ಮತ್ತೊಬ್ಬ ಕಿಂಗ್ ಲೀಯರ್ (ಪ್ರಹಸನ -40)
(ಪ್ರಹಸನ -40)
ಮತ್ತೊಬ್ಬ ಕಿಂಗ್ ಲೀಯರ್
**********************************
(ಶೇಕ್ಸಪೀಯರ್ ನ ಕಿಂಗ್ ಲೀಯರ್ ಮತ್ತೆ ಈಗ ಈ ಕಲಿಗಾಲದಲಿ ಮರುಜನ್ಮ ತಾಳಿ ಬಂದು ಬಹು ದೊಡ್ಡ ಶ್ರೀಮಂತನಾಗಿ ಮೆರೆಯತೊಡಗಿದ.
ಈ ಜನ್ಮದಲ್ಲೂ ಆತನಿಗೆ ಮೂವರು ಹೆಣ್ಣುಮಕ್ಕಳು.
ಎಲ್ಲರಿಗೂ ಮದುವೆಯಾಗಿದೆ.
ಮುದಿತನ ಹೆಚ್ಚಾಗಿ ತನ್ನೆಲ್ಲಾ ಆಸ್ತಿಯನ್ನು ತನ್ನ ಮೂವರೂ ಹೆಣ್ಣುಮಕ್ಕಳಿಗೆ ಹಂಚಿ ಆಶ್ರಮವಾಸಿಯಾಗಿ ಬಾಕಿ ಬದುಕನ್ನು ಕಳೆಯಬೇಕೆಂದು ನಿರ್ಧರಿಸಿ ತನ್ನ ವಿದೂಷಕ ಮಿತ್ರನನ್ನು ಕರೆಸಿದ)
ದೃಶ್ಯ 1
ಲೀಯರ್ : ನೋಡು ಮಿತ್ರ ವಿದೂಷಕ. ಈ ಇಳಿವಯಸ್ಸಿನಲ್ಲಿ ನನ್ನ ಈ ಬ್ರಹತ್ ಉದ್ಯಮ ಸಾಮ್ರಾಜ್ಯವನ್ನು ನನ್ನಿಂದ ನಿರ್ವಹಿಸಲು ಸಾಧ್ಯವಿಲ್ಲ.
ವಿದೂಷಕ : ಅದನ್ನು ನಿರ್ವಹಿಸಲು ಸಿಇಓ ಗಳು, ಮ್ಯಾನೇಜರ್ ಗಳು ಇದ್ದಾರಲ್ಲಾ ದೊರೆ.
ಲೀಯರ್ : ಅವರೆಲ್ಲಾ ಸಂಬಳಕ್ಕೆ ದುಡಿಯುವವರು. ನಾಳೆ ನಾನೇನಾದರೂ ವಿಧಿವಶನಾದರೆ ಈ ಸಮಸ್ತ ಆಸ್ತಿಯ ಗತಿ ಏನು?
ವಿದೂಷಕ : ನಿಮಗೆ ಒಬ್ಬರಲ್ಲಾ ಇಬ್ಬರಲ್ಲಾ ಮೂವರು ಹೆಣ್ಣುಮಕ್ಕಳು ಹಾಗೂ ಅಷ್ಟೇ ಅಳಿಯಂದಿರೂ ಇದ್ದಾರಲ್ಲಾ. ಅವರು ನೋಡಿಕೊಳ್ಳುತ್ತಾರೆ ಚಿಂತೆ ಬಿಡಿ.
ಲೀಯರ್ : ಅದು ಹೇಗೆ ಸಾಧ್ಯ? ಆಸ್ತಿಗಾಗಿ ಕಿತ್ತಾಡುತ್ತಾರೆ, ನ್ಯಾಯಾಲಯಗಳಿಗೆ ಅಲೆದಾಡುತ್ತಾರೆ.
ಹಾಗೇನಾದರೂ ಆದರೆ ನನ್ನ ಮನೆತನದ ಮರ್ಯಾದೆ ಬೀದಿಪಾಲು..
ವಿದೂಷಕ : ಹೌದು, ಹಾಗಾಗುವ ಸಾಧ್ಯತೆಗಳೂ ಬೇಕಾದಷ್ಟಿವೆ ದೊರೆ.
ಲೀಯರ್ : ಅದಕ್ಕೆ ಎಲ್ಲಾ ಹೆಣ್ಣುಮಕ್ಕಳಿಗೂ ಅವರವರ ಯೋಗ್ಯತೆಗೆ ಅನುಗುಣವಾಗಿ ನನ್ನ ಆಸ್ತಿಯನ್ನು ಭಾಗಮಾಡಿ ಹಂಚಬೇಕೆಂದಿರುವೆ.
ವಿದೂಷಕ : ಆಯ್ತು ಬಿಡಿ, ಉತ್ತಮ ನಿರ್ಧಾರ. ಮೂರೂ ಹೆಣ್ಣು ಮಕ್ಕಳಿಗೆ ಸರಿಸಮನಾಗಿ ಆಸ್ತಿಯನ್ನು ಹಂಚಿಕೆ ಮಾಡಿದರಾಯ್ತು.
ಲೀಯರ್ : ಅರೆ ಅದು ಹೇಗೆ ಸಾಧ್ಯ? ಯಾರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೋ ಅವರಿಗೆ ಹೆಚ್ಚು ಸಂಪತ್ತು ಕೊಡುವುದೇ ಸೂಕ್ತವಲ್ಲವೇ?
ವಿದೂಷಕ : ಅಯ್ಯೋ ದೊರೆ, ಹಾಗೇನಾದರೂ ಮಾಡಿಬಿಟ್ಟೀರಿ.
ಈ ಹಿಂದಿನ ಜನ್ಮದಲಿ ಹೀಗೆ ಹೆಣ್ಣುಮಕ್ಕಳಿಬ್ಬರ ಗಿಲೀಟು ಪ್ರೀತಿ ಮಾತಿಗೆ ಬೆರಗಾಗಿ ನಿಮ್ಮ ಸಾಮ್ರಾಜ್ಯವನ್ನು ಹಂಚಿ ಕೊನೆಯ ಮಗಳನ್ನು ಗಡಿಪಾರು ಮಾಡಿದಿರಿ. ಆದರೆ ಆಸ್ತಿ ಪಡೆದವವರೇ ನಿಮ್ಮನ್ನು ನಿರ್ಲಕ್ಷಿಸಿ ಕಾಡು ಪಾಲು ಮಾಡಿದರು. ಗಡಿಪಾರಾದ ಕೊನೆಯ ಮಗಳ ದಯೆಯಿಂದ ಬದುಕಿದಿರಿ. ಅದೆಲ್ಲವನ್ನೂ ಮರೆತು ಬಿಟ್ಟಿದ್ದೀರಾ?
ಲೀಯರ್ : ಯಾವುದನ್ನೂ ಮರೆತಿಲ್ಲಾ ವಿದೂಷಕ. ಮಕ್ಕಳ ಮೋಹದಲಿ ಮತಿ ಕಳೆದುಕೊಂಡ ನಾನು ಆಗ ನಿನ್ನ ಬುದ್ದಿ ಮಾತು ಕೇಳದೇ ತಪ್ಪು ಮಾಡಿ ಬಿಟ್ಟೆ. ಈ ಜನ್ಮದಲ್ಲಿ ಮತ್ತದೇ ತಪ್ಪು ಮಾಡಲಾರೆ. ಯಾರು ನನ್ನನ್ನು ನಿಜವಾಗಿ ಪ್ರೀತಿಸುತ್ತಾರೋ ಅವರಿಗೆ ಮಾತ್ರ ನನ್ನ ಸಕಲ ಸಂಪತ್ತು ಕೊಡುತ್ತೇನೆ.
ವಿದೂಷಕ : ಮತ್ತದೇ ವರಸೆ. ಮಕ್ಕಳ ಮೇಲೆ ಮತ್ತೆ ಮೋಹಪೀಡಿತರಾಗದಿರಿ ದೊರೆ ಮತ್ತೆ ನಮಗಿಬ್ಬರಿಗೂ ಕಾಡೇ ಗತಿಯಾದೀತು.
ಲೀಯರ್ : ಈ ಸಲ ಹಾಗಾಗದಿರಲಿ. ಈಗ ನನ್ನ ಮುಂದಿರುವ ಪ್ರಶ್ನೆ ಇರುವ ಮೂವರು ಹೆಣ್ಣು ಮಕ್ಕಳಲ್ಲಿ ಯಾರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ, ಯಾರು ನನ್ನ ಉತ್ತರಾಧಿಕಾರಿಯಾಗಲು ಯೋಗ್ಯರು ಎಂದು ಹೇಗೆ ಕಂಡು ಹಿಡಿಯುವುದು?
ವಿದೂಷಕ : (ಅತ್ತಿಂದಿತ್ತ,
ಇತ್ತಿಂದತ್ತ ಓಡಾಡಿ, ಯೋಚಿಸಿ)
ದೊರೆಗಳೆ ಹೀಗೆ ಮಾಡಿದರೆ ಹೇಗೆ? ಹೀಗೆ ಹೇಳ್ತೇನೆಂದು ಬೇಸರ ಮಾಡ್ಕೋಬೇಡಿ. ನೀವು ದಿವಂಗತರಾದರೆ ಆಗ ನಿಮ್ಮ ಮಕ್ಕಳಲ್ಲಿ ಯಾರು ಎಷ್ಟು ಪೀಲ್ ಮಾಡ್ಕೋತಾರೆ ಅಂತಾ ಗೊತ್ತಾಗುತ್ತದೆ.
ಲೀಯರ್ : ಏನು ಅಪದ್ದ ಮಾತು ನಿನ್ನದು. ನಾನೇ ಸತ್ತ ಮೇಲೆ ಯಾರು ಅದೆಷ್ಟು ಅತ್ತರೇನು. ನನಗೆ ಹೇಗೆ ಗೊತ್ತಾಗುತ್ತದೆ.
ವಿದೂಷಕ : ಅದು ಹಾಗಲ್ಲ ದೊರೆ.. ನಾನು ಹೇಳಿದ ಹಾಗೆ ಮಾಡಿದರೆ ಯಾರು ನಿಮ್ಮನ್ನು ನಿಜವಾಗಿ ಇಷ್ಟ ಪಡುತ್ತಾರೆ ಅಂತಾ ಖಂಡಿತಾ ಗೊತ್ತಾಗುತ್ತದೆ. ಈಗ ನಾನು ಹೇಳಿದ ಹಾಗೆ ಉಯಿಲು ಬರೆದು ಲಕೋಟೆಲ್ಲಿಟ್ಟು ಸೀಲ್ ಮಾಡಿ ನನಗೆ ಕೊಟ್ಟು ಸಾಯುವಂತವರಾಗಿ. ಮುಂದಿನದನ್ನು ನಾನು ನೋಡಿಕೊಳ್ಳುವೆ. ( ಎಂದು ಲೀಯರ್ ಕಿವಿಯಲ್ಲಿ ತನ್ನ ಯೋಜನೆಯನ್ನು ವಿವರಿಸುತ್ತಾನೆ) ಇಷ್ಟೇ ದೊರೆಗಳೇ. ಈಗ ನೀವು ನಿಮ್ಮ ಅಂತಿಮ ಇಚ್ಚೆಯನ್ನು ಬರೆಯಿರಿ.
ಲೀಯರ್ : (ಪೆನ್ನು ಪೇಪರ್ ಹಿಡಿದುಕೊಂಡು) ಅದೇ ಅಂತಿಮ ಇಚ್ಚೆ ಏನೆಂದು ಬರೆದು ತಿಳಿಸಲಿ.
ವಿದೂಷಕ : ಅಯ್ಯೋ ಮರುಗುಳಿ ದೊರೆ. ನಾನು ಹೇಳಿದಂತೆ ಬರೆಯಿರಿ. " ನಾನು ನಿಮ್ಮ ಪ್ರೀತಿಯ ತಂದೆ ಯಾವಾಗ ಬೇಕಾದರೂ ವಿಧಿವಶವಾಗಬಹುದು.
ನನ್ನ ಕೊನೆಯ ಇಚ್ಚೆ ಏನೆಂದರೆ ನಾನು ಸತ್ತ ನಂತರ ನನ್ನ ಶವದ ಮೇಲೆ ನನ್ನ ಹೆಣ್ಣುಮಕ್ಕಳು ಒಂದೊಂದು ಕೋಟಿ ರೂಪಾಯಿ ಹಣವನ್ನು ತಂದು ಇಡಬೇಕು ಹಾಗೂ ಆ ಹಣವನ್ನು ನನ್ನ ಪಾರ್ಥೀವ ಶರೀರದ ಜೊತೆಗೆ ಸುಡಬೇಕು. ಯಾಕೆಂದರೆ ಸ್ವರ್ಗದಲ್ಲಿ ನನ್ನ ಖರ್ಚಿಗೆ ಹಣ ಬೇಕಾಗಬಹುದು. ನನ್ನ ಅಂತಿಮ ಇಚ್ಚೆಯನ್ನು ಯಾರು ಪ್ರಾಮಾಣಿಕವಾಗಿ ಈಡೇರಿಸುತ್ತಾರೋ ಅವರಿಗೆ ನನ್ನ ಆಸ್ತಿಯನ್ನೆಲ್ಲಾ ಕೊಡುತ್ತೇನೆಂದು ಮರಣಪತ್ರ ಬರೆದು ಇಟ್ಟಿರುವೆ"
ಲೀಯರ್ : ಆಯಿತು, ನೀನು ಹೇಳಿದ ಹಾಗೆ ಬರೆದಿರುವೆ. ಇದನ್ನು ನನ್ನ ಮೂವರು ಹೆಣ್ಣು ಮಕ್ಕಳಿಗೂ ತಲುಪಿಸು. ನಾನು ಇಂದು ರಾತ್ರೀಯೇ ಸಾಯುತ್ತೇನೆ. ನಾಳೆ ಬೆಳಿಗ್ಗೆ ಎಲ್ಲರಿಗೂ ಸುದ್ದಿ ತಲುಪಿಸು. ನನ್ನ ಅಂತಿಮ ಇಚ್ಚೆ ಈಡೇರಿಸುವವರಿಗೇ ನನ್ನ ಸಕಲ ಆಸ್ತಿ ದೊರೆಯುವಂತೆ ಏರ್ಪಾಡು ಮಾಡು.
ವಿದೂಷಕ : ಆಯ್ತು. ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವೆ ದೊರೆ. ನಿಮ್ಮ ಸ್ವರ್ಗಾರೋಹಣ ಪ್ರಯತ್ನ ಯಶಸ್ವಿಯಾಗಲಿ.
ದೃಶ್ಯ 2
(ಲೀಯರ್ ಶವ ದೊಡ್ಡ ಹಾಲ್ ನಡುವೆ ಮಲಗಿಸಲಾಗಿದೆ.
ದೇಹದ ಮೇಲೆ ಹೂಹಾರಗಳಿವೆ. ಮೊದಲ ಮಗಳು ಗಂಡನ ಜೊತೆಗೆ ಅಳುತ್ತಲೇ ಓಡಿ ಬರುತ್ತಾಳೆ)
ಮೊದಲ ಮಗಳು : ಅಯ್ಯೋ ಅಪ್ಪಾ. ನಮ್ಮನ್ನೆಲ್ಲಾ ಬಿಟ್ಟು ಹೊರಟೇ ಬಿಟ್ಟೆಯಾ. ನಮಗಿನ್ನು ಯಾರು ಗತಿ. ನಿನ್ನ ದೀರ್ಘಾಯಸ್ಸಿಗಾಗಿ ನಿನ್ನೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದೆ. ಹೌದಲ್ವಾ ಹೇಳ್ರಿ.
ಗಂಡ : ಹೌದೌದು ಮಾವಾ. ನಿಮ್ಮನ್ನ ನಾವು ತುಂಬಾನೇ ಮಿಸ್ ಮಾಡ್ಕೋಳ್ತೀವಿ.
ನೀವಿಲ್ಲದೇ ಈ ಆಸ್ತಿಗೆಲ್ಲಾ ಇನ್ನು ಯಾರು ದಿಕ್ಕು. ನಾವು ಯಾರೇ ನೋಡಿಕೊಂಡರೂ ನೀವು ಇದ್ದಹಾಗೆ ಆಗೋದಿಲ್ಲ.
ಮೊದಲ ಮಗಳು : (ಎದೆ ಬಡಿದುಕೊಂಡು ಅಳುತ್ತಾ) ರ್ರೀ.. ನನ್ನ ತಂದೆಯವರ ಕೊನೆಯ ಇಚ್ಚೆಯಂತೆ ಹಣದ ಪೆಟ್ಟಿಗೆಯನ್ನು ಅವರ ಎದೆ ಮೇಲೆ ಇಡ್ರೀ. ಅದರಿಂದಾ ಅವರ ಆತ್ಮಕ್ಕೆ ತೃಪ್ತಿಯಾಗಲಿ..
ಅಯ್ಯೋ ಅಪ್ಪಾ.. ( ಗೋಳಾಡುವಳು. ಅವಳ ಗಂಡ ಹಣದ ಪೆಟ್ಟಿಗೆ ಇಡುವನು. ಅಷ್ಟರಲ್ಲಿ ಎರಡನೇ ಮಗಳು ತನ್ನ ಗಂಡನ ಜೊತೆ ಗೋಳಾಡುತ್ತಲೇ ಓಡಿ ಬಂದು ಶವದ ಕಾಲ ಬಳಿ ಹೊರಳಾಡುವಳು)
ಎರಡನೇ ಮಗಳು : ನೀವಿಲ್ಲದೇ ನಾವು ಹೇಗಪ್ಪಾ ಇರೋದು. ನೀವಿಲ್ಲದೇ ಈ ಆಸ್ತಿ ಅಂತಸ್ತನ್ನು ಹೇಗೆ ಅನುಭವಿಸೋದು. ಇಂದಿಲ್ಲಾ ನಾಳೆ ಈ ಸಂಪತ್ತೇನೋ ನಮಗೆ ಸಿಗುತ್ತದೆ ಆದರೆ ಹೋದ ತಂದೆ ಮತ್ತೆ ಸಿಗೋದಿಲ್ಲ ಏನ್ ಮಾಡಲಿ.. ಅಪ್ಪಾ.. ನಿನ್ನ ಕೊನೆಯ ಆಸೆಯಂತೆ ನೀ ಕೇಳಿದಷ್ಟು ಹಣ ತಂದಿರುವೆ. ರ್ರೀ ಆ ಪೆಟ್ಟಿಗೆಯನ್ನ ತಂದೆಯವರ ಮೇಲೆ ಇಡಿ. ಅವರ ಆತ್ಮ ನೆಮ್ಮದಿಯಾಗಿ ಹೋಗಲಿ. ( ಆಕೆಯ ಗಂಡ ಪೆಟ್ಟಿಗೆಯನ್ನು ಹೆಣದ ಎದೆಯ ಮೇಲೆ ಇಡುತ್ತಾನೆ. ಮಗಳು ಗೋಳಾಡುತ್ತಾಳೆ.)
( ಕಿರಿಯ ಮಗಳು ಗಂಡನ ಜೊತೆಗೆ ಮೌನವಾಗಿ ಬಂದು ನಿಲ್ಲುತ್ತಾಳೆ. ಹೂವಿನ ಹಾರವನ್ನು ತಂದೆಯ ಶವಕ್ಕೆ ಹಾಕುತ್ತಾಳೆ. ಎದೆಯ ಮೇಲೆ ಪೆಟ್ಟಿಗೆಯನ್ನಿಟ್ಟು ನಮಸ್ಕರಿಸುತ್ತಾಳೆ, ಆಕೆಯ ಗಂಡನೂ ಅವಳನ್ನು ಅನುಕರಿಸುತ್ತಾನೆ)
ಮೊದಲ ಮಗಳು : ಏನೇ ಇದು. ಸತ್ತವರು ನಿನ್ನ ಅಪ್ಪಾ ಕಣೆ. ಒಂದಿಷ್ಟಾದರೂ ದುಃಖ ಪಡ್ತಿದ್ದೀಯಾ.
ಈ ಆಸ್ತಿಯಲ್ಲಿ ಪಾಲು ಹೊಡೆಯಲು ತಂದೆ ಸಾವಿಗೆ ಕಾಯ್ತಾ ಇದ್ದೆ ಏನೇ ರಾಕ್ಷಸಿ. ನೋಡಿ ಅಪ್ಪಾ, ನಿಮ್ಮ ಪ್ರೀತಿಯ ಕೊನೆಯ ಮಗಳಿಗೆ ನಿಮ್ಮ ಮೇಲೆ ಒಂದಿಷ್ಟೂ ಪ್ರೀತಿಯಿಲ್ಲ.
ನೋಡಿ ನೋಡಿ ಇವಳ ಕಣ್ಣಲ್ಲಿ ಒಂದೇ ಒಂದು ಹನಿ ನೀರಿಲ್ಲ.
ಕೊನೆಯ ಮಗಳು : ಅಕ್ಕಾ.. ಹುಟ್ಟಿದವರಿಗೆ ಸಾವು ಕಟ್ಟಿಟ್ಟ ಬುತ್ತಿ. ಇದ್ದವರು ಅತ್ತು ಕರೆದು ಮಾಡಿದರೆ ಅಪ್ಪನ ಆತ್ಮ ನೊಂದುಕೊಳ್ಳುತ್ತದೆ.
ಇದ್ದಾಗ ಮಾತ್ರ ಅಲ್ಲಾ ನಮ್ಮನ್ನಗಲಿ ಹೋದಾಗಲೂ ಅಪ್ಪ ನೊಂದುಕೊಳ್ಳದೇ ಇರಲಿ. ಅವರು ಚಿರನಿದ್ರೆಯಲ್ಲೂ ನೆಮ್ಮದಿಯಾಗಿರಲಿ.
ಎರಡನೇ ಮಗಳು : ಏನೇ ಅಪ್ಪನ ಸಾವಿಗಾಗೇ ಕಾಯ್ತಾ ಇದ್ದೇ ಏನೇ. ಅವರಿದ್ದಾಗ ಹತ್ತಿರ ಆಗಿದ್ದೆ. ನೀನೇ ಮುದ್ದಿನ ಮಗಳು ಅಂತಾ ಅಪ್ಪಾ ನಿನ್ನ ತನ್ನ ತಲೇ ಮೇಲಿಟ್ಟು ಮೆರಿಸ್ತಾ ಇದ್ರು. ಅಂತಾ ಪ್ರೀತಿಸೋ ತಂದೇನೇ ಸತ್ತಾಗ ಒಂದಿಷ್ಟಾದರೂ ನೋವು ಇದೆಯೇನೆ ನಿನಗೆ. ಥೂ ನೀನೂ ಒಬ್ಬಳು ಮಗಳಾ. ಶನಿ ಶನಿ ನೀನು.
ಕೊನೆಯ ಮಗಳು : ಅಕ್ಕಂದಿರಾ ನೀವು ನನಗಿಂತಾ ದೊಡ್ಡವರು. ಏನು ಬೇಕಾದರೂ ಅನ್ನಿ. ಆದರೆ ಎಲ್ಲರ ಬದುಕಿನ ಅಂತಿಮ ಸತ್ಯ ಸಾವು. ಅದನ್ನು ಅರಿತವರು ಗೋಳಾಡುವುದಕ್ಕಿಂತಾ ನಗುನಗುತ್ತಾ ಕಳಿಸಿಕೊಡುವುದು ಒಳ್ಳೆಯದು. ತಂದೆಯವರು ಇಲ್ಲವಾದಾಗಲೂ ಅತ್ತು ಕರೆದು ಗೋಳಾಡಿ ಅವರಿಗೆ ನೋವು ಕೊಡುವುದು ನನಗೆ ಇಷ್ಟವಿಲ್ಲ. ನೀವು ನಿಮಗಿಷ್ಟ ಬಂದಂತೆ ಮಾಡಿ.
ವಿದೂಷಕ : ಇರಲಿ ಮಾತು ಸಾಕು. ದೊರೆಗಳ ಅಂತಿಮ ಯಾತ್ರೆಗೆ ಸಕಲ ಸಿದ್ದತೆಯಾಗಿದೆ. ಪಾರ್ಥೀವ ಶರೀರವನ್ನು ಸಾಗಿಸಲು ಅನುವುಮಾಡಿಕೊಡಿ. ಯಾರಲ್ಲಿ ಇತ್ತ ಬನ್ನಿ.
ಮೊದಲ ಮಗಳು : ಅರೆ ಅದು ಹೇಗೆ ಸಾಧ್ಯ. ಅಪ್ಪ ಬರೆದಿಟ್ಟ ಉಯಿಲನ್ನು ಮೊದಲು ಓದಿ, ಆಮೇಲೆ ಅಂತಿಮ ಯಾತ್ರೆ.
ಎರಡನೇ ಮಗಳು : ಹೌದೌದು. ಮೊದಲು ಮರಣಪತ್ರದಲ್ಲಿ ಏನು ಬರೆದಿದ್ದಾರೆ ಅದನ್ನು ಓದಿ. ಅದರಲ್ಲಿ ನನ್ನ ಪಾಲು ಎಷ್ಟು ಅನ್ನೋದು ನನಗೆ ಈಗಲೇ ಗೊತ್ತಾಗಬೇಕು.
ಕಿರಿಯ ಮಗಳು : ಅಕ್ಕಂದಿರಾ. ಅದೆಲ್ಲಾ ಈಗೇಕೆ. ಮೊದಲು ತಂದೆಯವರ ಅಂತಿಮ ಸಂಸ್ಕಾರ ಆಗಲಿ. ಆಮೇಲೆ ಅವರಿಚ್ಚೆ ಇದ್ದಂತೆ ನಡೆಯಲಿ. ಏಳಿ ಮೇಲೆ.
ಮೊದಲ ಮಗಳು : ಸಾಧ್ಯವೇ ಇಲ್ಲ. ಮೊದಲು ಉಯಿಲು ಆಮೇಲೆ ಬಿಡುವೆ ಹೋಗಲು.
ಎರಡನೇ ಮಗಳು : ಹೌದು.. ಮೊದಲು ಮರಣಪತ್ರದ ಓದು ನಂತರ ಶವ ಎತ್ತಬಹುದು.
( ಇಬ್ಬರೂ ಶವವನ್ನು ಹಿಡಿದುಕೊಂಡು ಮೇಲೆತ್ತದಂತೆ ತಡೆಯುತ್ತಾರೆ. ಲೀಯರ್ ಗೆ ಉಸಿರು ಕಟ್ಟಿದಂತಾಗಿ ಇಬ್ಬರನ್ನೂ ದೂರ ತಳ್ಳಿ ಎದ್ದು ಕುಳಿತುಕೊಳ್ಳುತ್ತಾನೆ. ಎಲ್ಲರಿಗೂ ದಿಗ್ಬ್ರಮೆ.)
ಮೊದಲ ಮಗಳು : ಅಪ್ಪಾ ನೀವಿನ್ನೂ ಸತ್ತಿಲ್ಲವೇನಪ್ಪಾ.
ಲೀಯರ್ : ಯಾಕೆ ಸಾಯಲೇಬೇಕಿತ್ತಾ. ನನ್ನ ಸಾವಿಗಾಗಿ ನಿಮ್ಮ ಜೀವ ಕಾಯ್ತಾ ಇತ್ತಾ.
ಎರಡನೇ ಮಗಳು : ಅದು ಹಾಗಲ್ಲಪ್ಪಾ. ನೀವಿಲ್ಲದೇ ನಾವು ದುಃಖ ಪೀಡಿತರಾಗಿದ್ದೆವು.
ನೀವು ಬದುಕಿ ಬಂದಿದ್ದು ನೀವೇ ನಿಮ್ಮ ಉಯಿಲು ಪತ್ರವನ್ನು ಓದಲು ಅಲ್ವಾ ಅಪ್ಪಾ.
( ಲೀಯರ್ ಜೋರಾಗಿ ಕೆಮ್ಮುತ್ತಾನೆ.
ಅಷ್ಟರಲ್ಲಿ ಕೊನೆಯ ಮಗಳು ಓಡಿ ಹೋಗಿ ನೀರು ಕುಡಿಸಿ, ಅಪ್ಪನ ಕತ್ತಲ್ಲಿ ಸುತ್ತಿರುವ ಹಾರಗಳನ್ನೆಲ್ಲಾ ತೆಗೆದು ಬಿಸಾಕಿ ಗಾಳಿ ಬೀಸತೊಡಗುತ್ತಾಳೆ)
ಲೀಯರ್ : ಆಯ್ತು ಮಗಳೇ ನಿನ್ನಿಚ್ಚೆಯಂತೆಯೇ ಉಯಿಲು ಓದುತ್ತೇನೆ.. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ಗೌರವಕ್ಕೆ ತಕ್ಕಂತೆ ಸಂಪತ್ತಿನ ಪಾಲು ಮಾಡುತ್ತೇನೆ. ವಿದೂಷಕ ಬಾ ಇಲ್ಲಿ. ಆ ಪೆಟ್ಟಿಗೆಗಳನ್ನು ತೆರೆದು ತೋರಿಸು. ಹಾಂ. ಮೊದಲು ಹಿರಿಯ ಮಗಳು ತಂದ ಪೆಟ್ಟಿಗೆ ತೆರೆ)
ವಿದೂಷಕ : ( ಪೆಟ್ಟಿಗೆಯನ್ನು ತೆರೆಯುತ್ತಾ) ದೊರೆ ನೀವು ಹೇಳಿದಂತೆ ಒಂದು ಕೋಟಿ ಹಣ ಇರಬಹುದು.
ಲೀಯರ್ : ಶಹಬ್ಬಾಸ್ ಮಗಳೇ. ನನ್ನ ಅಂತಿಮ ಇಚ್ಚೆ ಈಡೇರಿಸಿದ್ದಕ್ಕೆ.
ವಿದೂಷಕ : ಎಲ್ಲವೂ ಎರಡು ಸಾವಿರ ರೂಪಾಯಿಯ ಗರಿಗರಿ ನೋಟುಗಳು ದೊರೆ.
ಲೀಯರ್ : ಹೋ.. ಸಂತೋಷ.. ತುಂಬಾ ಸಂತೋಷ. ಹಿರಿಯ ಮಗಳು ನನ್ನ ಪ್ರೀತಿಗೆ ಪಾತ್ರಳಾದಳು.
ವಿದೂಷಕ : ಆದರೆ ದೊರೆ. ಈ ನೋಟುಗಳೆಲ್ಲಾ ಈಗ ಅಮಾನ್ಯವಾಗಿವೆ. ಇವುಗಳಿಗೆ ಈಗ ಯಾವುದೇ ಬೆಲೆಯಿಲ್ಲ. ಯಾರೂ ಇವುಗಳನ್ನು ಈಗ ಬಳಸುವುದಿಲ್ಲ.
ಲೀಯರ್ : ಹಾಂ.. ಮೋಸ.. ಮಹಾಮೋಸ. ಮೌಲ್ಯವೇ ಇಲ್ಲದ ಹಣವನ್ನು ಹೆಣದ ಮೇಲಿಟ್ಟು ವಂಚನೆ ಮಾಡಿದೆಯಾ ಮಗಳೇ..
ಎರಡನೇ ಮಗಳು: (ತಲೆ ತಗ್ಗಿಸಿ ನಿಂತು.) ಅದು ಹಾಗಲ್ಲಾ ಅಪ್ಪಾ. ನಿಮ್ಮ ಶವದ ಜೊತೆ ಸುಟ್ಟು ಹೋಗುವ ನೋಟುಗಳು ಯಾವುದಾದರೇನು ಅಂತಾ..
ಲೀಯರ್ : ಬಾಯಿ ಮುಚ್ಚು ಸಾಕು ನಿನ್ನ ವ್ಯರ್ಥ ಸಮರ್ಥನೆ. ಎರಡನೇ ಮಗಳ ಪೆಟ್ಟಿಗೆಯನ್ನು ತೆರೆ ವಿದೂಷಕ.
ವಿದೂಷಕ : ದೊರೆಗಳೇ ಇದರಲ್ಲಿ ಹಣವೇ ಇಲ್ಲ. ಕೇವಲ ಒಂದು ಕೋಟಿ ರೂಪಾಯಿಯ ಚೆಕ್ ಮಾತ್ರ ಇದೆ. ನೋಡಿ ಇಲ್ಲಿ.
ಲೀಯರ್ : ದ್ರೋಹ, ಮಹಾದ್ರೋಹ, ಪಿತೃದ್ರೋಹ. ಈ ಚೆಕ್ಕನ್ನು ತೆಗೆದುಕೊಂಡು ಸ್ವರ್ಗದಲ್ಲಿ ಉಪ್ಪಿನಕಾಯಿ ಹಾಕಿ ನೆಕ್ಕಬೇಕೆ. ನೀನು ಹೀಗೆ ನಂಬಿಕೆ ದ್ರೋಹ ಮಾಡುತ್ತೀಯೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ನೀನು ಮಗಳಲ್ಲ ಮಾಯಾಂಗಣಿ.
ಎರಡನೇ ಮಗಳು : ಮತ್ತೇನು ಮಾಡಲಿ ತಂದೆ. ಸ್ವರ್ಗದಲ್ಲಿ ಹಣ ಚಲಾವಣೆ ಇರುತ್ತದೆ ಎನ್ನುವುದೇ ನಿಜವಾದರೆ ಚೆಕ್ ವ್ಯವಹಾರವೂ ಇದ್ದೇ ಇರುತ್ತದೆ ಎಂದುಕೊಂಡೆ. ಅದಕ್ಕೇ..
ಲೀಯರ್ : ಅದಕ್ಕೆ.. ಸತ್ತವನಿಗೆ ಹೇಗೂ ಗೊತ್ತಾಗುವುದಿಲ್ಲಾ,
ಸ್ವರ್ಗದಲ್ಲಿ ಬ್ಯಾಂಕ್ ಇರುವುದಿಲ್ಲಾ ಅಂದುಕೊಂಡೇ ಹೀಗೆ ನಂಬಿಕೆ ದ್ರೋಹ ಮಾಡಿದೆಯಲ್ಲವೇ.
ನಿನ್ನನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ವಿದೂಷಕಾ ಆ ಮೂರನೇ ಪೆಟ್ಟಿಗೆಯನ್ನೂ ತೆರೆದು ನೋಡು.
ವಿದೂಷಕ : ದೊರೆಗಳೇ ಇದರಲ್ಲಿ ಕಡಿಮೆ ಹಣ ಇದೆ..
ಲೀಯರ್ : ಅಯ್ಯೋ.. ನನ್ನ ಪ್ರೀತಿಯ ಕಿರಿಮಗಳೂ ಮೋಸ ಮಾಡಿದಳೇ. ಸಾವೇ ಎಲ್ಲಿರುವೆ.. ಬೇಗ ಬಾ. ಈ ಮೋಸದ ಲೋಕದಲಿ ನಾನಿನ್ನು ಇರುವುದಿಲ್ಲ..
ವಿದೂಷಕ : ಒಂದಿಷ್ಟು ಚಿನ್ನಾಭರಣಗಳೂ ಇವೆ ದೊರೆ. ಜೊತೆಗೆ ಒಂದು ಪತ್ರವೂ ಬೇರೆ ಇದೆ.
ಲೀಯರ್ : ಪತ್ರವಾ, ಏನದು ಓದಿ ಹೇಳು ಮಿತ್ರಾ
ವಿದೂಷಕ : " ನನ್ನ ಪ್ರೀತಿಯ ತಂದೆ, ನೀವು ನನಗೆ ಜನ್ಮಕೊಟ್ಟಲ್ಲೇ ನಾ ಈ ಭೂಮಿಗೆ ಬಂದೆ. ನಿಮ್ಮ ಅಂತಿಮ ಇಚ್ಚೆ ಈಡೇರಿಸುವುದು ಮಗಳಾದ ನನ್ನ ಕರ್ತವ್ಯವಾಗಿದೆ ಅಪ್ಪಾ. ಆದರೆ ಸಮಯದ ಅಭಾವದಿಂದ ಪೂರ್ತಿ ಹಣ ಹೊಂದಿಸಲು ಆಗಲಿಲ್ಲ ಕ್ಷಮಿಸಿ. ಅರ್ಧ ಹಣವಿದೆ, ಇನ್ನರ್ಧ ಹಣಕ್ಕೆ ಬದಲಾಗಿ ನನ್ನೆಲ್ಲಾ ಒಡವೆಗಳನ್ನು ಪೆಟ್ಟಿಗೆಯಲ್ಲಿ ಇಟ್ಟಿರುವೆ ಸ್ವೀಕರಿಸಿ ತಂದೆ. ನೀವಿದ್ದಾಗಲೂ, ನೀವಿರದೇ ಇದ್ದಾಗಲೂ ನನ್ನ ಉಸಿರಿರುವವರೆಗೂ ನಿಮ್ಮ ನೆನಪು ನನ್ನ ಜೊತೆ ಇರುತ್ತದೆ. ಅಂತಿಮ ನಮನಗಳು ಅಪ್ಪಾ.."
ಲೀಯರ್ : (ಕಣ್ಣಲ್ಲಿ ಆನಂದಭಾಷ್ಪಗಳನ್ನು ಸುರಿಸುತ್ತಾ) ಮಗಳೇ.. ನನ್ನ ಮುದ್ದು ಮಗಳೇ. ದುರಾಸೆ ಸ್ವಾರ್ಥವಿರದ ನಿನ್ನ ಪ್ರೀತಿಗೆ ನಾನು ಆಭಾರಿಯಾಗಿರುವೆ.
ಇದ್ದರೆ ನಿನ್ನಂತಾ ಮಗಳಿರಬೇಕು. ( ಹಣೆಗೆ ಮುತ್ತನ್ನು ಕೊಟ್ಟು) ನನ್ನ ವಾರಸು ನೀನೇ. ಈ ಸಕಲ ಸಂಪತ್ತಿಗೆ ಒಡತಿಯೂ ನೀನೇ. ವಿದೂಷಕ ಈ ಕೂಡಲೇ ನನ್ನ ಎಲ್ಲಾ ಆಸ್ತಿ ವಹಿವಾಟು ಸಂಪತ್ತನ್ನು ಈ ನನ್ನ ಪ್ರೀತಿಯ ಮಗಳ ಹೆಸರಿಗೆ ನೋಂದಾಯಿಸಲು ಏರ್ಪಾಟು ಮಾಡು.
ಕಿರಿಯ ಮಗಳು : ಅಪ್ಪಾ ನನಗೆ ನಿನ್ನ ಪ್ರೀತಿಯ ಹೊರತು ಬೇರೇನೂ ಬೇಡಾ ತಂದೆ. ಅಕ್ಕಂದಿರೂ ಸಹ ನಿನ್ನದೇ ಕುಡಿಗಳು. ಅವರಿಗೂ ಅನ್ಯಾಯ ಮಾಡಬೇಡಿ ಎಂಬುದಷ್ಟೇ ನನ್ನ ಮನವಿ.
ಲೀಯರ್ : ಎಂತಹ ದಯಾಳು ಮನಸ್ಸೇ ನಿನ್ನದು. ನಿನ್ನನ್ನು ಸದಾ ದ್ವೇಷಿಸುವವರಿಗೂ ಒಳಿತನ್ನು ಬಯಸುವೆಯಲ್ಲಾ ಕಂದಾ. ಅದಕ್ಕೆ ನಿನ್ನ ಕಂಡರೆ ನನಗೆ ಮಹದಾನಂದ. ವಿದೂಷಕಾ.. ಈ ಇಬ್ಬರೂ ನಯವಂಚಕಿಯರಿಗೆ ಬದುಕಲು ಅಗತ್ಯವಿರುವಷ್ಟು ಹಣವನ್ನು ಕೊಟ್ಟು ಕಳಿಸಿರಿ.
ಕಿರಿಯ ಮಗಳು : ಅಪ್ಪಾ ಅದು..
ಲೀಯರ್ : ನೋಡು ಮಗಳೇ. ನನಗೆ ಹಿಂದಿನ ಜನ್ಮದ ನೆನಪು ಚೆನ್ನಾಗಿಯೇ ಇದೆ. ಈ ಇಬ್ಬರು ಕೊಟ್ಟ ಕಷ್ಟ ಕೋಟಲೆಗಳು ಬೇಕಾದಷ್ಟಿವೆ. ಹೆತ್ತ ತಪ್ಪಿಗೆ ಬೀದಿಪಾಲು ಮಾಡದೇ ಬದುಕಲು ಬೇಕಾದಷ್ಟನ್ನು ಕೊಟ್ಟು ಕಳುಹಿಸುತ್ತಿರುವೆ.
ಇನ್ನೂ ಏನು ಮುಖ ನೋಡುತ್ತಿದ್ದೀರಿ. ನಿಮ್ಮ ಗಂಡಂದಿರನ್ನು ಕರೆದುಕೊಂಡು ಮೊದಲು ಇಲ್ಲಿಂದಾ ತೊಲಗಿ.. ( ಇಬ್ಬರೂ ಹೆಣ್ಣು ಮಕ್ಕಳು ಜೋಲು ಮೋರೆ ಹಾಕಿಕೊಂಡು ತಮ್ಮ ಗಂಡನನ್ನು ಎಳೆದುಕೊಂಡು ಹೋಗುವರು)
ವಿದೂಷಕ : ಕೊನೆಗೂ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವ ಮಗಳು ಯಾರು ಅಂತಾ ಗೊತ್ತಾಯ್ತಾ ದೊರೆ. ವಂಚಕ ಮಕ್ಕಳು ಹೆತ್ತವರಿಗೆ ಹೊರೆ.
ಲೀಯರ್ : ಹೌದು ವಿದೂಷಕ. ನೀನು ನನ್ನ ನಿಜವಾದ ಮಿತ್ರ.. ಬಾಯಿಲ್ಲಿ ಹತ್ರ. ನೀನು ಇರದೇ ಹೋಗಿದ್ದರೆ, ಇಂತಹುದೊಂದು ಉಪಾಯ ಹೇಳದೇ ಹೋಗಿದ್ದರೆ ನಾನು ಪರಿಶ್ರಮದಿಂದ ಸಂಪಾದಿಸಿದ ಸಂಪತ್ತು ಅಪಾತ್ರರ ಪಾಲಾಗುತ್ತಿತ್ತು.
ವಿದೂಷಕ : ಎಲ್ಲಾ ಹಿಂದಿನ ಜನ್ಮದ ಅನುಭವ ಕಲಿಸಿದ ಪಾಠ ದೊರೆ. ಮೋಹಕ ಮಾತುಗಳಿಗೆ ಮರುಳಾಗಿ ನೀವು ಅಪಾತ್ರರಿಗೆ ಸಾಮ್ರಾಜ್ಯವನ್ನು ಹಂಚಿಕೊಟ್ಟು ಪಡಬಾರದ ಕಷ್ಟ ಅನುಭವಿಸಿದಿರಿ. ನಿಮ್ಮ ಜೊತೆ ನಾನೂ ಸಹ ಸಂಕಷ್ಟಕ್ಕೆ ಬಿದ್ದು ಬಸವಳಿದೆ. ಈ ಜನ್ಮದಲ್ಲೂ ಹಾಗಾಗಬಾರದು ಎಂದು ಈ ಒಂದು ಉಪಾಯ ಹೇಳಿದೆ ಅಷ್ಟೇ.
ಲೀಯರ್ : ಶಹಬ್ಬಾಸ್.. ತಪ್ಪನ್ನು ಮಾಡುವುದು ತಪ್ಪಲ್ಲಾ ಮಿತ್ರಾ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವುದು ಮಹಾತಪ್ಪು. ನಿನ್ನಿಂದಾಗಿ ಮತ್ತೆ ತಪ್ಪು ಮರುಕಳಿಸಲಿಲ್ಲವಲ್ಲಾ. ( ಮಗಳಿಗೆ) ಪ್ರೀತಿಯ ಮಗಳೇ ಇನ್ನು ಮೇಲೆ ನಿನ್ನ ಪತಿ ಹಾಗೂ ಮಕ್ಕಳ ಜೊತೆ ಇಲ್ಲಿಯೇ ಇರಬೇಕು. ನನ್ನೆಲ್ಲಾ ಆಸ್ತಿಗೆ ವಾರಸುದಾರಳಾಗಿ ಸಂಪತ್ತನ್ನು ಸತ್ಪಾತ್ರಕ್ಕೆ ಬಳಸಿ ನನ್ನ ಹೆಸರನ್ನು ಉಳಿಸಿ ಬೆಳೆಸಬೇಕು.
ಕಿರಿಯ ಮಗಳು : ಆಯ್ತು ಅಪ್ಪಾ.. ನೀವು ಹೇಳಿದಂತೆಯೇ ಆಗಲಿ.
ಲೀಯರ್ : ಧನ್ಯನಾದೆ ಮಗಳೇ. ಇನ್ನು ನಾನು ನಿರಾಳ. ಬಾಕಿ ಬದುಕನ್ನು ಈ ನನ್ನ ಮಿತ್ರನ ಜೊತೆ ನೆಮ್ಮದಿಯಾಗಿ ಕಳೆಯುವೆ.
(ಸುಖಾಂತ್ಯ)
*- ಶಶಿಕಾಂತ ಯಡಹಳ್ಳಿ*
Comments
Post a Comment