ಆತ್ಮನಿರ್ಭರ (ಪ್ರಹಸನ-37)
(ಪ್ರಹಸನ-37)
ಆತ್ಮನಿರ್ಭರ
****************
( ಚಕ್ರವರ್ತಿಯ ಒಡ್ಡೋಲಗ)
ಪಾರಿಚಾರಕ : ಚಕ್ರವರ್ತಿ ಸಾಮ್ರಾಟ್ ನರೇಂದ್ರ ಬಾಹುಬಲಿಯವರು ಆಗಮಿಸುತ್ತಿದ್ದಾರೆ. ( ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಾರೆ)
(ಹಿನ್ನೆಲೆಯಲ್ಲಿ ಬಹುಪರಾಕ್)
ಚಕ್ರವರ್ತಿ : (ಸಿಂಹಾಸನದಲಿ ಪವಡಿಸುತ್ತಾ ರಾಜದಂಡವನ್ನು ಎತ್ತಿ ಇಳಿಸಿ ಎಲ್ಲರಿಗೂ ಕುಳಿತುಕೊಳ್ಳಲು ಸನ್ನೆ ಮಾಡುತ್ತಾ) ಹೇಳಿ ಅಮಾತ್ಯರೇ ಪ್ರಜೆಗಳೆಲ್ಲರೂ ಕುಶಲವೇ?
ವಿದೂಷಕ : ಕುಶಲವಂತೆ ಕುಶಲ. ಬೆಲೆಯೇರಿಕೆಯಿಂದ ಪ್ರಜೆಗಳು ತತ್ತರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ.
ಚಕ್ರವರ್ತಿ : ಹೌದಾ. ಮತ್ತೆ ಯಾರೂ ಇದನ್ನು ನಮ್ಮ ಗಮನಕ್ಕೆ ತರಲಿಲ್ಲವೇಕೆ?
ಅಮಾತ್ಯ : ತರಬಹುದಾಗಿತ್ತು.
ಆದರೆ... ಅದು..
ವಿದೂಷಕ : ತರಬಹುದಾಗಿತ್ತು,
ತರಲಿಲ್ಲ. ಯಾಕೆಂದರೆ ನಿಮ್ಮ ಎದುರು ನಿಂತು ಮಾತಾಡುವ ಧೈರ್ಯ ಇಲ್ಲಿ ಯಾರಿಗೂ ಇಲ್ಲವಲ್ಲಾ ಪ್ರಭು. ಪ್ರಶ್ನಿಸಿದರೆ ಎಲ್ಲಿ ರಾಜದ್ರೋಹಿಯೆಂದು ಆರೋಪಿಸಿ ನೀವು ಕಾರಾಗ್ರಹ ಭಾಗ್ಯ ಕರುಣಿಸುತ್ತೀರೋ ಎಂಬ ಅವ್ಯಕ್ತ ಭಯ.
ಚಕ್ರವರ್ತಿ : ಆಯಿತು. ಈಗ ನಿರುದ್ಯೋಗ ಸಮಸ್ಯೆ. ಅದೊಂದು ಪರಿಹಾರವಾದರೆ ಜನರ ಆದಾಯ ಹೆಚ್ಚಾಗಿ ಬೆಲೆ ಎಷ್ಟೇ ಏರಿದರೂ ಖರೀದಿ ಮಾಡಬಹುದಲ್ಲವೇ?
ಅಮಾತ್ಯ : ಹೌದು ಮಹಾಪ್ರಭು. ಪ್ರಭುತ್ವಕ್ಕೆ ತಲೆನೋವಾಗಿರುವ ನಿರುದ್ಯೋಗ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದೇ ನಮಗೆ ತಿಳಿಯುತ್ತಿಲ್ಲ.
ಚಕ್ರವರ್ತಿ : ನಿರ್ಭರ ಆತ್ಮನಿರ್ಭರ. ಸ್ವಾವಲಂಭಿಯಾಗಿ ಬದುಕುವುದೊಂದೇ ಈ ಸಮಸ್ಯೆಗೆ ಪರಿಹಾರ. ಈ ಹಿಂದೆಯೇ ನಾನು ಸೂಚಿಸಿದ್ದೆ ಪಕೋಡ ಮಾರಿ ಬದುಕುವುದೂ ಒಂದು ಸ್ವಾವಲಂಬೀ ಉದ್ಯೋಗ ಎಂದು.
ವಿದೂಷಕ : ಹೌದೌದು.. ಆದರೆ ಏನೇನೂ ಪ್ರಯೋಜನವಾಗಲಿಲ್ಲ ಪ್ರಭು. ಎಲ್ಲರೂ ಪಕೋಡಾ ಮಾಡಿ ಮಾರೋರೆ ಆದರೆ ಕೊಂಡು ತಿನ್ನೋರು ಯಾರು?
ಚಕ್ರವರ್ತಿ : ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ನಿರುದ್ಯೋಗ ಹೆಚ್ಚಾಗಿ ಜನ ದಂಗೆ ಎದ್ದರೆ ನಮ್ಮ ಸಿಂಹಾಸನದ ಗತಿ ಏನು?
ಅಮಾತ್ಯ : ನಮ್ಮ ಸಾಮಂತ ರಾಜ್ಯವಾದ ಕರುನಾಡಲ್ಲಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ ಪ್ರಭು.
ಚಕ್ರವರ್ತಿ : ಏನದು ಬೇಗ ಹೇಳಿ.
ಅಮಾತ್ಯ : ಉದ್ಯೋಗ ದೊರೆಯುವವರೆಗೂ ವಿದ್ಯಾವಂತ ಯುವಜನರಿಗೆ ನಿರುದ್ಯೋಗ ಬತ್ತೆ ಕೊಡುತ್ತಿದ್ದಾರೆ.
ಚಕ್ರವರ್ತಿ : ಅದೊಂದು ಚಿಕ್ಕ ರಾಜ್ಯ. ನಮ್ಮದೋ ಬಹುದೊಡ್ಡ ಸಾಮ್ರಾಜ್ಯ. ಹೀಗೆ ಎಲ್ಲಾ ನಿರುದ್ಯೋಗಿಗಳಿಗೂ ಹಣ ಹಂಚಿದರೆ ನಮ್ಮ ಕೋಶಾಗಾರ ಖಾಲಿಯಾಗುತ್ತದೆ. ಬೇರೆ ಏನಾದರೂ ಯೋಚಿಸಿ, ಉತ್ತಮ ಪರಿಹಾರ ಸೂಚಿಸಿ.
ವಿದೂಷಕ : ಮಹಾರಾಜರೇ ನಿರುದ್ಯೋಗಿಗಳನ್ನು ತಯಾರು ಮಾಡುವ ಎಲ್ಲಾ ವಿದ್ಯಾಲಯಗಳನ್ನು ಮುಚ್ಚಿಸಿದರೆ ಹೇಗೆ?
ಚಕ್ರವರ್ತಿ : ಹಾಗೇನಾದರೂ ಮಾಡಿದರೆ ನಮ್ಮ ಶಿಕ್ಷಣೋದ್ಯಮಿಗಳು ಬೀದಿಪಾಲಾಗುತ್ತಾರೆ. ಅವರೆಲ್ಲಾ ಭಿಕ್ಷೆ ಬೇಡಬೇಕಾಗುತ್ತದೆ.
ಕೊತ್ವಾಲ : ಮಹಾರಾಜರಿಗೆ ಜಯವಾಗಲಿ. ಪ್ರಜೆಗಳ ಹಣ ಲೂಟಿ ಮಾಡಿ ಅಪಾರ ಆಸ್ತಿ ಗಳಿಸಿದ ಭಿಕ್ಷುಕನನ್ನು ಸೆರೆಹಿಡಿದು ತಂದಿದ್ದೇವೆ.
ವಿದೂಷಕ : ತೆರಿಗೆ ವಂಚನೆ ಮಾಡುವ ತಿಮಿಂಗಿಲುಗಳನ್ನು ಬಂಧಿಸುವ ಬದಲು ಭಿಕ್ಷುಕನ ಬಂಧನವೇ, ಕೂಡದು ಪ್ರಭು ಕೂಡದು.
ಚಕ್ರವರ್ತಿ : ಇರಲಿ ಇರು ವಿದೂಷಕಾ ವಿಚಾರಿಸೋಣ. ಈತ ಮಾಡಿದ ಅಪರಾಧವೇನು ?
ಕೋತ್ವಾಲ : ಈ ಯಕಶ್ಚಿತ ಭಿಕ್ಷುಕ ಮಹಾನಗರದಲ್ಲಿ ಭಿಕ್ಷೆ ಬೇಡುತ್ತಲೇ ಕೋಟಿ ವರಹಗಳ ಭವ್ಯ ಬಂಗಲೇ ಕಟ್ಟಿಸಿದ್ದಾನೆ ಪ್ರಭು. ಹಲವಾರು ಮಳಿಗೆಗಳನ್ನು ಕಟ್ಟಿಸಿ ಬಾಡಿಗೆ ಬಿಟ್ಟಿದ್ದಾನೆ. ಈತನ ಮಾಸಿಕ ಆದಾಯವೇ ಅರವತ್ತು ಸಹಸ್ರ ವರಹಗಳಿಗಿಂತಲೂ ಹೆಚ್ಚು. ಪ್ರಭುತ್ವಕ್ಕೆ ಯಾವುದೇ ಸುಂಕವನ್ನೂ ಕಟ್ಟುತ್ತಿಲ್ಲ.
ಚಕ್ರವರ್ತಿ : ಹೌದಾ.. ತುಂಬಾ ಕುತೂಹಲಕಾರಿ ಸಂಗತಿ. ಏ ಭಿಕ್ಷುಕಾ.. ಹೇಗೆ ಇಷ್ಟೆಲ್ಲಾ ಸಂಪಾದನೆ ಮಾಡಿದ್ದೀಯಾ? ವಿವರಿಸು.
ಭಿಕ್ಷುಕ : (ತೇಪೆ ಹಾಕಿದ ಕೊಳಕು ಅಂಗವಸ್ತ್ರವನ್ನು ಉಜ್ಜಿಕೊಳ್ಳುತ್ತಾ ಹೆದರಿಕೆಯಿಂದ) ಅಂತಾದ್ದೇನಿಲ್ಲಾ ಮಹಾಸ್ವಾಮಿ. ಭಿಕ್ಷೆ ಬೇಡುವುದೇ ನನ್ನ ವೃತ್ತಿ. ಕಳ್ಳತನ ಸುಲಿಗೆ ಮಾಡದೇ ಸ್ವಾಭಿಮಾನದಿಂದ ಬದುಕುತ್ತಿರುವೆ. ಯಾವ ಜಾಗದಲ್ಲಿ ಯಾವ ಸಮಯದಲ್ಲಿ ಹೆಚ್ಚು ಜನ ಸೇರುತ್ತಾರೆ ಎನ್ನುವ ಮಾಹಿತಿ ನನಗಿರುತ್ತದೆ. ಹೀಗಾಗಿ ಸಮಯಕ್ಕೆ ತಕ್ಕಂತೆ ಸ್ಥಳ ಬದಲಾಯಿಸಿ ಭಿಕ್ಷೆ ಬೇಡುತ್ತೇನೆ. ಬೇರೆ ನಿರಾಶ್ರಿತ ನಿರುದ್ಯೋಗಿಗಳಿಗೂ ತರಬೇತಿ ನೀಡಿ ಸ್ವಾವಲಂಬನೆಯಿಂದಾ ಬದುಕಲು ಕಲಿಸಿ ಕೊಡುತ್ತೇನೆ.
ಅಮಾತ್ಯ : ಯಾವ ಕಾಯಕ ಮಾಡದೇ ಭಿಕ್ಷೆ ಬೇಡುವುದು ಅಪರಾಧ ಪ್ರಭು. ಇವನಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು.
ಭಿಕ್ಷುಕ : ಯಾಕೆ ಸ್ವಾಮಿ. ನನಗೆ ಶಿಕ್ಷೆ ವಿಧಿಸುವುದೇ ಆದರೆ ಈ ಸಾಮ್ರಾಜ್ಯದಲ್ಲಿರುವ ಸಕಲ ದೇವಾಲಯಗಳಲ್ಲಿ ಕಾಯಕ ಮಾಡದೇ ಗಂಟೆ ಬಾರಿಸಿ, ಆರತಿ ತಟ್ಟೆ ತೋರಿಸಿ ಸಂಪಾದನೆ ಮಾಡುತ್ತಾ ಸುಖವಾಗಿ ಬದುಕುತ್ತಿರುವ ಅರ್ಚಕರು, ಪುರೋಹಿತರನ್ನೂ ಶಿಕ್ಷಿಸಬೇಕಲ್ಲವೇ.
ವಿದೂಷಕ : ಆಹಾ ಎಂತಾ ಮುತ್ತಿನಂತಾ ಮಾತು ಹೇಳಿದೆಯಯ್ಯಾ.
ಅಮಾತ್ಯ : ಏ ಅಧಿಕಪ್ರಸಂಗಿ. ಪ್ರಭುಗಳ ಮುಂದೆ ನಿಂತು ಮಾತಾಡಲು ನಾವೇ ನಡುಗುತ್ತಿರುವಾಗ ನೀನು ಪ್ರಶ್ನೆ ಮಾಡುತ್ತಿದ್ದೀಯಾ? ಪ್ರಭುಗಳೇ ಈ ಕೂಡಲೇ ಈತನಿಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಿ.
ಚಕ್ರವರ್ತಿ : ಸ್ವಲ್ಪ ನಿಲ್ಲಿ. ಆತ ಹೇಳುವುದರಲ್ಲೂ ಸತ್ಯ ಇದೆ.
ಅಮಾತ್ಯ : ಹಾಗಾದರೆ ಎಲ್ಲಾ ಪುರೋಹಿತ ಪುಂಗವರಿಗೆ ಶಿಕ್ಷೆ ಕೊಡ್ತೀರಾ ಪ್ರಭು. ಹಾಗೇನಾದರೂ ಮಾಡಿದರೆ ಅನರ್ಥವಾದೀತು.
ಗುರುಮಠಗಳು ದಂಗೆ ಏಳುವಂತಾದೀತು.
ವಿದೂಷಕ : ಏನೂ ಅನರ್ಥವಾಗೋದಿಲ್ಲ ಪ್ರಭು. ದುಡಿಯದೇ ತಿನ್ನುವವರು, ಬೇರೆಯವರ ಶ್ರಮದಲ್ಲಿ ಬದುಕುವವರು ಈ ಸಾಮ್ರಾಜ್ಯದಲ್ಲಿ ಇರಕೂಡದು. ಎತ್ತಿ ರಾಜದಂಡ, ಹೊರಡಿಸಿ ಆದೇಶ, ಎಲ್ಲಾ ಭಿಕ್ಷುಕರು, ಅರ್ಚಕರು, ಪುರೋಹಿತರನ್ನು ಈ ಕೂಡಲೇ ಬಂಧಿಸಲು ರಾಜಾಜ್ಞೆ ಮಾಡಿ. ಇನ್ನೊಬ್ಬರ ಪರಿಶ್ರಮದ ಫಲವನ್ನು ಅನುಭವಿಸುವವರಿಗೆ ಪಾಠ ಕಲಿಸಿ.
ಚಕ್ರವರ್ತಿ : ಸ್ವಲ್ಪ ಸಮಾಧಾನ ವಿದೂಷಕ. ಯಾರಲ್ಲಿ ಈ ಕೂಡಲೇ ಈ ಭಿಕ್ಷುಕನನ್ನು..
ಅಮಾತ್ಯ : ಎಳೆದುಕೊಂಡು ಹೋಗಿ ಆನೆ ಕಾಲಲ್ಲಿ ತುಳಿಸಿ.
ಚಕ್ರವರ್ತಿ : ಇಲ್ಲಾ.. ಮಹಾ ಮೇಧಾವಿಯಾದ ಈ ಭಿಕ್ಷುಕನನ್ನು ಸತ್ಕರಿಸಿ ಸನ್ಮಾನಿಸಿ. ನನ್ನ ಕನಸಿನ ಆತ್ಮನಿರ್ಭರದ ಪ್ರತೀಕ ಈತ.
ಅಮಾತ್ಯ : (ಆಘಾತಗೊಂಡು) ಮಹಾಪ್ರಭು.. ಏನು ಏನು ಹೇಳುತ್ತೀದ್ದೀರಿ?
ಚಕ್ರವರ್ತಿ : ಉಚಿತವಾದದ್ದನ್ನೇ ಹೇಳುತ್ತಿದ್ದೇನೆ. ಯಾವುದೇ ಬಂಡವಾಳ ಹಾಕದೇ, ಹೆಚ್ಚು ಪರಿಶ್ರಮ ಪಡದೇ ಕಾಲಕ್ಕೆ ತಕ್ಕ ಬುದ್ದಿ ಉಪಯೋಗಿಸಿ, ತನ್ನ ಪ್ರತಿಭೆಯನ್ನು ಬಳಸಿ ಸಂಪತ್ತಿನ ಕ್ರೂಢಿಕರಣ ಮಾಡಿದ ಈತ ಸಾಮಾನ್ಯನಲ್ಲಾ ಅಮಾತ್ಯರೇ ನನ್ನ ದೃಷ್ಟಿಯಲ್ಲಿ ಅರ್ಥಶಾಸ್ತ್ರಜ್ಞ. ಅನೇಕರಿಗೆ ಭಿಕ್ಷೆ ಬೇಡುವ ತರಬೇತಿ ನೀಡುತ್ತಿರುವ ಈತ ಉದ್ಯೋಗ ಮಾರ್ಗದರ್ಶಿ ಗುರು. ನಿರುದ್ಯೋಗ ನಿವಾರಣೆಗೆ ಈತನೇ ಮಾದರಿ. ಆತ್ಮನಿರ್ಭರತೆಗೆ ಆದರ್ಶಮಯ ವ್ಯಕ್ತಿ.
ಅಮಾತ್ಯ : (ಅನುಮಾನದಿಂದ ) ಹೌದೌದು, ಆಹಾ ಎಂತಾ ಮಾತು ಹೇಳಿದಿರಿ ಪ್ರಭು. ನೀವು ಹೇಳಿದ ಮೇಲೆ ಸರಿಯಾಗಿಯೇ ಇರುತ್ತದೆ.
ಚಕ್ರವರ್ತಿ : ನಮ್ಮ ಸಾಮ್ರಾಜ್ಯದ ನಿರುದ್ಯೋಗ ನಿವಾರಣೆಗೆ ಪರಿಹಾರವೊಂದು ದೊರಕಿದಂತಾಯಿತು. ಕೋಶಾಗಾರಕ್ಕೆ ಆದಾಯವೂ ಹರಿದು ಬರುವಂತಾಯಿತು.
ಅಮಾತ್ಯ : ಭಿಕ್ಷುಕರಿಂದ ಸಾಮ್ರಾಜ್ಯಕ್ಕೆ ಆದಾಯವೇ? ಅದು ಹೇಗೆ ಪ್ರಭು.
ಚಕ್ರವರ್ತಿ : ಈ ಒಬ್ಬ ಭಿಕ್ಷುಕ ಕೋಟಿ ಕೋಟಿ ವರಹಗಳನ್ನು ಸಂಪಾದಿಸಲು ಸಾಧ್ಯವಾದರೆ ಎಲ್ಲಾ ಭಿಕ್ಷುಕರು ಇನ್ನೆಷ್ಟು ಸಂಪಾದಿಸಬಹುದು. ಈ ಅನಿರೀಕ್ಷಿತ ಆದಾಯದ ಮೇಲೆ ಸುಂಕ ವಿಧಿಸೋಣ. ಕೋಶಾಗಾರವನ್ನು ಸಂಪದ್ಬರಿತ ಗೊಳಿಸೋಣ.
ಅಮಾತ್ಯ : ಎಲ್ಲಾ ನಿಮ್ಮ ಚಿತ್ತ ಪ್ರಭು.
ಚಕ್ರವರ್ತಿ : ಈ ಕೂಡಲೇ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಭಿಕ್ಷಾಸುರಕ್ಷಾ ಎನ್ನುವ ಶಿಕ್ಷಣ ವಿಭಾಗ ಆರಂಭಿಸಿ. ಈ ವಿಭಾಗದ ಮುಖ್ಯಸ್ಥನನ್ನಾಗಿ ಈ ಭಿಕ್ಷುಕನನ್ನು ನೇಮಿಸಿ. ನಿರುದ್ಯೋಗಿ ಯುವಕರಿಗೆ ಭಿಕ್ಷಾ ಕಾಯಕದಲ್ಲಿ ವಿಶ್ವದರ್ಜೆಯ ತರಬೇತಿ ಕೊಡಲು ವ್ಯವಸ್ಥೆ ಮಾಡಿ. ಭಿಕ್ಷೆಬೇಡುವುದು ನಿಷಿದ್ದವಾಗದೇ ಕಾನೂನುಬದ್ದವಾಗಲಿ.
ಅಮಾತ್ಯ : ಹೌದು ಮಹಾಪ್ರಭು. ನಿಮ್ಮ ದೂರದೃಷ್ಟಿ ಅಪಾರ. ಹೀಗೆ ಭಿಕ್ಷಾಟನಾ ಪ್ರವೀಣ ಪದವೀಧರರನ್ನು ಬೇರೆ ದೇಶಗಳಿಗೆ ಕಳುಹಿಸೋಣ. ಅಲ್ಲಿ ಸಂಪಾದಿಸಿ ತಂದ ಹಣದಿಂದ ಈ ನಿಮ್ಮ ಸಾಮ್ರಾಜ್ಯ ಇನ್ನೂ ಹೆಚ್ಚು ಶ್ರೀಮಂತ ಆಗುವುದರಲ್ಲಿ ಸಂದೇಹವೇ ಇಲ್ಲ.
ಚಕ್ರವರ್ತಿ : ಸಂಪಾದನೆ ತರುವ ಯಾವ ಕೆಲಸವೂ ಕೀಳಲ್ಲ ಅಮಾತ್ಯಾರೆ, ಪಕೋಡ ಮಾರಿ ಬದುಕು ಕಟ್ಟಿಕೊಳ್ಳಲಾಗದ ನಿರುದ್ಯೋಗಿಗಳಿಗೆ ಈ ಹೊಸ ಕಾಯಕದಿಂದ ಉದ್ಯೋಗ ದೊರೆತಂತಾಯಿತು.
ನಮ್ಮೆಲ್ಲರನ್ನೂ ಕಾಡುತ್ತಿದ್ದ ನಿರುದ್ಯೋಗವೆಂಬ ಪೆಡಂಬೂತ ದೂರವಾದಂತಾಯ್ತು.
ಯಾರಲ್ಲಿ.. ಈ ಕೂಡಲೇ ಈ ಭಿಕ್ಷುಕನನ್ನು ಸನ್ಮಾನಿಸಿ ಭಿಕ್ಷುಕರತ್ನ ಎನ್ನುವ ಬಿರುದನ್ನಿತ್ತು ಗೌರವಿಸಿ. ಇದು ರಾಜಾಜ್ಞೆ. ನಿರ್ಭರ, ಆತ್ಮನಿರ್ಭರ. ( ಎನ್ನುತ್ತಾ ರಾಜದಂಡವನ್ನು ಮೇಲೆತ್ತಿ ಸಿಂಹಾಸನದಿಂದ ಕೆಳಕ್ಕಿಳಿದು ನಿರ್ಗಮಿಸುತ್ತಾನೆ)
ವಿದೂಷಕ : ನೋಡಿದ್ರಲ್ಲಾ ಅಮಾತ್ಯರೇ. ಇಂತಹ ಹುಚ್ಚು ದೊರೆಯಿಂದಾ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ. ಮೋರಿ ನೀರಿಂದಾ ವಿದ್ಯುತ್ ಉತ್ಪಾದನೆ ಮಾಡಿ ಎನ್ನುವ ತಿಕ್ಕಲು ಪ್ರಭುವಿನಿಂದ ಇದೇ ರೀತಿ ಆಜ್ಞೆಗಳು ಹೊರಡೋದು. ಈ ಸಾಮ್ರಾಜ್ಯವನ್ನು ಆ ದೇವರೂ ಕಾಪಾಡಲಾರ..
(ನಿರ್ಭರ ಆತ್ಮನಿರ್ಭರ ಎಂದು ದ್ವನಿ ಕೇಳಿಬರುತ್ತದೆ, ಅಮಾತ್ಯ ಅತ್ತ ಓಡುತ್ತಾನೆ, ವಿದೂಷಕ ನಿಟ್ಟುಸಿರು ಬಿಡುತ್ತಾನೆ)
*- ಶಶಿಕಾಂತ ಯಡಹಳ್ಳಿ*
Comments
Post a Comment