ಅಪ್ಪಿಕೊಳ್ಳೋದರಲ್ಲಿ ತಪ್ಪೇನಿಲ್ಲ (ಪ್ರಹಸನ -54)

  (ಪ್ರಹಸನ -54)

ಅಪ್ಪಿಕೊಳ್ಳೋದರಲ್ಲಿ ತಪ್ಪೇನಿಲ್ಲ   

*****************************************

 

(ಮಾಮೂಲಿಯಂತೆ ಗಂಡ ಹೆಂಡತಿಯ ಜಗಳ ಉಂಡು ಮಲಗಿದ ಮೇಲೂ ಮುಂದುವರೆದಿತ್ತು)

 

ಹೆಂಡತಿ : ಮುಚ್ಕೊಂಡು ಸುಮ್ಮನೆ ಬಿದ್ಕೊಳ್ರೀ, ನನಗೆ ಗೊತ್ತಿಲ್ವಾ ನಿಮ್ಮ ಬಂಡವಾಳ.

 

ಗಂಡ : ನಿನಗೇನೇ ಗೊತ್ತು, ನಾನ್ಯಾರು? ನನ್ನ ತಾಕತ್ತೇನು ಅಂತಾ.

 

ಹೆಂಡತಿ : ದಿನಾ ನೋಡ್ತಾನೇ ಇದ್ದೀನಲ್ಲಾ ನಿಮ್ಮ ತಾಕತ್ತು ಎಷ್ಟೂ ಅಂತಾ. ಮನೇಲಿ ಕಟ್ಕೊಂಡವಳ ಮುಂದೆ ತಾಕತ್ತು ತೋರ್ಸೋದಕ್ಕಾಗದೇ ಊರು ಕೇರಿ ಸುತ್ತಿ ತಾಕತ್ತು ತೋರಸ್ತಾನಂತೆ ತಾಕತ್ತು. ಮಾಡೋದು ಅನಾಚಾರ ಬಾಯಲ್ಲಿ ಭಗವದ್ಗೀತೆ..

 

ಗಂಡ : ಏನೇ.. ನಾಲಿಗೆ ಉದ್ದ ಆಗ್ತಿದೆ. ನಿನಗೆ ದಮ್ಮಿದ್ರೆ, ತಾಕತ್ತಿದ್ರೆ ಅದೇನು ಅನಾಚಾರ ಅಂತಾ ಸಾಕ್ಷಿ ಸಮೇತ ತೋರಿಸೇ, ತೋರಸು.

 

ಹೆಂಡತಿ : ಬ್ಯಾಡಾ, ನನ್ನ ಕೆಣಕ ಬ್ಯಾಡಾ. ಐತೆ.. ಅನಾಚಾರಕ್ಕೆ ಬೇಕಾದಷ್ಟು ಸಾಕ್ಷಿ ನನ್ನತ್ರ ಐತೆ. ಹೊರಗೆ ಬಿಟ್ರೆ ನಿನ್ನ ಮಾನಾ ಮರ್ಯಾದೆ ಮೂರು ಕಾಸಿಗೆ ಹರಾಜಾಗತೈತೆ. ಹುಷಾರು.

 

ಗಂಡ : ಹಂಗಾ.. ಸರಿ.. ಅದೇನು ಸಾಕ್ಷಿ ತೋರಸೇ ನೋಡೇ ಬಿಡ್ತೀನಿ.

 

ಹೆಂಡತಿ : ಇಲ್ಲಿ ನೋಡಯ್ಯಾ ( ಪೆನ್ ಡ್ರೈವ್ ಎತ್ತಿ ಹಿಡಿದು ತೋರಿಸುತ್ತಾ) ಇದರಲ್ಲಿದೆ ನಿನ್ನ ಅನಾಚಾರದ ಸಾಕ್ಷಿ ಪುರಾವೆ

 

ಗಂಡ : ಪೆನ್ ಡ್ರೈವಲ್ಲಾ. ಏನು ಹೆದರಿಸ್ತೀಯಾ, ಅದರಲ್ಲಿ ಏನೈತೆ ಅಂತಾ ಮೊದಲು ಹೇಳು.

 

ಹೆಂಡತಿ : ನಾನ್ಯಾಕೆ ಹೇಳ್ಲಿ. ಮಾಡಬಾರದ್ದ ಕೆಲಸ ಮಾಡಿದೋರಿಗೆ ಗೊತ್ತಿರೋದಿಲ್ವಾ. ಜಾಸ್ತಿ ಮಾತಾಡಿದ್ರೆ ಇದರಲ್ಲಿರೋದು ಊರಿಗೆಲ್ಲಾ ಗೊತ್ತಾಗುತ್ತೆ .

 

ಗಂಡ : ಆಯ್ತು ಅದೇನು ಸಾಕ್ಷಿ ಇದೆಯೋ ತೋರಿಸೇ ತೋರಿಸು

 

ಹೆಂಡತಿ : ನಾನು ತೋರಿಸೋಕೆ ರೆಡಿ. ಒಪ್ಪಿಕೊಳ್ಳೋಕೆ ನೀವು ರೆಡಿನಾ ಅದನ್ನ ಹೇಳ್ರೀ ಮೊದಲು.

 

ಗಂಡ : ಒಪ್ಪಿಕೊಳ್ಳೋದು ಬಿಡೋದು ಆಮೇಲಿನ ಮಾತು. ಮೊದಲು ಪೆನ್ ಡ್ರೈವಲ್ಲಿ ಏನೈತಿ ಅದು ಹೊರಗೆ ಬರಲಿ, ಆಮೇಲೆ ಮುಂದಿನ ಮಾತು ಕತಿ.

 

ಹೆಂಡತಿ : ಆಯ್ತು, ಇದರಲ್ಲಿರೋ ಸತ್ಯ ಹೊರಗೆ ಬಿಡ್ತೀನಿ. ಮಾನ ಮರ್ಯಾದೆ ಹೋಯ್ತು ಅಂತಾ ಬಾಯಿ ಬಡ್ಕೋಬಾರ್ದು.

 

ಗಂಡ : ಬಾಯಿ ಬಡ್ಕೊಳ್ಳೋವಂತಾದ್ದು ಏನಿದೆ ಅದನ್ನ ಮೊದಲು ಹೇಳು.

 

ಹೆಂಡತಿ : ನಾನ್ಯಾಕೆ ಹೇಳಲಿ. ನೀವೇನು ಅನಾಚಾರ ಮಾಡಿದ್ದೀರೋ ಅದನ್ನ ಮೊದಲು ಬಹಿರಂಗವಾಗಿ ಒಪ್ಕೊಳ್ರಿ. ಮಾಡೋದು ಹಾದರ ಮನೆ ಮುಂದೆ ಲಾಲಬಾಗು.

 

ಗಂಡ : ಏನೇ ಏನೇ ಅದು. ಬುಟ್ಟೀ ತೋರಿಸಿ, ಹಾವು ಬಿಡ್ತೀನೀ ಬಿಡ್ತೀನೀ ಅಂತೀಯಾ ಕುಮಾರಸ್ವಾಮಿಗಳ ತರ. ಆದರೆ ಬಿಡು ಅಂದ್ರೂ ಬೀಡೋದಿಲ್ಲಾ ಅಂತೀಯಾ. ಬರೀ ಬ್ಲಾಕ್ಮೇಲ್ ಮಾಡೋದೇ ಆಗೋಯ್ತು. ನನಗಂತೂ ನಿಂಜೊತೆ ಸಂಸಾರ ಮಾಡೋದೇ ಸಾಕಾಗೈತಿ.

 

ಹೆಂಡತಿ : ( ಸೀರೆ ಸೆರಗು ಸೊಂಟಕ್ಕೆ ಸುತ್ತಿ) ಹೌದ್ರೀ ಹೌದು.. ಸಂಸಾರ ಸಾಕಾಗೈತೆ.. ಬೇರೆ ಕಡೆ ಸಂಸಾರ ಬೇಕಾಗೈತೆ. ಇನ್ನು ನಾನು ಸುಮ್ಕಿರೋದಿಲ್ಲ. ಬುಟ್ಟಿಯಿಂದ ಹಾವು ಬಿಟ್ಟೇ ಬಿಡ್ತೀನಿ

 

ಗಂಡ : ಅಯ್ತು.. ಏನಾದ್ರೂ ಮಾಡ್ಕೋ. ನಿನ್ನ ಬುಟ್ಟಿ, ನಿನ್ನ ಹಾವು. ಬಿಟ್ಕೊಂಡಾದ್ರೂ ಬಿಟ್ಕೋ, ನಿನ್ನ ಹತ್ರ ಇಟ್ಕೊಂಡಾದ್ರೂ ಇಟ್ಕೋ. ನನಗೇನು.

 

ಹೆಂಡತಿ : ಮೂರು ಬಿಟ್ಟೋರಿಗೆ ಇನ್ನೇನಾಗುತ್ತೆ. ಸಾಕ್ಷಿ ಹೊರಗೆ ಬಂದ್ರೆ ನಿನ್ನ ಬಂಡವಾಳ ಊರವರಿಗೆಲ್ಲಾ ಗೊತ್ತಾಗುತ್ತೆ. ಇದರಲ್ಲಿರೋದು ಅಂತಿಂತಾ ಹಾವಲ್ಲಾ, ಕರಿನಾಗರ ಇದ್ದಂಗೆ. ಬಿಟ್ರೆ ಸಾಕು ಊರೆಲ್ಲಾ ವಿಷ ಕಾರಿ ಬರುತ್ತೆ. ಆಮೇಲೆ ನೀವುಂಟು ಹಾವುಂಟು.

 

ಗಂಡ : ಅದೆಷ್ಟು ಸಲ ಹೇಳ್ತೀಯೇ, ಬಿಡು ಅತ್ಲಾಗೆ. ಅದೆಂತಾ ಹಾವು ಅಂತಾ ನೋಡೇ ಬಿಡ್ತೀನಿ. ನನಗೊತ್ತಿಲ್ಲದೇ ಇರೋ ಹಾವಾ ಅದು.

 

ಹೆಂಡತಿ : ಹೌದಪ್ಪಾ ಹೌದು. ನಿಂದೇ ಹಾವು, ನಿನಗೆ ಗೊತ್ತಿರೋ ಹಾವು, ನೀನೇ ಸಾಕಿರೋ ಹಾವು. ನನ್ನತ್ರ ಸಿಕ್ಕಾಕೊಂಡೈತೆ. ಹೊರಗೆ ಬಿಡ್ತೀನಲ್ಲಾ ಆಗ ಎಲ್ಲಾ ಗೊತ್ತಾಗತೈತೆ

 

ಗಂಡ : ಆಯ್ತು.. ಅದೇನು ಬಿಡ್ತೀಯಾ ಬಿಡು. ಸಂಸಾರದ ಕೊಚ್ಚೆಯಲ್ಲಿ ಮುಳುಗ್ತಿರೋನಿಗೆ  ವಿಷ ಆದ್ರೇನು, ಹಾವಾದ್ರೇನು. ಹೇಳು ಏನೈತೆ ಸಾಕ್ಷಿ ನಿನ್ನತ್ರ.

 

ಹೆಂಡತಿ : ಹಿಂಗೆಲ್ಲಾ ಹೇಳಿದ್ರೆ ನೀನು ಬಗ್ಗೋನಲ್ಲಾ ಅಂತಾ ಗೊತ್ತು. ನೋಡು.. ಬಿಡ್ತೀನಿ ನೋಡು. ಸಾಕ್ಷಿ ಕೊಡ್ತೀನೀ ನೋಡು. ಮೊದಲು ಟ್ರೈಲರ್ ಬಿಡ್ತೀನಿ, ಆಮೇಲೆ ಪೂರಾ ಪಿಕ್ಚರ್ ತೋರಿಸ್ತೀನಿ

ನಾಗರ ಹಾವೇ ಹಾವೊಳು ಹೂವೇ ಪೆನ್ ಡ್ರೈವ್ ಒಳಗೆ ನಿನ್ನಯ ತಾವೆ..( ಎಂದು ಹಾಡುತ್ತಾ ಪೊಟೋ ಒಂದನ್ನು ಎತ್ತಿ ತೋರಿಸ್ತಾಳೆ)

 

ಗಂಡ : .. ಇದೇನೆ ಇದು.. ಇದೆಲ್ಲಿ ಸಿಕ್ತು ನಿಂಗೆ.

 

ಹೆಂಡತಿ : ನೋಡ್ರಿ..ನೋಡಿ. ನಿಮ್ಮ ಕಾಮಾವತಾರವನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ. ಯಾವಳ್ರೀ ಇವಳು. ನಾಚಿಕೆ ಬಿಟ್ಟು ತಬ್ಕೊಂಡಿರೋದು ನೋಡು.

 

ಗಂಡ : ( ತಬ್ಬಿಬ್ಬಾಗಿ) ಯಾವಳು ಅಂತಾ ನಂಗೇನೇ ಗೊತ್ತು.

 

ಹೆಂಡತಿ : ಆಹಾ.. ಮಳ್ಳಾ ಮಳ್ಳಾ ಮಂಚಕ್ಕೆಷ್ಟು ಕಾಲು ಅಂದ್ರೆ ಮಂಚಾನೇ ಯಾಕ ಬೇಕು ಬರೀ ಹಾಸಿಗೆ ಸಾಕು ಅಂದ್ನಂತೆ ಯಾವುನೋ ನಿನ್ನಂತಾ ಮನೆಹಾಳ. ಹೇಳ್ರೀ ಯಾವಳನ್ನ ಗಟ್ಟಿಯಾಗಿ ತಬ್ಕೊಂಡಿದ್ದೀರಿ. ಯಾವುಳ್ರಿ ಇವಳು ನನ್ನ ಸವತಿ. ಅಯ್ಯೊ ಅಯ್ಯೋ ಹೋಯ್ತು, ಹಾಲಿನಂತಾ ನನ್ನ ಸಂಸಾರ ಒಡೆದು ಹಾಳಾಗೋಯ್ತು.

 

ಗಂಡ : ಮೆತ್ಗೆ ಮಾತಾಡೇ, ಅಕ್ಕಪಕ್ಕದವರಿಗೆಲ್ಲಾ ಕೇಳಿದ್ರೆ ನನ್ನ ಮಾನ ಮರ್ಯಾದೆ ಹೋಗುತ್ತೆ.

 

ಹೆಂಡತಿ : ಮಾನ ಇದ್ರೆ ಅಲ್ವಾ ಹೋಗೋದು. ಮರ್ಯಾದೆ ಇರೋರು ಮಾಡೋ ಕೆಲಸಾನಾ ಇದು. ಮನೇಲಿ ನನ್ನಂತಾ ಹೂವಿನಂತಾ ಹೆಂಡತಿ ಇದ್ರೂ ಹೂಕೋಸಿನಂತಾ ಡುಮ್ಮಿ ಬೇಕೇನ್ರೀ ನಿಮಗೆ ತಬ್ಕೊಳ್ಳೋಕೆ.

 

ಗಂಡ : (ಶಾಕ್ ನಿಂದ ಸಾವರಿಸಿಕೊಂಡು, ದೇಶಾವರಿ ನಗೆ ನಗುತ್ತಾ) ಅದು ಅದು.. ನೀನು ತಿಳ್ಕೊಂಡಂಗೆ ಏನೂ ಇಲ್ಲಾ ಬಿಡೆ. ಹೀಗೆ ಅಪ್ಪಿಕೊಳ್ಳೋದು ಅಪರಾಧ ಅಲ್ಲಾ ತಿಳ್ಕೋ.

 

ಹೆಂಡತಿ : ಅಯ್ಯೊ ಅಯ್ಯೋ ಮನೆಹಾಳಾ. ಮಾಡೋ ಕಚಡಾ ಕೆಲಸಾ ಮಾಡಿಬಿಟ್ಟು.. ತಪ್ಪೇ ಇಲ್ಲಾ ಅಂತಾ ತಿಪ್ಪೇ ಸಾರಿಸ್ತೀಯಾ. ನಿಮ್ಮಪ್ಪನಿಗೆ, ಅವರಪ್ಪನಿಗೆ, ನಿಮ್ಮ ಇಡೀ ಖಾನಾದಾನಿಗೆ ನಿನ್ನ ರಾಸಲೀಲೆ ತೋರಿಸ್ತೀನಿ. ಪೊಲೀಸರಿಗೆ ದೂರು ಕೊಡ್ತೀನಿ, ಕೋರ್ಟಿಗೆ ಹೋಗಿ ನ್ಯಾಯಾ ಕೇಳ್ತೀನಿ.

 

ಗಂಡ : ಆಯ್ತಾಯ್ತು, ಮಾಡೋವಂತೆ. ಅದಕ್ಕೂ ಮುಂಚೆ ಪೇಪರಲ್ಲಿ ಬಂದಿರೋ ಸುದ್ದಿ ಓದು. ಆಮೇಲೆ ನೀ ಏನಾದ್ರೂ ಮಾಡ್ಕೋ

 

ಹೆಂಡತಿ : ಯೋ ನಾನ್ಯಾಕಯ್ಯಾ ಓದಬೇಕು.. ನಿನ್ನ ಅನಾಚಾರ ಪೇಪರಲ್ಲೂ ಬಂದಾಯ್ತಾ.. ಅಯ್ಯೋ ಶಿವನೇ.

 

ಗಂಡ : ಸರಿ ನಾನೇ ಓದ್ತೀನಿ ಕೇಳ್ಕೊ. ನ್ಯಾಯಾಲಯದಲ್ಲಿ ನಮ್ಮ ಕೇಂದ್ರ ಸರಕಾರದ ಮಾನ್ಯ ಸಂಸದ ಶ್ರೀ ಶ್ರೀ ಬ್ರಿಜ್ ಭೂಷಣ್ ರವರು ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ಏನಂತಾ ಕೊಟ್ಟಿದ್ದಾರೆ ಅಂದ್ರೆ

 

ಹೆಂಡತಿ : ಅವನೂ ನಿನ್ನಂಗೆ ಲಜ್ಜೆ ಗೆಟ್ಟ ಹಲ್ಕಾ ಕೆಲಸಾ ಮಾಡಿದವನೇ ಅಲ್ವಾ. ಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಅಂದಂಗಾಯ್ತು.

 

ಗಂಡ : ಮುಂದೆ ಕೇಳೆ. "ಲೈಂಗಿಕ ಅಪೇಕ್ಷೆ ಇಲ್ಲದೇ ಹೆಣ್ಮಕ್ಕಳನ್ನ ಅಪ್ಪಿಕೊಳ್ಳೋದು ಅಪರಾಧವಲ್ಲಾ" ಅಂತಾ ಹೇಳಿದ್ದಾರೆ. ನಾನೂ ಅದನ್ನೇ ಹೇಳ್ತಿದ್ದೀನಿ. ಹೆಂಗ್ಸನ್ನ ಅಪ್ಪಿಕೊಂಡಿದ್ದು ನಾನೇಯಾ, ಆದರೆ ನಿನ್ನಾಣೆಯಾಗೂ ನನಗೆ ಲೈಂಗಿಕ ಯೋಚನೆ, ಕೆಟ್ಟ ಆಲೋಚನೆ ಎರಡೂ ಇಲ್ಲಾ ಕಣೆ.. ನನ್ನನ್ನ ನಂಬು.

 

ಹೆಂಡತಿ : ಶಹಬ್ಬಾಸ್. ಅತ್ಯಾಚಾರ ಮಾಡಿದೋರು ಹಿಂಗೆ " ಲೈಂಗಿಕ ಆಸೆ ಇಲ್ಲದೇ ಮಾಡಿದ್ದು ತಪ್ಪಲ್ಲಾ ಅಂತಾ ಹೇಳಿದ್ರೆ ಕಾನೂನು ಸುಮ್ನೆ ಇರ್ತದೇನ್ರೀ

 

ಗಂಡ : ಹೋಗಲಿ ಬಿಡೆ. ನಾನಂತೂ ಬ್ರಿಜ್ಬೂಷಣ್ ಪರ. ನಿಮ್ಮನೆ ದೇವ್ರಾಣೆ.. ಅಪ್ಪಿಕೊಂಡಿದ್ದು ನಿಜಾ, ಆದರೆ ಕೆಟ್ಟ ಯೋಚನೆ ಇಲ್ಲಾ ಇಲ್ಲಾ ಇಲ್ಲಾಂದ್ರೆ ಇಲ್ಲಾ.

 

ಹೆಂಡತಿ : ಹೌದೇನ್ರೀ.. ಲೈಂಗಿಕ ಯೋಚನೆ ಇಲ್ಲದೇ ಯಾರು ಯಾರನ್ನು ತಬ್ಬಿಕೊಂಡ್ರೂ ತಪ್ಪಿಲ್ಲಾ ಅಂತೀರಾ?

 

ಗಂಡ : ಹೌದು.. ಕಣೆ. ಬರೀ ತಬ್ಕೊಳ್ಳೋದ್ರಿಂದಾ ಏನಾಗುತ್ತೆ ಹೇಳು. ಕೆಟ್ಟ ಯೋಚನೆ ಮಾಡಬಾರದು ಅಷ್ಟೇಯಾ?

 

ಹೆಂಡತಿ : ನೀವೇಳೋ ಮಾತು ನಿಜಾ ಏನ್ರೀ. ಕೆಟ್ಟ ಯೋಚನೆ ಇಲ್ಲದೇ ಹಗ್ ಮಾಡೋದರಲ್ಲಿ ತಪ್ಪೇ ಇಲ್ಲಾ ಅಂತೀರಾ?

 

ಗಂಡ : ಹೌದೌದು.. ತಪ್ಪೇ ಇಲ್ಲಾಏನಾದ್ರೂ ಒಳ್ಳೇದು ಮಾಡೋವಾಗ ಕೆಟ್ಟ ಯೋಚನೆ ಮಾಡಬಾರದು ಅಷ್ಟೇ ಗೊತ್ತಾಯ್ತಾ.

 

ಹೆಂಡತಿ : ಸರೀರಿ.. ನಿಮ್ಮನ್ನ ತಪ್ಪಾಗಿ ತಿಳ್ಕೊಂಡಿದ್ದೆ ಕ್ಷಮಿಸಿ ಬಿಡಿ..

 

ಗಂಡ : ಹಂಗ್ ಬಾ ದಾರೀಗೆ.. ಜೈ ಬ್ರಿಜ್ಬೂಷಣ್ ಕೀ..

 

ಹೆಂಡತಿ : ಆದರೆ.. ರೀ.. ಏನೂಂದ್ರೆ. ನಾಳೆಯಿಂದಾ ನಾನು, ಅಂದ್ರೆ ನಿಮ್ಮ ಹೆಂಡತಿಯಾದ ನಾನು, ಶುದ್ದ ಮನಸ್ಸಿನಿಂದಾ, ಕೆಟ್ಟದ್ದನ್ನು ಯೋಚನೆ ಮಾಡದೇ ಬೇರೆ ಗಂಡಸರನ್ನ ತಬ್ಕೊಂಡ್ರೆ ನಿಮಗೇನೂ ಆಬ್ಜಕ್ಷನ್ ಇಲ್ಲಾ ಅಲ್ವೇನ್ರೀ.

 

ಗಂಡ : ( ಕರೆಂಟ್ ಶಾಕ್ ಹೊಡಿಸಿಕೊಂಡವರಂತಾಗಿ) ಲೇ ಏನೇ ಇದು. ಗಂಡಸರೇನೋ ಮಾಡ್ತಾರೆ ಅಂತಾ ನೀವೂ ಮಾಡೋಕಾಗುತ್ತೇನು. ಮನೆ ಮರ್ಯಾದೆ ಗತಿ ಏನು? ನೋಡಿದವರು ಆಡಿಕೊಳ್ಳದೇ ಇರ್ತಾರಾ

 

ಹೆಂಡತಿ : ಹಾಂ. ಹೆಂಗಸರು ಮಾಡಿದ್ರೆ ಮನೆ ಮರ್ಯಾದೆ ಹಾಳಾಗುತ್ತದೆ ಅಲ್ವೇನ್ರೀ, ಅದೇ ನೀವು ಗಂಡಸರು ಸಿಕ್ಕ ಸಿಕ್ಕ ಹೊಲದಾಗ ಮೇದು ಬಂದ್ರೂ, ಕಂಡ ಕಂಡ ಹಳ್ಳ ಕೊಳ್ಳದಾಗ ಈಸಿ ಬಂದ್ರೂ ಅದು ಪರವಾಗಿಲ್ಲ ಅಲ್ವೇನ್ರೀ. ಥೂ ನಿಮ್ಮಂತಾ ಗಂಡಸರ ಜನ್ಮಕ್ಕ ಬೆಂಕಿ ಹಾಕಾ. ಯಾವ್ನರೀ ಅವಾ ಹಲ್ಕಾ ನನ್ನ ಮಗಾ ಬ್ರಿಜ್ಬೂಷಣ ಅನ್ನೋ ಲೋಫರ್ ನನ್ಮಗಾ. ಅವನಿಗೂ ತಾಯಿ ತಂಗಿ ಹೆಂಡತಿ ಇಲ್ವಾ. ಬೇರೆಯವರು ಬಂದು ಅವರನ್ನ ತಬ್ಬಿಕೊಂಡು "ಅಯ್ಯೋ ಲೈಂಗಿಕ ಆಸೆ ಇಲ್ಲದೇ ಅಪ್ಪಿಗೊಂಡಿದ್ದೀವಷ್ಟೇ" ಅಂತಂದ್ರೆ ಸುಮ್ಕೆ ಇರ್ತಾನೇನ್ರೀ ನಾಮರ್ಧ ನನ್ಮಗಾ

 

ಗಂಡ : ಹೋಲ್ಡಾನ್.. ಹೋಲ್ ಸೇಲಾಗಿ ಗಂಡ್ಸರನ್ನ ಬೈಬೇಡಾ ಕಣೆ. ಆಯ್ತು.. ತಪ್ಪಾಯ್ತು. ಇನ್ಮೇಲೆ ಒಳ್ಳೇದೋ ಕೆಟ್ಟದ್ದೋ ಏನೇ ಯೋಚನೇ ಬಂದ್ರೂ ನಿನ್ನನ್ನ ಬಿಟ್ಟು ಬೇರೆ ಯಾರನ್ನೂ ತಬ್ಕೊಳ್ಳೋ ಕೆಲಸಾ ಮಾತ್ರ ಮಾಡೋದಿಲ್ಲಾ ಅಂದ್ರೆ ಮಾಡೋದಿಲ್ಲಾ. ಇದು ನಮ್ಮನೆ ದೇವ್ರ ಮೇಲಾಣೆ.

 

ಹೆಂಡತಿ : ಏನಯ್ಯಾ ನಿನ್ನ ಮಾತಿನ ಮರ್ಮಾ. ಬೇರೆ ಯಾರನ್ನೂ ಅಪ್ಕೊಳ್ಳೋದಿಲ್ಲಾ ಅಂದ್ರೆ, ಬೇರೆ ಏನು ಬೇಕಾದ್ರೂ ಮಾಡ್ತೀನಿ ಅಂತಾನಾ.

 

ಗಂಡ : ಇಲ್ಲಾ ಮಾರಾಯ್ತಿ. ನಿನ್ನ ಹೊರತು ಪಡಿಸಿ ಅನ್ಯ ನಾರಿಯರನ್ನ ಕಣ್ಣೆತ್ತಿ ಸಹ ನೊಡೋದಿಲ್ಲಾ ಅಂದ್ರೆ ನೋಡೋದಿಲ್ಲಾ. ಇದೊಂದು ಸಲ ಕ್ಷಮಿಸು. ಪೆನ್ ಡ್ರೈವಲ್ಲಿ ಇನ್ನೂ ಏನೇನು ಹಾವು ಮಡ್ಗಿದ್ದೀಯಾ?

 

ಹೆಂಡತಿ : ಆಯ್ತು.. ಇದೇ ಪಸ್ಟ್ ಆಂಡ್ ಲಾಸ್ಟ್ ವಾರ್ನಿಂಗ್. ಇನ್ನೊಮ್ಮೆ ಏನಾದ್ರೂ ಇಂತಾ ಹಲ್ಕಾ ಕೆಲಸಾ ಮಾಡಿದ್ರೆ ನಾನು ನಾರಿ ಅಲ್ಲಾ ಮಾರಿ ಆಗಬೇಕಾಗುತ್ತೆ. ಇಟ್ಕೊಳ್ರಿ ಪೆನ್ ಡ್ರೈವ್. ಇದರಲ್ಲಿ ಏನೂ ಇಲ್ಲಾ, ಎಲ್ಲಾ ಖಾಲಿನಿಮ್ಮನ್ನ ಹೆದಿರ್ಸೋಕೆ ಇಟ್ಕೊಂಡಿದ್ದೆ. ಎಲ್ಲಾ ನಮ್ಮ ಕುಮಾರಣ್ಣನ ಐಡಿಯಾ. ನಿಮ್ಮೇಲೆ ವರ್ಕೌಟ್ ಮಾಡಿದೆ ಅಷ್ಟೇ. ( ಎಂದು ಪೆನ್ ಡ್ರೈವ್ ಗಂಡನ ಕೈಗಿತ್ತು, ಕಟ್ಟಿದ್ದ ಸೆರಗು ಬಿಡಿಸಿಕೊಳ್ಳುತ್ತಾ ಅಡುಗೆ ಮನೆ ಕಡೆ ಹೋಗುತ್ತಾಳೆ)

 

ಗಂಡ : ಅಣ್ಣಾ ಕುಮಾರಣ್ಣಾ, ಏನಣ್ಣಾ ನಿನ್ನ ಮಹಿಮೆ. ನಿನ್ನ ಐನಾತಿ ಐಡಿಯಾ ಇಟ್ಕೊಂಡು ನಮ್ಮ ಹೆಂಡ್ರೂ ಸಹ ಬ್ಲಾಕ್ಮೇಲ್ ಮಾಡೋ ಹಂಗಾಯ್ತು. ಅಪ್ಪಾ ಬ್ರಿಜ್ಬೂಷಣ್ಣು ಹೆಂಗೋ ನಿನ್ನ ಹೇಳಿಕೆ ಹೇಳಿ ಇವತ್ತು ಗಂಡಾಂತರದಿಂದ ಪಾರಾದಂತಾಯ್ತು. ಜೈ ಕುಮಾರಣ್ಣ, ಜೈ ಜೈ ಬ್ರಿಜ್ಬೂಷಣಾ. ( ಎನ್ನುತ್ತಾ ಪೆನ್ ಡ್ರೈವ್ ಎತ್ತಿ ಹಿಡಿದು ಹಾಡುತ್ತಾನೆ

 

ನಾಗರ ಹಾವೇ ಹಾವೊಳು ಹೂವೇ 

ಪೆನ್ ಡ್ರೈವ್ ಒಳಗೆ ನಿನ್ನಯ ತಾವೆ..

 

*-ಶಶಿಕಾಂತ ಯಡಹಳ್ಳಿ*

 

(11-08-2023)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ