ಒಂದು ಮುತ್ತಿನ ಕಥೆ ( ಪ್ರಹಸನ - 53)

 ಪ್ರಹಸನ - 53)

ಒಂದು ಮುತ್ತಿನ ಕಥೆ   

****************************

 

(ಸೋಬಕ್ಕ ಮತ್ತು ಸ್ಮುತಿ ಆಂಟಿ ಇಬ್ಬರೂ ಸಂಸತ್ತಿನ ಮುಂದಿನ ಮೂರು ದಾರಿ ಸೇರುವಲ್ಲಿ ನಿಂತು ಬಾಯಿ ಬಡಿದುಕೊಳ್ಳತೊಡಗಿದರು)

 

ಸೋಬಕ್ಕ : ಅಯ್ಯೋ, ಅಯ್ಯಯ್ಯೋ, ಏನನ್ಯಾಯಾ? ಮಹಿಳಾ ಕುಲಕ್ಕೇ ಅವಮಾನ. ಕೇಳೋರು ಹೇಳೋರು ಯಾರು ಇಲ್ವಾ? ಅಯ್ಯೋ ಅಯ್ಯಯ್ಯೋ..

 

ಸ್ಮುತಿ ಆಂಟಿ : ಅನುಚಿತ ಇದು ಅಸಭ್ಯ ವರ್ತನೆ. ಇದನ್ನ ಸಹಿಸಲು ಸಾಧ್ಯವೇ ಇಲ್ಲ.. ಹೆಣ್ಮಕ್ಕಳು ಅಂದ್ರೆ ಇವರಿಗೆ ಗೌರವ ಇಲ್ವಾ

 

ಪತ್ರಕರ್ತ : ಹೆಣ್ಮಕ್ಕಳಾ ಎಲ್ಲಿ ಮೇಡಂ.

 

ಸೋಬಕ್ಕ : ಅಯ್ಯೋ ನಿನ್ನ ಕಣ್ಣಿಗೆ ಆಸಿಡ್ ಹಾಕಾ. ಇಲ್ಲಿ ಗರುಡಗಂಬದಂಗೆ ನಿಂತು ಬಾಯಿಬಡ್ಕೊಳ್ತಾ ಇರೋ ನಾವು ಹೆಣ್ಮಕ್ಕಳು ನಿನ್ನ ಕಣ್ಣಿಗೆ ಕಾಣ್ತಾ ಇಲ್ವಾ? ನಿನ್ನ ಕಣ್ಣು ಸೇದು ಹೋಗಾ.

 

ಪತ್ರಕರ್ತ : ಯಾಕೆ ಮೇಡಂ ಇಷ್ಟು ರಾಂಗಾಗಿದ್ದೀರಿ. ಅದೂ ನಿಮ್ಮಂತೋರಿಗೆ ಅವಮಾನ ಮಾಡೋ ಗಂಡೆದೆ ಯಾರಿಗಿದೆ ಮೇಡಂ ಇಲ್ಲಿ

 

ಸ್ಮುತಿ ಆಂಟಿ : ಕೊಟ್ಟೇ ಬಿಟ್ನಲ್ಲೋ, ನಾನೂರು ಜನ ಸೇರಿರೋ ಒಡ್ಡೋಲಗದಲ್ಲಿ ಎಲ್ರೂ ನೋಡುವಾಗಲೇ ಕೊಟ್ಟಾ.. ಮಾನಾ ಕಳೆದಬಿಟ್ಟಾ..

 

ಪತ್ರಕರ್ತ : ಯಾರು ಏನು ಕೊಟ್ರು, ನೀವೇನು ತಗೊಂಡ್ರಿ, ಬಿಡಿಸಿ ಹೇಳಬಾರ್ದಾ ಮೇಡಂಜಿ.

 

ಸೋಬಕ್ಕ : ನಾನೂರು ಜನರ ಮುಂದೆ ಕೊಟ್ಟಿದ್ದನ್ನ ಕೋಟ್ಯಾಂತರ ಜನ ನೋಡೋ ಟಿವಿ ಮುಂದೆ ಹೇಗ್ರೀ ಹೇಳೋದು. ಏನೇ ಆಗಲಿ ಅವಮಾನ ಅವಮಾನಾನೇ, ನಾವು ಸುಮ್ಮನಿರೋದಿಲ್ಲಾ. ಸುಮ್ಕೆ ಇರೋರಲ್ಲಾ..

 

ಪತ್ರಕರ್ತ : ಅದೇ ಏನು ಕೊಟ್ಟಾ, ಹೆಂಗ್ ಕೊಟ್ಟಾ, ಎಲ್ಲಿ ಕೊಟ್ಟಾ, ಯಾರಿಗೆ ಕೊಟ್ಟಾ.. ಡಿಟೇಲ್ಸ್ ಪ್ಲೀಜ್.

 

ಸ್ಮುತಿ ಆಂಟಿ : ಅದನ್ನ ಹೇಗೆ ಹೇಳಲಿಯಾವ ಬಾಯಲ್ಲಿ ಹೇಳಲಿ.

 

ಪತ್ರಕರ್ತ : ಈಗ ಬಡ್ಕೋತಾ ಇದೆಯಲ್ಲಾ ಅದೇ ಬಾಯಲ್ಲೇ ಹೇಳಿ ಮೇಡಂ.

 

ಸೋಬಕ್ಕ : ಹೇಳ್ತೀನಿ, ಹೇಳೇ ಹೇಳ್ತೀನಿ, ಹೇಳಲೇ ಬೇಕು ಅಂತಾನೇ ಬೀದಿಗೆ ಬಂದೇವಿ. ಎಲ್ಲರ ಮುಂದೆನೂ ಕಿಸ್ ಕೊಟ್ಟೆ ಬಿಟ್ನಲ್ಲೋ ಶಿವನೆ.

 

ಪತ್ರಕರ್ತ : ಕಿಸ್ಸಾ, ನಿಮಗಾ? ಎಲ್ರೂ ಮುಂದೇನಾ? ಎಲ್ಲಿಗೆ ಕೊಟ್ಟಾ? ( ಸ್ವಗತದಲ್ಲಿ) ಯಾರಪ್ಪಾ ಅದು ಇಂತಾ ಟೇಸ್ಟ್ ಇರೋನು.

 

ಸ್ಮುತಿ ಆಂಟಿ : ಕಿಸ್ ಅಂದರೆ ಪ್ಲೈಯಿಂಗ್ ಕಿಸ್. ಕೊಟ್ಟೇ ಬಿಟ್ನಲ್ಲೋ ಅವನ್ ಮನೆ ಹಾಳಾಗಾ. ಎಲ್ಲರ ಮುಂದೇನೇ ಕಿಸ್ ಕೊಟ್ನಲ್ಲೋ ಅವನ್ ತುಟಿ ಸುಟ್ಟೋಗಾ.

 

ಪತ್ರಕರ್ತ : ಎಲ್ರ ಮುಂದೆ ಕೊಟ್ಟಿದ್ದಕ್ಕೆ ಪ್ರಾಬ್ಲಾಂ. ಸಪರೇಟಾಗಿ..

 

ಸೋಬಕ್ಕ : ಅಯ್ಯೋ ನಿನ್ನ ಟಿವಿ ಚಾನೆಲ್ ಲಾಸಾಗಿ ಚಾಪೆ ಸುತ್ಕೊಂಡು ಹೋಗಾ. ತುಂಬಿದ ಸಭೆಯಲ್ಲಿ ಯಾರಾದ್ರೂ ಮಹಿಳೆಯರಿಗೆ ಹಿಂಗೆ ಕಿಸ್ ಕೊಡ್ತಾರಾ? ಕೊಡಬಹುದಾ, ನೀವೇ ಹೇಳಿ.

 

ಸ್ಮುತಿ ಆಂಟಿ : ಅಷ್ಟೇ ಅಲ್ಲಾ, ಕಣ್ಣೂ ಹೊಡ್ದನಂತೆ ಕಣೆ.. ಆದರೆ ನಾನು ನೋಡಲಿಲ್ಲಾ, ಮಿಸ್ ಮಾಡ್ಕೊಂಡೆ.

 

ಸೋಬಕ್ಕ : ಹೌದಾ.. ಅಯ್ಯೋ ಇದೇನಾ ಭಾರತೀಯ ಹಿಂದೂ ಸಂಸ್ಕೃತಿ. ನಮ್ಮಂತಾ ಹೆಣ್ಮಕ್ಕಳಿಗೆ ರೀತಿ ಸಭೆಯಲ್ಲಿ ಅವಮಾನ ಆಗಿದ್ದನ್ನ ದೇಶದ ನೂರಾ ನಲವತ್ತು ಕೋಟಿ ಜನರೂ ಸಹಿಸೋದಿಲ್ಲ. ನಾವಂತೂ ಸುಮ್ಕಿರೋದಿಲ್ಲ.

 

ಪತ್ರಕರ್ತ : ತುಂಬಿದ ಸಭೆಯಲ್ಲಿ, ಅದೂ ನಿಮಗೆ, ಕಿಸ್ ಅಂದ್ರೆ ಪ್ಲಾಯಿಂಗ್ ಕಿಸ್ ಅರ್ಥಾತ್ ಹಾರಾಡುವ ಮುತ್ತು ಕೊಟ್ಟ ಮಹನೀಯನ ಹೆಸರೇನು ಹೇಳಿ ಮಾತೆಯರೇ. ಸಸ್ಪೆನ್ಸ್ ತಡೆಯೋಕಾಗೋದಿಲ್ಲ

 

ಸ್ಮುತಿ ಆಂಟಿ : ಮತ್ಯಾರು. ಎದುರು ಮನೆಯ ತುಂಟ ಹುಡುಗ ಎಲ್ಜಿಬಲ್ ಬ್ಯಾಚಲರ್ ರಾಹುಲ್ ಇದ್ದಾನಲ್ಲಾ, ಅವನೇ ಪಬ್ಲಿಕ್ಕಾಗಿ ಕಿಸ್ ಎಸೆದಿದ್ದು. ನಮಗೆ ಗೊತ್ತಾಗದಂತೆ ಕದ್ದು ಮುಚ್ಚಿ ಕಣ್ಣು ಹೊಡೆದದ್ದು. ಇಂತಾದ್ದನ್ನೆಲ್ಲಾ ನಾವು ನೋಡಿಯೂ ಸುಮ್ಕಿರೋಕೆ ಸಾಧ್ಯಾನೇ ಇಲ್ಲಾ.

 

ಪತ್ರಕರ್ತ : ಹೌದಾ! ಈಗೇನು ಮಾಡಬೇಕು ಅಂತಾ ಮಾಡಿದ್ದೀರಿ

 

ಸೋಬಕ್ಕ : ತುಂಟ ಹುಡುಗನ ಮೇಲೆ ಕಠಿಣಾತಿಕಠಿಣ ಕ್ರಮ ತಗೊಳ್ಳಲೇ ಬೇಕು ಅಂತಾ ನಾವು ಕಿಸ್ ಸಂತ್ರಸ್ತ ಮಹಿಳೆಯರೆಲ್ಲಾ ಸೇರಿ ಮನೆ ಹಿರಿಯನಿಗೆ ಕಂಪ್ಲೇಂಟ್ ಕೊಡ್ತೇವೆ

 

ಸ್ಮುತಿ ಆಂಟಿ : ಸ್ತ್ರೀ ದ್ವೇಷಿಯ ಇಂತಹ ಅನುಚಿತ ವರ್ತನೆ ಸಹಿಸಲಾಗದು

 

ಪತ್ರಕರ್ತ : ಇದರಲ್ಲಿ ಸ್ರ್ತೀ ದ್ವೇಷ ಎಲ್ಲಿ ಬಂತು ಮೇಡಂಜಿಸ್ತ್ರೀಯರ ಮೇಲೆ ಪ್ರೀತಿ ಆಕರ್ಷಣೆ ಇದ್ದವರು ಮಾತ್ರ ಹೀಗೆ ಮಾಡೋದು ಅಲ್ವಾ? ಯಾಕೆ ವೃತಾ ಕೋಪಾ, ಈಪರಿ ಆರೋಪ. ಏನೇ ಆದರೂ ನಿಮಗೆ ಕಿಸ್ ಎಸೀಬಾರದಿತ್ತು

 

ಸ್ಮುತಿ ಆಂಟಿ : ಅಪಮಾನ, ಇದು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅಗೌರವ. ಹಿಂದೆ ಎಂದೂ ರೀತಿ ಇಲ್ಲಿ ಯಾರೂ ಮಾಡಿರಲಿಲ್ಲ. ಇದರಿಂದಲೇ ಗೊತ್ತಾಗುತ್ತೆ ಅವನ ಇಡೀ ಕುಟುಂಬ ಎಂತಹ ಸಂಸ್ಕೃತಿ ಹೊಂದಿದೆ ಅಂತಾ.

 

ಪತ್ರಕರ್ತ : ತುಂಟನೊಬ್ಬ ತುಂಟಾಟ ಮಾಡಿದ್ರೆ ಅವನ ಕುಟುಂಬವನ್ನೇಕೆ ಎಳೆದು ತರ್ತೀರಿ ಮೇಡಂ. ಹೋಗಲಿ ನಾನೂರಕ್ಕೂ ಹೆಚ್ಚು ಜನರು ಇರೋ ಸಭೆಯಲ್ಲಿ ನಿಮಗೇ ಪ್ಲೈಯಿಂಗ್ ಕಿಸ್ ಕೊಟ್ಟಿದ್ದು ಅಂತಾ ನಿಮಗೆ ಹೇಗೆ ಗೊತ್ತು?

 

ಸ್ಮುತಿ ಆಂಟಿ : ನನಗೆ ಕೊಟ್ಟಿದ್ದು ಅಂತಾ ನನಗೆ ಚೆನ್ನಾಗಿ ಗೊತ್ತು.

 

ಸೋಬಕ್ಕ : ಇಲ್ಲಾ ನನ್ನ ಕಡೆಗೆ ಕಿಸ್ ಹಾರಿ ಬಂದಿದ್ದು

 

ಸ್ಮುತಿ ಆಂಟಿ : ನನ್ನ ಕಡೆ

 

ಸೋಬಕ್ಕ : ಇಲ್ಲಾ ನನ್ನ ಕಡೆ..

 

ಪತ್ರಕರ್ತ : ಹೋಗಲಿ ಬಿಡಿ ಮೇಡಂ. ಎಲ್ಲರಿಗೂ ಸೇರಿ ಹೋಲ್ಸೇಲಾಗಿ ಕಿಸ್ ಡೆಲಿವರಿ ಆಗಿದೆ. ಇಂತವರಿಗೇ ಅಂತಾ ಹೇಳೋಕಾಗೋದಿಲ್ಲ.‌ ಅದಕ್ಯಾಕಿಷ್ಟು ಸೀನ್ ಕ್ರಿಯೇಟ್ ಮಾಡ್ತೀರಿ.

 

ಸ್ಮುತಿ ಆಂಟಿ : ದ್ವೇಷ.. ಅವನ ಮೇಲೆ ದ್ವೇಷ ಸಾಧಿಸದೇ ನಾವು ಬಿಡುವುದಿಲ್ಲ. ಇನ್ನೂ ಆತನ ತರಲೆ ಸಹಿಸೋಕೆ ಆಗೋದಿಲ್ಲ.

 

ಸೋಬಕ್ಕ : ಆತ ಯಾವಾಗಲೂ ಹೀಗೆ ಏನಾದರೂ ಕೀಟಲೆ ತುಂಟಾಟ ಮಾಡ್ತಾನೇ ಇರ್ತಾನೆ. ನಮ್ಮಂತಾ ಹೆಣ್ಮಕ್ಕಳಷ್ಟೇ ಅಲ್ಲಾ ಗಂಡಸರಿಗೂ ಕಣ್ಣು ಹೊಡೀತಾನೆ. ಅವನ್ ಕಣ್ಣು ಸೇದೋಗಾ. ಸೇಡು.. ಸೇಡು ತೀರಿಸಿಕೊಳ್ಳದೇ ನಾವು ವಿರಮಿಸುವವರಲ್ಲ

 

ಪತ್ರಕರ್ತ : ಮೇಡಂಜಿ.. ನಿಮ್ಮ ದ್ವೇಷದ ಬಾಜಾರಿನಲ್ಲಿ ಅವರು ಪ್ರೀತಿಯ ಅಂಗಡಿ ತೆಗೆಯುತ್ತೇನೆಂದು ಮೊದಲೇ ಹೇಳಿದ್ದರಲ್ವಾ. ಅದರ ಭಾಗವಾಗಿಯೇ ಹೀಗೆ ದ್ವೇಷ ಕಾರುವವರನ್ನೂ ನಾನು ಪ್ರೀತಿಸ್ತೇನೆ ಅನ್ನೋದನ್ನ ಸಾಬೀತುಪಡಿಸೋದಕ್ಕೆ ಹೀಗೆ ಪ್ರೀತಿಯ ಪ್ರತೀಕವಾದ ಮುತ್ತನ್ನು ಕೊಟ್ಟಿರಬಹುದು.

 

ಸೋಬಕ್ಕ : ಹೌದಾ ? ಹೀಗೂ ಉಂಟಾ.

 

ಸ್ಮುತಿ ಆಂಟಿ : ಅದೆಲ್ಲಾ ಗೊತ್ತಿಲ್ಲಾ. ನಮ್ಮ ದ್ವೇಷದ ಬಜಾರಲ್ಲಿ ನಮ್ಮಂತವರಿಗೆ ಮಾತ್ರ ಅವಕಾಶ. ಪ್ರೀತಿ ಪ್ರೇಮ ಮುತ್ತು ಮತ್ತೊಂದಕ್ಕೆ ಇಲ್ಲಿ ಅವಕಾಶ  ಇಲ್ಲಾ ಅಂದ್ರೆ ಇಲ್ಲಾಹಾಗಾಗೋದಕ್ಕೂ ನಮ್ಮ ವಿಶ್ವಗುರು ಬಿಡೋದಿಲ್ಲ

 

ಸೋಬಕ್ಕ : ಹೌದೌದು.. ನಾವು ಬಿಡೋರಲ್ಲ. ಸೇಡು.. ಸೇಡು ತೀರಿಸಿಕೊಳ್ತೇವೆ. ಅಯ್ಯೊ ಅಯ್ಯಯ್ಯೋ.. ಅನ್ಯಾಯಾ, ತುಂಬಿದ ಸಭೆಯಲ್ಲಿ ಮಹಿಳೆಯರಿಗಾದ ಘನಘೋರ ಅನ್ಯಾಯಾ. ಕೇಳೊರು ಹೇಳೋರು ಯಾರೂ ಇಲ್ವಾ

 

ಪತ್ರಕರ್ತ : (ಪಕ್ಕಕ್ಕೆ ಬಂದು. ಕ್ಯಾಮರಾ ಕಡೆ ಮುಖಮಾಡಿ)

ನೋಡಿದ್ರಲ್ಲಾ ವೀಕ್ಷಕರೆ. ಇದೊಂದು ಪ್ಲೈಯಿಂಗ್ ಕಿಸ್ ಪ್ರಕರಣ. ಪ್ರೀತಿಯ ಅಂಗಡಿ ತೆಗೆಯೋಕೆ ಅವರು ಪ್ರಯತ್ನಿಸಿದರೆ, ಇವರು ದ್ವೇಷದ ಬಜಾರನ್ನೇ ಉಳಿಸಿಕೊಳ್ಳಲು ಶತಪ್ರಯತ್ನ ಮಾಡ್ತಾನೇ ಇರ್ತಾರೆ. ಅವರು ಪ್ರೀತಿ ಆತ್ಮೀಯತೆಯ ದ್ಯೋತಕವಾಗಿ ಮುತ್ತನ್ನು ಹಾರಿ ಬಿಟ್ರೆ, ಇವರು ಅದನ್ನೇ ತಮ್ಮತ್ತ ತೂರಿ ಬಂದ ಮಿಸೈಲ್ ಎನ್ನುವಂತೆ ಕೂಗುತ್ತಿದ್ದಾರೆ. ದ್ವೇಷ ಮತ್ತು ಪ್ರೀತಿಯ ನಡುವೆ ಕದನ ಜಾರಿಯಲ್ಲಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವುದನ್ನು ಮುಂಬರುವ ಕಾಲ ಹಾಗೂ ದೇಶದ ನಾಗರಿಕರು ನಿರ್ಧರಿಸುತ್ತಾರೆ. ಅಲ್ಲಿವರೆಗೂ ನೋಡ್ರಾ ಇರಿ ಸೃಷ್ಟಿ ಸುದ್ದಿ ವಾಹಿನಿ, ಜನರ ಅಂತರಾಳದ ದ್ವನಿ.

 

  ( ಹಿನ್ನೆಲೆಯಲ್ಲಿ.. ಅಯ್ಯೋ ಅಯ್ಯಯ್ಯೋ.. ಅನ್ಯಾಯಾ.. ಕೂಗು ಕೇಳಿಬರುತ್ತದೆ. ಪತ್ರಕರ್ತನ ಮೊಬೈಲಲ್ಲಿ ಹಾಡೊಂದರ ರಿಂಗ್ ಟೋನ್ ಕೇಳಿಬರುತ್ತದೆ.)

 

ಮುತ್ತೇ ಪ್ರಥಮ ಅದುವೇ ಜಗದ ನಿಯಮ

ಸೇಡೇ ಪ್ರಥಮ ಅದುವೇ ಸಂಘದ ನಿಯಮ

 

ದ್ವೇಷದ ಬಜಾರಿನಲಿ ಪ್ರೀತಿಯ ಅಂಗಡಿ ತೆರೆಯೋಣ

ಪ್ರೀತಿ ಪ್ರೇಮ ಜಾನೇದೋ, ಸೇಡಂ ದ್ವೇಷಂ ಅಚ್ಚಾಮಿ

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ