ಬಣ್ಣದೊಳೇನಿದೆಯಣ್ಣಾ ( ಪ್ರಹಸನ-51)
( ಪ್ರಹಸನ-51)
ಬಣ್ಣದೊಳೇನಿದೆಯಣ್ಣಾ
******************************
( ಸಿಟಿಯಲ್ಲಿ ಸೆಟ್ಲಾಗಿರೋ ಬಿಳಿಯಪ್ಪ ಹಲವಾರು ವರ್ಷಗಳ ನಂತರ ಹುಟ್ಟಿದೂರಿಗೆ ಬಂದಾಗ)
ಕರಿಯಪ್ಪ : ಓಹೋ ಬಿಳಿಯಪ್ಪ ಅಲ್ವಾ. ನಮಸ್ಕಾರ, ಯಾವಾಗ್ ಬಂದೆ ಕಣ್ಲಾ ಊರಿಗೆ.
ಬಿಳಿಯಪ್ಪ : ನಿನ್ನ ನಮಸ್ಕಾರಾ ನೀನೇ ಇಟ್ಕೊಂಡು ಸಾಯಿ. ಛೀ ದೂರಾ ನಿಲ್ಲು. ಯಾರು ನೀನು?
ಕರಿಯಪ್ಪ : ನಾನು ಕರಿಯಾ. ನಿಂಜೊತೆ ಏಳನೇ ಕ್ಲಾಸ್ ವರೆಗೂ ಇದೇ ಊರಲ್ಲಿ ಓದ್ತಾ ಇದ್ದೆ ನೆನಪಿಲ್ವಾ?
ಬಿಳಿಯಪ್ಪ : ಹೋ ಕರಿಯಾ ಅಲ್ವಾ. ಹೆಸರಿಗೆ ತಕ್ಕಂತೆ ಇದೆ ಬಿಡು ನಿನ್ನ ಬಣ್ಣ. ಅಲ್ಲಲೇ ಪೇರ್ ಆಂಡ್ ಲೌವ್ಲಿ ಅದೂ ಇದೂ ಹಚ್ಕೊಂಡು ಸ್ವಲ್ಪ ಬೆಳ್ಳಗಾಗಬೇಕಲ್ವಾ. ಪೂವರ್ ಪೆಲೋ. ಕರೆಂಟ್ ಹೊಡದ್ ಕಾಗೆ ತರಾ ಕರಕಲಾಗಿದ್ದೀಯಲ್ಲೋ.
ಕರಿಯಪ್ಪ : ದಿನಾ ಬಿಸಲಲ್ಲಿ ದುಡಿಯೋ ಜನ ನಾವು. ಬಣ್ಣ ತಗೊಂಡು ಏನ್ ಮಾಡೋದು. ಬದುಕೋದಕ್ಕೆ ಮೈಬಣ್ಣ ಮುಖ್ಯ ಅನಿಸೋದಿಲ್ಲ ಬಿಡು.
ಬಿಳಿಯಪ್ಪ : ಆಗುತ್ತೆ.. ಮೈಬಣ್ಣವೂ ಮುಖ್ಯ ಆಗುತ್ತೆ. ಈಗ ಒಂದು ಕರಿ ನಾಯಿಮರಿ, ಇನ್ನೊಂದು ಬಿಳಿ ನಾಯಿಮರಿ ಇದ್ರೆ ನೀನು ಯಾವುದನ್ನ ಇಷ್ಟಪಟ್ಟು ಸಾಕ್ತೀ.
ಕರಿಯಪ್ಪ : ಯಾವುದು ಚುರುಕಾಗಿರುತ್ತೋ, ನಿಯತ್ತಿನಿಂದ ಮನೆ ಕಾಯುತ್ತೊ ಅದನ್ನ ಸಾಕ್ತೇನೆ. ಬಣ್ಣ ತಗೊಂಡು ಏನ್ ಮಾಡೋದು, ಕೆಲಸಕ್ಕ ಬರುತ್ತಾ ಇಲ್ವಾ ಅನ್ನೋದಷ್ಟೇ ಮುಖ್ಯ. ನೀನಾದ್ರೆ ಯಾವ ನಾಯಿ ಸಾಕ್ತಿದ್ದೆ.
ಬಿಳಿಯಪ್ಪ : ನನಗೆ ಅಂದಾ ಚೆಂದಾ ಕಲರ್ರು ಪಿಗರ್ರು ಅಟ್ರ್ಯಾಕ್ಷನ್ ಮುಖ್ಯ ಕಣೋ. ಬಿಳಿ ನಾಯಿಮರೀನೇ ಇರಲಿ, ಅದು ಏನೂ ಮಾಡದೇ ಇದ್ರೂ ಚಿಂತೆಯಿಲ್ಲಾ,
ಮನೆಗೆ ಬಂದವರಿಗೆ ಬಾಲ ಅಲ್ಲಾಡ್ಸಿದ್ರೆ ಸಾಕು. ಹೋಗಲಿ ಇನ್ನೊಂದು ಪ್ರಶ್ನೆ ಕೇಳ್ತೀನಿ.
ಕರಿಯಪ್ಪ : ಅದೇನು ಕೇಳ್ತೀ ಕೇಳಪ್ಪಾ.
ಬಿಳಿಯಪ್ಪ : ಈಗ ನೀನು ಮದುವೆ ಆಗೋದಕ್ಕೆ ಹೆಣ್ಣು ನೋಡೋದಕ್ಕೆ ಹೋಗ್ತೀಯಾ ಅಂತಿಟ್ಕೊ. ಅಕ್ಕ ಬೆಳ್ಳಗೆ ತೆಳ್ಳಗೆ ಇದ್ದಾಳೆ. ತಂಗಿ ಕಪ್ಪಗೆ ದಪ್ಪಗೆ ಇದ್ದಾಳೆ.. ಇಬ್ಬರಲ್ಲಿ ಯಾರನ್ನ ಒಪ್ಪಿಕೊಳ್ತೀ.
ಕರಿಯಪ್ಪ : ತಳ್ಳಗೆ ರೋಗಿಷ್ಟಳ ಹಾಗೆ ಬೆಳ್ಳಗೆ ಬಿಳಿಚಿಕೊಂಡವಳು ಯಾರಿಗೆ ಬೇಕೇಳು. ಕಪ್ಪಗಿದ್ರೂ ದಷ್ಟಪುಷ್ಟವಾಗಿರೋ ಹುಡುಗೇನೇ ಇರಲಿ ಅಂತೀನಿ.
ಬಿಳಿಯಪ್ಪ : ನಿನಗೆ ಟೇಸ್ಟೇ ಇಲ್ಲಾ ಬಿಡು. ಸೌಂದರ್ಯ ಅಂದ್ರೆ ಏನು ಅಂತಾನೇ ನಿನಗೆ ಗೊತ್ತಿಲ್ಲಾ. ಗುಗ್ಗು ನೀನು ಹಳ್ಳಿ ಗುಗ್ಗು.
ಕರಿಯಪ್ಪ : ನೀನೇನಾದ್ರೂ ಅನ್ಕೋ. ಬಣ್ಣ ಯಾವುದೇ ಇರಲಿ, ಬಹುದಿನ ಬಾಳಿಕೆ ಬರೋದೇ ಇರಲಿ. ಹೌದು ನೀನು ಇಷ್ಟೊಂದು ಬೆಳ್ಳಗಾಗಿದ್ದೀಯಲ್ಲಾ ಹೊಟ್ಟಿಗೆ ಏನು ತಿಂತೀ?
ಬಿಳಿಯಪ್ಪ : ಬಿಳಿಅಕ್ಕಿ ಅನ್ನವನ್ನ ದಿನಾ ತಿಂತಾ ಇರೋದಿಕ್ಕೆ ಬೆಳ್ಳಗೆ ಇದ್ದೀನಯ್ಯಾ? ಪಿಜ್ಜಾ ಬರ್ಗರ್ ನನ್ನ ಪೆವರೇಟ್.
ಕರಿಯಪ್ಪ : ಬಿಪಿ ಶುಗರ್ರು ಇನ್ನೂ ಬಂದಿಲ್ವಾ?
ಬಿಳಿಯಪ್ಪ : ಹೋ ಅವೆಲ್ಲಾ ಈಗ ಕಾಮನ್. ನನಗೂ ಬಂದಿವೆ. ಅದರಲ್ಲೇನೂ ವಿಶೇಷ ಇಲ್ಲಾ ಬಿಡು.
ಕರಿಯಪ್ಪ : ಇದೆ.. ಅಲ್ಲೇ ವಿಷಯ ಇದೆ. ನೋಡು ನಾವು ಹಳ್ಳಿ ಜನ, ಮೈಮುರಿದು ದುಡೀತೇವೆ, ರಾಗಿ ಮುದ್ದೆ ತಿಂತೇವೆ.. ಯಾವ ರೋಗಾನೂ ಇಲ್ಲಾ, ನಿನ್ನ ಹಾಗೆ ಹೊಟ್ಟೇನೂ ಬರೋದಿಲ್ಲ, ಬಿಪಿ ಶುಗರ್ರು ಹತ್ತಿರಾ ಸುಳಿಯೋದಿಲ್ಲ. ಆರಾಮಾಗಿದ್ದೇವೆ.
ಬಿಳಿಯಪ್ಪ : ಏ ಬೆಪ್ಪಾ. ಆರೋಗ್ಯಕ್ಕಿಂತಾ ಅಂದಾ ಮುಖ್ಯಾನೋ ಮೂರ್ಖಾ. ಅನಾರೋಗ್ಯ ಆದ್ರೆ ಡಾಕ್ಟರ್ಗಳಿದ್ದಾರೆ. ನಿನ್ನಂಗೆ ಕರ್ರಗೆ ಕರಕಲಾಗಿದ್ರೆ ಯಾರೂ ನಿನ್ನ ಕಡೆ ಮೂಸಿ ಸಹ ನೋಡೋದಿಲ್ಲಾ ತಿಳ್ಕೊ.
ಕರಿಯಪ್ಪ : ಅಲ್ಲಾ ಬಿಳಿಯಾ. ನಾನು ನನ್ನಂತೋರು ಬಿಸಲಲ್ಲಿ ಬೆಂದು ಬಣ್ಣ ಸುಟ್ಟಕೊಂಡು ಬೆಳೆ ಬೆಳೆದ್ರೆನೇ ನಿನ್ನಂತಾ ನೆರಳಲ್ಲಿ ಕೂತು ತಿನ್ನೋ ಜನರ ಹೊಟ್ಟೆಗೆ ಊಟ ಸಿಗೋದು. ಬಣ್ಣ ಮಾಸುತ್ತೆ ಅಂತಾ ನಾವೂ ಮನೇಲಿ ಕೂತಿದ್ರೆ ನಿಮ್ಮಂತಾ ನಾಜೂಕಯ್ಯನೋರು ಏನ್ರಪ್ಪಾ ತಿಂತಿದ್ರಿ? ಹೆಂಗಪ್ಪಾ ಬದುಕ್ತಿದ್ರಿ. ನಿಮ್ಮ ಈ ಮೈಬಣ್ಣ ಹೊಟ್ಟೆಗೆ ಊಟ ಹಾಕುತ್ತಾ, ಇಲ್ಲಾ ಹಸಿವೇನೇ ಆಗದಂಗೆ ಕಾಪಾಡುತ್ತಾ?
ಬಿಳಿಯಪ್ಪ : ಯಸ್.. ನೀ ಹೇಳೋದ್ರಲ್ಲೂ ಪಾಯಿಂಟ್ ಇದೆ. ಆದರೂ ಸೌಂದರ್ಯ ಅನ್ನೋದು ಇದೆಯಲ್ಲಾ ಅದಕ್ಕೆ ಆಕರ್ಷಣೆ ಮರ್ಯಾದೆ ಜಾಸ್ತಿ.
ಕರಿಯಪ್ಪ : ಹಂಗಂತಾ ಯಾರು ಹೇಳಿದ್ದಪ್ಪಾ. ಸೌಂದರ್ಯ ಅನ್ನೋದು ಬಣ್ಣದಲ್ಲಿ ಇರೋದಿಲ್ಲ ನೋಡುವವರ ಕಣ್ಣಲ್ಲಿರುತ್ತೆ. ಬಿಳಿ ಬಣ್ಣದ ಮೇಲುರಮೆ ಅನ್ನೋದು ಕಷ್ಟಪಟ್ಟು ದುಡಿಯದೇ ಕುಳಿತು ತಿನ್ನುವ ನಿನ್ನಂತಾ ಮೇಲ್ವರ್ಗದವರ ಮೆದುಳಲ್ಲಿರುತ್ತೆ. ಬ್ಲಾಕ್ ಇಸ್ ಬ್ಯೂಟಿ ಅನ್ನೋದು ಕೇಳಿಲ್ವಾ. ನಿನ್ನ ಕೂದಲು ಕಪ್ಪಾಗಿದ್ರೇನೇ ಚೆಂದ, ಬಿಳಿಯಾದರೆ ಮುದಿಯಾದಂತೆ ಆತಂಕ. ನಿನ್ನ ಕಣ್ಣಲ್ಲಿರುವ ಬಿಳಿಪಿನ ನಡುವೆ ಕಪ್ಪು ಮಸೂರ ಇದ್ದರೇನೇ ಅಂದ. ಅದೂ ಇಲ್ಲದೇ ಬರೀ ಬಿಳಿಯಿದ್ದರೆ ಭೂತದಂತೆ ಕಾಣುವೆ ಕಂದಾ.
ಬಿಳಿಯಪ್ಪಾ : ಹೌದು.. ಆದರೂ ಬಿಳಿ ಚರ್ಮಕ್ಕಿರೋ ಅಕರ್ಷಣೆ ನೋಡಲು ಆನಂದ.
ಕರಿಯಪ್ಪ : ಒಂದು ಕೆಲಸ ಮಾಡೋಣ. ಬಾ ನಾವಿಬ್ಬರೂ ಒಂದು ಗಂಟೆ ಈ ಉರಿಬಿಸಲಲ್ಲಿ ನಿಲ್ಲೋಣ.
ಬಿಳಿಯಪ್ಪ : ನೋ.. ನನ್ನ ಬಣ್ಣವೂ ಮಾಸಿ ಹೋಗಿ ನಿನ್ನಂತೆ ಕಪ್ಪಾಗುತ್ತೆ.
ಕರಿಯಪ್ಪ : ಹಾಂ ಜಾಣ. ಈಗ ಗೊತ್ತಾಯ್ತಾ ನಿಂದು ಬಿಸಿಲಿಗೆ ಬಣ್ಣ ಬದಲಾಯಿಸೋ ನಕಲಿ ಬಣ್ಣ ಅಂತಾ. ನಮ್ಮ ಚರ್ಮ ಕಪ್ಪಾದರೂ ಅದು ಅಸಲಿ ಬಣ್ಣ. ಮಾಸೋದೂ ಇಲ್ಲಾ, ಬದಲಾಗೋದೂ ಇಲ್ಲಾ.
ಬಿಳಿಯಪ್ಪ : ಯಸ್.. ಯು ಮೇ ಬೀ ರೈಟ್..
ಕರಿಯಪ್ಪ : ಮೇ ಬೀ ನೂ ಇಲ್ಲಾ, ಮೇ ನಾಟ್ ಬೀ ನೂ ಅಲ್ಲಾ. ಕಲರಲ್ಲಿ ಏನೂ ಇಲ್ಲಾ. ವರ್ಣಬೇಧ ಅನ್ನೋದು ಶ್ರೇಷ್ಟತೆ ಪೀಡಿತ ಮೇಲ್ವರ್ಗದವರು ಕಟ್ಟಿದ ಕುತಂತ್ರ . ಬಿಳಿ ಹೆಚ್ಚು, ಕಪ್ಪು ಕಮ್ಮಿ ಎನ್ನುವ ತಾರತಮ್ಯ ಜಾತಿ ವ್ಯವಸ್ಥೆಗಾಗಿ ಮಾಡಿದ ಸನಾತನಿಗಳ ಸಂಚು.
ಬಿಳಿಯಪ್ಪ : ಹೌದೌದು, ನೀನು ಹೇಳೋದ್ರಲ್ಲೂ ಸತ್ಯ ಇದೆ ಅನ್ಸುತ್ತೆ. (ಅಷ್ಟರಲ್ಲಿ ಪೋನ್ ರಿಂಗಾಗುತ್ತದೆ.) ಅಯ್ಯೋ.. ಹೌದಾ.. ಎಂತಾ ಅನಾಹುತ ಆಯ್ತು, ಈಗಲೇ ವಾಪಸ್ ಬರ್ತೆನೆ.. ( ದುಃಖತಪ್ತನಾಗುತ್ತಾನೆ)
ಕರಿಯಪ್ಪ : ಏನಾಯ್ತು ಬಿಳಿಯಾ, ಶೇರ್ ಪೇಟೆ ಮುಳಗೋಯ್ತಾ.
ಬಿಳಿಯಪ್ಪ : ಅಯ್ಯೋ ಏನಂತಾ ಹೇಳಲೋ ಕರಿಯಾ. ನನ್ನ ಮುದ್ದಿನ ಮರಿ, ಚೆಂದದ ಬಿಳಿ ನಾಯಿ ಮರಿ ಎಕ್ಸಿಡೆಂಟಾಗಿ ಸತ್ತೊಯ್ತಂತೋ ಕರಿಯಾ. ಎಷ್ಟು ಚಂದ ಬಾಲಾ ಅಲ್ಲಾಡಸ್ತಿತ್ತು. ಚೂ ಅಂದ್ರೆ ಸಾಕು ಓಡಿ ಬಂದು ಪೆಡಿಗ್ರಿ ತಿಂತಾ ಇತ್ತು.
ಕರಿಯಪ್ಪ : ಹೋಗಲಿ ಬಿಡು. ಈಗ ನಿನಗೆ ನಾಯಿಮರಿ ಬೇಕಲ್ವಾ. ಬಾ ನಂಜೊತೆ ನಮ್ಮನೆ ಹಿತ್ತಲಕಡೆ, ನಮ್ಮ ನಾಯಿ ನಾಲ್ಕು ಮುದ್ದಾದ ಮರಿ ಹಾಕಿದೆ. ಯಾವುದಾದರೂ ಒಂದು ತಗೊಂಡು ಹೋಗಿ ಸಾಕು.
ಬಿಳಿಯಪ್ಪ : ಅರೆ ಎಷ್ಟು ಮುದ್ದಾಗಿವೆ. ಎರಡರ ಬಣ್ಣ ಕರಿ, ಇನ್ನೆರಡರ ಬಣ್ಣ ಬಿಳಿ. ಯಾವುದು ತಗೊಳ್ಳಲಿ.
ಕರಿಯಪ್ಪ : ನೋಡು ಈ ಕರಿ ಮರಿ ಭಾರೀ ಚುರುಕು. ಬಿಳಿ ಮರಿ ಸ್ವಲ್ಪ ಬೆಪ್ಪು. ನಿನಗ್ಯಾವುದು ಬೇಕೋ ಅದನ್ನ ತಗೋ.
ಬಿಳಿಯಪ್ಪ : ನನಗೆ ಕರಿ ಮರೀನೇ ಇರಲಿ ಬಿಡು ಕರಿಯಾ.
ಕರಿಯಪ್ಪ : ಯಾಕೆ ಬೆಳ್ಳಗಿರೋದು ಬೇಡ್ವಾ.
ಬಿಳಿಯಪ್ಪ : ನಿನ್ನ ಮಾತು ಕೇಳಿ ನನಗೆ ಈಗ ಜ್ಞಾನೋದಯ ಆಗಿದೆ ಕರಿಯಾ. ಬಣ್ಣದೊಳಗೇನೂ ಇಲ್ಲಾ ಎಲ್ಲಾ ಗುಣದಲ್ಲಿ, ಬಾಳಿಕೆಯಲ್ಲಿದೆ ಎನ್ನೋದು ಅರ್ಥ ಆಗಿದೆ. ಬಣ್ಣ ಯಾವುದಾದರೇನು. ಚುರುಕಾಗಿರೋ ನಾಯಿಮರಿಯೇ ಇರಲಿ.
ಕರಿಯಪ್ಪ : ನೀನು ಈಗ ಮನುಷ್ಯನಾದೆ ನೋಡು ಬಿಳಿಯಾ. ಬೆಳ್ಳಗಿದೆ ಅಂತಾ ಬಿಳಿ ಅಕ್ಕಿ ಅನ್ನ ತಿನ್ನೋದು ಬಿಡು. ಕರ್ರಗಿದ್ರೇನಾಯ್ತು ರಾಗಿ ಮುದ್ದೆ ತಿಂದು ಗಟ್ಟಿಯಾಗಿರು. ಈಗ ನನ್ನ ತಾತ ಹೇಳಿಕೊಟ್ಟ ಹಾಡು ಹಾಡ್ತೇನೆ ಕೇಳು.
(ಹಾಡು)
ಬರೀ ಬಣ್ಣದೊಳಗೇನಿದೆಯೋ ಅಣ್ಣಾ
ಒಳಿತಿನ ಗುಣವೇ ಬದುಕಿನ ಬಣ್ಣಾ
ಮೇಲುಕೀಳುಗಳು ವರ್ಣಬೇಧಗಳು
ಅಳಿದು ಮನುಷ್ಯತ್ವ ಉಳಿದರೆ ಚೆನ್ನಾ
ಕಪ್ಪೆಂಬುದು ಕುರೂಪವಲ್ಲ ಬಿಳಿಬಣ್ಣವೇ ರೂಪವಲ್ಲ
ರೂಪ ಕುರೂಪದಾಚೆ ಸಂಬಂಧ ದೊಡ್ಡದೋ ಅಣ್ಣಾ
ಮನುಜ ಸಂಬಂಧಗಳು ಮನುಕುಲದ ಕಾರುಣ್ಯಾ
*- ಶಶಿಕಾಂತ ಯಡಹಳ್ಳಿ*
( 06-08-2023)
Comments
Post a Comment