ಪ್ರಶಸ್ತಿ ವಾಪಸಾತಿ ಪ್ರಸಂಗ (ಪ್ರಹಸನ -44)

  (ಪ್ರಹಸನ -44)

ಪ್ರಶಸ್ತಿ ವಾಪಸಾತಿ ಪ್ರಸಂಗ 

************************************

 

ಕೆಲವು ಪ್ರಸಿದ್ದ  ಕವಿ ಸಾಹಿತಿ ಕಲಾವಿದರು ಒಂದು ಕಡೆ ಸೇರಿ ಕಾಫಿ ಸೇವಿಸುತ್ತಾ ಮಾತಿಗೆ ಆರಂಭಿಸಿದರು)

 

ಹಿರಿಕವಿ : ಏನೇ ಹೇಳಿ. ಇದು ಅನ್ಯಾಯಾ? ಹೀಗಾಗಬಾರದಿತ್ತು. ನನಗೆ ರಾತ್ರಿ ಎಲ್ಲಾ ನಿದ್ದೆ ಬರಲಿಲ್ಲ.

 

ಕಥೆಗಾರ : ಈಗ ಆಗಬಾರದ್ದು ಏನಾಯ್ತು ಸರ್.. 

 

ಹಿರಿಕವಿ : ಯಾಕೆ ಬೆಳಿಗ್ಗೆ ಪೇಪರ್ ಓದಿಲ್ವಾ. ಇನ್ಮೇಲೆ ಸರಕಾರಿ ಪ್ರಶಸ್ತಿ ಪುರಸ್ಕೃತರಾದವರು ಯಾವುದೇ ಕಾರಣಕ್ಕೂ ಅದನ್ನು ಸರಕಾರಕ್ಕೆ ವಾಪಸ್ ಮಾಡುವಂತಿಲ್ಲಾ ಎಂದು ಮೊದಲೇ ಬರಕೊಡಬೇಕಂತೆ. ಇಂತಾ ಒಂದು ಶಿಪಾರಸ್ಸನ್ನು ಇಂದು ಸಂಸತ್ತಿನಲ್ಲಿ ಅದ್ಯಾವುದೋ ಸಂಸದೀಯ ಸ್ಥಾಯಿ ಸಮಿತಿ ಮಂಡಿಸಿದೆಯಂತೆ

 

ಕಿರಿಕವಿ : ಅರೆ, ಅಲ್ಲಾ ಗುರುಗಳೇ, ಕಷ್ಟಾಪಟ್ಟು ದಕ್ಕಿಸಿಕೊಂಡ ಪ್ರಶಸ್ತಿಗಳನ್ನ ಯಾರಾದರೂ ವಾಪಸ್ ಕೊಡ್ತಾರಾ? ಯಾರೂ ವಾಪಸ್ ಮಾಡೋದಿಲ್ಲಾ ಅಂದ್ಮೇಲೆ ಬರೆದು ಯಾಕೆ ಕೊಡಬೇಕು.

 

ಕಲಾವಿದ : ಎಲ್ಲಾ ನಾನ್ಸೆನ್ಸ್. ಕಿರಿಕವಿ ಇದೆಲ್ಲಾ ನಿನಗೆ ಗೊತ್ತಾಗೋದಿಲ್ಲ ಸುಮ್ಕಿರು. ನಮ್ಮ ಕಷ್ಟ ನಮಗೆ. ಅಲ್ಲಾ ಹಿರಿಕವಿಗಳೇ ಹಾಗೇನಾದರೂ ಕೊಟ್ಟ ಪ್ರಶಸ್ತಿ ವಾಪಸ್ ಕೊಟ್ರೆ ಮುಂದೆ ಯಾವ ಪ್ರಶಸ್ತಿಗೂ ಪರಿಗಣನೆ ಮಾಡೋದೇ ಇಲ್ವಂತೆ. ಇದು ಅನ್ಯಾಯ ಕಣ್ರೀ ಬೋ ಅನ್ಯಾಯಾ

 

ಕಿರಿಕವಿ : ಅಲ್ಲಾ ಸರ್. ಪ್ರಸಸ್ತಿ ಸಿಗಲಿ ಅಂತಾ ಎಲ್ಲಾ ರೀತಿ ಪ್ರಯತ್ನ ಮಾಡೋರು ಅದ್ಯಾಕೆ ಸಿಕ್ಕ ಪ್ರಶಸ್ತಿನಾ ವಾಪಸ್ ಕೊಡ್ತಾರೆ ಅದು ಹೇಳಿ ಮೊದಲು?

 

ಚಿತ್ರಕಲಾವಿದ : ಅದೆಲ್ಲಾ ನಿನಗೆ ಗೊತ್ತಾಗಾಕಿಲ್ಲಾ ಸುಮ್ಕಿರು ಕವಿ. ನೋಡಿ ಇದು ಭಾರೀ ಅನ್ಯಾಯಾಪ್ರಶಸ್ತಿ ಪಡೆಯುವ ಅಥವಾ ಪಡೆದದ್ದನ್ನು ವಾಪಸ್ ಮಾಡುವ  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರೂಲ್ಸು ಮಾರಕ. ಇದನ್ನ ನಾನು ಖಂಡಿಸ್ತೀನಿ. ಸಾಧಕರ ಮೇಲೆ ಅಂಕುಶ ಹಾಕುವ ಕೇಂದ್ರ ಸರಕಾರದ ಕ್ರಮ ಖಂಡನೀಯ.

 

ಕಥೆಗಾರ : ಇದನ್ನು ನಾನೂ ವಿರೋಧಿಸುತ್ತೇನೆ. ಪ್ರಶಸ್ತಿ ಪಡೆಯೋದು ನಮ್ಮ ಹಕ್ಕು ಹೇಗೋ ಹಾಗೆಯೇ ಅದನ್ನು ವಾಪಸ್ ಮಾಡೋದೂ ನಮ್ಮ ಹಕ್ಕಾಗಿದೆ. ಇದನ್ನು ಕೇಳೋಕೆ ಇವರು ಯಾರು?

 

ಕಿರಿಕವಿ : ಯಾರಾದರೂ ದಯವಿಟ್ಟು ಹೇಳಿ ಪುಣ್ಯಕಟ್ಟಿಕೊಳ್ಳಿ. ತೆಗೆದುಕೊಂಡ ಪ್ರಶಸ್ತಿಯನ್ನ ಯಾರು ಯಾಕೆ ವಾಪಸ್ ಕೊಡ್ತಾರೆ ಅದನ್ನ ಹೇಳಿ?

 

ಹಿರಿಕವಿ : ಸಂಸದೀಯ ಸಮಿತಿಯ ನಿರ್ಧಾರವನ್ನು ವಿರೋಧಿಸಿ ನಾನು ನಾಳೆ ಪ್ರೆಸ್ ಮೀಟ್ ಕರೆದು ನಮಗೆ ಕೊಟ್ಟ ಪದ್ಮಶ್ರೀ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ. ಅದೇನು ಮಾಡ್ತಾರೋ ಮಾಡ್ಕೊಳ್ಳಿ

 

ಚಿತ್ರ ಕಲಾವಿದ : ನಾನೂ ನಿಮ್ಮ ಜೊತೆಗೆ ನನ್ನ ಪ್ರಶಸ್ತಿಯನ್ನೂ ವಾಪಸ್ ಕೊಡುತ್ತೇನೆ.

 

ಕಲಾವಿದ : ಹೌದು ಪ್ರಶಸ್ತಿ ಫಲಕವನ್ನೇನೋ ವಾಪಸ್ ಕೊಡಬಹುದುಆದರೆ ಅದರ ಜೊತೆಗೆ ಕೊಟ್ಟ ಹಣವನ್ನು ಎಲ್ಲಿಂದ ತಂದು ಕೊಡಲಿ

 

ಕಥೆಗಾರ : ಪ್ರಶಸ್ತಿ ಜೊತೆ ತೆಗೆದುಕೊಂಡ ಹಣ ಎಲ್ಲಿ ಹೋಯ್ತು. ಅದನ್ನೇ ಈಗ ವಾಪಸ್ ಕೊಟ್ಟರಾಯ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತಾ ಹಣ ಏನೂ ದೊಡ್ಡದಲ್ಲಾ. ಕಲಾವಿದರಿಗೆ ಯಾವಾಗಲೂ ಹಣದ್ದೇ ಚಿಂತೆ.

 

ಕಲಾವಿದ : ಅದು ಹಾಗಲ್ಲ, ನನಗೆ ಪ್ರಶಸ್ತಿ ಫಲಕ ಸಿಕ್ಕಿದೆ. ಜೊತೆಗೆ ಶಾಲು ಹಾರ ಕೊಟ್ಟರು. ಆದರೆ ಹಣ

 

ಚಿತ್ರಕಲಾವಿದ : ಯಾಕೆ ಹಣ ಕೊಡಲಿಲ್ವಾ. ಕೊಟ್ಟಿಲ್ಲಾ ಅಂದ್ರೆ ಅದು ಮೋಸ. ನಾಳೆಯೇ ಅದರ ವಿರುದ್ದ ಪತ್ರಿಕಾ ಸ್ಟೇಟ್ಮೆಂಟ್ ಕೊಡೋಣ.

 

ಕಲಾವಿದ : ಹಣ ಕೊಟ್ರು ಆದ್ರೆ ನನ್ನ ಕೈಗೆ ಸಿಗಲಿಲ್ಲಾ. ಯಾರು ಶಿಪಾರಸ್ಸು ಮಾಡಿ ಪ್ರಶಸ್ತಿ ಕೊಡಿಸಿದ್ರೋ ಅವರೆ ಸಮಾರಂಭ ಮುಗಿದ ನಂತರ ಹಣ ತಗೊಂಡು ತಗಡಿನ ಫಲಕ ನನಗೆ ಬಿಟ್ಟರು.

 

ಹಿರಿಕವಿ : ಯಾರು ಹೀಗೆ ಒಬ್ಬ ಕಲಾವಿದನಿಗೆ ಅನ್ಯಾಯ ಮಾಡಿದ್ದು. ಪ್ರಶಸ್ತಿ ಜೊತೆಗೆ ಬಂದ ಗೌರವ ಧನವನ್ನು ಕಿತ್ತುಕೊಂಡಿರೋದು. ಇದನ್ನಂತೂ ಖಂಡಿತಾ ಖಂಡಿಸಲೇಬೇಕು.

 

ಕಲಾವಿದ : ಬೇಡ ಬಿಡಿ ಸರ್. ಮೊದಲೆ ಸಾಂಸ್ಕೃತಿಕ ದಲ್ಲಾಳಿ ಜೊತೆ ಒಪ್ಪಂದವಾಗಿತ್ತು. ಅದೇ ಪ್ರಶಸ್ತಿ ನನಗೆ, ಹಣ ಅವನಿಗೆ ಅಂತಾ. ಇಲ್ಲಾ ಅಂದ್ರೆ ಈಗಿನ ಕಾಲದಲ್ಲಿ ಯಾರು ನನ್ನಂತಾ ಬಡ ಕಲಾವಿದನನ್ನು ಗುರುತಿಸಿ ಕರೆದು ಪ್ರಶಸ್ತಿ ಕೊಡ್ತಾರೆ ಹೇಳಿ. ಸ್ವಲ್ಪ ಹೆಸರಾದ್ರೂ ಬರಲಿ ಅಂತಾ..?

 

ಚಿತ್ರಕಲಾವಿದ : ಛೇ.. ಇಂತಹ ದಲ್ಲಾಳಿಗಳೂ ಇರ್ತಾರಾ? ಪರಿಶ್ರಮವಹಿಸಿ ಸಾಧನೆ ಮಾಡೋದು ನಾವು, ಹಣ ಪಡೆಯೋದು ಇವರಾ? ಸಾಹಿತಿ ಕಲಾವಿದರ ಮೇಲೆ ದಲ್ಲಾಳಿಗಳ ದಬ್ಬಾಳಿಕೆ ವಿರೋಧಿಸಿ ನಾಳೆ ನನಗೆ ಸರಕಾರ ಕೊಟ್ಟ ಪ್ರಶಸ್ತಿಯನ್ನು ಹಿಂತಿರುಗಿಸುತ್ತೇನೆ.

 

ಕಿರಿಕವಿ : ಅದೇ ಯಾಕೆ ಅಂತಾ?   ಕೊಟ್ಟ ಪ್ರಶಸ್ತಿ ವಾಪಸ್ ಕೊಡೋದಾದ್ರೆ ಅದನ್ನು ಯಾಕೆ ತಗೊಂಡ್ರಿ, ಅದನ್ನ ಹೇಳಿ?

 

ಹಿರಿಕವಿ : ನೋಡು ನೀನಿನ್ನೂ ಉದಯೋನ್ಮುಖ ಕವಿ. ನಿನಗೆ ಇದೆಲ್ಲಾ ಅರ್ಥ ಆಗೋದಿಲ್ಲ. ಹೋರಾಟದ ಸಾಗರಕೆ ಸಾವಿರಾರು ನದಿಗಳು ಅಂತಾ ಕೇಳಿದ್ದೀಯಾ?

 

ಕಿರಿಕವಿ : ಹೋ ಕೇಳಿದ್ದೀನಿ. ನಮ್ಮ ದಲಿತ ಕವಿ ಸಿದ್ದಲಿಂಗಯ್ಯನವರ ಹಾಡಿನ ಸಾಲುಗಳು ಅವು.

 

ಹಿರಿಕವಿ : ಅನ್ಯಾಯವಾದಾಗ ಹೀಗೆ ನಮಗೆ ಕೊಟ್ಟ ಪ್ರಶಸ್ತಿಗಳನ್ನು ಸರಕಾರಕ್ಕೆ ವಾಪಸ್ ಕೊಡೋದೂ ಸಹ ಹೋರಾಟದ ಸಾಗರಕ್ಕೆ ಪ್ರತಿಭಟನೆಯ ನದಿ ಅಂದ್ರೆ ವಿರೋಧದ ದ್ವನಿ.

 

ಕಿರಿಕವಿ : ಹೀಗೂ ಉಂಟಾ?

 

ಕಥೆಗಾರ : ಹೀಗೇ ಉಂಟುಸಂಶೊಧಕರಾದ ಎಂ.ಎಂ.ಕಲಬುರ್ಗಿಯವರ ಹತ್ಯೆಯಾದಾಗ 39 ಲೇಖಕರು ಸಾಹಿತ್ಯ ಅಕಾಡೆಮಿಗೆ ತಮ್ಮ ಪ್ರಶಸ್ತಿಯನ್ನು ಮರಳಿಸಿ ತಮ್ಮ ಸಾತ್ವಿಕ ಪ್ರತಿಭಟನೆಯನ್ನು ದಾಖಲಿಸಿದ್ದರು. ಇದರಿಂದ ಆಳುವ ಸರಕಾರ ಮುಜಗುರಕ್ಕೆ ಒಳಗಾಗಿತ್ತು.

 

ಕಿರಿಕವಿ : ಸರಿಯಾದ ನಿರ್ಧಾರ. ಆಳುವ ಸರಕಾರ ದಮನಕಾರಿಯಾದರೆ ಅದನ್ನು ವಿರೋಧಿಸಿ ಬರೀ ಕವಿತೆ ಬರೆದರೆ ಸಾಲದು. ಪ್ರಶಸ್ತಿ ವಾಪಸಿ ಚಳುವಳಿಯೂ ಪ್ರತಿರೋಧದ ಭಾಗ ಅಂತಾ ಈಗ ಅರಿವಾಯ್ತು

 

ಹಿರಿಕವಿ : ಅಕಾಡೆಮಿಗಳು ರಾಜಕೀಯೇತರ ಸಂಸ್ಥೆಗಳಾಗಿದ್ದು, ಕೊಟ್ಟ ಪ್ರಶಸ್ತಿ ವಾಪಸ್ ಮಾಡುವುದು ದೇಶಕ್ಕೆ ಅವಮಾನಕರ ಎಂದು ವೈ ಎಸ್ ಅರ್ ಸಿ ಪಿ ಸಂಸದ ವಿಜಯ್ ಸಾಯಿ ರೆಡ್ಡಿ ನೇತ್ರತ್ವದ ಸಮಿತಿ ಸಂಸತ್ತಿಗೆ  ಶಿಪಾರಸ್ಸು ಮಾಡಿದೆಯಂತೆ.

 

ಕಲಾವಿದ : ಯಾರ್ರೀ ಹೇಳಿದ್ದು ಅಕಾಡೆಮಿಗಳು ರಾಜಕೀಯೇತರ ಸಂಸ್ಥೆಗಳು ಅಂತಾ. ಅಕಾಡೆಮಿಗಳಿಗೆ ನೇಮಕಾತಿ ಮಾಡೋರು ಇದೇ ರಾಜಕಾರಣಿಗಳು. ಪ್ರಶಸ್ತಿ ಯಾರಿಗೆ ಕೊಡಬೇಕು ಅಂತಾ ಶಿಪಾರಸ್ಸು ಮಾಡೋರೂ ಇದೇ ಪಾಲಿಟೀಸಿಯನ್ಸು, ಅಕಾಡೆಮಿಗಳನ್ನು ಅವಧಿ ಪೂರ್ವ ಅಮಾನತ್ತು ಮಾಡೋರೂ ಇದೇ ಮಂತ್ರಿ ಮಾನ್ಯರು. ಅಕಾಡೆಮಿಗಳಿಗೆ ಸ್ವಾಯತ್ತತೆ ಕೊಡದೇ  ಎಲ್ಲವನ್ನೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೈಯಲ್ಲಿಟ್ಟುಕೊಂಡು ರಾಜಕೀಯೇತರ ಸಂಸ್ಥೆಗಳು ಅಂತಾ ಹೇಳೋಕೆ ನಾಚಿಕೆ ಆಗೋದಿಲ್ವಾ.

 

ಹಿರಿಕವಿ : ಇಲ್ಲಾ ಇದು ಸಾಂಸ್ಕೃತಿಕ ದಮನ. ಇದನ್ನು ಸಾಂಸ್ಕೃತಿಕ ಲೋಕ ಒಗ್ಗಟ್ಟಾಗಿ ನಿಂತು  ಖಂಡಿಸಲೇ ಬೇಕು

 

ಚಿತ್ರಕಲಾವಿದ : ಪ್ರಶಸ್ತಿ ವಾಪಸ್ ಮಾಡಿದ್ರೆ ಸರಕಾರಕ್ಕೆ ಅವಮಾನಕಾರಿಯಂತೆ. ಇವರು ಜನತೆಗೆ ಕಲೆಗೆ ಕಲಾವಿದರಿಗೆ ಅಪಮಾನ ಮಾಡುವಂತಾ ಕೆಲಸ ಮಾಡಿದಾಗ ಅಲ್ಲವೇ ಕೊಟ್ಟ ಪ್ರಶಸ್ತಿ ವಾಪಸ್ ಕೊಟ್ಟು ಸರಕಾರವನ್ನು ನಾವು ಎಚ್ಚರಿಸೋದು.

 

ಕಲಾವಿದ : ಸಂವಿಧಾನ ಕೊಟ್ಟ ಪ್ರತಿಭಟನಾ ಸ್ವಾತಂತ್ರ್ಯದ ಕತ್ತು ಹಿಚುಕುವ ಕೆಲಸ ಇದು. ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಎಲ್ಲಾ ಸಾಹಿತಿ ಕಲಾವಿದರುಗಳು ಖಂಡಿಸಲೇಬೇಕು

 

ಕಥೆಗಾರ : ಪ್ರತಿಭಟಿಸುವ, ವಿರೋಧಿಸುವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಪ್ಯಾಸಿಸ್ಟ್ ಸರಕಾರಕ್ಕೆ ಸಾಂಸ್ಕೃತಿಕ ಪ್ರತಿರೋಧ ಒಡ್ಡಲೇಬೇಕಿದೆ

 

ಚಿತ್ರಕಲಾವಿದ : ಸಾಧಕರ ಮೇಲೆ ಸವಾರಿ ಮಾಡಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಕೇಂದ್ರ ಸರಕಾರದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ವಿರೋಧಿಸಲೇಬೇಕಿದೆ.

 

ಹಿರಿಕವಿ : ನಾಳೆ ನಮ್ಮ ಸಾಂಸ್ಕೃತಿಕ ಲೋಕದ ಎಲ್ಲರಿಗೂ ಕರೆ ನೀಡುವೆ. ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸಿ ಚಳುವಳಿ ಶುರುವಾಗಲಿ.

 

ಕಿರಿಕವಿ : ನನಗೆ ಇನ್ನೂ ಯಾವುದೇ ಸರಕಾರಿ ಸಂಸ್ಥೆಯ ಪ್ರಶಸ್ತಿ ಬಂದೇ ಇಲ್ಲ ಗುರುಗಳೇ, ನಾನೇನನ್ನು ವಾಪಸ್ ಮಾಡಲಿ

 

ಕಲಾವಿದ : ನಮ್ಮ ಜೊತೆಗಿರು ಸಾಕು. ಅದೇ ನಿನ್ನ ಪ್ರತಿಭಟನೆ.

 

ಕಿರಿಕವಿ : ನಿಮ್ಮ ಜೊತೆಗಿದ್ದು ಪ್ರತಿಭಟನೆ ಮಾಡಿದರೆ ಮುಂದೆ ಯಾರೂ ನನಗೆ ಪ್ರಶಸ್ತಿ ಕೊಡದೇ ಹೋದರೆ ಏನು ಮಾಡೋದು. ಸರಕಾರ ನನ್ನ ಹೆಸರನ್ನು ಅವಾರ್ಡ್ ಬ್ಲಾಕ್ ಲಿಸ್ಟಿಗೆ ಸೇರಿಸಿದರೆ ಏನು ಮಾಡೋದು?

 

ಹಿರಿಕವಿ : ಥೂ ನಿನ್ನ. ಸರಕಾರ ಹಾಗೆ ಮಾಡಬಾರದು ಅಂತಾನೇ ನಾವು ಹೋರಾಟ ಮಾಡ್ತಿರೋದು. ನಿನಗಿದೆಲ್ಲಾ ಸರಿಹೋಗದಿದ್ದರೆ ಹೋಗಿ ಕವಿತೆ ಬರಕೊಂಡು ಮಲ್ಕೊ.

 

ಕಲಾವಿದ : ಪ್ರಶಸ್ತಿ ಜೊತೆಗೆ ಹಣವನ್ನೂ ವಾಪಸ್ ಕೊಡಬೇಕಾ ಗುರುವೇ?

 

ಹಿರಿಕವಿ : ಕೊಡೋದಿಕ್ಕೆ ಆಗದಿದ್ರೆ ಬಿಡು. ಪ್ರಶಸ್ತಿ ಫಲಕ ವಾಪಸ್ ಕೊಟ್ರಾಯ್ತು. ಒಟ್ಟಿನ ಮೇಲೆ ಸಾಹಿತಿ ಕಲಾವಿದರ ಪ್ರತಿಭಟನೆ ಕೇಂದ್ರ ಸರಕಾರಕ್ಕೆ ಮುಟ್ಟಬೇಕು. ಸಂಸದೀಯ ಸಮಿತಿಯ ಶಿಪಾರಸ್ಸುಗಳು ಜಾರಿಯಾಗಬಾರದು. ಅದಕ್ಕೇ ಹೋರಾಟ.

 

ಕಥೆಗಾರ : ನಡೀರಿ ಸರ್. ಈಗಲೇ ಪತ್ರಿಕೆಗಳಿಗೆಲ್ಲಾ ಕಾಲ್ ಮಾಡಿ ಪ್ರಶಸ್ತಿ ವಾಪಸಾತಿ ಹೋರಾಟದ ಬಗ್ಗೆ ಮಾಹಿತಿ ನೀಡೋಣ. ನಾಳೆ ಪತ್ರಿಕಾಗೋಷ್ಟಿ ಅಂತಲೂ ತಿಳಿಸಿ.

 

ಹಿರಿಕವಿ : ಅಯ್ತು. ಸಾಧಕರ ಐಕ್ಯತೆ 

 

ಎಲ್ಲರೂ : ಚಿರಾಯುವಾಗಲಿ.

 

ಕಲಾವಿದ : ಕೇಂದ್ರ ಸರಕಾರದ ದಬ್ಬಾಳಿಕೆ 

 

ಎಲ್ಲರೂ : ನಿಲ್ಲಲಿ ನಿಲ್ಲಲಿ

 

*- ಶಶಿಕಾಂತ ಯಡಹಳ್ಳಿ*

 

ದೆಹಲಿಯಲ್ಲಿ ನಡೆದ ಸಂಸತ್ತಿನ ಅಧಿವೇಶನದಲ್ಲಿ ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಂಸದೀಯ ಸಮಿತಿ ಕೆಳಕಂಡ ಅಂಶಗಳನ್ನು ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿದೆ.

1. ಭವಿಷ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಮರಳಿಸುವುದಿಲ್ಲ ಎಂಬುದಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವವರಿಂದ ದೇಶದ ಸಾಂಸ್ಕೃತಿಕ ಅಕಾಡೆಮಿಗಳು ಪೂರ್ವ ಹೇಳಿಕೆಯನ್ನು ಪಡೆಯಬೇಕು. ಪೂರ್ವ ಹೇಳಿಕೆ ನೀಡದಿದ್ದರೆ ಪ್ರಶಸ್ತಿ ನೀಡಬಾರದು.

2. ಒಂದು ವೇಳೆ ರಾಜಕೀಯ ಪ್ರತಿಭಟನೆಯ ಸಂಕೇತವಾಗಿ ಪ್ರಶಸ್ತಿಗಳನ್ನು ಹಿಂತಿರುಗಿಸಿದರೆ, ಭವಿಷ್ಯದಲ್ಲಿ ಅಂತವರನ್ನು ಯಾವುದೇ ಪ್ರಶಸ್ತಿಗೆ ಪರಿಗಣಿಸಬಾರದು.

 

ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವಂತಹ ಷರತ್ತುಗಳನ್ನು ಸಂಸದ ವಿಜಯ್ ಸಾಯಿ ರೆಡ್ಡಿ ನೇತೃತ್ವದ ಸಮಿತಿ ತನ್ನ ವರದಿಯನ್ನು 25-7-2023 ರಂದು ಸಂಸತ್ತಿನಲ್ಲಿ ಮಂಡಿಸಿದೆ. ವರದಿ ಜಾರಿಯಾದದ್ದೇ ಆದರೆ ಇದು ಸಾಧಕರ ಮೇಲೆ ಅಂಕುಶ ಹೇರುವ ಪ್ರಯತ್ನವಾಗಿದೆ. ಸಂವಿಧಾನ ಕೊಟ್ಟಿರುವ ಪ್ರತಿಭಟನಾ ಸ್ವಾತಂತ್ರ್ಯದ ದಮನವಾಗಿದೆ. ಇದನ್ನು ಸಾಂಸ್ಕೃತಿಕ ಲೋಕದ ಪ್ರತಿಯೊಬ್ಬರೂ ವಿರೋಧಿಸಬೇಕಿದೆ. ಪ್ರತಿರೋಧದ ಭಾಗವಾಗಿ ಪ್ರಹಸನ )

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ