ಬೆಂಕಿಯಿಂದ ಬಾಣಲೆಗೆ (ಪ್ರಹಸನ -55)
(ಪ್ರಹಸನ -55)
ಬೆಂಕಿಯಿಂದ ಬಾಣಲೆಗೆ
******************************
ಲೇಖಕ : (ಖುಷಿಯಿಂದ) ಕೊನೆಗೂ ತೊಲಗಿತೋ ತೊಲಗಿತು, ಕ್ರೂರ ಕಾಯಿದೆ. ದೊರಕಿತೋ ದೊರಕಿತು ಅಭಿವ್ಯಕ್ತಿ ಸ್ವಾತಂತ್ರ್ಯಕೆ ಜಯ ದೊರಕಿತು.
ಪತ್ರಕರ್ತ : ಏನಾಯ್ತು ಲೇಖಕರೇ, ಯಾವ ಕಾಯಿದೆ ತೊಲಗಿತು, ಏನ್ ಕತೆ. ಏನಿಷ್ಟೊಂದು ಖುಷಿಯಾಗಿದ್ದೀರಿ.
ಲೇಖಕ : ಅದೇ ಬ್ರಿಟೀಷರ ಕಾಲದಿಂದಲೂ ಇತ್ತಲ್ಲಾ ದೇಶದ್ರೋಹ ಅನ್ನೊ ಕರಾಳ ಕಾನೂನು. ಅದನ್ನೇ ತೆಗೆದು ಹಾಕಲಾಗುತ್ತದೆ ಅಂತಾ ಅಮಿತ್ ಶಾ ರವರು ನಿನ್ನೆ ಲೋಕಸಭೆಯಲ್ಲೆ ಹೇಳಿದ್ದಾರೆ. ವಿರೋಧಿಸೋರನ್ನೆಲ್ಲಾ ಜೈಲಿಗಟ್ಟುವ ಕಾನೂನು ರದ್ದಾಗೋದಕ್ಕೆ ಖುಷಿ ಆಯ್ತು. ಇನ್ನು ನಿರ್ಬಿಡೆಯಿಂದ ನಮ್ಮಂತೋರು ಬರೀಬಹುದು. ಭಾಷಣ ಮಾಡಬೋದು.
ಪತ್ರಕರ್ತ : ಅದೆಲ್ಲಾ ನಿಮ್ಮ ಭ್ರಮೆ ಅಷ್ಟೇ ಲೇಖಕರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಹೋಗಿ ಮರಣ ಬಂದಿದೆ.
ಲೇಖಕ : ಏನೂ ಹಂಗಂದ್ರೆ. ದೇಶದ್ರೋಹ ಕಾನೂನು ತೆಗೆದುಹಾಕಿದ್ದು ಸುಳ್ಳಾ?
ಪತ್ರಕರ್ತ : ನಿಜಾ.. ನೂರಕ್ಕೆ ನೂರರಷ್ಟು ನಿಜ. ಆದರೆ.. ಅದೇ ಕಾನೂನು ಬೇರೆ ಹೆಸರಲ್ಲಿ ತರ್ತಿದ್ದಾರೆ.
ಅದು ಇನ್ನೂ ಭಯಾನಕ. ಪ್ರಭುತ್ವ ವಿರೋಧಿಗಳಾದ ನಿಮ್ಮಂತವರಿಗಂತೂ ಅತೀ ಮಾರಕ.
ಲೇಖಕ : (ಆಘಾತಗೊಂಡು) ಏನು ನೀ ಹೇಳ್ತಿರೋದು.
ಪತ್ರಕರ್ತ : ನೋಡಿ.. ಬ್ರಿಟೀಷರ ಕಾಲದ ದೇಶದ್ರೋಹ ಕಾನೂನು ಹೋಗಿ ಮೋದಿ ಕಾಲದ ಸರ್ವಾಧಿಕಾರಿ ಕಾನೂನು ಜಾರಿಯಾಗ್ತಿದೆ. ಹುಷಾರಾಗಿರಿ ಸರ್.
ಲೇಖಕ : ಹೌದಾ.. ಅದು ಹೇಗೆ, ವಿವರಿಸಿ ಹೇಳಿ ಮರಾಯ್ರೇ.
ಪತ್ರಕರ್ತ : 124 ಎ ಸೆಕ್ಷನ್ನಿನ ದೇಶದ್ರೋಹ ಕಾನೂನನ್ನು 150 ನೇ ಸೆಕ್ಷನ್ನಿಗೆ ಸೇರಿಸಲಾಗಿದೆ.
ಅಂದ್ರೆ ಈ ಹೊಸ ಕಾನೂನು ಜಾರಿಯಾದ್ರೆ ಯಾರೂ ಲಿಖಿತವಾಗಿ, ಮೌಖಿಕವಾಗಿ ಅಥವಾ ಸಂಜ್ಞೆ ಮೂಲಕವಾಗಿ ಇಲ್ಲವೇ ಪ್ರದರ್ಶನದ ಮೂಲಕವಾಗಲೀ ಭಾರತ ಸರಕಾರದ ವಿರುದ್ಧ ದ್ವೇಷ ಅಥವಾ ನಿಂದನೆ ಅಥವಾ ಅಸಮಾಧಾನ ಉಂಟುಮಾಡುವ ಪ್ರಯತ್ನಗಳನ್ನು ಶಿಕ್ಷಾರ್ಹ ಅಪರಾಧ ಅಂತಾ ಪರಿಗಣಿಸಲಾಗುತ್ತದೆ.
ಲೇಖಕ : ಅಂದ್ರೆ ಸರಕಾರ ಜನವಿರೋಧಿ ಕೆಲಸ ಏನೇ ಮಾಡಿದ್ರೂ ನೋಡಿಕೊಂಡು ಸುಮ್ಮನೇ ಇರಬೇಕಾ? ವಿರೋಧಿಸಿ ಬರೆಯಲೇ ಬಾರದಾ? ನಾಟಕ ಸಿನೆಮಾ ವಿಡಿಯೋ ಕೂಡಾ ಮಾಡಿ ಪ್ರದರ್ಶನ ಮಾಡಲೇಬಾರದಾ?
ಪತ್ರಕರ್ತ : ಮಾಡಬಹುದು. ಮಾಡಿದರೆ ಹೆಚ್ಚೇನಿಲ್ಲಾ ಕನಿಷ್ಟ ಮೂರು ವರ್ಷ ಶಿಕ್ಷೆ, ಗರಿಷ್ಟ ಜೀವಿತಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುತ್ತದೆ ಅಷ್ಟೇ.
ಲೇಖಕ : ಅಯ್ಯೋ ಅಯ್ಯೋ ಇದು ಅನ್ಯಾಯಾ? ವಾಕ್ ಸ್ವಾತಂತ್ರ್ಯದ ಮೇಲೆ ಮಾಡಿದ ಗಾಯಾ. ಇದನ್ನು ನಾನು ವಿರೋಧಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯ ದ ಹರಣವನ್ನು ಖಂಡಿಸ್ತೇನೆ.
ಪತ್ರಕರ್ತ : ಹಂಗಾದ್ರೆ ನಿಮಗೆ ಜೈಲೂಟ ಗ್ಯಾರಂಟಿ ಲೇಖಕರೇ.
ಲೇಖಕ : ಇದು ಸಂವಿಧಾನ ವಿರೋಧಿ ಕಾನೂನು. ಪ್ರಜಾತಂತ್ರ ಕೊಟ್ಟಿರುವ ವಾಕ್ ಸ್ವಾತಂತ್ರ್ಯದ ವಿರೋಧಿ ಕಾಯಿದೆ.
ಪತ್ರಕರ್ತ : ಅಲ್ಲಾ ಲೇಖಕರೇ ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿದ್ದೇವೆ ಎಂದವರು ಅದನ್ನೇ ಮಾಡ್ತಿದ್ದಾರೆ. ಇನ್ನೆಲ್ಲಿಯ ಪ್ರಜಾಪ್ರಭುತ್ವ. ಸರ್ವಾಧಿಕಾರ ಅಧಿಕಾರವನ್ನು ಆಕ್ರಮಿಸಿಯಾಗಿದೆ. ಜನರ ಭಾವನೆ ಪ್ರಚೋದಿಸಿ ಶಾಸಕಾಂಗ ಕೈವಶ ಮಾಡಿಕೊಂಡಾಗಿದೆ. ಇಡಿ ಐಟಿ ಸಿಬಿಐ ಗಳ ಮೂಲಕ ಹೆದರಿಸಿ ಕಾರ್ಯಾಂಗಕ್ಕೆ ಮೂಗುದಾರ ಹಾಕಿಯಾಗಿದೆ. ಸುಗ್ರೀವಾಜ್ಞೆಗಳ ಮೂಲಕ ನ್ಯಾಯಾಂಗದ ತೀರ್ಮಾನಗಳನ್ನೇ ಬುಡಮೇಲು ಮಾಡಲಾಗುತ್ತಿದೆ. ಇನ್ನು ಮಾಧ್ಯಮಗಳನ್ನೆಲ್ಲಾ ವಂದಿಮಾಗಧಿಗರನ್ನಾಗಿಸಿ ಕೊಂಡುಕೊಳ್ಳಲಾಗಿದೆ.
ಚುನಾವಣಾ ಆಯೋಗವನ್ನೂ ಆಪೋಷಣ ಮಾಡಲಾಗಿದೆ. ಇನ್ನೆಲ್ಲಿಯ ಸಂವಿಧಾನ, ಇನ್ನೂ ಎಲ್ಲಿದೆ ಪ್ರಜಾಪ್ರಭುತ್ವ. ಈಗಿರುವುದು ಅಘೋಷಿತ ಸರ್ವಾಧಿಕಾರಿ ಸರಕಾರ ಲೇಖಕರೇ. ಇನ್ನು ಸರಕಾರಕ್ಕೆ ಸವಾಲೊಡ್ಡುತ್ತಿದ್ದ ಲೇಖಕರು, ವಿಚಾರವಾದಿಗಳು, ಪ್ರಗತಿಪರರನ್ನು ಮಟ್ಟ ಹಾಕಲು 150 ಸೆಕ್ಷನ್ ಕಾಯಿದೆ ಅವರಿಗೆ ಬೇಕಿತ್ತು, ಅದನ್ನೇ ಈಗ ತರಲಾಗುತ್ತಿದೆ.
ಲೇಖಕ : ಇದು ತುಂಬಾ ಅನ್ಯಾಯ. ದೇಶದ ಏಕತೆ ಸಾರ್ವಭೌಮತ್ವದ ಹೆಸರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಹುನ್ನಾರ. ಪ್ರತಿಭಟನೆಗಳನ್ನೇ ಹತ್ತಿಕ್ಕುವ ಕುತಂತ್ರ. ವಿರೋಧ ಪಕ್ಷಗಳು ಯಾಕೆ ಸುಮ್ಮನಿದ್ದಾವೆ? ಸಂವಿಧಾನ ಪರ ಸಂಘಟನೆಗಳು ಯಾಕೆ ಮೌನವಾಗಿವೆ. ಪ್ರಗತಿಪರರು ಹೋರಾಟಗಾರರು ಎಲ್ಲಿದ್ದಾರೆ.
ಪತ್ರಕರ್ತ : ಅವರೇ ದೇಶದ್ರೋಹ ಕಾನೂನು ರದ್ದಾಗಬೇಕು ಅಂತಾ ದ್ವನಿ ಎತ್ತಿದ್ದು. ಅದಕ್ಕೆ ಪ್ಯಾಸಿಸ್ಟ್ ಸರಕಾರ ಅದನ್ನು ರದ್ದು ಮಾಡಿ ತಮಗೆ ಅನುಕೂಲವಾಗುವ ಕರಾಳ ಕಾನೂನು ಜಾರಿಮಾಡುತ್ತಿದೆ. ಈಗಲೂ ಪ್ಯಾಸಿಸ್ಟ್ ವಿರೋಧಿಗಳು ಸಂಘಟಿತರಾಗಿ ವಿರೋಧಿಸದೇ ಇದ್ದರೆ ಅಷ್ಟೇ ಮುಗೀತು, ಜೈಲುಗಳೆಲ್ಲಾ ಭರ್ತಿಯಾಗುತ್ತವೆ.
ಈ ಕರಾಳ ಕಾನೂನಿಂದಾಗಿ ದೇಶಾದ್ಯಂತ ಅಘೋಷಿತ ಎಮರ್ಜೆನ್ಸಿ ಜಾರಿಯಾಗುತ್ತದೆ. ತಯಾರಾಗಿರಿ.
ಲೇಖಕ : ಬೆಂಕಿಯಿಂದಾ ಬಾಣಲೆಗೆ ಬಿದ್ದಂಗೆ ಆಯ್ತಲ್ಲೋ. ಊದೋದು ಕೊಟ್ಟು ಬಾರಿಸೋದು ತಗೊಂಡಂಗೆ ಆಯ್ತಲ್ಲೋ. ಅಯ್ಯಯ್ಯೋ ಅನ್ಯಾಯಾ?
ಪತ್ರಕರ್ತ : ಹುಷಾರಾಗಿರಿ ಸರ್. ನಿಮ್ಮಂತೋರೆ ಟಾರ್ಗೆಟ್.
ಲೇಖಕ : ನನ್ನ ವಾಟ್ಸಾಪ್ ಪೇಸ್ಬುಕ್ ತುಂಬಾ ಈ ಪ್ಯಾಸಿಸ್ಟ್ ಸರಕಾರದ ವಿರುದ್ದ ಬರೆದ ಲೇಖನಗಳೇ ಇವೆ ಮಾರಾಯಾ. ನನ್ನ ಯುಟ್ಯೂಬಲ್ಲಿ ಪ್ರಭುತ್ವ ವಿರೋಧಿ ಭಾಷಣಗಳಿವೆ. ಏನ್ ಮಾಡಲೀ.
ಪತ್ರಕರ್ತ : ಏನೂ ಮಾಡಬೇಡಿ. ಜೈಲಿಗೆ ಹೋಗೋಕೆ ರೆಡಿಯಾಗಿ. ನಿಮ್ಮಂತಾ ಸತ್ಯ ಬರೆಯುವವರ ಅಗತ್ಯ ಈ ಸುಳ್ಳಿನ ಸರಕಾರಕ್ಕೆ ಇರೋದಿಲ್ಲ.
ಲೇಖಕ : ಮೊದಲು ಹೋಗಿ ಅವನ್ನೆಲ್ಲಾ ಡಿಲೀಟ್ ಮಾಡ್ಲಾ, ಇಲ್ಲಾ ಸಂವಿಧಾನಬದ್ದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿಸುವುದಕ್ಕೆ ದೈರ್ಯವಾಗಿ ಹೋರಾಡ್ಲಾ.
ಪರ್ತಕರ್ತ : ಅದು ನಿಮ್ಮ ಸಂವಿಧಾನ ನಿಷ್ಟೆ ಹಾಗೂ ಜನಪರ ಬದ್ದತೆಯನ್ನು ಅವಲಂಬಿಸಿದೆ ಗುರುಗಳೇ. ನಿರ್ಧಾರ ನಿಮ್ಮ ಕೈಲಿದೆ. ದಮನವನ್ನು ಸಹಿಸಿ ವ್ಯವಸ್ಥೆಯ ಗುಲಾಮರಾಗಿ ಬದುಕುತ್ತೀರಾ, ಇಲ್ಲಾ ಪ್ರಜಾತಂತ್ರದ ಉಳಿವಿಗಾಗಿ, ವಾಕ್ ಸ್ವಾತಂತ್ರ್ಯದ ಗೆಲುವಿಗಾಗಿ ಹೋರಾಡುತ್ತೀರಾ? ಮೌನವಾಗಿದ್ದರೆ
ನೈತಿಕವಾಗಿ ಸಾಯ್ತೀರಿ, ಎದುರಿಸಿ ನಿಂತ್ರೆ ಚರಿತ್ರೆಯಲ್ಲಿ ಉಳಿತೀರಿ.
ಲೇಖಕ : ಆತ್ಮಸಾಕ್ಷಿ, ಸ್ವಾಭಿಮಾನ, ಅಭಿವ್ಯಕ್ತಿ ಸ್ವಾತಂತ್ರ್ಯಗಳ ಕಡೆಗಣಿಸಿ ಬದುಕೋದೂ ಒಂದು ಬದುಕಾ? ಇಲ್ಲಾ ಸಾಧ್ಯವೇ ಇಲ್ಲಾ. ನಾನು ಬರೆಯೋದು ನಿಲ್ಲಿಸೋದಿಲ್ಲ, ಪ್ರಭುತ್ವದ ದಮನದ ವಿರುದ್ದ ಮಾತಾಡೋದು ಬಿಡೋದಿಲ್ಲ. ಏನೇ ಆಗಲಿ ಸಂವಿಧಾನ ಉಳೀಬೇಕು. ವಾಕ್ ಸ್ವಾತಂತ್ರ್ಯ ಇರಲೇಬೇಕು. ಸರ್ವಾಧಿಕಾರಕ್ಕೆ ಧಿಕ್ಕಾರ. ಕರಾಳ ಕಾನೂನಿಗೆ ಧಿಕ್ಕಾರ. ಸುಮ್ಮನಿದ್ದರೆ ದಮನ ತಪ್ಪದು, ಎದುರಿಸಿ ನಿಂತರೆ ಜಯ ನಮ್ಮದು. ( ಎಂದು ಘೋಷಣೆ ಕೂಗುತ್ತಾ ಹೋಗುತ್ತಾನೆ)
ಪತ್ರಕರ್ತ : 124ಎ ಸೆಕ್ಷನ್ ಹೋಗಿ 150 ನೇ ಸೆಕ್ಷನ್ ಬಂತು ಡುಂಡುಮುಕ್. ದೇಶದ್ರೋಹ ಕಾಯಿದೆ ಹೋಗಿ ಪ್ರಭುತ್ವದ್ರೋಹದ ಕಾನೂನು ಬಂತು ಡುಂ ಡುಂ ಡುಮುಕ್. ಬೆಂಕಿಯಿಂದ ಬಾಣಲೆಗೆ ಬಿದ್ದಂಗಾಯ್ತು ಡುಂ ಡುಂ ಡುಮುಕ್.
*-ಶಶಿಕಾಂತ ಯಡಹಳ್ಳಿ*
Comments
Post a Comment