ಸ್ನೇಹ ಮಧುರ, ತ್ಯಾಗ ಅಮರ (ಪ್ರಹಸನ - 52)
(ಪ್ರಹಸನ - 52)
ಸ್ನೇಹ ಮಧುರ, ತ್ಯಾಗ ಅಮರ
****************************************
(20 ವರ್ಷಗಳ ನಂತರ ರೈಲು ನಿಲ್ದಾಣದ ವೇಟಿಂಗ್ ರೂಂ ನಲ್ಲಿ ಗೆಳೆಯರಿಬ್ಬರು ಬೇಟಿಯಾದರು)
ರಮೇಶ : ಏ ನೀನು ನೀನು.
ಉಮೇಶ : ನಾನು ನಾನೇ.. ನೀನು..
ರಮೇಶ : ನಾನು ರಮೇಶ, ನೀನು..
ಉಮೇಶ : ನಾನು ಉಮೇಶಾ.
ರಮೇಶ : ಅದೇ ತರಕಾರಿ ಅಂಗಡಿ ಪಕ್ಕದ ಸರಕಾರಿ ಪಿಯು ಕಾಲೇಜು, 2002 ರ ಬ್ಯಾಚು.
ಉಮೇಶ : ಗೊತ್ತಾಯ್ತು ಬಿಡು. ನಿಂಜೊತೆ ನಾನು ಮಾತಾಡೋದಿಲ್ಲ ಹೋಗು.
ರಮೇಶ : ನನಗೂ ಮಾತಾಡೋ ಮೂಡಿಲ್ಲಾ ಬಿಡು. ನೀನೇ ಹೌದಲ್ಲೋ ಅಂತಾ ಕನ್ಪರಂ ಮಾಡಿಕೊಳ್ಳೋಕೆ ಕೇಳಿದೆ.
( ಇಬ್ಬರು ಮುಖ ತಿರುಗಿಸಿ ಕೂಡುತ್ತಾರೆ. ಸ್ವಲ್ಪ ಸಮಯದ ನಂತರ)
ಉಮೇಶ : ಟ್ರೇನ್ ಬರೋದು ಇನ್ನೂ ಲೇಟಂತೆ. ಅಷ್ಟರಲ್ಲಿ ನನ್ನ ಪ್ರಶ್ನೆಗೆ ಉತ್ತರ ಕೊಡು ಸಾಕು.
ರಮೇಶ : ನಂದೂ ಒಂದೇ ಪ್ರಶ್ನೆ. ಆಮೇಲೆ ಕೇಳ್ತೀನಿ. ನಿಂದೇನು ಹೇಳು.
ಉಮೇಶ : ಜಾನಕಿ ಹೇಗಿದ್ದಾಳೆ. ಎಷ್ಟು ಮಕ್ಕಳು.
ರಮೇಶ : ನನಗೇನು ಗೊತ್ತು? ಅದನ್ನ ನೀನು ಹೇಳಬೇಕು? ಆಕೆಗೆಷ್ಟು ಮಕ್ಕಳೂ ಅಂತಾ.
ಉಮೇಶ : ನನಗೇನು ಗೊತ್ತು. ನೀನು ತಾನೆ ನನ್ನ ಜಾನೂನ ಹೈಜಾಕ್ ಮಾಡಿದ್ದು.
ರಮೇಶ : ಅರೆ ನಾನ್ಯಾಕೆ ಅಂತಾ ಕೆಲ್ಸಾ ಮಾಡ್ಲಿ. ಏನೋ ಕ್ಲಾಸ್ಮೆಂಟು ಅಂತಾ ಕ್ಲೋಜಾಗಿದ್ದೆ. ಆದರೆ ಅವಳು ನೀನು ಇಷ್ಟಾ ಪಟ್ಟ ಹುಡುಗಿ ಅಂತಾ ಗೊತ್ತಾದ ತಕ್ಷಣ ನಾನು ಅವಳ ಉಸಾಬರಿಗೆ ಹೋಗಲಿಲ್ಲ.
ಉಮೇಶ : ಏನು ನೀನೇಳೋದು. ನೀವಿಬ್ರೂ ಲವ್ ಮಾಡ್ತೀರಿ ಅಂತಾ ಗೊತ್ತಾಗಿ ತಾನೆ ನಾನು ನಿಮ್ಮಿಬ್ಬರ ನಡುವೆ ಬರದೇ ಬೇರೆ ಊರಿನ ಕಾಲೇಜಿಗೆ ಹೋಗಿದ್ದು.
( ಒಬ್ಬರಿಗೊಬ್ಬರು ಮುಖಾಮುಖಿಯಾಗಿ ತಿರುಗಿ ಕೂತು)
ರಮೇಶ : ಅಂದ್ರೆ ನೀನು ಜಾನಕಿಯನ್ನ ಪ್ರೀತಿಸ್ತಾ ಇರಲಿಲ್ವಾ. ನಿಜಾ ಹೇಳು.
ಉಮೇಶ : ಹೌದು.. ಲವ್ ಮಾಡ್ತಾ ಇದ್ದೆ. ಅವಳೂ ನಾನಂದ್ರೆ ಇಷ್ಟಾ ಅಂತಾ ಹೇಳಿದ್ಲು. ಆದರೆ.. ಯಾವಾಗ ನನ್ನ ಆತ್ಮೀಯ ಗೆಳೆಯ ಆಕೆಯನ್ನ ಇಷ್ಟಾ ಪಡ್ತಾನೆ ಅಂತಾ ಗೊತ್ತಾಯ್ತೋ ಆಗಲೇ ಅವಳನ್ನ ನಿನಗೇ ಬಿಟ್ಕೊಟ್ಟು ನಾನು ದೂರ ಹೋದೆ.
ರಮೇಶ : ಅಯ್ಯೋ ರಮೇಶಾ.. ಎಂತಾ ಮಿಸ್ ಅಂಡರಸ್ಟ್ತಾಂಡ ಆಗೋಯ್ತು ಕಣೊ. ಜಾನೂಗೆ ನಿನ್ನ ಕಂಡ್ರೆ ಇಷ್ಟಾ ಅಂತಾ ಅನ್ಕೊಂಡು ನಿಮ್ಮಿಬ್ಬರ ಪ್ರೀತಿಗೆ ಅಡ್ಡಾ ಬರಬಾರದು ಅಂತಾ ನಾನು ದೂರಾದೆ ಕಣೋ.
ಉಮೇಶ : ( ಕೈ ಹಿಡಿದುಕೊಂಡು, ಕಣ್ಣಲ್ಲಿ ನೀರು ತುಂಬಿಕೊಂಡು) ಚೇ ಎಂತಾ ಅಚಾತುರ್ಯ ಆಯ್ತು ರಮೇಶು. ನಾನು ಪ್ರೀತಿಸ್ತೀನಿ ಅಂತಾ ನೀನು, ನೀನು ಪ್ರೀತಿಸ್ತೀಯಾ ಅಂತಾ ನಾನು ಗೆಳೆತನವನ್ನೇ ತ್ಯಾಗ ಮಾಡಿದೆವಲ್ಲೋ. ಆ ಒಂದು ಹುಡುಗೀಗೋಸ್ಕರ ನಮ್ಮ ಸ್ನೇಹವನ್ನೇ ದೂರ ಮಾಡ್ಕೊಂಡೆವಲ್ವೋ.
ದಯವಿಟ್ಟು ನನ್ನ ಕ್ಷಮಿಸು ಗೆಳೆಯಾ..
ರಮೇಶ : ( ಕಣ್ಣಲ್ಲಿ ನೀರು ತುಂಬಿಕೊಂಡು ) ತಪ್ಪಾಯ್ತು ಕಣೋ ಉಮ್ಮಿ. ನಿನ್ನ ಪ್ರೀತಿ ಗೆಲ್ಲಲಿ ಅಂತಾ ಕಣೋ ನಾನು ದೂರಾಗಿದ್ದು. ಛೇ ಹೀಗಾಗಬಾರದಿತ್ತು. ನೀನು ಜಾನೂ ಜೊತೆ ಮದುವೆಯಾಗಿ ಸುಖವಾಗಿದ್ದೀಯಾ ಅಂತಾ ಅನ್ಕೊಂಡು ನಾನು ಸಮಾಧಾನ ಮಾಡ್ಕೊಂಡಿದ್ದೆ ಕಣೋ.
ಉಮೇಶ : ನಾನೂ ಹಾಗೇ ಅನ್ಕೊಂಡಿದ್ದೆ ಗೆಳೆಯಾ. ಆದರೆ ಹೀಗಾಗುತ್ತೆ ಅಂತಾ ಗೊತ್ತಾಗಲಿಲ್ಲ.
ರಮೇಶ : ಹೋಗಲಿ ಬಿಡು.. ಈಗಲಾದರೂ ಸತ್ಯ ಗೊತ್ತಾಯ್ತಲ್ಲಾ. ಪ್ರೀತಿಗಿಂತಲೂ ಸ್ನೇಹವೇ ದೊಡ್ಡದು ಅಂತಾ ಸಾಬೀತಾಯ್ತು ಕಣೋ ಮಿತ್ರಾ
ಉಮೇಶ : ಹೌದು.. ಒಬ್ಬರಿಗಾಗಿ ಇನ್ನೊಬ್ಬರು ತ್ಯಾಗ ಮಾಡೋದೇ ನಿಜವಾದ ಗೆಳೆತನ ಅಂತಾ ಅರಿವಾಯ್ತು. ಕಳಕೊಂಡ ಸ್ನೇಹ ಮತ್ತೆ ಸಿಕ್ಕಿ ಸಂತೋಷ ಅಯ್ತು ರಮ್ಮಿ.
ರಮೇಶ : ಅಹಾ.. ಇವತ್ತು ಪ್ರೆಂಡ್ಶಿಪ್ ಡೇ ಅಂತೆ. ಸ್ನೇಹಿತರ ದಿನವೇ ನಾವಿಬ್ಬರೂ ಮತ್ತೆ ಬೇಟಿ ಆಗಿದ್ದು ಎಂತಾ ಕಾಕತಾಳೀಯ ನೋಡು.
ಉಮೇಶ : ಹ್ಯಾಪಿ ಪ್ರೆಂಡ್ಶಿಪ್ ಡೇ ಕಣೋ. ನಮ್ಮಿಬ್ಬರ ಗೆಳೆತನ ಕೊನೆಯವರೆಗೂ ಹೀಗೆಯೇ ಇರಲಿ.
( ಗೆಳೆಯರಿಬ್ಬರೂ ಭಾವುಕರಾಗಿ ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ. ಇಬ್ಬರ ಕಣ್ಣಲ್ಲೂ ಆನಂದಭಾಷ್ಪ)
( ಅಷ್ಟರಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳ ಜೊತೆ ವೇಟಿಂಗ್ ಕೊಠಡಿಯೊಳಗೆ ಬರುತ್ತಾಳೆ)
ರಮೇಶ : ಲೋ ಉಮ್ಮಿ.. ಅಲ್ಲಿ ನೋಡೋ. ಅವಳು ಜಾನಕಿ ತರಾನೇ ಇದ್ದಾಳಲ್ಲೋ.
ಉಮೇಶ : ಹೌದಲ್ಲೋ ಗೆಳೆಯಾ.. ಅವಳ ಹಾಗಲ್ಲಾ, ಅವಳೇ ಇವಳು.
ರಮೇಶ : ನಮಗ್ಯಾಕೋ ಡೌಟು. ಇರು ಕೇಳ್ತೇನೆ. ( ಮಹಿಳೆ ಹತ್ತಿರ ಹೋಗಿ) ನೀವು ಜಾನಕಿ ಅಲ್ವಾ?
ಜಾನಕಿ : (ಕನ್ನಡಕದೊಳಗಿಂದಾ ನೋಡಿ) ಹೌದು.. ನೀವ್ಯಾರು?
ಉಮೇಶ : ಹೇ ಜಾನೂ ನಾನು ಉಮೇಶಾ, ಇವನು ರಮೇಶಾ.. ಪಿಯು ಕಾಲೇಜ್ ಪ್ರೆಂಡ್ಸು.
ಜಾನಕಿ : ಹೋ.. ನೀವೇನ್ರೋ, ಗುರುತೇ ಸಿಗದಂಗೆ ಅಂಕಲ್ ಗಳಾಗಿದ್ದೀರಲ್ಲೋ.
ರಮೇಶ : ಹೋ ನೀನೇನು ಮತ್ತೆ ಆಂಟಿ ಆಗಿಲ್ವಾ. ಇಷ್ಟು ದೊಡ್ಡ ಮಕ್ಕಳು ಬೇರೆ ಇದ್ದಾವೇ.
ಜಾನಕಿ : ಹೂಂ ಕಣ್ರೋ. ಇವಳು ಉಮ್ಮಿ, ಅವಳು ರಮ್ಯಾ..
ರಮೇಶ : ಹಾಂ.. ಇದೆಂತಾ ಹೆಸರೂ. ನಮ್ಮಿಬ್ಬರ ಹೆಸರಿದ್ದಂಗೆ ಇದೆ.
ಜಾನಕಿ : ಹೌದು ಕಣ್ರೋ. ನಮ್ಮ ಸ್ನೇಹದ ನೆನಪಿಗಾಗಿ ನಿಮ್ಮಿಬ್ಬರ ಹೆಸರನ್ನೇ ನನ್ನ ಹೆಣ್ಮಕ್ಕಳಿಗೆ ಇಟ್ಟಿದ್ದೇನೆ.
ನಮ್ಮ ನಿಜವಾದ ಪ್ರೀತಿಯ ದ್ಯೋತಕ ಅಷ್ಟೇ.
ಉಮೇಶ : ನಾವಿನ್ನೂ ನೆನಪಿದ್ದೇವಾ ಜಾನೂ. ನೀನು ನಮ್ಮನ್ನ ಮರ್ತೇ ಬಿಟ್ಟಿದ್ದೀಯಾ ಅನ್ಕೊಂಡೆ. ಮತ್ಯಾಕೆ ಹೇಳದೇ ಕೇಳದೆ ಹೊರಟೋಗಿ ಬಿಟ್ಟೆ.
ಜಾನಕಿ : ನಾವು ಮೂವರೂ ಅನ್ಯೋನ್ಯ ಸ್ನೇಹಿತರಾಗಿದ್ದೆವಲ್ವಾ. ಆದರೆ ನಿಮ್ಮ ಸ್ನೇಹ ಅನ್ನೋದು ಪ್ರೀತಿಗೆ ತಿರುಗಿದ್ದು ನನ್ನ ಅರಿವಿಗೆ ಬಂತು. ಪ್ರೀತಿಯಿಂದಾಗಿ ಗೆಳೆತನದಲ್ಲಿ ಬಿರುಕಾಗುವುದು ನನಗಿಷ್ಟ ಇರಲಿಲ್ಲ. ನನ್ನಿಂದಾಗಿ ನಿಮ್ಮಿಬ್ಬರ ಪ್ರೆಂಡ್ಶಿಪ್ ಹಾಳಾಗೋದು ನನಗೆ ಸರಿ ಎನ್ನಿಸಲಿಲ್ಲ. ಹೇಗೂ ಪರೀಕ್ಷೆ ಮುಗಿದಿತ್ತು. ಆ ಕಾಲೇಜನ್ನೇ ಬಿಟ್ಟು ಬಾಂಬೆಗೆ ಹೋಗಿ ಓದು ಮುಂದುವರೆಸಿದೆ. ಅಲ್ಲಿಯೇ ಮದುವೆ ಮಾಡಿಕೊಂಡೆ. ನಿಮ್ಮ ಬಗ್ಗೆ ಬೇರೆ ಕ್ಲಾಸ್ ಮೇಟ್ ಹತ್ತಿರ ವಿಚಾರಿಸಿದೆ ಕಣ್ರೋ. ಆದರೆ ನೀವೆಲ್ಲಿದ್ದೀರೆಂಬ ಸುಳಿವೂ ಸಿಗಲಿಲ್ಲ. ಹಾಗೂ ಆಗ ಈಗಿನಂತೆ ಮೊಬೈಲ್ ಇರಲಿಲ್ಲವಲ್ಲಾ.
ರಮೇಶ : ನಾವಿಬ್ಬರೇ ತ್ಯಾಗಜೀವಿಗಳು ಅಂದ್ಕೊಂಡಿದ್ದೆವಲ್ಲಾ ಜಾನೂ. ನೀನೂ ಸಹ ತ್ಯಾಗಮಯಿ. ಕೊನೆಗೂ ಸ್ನೇಹವೇ ಗೆಲ್ತಲ್ಲಾ.
ಉರ್ಮಿಳಾ : ಹಾಗಾದರೆ ಈಗ ಎಲ್ಲರೂ ಹೇಳಿ
ರಮ್ಯಾ : ಹ್ಯಾಪಿ ಪ್ರೆಂಡ್ಸಿಪ್ ಡೇ.
ಎಲ್ಲರೂ : ಹ್ಯಾಪಿ ಹ್ಯಾಪಿ ಪ್ರೆಂಡ್ಶಿಪ್ ಡೇ.
ಉಮೇಶ : ಸ್ನೇಹದ ದಿನದ ಶುಭಾಶಯಗಳು
ರಮೇಶ : ಗೆಳೆತನ ಚಿರಾಯುವಾಗಲಿ.
ಜಾನಕಿ : ಸ್ನೇಹಕ್ಕಿಂತಾ ದೊಡ್ಡದೇನಿಲ್ಲಾ, ಸ್ನೇಹವೇ ಎಲ್ಲಾ.
( ಜಾನಕಿ ಸ್ನೇಹದ ಕುರಿತು ಹಾಡತೊಡಗುತ್ತಾಳೆ. ಉಳಿದವರು ಜೊತೆಗೂಡುತ್ತಾರೆ)
ಸ್ನೇಹ ಅತಿ ಮಧುರ
ಸ್ನೇಹ ಅದು ಅಮರ
ಸ್ನೇಹಕೆ ವಯಸಿನ ಅಂತರವಿಲ್ಲ
ಸಿರಿತನ ಬಡತನ ಸೀಮೆಗಳಿಲ್ಲ
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ
ಸಮತೆ ಮಮತೆ ಸ್ನೇಹದ ಗಾನ
ಸ್ನೇಹ ಅತಿ ಮಧುರ
ಸ್ನೇಹ ಅದು ಅಮರ .
ಸ್ನೇಹ ಅತಿ ಮಧುರ
*-ಶಶಿಕಾಂತ ಯಡಹಳ್ಳಿ*
Comments
Post a Comment