ಸೋಬಕ್ಕನ ಧರ್ಮ ಸಂಕಟ (ಪ್ರಹಸನ - 50)
(ಪ್ರಹಸನ - 50)
ಸೋಬಕ್ಕನ ಧರ್ಮ ಸಂಕಟ
************************************
( ಪತ್ರಕರ್ತ ಪರಮೇಶ ಅವಸರದಲ್ಲಿ ಅವತರಸಿ ಆತಂಕದಿಂದ)
ಪರಮೇಶಿ : ಸೋಬಕ್ಕಾ ಅನ್ಯಾಯವಾಯ್ತು ಸೋಬಕ್ಕಾ. ಪಾಪ ಅಪ್ರಾಪ್ತ ಹುಡುಗಿ ಸೋಬಕ್ಕಾ. ಮೂರ್ನಾಲ್ಕು ಜನ ಕಾಮುಕರು ಒಂದು ವರ್ಷದಿಂದ ಸೋಬಕ್ಕಾ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾರಂತೆ ಏನಾದರೂ ಮಾಡಕ್ಕಾ.
ಸೋಬಕ್ಕ : ಅತ್ಯಾಚಾರವಾ? ಎಲ್ಲಿ, ಯಾವಾಗ? ಅದೂ ಅಪ್ರಾಪ್ತೆ ಮೇಲೆ. ಇದು ಅನ್ಯಾಯಾ, ಘನಘೋರ ಅನ್ಯಾಯಾ? ಈ ಸರಕಾರ ಬಂದ ಮೇಲೆ ಈ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆ ಎಂಬುದಿಲ್ಲಾ. ಕಾಮುಕರು ಪೋಲೀಸರ ಭಯವೇ ಇಲ್ಲದೇ ರೇಪ್ ಮಾಡ್ತಾ ಇದ್ದಾರೆ. ಇದನ್ನ ನಾನು, ನನ್ನ ಪಕ್ಷ, ನಮ್ಮ ಸಂಘಪರಿವಾರ ಖಂಡಿಸ್ತೇವೆ.
ಪರಮೇಶಿ : ಬರೀ ಹೀಗೆ ಹೇಳಿದ್ರೆ ಹೇಗೆ ಸೋಬಕ್ಕಾ. ಏನಾದರೂ ಮಾಡಕ್ಕಾ. ಸಂತ್ರಸ್ತೆಗೆ ನ್ಯಾಯಾ ಬೇಕು, ರೇಪಿಸ್ಟರಿಗೆ ಶಿಕ್ಷೆಯಾಗಬೇಕು ಅಂತಾ ಹೋರಾಟ ಮಾಡ್ಬೇಕು ಅಲ್ವೇನಕ್ಕಾ.
ಸೋಬಕ್ಕ : ಬಿಡ್ತೀವಾ ನಾವು. ಇಂತಾದ್ದಕ್ಕೆ ಕಾಯ್ತಾ ಇರ್ತೇವೆ. ಯಾರಲ್ಲಿ ಕೂಡಲೇ ನಮ್ಮ ಮಹಿಳಾ ಮೋರ್ಚಾಗೆ ಸಿದ್ದವಾಗಲು ತಿಳಿಸಿ. ನಮ್ಮ ಪಕ್ಷದ ನಾಯಕರಿಗೆ ಕಾಲ್ ಮಾಡಿ ಹೋರಾಟ ತೀವ್ರವಾಗಿಸಲು ಸೂಚನೆ ಕೊಡಿ.
ಪರಮೇಶಿ : ಮತ್ತೆ ನೀವು ಈಗೇನ್ ಮಾಡ್ತೀರಿ ಸೋಬಕ್ಕಾ.
ಸೋಬಕ್ಕ : ಈ ಕೂಡಲೇ ಸಂತ್ರಸ್ತೆ ಮನೆಗೆ ಹೋಗಿ ಸಾಂತ್ವನ ಹೇಳ್ತೇನೆ, ಮಾಧ್ಯಮದವರಿಗೆಲ್ಲಾ ಅಲ್ಲಿಗೆ ಬರಲು ತಿಳಿಸಿ. ( ಕೇಸರಿ ಅಂಗವಸ್ತ್ರ ಧರಿಸಿ ಚಪ್ಪಲಿ ಹಾಕಿಕೊಂಡು ಹೊರಡಲು ಅವಸರಿಸುತ್ತಾಳೆ)
ಪರಮೇಶಿ : ಅಲ್ಲಾ ಸೋಬಕ್ಕಾ ನೀವೊಬ್ಬರೇ ಹೋದರೆ ಹೆಂಗೆ, ನಮ್ಮ ಮಾಳವೀಕಕ್ಕಾ, ಶೃತಿಯಕ್ಕಾರವರಿಗೂ ಜೊತೆ ಕರೆದುಕೊಂಡು ಹೋಗಬೇಕಲ್ವಾ. ಹಂಗೆ ಮಹಿಳಾ ಆಯೋಗದ ಖುಷ್ಬು ಅಕ್ಕನಿಗೂ ಬಂದು ವಿಚಾರಣೆ ಮಾಡಲು ತಿಳಿಸಿ ಸೋಬಕ್ಕ.
ಸೋಬಕ್ಕ : ಮೊದಲು ನಾನು ಹೋಗಿ ಈ ಸರಕಾರದ ವಿರುದ್ದ ಟ್ರೆಂಡ್ ಕ್ರಿಯೇಟ್ ಮಾಡ್ತೇನೆ. ಆಮೇಲೆ ಅವರು ಬರಲಿ. ಏ ಡ್ರೈವರ್ ಕಾರು ತೆಗಿಯೋ. ಹಂಗೆ ಹೋಗುವ ಮೊದಲು ಕೇಶವಕೃಪಾಕ್ಕೆ ಬೇಟಿಯಾಗಿ ಆ ನಂತರ ಸಂತ್ರಸ್ತೆ ಮನೆಗೆ ಹೊಗೋಣ.
ಪರಮೇಶಿ : ಇಂತಾ ತುರ್ತು ಸಮಯದಲ್ಲಿ ಅಲ್ಲಿಗೆ ಯಾಕೆ ಸೋಬಕ್ಕಾ, ಡೈರೆಕ್ಟಾಗಿ ವಿಕ್ಟಿಂ ಮನೆಗೆ ಹೋದರಾಗೋದಿಲ್ವಾ?
ಸೋಬಕ್ಕ : ನೋಡು ಪರಮೇಶಿ. ಕೇಶವಕೃಪಾದ ಕೃಪೆ ಇಲ್ಲದೇ ನಮ್ಮ ಪಕ್ಷದಲ್ಲಿ ಒಂದು ಹುಲ್ಲು ಕಡ್ಡಿ ಕೂಡಾ ಕದಲೋದಿಲ್ಲಾ, ಕದಲಕೂಡದು. ಶಿಸ್ತು ಅಂದ್ರೆ ಅದು. ವೇದವಾಕ್ಯ ಅಂದ್ರೆ ಕೇಶವಕೃಪಾದ್ದು.
ನಡೀ ಮೊದಲು ಅಲ್ಲಿಗೆ ಹೋಗಿ ಒಂದು ಮಾತು ಹೇಳಿ ಆಮೇಲೆ ಸಂತ್ರಸ್ತೆ ಮನೆಗೆ ಹೊಗೋಣ.
ಪರಮೇಶಿ : ಸರಿ ಆಯ್ತು ಸೋಬಕ್ಕಾ.. ನಾನೂ ಬರ್ತೇನೆ ನಡೀರಿ.
****************
( ಕೇಶವಕೃಪಾದಿಂದ ಕೋಪದಿಂದ ಉರಿಯುತ್ತಲೇ ಹೊರಗೆ ಬಂದ ಸೋಬಕ್ಕ)
ಸೋಬಕ್ಕ : ಎಲ್ಲೋ ಆ ಪರಮೇಸಿ. ಯೇ ಏಬರೇಸಿ ಹಿಂದೆ ಮುಂದೆ ನೋಡದೇ ಏನೇನೋ ಸುದ್ದಿ ತಂದು ನನ್ನ ತಲೆ ತಿಂತಿಯಲ್ಲೋ.
ಪರಮೇಶಿ : ಯಾಕಕ್ಕಾ ಏನಾಯ್ತು. ರೇಪ್ ಆಗಿದ್ದು ಪಕ್ಕಾ ಅಕ್ಕಾ. ನಿರಂತರ ರೇಪು. ಒಳ್ಳೇ ಸೆನ್ಸೇಶನಲ್ ನ್ಯೂಜು. ಸರಕಾರಕ್ಕೆ ಇರುಸುಮುರಿಸು ಮಾಡಿ ಜನರನ್ನು ಎತ್ತಿಕಟ್ಟಲು ಇದು ಒಳ್ಳೇ ಅವಕಾಶ ಕಣಕ್ಕಾ.
ಸೋಬಕ್ಕ : ಯೋ ಇಲ್ಲಿ ಇರಿಸು ಮುರಿಸಾಗಿದ್ದು ನನಗಯ್ಯಾ. ಎಲ್ಲಿ ಈ ರೇಪ್ ಪ್ರಕರಣ ಆಗಿದ್ದು?
ಪರಮೇಶಿ : ದಕ್ಷಿಣ ಕನ್ನಡದ ವಿಟ್ಲದಲ್ಲ
ಸೋಬಕ್ಕ : ಯಾರು ರೇಪ್ ಮಾಡಿದ್ದು?
ಪರಮೇಶಿ : ಗಂಡಸರು.
ಸೋಬಕ್ಕ : ಯೋ.. ರೇಪ್ ಮಾಡೋದು ಗಂಡಸರು ಅಂತಾ ಎಲ್ಲರಿಗೂ ಗೊತ್ತು. ರೇಪಿಸ್ಟಗಳು ಯಾರು?
ಪರಮೇಶಿ : ಯುವಕರು ಸೋಬಕ್ಕಾ, ನಾಲ್ಕಾರು ಜನರು ಸಮಯ ಸಿಕ್ಕಾಗಲೆಲ್ಲಾ ಅತ್ಯಾಚಾರ ಮಾಡಿದ್ದಾರೆ.
ಸೋಬಕ್ಕ : ಆ ರೇಪಿಸ್ಟಗಳು ನಮ್ಮ ಸಂಘಪರಿವಾರದವರಂತೆ ಕಣಯ್ಯಾ.
ಪರಮೇಶಿ : ಆದರೇನಾಯ್ತು? ರೇಪಾಗಿದ್ದಂತೂ ನಿಜ ಅಲ್ವೇನಕ್ಕಾ. ಅತ್ಯಾಚಾರಿಗಳು ಯಾರು ಅನ್ನೋದು ಮುಖ್ಯಾನಾ ಇಲ್ಲಾ ಯಾವ ಸಂಘಟನೆಯವರು ಅನ್ನೋದು ಇಂಪಾರ್ಟಂಟಾ?
ಸೋಬಕ್ಕ : ಯೋ ಏಬರೇಸಿ, ನಮ್ಮ ಮನೆಯವರೇ ತಪ್ಪು ಮಾಡಿದ್ರೆ ಅವರ ಕರ್ಮವನ್ನು ಕಾಪಾಡೋದು ನಮ್ಮ ರಾಜಕೀಯ ಧರ್ಮ. ಹೀಗೆ ಕಳ್ರು ಸುಳ್ರು ವಂಚಕರು ಅತ್ಯಾಚಾರಿಗಳು ಅಂತಾ ನಮ್ಮ ಕಾರ್ಯಕರ್ತರನ್ನ ನಾವೇ ಅವಮಾನಿಸಿದ್ರೆ ನಮ್ಮ ಪಕ್ಷದಲ್ಲಿ ಯಾರಯ್ಯಾ ಉಳಿತಾರೆ?
ಪರಮೇಶಿ : ಪಾಪ ಆ ಹುಡುಗಿ. ಇನ್ನೂ ಸಣ್ಣ ವಯಸ್ಸು. ಅವಳಿಗಾದರೂ ನ್ಯಾಯ ಕೊಡಿಸಲು ದ್ವನಿ ಎತ್ತಬೇಕಲ್ವೇನಕ್ಕಾ?
ಸೋಬಕ್ಕ : ಯಾರಯ್ಯಾ ಆ ಹುಡುಗಿ?
ಪರಮೇಶಿ : ನಮ್ಮ ಹಿಂದೂ ಧರ್ಮದ ಹುಡುಗಿ ಕಣಕ್ಕಾ. ಹಿಂದೂ ಮಹಿಳೆಯರ ರಕ್ಷಣೆ ನಿಮ್ಮ ಹೊಣೆ ಅಲ್ವಾ ಸೋಬಕ್ಕಾ.
ಸೋಬಕ್ಕ : ಅವಳು ದಲಿತರ ಹುಡುಗಿಯಂತೆ. ನೋಡಯ್ಯಾ, ಆಪ್ ದಿ ರಿಕಾರ್ಡ್ ಒಂದು ಮಾತು ಹೇಳ್ತೀನಿ ಕೇಳ್ಕೋ. ನಮ್ಮದು ಹೊರಗೆ ಹೇಳೊಕೆ
ಹಿಂದೂ ಪರ ಪಕ್ಷ, ತೋರ್ಸೋಕೆ ಹಿಂದೂ ರಕ್ಷಕ ಸಂಘ. ಹಿಂದೂ ಅನ್ನೋದು ನಮ್ಮ ಜಂಡಾ. ಆದರೆ ನಮ್ಮ ಅಜೆಂಡಾ ಇರೋದು ಹಿಂದುತ್ವ. ಅರ್ಥ ಆಯ್ತಾ. ನಮ್ಮ ಹಿಂದುತ್ವದ ವ್ಯಾಪ್ತಿಯೊಳಗೆ ದಲಿತರು ದಮನಿತರು ಆದಿವಾಸಿಗಳು ಅತೀ ಹಿಂದುಳಿದವರೆಲ್ಲಾ ಬರೋದಿಲ್ಲಾ. ಅದಕ್ಕೆ ದಲಿತ ಯುವತಿಯ ಮೇಲೆ ಏನೇ ಅನ್ಯಾಯವಾಗಿದ್ರೂ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲಾ. ಸೋ ಸಂತ್ರಸ್ತೆ ಮನೆಗೆ ಬೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಮಾಧ್ಯಮದವರಿಗೆ ಬರಕೂಡದು ಎಂದು ಸಂದೇಶ ಕಳಿಸಿಯಾಗಿದೆ.
ಪರಮೇಶಿ : ಏನಕ್ಕಾ ಇದು. ನೀವೂ ಒಬ್ಬ ಮಹಿಳೆಯಾಗಿ, ಇನ್ನೊಬ್ಬ ಹುಡುಗಿಗೆ ಅನ್ಯಾಯವಾದರೆ ಹೆಂಗಕ್ಕಾ ಗೊತ್ತಿದ್ದೂ ಸುಮ್ಕಿರ್ತೀರಿ. ನಿಮ್ಮ ಹೆಂಗರಳು ಹೆಂಗೆ ಒಪ್ಪುತ್ತೆ.
ಸೋಬಕ್ಕಾ : ಇದರಲ್ಲಿ ಹೆಂಗರಳು ಗಂಡ್ಗರಳು ಅಂತಾದ್ದೇನೂ ಇಲ್ಲಾ. ಇರೋದು ತೋರಿಸೋಕೆ ಒಂದು ಜಂಡಾ ಮತ್ತು ಅನುಷ್ಟಾನಕ್ಕೆ ಬೇರೊಂದು ಅಜೆಂಡಾ. ಇಷ್ಟೇ ನಮ್ಮ ರಾಜಕೀಯ. ಎಲ್ಲಾ ಕೇಶವದ ಕೃಪೆ ಅಷ್ಟೇ. ಹೋಗು ಹೋಗಿ ಬೇರೆ ಕೆಲ್ಸಾ ನೋಡ್ಕೋ. ಆ ಉಡುಪಿ ವಿಡಿಯೋ ಪ್ರಕರಣಕ್ಕೆ ಆದಷ್ಟು ಉಪ್ಪು ಕಾರ ಹಚ್ಚಿ ಬ್ರೇಕಿಂಗ್ ನ್ಯೂಜ್ ಕೊಡ್ತಾ ಇರು.. ಆಯ್ತಾ.. ( ಹೊರಡುವಳು. ಪರಮೇಶಿ ಪೆಕರನಂತೆ ನೋಡುವನು)
ಪರಮೇಶಿ : ನೋಡಿದ್ರಲ್ಲಾ ವೀಕ್ಷಕರೆ. ಈ ಹಿಂದುತ್ವವಾದಿಗಳಿಗೆ ದಲಿತ ಮಹಿಳೆಯರು ಅಂದ್ರೆ ಯಾಕಿಷ್ಟು ತಾತ್ಸಾರ ಅಂತಾ. ತಮ್ಮ ಸಂಘದ ಅಂಗಗಳು ಅದೆಷ್ಟೇ ಕೆಟ್ಟ ಕೆಲಸ ಮಾಡಿದ್ರೂ ಅವರನ್ನ ಪ್ರತ್ಯಕ್ಷವಾಗಿ ಇಲ್ಲಾ ಪರೋಕ್ಷವಾಗಿ ಬೆಂಬಲಿಸುವುದೂ ಇವರ ತೆರೆಯ ಹಿಂದಿನ ನೀತಿ ರೀತಿ. ಹೇಳುವುದಕ್ಕೆ ಮಾತ್ರ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು. ಆದರೆ ನಿಜ ಏನೆಂದರೆ ಎಲ್ಲರೂ ಹಿಂದೆ ನಾವು ಮಾತ್ರ ಮುಂದೆ ಅನ್ನೋದು. ಇದೇ ಸಂತ್ರಸ್ತ ಹುಡುಗಿ ಮೇಲ್ಜಾತಿಯವಳೇನಾದ್ರೂ ಆಗಿದ್ರೆ, ರೇಪಿಸ್ಟರಲ್ಲಿ ಒಂದಾದರೂ ಮುಸ್ಲಿಂ ಯುವಕನ ಹೆಸರು ಇದ್ದಿದ್ದರೆ, ಅಯ್ಯೋ ಇಷ್ಟೊತ್ತಿಗೆ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳಲಾಗುತ್ತಿತ್ತು. ಸಿಕ್ಕಲ್ಲೆಲ್ಲಾ ಬೆಂಕಿ ಹಚ್ಚಲಾಗುತ್ತಿತ್ತು. ಹಿಂದೂ ಮಹಿಳೆಯರಿಗೆ ರಕ್ಷಣೆ ಕೊಡದ ಸರಕಾರವನ್ನು ಕಿತ್ತೆಸೆಯಬೇಕು ಅಂತಾ ಘೋಷಣೆಗಳು ಮೊಳಗುತ್ತಿದ್ದವು. ಕೋಮುಗಲಭೆಗಳೂ ಆರಂಭವಾಗುತ್ತಿದ್ದವು. ಮತ್ತೆ ಒಂದಿಷ್ಟು ಹೆಣಗಳು. ಶವಗಳ ಮೇಲೆ ಮತ್ತೆ ಬ್ರೇಕಿಗ್ ನ್ಯೂಜ್ ಗಳು. ಒಟ್ಟಾರೆಯಾಗಿ ಶಾಂತಿ ಸುವ್ಯವಸ್ಥೆ ಅಸ್ತವ್ಯಸ್ತ. ಇದೇ ಕಣ್ರಿ ರಾಜಕೀಯ. ಇದೇ ಮಾರ್ರೆ ಸಮಾಜದ ಸೌಹಾರ್ಧತೆ ಮೇಲೆ ಈ ಸಂಘಿ ಸಂತಾನದವರು ಮಾಡುವ ಗಾಯ. ಶಾಂತಿ ನೆಮ್ಮದಿ ಕಲಕಿ ಪ್ಯಾಸಿಸ್ಟ್ ಆಡಳಿತ ಖಾಯಂ ಮಾಡುವುದೇ ಇವರ ಧ್ಯೇಯ.
( ಪರಮೇಶಿ ಪೋನ್ ರಿಂಗಿಂಗ್. ಚಾನೆಲ್ ಕಚೇರಿಯಿಂದ ಕಾಲ್)
ಕಚೇರಿ : ಹಲೋ ಪರಮೇಶಿ ಕೇಳ್ತಾ ಇದೆಯಾ? ದಲಿತ ಹುಡುಗಿಯ ರೇಪ್ ಕೇಸ್ ಕುರಿತು ಸೋಬಕ್ಕನವರ ಬೈಟ್ ತರಲೇಬೇಕಂತೆ.
ಪರಮೇಶಿ : ಸೋಬಕ್ಕನವರು ಮೌನವೃತದಲ್ಲಿದ್ದಾರಂತೆ. ನೋ ಕಾಮೆಂಟ್ಸ್ ಅಂತಾ ಸನ್ನೆ ಮೂಲಕ ಹೇಳ್ತಿದ್ದಾರೆ.
ಕಚೇರಿ : ಹೋಗಲಿ ತೀರ್ಥಹಳ್ಳಿಯಲ್ಲಿ ಎಬಿವಿಪಿ ಅಧ್ಯಕ್ಷ ಮಾಡಿದ ಕಾಲೇಜು ಹುಡುಗಿಯರ ಬೆತ್ತಲೆ ವಿಡಿಯೋ ಕುರಿತಾದರೂ ಅವರ ಬೈಟ್ ತಗೊಂಡು ಬರೋಕಾಗುತ್ತಾ.
ಪರಮೇಶಿ : ಅಕ್ಕನವರು ಕೇಶವಕೃಪಾದಿಂದ ಈಗ ತಾನೆ ಹೊರಗೆ ಬಂದು ಮನೆಗೆ ಹೊರಟರು. ಅವರ ಬಾಯಿಗೆ ಪ್ಲಾಸ್ಟರ್ ಪಟ್ಟಿ ಹಾಕಿದಂತಿತ್ತು.
ಸೋಬಕ್ಕನವರು ಈಗ ಬಾಯಿ ಬಿಡುವ ಪರಿಸ್ಥಿತಿಯಲ್ಲಿ ಇಲ್ಲಾ. ಇರಿ ಮಾಳವಿಕ ಅಕ್ಕ ಮತ್ತು ಶೃತಿಯಲ್ಲಾ ಬರ್ತಿದ್ದಾರೆ.
ಪರಮೇಶಿ : ಅಕ್ಕಾ ಮಾಳವೀಕಕ್ಕಾ.. ದಲಿತ ಯುವತಿಯ ಮೇಲೆ ನಡೆಸಿದ ರೇಪ್ ದೌರ್ಜನ್ಯ ಕುರಿತು ಏನು ಹೇಳ್ತೀರಾ? ಶೃತಿಯಕ್ಕಾ ನೀವು?
( ಇಬ್ಬರೂ ಮಹಿಳೆಯರ ಬಾಯಿಗೆ X ಪ್ಲಾಸ್ಟರ್ ಹಾಕಲಾಗಿತ್ತು. ಅವರಿಬ್ಬರು ನೋ ಕಾಮೆಂಟ್ಸ್ ಎನ್ನುವ ಹಾಗೆ ಕೈ ಅಲ್ಲಾಡಿಸಿ ಅಡ್ಡಬಂದ ಪರಮೇಶಿಯನ್ನು ದೂಕಿ ಕಾರು ಹತ್ತಿ ಹೊರಟರು. ನರಳುತ್ತಾ ಪರಮೇಶಿ ಮೇಲೇಳಲು ಪ್ರಯತ್ನ. ಅಷ್ಟರಲ್ಲಿ ಕೃಪಾದಿಂದ ಹೊರಗೆ ಬಂದ ಕೂಗುಮಾರಿ ಬಿರುದಾಂಕಿತ ತೇಜಸ್ವಿನಿಯಕ್ಕನವರು ಪರಮೇಶಿ ಬಾಯಿಗೆ X ರೀತಿಯ ಪ್ಲಾಸ್ಟರ್ ಅಂಟಿಸಿ ಹೋಗುತ್ತಾರೆ. ಪರಮೇಶಿ ಆ ಹೂ ಹೂಂ ಎನ್ನುತ್ತಾ ತೇಜಮ್ಮಳ ಹಿಂದೆ ಬೈಟಿಗಾಗಿ ಓಡುತ್ತಾನೆ.)
*- ಶಶಿಕಾಂತ ಯಡಹಳ್ಳಿ*
Comments
Post a Comment