ಚಂದ್ರಯಾನ ಗೋವಿಂದಾ ಗೋವಿಂದ (ಪ್ರಹಸನ – 39)

  (ಪ್ರಹಸನ – 39)

ಚಂದ್ರಯಾನ ಗೋವಿಂದಾ ಗೋವಿಂದ  

**************************************************

 

(ಇಸ್ರೋ ವಿಜ್ಞಾನಿಗಳ ಗುಂಪೊಂದು ಕೈಯಲ್ಲಿ ಚಂದ್ರಯಾನ-3 ಉಪಗ್ರಹದ ಪ್ರತಿಕೃತಿ ತಂದು ಉಡಾವಣೆಯ ಯಶಸ್ಸಿಗಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿತು)

 

ವಿಜ್ಞಾನಿ 1  :   ಗೋವಿಂದಾ, ವೆಂಕಟರಮಣ, ಸಲನಾದ್ರೂ ನಮ್ಮ ಚಂದ್ರಯಾನ ಯಶಸ್ವಿಯಾಗುವಂತೆ ಅನುಗ್ರಹಿಸು ತಂದೆ. ನಿನ್ನನ್ನೇ ನಂಬಿ ನಾನಿಲ್ಲಿಗೆ ಬಂದೆ.

 

ಮಹಿಳಾ ವಿಜ್ಞಾನಿ  : ಏಳುಕೊಂಡಳವಾಡಾ ವೆಂಕಟರಮಣ ಗೋವಿಂದಾ..

 

ಎಲ್ಲರೂ : ಗೋವಿಂದಾ..

 

( ತಿಮ್ಮಪ್ಪನ ಭಜನೆ ಮಾಡುತ್ತಾ ದೇವಸ್ಥಾನದ ಹೊರಗೆ ಬಂದರೆ ಮಾಧ್ಯಮಗಳ ಕೆಲ ಪತ್ರಕರ್ತರ ಗುಂಪು ಪ್ರಶ್ನೆ ಕೇಳತೊಡಗಿತು)

 

ಪತ್ರಕರ್ತ 1 : ಸರ್.. ಸಲ ಉಪಗ್ರಹ ಉಡಾವಣೆ ಯಶಸ್ವಿಯಾಗುವ ವಿಶ್ವಾಸ ನಿಮಗಿದೆಯಾ?

 

ವಿಜ್ಞಾನಿ 1 : ಹೋ.. ಸಂದೇಹವೇ ಬೇಡ. ಚಂದ್ರಯಾನ- 3 ಯಶಸ್ವಿಯಾಗಿಯೇ ತೀರುತ್ತದೆ.

 

ಪತ್ರಕರ್ತ 2 : ಇಷ್ಟೊಂದು ಆತ್ಮವಿಶ್ವಾಸ ಇದ್ದ ಮೇಲೆ ತಿಮ್ಮಪ್ಪನ ಅನುಗ್ರಹಕ್ಕೆ ಯಾಕೆ ಗುಂಪಾಗಿ ವಿಜ್ಞಾನಿಗಳೆಲ್ಲಾ ಬಂದಿದ್ದೀರಿ.

 

ಮಹಿಳಾ ವಿಜ್ಞಾನಿ : ಯಾಕಂದ್ರೆ? ಚಂದ್ರಯಾನ ಯೋಜನೆಗೆ ಎಲ್ಲೂ ದಕ್ಕೆಯಾಗದಿರಲಿ ಎಂದು ದೇವರಲ್ಲಿ ಶ್ರದ್ಧೆಯಿಂದ ಬೇಡಿಕೊಳ್ಳಲು ಬಂದಿದ್ದೇವೆ.

 

ಪತ್ರಕರ್ತ 3 : ನಿಮ್ಮ ಕೆಲಸದ ಮೇಲೆ ನಂಬಿಕೆ ಇದ್ದರೆ, ವಿಜ್ಞಾನದ ಸಾಧನೆಯ ಮೇಲೆ ಭರವಸೆ ಇದ್ದದ್ದೇ ಆದರೆ ದೇವರ ಅನುಗ್ರಹ ಯಾಕೆ ಬೇಕಿತ್ತು.?

 

ವಿಜ್ಞಾನಿ 2  :  ಬೇಕೆ ಬೇಕಾಗುತ್ತೆ. ವಿಜ್ಞಾನದ ಜೊತೆಗೇ ಭಗವಂತನ ಅನುಗ್ರಹವೂ ಬೇಕಾಗುತ್ತದೆ. ಅದು ವಿಜ್ಞಾನಿಗಳ ಮನೋಬಲವನ್ನು ಹೆಚ್ಚಿಸುತ್ತದೆಪ್ರಯತ್ನ ಫಲಿಸುತ್ತದೆ.

 

ಪತ್ರಕರ್ತ 1 : ಹಾಗಾದರೆ ನಾಲ್ಕು ವರ್ಷದ ಹಿಂದೆ ಚಂದ್ರಯಾನ 2 ಯೋಜನೆ ಯಾಕೆ ವಿಫಲವಾಯ್ತು ವಿಜ್ಞಾನಿಗಳೇ, ಆಗಲೂ ಇಸ್ರೋ ಅಧ್ಯಕ್ಷರೇ ತಿಮ್ಮಪ್ಪನ ಸನ್ನಿಧಿಗೆ ಬಂದು ಪೂಜೆ ಪುನಸ್ಕಾರ ಮಾಡಿ ಅನುಗ್ರಹ ಪಡೆದಿದ್ದರಲ್ಲವೇ? ಆಗ ವಿಜ್ಞಾನಿಗಳ ಮನೋಬಲ ಹೆಚ್ಚಾಗಿರಲಿಲ್ಲವೇ?

 

ವಿಜ್ಞಾನಿ 3  : ಅದು ವಿಜ್ಞಾನಿಗಳು ಮಾಡಿದ ತಪ್ಪಿನಿಂದಾದ ಕೊನೆಯ ಹಂತದಲ್ಲಿ ಪೆಲ್ಯೂರ್ ಆಯ್ತು ಅಷ್ಟೇ. ನಾವು ಮಿಸ್ಟೇಕ್ ಮಾಡಿದರೆ ದೇವರೇನು ಮಾಡೋಕಾಗುತ್ತೆ

 

ಪತ್ರಕರ್ತ 2 : ಹೌದೌದು. ವೈಜ್ಞಾನಿಕ ಯೋಜನೆ ವಿಫಲವಾದರೆ ಇಲ್ಲವೇ ಸಫಲವಾದರೆ ಅದು ನಿಮ್ಮಂತಾ ಮೇದಾವಿಗಳಾದ ವಿಜ್ಞಾನಿಗಳ ಪರಿಶ್ರಮದಿಂದ ಅಲ್ಲವೇ ವಿಜ್ಞಾನಿಗಳೇ.

 

ವಿಜ್ಞಾನಿ 3 : ಹೌದೌದು.. ನಮ್ಮಿಂದಲೇ..

 

ಪತ್ರಕರ್ತ 3 : ವಿಫಲತೆ ಮತ್ತು ಸಫಲತೆಗೆ ನೀವೇ ಹೊಣೆಗಾರರಾದಮೇಲೆ ಅದಕ್ಕೆ ದೇವರ ಅನುಗ್ರಹ ಯಾಕೆ ಬೇಕು? ದೈವ ಕೃಪೆ ಇರಲಿ ಬಿಡಲಿ ಕೊನೆಗೂ ಯೋಜನೆಯ ಪೇಲು ಪಾಸು ಅನ್ನೋದು ನಿಮ್ಮ ತಾಂತ್ರಿಕತೆಯ ಕೌಶಲತೆ ಹಾಗೂ ವೈಜ್ಞಾನಿಕ ಅವಿಷ್ಕಾರಗಳನ್ನು ಆಧರಿಸಿದೆ ಅಲ್ಲವೇ.

 

ವಿಜ್ಞಾನಿ 3 : ಅದು.. ಅದೇನಂದ್ರೆ.. ಏನೇ ಆಗಲಿ ಭಗವಂತನ ಆಶೀರ್ವಾದವೂ ನಮ್ಮ ಯೋಜನೆಯ ಮೇಲಿರಲಿ ಎಂಬುದಕ್ಕೆ..

 

ಮಹಿಳಾ ವಿಜ್ಞಾನಿ : ಅದೆಲ್ಲಾ ನಮ್ಮ ನಮ್ಮ ನಂಬಿಕೆ. ಅದನ್ನು ಕೇಳೋಕೆ ನೀವ್ಯಾರು? ಸಂವಿಧಾನ ಎಲ್ಲರಿಗೂ ಅವರವರ ಧರ್ಮದ ಆಚರಣೆಗೆ ಅನುಮತಿ ಕೊಟ್ಟಿದೆ ಅಲ್ವಾ?

 

ಪತ್ರಕರ್ತ 2 : ಹೌದು ಮೇಡಂ. ನಂಬಿಕೆ ಹಾಗೂ ಆಚರಣೆಗಳು ನಿಮ್ಮ ವ್ಯಕ್ತಿಗತ ಆಗಿದ್ದರೆ ನಾವೂ ಕೇಳ್ತಿರಲಿಲ್ಲ. ಆದರೆ ಈಗ ನೀವು ಮಾಡ್ತಿರೋದು ಸರಕಾರಿ ಕಾಯಕವೇ ಹೊರತು ವಯಕ್ತಿಕ ಕೆಲಸವಲ್ಲ. ನಾಳೆ ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿ ಇವತ್ತು ದೇವಸ್ಥಾನಕ್ಕೆ ಬಂದಿರುವುದು ಸರಕಾರಿ ಸೇವೆಯಲ್ಲಿರುವಾಗ. ಹಾಗಿರುವಾಗ ನಿಮ್ಮ ದೈವಾರಾಧನೆಯೂ ಸರಕಾರಿ ಕೆಲಸದ ಭಾಗವೇ ಆಯ್ತಲ್ವಾ

 

ಪತ್ರಕರ್ತ 1 : ಯಾವುದೋ ಒಂದು ಧಾರ್ಮಿಕ ನಂಬಿಕೆಯ ಮೇಲೆ ಸಾರ್ವಜನಿಕ ಕೆಲಸ ಮಾಡಬಹುದು ಅಂತಾ ಸಂವಿಧಾನದಲ್ಲಿ ಹೇಳಿದೆಯಾ ಮೇಡಂಜಿ. ಇಲ್ಲವಲ್ಲಾ.. ವ್ಯಕ್ತಿಗತ ನಂಬಿಕೆಯೇ ಬೇರೆ ಸರಕಾರಿ ಕೆಲಸದಲ್ಲಿ ನಿಮ್ಮ ಧಾರ್ಮಿಕ ನಂಬಿಕೆ ಆಚರಿಸೋದೇ ಬೇರೆ ಅಲ್ಲವೇ?

 

ವಿಜ್ಞಾನಿ 1 : ಅದು ಏನಪಾ ಅಂದ್ರೆ... ಅಂದ್ರೆ.. ದೇವರು ಅಂದ್ರೆ ಅದೊಂದು ಶಕ್ತಿ. ಅದರ ಮೇಲೆ ಎಲ್ಲರ ಭಕ್ತಿ. ಹೀಗಾಗಿ ನಾವೂ ಶಕ್ತಿಯ ಮೇಲೆ ಭಕ್ತಿ ಇಟ್ಟು ದೇವರ ಅನುಗ್ರಹಕ್ಕೆ ಬಂದಿದ್ದೇವೆ ಅಷ್ಟೇ.. ನಮಗಾಗಿ ಅಲ್ಲಾ ದೇಶದ ಒಳಿತಿಗಾಗಿ ಯೋಜನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲು ಬಂದಿದ್ದೇವೆ.. ನೀವು ತಪ್ಪಾಗಿ ಭಾವಿಸಬಾರದು.

 

ಪತ್ರಕರ್ತ 3 : ತುಂಬಾ ಒಳ್ಳೆಯ ಕೆಲಸ. ಕೇವಲ ಒಬ್ಬ ವ್ಯಕ್ತಿಯಾಗಿ ನಿಮ್ಮ ಖಾಸಗಿ ಸಮಯದಲ್ಲಿ ಯಾವ ದೇವರ ಕೃಪೆಗಾಗಿ ಬೇಕಾದರೂ ನೀವು ಪ್ರಾರ್ಥಿಸಬಹುದು ಸರ್.. ಆದರೆ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗೆ, ಸರಕಾರಿ ಕಾಯಕಮಾಡುವ ವಿಜ್ಞಾನಿಗಳಾದ ನೀವು ಹೀಗೆ ಮಾಡಿದರೆ ಹೇಗೆ?  

 

ಪತ್ರಕರ್ತ 1 : ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಅಲ್ಲವೇ? ಎಲ್ಲರೂ ನಿಮ್ಮ ಹಾಗೆ ದೇವರ ಮೇಲೆ ಭಾರ ಹಾಕಿ ಮಾಡುವ ಕೆಲಸ ಸರಿಯಾಗಿ ಮಾಡದೇ ಹೋದರೆ ದೇಶದ ಗತಿಯೇನು

 

ಭಕ್ತ : ( ತಲೆ ಬೋಳಿಸಿಕೊಂಡು ಹಣೆತುಂಬಾ ಮೂರು ನಾಮ ಬಳಿದುಕೊಂಡ ಭಕ್ತ ಪ್ರವೇಶಿಸಿವೆಂಕಟರಮಣ ಗೋವಿಂದಾ ಗೋವಿಂದ.

 

ಪತ್ರಕರ್ತ 2 : ನೋಡಿದ್ರಾ ವಿಜ್ಞಾನಿಗಳೇ. ಅಮಾಯಕ ಭಕ್ತ ದೇವರನ್ನು ನಂಬುವುದಕ್ಕೂ  ವಿಜ್ಞಾನಿಗಳಾದ ನೀವು ನಂಬಿಕೆ ಪ್ರದರ್ಶಿಸುವುದಕ್ಕೂ ವ್ಯತ್ಯಾಸ ಇದೆ. ಆತ ಮುಗ್ದ, ನೀವು ಮೇಧಾವಿಗಳು. ಆತ ಭಾವಜೀವಿ, ನೀವು ಭೌತಿಕಶಾಸ್ತ್ರ ಪರಿಣಿತರು. ಅಲ್ಲವೇ.

 

ಮಹಿಳಾ ವಿಜ್ಞಾನಿ  : ಯಾಕೆ ನಾವೂ ಮನುಷ್ಯರಲ್ಲವೇ? ನಮಗೆ ಭಾವನೆಗಳಿಲ್ಲವೇ?

 

ಪತ್ರಕರ್ತ 1 : ಹೌದು ಇವೆ, ಇರಬೇಕು.. ಆದರೆ ಬರೀ ಭಾವನೆಗಳು ನಿಮ್ಮ ಚಂದ್ರಯಾನವನ್ನು ಯಶಸ್ವಿಗೊಳಿಸುವುದಿಲ್ಲವಲ್ಲಾ. ಅದಕ್ಕೆ ಭೌತಶಾಸ್ತ್ರ, ಗಣಿತಶಾಸ್ತ್ರ, ಖಗೋಳಶಾಸ್ರ್ತಗಳ ಅಧ್ಯಯನ ಬೇಕಲ್ಲವೇ?

 

ಭಕ್ತ : ಏನು ಹೇಳಿದ್ರಿ ಗೋವಿಂದಾ. ಶಾಸ್ತ್ರ ಅಂದ್ರಾ? ಇವರಿಗೆ ಶಾಸ್ತ್ರ ಹೇಳೋಕೂ ಬರುತ್ತಾ

 

ವಿಜ್ಞಾನಿ 3 : ಅಯ್ಯೋ ಮುಂದಕ್ಕೋಗಿ ಗೋವಿಂದಾ, ಇಲ್ಲಿ ನಮ್ಮ ಶಾಸ್ತ್ರಗಳೇ ಬೇರೆ ಇವೆ

 

ಭಕ್ತ : ಏಳುಕೊಂಡಲವಾಡಾ ಗೋವಿಂದಾ.. ಗೋವಿಂದ

 

ಪತ್ರಕರ್ತ 2 : ನೋಡಿ ವಿಜ್ಞಾನಿಗಳೇ, ನಿಮ್ಮ ಬದ್ದತೆಯ ವೈಜ್ಞಾನಿಕ ಕೆಲಸ ಮತ್ತು ಸಾಧನೆಯ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ. ಮೌಢ್ಯಾಚರಣೆಯ ಜೊತೆ ಬೆಸೆಯಲಾದ ಜಗತ್ತಿನ ನಿಗೂಢ ರಹಸ್ಯಗಳನ್ನು ಬಿಡಿಸಿ ಹೇಳಬೇಕಾದ ನಿಮಗೆ ಆಧ್ಯಾತ್ಮಿಕ ಭಾವತೀವ್ರತೆಗಿಂತಾ ವೈಚಾರಿಕತೆ ಮುಖ್ಯವಾಗುತ್ತದೆ

 

ವಿಜ್ಞಾನಿ 1 : ನೀವು ಹೇಳುವುದರಲ್ಲೂ ಅರ್ಥವಿದೆ. ಆದರೆ ನಾವೂ ನಮ್ಮ ಮೇಲಿನವರ ಮಾತು ಕೇಳಬೇಕಾಗುತ್ತದೆ. ( ಅಷ್ಟರಲ್ಲಿ ಮಹಿಳಾ ವಿಜ್ಞಾನಿಯ ಪೋನ್ ರಿಂಗಣಿಸುತ್ತದೆ)

 

ಮಹಿಳಾ ವಿಜ್ಞಾನಿ : ( ಪೋನ್ ಕರೆ ಎತ್ತಿ) ಸರ್.. ಆಯ್ತು ಸರ್. ಪೂಜೆ ಆಯ್ತು ಸರ್

 

ಇಸ್ರೋ ಅಧ್ಯಕ್ಷ : ( ಪೋನಿನಲ್ಲಿನೋಡ್ರಿ ಸರಿಯಾಗಿ ಮನಪೂರ್ವಕವಾಗಿ ಪೂಜೆ ಮಾಡಿ. ಕಳೆದ ಸಲದ ಚಂದ್ರಯಾನ ವಿಫಲವಾದಂತೆ ಸಲ ಆಗಬಾರದು ಅಂದ್ರೆ ದೇವರ ದಯೆ ಬಹಳ ಮುಖ್ಯ. ಇನ್ನೊಬ್ಬ ದೇವತೆ ಕೃಪೆಯೂ ನಮ್ಮ  ಬಾಹ್ಯಾಕಾಶ ಮಿಶನ್ ಮೇಲೆ ಇರಲಿ ಎಂದು ಚೆಂಗಲಮ್ಮ ಪರಮೇಶ್ವರಿಣಿ ದೇವಸ್ಥಾನಕ್ಕೆ ಬಂದು ಶೃದ್ದೆಯಿಂದ ಪೂಜೆ ಮಾಡಿಸಿದೆ. ಕಳೆದ ಸಲ ತಿಮ್ಮಪ್ಪನನ್ನು ಮಾತ್ರ ನಂಬಿದ್ದಕ್ಕೆ ಅಂದುಕೊಂಡ ಯಶಸ್ಸು ಸಿಗಲಿಲ್ಲವಲ್ಲಾ ಅದಕ್ಕೆ ಸೇಪ್ಟಿಗೆ ಇನ್ನೊಬ್ಬ ಪವರ್ ಪುಲ್ ದೇವತೆಯ ಅನುಗ್ರಹವೂ ಇರಲಿ ಅಂತಾ. ನೀವೆಲ್ಲಾ ಬೇಗ ಬಂದುಬಿಡಿ..

 

ಮಹಿಳಾ  ವಿಜ್ಞಾನಿ : ಆಯ್ತು ಸರ್.. ಈಗಲೇ ಬರ್ತೇವೆ ಸರ್..

 

ವಿಜ್ಞಾನಿ 3 : ನೋಡಿದ್ರಲ್ಲಾಇಸ್ರೋ ಅಧ್ಯಕ್ಷರೇ ಹೇಳಿದ ಮೇಲೆ ನಾವೂ ಮಾಡಲೇಬೇಕಲ್ಲವೇ. ಏನೇ ಹೇಳಿ ಸರ್ ನಂಬಿಕೆ ಮುಖ್ಯ ಅಲ್ವಾ?

 

ಪತ್ರಕರ್ತ 1: ಥೋ ಏನಪ್ಪಾ ಹೇಳೋದು. ಬೆಳಗಿನವರೆಗೂ ರಾಮಾಯಣ ಕೇಳಿ ಅದೇನೋ ರಾಮನಿಗೆ..

 

ಪತ್ರಕರ್ತ 2 : ಅದು ಗೊತ್ತಿರೋದೆ ಬಿಡು. ಅಲ್ಲಾ ಸಾರ್ ವಿಜ್ಞಾನಿಗಳೇ. ಮೊನ್ನೆ ನಿಮ್ಮ ಇಸ್ರೋದ ಮಾಜಿ ಅಧ್ಯಕ್ಷರಿಗೆ ಶ್ರೀಲಂಕಾದಲ್ಲಿ ಹಾರ್ಟ ಅಟ್ಯಾಕ್ ಆಗಿತ್ತಲ್ಲಾ, ಅವರನ್ನು ಅಲ್ಲಿಂದ ಏರ್ ಲಿಪ್ಟ್ ಮಾಡಿ ಚಿಕಿತ್ಸೆ ಕೊಟ್ಟು ಬದುಕಿಸಿದ್ದು ವೈಜ್ಞಾನಿಕ ಸಾಧನೆಯಾ ಇಲ್ಲಾ ದೇವರ ಕೃಪೆಯಾ

 

ಮಹಿಳಾ ವಿಜ್ಞಾನಿ : ಎರಡೂ ಇರಬಹುದು ಬಿಡಿ.. ನಾವು ಬೇಗ ಹೋಗಬೇಕಿದೆ.

 

ಪತ್ರಕರ್ತ 1 : ಆಯ್ತು.. ನಿಮ್ಮ ನಂಬಿಕೆ ನೀವು ಇಟ್ಕೊಳ್ಳಿ ಆದರೆ ಸರಕಾರಿ ಸಾರ್ವತ್ರಿಕ ಕೆಲಸದಲ್ಲಿ ಬೇಡ ಅನ್ನೋದು ನಮ್ಮ ಆಶಯ.

 

ಪತ್ರಕರ್ತ 2 : ನಿಮ್ಮೆಲ್ಲರ ಪರಿಶ್ರಮದಿಂದ ತಯಾರಾದ ಉಪಗ್ರಹದ ಉಡಾವಣೆ ಯಶಸ್ವಿಯಾಗಲಿ. ಚಂದ್ರಯಾನ - 3 ತನ್ನ ಗುರಿ ತಲುಪಲಿ ಎಂದು ನಾವೆಲ್ಲಾ ಆಶಿಸುತ್ತೇವೆ

 

ವಿಜ್ಞಾನಿ 3 :  ಧನ್ಯವಾದ.. ನಾವಿನ್ನು ಹೊರಡುತ್ತೇವೆ. ದಯವಿಟ್ಟು ಇದನ್ನೆಲ್ಲಾ ಪ್ರಸಾರ ಮಾಡಬೇಡಿ. ನಮಗೆ ತೊಂದರೆ ಆಗುತ್ತದೆ

 

ಭಕ್ತ : ವೆಂಕಟರಮಣ ಗೋವಿಂದಾ ಗೋವಿಂದಾ. ಹೋ ಶಾಸ್ತ್ರ ಹೇಳೋರು ಇನ್ನೂ ಇಲ್ಲೇ ಇದ್ದೀರಾ. ಪ್ರತಿ ವರ್ಷ ಭಕ್ತಿಯಿಂದ ತಿಮ್ಮಪ್ಪನ ದರ್ಶನಕ್ಕೆ ಕಾಲ್ನೆಡಿಗೆಯಿಂದಾ ಬಂದು ಮುಡಿ ಕೊಟ್ಟು ಹರಕೆ ಕಟ್ತಾ ಬಂದಿದ್ದೇನೆ ಗೋವಿಂದಾ. ಆದರೂ ನನ್ನ ತಾಪತ್ರಯ ತೀರಿಲ್ಲಾ ಗೋವಿಂದಾ. ಶಾಸ್ತ್ರ ನೋಡಿ ಪರಿಹಾರ ಹೇಳಿ ಗೋವಿಂದಾ..

 

( ಎಲ್ಲರೂ ನಕ್ಕು ಹೊರಡುತ್ತಾರೆ.

 

 ಭಕ್ತ : (ಜೋರಾಗಿನನ್ನ ತಾಪತ್ರಯ ಯಾವಾಗ ತೀರಿಸ್ತೀಯಾ ಏಳುಕೊಂಡಳವಾಡಾ ಗೋವಿಂದಾ.. ಗೋವಿಂದ..

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ