ಮೆದುಳು ತೊಳೆಯುವವರಿದ್ದಾರೆ ಎಚ್ಚರಿಕೆ ( ಪ್ರಹಸನ-41)
( ಪ್ರಹಸನ-41)
ಮೆದುಳು ತೊಳೆಯುವವರಿದ್ದಾರೆ ಎಚ್ಚರಿಕೆ
*******************************************************
(ದೇವಸ್ಥಾನವೊಂದರ ಮೆಟ್ಟಿಲ ಮೇಲೆ ಯುವಕ ಕುಳಿತಿದ್ದಾನೆ. ಆಕಡೆಯಿಂದ ಯುವತಿ ಬಂದು ಆತನಿಗೆ ಪ್ರಸಾದ ಕೊಟ್ಟು, ಕಿವಿಗೆ ಹೂವಿಟ್ಟು ಪಕ್ಕದಲ್ಲಿ ಕೂಡುತ್ತಾಳೆ)
ಯುವಕ : ದೇವರ ಹತ್ರ ಏನು ಬೇಡಿಕೊಂಡೆ ಬಂಗಾರಿ.
ಯುವತಿ : ಅದೂ, ಮತ್ತೆ ಮುಂದಿನ ಸಲವೂ ವಿಶ್ವಗುರುವೇ ಈ ದೇಶದ ಪ್ರಧಾನಿ ಆಗಲೀ ಎಂದು ದೇವರಲ್ಲಿ ಕೇಳಿಕೊಂಡೆ ಕಣೋ.
ಯುವತಿ : ಏನೇ ಏನೇ ಇದು. ನಮಗಿಬ್ಬರಿಗೂ ಒಳ್ಳೇದಾಗಲಿ ಅಂತಾ ಕೇಳೋದು ಬಿಟ್ಟು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕ್ತೇನೇ ಅಂತಾ ಹೇಳಿ ಯಾಮಾರಿಸಿದವರೇ ಮತ್ತೆ ಪ್ರಧಾನಿ ಆಗಲಿ ಅಂತಾ ದೇವರಲ್ಲಿ ಕೇಳ್ತಿಯಲ್ಲಾ, 9 ವರ್ಷ ಆಯ್ತು ಇಲ್ಲಿವರೆಗೂ ಯಾವನಾದರೂ ಒಬ್ಬನಿಗೆ ಹಣ ಬಂದಿದೆಯಾ? ನಿನಗೆ ಬುದ್ದಿ ನೆಟ್ಟಗಿದೆಯಾ?
ಯುವತಿ : (ಯುವಕನ ಇನ್ನೊಂದು ಕಿವಿಗೂ ಹೂಮುಡಿಸುತ್ತಾ)
ಇದೆ ಬುದ್ದಿ ಇದೆ. ನಿನಗೆ ಹಣ ಇನ್ನೂ ಬಂದಿಲ್ವಾ. ನಮಗೆಲ್ಲಾ ಬಂದಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬಂದಿದೆ.
ಯುವಕ : ( ಎಡ ಕಿವಿಗೆ ಮುಡಿಸಿದ ಹೂವನ್ನು ಕೈಯಲ್ಲಿ ಹಿಡಿದು) ನಿನಗಾ 15 ಲಕ್ಷ, ಬಂದಿದೆಯಾ. ಯಾವಾಗ? ಎಲ್ಲಿ? ಹೇಗೆ?
ಯುವತಿ : ನಮ್ಮನೆಯ ಪ್ರತಿ ಸದಸ್ಯರಿಗೂ ಅಷ್ಟೂ ಹಣ ಬಂದಿದೆ. ಅದು ಹೇಗಪ್ಪಾ ಅಂತಂದ್ರೆ. ಆರೋಗ್ಯ ವಿಮೆ, ಆಯುಷ್ಮಾನ್ ಯೋಜನೆಯಡಿಯಲ್ಲಿ
5 ಲಕ್ಷ ರೂಪಾಯಿಯ ವಿಮೆ ಕೊಟ್ಟಿದ್ದಾರೆ ನಿನಗೆ ಬಂದಿಲ್ವಾ?
ಯುವಕ : ಲೇ ಲೇ ಮಳ್ಳಿ, ವಿಮೆ ಅಂದ್ರೆ ಯಾರಿಗಾದರೂ ಆರೋಗ್ಯ ಹಾಳಾಗಿ ಸೀರಿಯಸ್ ಹೆಲ್ತ್ ಸಮಸ್ಯೆ ಆದಾಗ ಆಸ್ಪತ್ರೆ ಬಿಲ್ ಕಟ್ಟಲು ಆಯ್ದ ಹಾಸ್ಪಿಟಲಲ್ಲಿ ಬಡವರಿಗೆ ಮಾತ್ರ ಸಿಗೋದು ಕಣೆ. ಅದೂ ಆಯುಷ್ಮಾನ್ ಯೋಜನೆ ಎಲ್ಲರಿಗೂ ಎಲ್ಲಾ ಕಡೆ ಸಿಗೋದಲ್ಲಾ. ಹೋಗಲಿ ನಿಮ್ಮನೇಲಿರೋರಿಗೆಲ್ಲಾ ಏನು ಅಂತಾ ದೊಡ್ಡರೋಗ ಬಂದಿರೋದು ಆರೋಗ್ಯ ವಿಮೆ ಸೌಲಭ್ಯ ಪಡಿಯೋದಕ್ಕೆ. ಲಕ್ಷಕ್ಕೊಬ್ಬರಿಗೆ ಅನಾರೋಗ್ಯ ವಿಮೆ ಸಿಕ್ಕರೇ ಪ್ರತಿಯೊಬ್ಬರಿಗೂ ಹಣ ಸಿಕ್ಕಂಗೆ ಹೆಂಗೇ ಆಗುತ್ತೆ.
ಯುವತಿ : ಹೋಗಲಿ, ಮನೆ ಕಟ್ಟೋದಕ್ಕೆ ಆವಾಸ್ ಯೋಜನೆಯಡಿಯಲ್ಲಿ ಮೂರರಿಂದ ಹದಿನೈದು ಲಕ್ಷದ ವರೆಗೆ ಕಡಿಮೆ ಬಡ್ಡಿಗೆ ಸಾಲ ಕೊಡ್ತಾರಲ್ಲಾ ಅದೂ ಜನರಿಗೆ ಹಣ ಬಂದಂಗೆ ಅಲ್ವಾ.
ಯುವಕ : ಥೋ ಥೋ.. ಅಲ್ವೆ ಮನೆ ಕಟ್ಟೋಕೆ ಉಚಿತವಾಗಿ ಹಣ ಕೊಡ್ತಾ ಇಲ್ಲಾ ಕಣೆ. ಕೊಡೋದು ಸಾಲಾ, ಇಂದಿಲ್ಲಾ ನಾಳೆ ವಾಪಸ್ ಕಟ್ಟಲೇಬೇಕು. ಸಾಲಾ ಅಂತಾ ಕೊಟ್ರೆ ಪ್ರೀಯಾಗಿ ಕೊಟ್ಟಂಗೆ ಅಂತಾ ಯಾವ ಕಮಂಗಿ ನನ್ಮಗಾ ನಿನಗೆ ಹೇಳಿದ್ದು. ನಾನ್ಸೆನ್ಸ್.
ಯುವತಿ : ಅದೂ ಹೋಗಲಿ, ನನ್ನ ತಾಯಿಗೆ ಹುಷಾರಿಲ್ಲಾ ಅಂತಾ ನಿನಗೂ ಗೊತ್ತಲ್ವಾ. ಮೊದಲು ತಿಂಗಳಿಗೆ ಒಂದು ಸಾವಿರ ಹಣ ಔಷಧಿಗೆ ಕೊಡಬೇಕಿತ್ತು. ಆದರೆ ಈಗ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಿಂದ ಅತೀ ಕಡಿಮೆ ಬೆಲೆಗೆ ಔಷಧಿ ಸಿಗ್ತಿವೆ. ಅದೂ ಹಣದ ಉಳಿತಾಯ ಮಾಡಿದಂಗೇ ಅಲ್ವಾ.
ಯುವಕ : ಶಹಬ್ಬಾಸ್ ರಾಣಿ. ನಿನಗೆ ಯಾರೋ ಚೆನ್ನಾಗಿ ಮೆದುಳು ತೊಳ್ದಿದ್ದಾರೆ.
ಅಲ್ವೇ ಯಾವ ಜನೌಷಧಿ ಕೇಂದ್ರದಲ್ಲಿ ಡಾಕ್ಟರ್ ಬರೆದುಕೊಟ್ಟ ಔಷಧಿಗಳೆಲ್ಲಾ ಸಿಗ್ತಾವೆ ಹೇಳು. ಅಲ್ಲಿ ಸಿಗುವ ಮೆಡಿಸಿನ್ ಎಲ್ಲಾ 20 ವರ್ಷದ ಹಿಂದಿನ ಪೇಟೆಂಟ್ ಅವಧಿ ಮುಗಿದಂತಹವುಗಳು. ಈಗ ಕಾಯಿಲೆಗಳೂ ಅಪ್ಡೇಟ್ ಆಗಿವೆ, ಹೊಸಹೊಸ ವೈರಸ್ಸುಗಳೂ ಅಪಗ್ರೇಡ್ ಆಗಿವೆ. ಈಗಲೂ ಎಲ್ಲಾ ರೋಗಕ್ಕೂ ಜನೌಷಧಿ ಕೇಂದ್ರದಲ್ಲಿ ಪರಿಹಾರ ಇಲ್ಲಾ ತಿಳ್ಕೋ. ಮೆಡಿಕಲ್ ಮಾಫಿಯಾದವರ ಆಮಿಷಕ್ಕೆ ಒಳಗಾದ ಖಾಸಗಿ ವೈದ್ಯರು ಜನೌಷಧಿಯಲ್ಲಿ ಸಿಗುವ ಮೆಡಿಸಿನ್ ಬರೆದು ಕೊಡೋದಿಲ್ಲ ಅರ್ಥ ಮಾಡ್ಕೋ.
ಯುವತಿ : ಹೋ ಹಾಗಾ? ಇರಲಿ ಅಡುಗೆ ಒಲೆ ಉರಿಸಲು ಕಷ್ಟ ಪಡ್ತಿರೋ ಹೆಂಗಸರಿಗೆ ಉಜ್ವಲ ಯೋಜನೆ ಅಡಿ ಪ್ರತಿ ಮನೆಗೆ ಗ್ಯಾಸ್ ಸ್ಟೋ ಕೊಟ್ಟಿದ್ದಾರೆ ಇದೂ ನಿಮ್ಮನೆಗೆ ಬಂದಿಲ್ವಾ?
ಯುವಕ : ಅಯ್ಯೋ ಮೂದೇವಿ. ಈ ಯೋಜನೆ ಎಲ್ಲರಿಗೂ ಅಲ್ವೇ. ಅತೀ ಬಡವರಿಗೆ ಗ್ಯಾಸ್ ಸ್ಟೋ ಪ್ರೀಯಾಗಿ ಕೊಟ್ಟು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿದ್ದಾರೆ.
ಅಷ್ಟು ಹಣ ಕೊಟ್ಟು ಸಿಲಿಂಡರ್ ಕೊಳ್ಳಲಾಗದವರು ಮತ್ತೆ ಸೌದೆ ಒಲೆ ಬಳಸ್ತಿದ್ದಾರೆ. ಬಡವರ ಮನೆಗೆ ಹೋಗಿ ನೋಡು.
ಯುವತಿ : ಎಲ್ಲಾದಕ್ಕೂ ಏನಾದರೊಂದು ಹೇಳ್ತಿಯಾ. ನಾನಿನ್ನು ಹೊರಟೆ. ( ಎದ್ದು ನಿಲ್ಲುತ್ತಾಳೆ)
ಯುವಕ : ಹೀಗೆ ಸಿಟ್ಟು ಮಾಡಿಕೊಂಡು ಎಲ್ಲಿಗೆ ಹೊರಟೆ ಬಂಗಾರಿ.
ಯುವತಿ : ನೋಡು ನಿನ್ನ ಜೊತೆ ನನಗೆ ಸರಿಬರೋದಿಲ್ಲಾ ಬಿಡು. ಯಾರಿಗೆ 15 ಲಕ್ಷ ಹಣದ ಬದಲಾಗಿ ಅಷ್ಟೇ ಬೆಲೆಯ ಯೋಜನೆಗಳ ಅನುಕೂಲತೆ ಸಿಕ್ಕಿದೆಯೋ ಅಂತವನನ್ನು ನೋಡಿ ಮದುವೆ ಆಗ್ತೇನೆ. ಹಾಂ ಒಂದು ನಿಮಿಷ. 15 ಲಕ್ಷ ಹಣವನ್ನು ಒಂದೇ ಸಲ ಮೋದೀಜಿ ನಮಗೆಲ್ಲಾ ಹಾಕಿದ್ರೆ ಖರ್ಚು ಮಾಡಿ ಹಾಳು ಮಾಡ್ತಾ ಇದ್ವಿ. ಆದರೆ 15 ಲಕ್ಷಕ್ಕೂ ಮಿಗಿಲಾದ ಯೋಜನೆಗಳನ್ನು ಜೀವನ ಪರ್ಯಂತಾ ಕೊಟ್ಟಿದ್ದಾರೆ, ಒಬ್ಬ ಮನುಷ್ಯನಿಗೆ ಇದಕಿಂತಾ ಮಿಗಿಲಾಗಿ ಏನು ಬೇಕೇಳು.
ಯುವಕ : ಸೋ ನಿನಗೆ ಯಾವ ರೀತಿ ಗಂಡ ಬೇಕು ಅಂತಾ ಗೊತ್ತಾಯ್ತು ಬಿಡು.
ಯುವತಿ : ಏನು ಹಾಗಂದ್ರೆ?
ಯುವಕ : ವಿಮಾ ಯೋಜನೆಯ ಫಲಾನುಭವಿಯಾಗಲು ದೊಡ್ಡ ರೋಗ ಇರಬೇಕು, ಸಾಲ ಮಾಡಿ ಮನೆ ಕಟ್ಟಿಸಿ ಕಂತು ಕಟ್ಟೋದರಲ್ಲೇ ಜೀವನ ಕಳೆಯೋ ಪತಿ ಬೇಕು, ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಔಷಧಿ ಖರೀದಿಸುವ ಬಡವ ಗಂಡ ಇರಬೇಕು, ಬಿಪಿಎಲ್ ಕಾರ್ಡ್ ಇರುವ ಪ್ರೀಯಾಗಿ ಗ್ಯಾಸ್ ಒಲೆ ಪಡೆದು ಸಿಲಿಂಡರ್ ಕೊಳ್ಳಲೂ ಹಣ ಇರದ ಗಂಡ ಬೇಕು ಅಲ್ವಾ.
ಯುವತಿ : ಛೀ.. ಅಂತಾ ಬಡವ ರಾಸ್ಕಲ್ ಗಂಡ ಯಾವನಿಗೆ ಬೇಕು ಹೋಗೋ.
ಯುವಕ : ನೀನೇ ಹೇಳಿದೆಯಲ್ಲಾ, 15 ಲಕ್ಷದ ಬದಲಾಗಿ ಇವೆಲ್ಲವನ್ನು ಎಲ್ಲರಿಗೂ ಮೋದೀಜಿ ಕೊಡ್ತಾರೆ ಅಂತಾ.
ಯುವತಿ : ಹೌದು ಹೇಳಿದ್ದೆ. ಆದರೆ ನೀನು ಹೇಳಿದ ಮೇಲೆ ಗೊತ್ತಾಯ್ತು ಕಣೊ, ಅನಾರೋಗ್ಯಪೀಡಿತ ಸಾಲಗಾರ ಬಡವ ಗಂಡ ಇದ್ದರೆಷ್ಟು ಇರದಿದ್ದರೆಷ್ಟು. ನನಗೆ ಬೇಡಪ್ಪಾ ಬೇಡ. ಕಷ್ಟಾ ಪಟ್ಟು ದುಡಿದು ನಾನು ಕೇಳಿದ್ದನ್ನೆಲ್ಲಾ ಕೊಡಿಸೋ ನೀನೇ ನನಗೆ ಗಂಡನಾಗು ಸಾಕು.
ಯುವಕ : ಮತ್ತೆ 15 ಲಕ್ಷ ಹಣಕ್ಕೆ ಬದಲಾಗಿ ವಿಮೆ, ಸಾಲ, ಸ್ಟೋ ಎಲ್ಲಾ ಬೇಡ್ಬಾ.
ಯುವತಿ : ನೋಡು ನೋಡು ನನ್ನ ಸುಮ್ಕೆ ರೇಗಿಸ್ಬೇಡಾ. ಅದ್ಯಾರೋ ಯುವ ಬ್ರಿಗೇಡ್ ನವರು ನನ್ನ ತಲೇಲಿ ಇದನ್ನೆಲ್ಲಾ ತುಂಬಿ ಕಳಿಸಿದ್ರು. ಅಷ್ಟೇ..
ಯುವಕ : ಬುದ್ದು ನೀನು, ನನ್ನ ಮುದ್ದಾದ ಬುದ್ದು. ಯಾರು ಏನು ಹೇಳಿದ್ರೂ ನಂಬ್ತೀಯಾ. ಕಪ್ಪು ಹಣ ತಂದು 15 ಲಕ್ಷ ಪ್ರತಿಯೊಬ್ಬರ ಅಕೌಂಟಿಗೆ ಹಾಕ್ತೇನೆ ಅನ್ನೋದು ಜನರನ್ನು ಯಾಮಾರಿಸಿ ಓಟು ಪಡಿಯೋಕೆ ಸೋ ಕಾಲ್ಡ್ ವಿಶ್ವಗುರುಗಳು ಮಾಡಿದ ಎಲೆಕ್ಷನ್ ಜುಮ್ಲಾ ಕಣೆ. 9 ವರ್ಷ ಆದ್ರೂ ಕಪ್ಪು ಹಣ ತರಲಿಲ್ಲಾ, ಯಾರಿಗೂ ಒಂದೇ ಒಂದು ರೂಪಾಯಿ ಕೊಡಲಿಲ್ಲ. ಇದನ್ನ ಮುಚ್ಚಿಕೊಳ್ಳೋಕೆ ಈ ವಿಮೆ, ಸಾಲ, ಸ್ಟೋ, ಜನೌಷಧಿ ಅಂತೆಲ್ಲಾ ಸಬೂಬು ಹೇಳಿ ನಿನ್ನಂತವರ ಮೆದುಳು ತೊಳೀತಿದ್ದಾರೆ ಕೆಲವು ಅಂಧ ಭಕ್ತರು. ನಿನ್ನಂತವರು ಅದನ್ನೂ ನಂಬಿ ಮತ್ತೆ ಓಟಾಕಿ ಗೆಲ್ಲಸಲೀ ಅಂತಾ ಮಸಲತ್ತು ಕಣೆ ಮಸಲತ್ತು. ಸುಳ್ಳು ಹೇಳುವುದು, ಹೇಳಿದ ಸುಳ್ಳುಗಳಿಗೆ ವಿಕ್ಷಿಪ್ತ ಸಮರ್ಥನೆ ಕೊಡುವುದರಲ್ಲಿ ಈ ಸಂಘಿಗಳು ಎತ್ತಿದ ಕೈ..ತಿಳ್ಕೋ.
ಯುವತಿ : ಒಂದು ನಿಮಿಷ ಇರೋ ಬಂದೆ.
ಯುವಕ : ಯಾಕೇ ಏನಾಯ್ತು.
ಯುವತಿ : ಅದೇ ದೇವರಲ್ಲಿ ಬೇಡಿಕೊಂಡು ಬಂದಿದ್ದೆನಲ್ಲಾ,
ಅದನ್ನು ನೆರವೇರಿಸದೇ ಕ್ಯಾನ್ಸಲ್ ಮಾಡು ದೇವರೇ ಅಂತಾ ಮತ್ತೊಮ್ಮೆ ಬೇಡಿಕೊಂಡು ಬರ್ತೇನೆ. ( ದೇವಸ್ಥಾನದ ಒಳಗೆ ಓಡುವಳು.)
ಯುವಕ : (ಸ್ವಗತ) ಇವಳಿಗೆ ಆದ ನಿಜದ ಅರಿವು ಈ ದೇಶವಾಸಿಗಳಿಗೆಲ್ಲಾ ಆಗುವಂತೆ ಮಾಡು ಭಗವಂತಾ. ( ಎನ್ನುತ್ತಾ ಕಿವಿಯಲ್ಲಿ ಮುಡಿಸಲಾದ ಹೂವನ್ನು ಎತ್ತಿ ಬಿಸಾಕುತ್ತಾನೆ)
*- ಶಶಿಕಾಂತ ಯಡಹಳ್ಳಿ*
( ಯಾರೋ ಮೋದಿಮೇನಿಯಾ ಪೀಡಿತರು 15 ಲಕ್ಷಕ್ಕೆ ಬದಲಾಗಿ ಜೀವನ ಪರ್ಯಂತಾ ಯೋಜನೆಗಳನ್ನು ಮೋದಿಯವರು ದೇಶವಾಸಿಗಳೆಲ್ಲರಿಗೂ ಕೊಟ್ಟಿದ್ದಾರೆ ಎಂದು ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರ ಮೆದುಳು ತೊಳೆಯಲು ಪ್ರಯತ್ನಿಸಿದ್ದಾರೆ. ಅದಕ್ಕೆ ಉತ್ತರವಾಗಿ ಸತ್ಯದ ಅರಿವು ಮೂಡಿಸಲು ಈ ಪ್ರಹಸನ)
Comments
Post a Comment