ದೇಶವೆಂದರೆ ಬರೀ ಮಣ್ಣಲ್ಲ ( ಪ್ರಹಸನ -48)

 ಪ್ರಹಸನ -48)

ದೇಶವೆಂದರೆ ಬರೀ ಮಣ್ಣಲ್ಲ   

************************************

 

ಈರ  : ಮೇರಿ ಮಾಠಿ ಮೇರಾ ದೇಶ್

ಮೇರಿ ಮಾಠಿ ಮೇರಾ ದೇಶ್

( ಅಂತಾ ಕೇಸರಿ ಟವಲನ್ನು ಗಾಳಿಯಲ್ಲಿ ಹಾರಾಡಿಸುತ್ತಾ ಆನಂದದಿಂದ  ಕುಣಿದಾಡತೊಡಗಿದ)

 

ಬಸು : ಏನಾಯ್ತೋ ಈರು, ಈರಭದ್ರಾ. ನಿನ್ನೆವರೆಗೂ ಚೆನ್ನಾಗಿದ್ದೆ. ಈಗ್ಯಾಕೆ ಹಿಂಗೆ ಹುಚ್ಚು ಹಿಡಿದವನಂಗೆ.

 

ಈರಬರೋದು ಬಂದಿ ಸ್ವಲ್ಪ ಮೊದಲೇ ಬರಬಾರದೇನೋ ಬಸು. ಎಂತಾ ಚಾನ್ಸ್ ಮಿಸ್ ಮಾಡ್ಕೊಂಡಿ.

 

ಬಸು : ಏನಪ್ಪಾ ಅದು ಅಂತಾ ಚಾನ್ಸು. ಮತ್ಯಾವದರ ಮಸೀದಿ ಬೀಳ್ಸಿದ್ರೇನು. ಲವ್ ಜಿಹಾದ್ ಕೇಸ್ ಸಿಕ್ತೇನು? ಯಾವುದಾದರೂ ಚರ್ಚ್ ಉಡೀಸ್ ಆಯ್ತೇನು?

 

ಈರ :   ಹಂಗಲ್ಲೋ, ಈಗ ನಮ್ಮ ವಿಶ್ವಗುರುಗಳು ರೇಡಿಯೋದಲ್ಲಿ ಮನ್ ಕಿ ಬಾತ್ ಮಾತಾಡಿದ್ರು. ಮಾತಾ ಅವು ಮುತ್ತುಗಳು, ಒಂದೊಂದೂ ಅಪರೂಪದ ಮುತ್ತು ರತ್ನಗಳು

 

ಬಸು : ಹೌದಾ. ಮಣಿಪುರ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ರಾ.   ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಧೈರ್ಯ ತುಂಬಿದ್ರಾ. ಗಲಭೆಕೋರರಿಗೆ ಗಲ್ಲು ಹಾಕ್ತೇವಿ ಅಂತಾ ಆದೇಶ ಮಾಡಿದ್ರಾ

 

ಈರನೋಡ್  ನೋಡು ನಿಂದು ಯಾವಾಗಲೂ ಸಂಕುಚಿತ ಮನೋಭಾವ. ಎಲ್ಲೋ ಗಲಭೆ ಆಗ್ತಾವೆ ಹೋಗ್ತಾವೆ. ಆದರೆ ವಿಶ್ವಗುರುಗಳು ಯಾವಾಗಲೂ ದೇಶದ ಬಗ್ಗೆ ಹೇಳೋದು. ಮಾತೇ ನನ್ನಂತಾ ದೇಶಭಕ್ತರಿಗೆ ಸ್ಪೂರ್ತಿ ತುಂಬೋದು.

 

ಬಸು : ಹಂಗಾ? ಹಂಗಾದ್ರೆ ದೇಶವಾಸಿಗಳಿಗೆ ಮಾತು ಕೊಟ್ಟಂತೆ ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ ಹದಿನೈದು ಲಕ್ಷ ರೊಕ್ಕಾ ಹಾಕಿದ್ರಾ? ನಿರುದ್ಯೋಗಿ ಯುವಕರಿಗೆ ನೌಕರಿ ಕೊಡ್ತಾರಂತಾ?

 

ಈರ :   ಯಾವಾಗ ನೋಡಿದ್ರೂ ಅದೇ ಕೊಂಕು ಮಾತು ನಿಂದು. ಅವತ್ತೆ  ನಮ್ಮ ಶಾ ಸಾಹೇಬರು ಹೇಳಿಲ್ವಾ, ಆಶ್ವಾಸನೆಗಳೆಲ್ಲಾ ನಿಜವಲ್ಲಾ ಎಲೆಕ್ಷನ್ ಜುಮ್ಲಾ ಅಂತಾ. ಅದನ್ನೆಲ್ಲಾ ಬಿಟ್ಟಾಕು. ದೇಶದ ಹುತಾತ್ಮ ಯೋಧರಿಗೆ ಗೌರವಿಸಲು 'ಮೇರಿ ಮಾಠಿ ಮೇರಾ ದೇಶ್' ಅಂದ್ರೆ 'ನನ್ನ ಮಣ್ಣು ನನ್ನ ದೇಶ' ಅಂತಾ ಅಭಿಯಾನ ಶುರು ಮಾಡ್ತಾರಂತೆ

 

ಬಸು : ಅಲ್ಲೋ ಈರು.. ಕಾರ್ಗಿಲ್ ಕದನ ಯೋಧನ ಹೆಂಡತಿಯನ್ನ ಮಣಿಪುರದಲ್ಲಿ ಹಾಡುಹಗಲೇ ಬೆತ್ತಲೆ ಮಾಡಿ ಸಾಮೂಹಿಕ ರೇಪ್ ಮಾಡಿದ್ದಾರೆ. ಯೋಧನ ಕುಟುಂಬಕ್ಕೆ ಸಾಂತ್ವನ ಹೇಳೋದು ಬಿಟ್ಟು, ದೌರ್ಜನ್ಯ ಪೀಡಿತ ಮಹಿಳೆಗೆ ನ್ಯಾಯಾ ಕೊಡಿಸೋದು ಬಿಟ್ಟು..

 

ಈರ.. ಎಲ್ಲೋ ಆದ ಒಂದೆರಡು ಘಟನೆ ಮಾತು ಈಗ್ಯಾಕೆ ಬಿಡೋ. ಇಲ್ಲಿ ಕೇಳು. ಅಭಿಯಾನ ಅಂದ್ರೆ ಸುಮ್ನೆ ಅಲ್ಲಾ. ಹುತಾತ್ಮರ ಸ್ಮರಣಾರ್ಥ ಎಲ್ಲಾ ಪಂಚಾಯತಿಗಳಲ್ಲಿ ವಿಶೇಷ ಶಾಸನ ರೂಪಿಸ್ತಾರಂತೆ, ಅಮೃತ ಕಳಸ ಯಾತ್ರೆ ಮಾಡಿಸ್ತಾರಂತೆ, 7500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣು ಸಸಿ ತಂದು ದೆಹಲಿಯ ರಾಷ್ಟ್ರೀಯ ಯುದ್ದ ಸ್ಮಾರಕದ ಹತ್ತಿರ ಸಸಿ ನೆಟ್ಟು ಅಮೃತ ವಾಟಿಕಾ ನಿರ್ಮಿಸ್ತಾರಂತೆಹುತಾತ್ಮರಿಗೆ ಗೌರವ ಸಲ್ಲಿಸಿದಂಗೂ ಆಯ್ತು, ವನಮಹೋತ್ಸವ ಮಾಡಿ ಪರಿಸರ ಬೆಳೆಸಿದಂಗೂ ಆಯ್ತು, ದೇಶಪ್ರೇಮ ಹೆಚ್ಚಿಸಿದಂಗೂ ಆಯ್ತು. ಹೆಂಗೆ ನಮ್ಮ ವಿಶ್ವಗುರುಗಳ ಐಡಿಯಾ?

 

ಬಸು : ಹೌದೌದು.. ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಿದಂಗೂ ಆಯ್ತು, ಹುತಾತ್ಮರ ಹೆಸರಲ್ಲಿ ಜನರ ಭಾವತೀವ್ರತೆ ಕೆರಳಿಸಿದಂಗೂ ಆಯ್ತು, ಮಣ್ಣು ಮಸಿ ಅಂತಾ ಜನರಲ್ಲಿ ಹುಚ್ಚು ಉನ್ಮಾದ ಸೃಷ್ಟಿಸಿದಂಗೂ ಆಯ್ತು. ಮುಂದಿನ ಚುನಾವಣೆ ಗೆಲ್ಲಲು ರಾಜಕೀಯ ತಂತ್ರಗಾರಿಕೆ ಶುರುಮಾಡಿದಂಗೂ ಆಯ್ತು

 

ಈರ :   ತೊ ಥೋ . ಎಲ್ಲಾದ್ರಲ್ಲೂ ಹುಳುಕು ಹುಡುಕಬೇಡಾ ಬಸಣ್ಣಿ. ಮತ್ತೆ ವರ್ಷದ ಸ್ವಾತಂತ್ರ್ಯೋತ್ಸವದ ದಿನ  'ಹರ್ ಘರ್ ತಿರಂಗಾ' ಅಭಿಯಾನ ಆಚರಿಸಲೂ ಕರೆ ಕೊಟ್ಟಿದ್ದಾರೆ ಗೊತ್ತಾ. ದೇಶಭಕ್ತಿ ಕಣಯ್ಯಾ ಇದು ದೇಶಭಕ್ತಿ

 

ಬಸು : ಹೌದಲೇ ಈರು. ದೇಶ ಸುಭಿಕ್ಷೆಯಾಗಿದ್ರೆ, ದೇಶವಾಸಿಗಳು ಶಾಂತಿ ನೆಮ್ಮದಿಯಿಂದಾ ಇದ್ರೆ ದೇಶಭಕ್ತಿ ತಾನಾಗೇ ಬರುತ್ತದೆ ತಿಳ್ಕೋ. ನಮ್ಮದೇ ದೇಶದ ಸುಂದರ ರಾಜ್ಯ ಮಣಿಪುರ  ಮೂರು ತಿಂಗಳಿಂದಾ ಬೆಂಕಿ ಹತ್ತಿ ಉರೀತಾ ಐತೆ. ಇನ್ನೂರಕ್ಕೂ ಹೆಚ್ಚು ಹೆಣಗಳು ಬಿದ್ದಿದ್ದಾವೆ. ಲಕ್ಷಾಂತರ ಜನ ನಿರ್ವಸಿತರಾಗಿದ್ದಾರೆ ಕುರಿತು ನಿಮ್ಮ ವಿಶ್ವಗುರುಗಳು ಒಂದೇ ಒಂದು ನಿಟ್ಟುಸಿರೂ ಬಿಡ್ತಿಲ್ಲಾ, ಮಣ್ಣು ತಂದು ಸಸಿ ನೆಡ್ತಾನಂತೆ. ದೇಶದ ಬೇಟಿಗಳ ಮೇಲೆ ಹಗಲೇ ಬೆತ್ತಲೆ ಮೆರವಣಿಗೆ, ಸಾಮೂಹಿಕ  ಅತ್ಯಾಚಾರಗಳು ನಡೀತಾ ಇದ್ರೂ ಉಸಿರೆತ್ತದ ಪ್ರಧಾನಿಗಳು ಅಮೃತ ಕಳಸ ಯಾತ್ರೆ ಮಾಡ್ತಾರಂತೆ. ಬೇಟಿ ಬಚಾವ್ ಘೋಷಣೆ ಏನಾಯ್ತು?..

 

ಈರ :   ಯಾವುದಕ್ಕೋ ಇನ್ಯಾವುದನ್ನೋ ಲಿಂಕ್ ಮಾಡಬ್ಯಾಡ್ವೋ ಅವೆಲ್ಲಾ ಹಳೇ ಘೋಷಣೆಗಳು.  "ನನ್ನ ಮಣ್ಣು ನನ್ನ ದೇಶ" ಇದು ಲೇಟೆಸ್ಟ್ ಘೋಷಣೆ, ಎಷ್ಟು ರೋಮ್ಯಾಂಟಿಕ್ ಆಗಿ ಐತಲ್ಲಾ. ಕೇಳಿದ್ರೆ ಮೈ ರೋಮಾಂಚನ ಆಗ್ತಿದೆ.

 

ಬಸು : ತಲೇಲಿ ಅಂಧಭಕ್ತಿ ತುಂಬಿರೋ ನಿಮ್ಮಂತವರಿಗೆ ರೋಮಾಂಚನ ಆಗುತ್ತೆ ಆಗಲೇಬೇಕು. ಆದರೆ ದೇಶ ಅಂದ್ರೆ ಬರೀ ಮಣ್ಣಲ್ಲಾ, ದೇಶ ಅಂದ್ರೆ ಅಲ್ಲಿ ವಾಸಿಸುವ ಜೀವಂತ ಜನರು. "ನನ್ನ ಜನ ನನ್ನ ದೇಶ" ಅಂತಾನಾದ್ರೂ ಹೇಳಲು ನಿಮ್ಮ ವಿಶ್ವಗುರುಗಳಿಗೆ ಹೇಳು

 

ಈರ :   ನಿನ್ನ ಮಾತೂ ಸರಿಯಾಗಿದೆ. ಆದರೆ ನಾನು ಅದನ್ನೆಲ್ಲಾ ಅವರಿಗೆ ಹೇಳಾಕಾಗ್ತದಾ? ಅವರೆಲ್ಲಿ ನಾನೆಲ್ಲಿ?

 

ಬಸು : ನೀನಲ್ಲಾ, ಯಾರಿಗೂ ಹೇಳೋದಕ್ಕಾಗೋದಿಲ್ಲ ಬಿಡು. ಯಾಕಂದ್ರೆ ಹೇಳಿದ್ರೆ ಅವರು ಯಾರ ಮಾತೂ ಕೇಳೋದಿಲ್ಲಾ, ಎಷ್ಟೇ ಆಗ್ರಹ ಮಾಡಿದ್ರೂ ಸಂಸತ್ತಿನಲ್ಲಿ ಮಾತಾಡೋದಿಲ್ಲಾ, ರಾಜ್ಯಗಳೇ ಹೊತ್ತಿ ಉರಿದರೂ ಅವರ ಕಣ್ಣಿಗೆ ಕಾಣೋದಿಲ್ಲಾ. ಒಂತರಾ ನಿನ್ನ ವಿಶ್ವಗುರುವನ್ನು ಮೂಗ ಕೆಪ್ಪ ಕುರುಡ ಅನ್ನಬೋದು.

 

ಈರ :   ನೋಡು ನನಗ ಏನಾದ್ರೂ ಅನ್ನು ಆದರೆ ಹಿಂದೂ ಹೃದಯ ಸಾಮ್ರಾಟರಿಗೆ ಏನೂ ಅನಬ್ಯಾಡಅವರು ಏನು ಹೇಳಬೇಕು ಅನ್ಕೋತಾರೋ ಅದನ್ನ ಪ್ರತಿ ತಿಂಗಳೂ ಮನ್ ಕಿ ಬಾತಲ್ಲಿ ಹೇಳ್ತಾರಲ್ವಾ.

 

ಬಸು : ಅದು ಮನ್ ಕೀ ಬಾತಷ್ಟೇ, ಜನ್ ಕೀ ಬಾತ್ ಆಗೋದು ಯಾವಾಗ? ಜನರ ಜೊತೆ ಬೆರೆತು ಅವರ ಕಷ್ಟ ಸುಖ ಅರಿತು ಪರಿಹಾರ ಕಂಡುಕೊಳ್ಳೋದು ಯಾವಾಗ? ಹುತಾತ್ಮರಿಗೆ ಗೌರವ ಸಲ್ಲಿಸೋ ಮೊದಲು ಸಾಯ್ತಿರೋರಿಗೆ ಸಾಂತ್ವನ ಹೇಳೋದು ಯಾವಾಗ? ಭಾವನಾತ್ಮಕ ಸಂಗತಿಗಳನ್ನ ಬಿಟ್ಟು ದೇಶದ ವಾಸ್ತವಿಕ ಸಮಸ್ಯೆಗಳಿಗೆ ಸ್ಪಂದಿಸೋದು ಯಾವಾಗ

 

ಈರ :   ಆಗುತ್ತೆ, ಎಲ್ಲಾ ಆಗುತ್ತೆ. ಮುಂದಿನ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಆಯ್ಕೆಯಾಗಿ ವಿಶ್ವಗುರುಗಳು ಮತ್ತೆ ಪ್ರಧಾನಿ ಆಗ್ತಾರಲ್ಲಾ ಆವಾಗ ನೀ ಹೇಳಿದ್ದು ಆದರೂ ಆಗಬಹುದು. ಮನುಷ್ಯರು ಕಣೋ ನಾವು ಯಾವಾಗಲೂ ಆಶಾವಾದಿಯಾಗಿರಬೇಕು.

 

ಬಸು : ಹೌದಣ್ಣಾ ಹೌದು. ಅಚ್ಚೆ ದಿನ್ ಬರುತ್ತೆ ಬರುತ್ತೆ ಅಂತಾ ದೇಶದ ಜನ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಒಂಬತ್ತು ವರ್ಷದಿಂದ ಕಾಯ್ತಾನೇ ಇದ್ದಾರೆ. ಯಾವಾಗ ಬರುತ್ತೆ ಅಂತಾ ಅವರೂ ಹೇಳಲಿಲ್ಲಾ, ಇವರೂ ಕೇಳಲಿಲ್ಲ. ಅದು ಬರುವ ಯಾವ ಲಕ್ಷಣಗಳೂ ಇಲ್ವೇ ಇಲ್ಲಾ

 

ಈರನ ಹೆಂಡತಿ : ರ್ರೀ.. ಗ್ಯಾಸ್ ಖಾಲಿ ಆಯ್ತು, ಅಡುಗೆ ಮಾಡೋದು ಹೇಗೆ

 

ಈರನನಗಿಲ್ಲಿ ಬೈಕಿಗೆ ಪೆಟ್ರೋಲ್ ಹಾಕಿಸೋಕೆ ಕಾಸಿಲ್ಲಾ ಇನ್ನು ಅಷ್ಟು ದುಬಾರಿ ಹಣ ಕೊಟ್ಟು ಸಿಲಿಂಡರ್ ಹೇಗೇ ತರಲಿ. ಸೌದೆ ಉರಿಸಿ ಅಡುಗೆ ಮಾಡು. ಅದೇನೋ ನಿನಗೆ ಗೃಹ ಲಕ್ಷ್ಮೀ  ಹಣ ಬರುತ್ತಲ್ಲಾ ಅದರಲ್ಲಿ ಸಿಲಿಂಡರ್ ಕೊಂಡು ತಂದ್ರಾಯ್ತು

 

ಬಸು : ಅಚ್ಚೇ ದಿನ್ ಅಂದ್ರೆ ಇದೇ ಏನೋ

 

ಈರನ ಹೆಂಡತಿ : ಅಚ್ಚೇ ದಿನ್ ಅಂತೆ ಅಚ್ಚೇ ದಿನ್. ಹಾಗೇಳಿದವನ ಮನೆ ಹಾಳಾಗಾ? ನೋಡಣ್ಣಾ  ಗಂಡಾ ಅನ್ನೋ ಪ್ರಾಣಿ ಇಷ್ಟುದ್ದಾ ಓದವ್ನೆ ಆದ್ರೆ ಅದ್ಯಾವನೋ ವಿಶ್ವಗುರು ಅಂತಾರಲ್ಲಾ ಅವ ಈವಯ್ಯನಿಗೆ ನೌಕರಿ ಏನಾದ್ರೂ ಕೊಟ್ಟವ್ನಾ? ಹಾಲು ಮೊಸರು ಅಷ್ಟೇ ಯಾಕೆ ಮಕ್ಕಳ ಪೆನ್ನು ಪೆನ್ಸಿಲ್ಲಿಗೂ ಜಿಎಸ್ಟಿ ಹಾಕಿ ಬೆಲೆ ಏರ್ಸಿ ಕುಂತವ್ನೆ. ಬಡವರು ಹೆಂಗಣ್ಣಾ ಬದುಕೋದು. ನಿಜವಾಗ್ಲೂ ಅಚ್ಚೇ ದಿನ್ ಬಂದಿದ್ರೆ ಬಿಟ್ಟಿ ಭಾಗ್ಯಕ್ಕೆ ಯಾಕೆ ಬಾಯಿ ಬಿಟ್ಕೊಂಡು ಬೆನ್ನು ಬೀಳ್ತಿದ್ರು ಜನಾ. ಭಾಗ್ಯಗಳಿಂದಾಗಿ ಏನೋ ಬಡವರು ಉಸಿರಾಡೊ ಹಾಗಾಗಿದೆ.

 

ಈರ :   ಹೂಂ ಹಿಂಗೆ ಎಲ್ಲಾ ಪ್ರೀ ಕೊಡ್ತಾ ಹೋದ್ರೆ ದೇಶ ದಿವಾಳಿ ಆಗುತ್ತೆ ಅಂತಾ ಹೇಳೊ ಬಸು ಇವ್ಳಿಗೆ

 

ಈರನ ಹೆಂಡತಿ : ಮೊದಲು ಇವನ ಮನೆ ದಿವಾಳಿ ಆಗೋಗಿದೆ ಅದನ್ನ ಹೆಂಗೆ ಕಾಪಾಡೋದು ಅಂತಾ ನೋಡ್ಕೊಳ್ಳೋಕೆ ಹೇಳಿಯಣ್ಣಾ ಮೂದೇವಿಗೆ.

 

ಈರ :   ಇವತ್ತಲ್ಲಾ ನಾಳೆ ವಿಶ್ವಗುರುಗಳ ದಯೆಯಿಂದಾ ಅಚ್ಚೆ ದಿನ್ ಬಂದೇ ಬರುತ್ತೆ ಅಂತಾ ಹೇಳೋ ಬಸು ಇವಳಿಗೆ.

 

ಬಸು : ಯಾವ ಭರವಸೆ ಮೇಲೆ ಹೇಳ್ಲೋ. ಬರೀ ಜಾತಿ ಧರ್ಮ ದ್ವೇಷದ ಕಿಚ್ಚಿನಲ್ಲಿ ದೇಶವನ್ನ ಬೇಯಿಸ್ತಿರೋರು ಅಚ್ಚೆ ದಿನ್ ಯಾವಾಗ ತರ್ತಾರೆ ಅಂತಾ ಹೇಗೆ ಹೇಳಲೋ.

 

ಈರನ ಹೆಂಡತಿ : ನಿನಗೆ ಹಿಂಗೆ ಹೇಳಿದ್ರೆ ತಿಳಿಯಾಕಿಲ್ಲಾ ಇರು ಭೂತ ಬಿಡಿಸ್ತೇನೆ. ( ಎಂದವಳೇ ಪೊರಕೆ ತಗೊಂಡು ಗಂಡನನ್ನು ಅಟ್ಟಾಡಿಸಿ ಹೊಡೆಯುತ್ತಾಳೆ. ಆತ ಅಯ್ಯೋ ಕಾಪಾಡ್ರಪ್ಪೋ ಕಾಪಾಡಿ ಎನ್ನುತ್ತಾ ಓಡಿ ಹೋಗಿ ಬಸುನ ಹಿಂದೆ ಅಡಗಿಕೊಳ್ತಾನೆ)

 

ಬಸು : ಹೋಗಲಿ ಬಿಡಮ್ಮಾ ಏನಿದು ಪಬ್ಲಿಕ್ನಲ್ಲಿ.

 

ಈರನ ಹೆಂಡತಿ : ಎಷ್ಟೂಂತಾ ಸಹಿಸೋದು ಹೇಳಿಯಣ್ಣಾ. ಈವಯ್ಯಾ ದುಡಿಯೋದಿಲ್ಲಾ ದುಃಖ ಪಡೋದಿಲ್ಲಾ. ಯಾವ ಮಸೀದಿ ಒಡೀಲಿ, ಯಾವ ಸಾಬೀನ್ನ ತದಕಲೀ ಅಂತಾ ಕಾಯ್ತಾ ಇರ್ತಾನೆ. ಹಲಾಲು ಹಿಜಾಬು ಆಜಾನು ವಿರುದ್ದ ಗಲಭೆ ಎಬ್ಬಿಸ್ತಾನೆ. ಎಲ್ಲಾದರೂ ಯಾರಾದ್ದಾದರೂ ಹೆಣ ಬಿದ್ರೆ ಸಾಕು ರಣಹದ್ದಿನಂಗೆ ಹಾರಿ ಹೋಗಿ ಹಿಂದೂಗಳಿಗೆ ರಕ್ಷಣೆ ಇಲ್ಲಾ ಅಂತಾ ಗಲಾಟೆ ಎಬ್ಬಿಸ್ತಾನೆ. ಹಿಂಗಾದ್ರೆ ಹೆಂಗಣ್ಣಾ ನಾವು ಬದುಕೋದು. ಯಾರು ಯಾವತ್ತು ಬಂದು ಇವನ್ನ ಹಿಡಿದು ಹೊಡದು ಬೀದಿ ಹೆಣಾ ಮಾಡ್ತಾರೋ ಅಂತಾ ದಿನಾಲೂ ಭಯಾ ಆಗುತ್ತೆ. ಇವನ ತಲೇಲಿ ಮತಾಂಧತೆ ತುಂಬಿ ಕಳಿಸಿದೋರ ಮಕ್ಕಳು ಇಂಟರ್ನ್ಯಾಶನಲ್ ಸ್ಕೂಲಲ್ಲಿ ಓದಿ ದೊಡ್ಡ ಆಫೀಸರೋ ಇಲ್ಲಾ ಬಿಸಿನೆಸ್ ಮ್ಯಾನೋ ಆಗ್ತಾರೆ. ಆದರೆ ಇಂತಾ ಮೆದುಳು ತೊಳ್ಕೊಂಡಿರೋ ಬಡವರು ತಮ್ಮ ಮನೆ ಹಾಳು ಮಾಡ್ಕೊಂಡು ದೇಶೋದ್ದಾರಾ ಮಾಡ್ತಾರಂತೆ.  (ಗಂಡನಿಗೆ) ಬಾರಯ್ಯಾ ಬಾ..  ಇವತ್ತು ನಿನ್ನ ಕಾಲು ಮುರ್ದು ಮೂಲೆಗೆ ಕೂಡಿಸದೇ ಇದ್ರೆ ನನ್ನ ಹೆಸರು ಕಾಳವ್ವನೇ ಅಲ್ಲಾ. ( ಎಂದು ಗಂಡನನ್ನು ಮತ್ತೆ ಪೊರಕೆಯಿಂದ ಅಟ್ಟಾಡಿಸಿ ಹೊಡೆಯುತ್ತಾಳೆ. ಈರನ ಮೊಬೈಲ್ ರಿಂಗ್ ಆಗುತ್ತದೆ. ರಿಂಗ್ ಟೋನ್ "ಅಚ್ಚೆ ದಿನ್ ಆಯೆಂಗೇ, ಅಚ್ಚೇ ದಿನ್ ಆಯೆಂಗೇ" ಎಂದು ಕೂಗುತ್ತದೆ. ಇದರಿಂದ ಮತ್ತೆ ಕೆರಳಿದ ಕಾಳವ್ವ ಉಗ್ರಕಾಳಿ ಅವತಾರ ತಾಳುತ್ತಾಳೆ)

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ