ಸೆಲ್ಪಿ ಸೂಸಾಯ್ಡ್ ( ಪ್ರಹಸನ- 46)
( ಪ್ರಹಸನ- 46)
ಸೆಲ್ಪಿ ಸೂಸಾಯ್ಡ್
************************
(ಆತ್ಮೀಯ ಕುಚುಕು ಗೆಳೆಯ ಚಂದ್ರು ಸತ್ತ ಸುದ್ದಿ ಎರಡು ದಿನದ ನಂತರ ಹರಿಗೆ ಗೊತ್ತಾಗಿ ಆಘಾತವಾಯ್ತು. ಗೆಳೆಯನ ಮನೆಯವರಿಗೆ ಸಾಂತ್ವನ ಹೇಳಲು ಹೊರಟ)
ಹರಿ : (ಸ್ವಗತ) ಅನ್ಯಾಯಕಾರಿ ಬ್ರಹ್ಮ ಸ್ನೇಹಿತನಿಗೆ ಸಾವು ಕೊಡಬಹುದೇ. ಯಾಕೆ ಸತ್ತ, ಹೇಗೆ ಸತ್ತ? ಉತ್ತರ ಮಾತ್ರ ನೇರವಾಗಿಲ್ಲ. ಕಾಲು ಜಾರಿ ನೀರಲ್ಲಿ ಬಿದ್ದು ಸತ್ತ ಅಂದ್ರೆ ನಂಬೋಕಾಗುತ್ತಾ, ಒಳ್ಳೇ ಈಜುಗಾರ ಆತ. ಯಾರೋ ಉಸಿರುಗಟ್ಟಿಸಿ ಸಾಯಿಸಿ ನೀರಿಗೆ ಹಾಕಿದ್ದಾರೆ ಅಂತಾರೆ, ಅವನಿಗೆ ಯಾರೂ ಶತ್ರುಗಳಿಲ್ಲ. ಮಿತ್ರನ ಸಾವಿಗೆ ಕಾರಣ ಕಂಡು ಹಿಡಿಯಲೇ ಬೇಕು. ಹೋ ಚಂದ್ರು ಮನೆ ಬಂತಲ್ವಾ, ಅವರ ಮನೆಯವರನ್ನೇ ಕೇಳಿದ್ರಾಯ್ತು.
ಅಜ್ಜಿ : ಯಾರು ಬೇಕಾಗಿತ್ತು?
ಹರಿ : ಚಂದ್ರು ಮನೆ ಇದೇ ಅಲ್ವಾ. ಮನೇಲಿ ಯಾರೂ ಇಲ್ವಾ?
ಅಜ್ಜಿ : ಚಂಬು ತಗೊಂಡು ದೊಡ್ಡೋನು ಈಗ ಹೋದ.
ಹರಿ : ಹೋ ಇದು ಸೌಂಡ್ ಮ್ಯೂಟ್ ಕೇಸು. ( ಎಂದುಕೊಂಡು ಮೆಟ್ಟಿಲು ಹತ್ತಿ ಮಹಡಿ ಹತ್ತಿ) ಮನೇಲಿ ಯಾರಿದ್ದೀರಿ?
ಚಂದ್ರು ತಾಯಿ : ಓ ಹರಿ ಅಲ್ವಾ. ಬಾರಪ್ಪಾ ಒಳಗೆ. ಏನಾಗಬಾರದಿತ್ತೋ ಅದು ಆಗೋಯ್ತು ಕಣಪ್ಪಾ. ಚಂದ್ರು ಹೋದಾ.. ಬಾ ಕೂತ್ಕೋ..
ಹರಿ : ವಿಷಯ ಕೇಳಿ ಬಾಳಾ ಬೇಸರ ಆಯ್ತು ಆಂಟಿ. ಇಷ್ಟು ಚಿಕ್ಕ ವಯಸ್ಸಲ್ಲಿ ಹೀಗಾಗಬಾರದಿತ್ತು.
ನನಗೆ ದೋಸ್ತ ಅಂತಾ ಇದ್ದದ್ದು ಅವನೊಬ್ಬನೇ. ಅವನ ಆತ್ಮಕ್ಕೆ ಶಾಂತಿ ಸಿಗಲಿ.
ಚಂದ್ರು ತಾಯಿ : ಏನ್ ಮಾಡಿದ್ರೇನು, ಹೋದವ ವಾಪಸ್ ಬರ್ತಾನೇನಪ್ಪಾ. ( ಸೆರಗು ಮುಚ್ಚಿಕೊಂಡು ಅಳತೊಡಗುತ್ತಾಳೆ)
ಹರಿ : ಸಮಾಧಾನ ಮಾಡ್ಕೊಳ್ಳಿ ಆಂಟಿ. ಚಂದ್ರು ಸಾವು ಕುರಿತು ಒಬ್ಬೊಬ್ಬರು ಒಂದೊಂದು ಕತೆ ಹೇಳ್ತಾರೆ. ಆಗಿದ್ದಾದರೂ ಏನು?
ಚಂದ್ರು ತಾಯಿ : (ಉತ್ತರ ಹೇಳಲಾಗದೇ ರಾಗಬದ್ದವಾಗಿ ಅಳುತ್ತಾ) ಏನಂತಾ ಹೇಳಲೋ ತಮ್ಮಾ. ಏನಾಯ್ತು ಹೆಂಗಾಯ್ತು ಅಂತಾ ಆ ದೇವರಿಗೆ ಮಾತ್ರ ಗೊತ್ತೋ ಯಪ್ಪಾ. ನೀರಲ್ಲಿ ಬಿದ್ದ ಹೆಣಾ ಎತ್ಕೊಂಡು ಮನಿಗೆ ತಂದು ಹಾಕಿದ್ರೋ. ಮದಗಜದಂತಿದ್ದ ಮಗನ್ನ ಮಣ್ಣಾಗ ಮುಚ್ಚೊ ಬಂದ್ರೋ..
ಚಂದ್ರು : ಕಾಲು ಜಾರಿ ಜಲಪಾತಕ್ಕೆ ಬಿದ್ದಾ ಅಂತಾ ಹೇಳ್ತಾರೆ. ಆದರೆ ಅವನಿಗೆ ಚೆನ್ನಾಗಿ ಈಜೋದಕ್ಕೆ ಬರ್ತಿತ್ತಲ್ವಾ ಆಂಟಿ.
ಚಂದ್ರು ತಾಯಿ : ತುಂಬಿ ಹರಿಯೋ ಹೊಳಿಯೊಳಗ ಮೊಸಳಿಹಂಗ್ ಈಸತಿದ್ಯಲ್ಲೋ ನನ ಮಗನೇ, ನೀರು ಗೆದ್ದವನನ್ನ ನೀರೇ ಎಳಕೊಂಡು ಹೋಯ್ತೋ ನನ್ನ ಕಂದಾ.
ಹರಿ : ಯಾರೋ ಸಾಯಿಸಿ ನೀರಿಗೆ ಹಾಕಿದ್ದಾರಂತಾ ಜನ ಗುಸುಗುಸು ಮಾತಾಡ್ತಾರೆ ಆಂಟಿ.
ಚಂದ್ರು ತಾಯಿ : ಆಡ್ಕೊಳ್ಳೋರಿಗೇನು ಬ್ಯಾನಿ, ಹೋದಾವ ನನ್ನ ಮಗನೋ ಯಪ್ಪಾ. ಭೀಮನಂಗಿದ್ದೋನ ಕೊಲ್ಲೋ ದಮ್ಮು ಯಾವನಿಗಿತ್ತೋ ನನ್ನ ತಮ್ಮಾ.
ಹರಿ : ಮತ್ತೆ ಚಂದ್ರು ಹ್ಯಾಗ ಸತ್ತಾ? ಅದನ್ನಾರ ಹೇಳಿ ಆಂಟಿ.
ಚಂದ್ರು ತಾಯಿ : ಹ್ಯಾಂಗ ಹೋದಾ ಅಂತಾ ಆ ದೇವರಿಗೊಬ್ಬನಿಗೆ ಗೊತ್ತೋ ಯಪ್ಪಾ. ಸಂಜೀಗೆ ಬರ್ತೀನಿ ಅಂತಾ ಹೋದ ಮಗಾ ನೀರು ಪಾಲಾಗಿ ಹೋದೆಲ್ಲೋ ನನ ಮಗನೇ. ಅವನ ಹೆಂಡತಿ ಮಗನಿಗೆ ಇನ್ಯಾರು ದಿಕ್ಕೋ ವೆಂಕಟರಮಣಾ..
ಹರಿ : ನಿಮಗೆ ಗೊತ್ತಿಲ್ಲಾ ಅಂದ್ರೆ ಹೇಗಾಂಟಿ.
( ಕಂಬಕ್ಕೆ ಬೆನ್ನಾಕಿ ಆಕಾಶ ನೋಡ್ತಾ ಕೂತಿದ್ದ ಚಂದ್ರುನ ಹೆಂಡತಿ ಕಮಲಿ ಸಿಟ್ಟಿನಿಂದ ಎದ್ದು ನಿಂತು)
ಕಮಲಿ : ಅದೇನ್ರಿ ಮತ್ತೆ ಮತ್ತೆ ಹೇಗೆ ಸತ್ತಾ, ಯಾಕ ಸತ್ತಾ ಅಂತಾ ಕೇಳಿ ನಮ್ಮ ಹೊಟ್ಟೆ ಉರಿಸ್ತೀರಿ. ಬದುಕೋ ಯೋಗ್ಯತೆ ಇರಲಿಲ್ಲಾ ಸತ್ತಾ. ಸಾಕಾ ಇನ್ನೂ ಉತ್ತರ ಬೇಕಾ?
ಹರಿ : ಅಂದ್ರೆ ಸೆಲ್ಪ ಸೂಸೈಡ್, ಅಂದ್ರೆ ಆತ್ಮಹತ್ಯೆ ಮಾಡ್ಕೊಂಡ್ನಾ. ನನಗೆ ನಂಬೋದಕ್ಕೆ ಆಗ್ತಿಲ್ಲಾ..
ಚಂದ್ರು ತಾಯಿ : ಹಂಗೇಳೋರ ಬಾಯಿಗೆ ಹುಳಾ ಬೀಳಲೋ ತಮ್ಮಾ, ಆತ್ಮಹತ್ಯೆ ಮಾಡ್ಕೋಳ್ಳೋವಂತಾದ್ದು ನನ್ನ ಮಗನಿಗೇನೂ ಬಂದಿಲ್ವೋ ನನ ಕಂದಾ. ಅವನಷ್ಟು ದೈರ್ಯಶಾಲಿ ಈ ಊರಲ್ಲೇ ಯಾರೂ ಇರಲಿಲ್ಲವೋ ನನ ಮಗನೇ..
ಕಮಲಿ : ಸೆಲ್ಪ ಸೂಸೈಡಲ್ಲಾ ಅದು ಸೆಲ್ಪಿ ಸೂಸೈಡ್. ಇನ್ನೂ ಏನಂತಾ ಹೇಳಲಿ..
ಹರಿ : ಏನು ಸಿಸ್ಟರ್ ಹಂಗಂದ್ರೆ. ಸೆಲ್ಪಿಯಾ?
ಕಮಲಿ : ಹೌದ್ರೀ ಹೌದು. ನನ್ನ ಗಂಡನ್ನ ಕೊಂದಿದ್ದು ಇಲ್ಲಿದೆಯಲ್ಲಾ ಇದು. ( ಎಂದು ಮೊಬೈಲ್ ಪೋನನ್ನು ಸಿಟ್ಟಿನಿಂದ ಕೆಳಗೆ ಬಿಸಾಕುತ್ತಾಳೆ.
ಹರಿ ಅದನ್ನು ಎತ್ತಿಕೊಂಡು ಮೇಲೆಕೆಳಗೆ ಮಾಡಿ ಪರಿಶೀಲಿಸಿ)
ಹರಿ : ಐ ಕಾಂಟ್ ಬಿಲೀವ್ ದಿಸ್. ಬ್ಯಾಟರಿ ಏನೂ ಸ್ಪೋಟ ಆಗಿಲ್ಲಾ. ಈ ಚಿಕ್ಕ ಮೊಬೈಲು ಆರಡಿ ವ್ಯಕ್ತೀನಾ ಹೇಗೆ ಸಿಸ್ಟರ್ ಕೊಲ್ಲೋದಕ್ಕೆ ಸಾಧ್ಯ?
ಕಮಲಿ : ಅಡಿಕ್ಶನ್ನು... ಹೆಂಡತಿ ಮಕ್ಕಳ ಮೇಲೆ ಇಲ್ಲದ ಅಕ್ಕರೆ ಇತ್ತು ಈ ಮೊಬೈಲ್ ಮೇಲೆ. ಯಾವಾಗ ನೋಡಿದ್ರೂ ಸೆಲ್ಪಿಯಂತೆ, ರೀಲ್ಸಂತೆ, ಲೈವ್ ವಿಡಿಯೋವಂತೆ.. ಮೂರು ಹೊತ್ತು ಇದೇ ದ್ಯಾನ ಆದ್ರೆ ಸಾಯದೇ ಇನ್ನೇನಾಗುತ್ತೆ.
ಚಂದ್ರು ತಾಯಿ : ಅಯ್ಯೋ..ಅಯ್ಯಯ್ಯೋ.. ಏನೇನೋ ಹೇಳಿ ನನ್ನ ಮಗನ ಮರ್ವಾದೆ ತಗೀ ಬೇಡಾ ಮುಚ್ಕೊಂಡಿರೇ ಮೂದೇವಿ. ದೇವರಂತಾ ಮಗಾ ದೇವರ ಪಾದಾ ಸೇರಿ ಹೆತ್ತ ಕರಳಿಗೆ ಬೆಂಕಿ ಬಿದ್ಯತಲ್ಲೋ ವೆಂಕಟರಮಣಾ.
ಹರಿ : ಸಮಾಧಾನ ಮಾಡ್ಕೊಳ್ಳಿ ಆಂಟಿ. ಚಂದ್ರು ಮಾಡಿದ ರೀಲ್ಸು ವಿಡಿಯೋ ಎಲ್ಲಾ ನಾನೂ ನೋಡಿದ್ದೇನೆ. ಆದರೆ ಅದಕ್ಕೂ ಆತನ ಸಾವಿಗೂ ಏನು ಸಂಬಂಧ ಅಂತಾ ಗೊತ್ತಾಗ್ತಿಲ್ಲಾ.
ಕಮಲಿ : ಐತೇ, ಸಂಬಂಧ ಐತೆ. ಜಲಪಾತದ ಕಡೆ ಹೋಗ್ತೀನಿ ಅಂತಾ ಹೇಳಿ ಹೋದ. ಟ್ರೈಪಾಡಲ್ಲಿ ಮೊಬೈಲ್ ವಿಡಿಯೋ ಆನ್ ಮಾಡಿ ಬಂಡೆ ಮೇಲೆ ನಿಂತು ಮಂಗಾಟಾ ಶುರುಮಾಡ್ದಾ. ಜೋರಾಗಿ ಗಾಳಿ ಬೀಸ್ತು, ಜಲಪಾತದ ನೀರು ಬಂಡೆಗೆ ಅಪ್ಪಳಿಸ್ತು ಅಷ್ಟೇ ಕಾಲು ಜಾರಿ ಪ್ರಪಾತಕ್ಕೆ ಬಿದ್ದ, ನಮ್ಮನ್ನೆಲ್ಲಾ ಅನಾಥಮಾಡಿ ಮೇಲಿಕ್ಕೆದ್ದ.
ಹರಿ : ಛೇ ಹಿಂಗ್ ಆಗಬಾರದಿತ್ತು, ಇದು ಅತಿಯಾಯ್ತು. ಯಾವುದಕ್ಕೂ ಹುಷಾರಾಗಿರಬೇಕಿತ್ತು. ಏನು ಮಾಡೋದು ಹೇಳಿ ಸಿಸ್ಟರ್ ಅವನ ಹಣೇಬರದಲ್ಲಿ ಸಾವು ಅಲ್ಲಿ ಆಗಬೇಕು ಅಂತಾ ಬರೆದಿತ್ತು. ಆಯಸ್ಸು ಮುಗಿದ ಮೇಲೆ ಎಲ್ಲಾರೂ ಹೋಗೋದೇನೇ..
ಚಂದ್ರು ತಾಯಿ : ವಯಸ್ಸಾದ ನಮ್ಮತ್ತೆನಾ ಬಿಟ್ಟು ಹೋರಿಯಂತಿರೋ ಮಗನ್ನ ಎತ್ಕೊಂಡೋದೆಲ್ಲೋ ದೇವರೇ. ನನ್ನ ಮಗನ್ನ ಬಿಟ್ಟು ನನ್ನನ್ನಾದರೂ ಕರಸ್ಕೊಬಾರ್ದೇನೋ ವೆಂಕಟರಮಣಾ. ( ಎಂದು ಸಿಂಬಳಾ ತೆಗೆದು ಕಂಬಕ್ಕೆ ವರಸಿದಳು)
ಹರಿ : ಇಲ್ಲಾ.. ಚಂದ್ರು ಸಾವು ಹೀಗೆ ವ್ಯರ್ಥ ಆಗಬಾರದು. ಅದು ಎಲ್ಲರಿಗೂ ಎಚ್ಚರಿಕೆ ಗಂಟೆ ಆಗಬೇಕು. ಈಗಲೇ ಇದನ್ನು ಪೇಸ್ಬುಕ್ ಲೈವಲ್ಲಿ ವಿಡಿಯೋ ಮಾಡಿ ಎಲ್ಲರನ್ನೂ ಎಚ್ಚರಿಸುತ್ತೇನೆ.
ಛೇ ಇಲ್ಲಿ ನೆಟ್ವರ್ಕೆ ಇಲ್ವಲ್ಲಾ. ಇರಿ ಬಾಲ್ಕನಿಯಲ್ಲಿ ಚೆಕ್ ಮಾಡ್ತೇನೆ. ( ಎಂದವನೇ ಬಾಲ್ಕನಿಗೆ ಹೋಗಿ ಮೊಬೈಲಲ್ಲಿ ವಿಡಿಯೊ ಮಾಡಲು ಪ್ರಯತ್ನಿಸಿದರೂ ಕ್ಲೀಯರ್ ನೆಟ್ವರ್ಕ ಸಿಗದೇ ಬಾಲ್ಕನಿಯ ರೇಲಿಂಗ್ ಮೇಲೆ ಹತ್ತಿ ಲೈವ್ ಕವರೇಜ್ ಶುರು ಮಾಡ್ತಾನೆ)
ಹರಿ : ನೋಡಿ ಪ್ರೆಂಡ್ಸ್. ಈ ಮೊಬೈಲ್ ಅಡಿಕ್ಷನ್ ಅನ್ನೋದು ತುಂಬಾ ಅಪಾಯಕಾರಿಯಾಗಿದೆ. ಅಪಾಯಕಾರಿ ಜಾಗದಲ್ಲಿ ರೀಲ್ಸ್ ಮಾಡೋ ಸಾಹಸಕ್ಕೆ ಮುಂದಾಗಿ ನನ್ನ ಆತ್ಮೀಯ ಗೆಳೆಯ ಚಂದ್ರು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಸೆಲ್ಪಿ ತೆವಲು, ರೀಲ್ಸ್ ಹುಚ್ಚು, ಲೈವ್ ವೀಡಿಯೋ ಚಟಗಳು ಜೀವಕ್ಕೆ ಸಂಚಕಾರ ತಂದುಕೊಡುತ್ತವೆ. ನಿಮ್ಮನ್ನೇ ನಂಬಿದ ಕುಟುಂಬದವರಿಗಾದರೂ ಯಾರೂ ಇಂತಹ ಸಾಹಸ ಮಾಡದಿರಿ. ದಯವಿಟ್ಟು ಯಾರೂ... ರಿಸ್ಕ ತಗೊಂಡು.. ತಗೊಂಡು.. ಅಯ್ಯೋ...
( ಡಮಾರ್ ಅಂತಾ ಸದ್ದು, ಆಯತಪ್ಪಿ ಹರಿ ಎರಡನೇ ಮಹಡಿಯಿಂದ ಕೆಳಗೆ ತಲೆಕೆಳಗಾಗಿ ಬೀಳುತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿ ಸಾಯುತ್ತಾನೆ. ಜನರ ಗುಂಪು ಸೇರುತ್ತದೆ)
ಚಂದ್ರು ತಾಯಿ : ಅಯ್ಯೋ ಅಯ್ಯಯ್ಯೋ.. ನನ್ನ ಮಗನನ್ನ ನೋಡೋಕೆ ನೀನೂ ಹೋದೆನೋ ಕಂದಾ. ಬಾಳಿ ಬದುಕಬೇಕಾದ ಜೀವ ಶವವಾಯಿತಲ್ಲೋ ದೇವಾ.
ಕಮಲಿ : (ಆತಂಕದಿಂದ ಬಂದು ಇನ್ನೂ ಲೈವ್ ರೆಕಾರ್ಡ್ ಆಗುತ್ತಿದ್ದ ಹರಿ ಮೊಬೈಲ್ ಎತ್ತಿಕೊಂಡು) ಸೆಲ್ಪಿ ಬೇಕೆನ್ರೋ ಸೆಲ್ಪಿ, ನೋಡ್ರೋ ನೋಡ್ರಿ ಇದೇ ಸೆಲ್ಪಿ ಸುಸೈಡ್ ಅಂದ್ರೆ. ರೀಲ್ಸಂತೆ ಲೈವ್ ವಿಡಿಯೋ ಅಂತೆ.. ನಿಮ್ಮ ಜೀವಕ್ಕೆ ಬೆಲೇನೇ ಇಲ್ವಾ. ನಿಮ್ಮನ್ನೇ ನಂಬಿದ ಹೆಂಡತಿ ಮಕ್ಕಳನ್ನ ಅನಾಥ ಮಾಡಿ ಅನ್ಯಾಯವಾಗಿ ಯಾಕ್ರಯ್ಯಾ ಸತ್ತು ಹೋಗ್ತೀರಾ. ನೋಡಿ ಇಲ್ಲಿ ರಕ್ತದ ಹೊಂಡದಲ್ಲಿ ಬಿದ್ದು ಇದೀಗ ಸತ್ತವನನ್ನ ಚೆನ್ನಾಗಿ ನೋಡಿ, ರೀಲ್ಸು ವೀಡಿಯೋ ಮಾಡಿ ಲೈಪ್ ರಿಸ್ಕ ತಗೋಬ್ಯಾಡ್ರೋ ಅಂತಾ ವಿಡಿಯೋ ಮಾಡ್ತಾ ಬರ್ಬರ ಸಾವು ತಂದಕೊಂಡಾ. ಇಂತಾ ಸಾವು ನಿಮಗೂ ಬೇಕಾ? ಸೆಲ್ಪಿ ಸೂಸೈಡ್ ಮಾಡ್ಕೋಬೇಕಾ. ಬೇಕು ಅಂದ್ರೆ ಮಾಡ್ರಪ್ಪಾ ರೀಲ್ಸ್ ಮಾಡಿ, ವಿಡಿಯೋ ಮಾಡಿ, ಎಲ್ಲಾದ್ರೂ ಹೋಗಿ ಸಾಯ್ರಿ. ಆದರೆ ನಾವು ಹೆಂಡ್ರು. ಇಲ್ಲಿ ನೋಡಿ ಈ ಪುಟ್ಟ ಮಗು.. ನಾವೇನು ಪಾಪಾ ಮಾಡಿದ್ವಿ. ನಂಬಿದ ನಮ್ಮನ್ಯಾಕೆ ನಡುದಾರೀಲಿ ಕೈಬಿಟ್ರಿ. ಮಾಡ್ರಪ್ಪಾ ರೀಲ್ಸ್ ಮಾಡ್ರಿ, ಎಲ್ಲಾದ್ರೂ ಹೋಗಿ ಸಾಯ್ರಿ. ( ಎನ್ನುತ್ತಾ ಪೇಸ್ಬುಕ್ ಲೈವ್ ನಲ್ಲಿ ಮಾತಾಡಿ ಸಿಟ್ಟಿಗೆದ್ದು ಮೊಬೈಲ್ ನೆಲಕ್ಕಪ್ಪಳಿಸಿ ಒಡೆದು ಹಾಕಿ ಅಳುತ್ತಾ ಒಳಗೆ ಓಡುತ್ತಾಳೆ)
ಚಂದ್ರು ತಾಯಿ : ಈ ಮೊಬೈಲ್ ಕಂಡು ಹಿಡದವನ ಹೆಣ ನಾಯಿ ನರಿ ತನ್ಲಿ, ಮೊಬೈಲ್ ತಯಾರು ಮಾಡೋರೆಲ್ಲಾ ಚಾಪೆ ಸುತ್ಕೊಂಡು ಹೋಗ್ಲಿ. ನೆಟ್ವರ್ಕ್ ಕೊಟ್ಟವರ ಮನೆ ಹಾಳಾಗ್ಲಿ. ಪೋನ್ ಕೈಗೆ ಕೊಟ್ಟು ಕೊಲ್ಲೋದಕ್ಕೆ ನಮ್ಮನೇ ಮಕ್ಕಳೇ ಬೇಕಿತ್ತೇನೋ ಬೇವಾರ್ಸಿಗಳಾ. ಅಯ್ಯೋ ದೇವರೇ ಇನ್ನೂ ಏನೇನಪ್ಪಾ ನೋಡೋದಿದೆ.. ವೆಂಕಟರಮಣಾ..
( ಹಿಂದಿನಿಂದಾ ಅಂಬುಲನ್ಸ್ ಸೌಂಡು, ಅದರ ಹಿಂದೆ ಪೊಲೀಸ್ ಜೀಪ್ ಬಂದ ಸದ್ದು)
*- ಶಶಿಕಾಂತ ಯಡಹಳ್ಳಿ*
Comments
Post a Comment