ಶೌಚಾಲಯದಲ್ಲೊಂದು ಕೋಮು ರಾಜಕೀಯ (ಪ್ರಹಸನ- 45)
(ಪ್ರಹಸನ- 45)
ಶೌಚಾಲಯದಲ್ಲೊಂದು ಕೋಮು ರಾಜಕೀಯ
************************************************************
(ಕಮಲಪಕ್ಷದ ನಾಯಕರು ಚಿಂತಾಕ್ರಾಂತವಾಗಿ ಪಕ್ಷದ ಕಛೇರಿಯಲ್ಲಿ ಕುಳಿತಿದ್ದಾರೆ)
ನಾಯಕ 1 : ಅಲ್ಲಾರೀ ನಾವು ಹುಲಿ, ಹುಲಿ ತರಾ ಮೇರೀತಿದ್ವಿ. ಆದರೆ ಈಗ ಇಲಿ ತರ ಆಗಿದ್ದೇವಲ್ರಿ.
ನಾಯಕ 2 : ನಮ್ಮ ಕಡೆ ಅದೇನೋ ಅಂತಾರ ನೋಡ್ರಿ "ತಕದೀರಮೆ ಗಾಂಡು ಹೈತೋ ಪಾಂಡು ಕ್ಯಾ ಕರೇಗಾ" ಅಂತಾ ಹಂಗಾಗೈತಿ ನಮ್ಮ ಪರಿಸ್ಥಿತಿ.
ನಾಯಕ 3 : ಏನ್ ಮಾಡೂದು ಹೇಳಿ. ಈಗ ನಮ್ಮ ಟೈಮೇ ಸರಿ ಇಲ್ಲಾ. ಅಲ್ಲಾ ನಾವೇನೇ ಮಾಡಿದ್ರೂ ಅದು ನಮಗss ಉಲ್ಟಾ ಹೊಡೀತೈತಲ್ರೀ.
ನಾಯಕ 1 : ಜೈನ್ ಮುನಿಗಳ ಹತ್ಯೆ ಆದಾಗ ಸಂತರಿಗೆ ರಕ್ಷಣೆ ಇಲ್ಲಾ ಅಂತಾ ಹುಯಲೆಬ್ಬಿಸಿದೆವು. ಮುಸ್ಲಿಂ ಆರೋಪಿ ಇರೋದರಿಂದಾ ಜೈನ ಸಮುದಾಯವನ್ನ ಮುಸ್ಲಿಂ ವಿರುದ್ದ ಎತ್ತಿ ಕಟ್ಟಿ ಕೋಮುದ್ವೇಷ ಹರಡೋದಕ್ಕೆ ಪ್ರಯತ್ನ ಮಾಡಿದ್ವಿ, ಆದರೆ ಏನಾಯ್ತು? ಅದೊಂದು ಹಣಕಾಸಿನ ವ್ಯವಹಾರಕ್ಕಾದ ಕೊಲೆ ಅಂತಾ ಸಾಬೀತಾಯ್ತು, ನಮ್ಮ ಪ್ಲಾನ್ ಉಲ್ಟಾ ಆಯ್ತು.
ನಾಯಕ 2 : ಹನುಮ ಜಯಂತಿ ದಿನ ಹಿಂದೂ ಕಾರ್ಯಕರ್ತನ ಕೊಲೆ ಆಯ್ತು. ಈ ಜಿಹಾದಿ ಮನಸ್ಥಿತಿಯ ತಾಲಿಬಾನ್ ಸರಕಾರದ ಕುಮ್ಮಕ್ಕಿನಿಂದಾ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ.
ಈ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲಾ ಅಂತಾ ಬಾಯಿ ಬಡ್ಕೊಂಡಿದ್ದಾಯ್ತು.
ಆದರೆ ಹಿಂದೂ ಕಾರ್ಯಕರ್ತರ ನಡುವಿನ ಮನಸ್ಥಾಪದಿಂದಾದ ಹತ್ಯೆ ಎಂದು ಗೊತ್ತಾಯಿತು. ನಮ್ಮ ಕೋಮುದ್ವೇಷ ಹರಡುವ ಮತ್ತೊಂದು ಪ್ಲಾನ್ ನೆಗೆದು ಬಿತ್ತು.
ನಾಯಕ 3 : ಬೆಂಗಳೂರಲ್ಲಿ ಜೋಡಿ ಕೊಲೆಗಳಾದ್ವು. ಸತ್ತವನು ಹಿಂದೂ ಕಾರ್ಯಕರ್ತ ಅಂತಾ ಹೇಳಿ ಕೋಮು ಬಣ್ಣ ಬಳಿಯಲೂ ಯತ್ನಿಸಿದೆವು. ಹಿಂದೂ ಧರ್ಮ ಅಪಾಯದಲ್ಲಿದೆ ಅಂತಾ ಹೇಳಿದೆವು. ಆದರೆ ಏನಾಯ್ತು, ಅದೊಂದು ವೈಯಕ್ತಿಕ ದ್ವೇಷದಿಂದಾದ ಕೊಲೆ ಅಂತಾ ರಿಪೋರ್ಟ್ ಬಂತು.
ನಾಯಕ 4 : ಇಷ್ಟೊಂದು ಹೆಣಗಳು ಬಿದ್ರೂ ಯಾವವೂ ನಮಗೆ ಪ್ರಯೋಜನ ಆಗ್ತಿಲ್ಲವಲ್ಲಾ.
ಕೋಮುದಳ್ಳುರಿ ಹಚ್ಚಿ ಹೈಕಮಾಂಡನ್ನು ಮೆಚ್ಚಿಸುವಂತಹ ಒಂದೇ ಒಂದು ಶವದ ಪಾಲಿಟಿಕ್ಸ್ ವರ್ಕೌಟ್ ಆಗ್ತಿಲ್ಲವಲ್ಲಾ ಏನ್ ಮಾಡೋದು. ಅಧಿನಾಯಕರಿಗೆ ಹೆಂಗೆ ಮುಖ ತೋರಿಸೋದು.
ಮರಿನಾಯಕ : (ಏದುಸಿರು ಬಿಡುತ್ತಾ ಓಡಿ ಬಂದು) ನಾಯಕರೇ ಸಂತಸದ ಸುದ್ದಿ.
ನಾಯಕ 2 : ಏನು ಮತ್ತೆ ಯಾವುದಾದರೂ ಹೆಣ ಬಿತ್ತಾ?
ಮರಿನಾಯಕ : ಯಾವ ಹೆಣವೂ ಬಿದ್ದಿಲ್ಲಾ ನಾಯಕರೇ. ಆದರೆ ಸುದ್ದಿ ರೋಚಕವಾಗಿದೆ. ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟ ಯುವತಿಯರು ಹುಡುಗಿಯೊಬ್ಬಳ ವಿಡಿಯೋ ಮಾಡಿದ್ದಾರಂತೆ.
ನಾಯಕ 3 : ತೋ ಥೊ. ಇದೆಂತಾ ಸುದ್ದೀನೋ. ಹುಡುಗಿಯ ವೀಡಿಯೋ ಹುಡುಗಿ ಮಾಡಿದ್ರೆ ಅದೆಂತಾ ಸುದ್ದಿ ಹೋಗು. ನಾವೇ ತಲೆ ಬಿಸಿ ಮಾಡ್ಕೊಂಡು ಕೂತಿದ್ದೀವಿ.
ಮರಿನಾಯಕ : ಅದು ಹಾಗಲ್ಲಾ ನಾಯಕರೇ. ವಿಡಿಯೋ ಮಾಡಿದ ಮೂರೂ ಹುಡುಗಿಯರು ಮುಸ್ಲಿಂ ಸಮುದಾಯದವರು. ಹಿಂದೂ ಹುಡುಗಿಯ ವಿಡಿಯೋ ತೆಗೆದಿದ್ದಾರಂತೆ.
ನಾಯಕ 1: ಹೌದಾ? ಇದನ್ನ ಮೊದಲೇ ಹೇಳೋದಕ್ಕೆ ಏನಾಗಿತ್ತು ನಿನಗೆ ರೋಗ. ಸೂಪರ್. ಒಳ್ಳೇ ಸುದ್ದಿ. ಸಾಬರ ಹುಡಿಗೀರಾ?
ನಾಯಕ 4 : ಈ ಸಲ ನಾವು ಯಾಮಾರಬಾರದು. ಈ ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲೇಬೇಕು. ಹಿಂದೂಗಳನ್ನು ಪ್ರಚೋದಿಸಲೇಬೇಕು.
ಒಂದು ಕೆಲಸ ಮಾಡಿ. ಈಗ ಈ ಶೌಚಾಲಯ ಸಿನೆಮಾದ ಒನ್ ಲೈನ್ ಸ್ಟೋರಿಯನ್ನು ಕಥೆಯಾಗಿ ಕಟ್ಟೋಣ. ಇಲ್ಲಿರುವ ಎಲ್ಲರೂ ಒಂದೊಂದು ಲೈನ್ ಸೇರಿಸ್ತಾ ಹೋಗಿ.
ನಾಯಕ 2 : ಹೋ ಆಗಬಹುದು. ಈ ಕೈ ಸರಕಾರದ ಕೃಪಾಕಟಾಕ್ಷದಲ್ಲಿ ಮುಸ್ಲಿಂ ಹುಡುಗಿಯರೂ ಹಿಂದೂ ಹೆಣ್ಮಕ್ಕಳ ಬೆತ್ತಲೆ ವಿಡಿಯೋ ಮಾಡಿ ಮಾನಹಾನಿ ಮಾಡ್ತಿದ್ದಾರೆ. ಇದು ಖಂಡಿತಾ ಖಂಡನೀಯ.
ನಾಯಕ 3 : ಸೂಪರ್.. ಈಗ ನಂದು ಕೇಳಿ. ಮುಸ್ಲಿಂ ಹುಡುಗಿಯರು ಕಾಲೇಜಿನಲ್ಲಿರುವ ಹಿಡನ್ ಕ್ಯಾಮರಾ ಬಳಸಿ ನೂರಾರು ಹಿಂದೂ ಯುವತಿಯರ ಬೆತ್ತಲೆ ವಿಡಿಯೋ ಮಾಡಿ ಮುಸ್ಲಿಂ ಹುಡುಗರಿಗೆ ಕಳಿಸ್ತಾ ಇದ್ದಾರೆ. ಅವರು ಈ ವಿಡಿಯೋ ಇಟ್ಟುಕೊಂಡು ಹಿಂದೂ ಹುಡುಗಿಯರನ್ನು ಬ್ಲಾಕ್ಮೇಲ್ ಮಾಡಿ ಲವ್ ಜಿಹಾದ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಈ ಸರಕಾರದ ಕುಮ್ಮಕ್ಕೇ ಕಾರಣ.
ನಾಯಕ 1 : ತುಂಬಾ ಚೆನ್ನಾಗಿ ಕಥೆ ಕಟ್ತೀರಾ. ಈಗ ನಾನು ಹೇಳೋದೂ ಕೇಳಿ. ಈ ಬೆತ್ತಲೆ ಪೊಟೋ ವಿಡಿಯೋಗಳನ್ನು ತೋರಿಸಿ ಹಿಂದೂ ಹುಡುಗಿಯರನ್ನು ಹೆದರಿಸಿ ಮತಾಂತರ ಮಾಡಲು ಮುಸ್ಲಿಂ ಸಂಘಟನೆಗಳು ಪ್ರಯತ್ನಿಸುತ್ತಾರೆ. ಇದು ಹಿಂದೂಧರ್ಮಕ್ಕೆ ಅಪಚಾರ. ಈ ಸರಕಾರ ಬಂದ ಮೇಲೆ ಜಿಹಾದಿಗಳು ಜಿಗಿದು ನಿಂತಿದ್ದಾರೆ.
ಹೀಗೇ ಬಿಟ್ಟರೆ ನಮ್ಮ ಹಿಂದೂ ಹೆಣ್ಮಕ್ಕಳ ಮಾನ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಇದನ್ನು ಹಿಂದೂಗಳಾದ ನಾವು ಸಹಿಸಲು ಸಾಧ್ಯವೇ ಇಲ್ಲಾ.
ನಾಯಕ 2 : ಶಹಬ್ಬಾಸ್. ಸ್ಲ್ರಿಪ್ಟ್ ಚೆನ್ನಾಗಿ ಬರ್ತಿದೆ. ಕರಾವಳಿ ಭಾಗದಲ್ಲಿ ಬೆಂಕಿ ಹಚ್ಚಲು ಇಷ್ಟು ಸಾಕು. ಇದಕ್ಕೆ ಇನ್ನಷ್ಟು ಉಪ್ಪು ಖಾರ ಹಚ್ಚಿ, ಹುಳಿ ಹಿಂಡಿದರಾಯ್ತು. ಇದನ್ನೇ ಇಟ್ಕೊಂಡು ನಮ್ಮ ಕೆಲಸ ಶುರು ಮಾಡ್ಕೋಳ್ಳೋಣ ನಡೀರಿ.
ಹೇಗೂ ಅಲ್ಲಿ ಉಡುಪಿಯಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದಾರಲ್ಲಾ, ಅವರಿಗೆ ಹಿಂದೂ ಪರ, ಮುಸ್ಲಿಂ ವಿರೋಧಿ ಹೋರಾಟ ಹಮ್ಮಿಕೊಳ್ಳಲು ತಿಳಿಸಿ. ನಮ್ಮ ಪರಿವಾರದ ವಿದ್ಯಾರ್ಥಿ ಸಂಘಟನೆಯವರನ್ನ ಹೋರಾಟಕ್ಕೆ ಸಿದ್ದರಾಗಲು ಎಚ್ಚರಿಸಿ. ಮೀಡಿಯಾದವ್ರನ್ನ ಕರೀರಿ. ಈ ಸಲ ನಮ್ಮ ಪ್ಲಾನ್ ಪೇಲಾಗಲೇ ಬಾರದು. ಆಲ್ ದಿ ಬೆಸ್ಟ್.
***************
ಪತ್ರಕರ್ತ : ಅಲ್ಲಾ ಸರ್.. ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ತೆಗೆದು ಹಂಚಿದ್ದಾರೆ ಅಂತಾ ಕೋಮುಪ್ರಚೋದನೆ ಮಾಡ್ತಾ ಇದ್ದೀರಲ್ಲಾ, ಅದೇ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ನಿಮ್ಮದೇ ಎಬಿವಿಪಿ ಸಂಘಟನೆಯ ಅಧ್ಯಕ್ಷನ ಬಗ್ಗೆ ಯಾಕೆ ಮೌನವಹಿಸಿದ್ದೀರಿ ಅಂತಾ ಜನಾ ಕೇಳ್ತಿದ್ದಾರೆ.
ನಾಯಕ 1 : ನೋಡಿ, ಅದೇ ಬೇರೆ, ಇದೇ ಬೇರೆ. ಇಲ್ಲಿ ಮುಸ್ಲಿಂ ಯುವತಿಯರು ಇಂತಾ ನೀಚ ಕೆಲಸ ಮಾಡಿದ್ದಾರೆ. ಇದರ ಹಿಂದೆ ಲವ್ ಜಿಹಾದ್ ಹಾಗೂ ಮತಾಂತರ ಮಾಡುವ ಶಡ್ಯಂತ್ರ ಇದೆ. ಸ್ವಾಭಿಮಾನಿ ಹಿಂದೂಗಳಾದ ನಾವು ನಮ್ಮ ಹಿಂದೂ ಹೆಣ್ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಸಹಿಸಿಕೊಂಡಿರಲು ಸಾಧ್ಯವೇ ಇಲ್ಲಾ. ಈ ಸರಕಾರ ಬಂದ ಮೇಲೆ ಜಿಹಾದಿಗಳ ಅಟ್ಟಹಾಸ ಜಾಸ್ತಿಯಾಗಿದೆ.
ಪತ್ರಕರ್ತ : ಪೊಲೀಸ್ ವರಿಷ್ಟಾಧಿಕಾರಿಗಳೇ ಪ್ರಾಥಮಿಕ ತನಿಖೆ ನಡೆಸಿ ಹೇಳಿದ್ದಾರಲ್ಲಾ ಸರ್. ಯಾವುದೇ ರೀತಿಯ ವೀಡಿಯೋ ಚಿತ್ರೀಕರಿಸಿ ಹರಿಯಬಿಟ್ಟಿಲ್ಲಾ ಹಾಗೂ ಯಾರಿಗೂ ಹಂಚಿಕೊಂಡಿಲ್ಲಾ ಅಂತಾ.. ಇದು ನಿಮ್ಮ ಫೇಕ್ ಪ್ಯಾಕ್ಟರಿಯ ಸೃಷ್ಟಿ ಅಂತಿದ್ದಾರೆ ಹೌದಾ?
ನಾಯಕ 2 : ಇದೆಲ್ಲಾ ಈ ಸರಕಾರ ಪ್ರಕರಣವನ್ನು ಮುಚ್ಚಿ ಹಾಕಲು ಮಾಡಿದ ಕುತಂತ್ರ. ಪೋಲೀಸರನ್ನು ಬಳಸಿ ಸುಳ್ಳು ಹೇಳಿಕೆ ಕೊಡ್ಸಿದ್ದಾರೆ.
ಇದೊಂದು ಹಿಂದೂ ವಿರೋಧಿ ಸರಕಾರ. ಮುಸ್ಲಿಂ ತುಷ್ಟೀಕರಣ ಮಾಡೋದಕ್ಕೆ ಪೊಲೀಸರನ್ನೂ ಬಳಸಿಕೊಳ್ತಿದ್ದಾರೆ.
ನಾಯಕ 3: ಇಂತಹ ಅನ್ಯಾಯವನ್ನು ನಾವು ಸಹಿಸಲು ಸಾಧ್ಯವೇ ಇಲ್ಲ. ಉಡುಪಿ ಶಾಸಕರ ನೇತೃತ್ವದಲ್ಲಿ ಹೋರಾಟ ಶುರುವಾಗಿದೆ. ಎಬಿವಿಪಿ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಹಿಂದೂ ಬೆಂಗಳೂರಲ್ಲಿ ನಮ್ಮ ಪಕ್ಷದ ಮಹಿಳಾ ಮೋರ್ಚಾದವರು ಧರಣಿ ಮಾಡ್ತಿದ್ದಾರೆ.
ನಾವು ಇದನ್ನ ಇಲ್ಲಿಗೇ ಬಿಡುವುದಿಲ್ಲ. ನ್ಯಾಶನಲ್ ಇಂಟರ್ನ್ಯಾಷನಲ್ ನಿವ್ಸ್ ಆಗೋ ಹಾಗೆ ಮಾಡ್ತೇವೆ. ಧಿಕ್ಕಾರ. ತಾಲಿಬಾನಿ ಮನಸ್ಥಿತಿಯ ಸರಕಾರಕ್ಕೆ ಧಿಕ್ಕಾರ.
ಪತ್ರಕರ್ತ: ಸರ್.. ಇದೀಗ ಬಂದ ಸುದ್ದಿ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ನಿಮ್ಮ ಪಕ್ಷದ ನಾಯಕಿ ಖುಷ್ಬೂರವರು ಆ ಕಾಲೇಜಿಗೆ ಬೇಟಿ ಮಾಡಿ ಕೂಲಂಕಷವಾಗಿ ಪರಿಶೀಲನೆ ಮಾಡಿದ್ದಾರೆ.
ನಾಯಕ 1 : ನಾವು ಹೇಳಿದ್ದೆಲ್ಲಾ ಸತ್ಯ. ಅಲ್ಲಿ ನೂರಾರು ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ ಮುಸ್ಲಿಂ ಯುವತಿಯರು ಬೇರೆಯವರಿಗೆ ಶೇರ್ ಮಾಡಿದ್ದಾರೆ ಅನ್ನೋದನ್ನೇ ಅವರೂ ಹೇಳಿರ್ತಾರೆ.
ಪತ್ರಕರ್ತ : ಅಯ್ಯೋ ಅದು ಹಾಗಲ್ಲಾ ಸರ್. ಖುಷ್ಬುರವರು ತನಿಖೆ ಮಾಡಿ ಹೇಳಿದ್ದಾರೆ " ಈ ಪ್ರಕರಣಕ್ಕೆ ಕೋಮು ಬಣ್ಣ ಬಳೆಯಬಾರದು, ನಮಗೆ ಯಾವುದೇ ಸಾಕ್ಷ ಲಭ್ಯವಾಗಿಲ್ಲ. ಯಾವುದೇ ಪೊಟೋ ವಿಡಿಯೋ ಸಿಕ್ಕಿಲ್ಲ. ಈ ಪ್ರಕರಣದ ಕುರಿತು ಹರಿದಾಡುತ್ತಿರುವ ಯಾವವೂ ಸತ್ಯವಲ್ಲ. ಪೋಲೀಸರು ರೆಟ್ರೀವ್ ಮಾಡಿದರೂ ವಿದ್ಯಾರ್ಥಿನಿಯರ ಮೊಬೈಲಲ್ಲಿ ಯಾವುದೇ ವೀಡಿಯೋ ಕಂಡುಬಂದಿಲ್ಲ. ಇಲ್ಲಿ ಹರಿದಾಡುತ್ತಿರುವ ವದಂತಿಗಳು, ಊಹಾಪೋಹಗಳು, ವಾಟ್ಸಾಪ್ ಪಾರ್ವರ್ಡಗಳು ನಿಲ್ಲಬೇಕು. ಈ ಪ್ರಕರಣಕ್ಕೆ ಉಗ್ರರ ಲಿಂಕ್ ಇದೆ ಎಂದು ಹರಿದಾಡುತ್ತಿರುವುದರಲ್ಲಿ ಸತ್ಯವಿಲ್ಲ. ಈ ಘಟನೆಯ ಹಿಂದೆ ದೊಡ್ಡ ಕತೆ ಇದೆ ಎಂದು ಸಧ್ಯ ಭಾವಿಸುವುದು ಬೇಡ" ಅಂತಾ ಸ್ಪಷ್ಟವಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ ಸರ್.
ನಾಯಕ 3 : ಹೌದಾ ಹಾಗೇಳಿದ್ರಾ. ಶಡ್ಯಂತ್ರ.. ಇದರಲ್ಲಿ ಏನೋ ಶಡ್ಯಂತ್ರ ಇದೆ. ಇದರ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಏನೇ ಆಗಲಿ ಈ ಹಿಂದೂ ವಿರೋಧಿ ಸರಕಾರವನ್ನು ನಾವು ಬಿಡುವುದಿಲ್ಲ.
( ನಾಯಕರೆಲ್ಲಾ ದೂರಕ್ಕೆ ಬಂದು)
ನಾಯಕ 2 : ( ತಲೆ ಮೇಲೆ ಅಂಗವಸ್ತ್ರ ಹಾಕಿಕೊಳ್ಳುತ್ತಾ)
ಏನು ನಾಯಕರೇ, ನಮ್ಮ ಈ ಐಡಿಯಾ ಕೂಡಾ ಹೊಗೆ ಹಾಕಿಸ್ಕೊಳ್ತಲ್ಲಾ.
ನಾಯಕ 3 : ಏನೇ ಆಗಲಿ ನಮ್ಮ ಪಕ್ಷದವರಾಗಿ ಖುಷ್ಬು ಹೀಗೆ ಹೇಳಬಾರದಿತ್ತು.
ಅವರಿಗೆ ಸಂಘ ಪರಿವಾರ ಇನ್ನಷ್ಟು ತರಬೇತಿ ಕೊಟ್ಟು ನಮ್ಮ ಪಕ್ಷಕ್ಜೆ ಸೇರಿಸಿಕೊಳ್ಳಬೇಕಿತ್ತು ಅಲ್ವೇನ್ರಿ.
ನಾಯಕ 4 : ಮತ್ತೇನ್ರಿ. ಪೆಟ್ರೋಲ್ ಹಾಕಿ ಕಿಡಿಯನ್ನ ಬೆಂಕಿ ಮಾಡಿ ಉರಿಸೋದು ಬಿಟ್ಟು ನೀರು ಹಾಕಿ ತಣ್ಣಗೆ ಮಾಡಿದಳಲ್ಲಾ ಈವಮ್ಮಾ.. ಇದು ಅವರ ರಾಜಕೀಯ ಅಪ್ರಭುದ್ದತೆ ತೋರಿಸುತ್ತದೆ.
ನಾಯಕ 1 : ನಾವೂ ನ್ಯಾಶನಲ್ ನ್ಯೂಜ್ ಮಾಡೋಕೆ ನಮ್ಮ ಪ್ರಯತ್ನ ಮಾಡ್ತಾನೇ ಇದ್ದೀವಿ. ಆದರೆ ನಮ್ಮ ಟೈಮೇ ಸರಿ ಇಲ್ಲಾ ನೋಡಿ.
ನಾಯಕ 2 : ಅದೇನೋ ಅಂತಾರಲ್ಲಾ, ತಕದೀರಮೆ ಗಾಂಡು ಹೈತೋ ಪಾಂಡು ಕ್ಯಾಕರೇಗಾ? ಅಂತಾ.. ನಮ್ದೂ ಅಂತಾದೇ ಪರಿಸ್ಥಿತಿ. ವಾಟ್ಟುಡು..?
( ಎಲ್ಲರೂ ತಮ್ಮ ತಲೆ ಮೇಲೆ ತಮ್ಮ ಅಂಗವಸ್ತ್ರಗಳನ್ನು ಹಾಕಿಕೊಂಡು ಪತ್ರಕರ್ತರು ಹಿಂಬಾಲಿಸುತ್ತಿಲ್ಲಾ ಅಂತಾ ಖಾತ್ರಿ ಮಾಡಿಕೊಂಡು ತಮ್ಮ ಪಕ್ಷದ ಕಚೇರಿಯತ್ತ ಹೋಗುತ್ತಾರೆ.)
ಪತ್ರಕರ್ತ : ನೋಡಿದ್ರಲ್ಲಾ ವೀಕ್ಷಕರೆ. ಕಡ್ಡಿ ಹೋಗಿ ಗುಡ್ಡಾ ಮಾಡೋದು ಅಂದ್ರೆ ಇದು. ಕಾಲೇಜಿನ ಗೆಳತಿಯರು ಏನೋ ತಮಾಷೆ ಮಾಡಿಕೊಂಡು ವಿಡಿಯೋ ಮಾಡಿ ಅಳಿಸಿಹಾಕಿದರೆ ಅದಕ್ಕೆ ಕೋಮು ಬಣ್ಣ ಬಳಿದು, ಹಿಂದೂ ಮುಸ್ಲಿಂ ಸಮುದಾಯದ ನಡುವೆ ಮನಸ್ಥಾಪವನ್ನುಂಟು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಇದ್ದಾರೆ. ಕೋಮುದ್ವೇಷದ ವದಂತಿಗಳನ್ನು ನಂಬದೇ ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಇಂತಹ ಕೇಡಿಗಳನ್ನು ಆದಷ್ಟು ದೂರವೇ ಇಡಬೇಕು. ಕೋಮುಸೌಹಾರ್ದತೆ ಕಾಪಾಡಿಕೊಳ್ಳಬೇಕು. ಕೋಮುವಾದ ಸೋಲಬೇಕು, ಮಾನವೀಯತೆ ಗೆಲ್ಲಬೇಕು.
*- ಶಶಿಕಾಂತ ಯಡಹಳ್ಳಿ*
Comments
Post a Comment