ನಾಟಕದಾಟ ಮಕ್ಕಳಿಗದೇ ಪಾಠ ( ಪ್ರಹಸನ - 42)
( ಪ್ರಹಸನ - 42)
ನಾಟಕದಾಟ ಮಕ್ಕಳಿಗದೇ ಪಾಠ
*******************************************
( ಶಾಲೆಯ ಸಮವಸ್ತ್ರ ಹಾಕಿಕೊಂಡು, ನೀಟಾಗಿ ತಲೆ ಬಾಚಿಕೊಂಡ ಕಿಟ್ಟಿ ಖಾಲಿ ಕೈ ಬೀಸಿಕೊಂಡು ಮನೆಯಿಂದಾ ಶಾಲೆಗೆ ಹೊರಟ, ಆತನ ತಲೆ ಮೇಲೆ ಮೊಟಕಿದ ಅವನಪ್ಪ ತಿಮ್ಮಪ್ಪ)
ತಿಮ್ಮಪ್ಪ : ಯಾಕ್ಲಾ ಮಗನೇ.. ನಿನ್ನ ಸ್ಕೂಲ್ ಬ್ಯಾಗೇನು ನಿಮ್ಮಪ್ಪಾ ಹೊತ್ಕೊಂಡು ಬರಬೇಕಾ.. ಬೇಕೂಪನ್ ತಂದೂ.
ಕಿಟ್ಟಿ : ಅಯ್ಯೋ ಅಪ್ಪಾ ಇವತ್ತು ನೋ ಬ್ಯಾಗ್ ಡೇ..
ತಿಮ್ಮಪ್ಪ : ಯಾಕ್ಲಾ ಕಂದಾ, ಪಾಟಿಚೀಲಾ ಬಿಟ್ಟು ಶಾಲೆಗೇನು ಗೆಣಸು ಕೆರೆಯಾಕೆ ಹೋಗ್ತೀಯಾ?
ಕಿಟ್ಟಿ : ಹೇಳಿದ್ನಲ್ಲಾ ನೋ ಬ್ಯಾಗ್ ಡೇ ಅಂತಾ. ಅಂದ್ರೆ ಪ್ರತಿ ತಿಂಗಳಿನ ಮೂರನೇ ಶನಿವಾರ ಸಾಲಿ ಹುಡುಗರಿಗೆಲ್ಲಾ ಬ್ಯಾಗ್ ಹೊರೋ ಕತ್ತೆ ಕೆಲಸಕ್ಕೆ ರಜಾ ಅಂತಾ.
ತಿಮ್ಮಪ್ಪ : ಯಾರಲಾ ಹಂಗೇಳಿದ್ದು. ನಡೀ ವಿಚಾರಿಸ್ತೀನಿ ಆ ಮೇಷ್ಟ್ರನ್ನ. ಪುಸ್ತಕಾನೇ ಇಲ್ಲದೇ ಅದೆಂಗೆ ಪಾಠಾ ಮಾಡ್ತಾನೋ ನಾನೂ ನೋಡ್ತೀನಿ.
ಕಿಟ್ಟಿ : ಅಪ್ಪಾ ಇದು ಸರಕಾರದ ಅದೇಶವಂತೆ. ತಿಂಗಳಿಗೊಂದು ದಿನಾನಾದ್ರೂ ಮಕ್ಕಳ ಬೆನ್ನಿನ ಭಾರ ಕಡಿಮೆ ಆಗ್ಲಿ, ಆಡಕೊಂಡು ಕುಣಕೊಂಡು ಮಜಾ ಮಾಡ್ಲಿ ಅಂತಾ.
ತಿಮ್ಮಪ್ಪ : ಅಲೆಲೇ, ಸಾಲಿಗೆ ಕಳ್ಸೋದು ಇದಕ್ಕೆ ಏನ್ಲಾ. ತೊ ಥೋ.. ಒಂದಿನಾ ಭಾರ ತಪ್ಪಿದ್ರೇನಾಯ್ತು ದಿನಾ ಹೊರೋದು ತಪ್ಪೀತಾ? ಹೊರಬೇಕು ಕಂದಾ ಈಗಿನಿಂದಾ ಭಾರಾ ಹೊರೋದನ್ನ ಅಭ್ಯಾಸ ಮಾಡ್ಕೋಬೇಕು. ಬೆನ್ನಿಗೆ ಬಲ ಬರುತ್ತೆ ಅಲ್ವಾ. ಎಷ್ಟು ಓದಿದ್ರೂ ಈ ಸರಕಾರ ಕೆಲಸಾ ಅಂತೂ ಕೊಡಾಕಿಲ್ಲಾ, ಆಗ ಮೂಟೆ ಹೊತ್ತಾದರೂ ಬದುಕಬೋದಲ್ವಾ.
ಕಿಟ್ಟಿ : ಹೋಗಪ್ಪಾ, ಏನೇನೋ ಹೇಳಿ ತಲಿ ತಿನಬ್ಯಾಡ. ದಿನಾ ಯಾರು ಹೊರತಾರ ಹೇಳು ಈ ಹೆಣಭಾರ. ಇವತ್ತಾದರೂ ಆಟಗೀಟಾ ಆಡ್ಕೊಂಡು ಇರ್ತೀವಿ. ತಡೀ ಬೇಡಾ ನನ್ನ ( ಅಂತಾ ಹೊರಡುತ್ತಾನೆ, ಆದರೆ ತಂದೆ ಹಿಂದಿನಿಂದಾ ಕಾಲರ್ ಪಟ್ಟಿ ಹಿಡಿದು ನಿಲ್ಲಿಸಿ)
ತಿಮ್ಮಪ್ಪ : ಅಲೆಲೆಲೆ ಮಗನೇ.. ಹಂಗಂದ್ರೆ ಹೆಂಗಲೇ. ಪಾಠ ಪ್ರವಚನ ಇಲ್ಲಾಂದ್ರ ನಡೀ ಹೊಲಕ್ಕ ಸಂಜೀ ಮಟಾ ದುಡಿಯಾಕ, ಒಂದಾಳಿನ ಕಾಸಾದ್ರೂ ಉಳಿತೈತಿ.
ಕಿಟ್ಟಿ : ಅಪ್ಪಾ, ಬಿಡು ನನ್ನ ಸಾಲೀಗೆ ಹೋಗಬೇಕು.
ತಿಮ್ಮಪ್ಪ : ಅದು ಹ್ಯಾಂಗ ಹೋಗ್ತಿಯೋ ನಾನೂ ನೋಡ್ತೀನಿ.
(ಅಷ್ಟರಲ್ಲಿ ಮೇಷ್ಟು ಮನೆ ಮುಂದೆ ಹೋಗ್ತಿರ್ತಾರೆ )
ಕಿಟ್ಟಿ : ಮೇಷ್ಟ್ರೆ.. ಮೇಷ್ಟ್ರೆ ನಮ್ಮಪ್ಪಾ ಸ್ಕೂಲಿಗೆ ಬಿಡ್ತಿಲ್ಲಾ ನೀವೇ ಹೇಳ್ರಿ ಮೇಷ್ಟ್ರೆ.
ತಿಮ್ಮಪ್ಪ : ಇವತ್ತು ಪಾಠ ಗೀಟಾ ಏನೂ ಮಾಡೋದಿಲ್ವಂತಲ್ಲಾ ಮೇಷ್ಟ್ರೆ. ಅದೇನೋ ನೋ ಬ್ಯಾಗ ಭಾರ ದಿನ ಅಂತೆ.
ಮೇಷ್ಟ್ರು : ಹೌದು.. ಮೊದಲು ಅವನನ್ನ ಬಿಡು ತಿಮ್ಮಣ್ಣಾ. ಸರಕಾರ ತಿಂಗಳಿಗೊಂದಿನಾ ಬ್ಯಾಗಿನ ಭಾರ ಕಡಿಮೆ ಮಾಡಿದೆ.
ತಿಮ್ಮಪ್ಪ : ಹೌದಾ ಮೇಷ್ಟ್ರೆ. ಕೇವಲ ಪಾಟಿಚೀಲದ ಭಾರ ಮಾತ್ರ ಕಡಿಮೆ ಮಾಡಿದ್ರೆ ಸಾಕಾ. ಶಿಕ್ಷಣದ ಹೆಸರಲ್ಲಿ ಮಕ್ಕಳ ತಲೆಯೊಳಗ ಹೇರೋ ಯಮಭಾರ ಯಾವಾಗ ಮೇಷ್ಟ್ರೇ ಕಡಿಮೆ ಮಾಡೋದು.
ಮೇಷ್ಟ್ರು : ಏನ್ ತಿಮ್ಮಣ್ಣಾ ಹಂಗಂದ್ರೆ.
ತಿಮ್ಮಪ್ಪ : ಅಲ್ಲಾ ಮೇಷ್ಟ್ರೆ, ಮಕ್ಕಳು ಯಾಕ್ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಓದಬೇಕು ಹೇಳಿ.
ಮೇಷ್ಟ್ರು : ಮತ್ತಾಕೆ? ಪರೀಕ್ಷೆ ಬರಿಯೋದಿಕ್ಕೆ.
ತಿಮ್ಮಪ್ಪ : ಪರೀಕ್ಷೆ ಬರದ್ರೆ ಏನಾಗುತ್ತೆ ಮೇಷ್ಟ್ರೆ?
ಮೇಷ್ಟ್ರು : ಒಳ್ಳೆ ಮಾರ್ಕ್ಸ್ ಬರುತ್ತೆ ತಿಮ್ಮಣ್ಣಾ ಮಾರ್ಕ್ಸ್.
ತಿಮ್ಮಪ್ಪ : ಅಂದ್ರೆ ನಮ್ಮ ಮಕ್ಕಳು ಶಾಲೆಗೆ ಹೊಗೋದು ಪರೀಕ್ಷೆ ಬರಿಯೋಕೆ ಹಾಗೂ ಮಾರ್ಕ್ಸ್ ತೆಗೆಯೋಕೆ ಅಂದಂಗಾಯ್ತು. ಆದ್ರೆ ವಿದ್ಯೆ ಯಾವಾಗ ಕಲೀತಾನೆ?
ಮೇಷ್ಟ್ರು : ವಿದ್ಯೆ ಕಲಿತ್ರೆ ತಾನೇ ಅಂಕ ಸಿಗೋದು.
ತಿಮ್ಮಪ್ಪ : ಹೋ ವಿದ್ಯೆ ಕಲಿಯೋದು ಜ್ಞಾನ ಸಂಪಾದನೆ ಮಾಡೋಕೆ ಅಲ್ಲಾ ಕೇವಲ ಅಂಕ ಪಡಿಯೋಕೆ ಅಂತಾ ಆಯ್ತು.
ಮೇಷ್ಟ್ರು : ಎರಡಕ್ಕೂ ಅನ್ಕೋ.
ತಿಮ್ಮಪ್ಪ : ಹೌದಾ ಮೇಷ್ಟ್ರೆ. ಲೇ ಕಿಟ್ಟಿ ಹೋದ ವರ್ಷ ಯಾ ಪದ್ಯ ಕಲಿತೆ ಹೇಳು.
ಕಿಟ್ಟಿ : ಯಾವನಿಗೊತ್ತು ಬಿಡಪ್ಪಾ. ಪರೀಕ್ಷೆ ಮುಗಿದ್ ಮ್ಯಾಗೆ ಮತ್ಯಾಕೆ ಪದ್ಯ ಗದ್ಯದ ಸಹವಾಸಾ.
ತಿಮ್ಮಪ್ಪ : ನೋಡಿದ್ರಾ ಮೇಷ್ಟ್ರೆ. ಸಮಸ್ಯೆ ಎಲ್ಲಿ ಐತೇ ಅಂತಾ. ಶಾಲೆಯಲ್ಲಿ ಜ್ಞಾನಾರ್ಜನೆ ಆಗ್ತಾ ಇಲ್ಲಾ, ಕೇವಲ ಅಂಕ ಗಳಿಕೆಗೆ ಬೇಕಾದಷ್ಟು ಮಾತ್ರ ಹೇಳಿಕೊಡ್ತೀರಾ.
ಅದನ್ನೇ ಮಕ್ಕಳು ಉರು ಹೊಡೆದು ಹೇಗೋ ಪರೀಕ್ಷೆ ಬರೆದು ಮಾರ್ಕ್ಸ್ ಪಡೆದು ಮುಂದಿನ ಕ್ಲಾಸಿಗೆ ಹೋಗ್ತಾವೆ, ಹಿಂದೆ ಕಲ್ಸಿದ್ದನ್ನ ಮರೀತಾವೇ.
ಮೇಷ್ಟ್ರು : ನೀನೇಳೋದು ಖರೇ ತಿಮ್ಮಣ್ಣಾ. ಆದರೆ ಏನು ಮಾಡೋದು. ಶಿಕ್ಷಣ ಇಲಾಖೆ ಹೆಂಗೇಳ್ತದೊ ಹಂಗೆ ನಾವೂ ಕಲಿಸಬೇಕು ಅಲ್ವಾ.
ತಿಮ್ಮಪ್ಪ : ಹಂಗಾದ್ರೆ ಮಿಸ್ಟೇಕು ನಿಮ್ಮ ಇಲಾಖೆಯೊಳಗೆ ಐತೆ. ಅಂದ್ರೆ ಶಿಕ್ಷಣ ವ್ಯವಸ್ಥೆಯೊಳಗೆ ಐತೆ. ಅದಕ್ಕೆ ಮಕ್ಕಳು ಬಲಿಪಶು ಆಗಬೇಕು ಅಲ್ವಾ ಮೇಷ್ಟ್ರೆ.
ತಿಮ್ಮಪ್ಪ : ಅದಕ್ಕೆ ನಾನೇನು ಮಾಡೋಕಾಗುತ್ತೆ ಹೇಳು. ಆದೇಶ ಏನು ಬರುತ್ತೋ ಅದನ್ನಷ್ಟೇ ನಾವು ಮಾಡಬೇಕಲ್ವಾ?
ತಿಮ್ಮಪ್ಪ : ಹೌದೌದು ಅಷ್ಟೇ ನೀವು ಮಾಡೋಕಾಗೋದು. ಸರಕಾರಕ್ಕೆ ಹೇಳ್ರಿ. ಬ್ಯಾಗ್ ಭಾರ ಒಂದಿನ ಕಡಿಮೆ ಮಾಡೋ ಬದಲು ಮಕ್ಕಳ ಮೆದುಳಲ್ಲಿ ಹೇರುವ ಪರೀಕ್ಷೆ ಭಯದ ಭಾರ ಕಡಿಮೆ ಮಾಡೋಕೆ.
ಮೇಷ್ಟ್ರು : ನೀನೇಳೋದೇನೋ ಸರಿ, ಆದರೆ ಅದೆಂಗೆ ಆಗುತ್ತೆ?
ತಿಮ್ಮಪ್ಪ : ಯಾಕಾಗೋದಿಲ್ಲಾ ಎಲ್ಲಾ ಆಗುತ್ತೆ. ಅಲ್ಲಾ ಮೇಷ್ಟ್ರೆ ಆನೆ ಬಗ್ಗೆ ಒಂದು ಪುಸ್ತಕ ಓದೋ ಬದಲು ಆನೇನೇ ತೋರಿಸಿ ವಿವರಿಸಿದ್ರೆ ಸಾಕಲ್ವಾ?
ಮೇಷ್ಟ್ರು : ಹೋ ಬೇಕಾದಷ್ಟಾಯ್ತು. ಮಕ್ಕಳಿಗೆ ಚೆನ್ನಾಗಿ ನೆನಪಲ್ಲಿರುತ್ತೆ.
ತಿಮ್ಮಪ್ಪ : ಹಂಗಾದ್ರೆ ನೀವು ಮಕ್ಕಳಿಗೆ ಕಲಿಸಬೇಕೆನ್ನೋ ಪಾಠಗಳನ್ನ ಪ್ರತ್ಯಕ್ಷವಾಗಿ ನಾಟಕ ಮಾಡಿಸಿ ಯಾಕೆ ತೋರಿಸಬಾರದು.
ಮೇಷ್ಟ್ರು : ನಾಟಕಾನಾ?
ತಿಮ್ಮಪ್ಪ : ಹೌದು ನಾಟಕಾ. ಮಕ್ಕಳ ಪಾಠಗಳನ್ನ ರಂಗರೂಪ ಮಾಡಿ. ಮಕ್ಕಳಿಂದಲೇ ಪಾತ್ರಗಳನ್ನ ಅಭಿನಯಿಸಲು ಕಲಿಸಿ. ನಾಟಕವಾಗಿ ಪ್ರದರ್ಶನ ಮಾಡಿಸಿ. ಆಗ ನೋಡಿ ಎಷ್ಟೇ ವರ್ಷ ಆದ್ರೂ ಮಕ್ಕಳು ಪ್ರತಿ ಪಾತ್ರ ಸನ್ನಿವೇಶವನ್ನು ಮರೆಯೋದೇ ಇಲ್ಲಾ ಅಲ್ವಾ.
ಮೇಷ್ಟ್ರು : ಒಳ್ಳೇ ಐಡಿಯಾ. ನಾವು ಚಿಕ್ಕವರಿದ್ದಾಗ ನೋಡಿದ ಕಂಪನಿ ನಾಟಕಗಳಾದ ಸತ್ಯ ಹರಿಶ್ಚಂದ್ರ, ಹೇಮರಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ ಮುಂತಾದ ನಾಟಕಗಳನ್ನ ಇನ್ನೂ ಮರೆತಿಲ್ಲಾ ನೋಡು ತಿಮ್ಮಣ್ಣಾ.
ತಿಮ್ಮಪ್ಪ : ಹಾಂ. ಅದನ್ನೇ ನಾನೂ ಹೇಳೋದು. ಪಾಠಗಳನ್ನ ನಾಟಕವಾಗಿಸಿ ಹಾಡು ಕುಣಿತಗಳನ್ನು ಸೇರಿಸಿ ಮಕ್ಕಳನ್ನೇ ಸೇರಿಸಿಕೊಂಡು ಆಟ ಕಲಿಸಿದ್ರೆ ಎಷ್ಟು ಅದ್ಬುತವಾಗಿರುತ್ತೇ ಗೊತ್ತಾ ಮೇಷ್ಟ್ರೆ.
ಮೇಷ್ಟ್ರು : ಇರುತ್ತೆ ಇದ್ದೇ ಇರುತ್ತೆ. ಆದರೆ ಈ ಸಿಲೇಬಸ್ ಮುಗಿಸೋದಿಕ್ಕೆ ನಮಗೆ ಸಮಯ ಸಾಲದು. ಇನ್ನು ನಾಟಕ ಯಾವಾಗ ಮಾಡಿಸೋದು ತಿಮ್ಮಣ್ಣ.
ತಿಮ್ಮಪ್ಪ : ಯಾಕೆ ಆಗೋದಿಲ್ಲ. ಹೇಗೂ ಸರಕಾರ ನೋ ಬ್ಯಾಗ್ ಡೇ ಅಂತೇನೋ ಮಾಡಿದೆಯಲ್ಲಾ. ಆವಾಗ ನಾಟಕ ಕಲಿಸಿ. ನೀವು ಒಮ್ಮೆ ಶುರು ಮಾಡಿ ಮೇಷ್ಟ್ರೆ, ಆಗ ನೋಡಿ ಮಕ್ಕಳು ಸಾಲಿ ಸಮಯದ ನಂತರ ಸಹ ನಿಮ್ಮ ಹಿಂದೆ ಮುಂದೆ ಇರ್ತಾರೆ. ಭಾನುವಾರವೂ ಬರ್ತಾರೆ. ನಾಟಕದ ಸೆಳೆತ ಅಂದ್ರೆ ಅಂತಾದ್ದು. ಬಿಟ್ಟೆ ಅಂದ್ರೂ ಬಿಡದೇ ಇರುವಂತಾದ್ದೂ.
ಮೇಷ್ಟ್ರು : ಶಹಬ್ಬಾಸ್ ತಿಮ್ಮಣ್ಣಾ. ಪಾಟೀ ಚೀಲ ಇಲ್ಲದೇ ಹೆಂಗೆ ಪಾಠ ಮಾಡೋದು ಅಂತಾ ತಲೆ ಕೆಡಿಸ್ಕೊಂಡಿದ್ದೆ. ಈಗಲೇ ಹೋಗಿ ಪಾಠಗಳನ್ನೇ ನಾಟಕ ಮಾಡಿ ಆಡಿಸ್ತೇನೆ. ಪದ್ಯಗಳನ್ನ ರೂಪಕ ಮಾಡ್ತೇನೆ. ಪಠ್ಯಗಳೆಲ್ಲಾ ಮಕ್ಕಳಿಗೆ ಹೊರೆ ಆಗದೇ ನಾಟಕವಾಗಿ ಹೂವಿನಹಾಗೆ ಹಗುರಾಗುವಂತೆ ಮಾಡ್ತೇನೆ.
ತಿಮ್ಮಪ್ಪ : ಅಷ್ಟು ಮಾಡಿ ನೋಡಿ ಮೇಷ್ಟ್ರೆ.. ಆಗಲಾದರೂ ಈ ಸರಕಾರಕ್ಕೆ, ಶಿಕ್ಷಣ ಇಲಾಖೆಗೆ ಬುದ್ದಿ ಬರಬೋದು. ಪ್ರತಿ ಶಾಲೆಗೂ ನಾಟಕದ ಮೇಷ್ಟ್ರನ್ನ ನೇಮಿಸಬಹುದು. ಕಬ್ಬಿಣದ ಕಡಲೆಯಂತಹ ವಿಷಯಗಳನ್ನೂ ಸುಲಿದ ಬಾಳೇಹಣ್ಣಿನಂತೆ ಮಕ್ಕಳು ಅರಗಿಸಿಕೊಂಡು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಮೇಷ್ಟ್ರು : ಹೋ ಇದು ಒಳ್ಳೆಯ ಉಪಾಯ. ಇವತ್ತಿನಿಂದಲೇ ಆರಂಭಿಸುವೆ. ನಡೀ ಕಿಟ್ಟಿ. ಇವತ್ತು ನೋ ಬ್ಯಾಗ್ ಡೇ ಅಲ್ಲಾ, ನಾಟಕದ ದಿನ. ಪಾಠಗಳನ್ನೇ ಆಟವಾಗಿಸುವ ಆರ್ಟ್ ಡೇ.
ಕಿಟ್ಟಿ : ಹೌದಾ ಮೇಷ್ಟ್ರೇ.. (ಹೇ ಎಂದು ಚಪ್ಪಾಳೆ ತಟ್ಟಿ) ನಾನೂ ನಾಟಕಾ ಆಡ್ತೇನೆ, ಎಲ್ಲರ ಜೊತೆ ಹಾಡ್ತೇನೆ, ಗೆಳೆಯರ ಜೊತೆ ಕುಣೀತೇನೆ. ಪಾಠ ಹೋಗಿ ನಾಟಕವಾಯ್ತು ಡುಂ ಡುಮುಕ್.
ಪದ್ಯ ಹೋಗಿ ಹಾಡಾಯ್ತು ಡುಂಡುಮುಕ್, ಮಗ್ಗಿ ಹೋಗಿ ಸುಗ್ಗಿ ಆಯ್ತು ಡುಂಡುಮುಕ್.
ತಿಮ್ಮಪ್ಪ : ನೋಡಿದ್ರಾ ಮೇಷ್ಟೇ. ಮಕ್ಕಳ ಸಂಭ್ರಮಾನಾ? ನಾಟಕ ಅಂದ್ರೆ ಎಲ್ಲಾ ಕಲೆಗಳ ತವರು ಅಲ್ವಾ. ಆಡ್ಸಿ ಆಡ್ಸಿ, ಮಕ್ಕಳು ಕೂಡಿ ಬಾಳೋದನ್ನ ಕಲೀತಾರೆ, ದೈರ್ಯವಾಗಿ ಮಾತಾಡೋದನ್ನ ರೂಢಿಸಿಕೊಳ್ತಾರೆ,
ವ್ಯಕ್ತಿತ್ವ ವಿಕಸನ ಮಾಡ್ಕೋತಾರೆ, ತಂದೆ ತಾಯಿ ಗುರು ಹಿರಿಯರಿಗೆ ಗೌರವ ಕೊಡೋದನ್ನ ಮಾಡತಾರೆ. ಆಟದ ಮೂಲಕ ಪಾಠಗಳನ್ನ ಕಷ್ಟವಿಲ್ಲದೇ ಇಷ್ಟ ಪಟ್ಟು ಕಲೀತಾರೆ.
ಮೇಷ್ಟ್ರು : ಹೌದು ತಿಮ್ಮಣ್ಣಾ. ನನಗೆ ಜ್ಞನೋದಯ ಮಾಡಿಸಿದೆ ನೀನು. ಹೌದು ಇದೆಲ್ಲಾ ನಿನಗೆ ಹೇಗೆ ಗೊತ್ತು?
ತಂದೆ : ನಮ್ಮ ತಾತ ಕಂಪನಿ ನಾಟಕದ ಜನಪ್ರೀಯ ಕಲಾವಿದ ಮೇಷ್ಟ್ರೆ, ನಮ್ಮ ತಂದೆ ನಾಟಕ ಕೂಡಿಸುವ ಪೇಟಿ ಮೇಷ್ಟ್ರು. ನಾನು ನಾಟಕ ಕಂಪನಿಯಲ್ಲೇ ಬಾಲ್ಯ ಕಳೆದ ಕಲಾವಿದ. ಈಗ ಕೃಷಿ ಕಾಯಕದ ಜೊತೆ ಖುಷಿಗಾಗಿ ಕಲೆಯನ್ನೂ ಮೈಗೂಡಿಸಿಕೊಂಡಿರುವೆ.
ಮೇಷ್ಟ್ರು : ಆಹಾ.. ನಿನ್ನಂತಾ ಎಲೆ ಮರೆಯ ಕಾಯಂತಿರುವ ಕಲಾವಿದನನ್ನು ನನಗೆ ಗುರುತಿಸಲಾಗಲಿಲ್ಲ. ನೀನೂ ಶಾಲೆಗೆ ಬಾ. ಎಲ್ಲರೂ ಸೇರಿ ಪಾಠಗಳನ್ನ ನಾಟಕವಾಗಿಸಿ ಮಕ್ಕಳಿಗೆ ಕಲಿಸೋಣ.
( ಅಷ್ಟರಲ್ಲಿ ಕಿಟ್ಟಿ ಹತ್ತಾರು ಮಕ್ಕಳ ಗುಂಪನ್ನು ಕರೆದು ಸುತ್ತುವರೆಯುತ್ತಾನೆ)
ಕಿಟ್ಟಿ : ಪಾಠದ ಹೊರೆ ಸಾಕು ಇನ್ನು ಆಟದ ಪಾಠ ಬೇಕು.
ಎಲ್ಲಾ ಮಕ್ಕಳು : ಬೇಕು ಬೇಕು ಬೇಕು.
(ತಿಮ್ಮಪ್ಪ ಹಾಡಲು ತೊಡಗುತ್ತಾನೆ.
ಮಕ್ಕಳು ಕೋರಸ್ ಕೊಡುತ್ತಾರೆ)
ಪಾಠಗಳ ಹೊರೆ ಇಳಿಸಿ ಗುರುವೇ
ಮಕ್ಕಳ ಮನವ ಅರಿಯಿರಿ ದೊರೆಯೇ
ಅಂಕದ ಗುಮ್ಮನ ಓಡಿಸಿ ಜ್ಞಾನದ ದೀವಿಗೆ ಬೆಳಗಿಸಿ
ನಾಟಕದಿಂದ ಪಾಠ, ನಾಟಕವೇ ಬದುಕಿನ ನೋಟ
ನಾವು ನೀವು ಅವರು ಇವರು ಎಲ್ಲರೂ
ಈ ಜಗದ ನಾಟಕ ರಂಗದ ಪಾತ್ರಗಳು
ಪಾಠದ ಹೊರೆ ಇಳಿಸಿ ಗುರುವೆ
ಮಕ್ಕಳ ಮನವ ಅರಿಯಿರಿ ದೊರೆಯೇ
- ಶಶಿಕಾಂತ ಯಡಹಳ್ಳಿ
Comments
Post a Comment