು ಹೊಡೆಯೋದನ್ನ, ಕತ್ತಲಲ್ಲಿ ನಿಂತು ಕಲ್ಲು ಹೊಡೆಯೋದನ್ನ, ಹಾವೇ ಇಲ್ಲದೇ ಪುಂಗೋದನ್ನ ನಾವೂ ನಿಮ್ಮಿಂದಾ ಕಲೀಬೇಕಿದೆ. ಈ ವಿದ್ಯೆಯಲ್ಲಿ ನೀವೇ ನಮಗೆಲ್ಲಾ ಗುರು. ಹಾವೇ ಇಲ್ಲದೇ ಹಾವಾಡಿಸೋ ಗುರು. ಈ ಬುಟ್ಟಿ ಏನು ಮಾಡೋದು.
ಹಾವಾಡಿಗ : ಹೇ.. ಅದು ಹಾಗೇ ಇರಲಿ. ಮತ್ತೆ ನಾಳೆ ಅಧಿವೇಶನದಲ್ಲಿ ಹಾವು ಬಿಡೋಕೆ ಬೇಕಾಗುತ್ತೆ. ( ಎನ್ನುತ್ತಾ ಬುಟ್ಟಿ ಎತ್ತಿಕೊಂಡು ಮುಚ್ಚಳ ಮುಚ್ಚುತ್ತಾ ಪುಂಗಿ ಊದುತ್ತಾನೆ. ಉಳಿದವರೆಲ್ಲಾ ಹಾಡುತ್ತಾ ವೃತ್ತಾಕಾರವಾಗಿ ನಾಗಿನ್ ಡಾನ್ಸ್ ಮಾಡತೊಡಗುತ್ತಾರೆ)
ನಾಗರಹಾವೇ ಹಾವೊಳು ಹೂವೇ
ಬುಟ್ಟಿಯ ಒಳಗೆ ನಿನ್ನಯ ತಾವೆ.
ಕೈಯನು ಮುಗಿವೆ, ಹಾಲನೀವೆ
ಇರು ನೀ ಬುಟ್ಟಿಯ ಒಳಗೆ
ಎಂದೂ ಬರದಿರು ಹೊರಗೆ..
- ಶಶಿಕಾಂತ
( ಜುಲೈ 5 ರಿಂದ 14 ರ ವರೆಗೆ ಕರ್ನಾಟಕ್ ವಿಧಾನಸಭೆಯ ಅಧಿವೇಶನದಲ್ಲಿ 6-7-23 ರಂದು ಕುಮಾರಸ್ವಾಮಿಯವರು ಸದನದಲ್ಲಿ ಪೆನ್ ಡ್ರೈವ್ ತೋರಿಸಿ ಕಾಂಗ್ರೆಸ್ ಸರಕಾರ ವರ್ಗಾವಣೆಯಲ್ಲಿ ಲಂಚ ಪಡೆಯುತ್ತಿದ್ದು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ನಾಯಕರು ಬೆಂಬಲಿಸಿದರು. ಸಾಕ್ಷಿ ಕೊಟ್ಟರೆ ತನಿಖೆ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಕೇಳಿದರು. ಸಮಯ ಬಂದಾಗ ಸಾಕ್ಷಿ ಕೊಡುವೆ ಎಂದು ಕುಮಾರಸ್ವಾಮಿಯವರು ಹಾರಿಕೆ ಉತ್ತರ ನೀಡಿದರು. ಈ ವಿಷಯವನ್ನು ಇಟ್ಟುಕೊಂಡು ಈ ಪ್ರಹಸನ ರಚಿಸಲಾಗಿದೆ.)
Comments
Post a Comment