ಚಮಚಾ ಪುರಾಣ (ಪ್ರಹಸನ- 47)

  (ಪ್ರಹಸನ- 47)

ಚಮಚಾ ಪುರಾಣ  

************************

 

(ಅಡುಗೆ ಮನೆಯ ಊಟದ ಕೋಣೆಯಲ್ಲಿ ಎರಡು ಚಮಚಗಳು ವಾದಕ್ಕೆ ಬಿದ್ದವು)

 

ವೆಜ್ ಚಮಚ : ಥೂ ಅನಿಷ್ಟ ಮುಂಡೇದೇ ದೂರ ಸರಿ. ಹತ್ತಿರ ಬಂದು ನನ್ನ ಮಡಿ ಹಾಳು ಮಾಡ್ಬೇಡಾ.

 

ನಾನ್ವೆಜ್ ಚಮಚ : ಏನು ಮಾತೂ ಅಂತಾ ಆಡ್ತೀಯಾ? ನಿನ್ನನ್ನ ಯಾವುದಕ್ಕೆ ಬಳಸ್ತಾರೋ ನನ್ನನ್ನೂ ಅದಕ್ಕೆ ಉಪಯೋಗಿಸ್ತಾರಲ್ವಾ?

 

ವೆಜ್ ಚಮಚ : ಹೌದಯ್ಯಾ ಪ್ರಾರಬ್ಧ ಮುಂಡೆದೇ. ಎಲ್ಲಾ ಚಮಚಾಗಳು ಇರೋದೇ ಅಡುಗೆ ಮಾಡೋದಿಕ್ಕೆ ಮಾಡಿದ್ದನ್ನ ತಿನ್ನೋದಿಕ್ಕೆ. ಆದರೆ ಎಂತಾ ಮಾಡೋದಿಕ್ಕೆ, ಏನು ತಿನ್ನೋದಿಕ್ಕೆ ಬಳಕೆ ಮಾಡ್ತಾರೆ ಅನ್ನೋದು ಬಾಳಾ ಮುಖ್ಯ.

 

ನಾನ್ವೆಜ್ ಚಮಚ : ಚಮಚಾ ಅಂದಮ್ಯಾಗೆ ಹೇಗೆ ಬೇಕಾದ್ರೂ ಬಳಸಬೋದು. ಯಾವ ಅಡುಗೆ ಬೇಕಾದ್ರೂ ಮಾಡಬೋದು. ಅದರಲ್ಲೇನಿದೆ ವ್ಯತ್ಯಾಸ?

 

ವೆಜ್ ಚಮಚ : ಇದೆ.. ಅಲ್ಲೇ ಇರೋದು ಭಾರೀ ವ್ಯತ್ಯಾಸಅದು ನಮ್ಮನ್ನ ಬಳಸೋರ ಜಾತಿ ಮೇಲೆ ಡಿಪೆಂಡ್ ಆಗುತ್ತೆ. ಸದರಾ ಸಿಕ್ತು ಅಂತಾ ಮೆತ್ತಗೇ ಹತ್ರಾ ಬರಬ್ಯಾಡಾ. ದೂರಾ ದೂರಾನೇ ಇರು. ಇಲ್ಲಾ ಅಂದ್ರೆ ನಾನು ಅಪವಿತ್ರ ಆಗ್ತೇನೆ. ಹಾಗೇನಾದ್ರೂ ಆದ್ರೆ ನನ್ನ ಎತ್ತಿ ತೊಟ್ಟಿಗೆ  ಬಿಸಾಕ್ತಾರೆ.

 

ನಾನ್ವೆಜ್ ಚಮಚ : ಇದೊಳ್ಳೆ ಕತೆ ಆಯ್ತಲ್ಲಾ. ಬಳಸುವವರ ಪರಿಕರ ನಾವುಪವಿತ್ರ ಅಪವಿತ್ರ ಅನ್ನೋದು ನಮಗೆಲ್ಲಿದೆ

 

ವೆಜ್ ಚಮಚ : ಶೂದ್ರ ಮುಂಡೇದೇ. ಮಾಂಸಾಹಾರ ಅಂದ್ರೆ ಅಪವಿತ್ರವಂತೆ ಕಣಲೋ. ಅಂತಾದ್ದನ್ನ ಮಾಡೋಕೆ, ತಿನ್ನೋದಕ್ಕೆ ಬಳಕೆ ಆಗೋ ನೀನು ಮೈಲಿಗೆಯವ. ಸಸ್ಯಾಹಾರಿಗಳ ಚಮಚಾ ಆದ ನಾನೂ ನಿನ್ನ ಜೊತೆ ಸೇರುವಂತಿಲ್ಲ. ಅಷ್ಟೇ ಯಾಕೆ ನೀ ಎಲ್ಲಿ ಇರ್ತೀಯೋ ಅಲ್ಲಿ ನಾನು ಇರುವಂತೆಯೂ ಇಲ್ಲಾ. ತೊಲಗಾಚೆ.

 

ನಾನ್ವೆಜ್ ಚಮಚ : ಹಾಗಂತ ಹೇಳಿದವರು ಯಾರು?

 

ವೆಜ್ ಚಮಚ : ಇನ್ಯಾರು ಅದೇ ಪುಳಚಾರರು. ಕಠೋರ ಮೇಲ್ಜಾತಿ ಸಸ್ಯಾಹಾರಿಗಳು. ಮಾಂಸಾಹಾರದ ವಿರೋಧಿಗಳು. ಅವರೇ ಹೇಳೊದನ್ನ ಕೇಳಿ ಕೇಳಿ ನನಗೂ ಪವಿತ್ರವಾಗಿ ಇರಬೇಕು ಅಂತಾ ಆಸೆ ಆಗಿದೆ. ಅದಕ್ಕೆ ನಿನ್ನಂತಾ ಅದಮರ ಸಹವಾಸ ಸಾಕಾಗಿದೆ. ಕೊಂದು ತಿನ್ನೋದು ಮಹಾ ಅಪರಾದವಂತೆ. ದೂರ ನಿಲ್ಲು ಹೊಲಸು ಮುಂಡೇದೇ.

 

ನಾನ್ವೆಜ್ ಚಮಚ : ಅಯ್ಯೋ ಮಂಕದಿನ್ನೆ. ಪ್ರಾಣಿ ಪಕ್ಷಿ ಮೀನುಗಳಿಗೆ ಮಾತ್ರಾನಾ ಜೀವ ಇರೋದು. ಎಲ್ಲಾ ಸಸ್ಯ, ಹಣ್ಣು, ತರಕಾರಿಗಳಿಗೂ ಜೀವ ಇರೋದಿಲ್ವಾ. ಅವುಗಳನ್ನ ಕತ್ತರಸಿ ಸೋಸಿ ಹಿಂಡಿ ಬೇಯಿಸಿದಾಗ ಸಸ್ಯಗಳಿಗೆ ನೋವಾಗೋದಿಲ್ವಾ. ಇಲ್ಲಿ ಯಾವುದಕ್ಕೆ ನೋವಾಗುತ್ತೋ ಸಾವಾಗುತ್ತೋ ಅನ್ನೋದು ಮುಖ್ಯವಲ್ಲಾ, ರುಚಿಯಾಗಿರುತ್ತಾ, ಶುಚಿಯಾಗಿರುತ್ತಾ, ಹಸಿವಾದವರ ಹೊಟ್ಟೆ ತುಂಬುತ್ತಾ ಅನ್ನೋದಷ್ಟೇ ಮುಖ್ಯ. ಆಹಾರ ಅನ್ನೋದು ಅವರವರ ಇಷ್ಟ ಕಣಲೇ. ತಿನ್ನೋ ಆಹಾರಕ್ಕೂ ಜಾತಿ ಧರ್ಮ ಅಂತಾ ಮನುಷ್ಯರು ಮಾಡಿರೋದು ತಿಳಕೋ.

 

ವೆಜ್ ಚಮಚ : ಮಾಂಸಾಹಾರ ತಿನ್ನೋರಿಗೆ ಕ್ರೂರತ್ವ ಬರುತ್ತಂತೆ. ಸಸ್ಯಾಹಾರಿಗಳು ಸಾಧು ಸ್ವಭಾವದವರಂತೆ ಗೊತ್ತಾ?

 

ನಾನ್ವೆಜ್ ಚಮಚ : ಅಲೆಲೆಲೇ ಯಾರಪ್ಪಾ ಹಂಗಂತಾ ಹೇಳಿದ್ದುದನ ತಿನ್ನೋರು ಶತಮಾನಗಳಿಂದಾ ದಮನಿತರಾಗಿಯೇ ಉಳ್ಳವರ ಸೇವೆ ಮಾಡ್ಕೊಂಡು ಬದುಕ್ತಿದ್ದಾರಲ್ವಾ? ದನದ ಹಾಲು ಮೊಸರು ತುಪ್ಪ ತಿನ್ನೋ ಸೋ ಕಾಲ್ಡ್ ಪುಳಚಾರರು ಸನಾತನ ಕಾಲದಿಂದಲೂ ಬಹುಜನರನ್ನ ಜಾತಿ ಧರ್ಮ ದೇವರ ಹೆಸರಲ್ಲಿ ಶೋಷಣೆ ಮಾಡಿ ಮುಟ್ಟಿಸಿಕೊಳ್ಳದೇ ಹಿಂಸೆ ಕೊಡ್ತಾನೇ ಬಂದಿದ್ದಾರಲ್ವಾ? ಈಗ ಹೇಳು ಯಾರು ಕ್ರೂರಿಗಳು ಅಂತಾ. ಜಗತ್ತಿನ ಅತಿ ದೊಡ್ಡ ಹಿಂಸಾರಕ್ಕಸ ಹಿಟ್ಲರ್ ಸಸ್ಯಾಹಾರಿಯಾಗಿದ್ದವ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದ್ದ. ಸಂವಿಧಾನದ ಮೂಲಕ ಬಹುಜನರಿಗೆ ಸಮಾನತೆ ತಂದು ಕೊಟ್ಟ ಅಂಬೇಡ್ಕರ್ ಮಾಂಸಾಹಾರಿಯಾಗಿದ್ದರೂ ಹಿಂಸೆಗಿಳಿಯಲಿಲ್ಲ, ಹಿಂಸೆ ಪ್ರಚೋದಿಸಲಿಲ್ಲ.

 

ವೆಜ್ ಚಮಚ : ಹೌದು.. ನೀನೇಳೋದರಲ್ಲೂ ಅರ್ಥ ಇದೆಸಸ್ಯಾಹಾರಿ ಹಾಗೂ ಮಾಂಸಾಹಾರಿ ಎರಡರಲ್ಲೂ ಒಳ್ಳೆಯವರು ಮತ್ತು ಕೆಟ್ಟವರು ಇದ್ದೇ ಇರ್ತಾರೆ. ತಿನ್ನೋದಕ್ಕೂ ಸ್ವಭಾವಕ್ಕೂ ಏನೂ ಸಂಬಂಧವಿಲ್ಲಾ ಬಿಡು

 

ನಾನ್ವೆಜ್ ಚಮಚ : ಆದರೆ ಆಹಾರಕ್ಕೂ ಜಾತಿಗೂ ಸಂಬಂಧ  ಕಲ್ಪಿಸಿ ಮೇಲು ಕೀಳು ಅಂತಾ ಜನರನ್ನ ವಿಭಾಗಿಸುತ್ತಾರಲ್ಲಾ ಅದು ತಪ್ಪು. ಇಷ್ಟಾ ಬಂದವರು ಇಷ್ಟಾ ಬಂದದ್ದನ್ನ ತಿನ್ನಲಿ ಬಿಡು. ಆದರೆ ಪವಿತ್ರ ಅಪವಿತ್ರಗಳ ಸೃಷ್ಟಿಸಿ ಭಿನ್ನಬೇಧ ಮಾಡೋದು ಅಮಾನವೀಯ ಅಲ್ವಾ.

 

ವೆಜ್ ಚಮಚ : ಆದರೆ ಮೇಲು ಕೀಳುಗಳನ್ನ ಮನುಷ್ಯರಲ್ಲದ ಲೋಹದ ತುಂಡುಗಳಾದ ನಮಗೂ ಹೇರಿದ್ದಾರಲ್ಲಾ ಏನ್ ಮಾಡೋದು. ನಿನ್ನ ಜೊತೆ ನಾನು ಸೇರಿದ್ರೆ ನನ್ನನ್ನೂ ಬಿಸಾಕಿ ಬಿಡ್ತಾರಲ್ಲಾ ಹೆಂಗ್ ಮಾಡೋದು?

 

ನಾನ್ವೆಜ್ ಚಮಚ : ಸೋಪ್ ಪೌಡರ ಹಾಕಿ ಗಸಗಸ ತಿಕ್ಕಿ ತೊಳೆದು ಒರೆಸಿ ಇಟ್ರೆ ಎಲ್ಲಾ ಚಮಚಾನೂ ಒಂದೇ ತರಾ ಇರ್ತಾವೆ ಅಲ್ವಾ?. ಯಾವುದು ವೆಜ್ ಚಮಚಾ, ಇನ್ಯಾವುದು ನಾನ್ವೆಜ್ ಚಮಚಾ ಅಂತಾ ಯಾರಿಗೆ ಹೇಗೆ ಗೊತ್ತಾಗುತ್ತೆ?

 

ವೆಜ್ ಚಮಚ : ಹೌದು, ತಿಕ್ಕಿ ತೊಳದ್ರೆ ನಾವೆಲ್ಲಾ ಒಂದೇ ತರಾ ಕಾಣ್ಬೋದು. ನಮ್ಮ ಮೈಗೆ ಅಂಟಗೊಂಡಿರೋ ವಾಸನೇನೂ ಹೋಗಬಹುದು. ಆದರೆ ಚಮಚ ಬಳಸುವ ಜಾತಿ ಜನರ ಮನಸನ್ನ ಏನು ಹಚ್ಚಿ ತಿಕ್ಕಿ ತೊಳದ್ರೂ ಅವರ ಮನಸಲ್ಲಿರೋ ಜಾತಿ ವಾಸನೆ ಹೋಗೋದಿಲ್ವಲ್ಲಾ

 

ನಾನ್ವೆಜ್ ಚಮಚ : ಹೋಗಲಿ ಬಿಡು. ಜಾತಿಬೇಧ ಮಾಡೋಕೆ ನಾವು ಸಧ್ಯ ಮನುಷ್ಯರಲ್ಲವಲ್ಲಾ, ಚಮಚಾಗಳು. ಯಾರು ಕೈಲಿ ಹಿಡ್ಕೊಂಡು ತಮ್ಮ ಬಾಯಲ್ಲಿ ಇಟ್ಕೋತಾರೋ, ಯಾರು ನಮ್ಮನ್ನ ಬಳಸಿ ಅಡುಗೆ ಮಾಡ್ತಾರೋ  ಅವರ ಕೈಯಾಳುಗಳು ನಾವು.

 

ನಾನ್ವೆಜ್ ಚಮಚ : ಹೌದು,

ಎಲ್ಲಾ ಜಾತಿ ಧರ್ಮ ಕರ್ಮದವರಿಗೂ ಸಮಾನ ಸೇವೆ ಕೊಡುವವರು. ಸರ್ವ ಧರ್ಮ ಸಮನ್ವಯದ ರೂಪಕಗಳು ನಾವು ಚಮಚಾಗಳು

 

ವೆಜ್ ಚಮಚ : ಜಾತಿ ಶ್ರೇಷ್ಟತೆಯ ವ್ಯಸನ ಪೀಡಿತರು ಬರುವ ಮುನ್ನ ಒಂದು ಹಾಡು ಹಾಡೋಣ ಬಾ.

 

ನಾನ್ವೆಜ್ ಚಮಚ : ಆಯ್ತು ಆಗಲಿ ಆಗಲಿ ಶುರು ಮಾಡು

( ಬೇರೆ ಬೇರೆ ಗಾತ್ರ ಆಕಾರದ ಚಮಚಾಗಳೂ ಸೇರಿ ಹಾಡಿ ಕುಣಿಯಲು ಆರಂಭಿಸುತ್ತವೆ)

 

ಚಮಚಾಗಳು ನಾವು ಚಮಚಾಗಳು

ಜಾತಿ ಇಲ್ಲದ ಭೀತಿ ಇಲ್ಲದ ಬೇಧವರಿಯದ

ಚಮಚಾಗಳು ನಾವು ಸರ್ವಮಾನ್ಯರು

 

ವೆಜ್ಜಿರಲಿ ನಾನ್ ವೆಜ್ಜಿರಲಿ ಎಲ್ಲದಕ್ಕೂ ಸಲ್ಲುವ

ಚಮಚಾಗಳು ನಾವು ಸಮಾನತೆಯ ಹರಿಕಾರರು.

 

ಸರ್ವ ಧರ್ಮ ಸಮಾನತೆ ನಮ್ಮಯ ನೀತಿ

ಆಕಾರ ಬೇರೆ ಆದರೂ ನಮ್ಮದೊಂದೆ ಜಾತಿ

 

ಜಾತಿ ಇಲ್ಲ, ಭೀತಿ ಇಲ್ಲ

ಧರ್ಮವಿಲ್ಲ ಕರ್ಮವಿಲ್ಲ

ಎಲ್ಲರೊಂದೇ ನಮ್ಮ ಮುಂದೆ

ಚಮಚಾಗಳು ನಾವು ಸಾಚಾಗಳು

 

*-ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ