ಸಮಾನ ಸಂಹಿತೆ ಸಂಕಷ್ಟ (ಪ್ರಹಸನ-36 )

 (ಪ್ರಹಸನ-36 )

ಸಮಾನ ಸಂಹಿತೆ ಸಂಕಷ್ಟ 

************************************

 

(ದ್ಯಾಮ ಚೆಂದಾಗಿರೋ ಪ್ಯಾಂಟು ಮೇಲೊಂದು ಬಣ್ಣಬಣ್ಣದ ಅಂಗಿ ತೊಟ್ಟು ಪಾಲಿಶ್ ಹಾಕಿದ ಬೂಟು ಹಾಕಿಕೊಂಡು ಕತ್ತಿಗೆ ಕೇಸರಿ ಶಾಲು ಸುತ್ತಿಗೊಂಡು ಹೆಮ್ಮೆಯಿಂದಾ ದ್ಯಾಮವ್ವನ ಗುಡಿ ಕಟ್ಟಿಗೆ ಬಂದು ನಿಂತ.)

 

ಚೀರ : ಏನ್ಲಾ ದ್ಯಾಮಾ ಏನಿದು ಹೊಸಾ ವೇಸಾ. ಕೂಲಿ ಕೆಲಸಕ್ಕೆ ಹೋಗಿಲ್ವೇನ್ಲಾ.

 

ದ್ಯಾಮ : ಇನ್ಮೇಲಾದ್ರೂ ಸ್ವಲ್ಪ ಮೇಲ್ಜಾತಿಯವರ ಹಾಗೆ ಟಿಪ್ ಟಾಪ್ ಆಗಿ ಕಾಣೋ ಹಾಗೆ ಇರ್ಬೇಕಲಾ ಚೀರಾ.

 

ಈರಜ್ಜ : ಅದೇಕಂಗೆ. ಏನಾಯ್ತಲಾ ನಿಂಗೆ ಹಿಂಗೆ ಇದ್ದಕ್ಕಿದ್ದಂಗೆ.

 

ದ್ಯಾಮ : ಸ್ವಲ್ಪ ಅಪ್ಡೇಟ್ ಆಗ್ರಪ್ಪಾ. ಕಾಲ ಬದಲಾಗ್ತಿದೆ. ಮೋದಿ ಸಾಹೇಬರು ಹೊಸ ಕಾನೂನು ತರ್ತಾ ಇದ್ದಾರೆ. ನಾವೂ ಅದಕ್ಕೆ ತಕ್ಕಂಗೆ ಬದಲಾಗಬೇಕಲ್ವಾ.

 

ಚೀರ : ಅದೇನ್ಲಾ ಅದು ಅಂತಾ ಕಾನೂನು. ನಿನ್ನೆ ಮೊನ್ನೆವರೆಗೂ ಮೋದಿ ಹಿಂದುತ್ವವಾದಿ, ಜಾತಿವಾದಿ ಅಂತೆಲ್ಲಾ ಬೈಕೊಂಡು ಅಂಡಲೀತಾ ಇದ್ದೆ.

 

ದ್ಯಾಮ : ಇದ್ದೆ, ಈಗಿಲ್ಲಾ. ಯಾಕೆಂದ್ರೆ ಎಲ್ಲರೂ ಸಮಾನ ಅನ್ನೋ ಸಂಹಿತೆ ತರ್ತಾ ಇದ್ದಾರೆ

 

ಈರಜ್ಜ : ಏನ್ಲಾ ಬಡ್ಡೆತ್ತದೆ, ಏನು ಹಂಗಂದ್ರ, ಬಿಡಿಸಿ ಬೊಗಳ್ಲಾ..

 

ದ್ಯಾಮ : ನೋಡಜ್ಜಾ ಇನ್ಮೇಲೆ ದೇಶದೊಳಗೆ ತಾರತಮ್ಯ ಅನ್ನೋದು ಇರೋದಿಲ್ಲಾಅದಕ್ಕೆ ಸಮಾನ ನಾಗರಿಕ ಸಂಹಿತೆ ಅಂದ್ರೆ ಏಕರೂಪ ನಾಗರಿಕ ಕಾಯಿದೆ ಅಂದ್ರೆ ಯುಸಿಸಿ ಅಂದ್ರೆ ಎಲ್ಲರೂ ಸಮಾನರು ಎನ್ನುವ ಕಾಯ್ದೆ ತರ್ತಿದ್ದಾರಂತೆ.

 

ಚೀರ : ಹೌದಾ. ಅಂದ್ರೆ ನಾವೂ ಬ್ರಾಹ್ಮಣರ ಬಾವಿಯಿಂದ ನೀರು ತರಬೋದು.

 

ದ್ಯಾಮ : ನೋ ಪ್ರಾಬ್ಲಂ

 

ಈರಜ್ಜ : ನಾವೂ ಎಲ್ಲಾ ಗುಡಿಯೊಳಗೂ ಹೆದರಿಕೆ ಇಲ್ಲದೇ ಹೋಗಬಹುದು.

 

ದ್ಯಾಮ : ಎಸ್, ಎಸ್ಸ್ ಹೋಗಬಹುದು.

 

ಕೊರಮ : ನಾನೂ ಮೇಲ್ಜಾತಿ ಹುಡಿಗೀನ ಲಗ್ನಾ ಆಗಬೋದು?

 

ದ್ಯಾಮ : ಹೋ ಬಿಂದಾಸಾಗಿ ಆಗಬಹುದು ಹುಡುಗಿ ಒಪ್ಪಿದ್ರೆ. ಯಾರೂ ಏನೂ ಅನ್ನೋಹಾಗಿಲ್ಲ. ಯಾಕೆಂದ್ರೆ ಎಲ್ಲರೂ ಸಮಾನರು.

 

ಕೊರಮ : ಆಹಾ ನಂಗೆ ಮದುವೆಯಂತೆ. ಬಟ್ರ ಹುಡುಗಿ ಕನ್ಯೆಯಂತೆ.. ಆಹಾ.. ನಂಗೆ ಮದುವೆಯಂತೆ. ಊರೆಲ್ಲ ಗುಲ್ಲಂತೆ ಟಾಂಟಾಂಟಾಂ

 

ಚೀರ : ನಾವೂ ಮೇಲ್ಜಾತಿಗರ ಹೋಟ್ಲಲ್ಲಿ ಕೂತು ತಿನ್ನಬೋದು.

 

ದ್ಯಾಮ : ಹೋ ಅದಕೇನಂತೆ, ತಿಂದು ತಟ್ಟೇಲಿ ಕೈತೊಳದು ಕಾಸು ಕೊಟ್ಟು ರಾಜನಂಗೆ ಬರಬೋದು

 

ಈರಜ್ಜ : ಹಿಂಗಂತಾ ಕನಸೇನಾರಾ ಬಿತ್ತಾ ದ್ಯಾಮಾ.

 

ದ್ಯಾಮ : ಕನಸಲ್ಲಾ ದಿಟಾನೆ ಈರಜ್ಜ. ಕಾನೂನು ಬಂದ್ರೆ ಎಲ್ಲರೂ ಸಮಾನರು. ಜಾತಿ ಧರ್ಮ ಬೇಧಭಾವ ಏನೂ ಇರಾಕಿಲ್ಲ

 

ಮೇಷ್ಟ್ರು : ಹೋಲ್ಡಾನ್, ಹೋಲ್ಡಾನ್. ಲೇ ದ್ಯಾಮ. ಯಾಕೆ ಅಮಾಯಕರಿಗೆ ಇಲ್ಲದ್ ಆಸೆ ತೋರ್ಸಿ ನಿರಾಸೆ ಮಾಡ್ತಿ.

 

ದ್ಯಾಮ : ನಿಮಗೊತ್ತಲ್ಲಾ ಮೇಷ್ಟ್ರೆ. ಯುಸಿಸಿ ಕಾಯಿದೆ ಬರುತ್ತೆ. ಎಲ್ಲರೂ ಸಮಾನರಾಗ್ತೀವಿ.

 

ಮೇಷ್ಟ್ರು : ಅಲ್ಲಲೇ ತಮ್ಮಾ ನೀ ಯಾವ ಭ್ರಮೆಯಲ್ಲಿದ್ದೀ. ದೇಶದ ರಾಷ್ಟ್ರಪತಿ ಯಾರು?

 

ದ್ಯಾಮ : ಅದೇ ದ್ರೌಪತಿ ಮುರ್ಮುರವರು , ನಾನೂ ಓದಿದ್ದೀನಿ, ನನಗಷ್ಟೂ ಗೊತ್ತಾಗಾಕಿಲ್ವಾ ಮೇಷ್ಟ್ರೆ?

 

ಮೇಷ್ಟ್ರು : ನಿನಗಷ್ಟೇ ಗೊತ್ತಿರೋದು. ಮುಂದಿನದನ್ನ ಕೇಳು. ಕಳೆದ ತಿಂಗಳು ಹೊಸ ಸಂಸತ್ ಭವನ ಉದ್ಘಾಟನೆಗೆ ಯಾಕೆ ರಾಷ್ಟ್ರಪತಿಗಳನ್ನ ಕರೀಲಿಲ್ಲಾ?

 

ದ್ಯಾಮ : ಗೊತ್ತಿಲ್ಲಾ.

 

ಮೇಷ್ಟ್ರು: ಯಾಕಂದ್ರೆ ಅವರು ಬುಡಕಟ್ಟಿನ ಕೆಳಜಾತಿಯವರು. ಮೇಲಾಗಿ ವಿಧವೆ. ಶುಭಕಾರ್ಯದಲ್ಲಿ ಅಂತವರು ಅಪಶಕುನ ಅಂತಾ ಕರೀಲಿಲ್ಲ. ಇಂತವರು ಸಮಾನ ನಾಗರಿಕ ಸಂವಿತೆ ತರ್ತಾರಾ?

 

ಚೀರ : ತರಾಕಿಲ್ಲಾ ಅಂತೀರಾ ಮೇಷ್ಟ್ರೆ

 

ಮೇಷ್ಟ್ರು: ಮಹಾತಾಯಿ ದ್ಯಾಮವ್ವನ ಆನೆಯಾಗೂ ತರೋದಿಲ್ಲ. ಹೋಗಲಿ ಪ್ರಸಿದ್ದ ಹಿಂದೂ ದೇವಸ್ಥಾನದ ಗುಡಿಯೊಳಗೆ ರೈಲು ಮಂತ್ರಿಗಳನ್ನ ಹೋಗಲು ಬಿಟ್ಟು ರಾಷ್ಟ್ರಪತಿಗಳನ್ನ ಹೊರಗೆ ದೂರ ನಿಲ್ಸಿದ್ರು ಯಾಕೆ

 

ಈರಜ್ಜ : ಅವರು ಕೆಳಜಾತಿಯವರು ಅಂತಾ ಅಲ್ವಾ ಮೇಷ್ಟ್ರೆ

 

ಮೇಷ್ಟ್ರು: ಹಾಂ. ಇಂತಾ ಕ್ರೂರ ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯೇ ಬಹಿಷ್ಕಾರಕ್ಕೊಳಗಾಗಿರುವಾಗ ಇನ್ನು ಏಕರೂಪದ ಕಾಯಿದೆ ತರ್ತಾರಾ?

 

ದ್ಯಾಮ : ಅಂದ್ರೆ ತರೋದಿಲ್ಲ ಅಂತೀರಾ? ಹಾಗಾದರೆ ತರ್ತಾ ಇರೋದಾದರೂ ಏನು ಮೇಷ್ಟ್ರೆ..

 

ಮೇಷ್ಟ್ರು: ಅದು ಧಾರ್ಮಿಕ ಅಲ್ಪಸಂಖ್ಯಾತರ ದಮನಕ್ಕೆ ಹಾಗೂ ಬಹುಸಂಖ್ಯಾತರ  ಮನಗೆಲ್ಲೋಕೆ ಮಾಡುವ ಚನಾವಣಾ ಪೂರ್ವ ತಂತ್ರಗಾರಿಕೆ ಅಷ್ಟೇ ದ್ಯಾಮಾ? ಯಾಕಂದ್ರೆ ಲೋಕಸಭೆ ಚುನಾವಣೆ ಹತ್ರಾ ಬರ್ತಿದೆಯಲ್ಲಾ ಅದಕ್ಕೆ.

 

ಚೀರ : ನನಗೇನೂ ಅರ್ಥ ಆಗ್ತಿಲ್ಲಾ ಮೇಷ್ಟ್ರೆ.

 

ಮೇಷ್ಟ್ರು: ನೋಡು ಚೀರಾ. ಈಗ ಸಾಬರ ಧರ್ಮದೊಳಗ ಎಷ್ಟು ಮದುವೆ ಆಗಬೋದು?

 

ಕೊರಮ : ಎಷ್ಟು ಬೇಕಾದ್ರೂ ಆಗಬಹುದು. ನಸೀಬು ನಮಗಿಲ್ವೆ?

 

ಈರಜ್ಜ : ಅಲ್ಲಲೇ ಇರೊ ಒಬ್ಬ ಹೆಂಡತೀನೇ ಸಾಕೋದಕ್ಕೆ ನಿಂಗೆ ಯೋಗ್ಯತೆ ಇಲ್ಲಾ, ಇನ್ನು ನಾಲ್ಲಾರು ಬೇಕೇನ್ಲಾ. ಸರಿ ಅತ್ಲಾಗೆ. ನೀವ್ ಹೇಳಿ ಮೇಷ್ಟ್ರೆ..

 

ಮೇಷ್ಟ್ರು: ಹಿಂದೂ ಧರ್ಮದವರು ಒಂದೇ ಮದುವೆ ಆಗೋದರಿಂದಾ ಸಾಬರೂ ಒಂದೇ ಲಗ್ನ ಆಗಬೇಕು ಅಂತಾ ಕಾನೂನಲ್ಲಿ ಹೇಳ್ತಾರೆ

 

ಸುಲೇಮಾನ : ಅರೆ ಇಸ್ಕಿ. ನಮ್ಮದು ಚಾರ್ ಶಾದಿ ಆದ್ರೆ ಇವರಗೇನು ಕಷ್ಟ. ಸಾಕೋದು ನಮ್ದುಕೆ ಜವಾಬ್ದಾರಿ ಅಲ್ವಾ?

 

ದ್ಯಾಮ : ನಾಲ್ಕಾರು ಹೆಂಸರನ್ನ ಲಗ್ನ ಆಗಿ ಹತ್ತಾರು ಮಕ್ಕಳನ್ನ ಹುಟ್ಸಿದ್ರೆ ಜನಸಂಖ್ಯೆ ಜಾಸ್ತಿ ಆಗುತ್ತಲ್ವಾ ಸುಲೇಮಾನು.

 

ಮೇಷ್ಟ್ರು: ಆಗ ಮುಸ್ಲಿಂರ ಸಂಖ್ಯೆ ಜಾಸ್ತಿ ಆಗಿ ಎಲ್ಲಿ ದೇಶಾ ಮತ್ತೆ ಸಾಬರ ಕೈಗೆ ಹೋಗುತ್ತೋ ಅಂತಾ ಸುಳ್ಳು ಸುದ್ದಿ ಹಬ್ಬಿಸಿ ಹಿಂದೂಗಳನ್ನ ಮುಸ್ಲಿಂರ ವಿರುದ್ದ ಎತ್ತಿ ಕಟ್ಟೋ  ಹುನ್ನಾರ..

 

ದ್ಯಾಮ : ಅದರಲ್ಲೂ ಲಾಜಿಕ್ ಐತಲ್ವಾ ಮೇಷ್ಟ್ರೆ.

 

ಮೇಷ್ಟ್ರು: ಎಲ್ಲಾ ಕಣ್ಕಟ್ ಲಾಜಿಕ್ ಅಷ್ಟೇ. ಅಂಕಿ ಅಂಶಗಳನ್ನ ನೋಡಿದ್ರೆ ಮುಸ್ಲಿಂರ ಸಂಖ್ಯೆ ಹೆಚ್ಚಾದಷ್ಟೂ ಹಿಂದೂಗಳ ಜನಸಂಖ್ಯೆನೂ ಹೆಚ್ಚಾಗಿದೆ. ನೋಡು ದ್ಯಾಮ. ಹಿಂದೂಗಳ ಕಾನೂನುಗಳ ಪ್ರಕಾರವೇ ಬೇರೆ ಧರ್ಮದವರೂ ಬದುಕಬೇಕು ಅನ್ನೋದು ಯುಸಿಸಿ ಕಾನೂನಿನ ಉದ್ದೇಶ. ಅಂದ್ರೆ ಹಿಂದುತ್ವವಾದಿಗಳ ಕೇಸರಿ ಕನ್ನಡಕವನ್ನ ಕಾನೂನಿಗೆ ಹಾಕಿದಂತೆ..

 

ದ್ಯಾಮ : ಅದೆಂಗಾಗುತ್ತೆ. ಇದು ಬರೀ ಒಂದೇ ಧರ್ಮದ ದೇಶವಲ್ಲವಲ್ಲ ಮೇಷ್ಟ್ರೆ. ಕುವೆಂಪುರವರು ಹೇಳಿದಂತೆ ದೇಶ ಸರ್ವ ಜನಾಂಗದ ಶಾಂತಿಯ ತೋಟ ಅಲ್ವಾ..

 

ಮೇಷ್ಟ್ರು: ಇವಾಗ ಕರೆಕ್ಟಾಗಿ ಹೇಳಿದೆ ನೋಡು. ಆದರೆ ಹಾಗೆ ಶಾಂತಿಯ ತೋಟ ಆದ್ರೆ ಹಿಂದುತ್ವವಾದಿಗಳಿಗೆ ಆಗಿ ಬರೋದಿಲ್ಲ. ಅವರಿಗೆ ಅಶಾಂತಿಯ ಬೆಂಕಿಯಲ್ಲಿ ತಮ್ಮ ಮನುವಾದಿ ಬೇಳೆ ಬೇಯಿಸಿಕೊಳ್ಳಬೇಕು. ಅದಕ್ಕೆ ಇಂತಾ ಕಾಯಿದೆ ತಂದು ಹಿಂದೂಗಳನ್ನು ಎತ್ತಿಕಟ್ತಾ ಇರೋದು.

 

ಈರಜ್ಜ : ಬೇರೆ ಧರ್ಮ ಕರ್ಮದ ಕತೆ ಬಿಡಿ ಮೇಷ್ಟ್ರೆ. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಅಂತವ್ರಲ್ಲಾ ಇವ್ರು ಮೊದ್ಲು ಹಿಂದೂ ಧರ್ಮದೊಳಗ್ಯಾಕೆ ಅದೇನೋ ಅಂತೀರಲ್ಲಾ ಹಾಂ ಸಮಾನ ಸಂಹಿತೆ ಅದನ್ನ ತರಬಾರದು

 

ಚೀರ : ಆಗ ನಾವೂ ಬ್ರಾಹ್ಮಣರ ಬಾವಿಯಿಂದ ನೀರು ತರಬೋದು.

 

ಕೊರಮ : ಬಟ್ರ ಹುಡಿಗೀನ ಮದುವೆ ಆಗಬೋದು.

 

ಈರಜ್ಜ : ದೇವಸ್ಥಾನದೊಳಗ ಪ್ರವೇಸಾ ಮಾಡ್ಬೋದು

 

ದ್ಯಾಮ : ಮೇಲ್ಜಾತಿಯವರ ಜೊತೆ ಕೂತು ಊಟ ಮಾಡ್ಬೋದು

 

ಚೀರ : ಕೆಳಜಾತಿಯವರು ಅರ್ಚಕರಾಗಬೋದು, ಮೇಲ್ಜಾತಿ ಬ್ರಾಹ್ಮಣರು ಬೀದಿ ಗೂಡಿಸಿ ಸಗಣಿ ಬಾಚಿ ಮೋರಿ ಕಿಲೀನ್ ಮಾಡ್ಬೋದು.

 

ಮೇಷ್ಟ್ರು: ಹೊ ಹೋ ಹೊಲ್ಡಾನ್. ನೀವೇಳಿದ್ದೆಲ್ಲಾ ಆಗಬೇಕು, ಆದರೆ ಆಗೋದಿಲ್ಲ. ಶತಮಾನದಿಂದ ಶೋಷಿತರಾದವರಿಗೆ ಮೀಸಲಾತಿ ಕೊಟ್ರೆ ಸಹಿಸೋಕಾಗದೇ ಇರೋದು ನಿಮಗೆ ಸಮಾನತೆ ಕೊಡ್ತಾರಾ? ನೋಡ್ರಯ್ಯಾ ಹಿಂದೂ ಗಿಂದೂ ಒಂದು ಅನ್ನೋದು ಬರೀ ಬಾಯ್ಮಾತಿಗೆ ಅಷ್ಟss. ಯಾಕಂದ್ರ ಮೇಲ್ಜಾತಿಯವರ ದಬ್ಬಾಳಿಕೆ ವಿರೋಧಿಸಿ ದಲಿತರು ಶೂದ್ರರೂ ಎಲ್ಲಿ ಬೇರೆ ಧರ್ಮಕ್ಕೆ ಮತಾಂತರ ಆಗಿ ಜನಸಂಖ್ಯೆ ಲೆಕ್ಕದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತೋ ಅನ್ನುವ ಭಯಕ್ಕೆ.

 

ದ್ಯಾಮ : ಅದಕ್ಕೆ ಅಲ್ವಾ ಮೇಷ್ಟ್ರೆ ಮತಾಂತರ ನಿಷೇಧ ಕಾಯ್ದೆ ತಂದಿದ್ದು.

 

ಮೇಷ್ಟ್ರು: ಹಾಂ. ಹೌದು. ಮೇಲ್ಜಾತಿಗಳು ಮಾಡಲಾಗದ ಕೆಳದರ್ಜೆ ಕೆಲಸ ಮಾಡಲು ದಲಿತರು ಬೇಕುವೈದಿಕಶಾಹಿಗಳಿಗೆ ಮನೆಕಟ್ಟಲು, ಬೇಳೆ ಕಾಳು ಬೆಳೆದು ಕೊಡಲು, ಚಾಕರಿ  ಮಾಡಲು ಶೂದ್ರರು ಇರಬೇಕು. ಮತ್ತೆ ವರ್ಣಾಶ್ರಮ ಧರ್ಮ ಜಾರಿಗೆ ಬರಬೇಕು. ಇದನ್ನೇ ಪ್ರತಿಪಾದಿಸುವ  ಮನುಧರ್ಮಶಾಸ್ತ್ರ ದೇಶದ ಸಂವಿಧಾನ ಆಗಬೇಕು ಎನ್ನೋದೆ ಕಣ್ರಪ್ಪಾ ಹಿಂದುತ್ವವಾದಿ ಸಂಘ ಪರಿವಾರದವರ ಗುರಿ. ಅದನ್ನು ಸಾಧಿಸೋಕೆ ಮತಾಂತರ ನಿಷೇಧ, ಸಮಾನ ನಾಗರಿಕ ಸಂವಿತೆ ಮುಂತಾದ ಕಾನೂನು

 

ದ್ಯಾಮ : (ಕೇಸರಿ ಶಾಲನ್ನು ಕೆಳಗೆ ಬಿಸಾಕಿ) ಮೊದಲು ಹಿಂದೂ ಧರ್ಮದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಒತ್ತಾಯಿಸಬೇಕಲ್ವಾ ಮೇಷ್ಟ್ರೆ.

 

ಚೀರ : ಜಾತಿಬೇಧ ತಾರತಮ್ಯದಿಂದ ಬಿಡುಗಡೆ ಬೇಕಲ್ವಾ ಮೇಷ್ಟ್ರೆ.

 

ಈರಜ್ಜ : ಇರುವ ಜಮೀನುಗಳನ್ನೆಲ್ಲಾ ಸಮಾನವಾಗಿ ಹಂಚಬೇಕಲ್ವಾ ಮೇಷ್ಟ್ರೆ?

 

ದ್ಯಾಮ : ದೇಶದ ಸಂಪನ್ಮೂಲಗಳನ್ನ ಎಲ್ಲರಿಗೂ ಸಮಾನವಾಗಿ ಮರುಹಂಚಿಕೆ ಮಾಡಬೇಕಲ್ವಾ ಮೇಷ್ಟ್ರೆ?

 

ಸುಲೇಮಾನ : ಸಬೀಕೋ ಸಮಾನ ಶಿಕ್ಷಣಾ, ಆರೋಗ್ಯ ಕೊಡಬೇಕಲ್ವಾ ಸಾಬ್..

 

ಮೇಷ್ಟ್ರು: ಹೌದು. ಏಕರೂಪದ ನಾಗರೀಕ ಸಂವಿತೆ ಎಂದ್ರೆ ನೀವೇಳಿದ್ದೆಲ್ಲಾ ಆಗಬೇಕು. ಅದು ಆಗೋ ಕೆಲಸವಲ್ಲಾ.. ಮೊದಲು ಇವರೇನು ಹಿಂದೂ ಧರ್ಮ ಅಂತಾ ಹೇಳ್ತಿದ್ದಾರಲ್ಲಾ ಅದರೊಳಗೆ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿ. ಎಲ್ಲಾ ಧರ್ಮಗಳೂ ಅವರವರ ಅಸ್ಮಿತೆ ಉಳಿಸಿಕೊಂಡೇ ಸಂವಿಧಾನಕ್ಕೆ ನಿಷ್ಟರಾಗಿರಲಿ ಎಂಬುದೇ ಕಾನೂನಿನ ಆಶಯವಾಗಿರಲಿ.

 

ಕೊರಮ : ನಾವೆಲ್ಲಾ ಒಂದು ನಾವಲ್ಲಾ ಹಿಂದು ಅಂತಾ ಹೇಳ್ಬೋದಾ ಮೇಷ್ಟ್ರೆ.

 

ಮೇಷ್ಟ್ರು: ಹೇಳಬಹುದು. ಎಲ್ಲಿವರೆಗೂ ಹಿಂದೂ ಧರ್ಮದಲ್ಲಿ ಜಾತಿ ತಾರತಮ್ಯ ಇರುತ್ತೋ, ಮೇಲ್ಜಾತಿ ಕೆಳಜಾತಿಗಳ ನಡುವೆ ಅಸ್ಪೃಶ್ಯತೆ ಆಚರಣೆಯಲ್ಲಿರುತ್ತೋ, ಎಲ್ಲಿವರೆಗೆ ಎಲ್ಲಾ ದೇವಸ್ಥಾನಗಳಲ್ಲೂ ಎಲ್ಲರಿಗೂ ಮುಕ್ತವಾದ ಪ್ರವೇಶ ಇರುವುದಿಲ್ಲವೋ ಅಲ್ಲಿವರೆಗೂ ನಾವು ಹಿಂದೂ ಧರ್ಮದವರಲ್ಲಾ ಎಂದೇ ಹೇಳಬೇಕಿದೆ. ಹಿಂದುತ್ವವಾದಿಗಳಿಂದ ನಿಜವಾದ ಹಿಂದೂಧರ್ಮವನ್ನು ಕಾಪಾಡಬೇಕಿದೆ. ಮತಾಂಧ ಮನುವಾದಿಗಳ ಹುನ್ನಾರವನ್ನು ಅರಿಯಬೇಕಿದೆ.

 

ದ್ಯಾಮ : ಹೌದು.. ಹಿಂದೂ ಧರ್ಮದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಹೋರಾಡೋಣ.

 

ಈರಜ್ಜ : (ತಮಟೆ ಹೊಡೆಯುತ್ತಾ ಹಾಡುತ್ತಾನೆ)

ಸಂಘವ ಕಟ್ಟೋಣ, ಸವಾಲಾಗಿ ನಿಲ್ಲೋಣ, ಬನ್ನೀರೋ ದಲಿತಣ್ಣಾ, ಬನ್ನಿರೋ ರೈತಣ್ಣಾ.

ಜಾತಿ ತಾರತಮ್ಯ ನಾಶಮಾಡಲು ಒಂದಾಗೋಣ ಬನ್ನಿರೋ ಶೂದ್ರಣ್ಣಾ..

 

( ಅಷ್ಟರಲ್ಲಿ ಹತ್ತಾರು ಜನ ಮೇಲ್ವರ್ಗದ ಜನ ಕೋಲು ಮಚ್ಚು ಹಿಡಿದು ದಲಿತರ ಮೇಲೆ ಹಲ್ಲೆ ಮಾಡಿ ಕೈಕಾಲು ಕಟ್ಟಿ ಹಾಕುತ್ತಾರೆ)

 

ಪಟೇಲ : ಏನ್ರಲೇ.. ಮೇಲ್ಜಾತಿಗಳ ವಿರುದ್ದ ಸಂಚು ಮಾಡ್ತಿರೇನಲೇ.

 

ಗೌಡ : ಲೇ ದ್ಯಾಮ. ಸಿಟಿಗೆ ಹೋಗಿ ನಾಲ್ಕಕ್ಷರ ಕಲಿತು ಬಂದ ತಕ್ಷಣ ದೊಡ್ಡ ಹೀರೋ ಆಗ್ತಿ ಏನಲೇ. ಇಕ್ರೊ ಇವನ ಮೂತಿಗೆ.

 

ಪುರೋಹಿತ : ಮೇಲ್ಜಾತಿಯವನಾಗಿ ಕೀಳು ಜಾತಿಯವರ ಪರ ನಿಂತಿದ್ದಾನಲ್ಲಾ ಮೇಷ್ಟ್ರು, ಮೊದಲು ಇವನಿಗೆ ಹೊಡೀರೋ.

 

ಮೇಷ್ಟ್ರು : ಸಾಕು ನಿಲ್ಲಿಸ್ರಯ್ತಾ. ಇದು ಅಂಬೇಡ್ಕರ್ ಕಟ್ಟಿದ ಸಂವಿಧಾನದ ಸಾಮ್ರಾಜ್ಯ. ಇಲ್ಲಿ ಬದುಕೋದಕ್ಕೆ, ಅಸಮಾನತೆ ವಿರೋಧಿಸೋದಕ್ಕೆ ಎಲ್ಲರಿಗೂ ಹಕ್ಕಿದೆ

 

ಪಟೇಲ : ನಮಗೆ ಬುದ್ದಿ ಹೇಳ್ತಿ ಏನಲೇ.. (ಕೋಲಿನಿಂದ ಬಾರಿಸುತ್ತಾನೆ)

 

ದ್ಯಾಮ : ಇನ್ನೂ ಎಷ್ಟು ದಿನ ನಿಮ್ಮ ದಬ್ಬಾಳಿಕೆ. ಯಾಕೆ ನಾವು ಮನುಷ್ಯರಲ್ವಾ. ಸಂವಿಧಾನ ನಮಗೂ ಹಕ್ಕು ಕೊಟ್ಟಿಲ್ವಾ.. 

 

ಪುರೋಹಿತ : ಹೋ ಬಂದ್ಬಿಟ್ಟಾ ಸಂವಿಧಾನದ ಪಾಠಾ ಮಾಡೋಕೆ. ಲೇ ಇಲ್ಲಿ ಕೇಳು. ಮೇಲ್ಜಾತಿಯವರು ಇರೋದೇ ಆಳೋಕೆ, ಸಂವಿಧಾನ ಇರೋದು ಆಚಾರ ಹೇಳೋಕೆ.

 

ಗೌಡ : ಲೇ ಕಾನೂನು ಮಾಡೋವ್ರು ನಾವು. ಎಮ್ಮೆಲ್ಲೆ ನಮ್ಮೋರು, ಮಂತ್ರಿಗಳೂ ನಮ್ಮೋರು.. ಇನ್ನೆಷ್ಟು ಕಾಲ ಆದ್ರೂ ದೇಶ ಆಳೋವ್ರೂ ನಾವೇ. ಮುಚ್ಕೊಂಡು ಹೇಳಿದಂಗೆ ಕೇಳ್ಕೊಂಡು ಬಿದ್ದಿರಬೇಕು ಇಲ್ಲಾ ಬಹಿಷ್ಕಾರ ಹಾಕ್ತೀವಿ.

 

( ಅಷ್ಟರಲ್ಲಿ ನೂರಾರು ಜನ ಮಹಿಳೆಯರು ಹಾಗೂ ದಲಿತರು ಪಂಜುಗಳನ್ನು ಹಿಡಿದು ಸುತ್ತುವರೆಯುತ್ತಾರೆ. ಒಂದಿಬ್ಬರು ಮುಂದೆ ಬಂದು ಬಂಧಿತರ ಕಟ್ಟು ಬಿಚ್ಚುತ್ತಾರೆ)

 

ದ್ಯಾಮ : ಈಗ ಮಾತಾಡ್ರಯ್ತಾ ಮೇಲ್ಜಾತಿ ಮಹಾತ್ಮರೇ. ನಮ್ಮ ಜನ ಒಂದಾಗದೆ ಇರೋದಿಕ್ಕೆ ಮೆರೀತಾ ಇದ್ದೀರಿ. ಒಮ್ಮೆ ನಮ್ಮವರೆಲ್ಲಾ ಎಚ್ಚೆತ್ತು ಎದಿರು ನಿಂತರೆ ಪುಡಿಪುಡಿ ಆಗ್ತೀರಿ.

 

ಮೇಷ್ಟ್ರು : ಇದು ಜನಶಕ್ತಿ ಅಂದ್ರೆ. ಶ್ರಮಿಕ ಜನರ ಮುಂದೆ ಯಾವ ಮೇಲ್ಕಾತಿ ಶಕ್ತಿಯೂ ನಿಲ್ಲಲು ಸಾಧ್ಯವೇ ಇಲ್ಲ.

 

ಪಟೇಲ : ನೋಡ್ರಯ್ಯಾ ನಮಗೇನಾದರೂ ಮಾಡಿದ್ರೆ ಪೊಲೀಸರನ್ನ ಕರೆಸಬೇಕಾಗುತ್ತೆ.

 

ದ್ಯಾಮ : ನೀವು ಬದುಕಿದ್ದರೆ ತಾನೇ ಕರೆಸೋದು. ಇವರ್ನೆಲ್ಲಾ ಕಟ್ಟಿ ಬೆಂಕಿ ಹಚ್ಚೋಣ.

 

ಎಲ್ಲರೂ : ಹೌದು, ಬೆಂಕಿ ಹಚ್ಚಿ, ಸಾಯ್ಸಿ..

 

ಮೇಷ್ಟ್ರು: ಸಮಾಧಾನ. ಅವರು ಹಿಂಸೆ ಮಾಡ್ತಾರಂತೆ ನಾವೂ ಮಾಡಿದ್ರೆ ಅವರಿಗೂ ನಮಗೂ ವ್ಯತ್ಯಾಸ ಇರೋದಿಲ್ಲಾ. ಹಿಂಸೆಗೆ ಹಿಂಸೆ ಪರಿಹಾರವಲ್ಲ. ಇವರನ್ನ ಎಚ್ಚರಿಕೆ ಕೊಟ್ಟು ಬಿಟ್ಟು ಬಿಡಿ. ಇನ್ನೊಮ್ಮೆ ಹೀಗೆ ಹಲ್ಲೆ ಮಾಡಲು ಬಂದ್ರೆ ಪಾಠ ಕಲಿಸೋಣ.

 

( ಮೇಲ್ಜಾತಿಯವರೆಲ್ಲಾ ಅವಮಾನಿತರಾಗಿ ಹೊರಡುತ್ತಾರೆ. ಉಳಿದವರೆಲ್ಲಾ ಪಂಜು ಎತ್ತಿ ಹಿಡಿದು ಕುಣಿದಾಡುತ್ತಾರೆ. ದ್ಯಾಮ ಕಟ್ಟೆಯ ಮೇಲೆ ಹತ್ತಿ ನಿಂತು ಹಾಡುತ್ತಾನೆ. ಈರಜ್ಜ ತಮಟೆ ಬಡಿಯುತ್ತಾನೆ)

 

ಬನ್ನಿರೋ ರೈತಣ್ಣಾ

ಸಂಘವ ಕಟ್ಟೋಣ ಸವಾಲಾಗಿ ನಿಲ್ಲೋಣ

ಬನ್ನಿರೋ ದಲಿತಣ್ಣಾ

 

ರೈತ ಕೂಲಿ ಜನರೆ ಬರ್ತೀರಾ ನೀವು ಬನ್ನಿ

ವಿದ್ಯಾರ್ಥಿ ಯುವಜನರೆ ಬರ್ತೀರಾ ನೀವು ಬನ್ನಿ

ನೊಂದ ಮಹಿಳೆಯರೆ ಬರ್ತೀರಾ ನೀವೂ ಬನ್ನಿ

ಸಂಘವ ಕಟ್ಟೋಣ ಸವಾಲಾಗಿ ನಿಲ್ಲೋಣ

ಶೋಷಕರೆಲ್ಲರನು ಬೀದಿಗಿಳಿದು ವಿರೋಧಿಸುವಾ

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ