ಸಂಭವಾಮಿ ಯುಗೆ ಯುಗೇ (ಪ್ರಹಸನ - 43)
(ಪ್ರಹಸನ - 43)
ಸಂಭವಾಮಿ ಯುಗೆ ಯುಗೇ
************************************
(ಚಕ್ರವರ್ತಿ ನರೇಂದ್ರ ಬಾಹುಬಲಿಯವರು ತಮ್ಮ ಖಾಸಗಿ ಕೊಠಡಿಯಲ್ಲಿ ವಿರಾಜಮಾನರಾಗಿದ್ದಾರೆ. ಆಗ ಅಮಾತ್ಯ ಶಾಜೀ ಯವರು ಆತಂಕದಿಂದ ಪ್ರವೇಶಿಸಿ)
ಅಮಾತ್ಯ : ಚಕ್ರವರ್ತಿಗಳಿಗೆ ಜಯವಾಗಲಿ.
ಚಕ್ರವರ್ತಿ ; ಹೇಳಿ ಅಮಾತ್ಯರೆ ಮತ್ಯಾವ ದುರಂತ ಸುದ್ದಿಯನ್ನು ತಂದಿದ್ದೀರಿ.
ಅಮಾತ್ಯ : ಅಂತಾದ್ದೇನಿಲ್ಲಾ
ಬಿಡಿ ಮಹಾಸ್ವಾಮಿ. ಅದೇ ನಮ್ಮ ಸಾಮ್ರಾಜ್ಯದ ಚಿಕ್ಕ ಪ್ರಾಂತ್ಯವಾದ ಮಣಿಪುರದಲ್ಲಿ ಕಳೆದೆರಡು ಮಾಸಗಳಿಂದ ಗಲಭೆಗಳು ಹೆಚ್ಚಾಗಿವೆ.
ಚಕ್ರವರ್ತಿ : ಅದು ಗೊತ್ತಿರುವ ವಿಚಾರವೇ. ನೀವೇ ತಾನೇ ಬುಡಕಟ್ಟು ಜನರ ತಲೆ ಕೆಡಿಸಿ ಮತಾಂತರ ಮಾಡುತ್ತಿರುವ ಚರ್ಚಗಳೆಲ್ಲವನ್ನೂ ನಾಶಮಾಡಬೇಕೆಂದು ಸಲಹೆ ಕೊಟ್ಟಿದ್ದು.
ಅಮಾತ್ಯ : ನಮ್ಮ ಸನಾತನ ಧರ್ಮ ರಕ್ಷಣೆಗಾಗಿ ಇಂತಹ ಬಲವಂತದ ಕ್ರಮಗಳನ್ನು ಆಗಾಗ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ನಿಮಗೂ ಗೊತ್ತಲ್ಲಾ ಪ್ರಭು.
ಚಕ್ರವರ್ತಿ : ಆ ಪ್ರಾಂತ್ಯದಲ್ಲಿರುವ ಬಹುಸಂಖ್ಯಾತ ಜಾತಿಯವರಿಗೆ ಮೀಸಲಾತಿ ಘೋಷಣೆ ಮಾಡಿ ಅವರೆಲ್ಲರ ಬೆಂಬಲ ಪಡೆಯಲು ಆದೇಶ ಮಾಡಿದ್ದೇವಲ್ಲಾ, ಯಾಕೆ ಅದು ಕೆಲಸ ಮಾಡಲಿಲ್ಲವೇ.
ಅಮಾತ್ಯ : ಇಲ್ಲಾ ಪ್ರಭು. ಅದೇ ಈಗ ಉಲ್ಟಾ ಹೊಡೆದಿದೆ. ಚರ್ಚ್ ಗಳ ನಾಶ ಹಾಗೂ ಬಹುಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದಕ್ಕೆ ಅಲ್ಪಸಂಖ್ಯಾತ ಬುಡಕಟ್ಟಿನ ಜನತೆ ದಂಗೆ ಎದ್ದಿದ್ದಾರೆ.
ಚಕ್ರವರ್ತಿ : (ಸಿಟ್ಟಿನಿಂದ) ಏನೂ ಅಷ್ಟೊಂದು ದುರಹಂಕಾರವೇ ಆ ಗುಡ್ಡಗಾಡಿನ ಬಡ್ಡಿಹೈದರಿಗೆ.
ದಂಡ.. ರಾಜದಂಡವನ್ನು ಬಳಸಿ, ಸೈನ್ಯವನ್ನು ನಿಯೋಜಿಸಿ ಬಂಡಾಯವನ್ನು ಶಮನಗೊಳಿಸಿ. ಇದು ರಾಜಾಜ್ಞೆ.
ಅಮಾತ್ಯ : ಇಂತಹ ಯಾವುದೇ ಬಲವಂತದ ಕ್ರಮಗಳಿಗೂ ಅವರು ಮಣಿಯುತ್ತಿಲ್ಲಾ ಪ್ರಭು. ಅವರೆಲ್ಲಾ ಶಸ್ತ್ರ ಸಜ್ಜಿತರಾಗಿದ್ದಾರೆ.
ಸಂಘಟಿತರಾಗಿದ್ದಾರೆ. ನಮ್ಮ ಸೈನ್ಯ ಪಡೆಯ ಎದುರು ಮಹಿಳೆಯರ ಪಡೆಯೇ ಅಡ್ಡವಾಗಿ ನಿಂತು ಕಾರ್ಯಾಚರಣೆಗೆ ತಡೆಯಾಗುತ್ತಿದೆ.
ಚಕ್ರವರ್ತಿ : ಏನು ಮಹಿಳೆಯರಿಗೂ ಅಷ್ಟೊಂದು ಸೊಕ್ಕೆ. ಅವರಲ್ಲೇ ಕೆಲವು ಹೆಂಗಸರ ಮೇಲೆ ಅತ್ಯಾಚಾರ ಮಾಡಿಸಿ ಕೊಲ್ಲಲು ಹೇಳಿ. ಆಗ ಅವರೇ ಹೆದರಿಕೊಂಡು ಬಿಲದಲ್ಲಿ ಅಡಗುತ್ತಾರೆ.
ಅಮಾತ್ಯ : ಅದನ್ನೂ ಮಾಡಿಯಾಯ್ತು ದೊರೆ. ಕೆಲವು ಬುಡಕಟ್ಟಿನ ಹೆಂಗಸರನ್ನು ಹಿಡಿದು ಬೆತ್ತಲೆ ಮೆರವಣಿಗೆ ಮಾಡಿ ಸಾರ್ವಜನಿಕವಾಗಿ ಅತ್ಯಾಚಾರ ಮಾಡಿಸಲಾಯಿತು.
ಆದರೆ ಇದರಿಂದಾಗಿ ಬೇರೆ ಪ್ರಾಂತ್ಯಗಳಲ್ಲೂ ಪ್ರತಿಭಟನೆಗಳು ಜೋರಾದವು. ನಿಮ್ಮ ಆಳ್ವಿಕೆಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದು ನಮ್ಮ ಸಾಮ್ರಾಜ್ಯದ ಜನರು ಬಂಡಾಯವೇಳುವ ಎಲ್ಲಾ ಲಕ್ಷಣಗಳೂ ಇವೆ.
ಚಕ್ರವರ್ತಿ : ನೀವೇ ಏನಾದರೂ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ.
ಅಮಾತ್ಯ : ಸಮಜಾಯಿಸಿ ಕೊಡಲು ನಾನೂ ಎಲ್ಲಾ ರೀತಿಯ ಪ್ರಯತ್ನ ಪಟ್ಟೆ ಪ್ರಭು. ಆದರೆ ವಿರೋಧಿಗಳದ್ದು ಒಂದೇ ಪಟ್ಟು, ಸ್ವತಃ ದೊರೆಗಳೇ ಬಂದು ಒಡ್ಡೋಲಗದಲ್ಲಿ ಹೇಳಿಕೆ ಕೊಡಬೇಕು ಎಂದು.
ಚಕ್ರವರ್ತಿ : ಅದು ಹೇಗೆ ಸಾಧ್ಯ ಅಮಾತ್ಯರೆ. ಯಾವುದೇ ದುರಂತಗಳು ದೊಡ್ಡ ಸಮಸ್ಯೆಗಳು ಬಂದರೂ ನಾವು ಮೌನವೃತ ಧಾರಣೆ ಮಾಡುತ್ತೇನೆಂಬುದು ನಿಮಗೆ ಗೊತ್ತಿಲ್ಲವೇ? ಅದೂ ಒಡ್ಡೋಲಗದಲ್ಲಿ ನಮ್ಮ ಆಳ್ವಿಕೆಯಲ್ಲಿ ತಪ್ಪಾಯ್ತು ಎಂದು ಒಪ್ಪಿಕೊಳ್ಳುವುದು ನಮ್ಮ ಘನತೆಗೆ ಅಗೌರವ. ಸಾಧ್ಯವೇ ಇಲ್ಲ.
ಅಮಾತ್ಯ : ಇದು ಮಹಿಳೆಯರ ಮೇಲೆ ನಡೆಯುತ್ತಿರುವ ಅನಾಚಾರ ಅತ್ಯಾಚಾರ ಅಮಾನುಷ ಹತ್ಯೆಗಳ ವಿಚಾರ ಪ್ರಭು. ದೇಶಾದ್ಯಂತ ಜನರು ಆಕ್ರೋಶಭರಿತರಾಗಿದ್ದಾರೆ.
ಚಕ್ರವರ್ತಿ : ಆದರೆ ಆಗಲಿ ಬಿಡಿ ಅಮಾತ್ಯರೆ. ಹಾಗಂತಾ ನಾವು ನಮ್ಮ ದಿವ್ಯ ಮೌನವನ್ನು ಮುರಿಯಲಾದೀತೆ.
ನಮ್ಮ ಸನಾತನ ಪುರಾಣಗಳ ದಿವ್ಯ ಪರಂಪರೆಯನ್ನು ಮೀರಲಾದೀತೆ. ಇಲ್ಲಾ ಸಾಧ್ಯವೇ ಇಲ್ಲ.
ಅಮಾತ್ಯ : ಇದರಲ್ಲಿ ಪುರಾಣ ಪರಂಪರೆಯ ಪ್ರಸ್ತಾಪ ಯಾಕೆ ಪ್ರಭು.
ಚಕ್ರವರ್ತಿ : ನಾನು ಈ ರಾಜದಂಡವನ್ನು ಕೈಯಲ್ಲಿ ಹಿಡಿದು ಚಕ್ರವರ್ತಿಯಾಗಿದ್ದೇ ನಮ್ಮ ದಿವ್ಯ ಭವ್ಯ ಪರಂಪರೆಯನ್ನು ಮುಂದುವರೆಸಲು. ಉಳಿಸಿ ಬೆಳೆಸಲು. ಸನಾತನ ಸಂಸ್ಕೃತಿಗೆ ಅಪಚಾರವಾಗಲು ಈ ರಾಜದಂಡ ಅನುಮತಿ ಕೊಡುವುದಿಲ್ಲ ಅಮಾತ್ಯರೆ.
ಅಮಾತ್ಯ : ಮಹಿಳೆಯರ ಮೇಲೆ ಆಗುತ್ತಿರುವ ಘೊರ ದೌರ್ಜನ್ಯಕ್ಕೆ ವಿರೋಧಿಗಳು ನಿಮ್ಮಿಂದಲೇ ಸ್ಪಷ್ಟೀಕರಣ ಬಯಸುತ್ತಿದ್ದಾರೆ. ಇಲ್ಲಿ ಪರಂಪರೆಯ ಪ್ರಶ್ನೆ ಉದ್ಭವಿಸುವುದಿಲ್ಲ ಪ್ರಭು.
ಚಕ್ರವರ್ತಿ : ನೋಡಿ ಅಮಾತ್ಯರೆ, ನಿಮಗೆ ನಮ್ಮ ಹೆಮ್ಮೆಯ ಮಹಾಭಾರತ ಮಹಾಕಾವ್ಯ ಗೊತ್ತಿದೆಯಾ? ಅದು ನಮ್ಮ ಸನಾತನ ಸಂಸ್ಕೃತಿಯನ್ನು ಸಾರುವ ಪ್ರತಿಷ್ಟೆಯ ಪ್ರತೀಕ. ನಮ್ಮ ಧರ್ಮದ ಮಹೋನ್ನತ ಗ್ರಂಥದ ಉದಯವಾಗಿದ್ದೂ ಈ ಮಹಾಕಾವ್ಯದಿಂದಲೇ.
ಅಮಾತ್ಯ : ಗೊತ್ತು ಪ್ರಭು. ಆದರೆ ಅದಕ್ಕೂ ಈಗ ಮಹಿಳೆಯರ ಮೇಲಿನ ಕ್ರೌರ್ಯ ಕ್ಕೂ ಎತ್ತನಿಂದೆತ್ತ ಸಂಬಂಧ .
ಚಕ್ರವರ್ತಿ : ಇದೆ ಸಂಬಂಧಾ ಇದೆ. ಮಹಾಭಾರತದಲ್ಲಿ ಈಗ ಮಣಿಪುರ ಪ್ರಾಂತ್ಯದಲ್ಲಾದಂತೆಯೇ ಘಟನೆ ನಡೆಯುತ್ತದೆ. ದುಶ್ಯಾಸನ ಸಾರ್ವಜನಿಕವಾಗಿ ದ್ರೌಪದಿಯ ಮುಡಿ ಹಿಡಿದು ಎಳೆದು ತರುತ್ತಾನೆ ಅಲ್ಲವೇ. ದುರ್ಯೋಧನನ ಆದೇಶದಂತೆ ಅತಿರಥ ಮಹಾರಥರು ಆಸೀನರಾಗಿದ್ದ ತುಂಬಿದ ಸಭೆಯಲ್ಲಿ ದ್ರೌಪತಿಯ ಸೀರೆ ಸೆಳೆದು ಬೆತ್ತಲು ಮಾಡಲು ಪ್ರಯತ್ನಿಸುತ್ತಾನೆ ಅಲ್ಲವೇ.
ಅಮಾತ್ಯ : ಹೌದು ಮಹಾಪ್ರಭು.
ಚಕ್ರವರ್ತಿ : ಅದನ್ನು ಅಂಧರಾಜ ದೃತರಾಷ್ಟ್ರ ತಡೆಯಬಹುದಾಗಿತ್ತು ತಡೆಯಲಿಲ್ಲ. ಎಲ್ಲರಿಗಿಂತ ಗೌರವಾನ್ವಿತ ಹಿರಿಯ ಭೀಷ್ಮ ಪಿತಾಮಹ ದೌರ್ಜನ್ಯವನ್ನು ನಿಲ್ಲಿಸಬಹುದಾಗಿತ್ತು ನಿಲ್ಲಿಸಲಿಲ್ಲ.
ಎಲ್ಲರೂ ಎಲ್ಲವನ್ನೂ ನೋಡಿಯೂ ಮೌನಕ್ಕೆ ಶರಣಾಗಿದ್ದರಲ್ಲವೇ?
ಅಮಾತ್ಯ : ಹೌದು ದೊರೆಗಳೇ. ಅವರು ವಿರೋಧಿಸಿದ್ದರೆ ಕುರುಕ್ಷೇತ್ರ ಯುದ್ದವೇ ಆಗುತ್ತಿರಲಿಲ್ಲ.
ಚಕ್ರವರ್ತಿ : ಅಂತಹ ಕಣ್ಣು ಕಿವಿಗಳನ್ನು ಮುಚ್ಚಿಕೊಂಡು ಭೀಷ್ಮರಂತವರೇ ಯಾಕೆ ಸುಮ್ಮನಿದ್ದರು.
ಯಾಕೆಂದರೆ ಅವರಿಗೂ ಯುದ್ದ ಬೇಕಿತ್ತು. ಯುದ್ದ ನಡೆದರೆ ತಾನೇ ನಮ್ಮ ಶ್ರೇಷ್ಟ ಧರ್ಮದ ಉತ್ಕೃಷ್ಟ ಗ್ರಂಥ ಹುಟ್ಟುವುದು. ಅದಕ್ಕಾಗಿ, ಆ ಅತ್ಯಮೂಲ್ಯ ಧರ್ಮ ಗ್ರಂಥಕ್ಕಾಗಿ ಯುದ್ದ ಬೇಕಿತ್ತು. ಸಾವು ನೋವುಗಳ ಲೆಕ್ಕಕ್ಕಿಂತಾ,
ಅನಾಚಾರ ಅತ್ಯಾಚಾರಗಳ ಅಂಕಿಅಂಶಗಳಿಗಿಂತಾ ಯುಗಯುಗಗಳ ಕಾಲ ಧರ್ಮ ಸಂರಕ್ಷಣೆ ಮಾಡುವಂತಹ ಧರ್ಮಗ್ರಂಥ ಮುಖ್ಯವಾಗಿತ್ತು.
ಅಮಾತ್ಯ : ನೀವು ಹೇಳುವುದೇನೋ ಸರಿ. ಆದರೆ..
ಚಕ್ರವರ್ತಿ : ಆದರೆ ಏನು? ಈಗ ನಾನು ಮಾಡುತ್ತಿರುವುದೂ ದೃತರಾಷ್ಟ್ರ ದ್ರೋಣ ಭೀಷ್ಮಾಚಾರ್ಯರು ಆಗ ಮಾಡಿದ್ದನ್ನೇ.
ಹೆಂಗಸರ ಬೆತ್ತಲೆ ಮೆರವಣಿಗೆ ಆಗುತ್ತಿದ್ದರೆ ಆಗಲಿ ಬಿಡಿ, ಅತ್ಯಾಚಾರ ಕೊಲೆಗಳು ನಿರಂತರವಾದರೆ ಆಗಲಿ ಬಿಡಿ. ಧರ್ಮರಕ್ಷಣೆಗೆ ಇವೆಲ್ಲಾ ಮಾಮೂಲು. ಅಲ್ಲಿ ಮಣಿಪುರದಲ್ಲಿ ಅನ್ಯ ಧರ್ಮಪಾಲನೆ ಮಾಡುವವರು ದ್ವಂಸವಾಗಬೇಕು,
ನಮ್ಮ ಧರ್ಮದ ಮೇಲೆ ನಿಷ್ಟೆ ಇರುವವರು ಮಾತ್ರ ಇರಬೇಕು. ಇದು ನಮ್ಮ ಸಾಮ್ರಾಜ್ಯದಲ್ಲಿರುವ ಎಲ್ಲರಿಗೂ ಮಾದರಿಯಾಗಬೇಕು. ಧರ್ಮರಕ್ಷಣೆ ರಾಜದಂಡಾಧಿಕಾರಿಯಾದ ನಮ್ಮ ಹೊಣೆ. ಅದಕ್ಕಾಗಿ ಅದೆಷ್ಟು ಹೆಣಗಳು ಬಿದ್ದರೆ ಬೀಳಲಿ, ಅದೆಷ್ಟು ಹೆಂಗಸರ ಮಾನ ಪ್ರಾಣಗಳು ಹೋದರೆ ಹೋಗಲಿ. ಹಿಂದೂರಾಷ್ಟ್ರ ನಿರ್ಮಾಣವೇ ನಮ್ಮ ಗುರಿ, ನಮ್ಮ ಧ್ಯೇಯ. ಅರ್ಥವಾಯ್ತೇ ಅಮಾತ್ಯರೆ.
ಅಮಾತ್ಯ : ಆಯ್ತು ಮಹಾಪ್ರಭುಗಳೇ. ಧರ್ಮರಕ್ಷಣೆಯ ಯುದ್ದದಲ್ಲಿ ಎದುರಾಳಿಗಳು, ಹೆಂಗಸರು ಬಲಿಯಾಗಲೇ ಬೇಕು. ಕೆಲವೊಮ್ಮೆ ನಮ್ಮವರೂ ಬಲಿದಾನ ಮಾಡಲು ಸಿದ್ದರಾಗಿರಬೇಕು.
ಚಕ್ರವರ್ತಿ : ಈಗ ನಿಮಗೆ ಅರ್ಥವಾಯ್ತು. ಹೋಗಿ.. ದೊರೆಗಳು ಮೌನವೃತದಲ್ಲಿದ್ದಾರೆ ಎಂದು ವಿರೋಧಿಗಳಿಗೆ ತಿಳಿಸಿ. ಎಲ್ಲಿಯೇ ದುರಂತಗಳು ನಡೆದರೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಭರವಸೆ ಕೊಡಿ. ಸೈನ್ಯವನ್ನು ಸನ್ನದ್ದವಾಗಿ ಇಡಿ. ಧರ್ಮರಕ್ಷಣೆಗೆ
ಎದುರಾದವರ ಅಟ್ಟಹಾಸವನ್ನು ಮಟ್ಟಹಾಕಲು ಸಿದ್ದರಾಗಿ. (ರಾಜದಂಡವನ್ನೆತ್ತಿ)
ಜೈ ಸೆಂಗೋಲ್
ಅಮಾತ್ಯ : ಜೈ ಜೈ ಸೆಂಗೋಲ್.
( ಚಕ್ರವರ್ತಿಯ ಹಿಂದೆ ಹೊಗೆ ಏಳುತ್ತದೆ. ಪ್ರಭಾವಳಿಗಳು ಮೂಡುತ್ತವೆ. ಅಮಾತ್ಯ ಭಕ್ತಿಯಿಂದಾ ಕೈಮುಗಿದು ನಿಲ್ಲುತ್ತಾನೆ. ಹಿನ್ನೆಲೆಯಲ್ಲಿ ಶ್ಲೋಕ)
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯಥನಾಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
ಪರಿತ್ರಾಣಾಯ ಸಾಧುನಾಂಗ್ ವಿನಾಶಯ ಚ ದುಷ್ಕೃತಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭಾಬಾಮಿ ಯುಗೇ ಯುಗೇ
*- ಶಶಿಕಾಂತ ಯಡಹಳ್ಳಿ*
Comments
Post a Comment