ತುಪ್ಪಾ ಬೇಕಾ ತುಪ್ಪಾ (ಪ್ರಹಸನ -49)

   (ಪ್ರಹಸನ -49)

ತುಪ್ಪಾ ಬೇಕಾ ತುಪ್ಪಾ  

*****************************

 

(ಸಂಘದ ಸುಳ್ಳಿನ ಪ್ಯಾಕ್ಟರಿಯಿಂದಾ ಇದೀಗ ಹೊರಬಂದ ಲೇಟೆಸ್ಟ್ ಸುಳ್ಳನ್ನು ಕೇಸರಿ ಪಕ್ಷದ ವಿದೂಷಕನ ಬಾಯಲ್ಲಿ ಕೇಳಿ ಆನಂದಿಸಿ)

 

ಪಿಟೀಲು : ನೋಡಿ.. ನಮ್ಮ ಹಿಂದೂ ಶ್ರದ್ದಾ ಕೇಂದ್ರಗಳು ಅಂದ್ರೆ ಹಿಂದೂ ವಿರೋಧಿ ಕೈಪಕ್ಷಕ್ಕೆ ಆಗೋದಿಲ್ಲಾ... 

 

ಜನಸಾಮಾನ್ಯ : ಹೌದಾ ಅದೇಗೆ ಹೇಳ್ತೀರಿ?

 

ಪಿಟೀಲು : ಹಿಂದೂಗಳ ಆರಾಧ್ಯ ದೈವವಾದ ತಿರುಪತಿ ತಿಮ್ಮಪ್ಪನಿಗೆ ತುಪ್ಪ ಕೊಡೋದನ್ನ ನಿಲ್ಸಿ ದೇವರಿಗೆ ಅಪಚಾರ ಮಾಡ್ತಿದ್ದಾರೆ. ಇದು ಖಂಡಿತಾ ಖಂಡನೀಯ.

 

ಜನಸಾಮಾನ್ಯ : ಹೌದು ಅಷ್ಟಕ್ಕೂ ತಿಮ್ಮಪ್ಪನಿಗೆ ತುಪ್ಪಾ ಯಾಕೆ ಬೇಕು? ದೇವರ ಖಜಾನೆ ತುಂಬಾ ಹಣ ಜಣಜಣ ಅಂತಿದೆ. ಬೇಕಾದಷ್ಟು ತುಪ್ಪ ಕೊಂಡು ತಿಂದರಾಯ್ತು ಅಲ್ವಾ?

 

ಪಿಟೀಲು : ಲಡ್ಡು.. ವರ್ಡ್ ಪೇಮಸ್ ಲಡ್ಡು ಮಾಡೋಕೆ ಲಕ್ಷಾಂತರ ಟನ್ ತುಪ್ಪ ಬೇಕು. ಹಿಂದೂ ವಿರೋಧಿ ಸರಕಾರ ಬಂದ ಮೇಲೆ ನಂದಿನಿ ತುಪ್ಪವನ್ನ ತಿರುಪತಿಗೆ ಸರಬರಾಜು ಮಾಡೋದನ್ನೇ ನಿಲ್ಸಿದ್ದಾರೆ. ಇದು ಸಮಸ್ತ ಹಿಂದೂಗಳಿಗೆ ಮಾಡಿದ ದ್ರೋಹ. ನಮ್ಮ ಆರಾಧ್ಯ ದೇವರಿಗೆ ಮಾಡಿದ ವಿದ್ರೋಹ. ಇದನ್ನು ಹಿಂದೂಗಳು ಸಹಿಸಲು ಸಾಧ್ಯವೇ ಇಲ್ಲಾ.

 

ಜನಸಾಮಾನ್ಯ : ಛೇ ಎಲ್ಲಾದರೂ ಉಂಟೆ. ಇದು ಖಂಡಿತಾ ತಪ್ಪು. ದೇವರಿಗೆ ಹೀಗೆ ಮಾಡೋದಾ. ನೀವು ಹೇಳಿದ್ರಲ್ಲೂ ಪಾಯಿಂಟ್ ಐತೆ. ಆದರೂ...

 

ಸಿಎಂ ಸಿದ್ದಣ್ಣ : ಆದರೂ ಗೀದರೂ ಏನಿಲ್ಲಾ. ಇದೆಲ್ಲಾ ಸುಳ್ಳು. ಎಲ್ಲರಿಗೂ ಗೊತ್ತಿದೆ ಸುಳ್ಳೇ ಹೂಪಕ್ಷದವರ ಮನೆದೇವರು ಅಂತಾ. ಅವರ ಸರಕಾರ ಅಧಿಕಾರದಲ್ಲಿದ್ದಾಗಲೇ ತಿರುಪತಿಗೆ ತುಪ್ಪ ಸಪ್ಲೈ ಮಾಡೋದನ್ನ ನಿಲ್ಸಿದ್ರು. ಈಗ ನಮ್ಮ ಸರಕಾರದ ಮೇಲೆ ಸುಳ್ಳು ಹೇಳಿ ಗೂಬೆ ಕೂಡ್ಸೋದಕ್ಕೆ ನೋಡ್ತಿದ್ದಾರೆ. ಅವರು ಮೊದಲೇ ಸುಳ್ಳರು.. ಅವರ ಮಾತನ್ನ ಯಾರೂ ನಂಬಬಾರದು.

 

ಜನಸಾಮಾನ್ಯ : ಹೌದಾ. ಆದರೂ ಬೆಂಕಿ ಇಲ್ಲದೇ ಹೂಪಕ್ಷದಲ್ಲಿ ಹೊಗೆ ಬರೋದಿಲ್ಲ. ತಿಮ್ಮಪ್ಪನಿಗೆ ತುಪ್ಪ ನಿಲ್ಲಿಸಿ ತಪ್ಪು ಮಾಡಿದೋರು ಯಾರು.

 

ಸೀಟಿ ರವಿ : (ಪೂರ್ವಯೋಜನೆಯಂತೆ ಸೃಷ್ಟಿಸಲಾದ ಸುಳ್ಳನ್ನು ಗಂಭೀರವಾಗಿ ಸಮರ್ಥಿಸಿಕೊಳ್ಳುತ್ತಾ) ಇರಬಹುದು. ನಮ್ಮ ಸರಕಾರ ತುಪ್ಪ ನಿಲ್ಸಿದ್ರೆ ಇವರು ಶುರು ಮಾಡಿ ಹಿಂದೂ ಪರ ಕಾಳಜಿ ಇರೋರು ಅಂತಾ ತೋರಿಸಿಕೊಳ್ಳಬಹುದಿತ್ತು. ಆದರೂ ನನಗೆ ಬಂದ ಮಾಹಿತಿ ಪ್ರಕಾರ ಆಗಾಗ ನಮ್ಮ ಸರಕಾರವೂ ಒಂದಿಷ್ಡು ತುಪ್ಪ ತಿಮ್ಮಪ್ಪನಿಗೆ ಕೊಡ್ತಾ ಇತ್ತು. ಎಲ್ಲವನ್ನೂ ನಿಲ್ಲಿಸಿದ ಸರಕಾರ ಶ್ರದ್ದಾ ಕೇಂದ್ರಗಳನ್ನು ನಿರ್ಲಕ್ಷಿಸಿ ಹಿಂದೂ ವಿರೋಧಿ ಆಗಿದೆ. ಇದನ್ನ ಎಲ್ಲರೂ ಖಂಡಿಸಬೇಕು.

 

ಜನಸಾಮಾನ್ಯ : ಗೋವಿಂದಾ ಗೋವಿಂದ. ಏನಿದು ಗೊಂದಲ. ಹೂಪಕ್ಷದವರು ಒಂದು ಹೇಳ್ತಾರೆ, ಕೈ ಪಕ್ಷದವರು ಇನ್ನೊಂದು ಹೇಳ್ತಾರೆ. ಇದರಲ್ಲಿ ನಾವು ಯಾರನ್ನು ನಂಬೋದು?

 

ತಿರುಪತಿ ಆಡಳಿತಾಧಿಕಾರಿ : ಇದರಲ್ಲಿ ನಂಬೋದು ಬಿಡೋದು ಏನಿದೆ. ಟಿಟಿಡಿ ಅನ್ನೋದು ಸರಕಾರದ ಸುಪರ್ಧಿಯಲ್ಲಿರೋ ದೇವಸ್ಥಾನ. ಇಲ್ಲಿ ಏನೇ ಕೊಳ್ಳಬೇಕಾದ್ರೂ  ಟೆಂಡರ್ ಕರೀಬೇಕು. ತುಪ್ಪಕ್ಕಾಗಿ ಟೆಂಡರ್ ಕರೆದಾಗ ನಂದಿನಿ ತುಪ್ಪಕ್ಕಿಂತಾ ಕಡಿಮೆ ಕೋಟ್ ಮಾಡಿದವರಿಗೆ  ಸಪ್ಲೈ ಆರ್ಡರ್ ಕೊಟ್ಟಿದ್ದೇವೆ ಅಷ್ಟೇ

 

ಜನಸಾಮಾನ್ಯ : ಹೋ ಹಿಂಗಾ ವಿಷ್ಯಾ.. ರಾಜಕಾರಣಿಗಳ ಮಾತು ನಂಬೋದು ಹೆಂಗೆ ಗೋವಿಂದಾ. ನಮ್ಮ ಕಿವೀಲಿ ಲಾಲ್ಬಾಗ್ ಇಡೋಕೆ ಕಾಯ್ತಾ ಇರ್ತಾರೆ. ನಾವು ಜನಸಾಮಾನ್ಯರು ಯೋಚನೆ ಮಾಡಬೇಕಲ್ವಾ ಗೋವಿಂದಾ.

 

ಪಿಟೀಲು : ಏನು ಸೀಟಿ.. ನಮ್ಮ ಹೊಸ ಸುಳ್ಳಿನ ಪ್ರಾಡಕ್ಟ್ ವರ್ಕೌಟ್ ಆಗ್ತಿದೆಯಾ

 

ಸೀಟಿ : ಆಗದೇ ಇನ್ನೇನು. ನಾವು ಜನರ ನಂಬಿಕೆಯನ್ನ ಪ್ರಚೋದನೆ ಮಾಡಿ ಆಯ್ತಲ್ಲಾ, ನಮ್ಮ ಕೆಲಸಾ ಮುಗೀತು. ಇನ್ನೇನಿದ್ರೂ ನಮ್ಮ ಗೋದಿ ಮೀಡಿಯಾಗಳು ನಮ್ಮ ಸುಳ್ಳನ್ನ ಸಾವಿರ ಸಲ ಹೇಳಿ ಸತ್ಯ ಮಾಡೋ ಕೆಲಸ ಮಾಡ್ತೇವೆ ಬಿಡು. ನಡೀ ಹೈಕಮಾಂಡಿಗೆ ರಿಪೋರ್ಟ್ ಮಾಡೋಣ.

 

ಗೋದಿ ಮಾಧ್ಯಮ : ನೋಡಿದ್ರಲ್ಲಾ ವೀಕ್ಷಕರೆ. ತಿರುಪತಿ ದೇವಸ್ಥಾನ ಅಂದ್ರೆ ಸುಮ್ಮನೇನಾ? ಅದು ಹಿಂದೂಗಳ ಶ್ರದ್ದಾ ಕೇಂದ್ರ. ಅಲ್ಲಿಯ ಲಾಡು ಪ್ರಸಾದ ಅಂದ್ರೆ ಕನ್ನಡಿಗರಿಗೆ ಅಚ್ಚುಮೆಚ್ಚು. ಅಂತಾ ತಿರುಪತಿ ದೇವರಿಗೆ ನಾಮ ಹಾಕುವ ಕೆಲಸವನ್ನು ಈಗಿನ ಸರಕಾರ ಮಾಡ್ತಾ ಇದೆಯಾ? ತಿಮ್ಮಪ್ಪನಿಗೇ ನಂದಿನಿ ತುಪ್ಪಾ ಸಪ್ಲೈ ಮಾಡೋದನ್ನ ನಿಲ್ಸಿದೆಯಾ? ಇದರಿಂದಾ ಹಾಲು ಉತ್ಪಾದಿಸುವ ನಮ್ಮ ರೈತರಿಗೂ ನಷ್ಟವಾಗ್ತಿದೆಯಾ? ಕುರಿತು ರೋಚಕ ವಿವರಗಳನ್ನ ಹೇಳ್ತೀವಿ ಒಂದು ಚಿಕ್ಕ ಬ್ರೇಕ್ ನಂತರ..

 

( ಜಾಹಿರಾತಿನಲ್ಲಿ ಹಾಡು ತುಪ್ಪಾ ಬೇಕಾ ತುಪ್ಪಾ...)

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ