ನಕಲಿ ದೇವರ ಅಸಲಿ ಕತೆ (ಪ್ರಹಸನ- 56)

 (ಪ್ರಹಸನ- 56)

ನಕಲಿ ದೇವರ ಅಸಲಿ ಕತೆ   

**********************************

 

ಆತ್ಮಸಾಕ್ಷಿ : ಎಲ್ರ ಕಾಲೂ ಎಳೀತದೆ ಕಾಲ ( ಎಂದು ಗಹಗಹಿಸಿ ನಗುತ್ತಾ ಕುಣಿದಾಡತೊಡಗಿತು)

 

ಉಪೇಂದ್ರ : ಏಯ್, ಯಾರು ನೀನು? ನಾನೇ ಸಿಕ್ಕಾಪಟ್ಟೆ ಟೆನ್ಶನ್ನಿನಲ್ಲಿರುವಾಗ ನೀನ್ಯಾರಯ್ಯಾ ಹೋಗಾಚೆ.

 

ಆತ್ಮಸಾಕ್ಷಿ : ನಾನು ನೀನೇ, ನೀನು ನಾನೇ.. ನನ್ನೆಸರೇ ನಾನು.

 

ಉಪೇಂದ್ರ : ನಾನೇ ಬರೆದ ಸಿನೆಮಾ ಡೈಲಾಗ್ ನನಗೇ ಹೇಳ್ತೀಯಾ, ಯಾರಯ್ಯಾ ನೀನು?

 

ಆತ್ಮಸಾಕ್ಷಿ : ನಾನಯ್ಯಾ ನಾನು. ಅಂದ್ರೆ ನಿನ್ನ ಆತ್ಮಸಾಕ್ಷಿ. "ಏನೂ ಇಲ್ಲದವನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆಹಿಡಿದನಂತೆ" ಹಂಗಾಯ್ತು ನಿನ್ನ ಕತೆ. ಯಾಕೆ  ಹಣ ಹೆಸರು ಬಂತೆಂದು  ನಾನೀರೋದನ್ನೂ ಮರೆತಿದ್ದೀಯಾ?

 

ಉಪೇಂದ್ರ : ನೀನು ಇನ್ನೂ ಜೀವಂತ ಇದ್ದೀಯಾ? ನಿನ್ನ ಸಾಯಿಸಿದ ಮೇಲೇನೇ ನಾನು ಕತ್ತಿ ಮಚ್ಚು ಕೊಚ್ಚು ಸಿನೆಮಾಗಳನ್ನು ಮಾಡಿ ಜನರಲ್ಲಿ ಹುಚ್ಚು ಹಬ್ಬಿಸಿದ್ದು.

 

ಆತ್ಮಸಾಕ್ಷಿ : ಅಯ್ಯೋ ಮೂರ್ಖಾ, ನಿನಗೆಲ್ಲೋ ಭ್ರಮೆ. ಆತ್ಮಸಾಕ್ಷಿಯನ್ನ ಸಾಯಿಸಲು ಸಾಧ್ಯವೇ

 

ಉಪೇಂದ್ರ : ನಾನು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ. ಯಾಕೆಂದ್ರೆ ಐಯಾಮ್ ಗಾಡ್. ಗಾಡ್ ಇಸ್ ಗ್ರೇಟ್

 

ಆತ್ಮಸಾಕ್ಷಿ : ಇದೂ ಕೂಡಾ ನಿನ್ನ ಭ್ರಮೆ. ನೀನು ದೇವರೆ ಆಗಿದ್ದರೆ ನಿನಗೀ ಗತಿ ಯಾಕೆ ಬರ್ತಿತ್ತು. ಕಾಲ ಯಾಕೆ ನಿನ್ನ ಕಾಲು ಎಳೀತಿತ್ತು? ಯಾಕೆ ಬಂಧನದ ಭೀತಿಯಿಂದ ಹೆದರಿಕೊಳ್ಳುವ ದುಸ್ಥಿತಿ ಉದ್ಬವಿಸುತ್ತಿತ್ತು.

 

ಉಪೇಂದ್ರ : ನಾನೇನಯ್ಯಾ ಮಾಡಿದೆ. ಏನೋ ಊರು ಅಂದ್ಮೇಲೆ ಹೊಲಗೇರಿ ಇರುತ್ತೆ ಅಂತಾ ಗಾದೆ ಮಾತು ಅಂದ್ನಪ್ಪಾ, ಇದರಲ್ಲೇನಿದೆ ಘೋರ ಅಪರಾಧ. ನಾನು ದೇವರಾಗಿ ಇಷ್ಟೂ ಹೇಳಬಾರದಾ?

 

ಆತ್ಮಸಾಕ್ಷಿ : ಅಯ್ಯೋ ನಕಲಿ ದೇವರೇ, ನೀನು ಹೇಳಿದ್ದು ಗಾದೆಯಲ್ಲವೂ ಅದು ಬೈಗುಳಒಂದು ಸಮುದಾಯವನ್ನೇ ಅವಮಾನಿಸಿದ್ದೀಯಾ? ನಿನ್ನ ಮೇಲ್ಜಾತಿ ದುರಹಂಕಾರವನ್ನು ತೋರಿಸಿದ್ದೀಯಾ? ಅದಕ್ಕೆ ಅನೇಕರು ನಿನ್ನ ವಿರುದ್ದ ತಿರುಗಿ ಬಿದ್ದಿದ್ದಾರೆ. ನಿನಗೆ ಹಿಡಿದಿರುವ ಶ್ರೇಷ್ಟತೆಯ ಹುಚ್ಚಿಗೆ ಮದ್ದೆರೆಯುತ್ತಿದ್ದಾರೆ.

 

ಉಪೇಂದ್ರ : ಈಗ ಯಾರು ನನ್ನ ಕಾಲು ಎಳೀತಾ ಇದ್ದಾರೋ ಅವರ್ಯಾರೂ ಅಂದು ಹುಟ್ಟೇ ಇರಲಿಲ್ಲ. ನಾನೇ ದೇವರು, ದೇವರು ದೊಡ್ಡವನು.

 

ಆತ್ಮಸಾಕ್ಷಿ : ಯಾಕಯ್ಯಾ ಹಿಂಗೆ ಪುಂಗತೀಯಾ? ನೀನೆಳಿದ್ದನ್ನೆಲ್ಲಾ ನಂಬೋಕೆ ನಾನೇನು ನಿನ್ನ ಹುಚ್ಚು ಅಂಧಾಭಿಮಾನಿಯಲ್ಲಾ ತಿಳ್ಕೋನೀನು ದೇವರೇ ಆಗಿದ್ದರೆ ಯಾಕಯ್ಯಾ ದಲಿತರಿಗೆ ಅಪಮಾನ ಆಗೋ ಹಾಗೆ ಮಾತಾಡಿದೆ.

 

ಉಪೇಂದ್ರ : ಅಪಮಾನವಾ?  50 ವರ್ಷಗಳ ಹಿಂದೆ ನಾನು ಅನುಭವಿಸಿದ ಕ್ರೂರ ಬಡತನ, ನನ್ನ ಮುಂದೆನೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅವಮಾನ ತುಳಿತಗಳನ್ನೆಲ್ಲಾ ಅನುಭವಿಸುತ್ತಲೇ ನಾನು ಬೆಳೆದಿದ್ದೇನೆ ಗೊತ್ತಾ?

 

ಆತ್ಮಸಾಕ್ಷಿ : ಅದಕ್ಕೆ ಈಗ ಇನ್ನೊಂದು ಶೋಷಿತ ಸಮುದಾಯವನ್ನು ಅವಮಾನ ಮಾಡುವುದು ತಪ್ಪಲ್ಲವೇ ಭಗವಂತಾ.

 

ಉಪೇಂದ್ರ : ತಪ್ಪು ಅಂತಾ ಕೆಲವರು ಕಾಲು ಎಳದ್ರು, ಇರಲಿ ಅಂತಾ  ಕ್ಷಮೆ ಕೇಳಿದ್ದೇನಲ್ಲಾ, ಅವರಿಗೆ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವಲ್ಲಾ. ಯಾಕೆ...ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ

 

ಆತ್ಮಸಾಕ್ಷಿ : ಯಾಕೆಂದರೆ ನೀನು ದಲಿತರ ಸ್ವಾಭಿಮಾನವನ್ನೇ ಕೆಣಕಿರುವೆ ಆದ್ದರಿಂದ ಕ್ಷಮೆಗೂ ನೀನು ಯೋಗ್ಯನಲ್ಲಾ, ಅವರು ನಿನ್ನ ಕ್ಷಮಿಸುವುದೂ ಇಲ್ಲಾ.

 

ಉಪೇಂದ್ರ : ನೀನು ನನ್ನ ಆತ್ಮಸಾಕ್ಷಿಯೋ ಇಲ್ಲಾ ದಲಿತರ ಆತ್ಮಸಾಕ್ಷಿಯೋ?

 

ಆತ್ಮಸಾಕ್ಷಿ : ನೀನು ನಿನ್ನ ಹಣ ಮದ, ರೂಪ ಮದ, ನಾಮ ಮದಗಳಿಂದ ಮೈಮರೆತು ದುರಹಂಕಾರದಿಂದ ತಪ್ಪು ಮಾಡಿದಾಗ ಎಚ್ಚರಿಸುವ ನಿನ್ನದೇ ಆತ್ಮಸಾಕ್ಷಿ ನಾನು.

 

ಉಪೇಂದ್ರ : ನೋ.. ನಾನೇನೂ ತಪ್ಪು ಮಾಡಿಲ್ಲ. ಗಾಡ್ ಎಂದಾದರೂ ತಪ್ಪು ಮಾಡೋಕೆ ಸಾಧ್ಯವಾ? ಏನೋ ಬಾಯಿತಪ್ಪಿ ಗಾದೆ ಮಾತು ಹೇಳಿದ್ನಪ್ಪಾ. ದೇವರಾಗಿ ನನಗೆ ಅಷ್ಟೂ ಹೇಳೋದಕ್ಕೂ ಹಕ್ಕಿಲ್ವಾ?

 

ಆತ್ಮಸಾಕ್ಷಿ : ಹಕ್ಕಾ? ನಿನಗಾ? ಆಡಬಾರದ್ದು ಆಡಿ ಸಿಕ್ಕಲ್ಲಿ ಸಿಕ್ಕಾಕಿಕೊಂಡಿದ್ದೀಯಾ, ಮೊದಲು ಪಾರಾಗೋದು ನೋಡು. ಸುಮ್ಕೆ ಅಲ್ಲಾ ಅಟ್ರಾಸಿಟಿ ಕೇಸಾಗುತ್ತೆ ಹುಷಾರು.

 

ಉಪೇಂದ್ರ : ಅದನ್ನೆಲ್ಲಾ ನನ್ನ ಬ್ರಾಹ್ಮಿಣ್ ಬ್ರೇನಿಗೆ ಹೇಳಿ ಕೊಡಬೇಕಾ. ನಾನು ಮಾತಾಡಿದ ಗಾದೆ ಮಾತಿನ ವೀಡಿಯೋ ಡಿಲೀಟ್ ಮಾಡಿದ್ದಾಯ್ತು. ಮೊದಲೇ ದೊಡ್ಡ ಲಾಯರನ್ನ ಸಂಪರ್ಕ ಮಾಡಿದ್ದಾಯ್ತು. ಬೇರೆಯವರು ದೂರು ಕೊಡುವ ಮೊದಲೇ ಬ್ರಾಹ್ಮಣನೊಬ್ಬನಿಂದ ನಾನೇ ಸ್ಟೇಶನ್ನೊಂದರಲ್ಲಿ ಕೇಸು ಬಿದ್ದೋಗುವ ಸೆಕ್ಷನ್ನಲ್ಲಿ ಎಪ್ ಆರ್ ಹಾಕಿಸಿದ್ದಾಯ್ತು. ದೊಡ್ಡ ಲಾಯರಿಗೆ ದೊಡ್ಡದಾದ ಪೀಸ್ ಕೊಟ್ಟು ಹೈಕೋರ್ಟಲ್ಲಿ ಅರ್ಜೆಂಟಾಗಿ ಸ್ಟೇ ಪಡೆದದ್ದೂ ಆಯ್ತು. ದೇವರು ಅಂದ್ರೆ ಸುಮ್ನೇನಾ ಕಾಂತಾ. ಏಟಿಗೆ ಎದುರೇಟು ಅಂದ್ರೆ ಗೊತ್ತಾ ಏನಂತಾ?

 

ಆತ್ಮಸಾಕ್ಷಿ : ನೀನು ಇಷ್ಟೊಂದು ಕ್ರಿಮಿನಲ್ ದೇವರು ಅಂತಾ ಗೊತ್ತಿರಲಿಲ್ಲ ಬಿಡು ಭಗವಂತಾ.

 

ಉಪೇಂದ್ರ : ನನ್ನ ಕಾಲೆಳೆದವರ ಕಾಲೆಳೆದು ಪ್ರಾಸಬದ್ದ ಸಂಭಾಷಣೆ ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೇನೆ ನೀನೂ ಕೇಳು.

" ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದೆ ಪಡೆ..

ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ"

 

ಆತ್ಮಸಾಕ್ಷಿ : ವಾವ್ವಾ ವಾರೆವ್ವಾ..

 

ಉಪೇಂದ್ರ : "ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ

ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನು ಪ್ರೀತಿಸುವ ಹೃದಯ ಕೊಡೆ"

 

ಆತ್ಮಸಾಕ್ಷಿ : ವಾವ್.. ಅದ್ಬುತ.. ಅತ್ಯದ್ಬುತ.. ಆದರೆ ಮೂರ್ಖಾ ನಿನ್ನ ಪ್ರಾಸಾ ನಿನಗೆ ತಂದಿಕ್ಕಿದೆ ತ್ರಾಸಾ. ಬುಸುಗುಟ್ಟುವ ಹಾವುಗಳಿಗೆ ದಲಿತರನ್ನು ಹೋಲಿಸಿ ಮತ್ತೆ ಅವರನ್ನು ಕೆರಳಿಸಿ ನಿನ್ನ ಜಾತಿ ಅಹಂಕಾರ ತೋರ್ಸಿದ್ದೀಯಾ. ನೀ ಬರೆದ ಪ್ರಾಸವೂ ನಿನ್ನ ವಿರುದ್ದ ಕೋರ್ಟಲ್ಲಿ ಸಾಕ್ಷಿಯಾಗಬಲ್ಲುದು..

 

ಉಪೇಂದ್ರ : ನೋ.. ಹಾಗೆಲ್ಲಾ ಆಗೋದಿಲ್ಲಾ, ಯಾಕೆಂದ್ರೆ ಎಲ್ರ ಕಾಲೆಳೆಯುವವನ ಕಾಲನ್ನು ಬೇರೆಯವರು ಎಳೆಯಲು ದೇವರು ಬಿಡುವುದಿಲ್ಲ.

 

ಆತ್ಮಸಾಕ್ಷಿ : ಹಾಗಾದರೆ ಕೇಳು ತಿಕ್ಕಲು ತಿರಬೋಕಿ. ಬದುಕು ಅನ್ನೋದು ನೀನು ನಿರ್ದೇಶಿಸುವ ವಿಕ್ಷಿಪ್ತ ಸಿನೆಮಾದಂತಲ್ಲ. ನೀನು ಬರೆಯುವ ಅತಿರೇಕದ ಸಂಭಾಷಣೆಗಳು ನಿಜಜೀವನದಲ್ಲಿ ಚಾಲ್ತಿಗೆ ಬರೋದಿಲ್ಲ. ನೀನೇ ಬುದ್ದಿವಂತನೆಂಬ ಹುಚ್ಚು ಭ್ರಮೆಯಿಂದ ಹೊರಗೆ ಬಾ.. ಅಪಾಯ ಮುಂದಿದೆ.

 

ಉಪೇಂದ್ರ : ಏನು ಹಾಗಂದರೆ. ಇಂದ್ರ.. ಉಪೇಂದ್ರನಿಗೆ ಅಪಾಯ ತರುವ ದುಸ್ಸಾಹಸ ಯಾರಲ್ಲಿದೆ?

 

ಆತ್ಮಸಾಕ್ಷಿ : ನಿನ್ನ ಬ್ರೇಹ್ಮಿನ್ ಬುದ್ದಿವಂತಿಕೆ ಅವರಿಗೆ ಅರ್ಥವಾಗಿದೆ. ಇನ್ನೂ ಮೂರು ಸ್ಟೇಶನ್ನುಗಳಲ್ಲಿ ದೂರು ದಾಖಲಾಗಿದೆ. ಸ್ಟ್ರಾಂಗ್ ಸೆಕ್ಷನ್ನಗಳ ಅಡಿಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯವರು ನಿನ್ನ ವಿಚಾರಣೆಗೆ ಕರೆಸಿ ಬಂಧಿಸಲು ಪ್ರಯತ್ನ ಶುರು ಮಾಡಿದ್ದಾರೆ. ನೋಡು ನಿನ್ನ ಮೊಬೈಲ್ ರಿಂಗ್ ಆಗುತ್ತಿದೆ.

 

ಉಪೇಂದ್ರ : ಹೌದಾ..  ಪಾರಾದೆ ಅನ್ಕೊಂಡ್ರೆ ಮತ್ತೆ ಮತ್ತೆ ನನ್ನ ಕಾಲು ಎಳೀತಿದೆಯಲ್ಲಾ ಕಾಲಾ. ಹೌದು ಇದು ಪೊಲೀಸಿನವರದೇ ಕಾಲ್. ಈಗಲೇ ನನ್ನ ಮೊಬೈಲ್ ಸ್ವಿಚಾಪ್ ಮಾಡುವೆ. ಈಗ ಎಲ್ಲಿಗೆ ತಪ್ಪಿಸಿಕೊಂಡು ಹೋಗಲಿ

 

ಆತ್ಮಸಾಕ್ಷಿ : ಹೋಗು ಯಾವುದಾದರೂ ಬಿಲದಲ್ಲಿ ಹೋಗಿ ಅಡಗಿ ಕೂರು. ನಿನ್ನ ದೊಡ್ಡ ಲಾಯರ್ರು ಮತ್ತೆ ಬೇಲ್ ತರೋವರೆಗೂ ಯಾರ ಕೈಗೂ ಸಿಗಬೇಡ. ಇಲ್ಲವಾದರೆ ಆರೆಸ್ಟ್ ಗ್ಯಾರಂಟಿ. ನಿನ್ನ ಮೇಲಿರೋದು ಅಟ್ರಾಸಿಟಿ ಕೇಸು, ನೆನಪಿರಲಿ.

 

ಉಪೇಂದ್ರ : ಅಯ್ಯೋ ಏನು ಮಾಡಲಿ ಈಗ. ಮಚ್ಚೆತ್ತಿಕೊಂಡು  ಹೋಗಿ ದೂರುದಾರರನ್ನು ಕೊಚ್ಚಿ ಹಾಕಲೇ. ಇನ್ನೊಂದಿಷ್ಟು ಡೈಲಾಗ್ ಬರೆದು ಅವರನ್ನು ಲೇವಡಿ ಮಾಡಲೇ. ಎಲ್ಲಿ ನನ್ನ ಅಭಿಮಾನಿಗಳು, ಎಲ್ಲಿ ನನ್ನ ಕುಲಬಾಂಧವರು.. 

 

ಆತ್ಮಸಾಕ್ಷಿ : ಅದೆಲ್ಲಾ ನಿನ್ನ ಸಿನೆಮಾದಲ್ಲಿ ಮಾತ್ರ ಸಾಧ್ಯ? ಕಾನೂನು ಎಚ್ಚೆತ್ತರೆ ನಿನ್ನ ಆಟ ನಡೆಯೋದಿಲ್ಲ ದೇವರೇ. ಓಡು, ಬಚ್ಚಿಟ್ಟುಕೋ.

 

ಉಪೇಂದ್ರ : ಏನೋ ಮಾಡಲು ಹೋಗಿ ಏನು ಮಾಡಿದೆ ನಾನು. ನನ್ನ ಸಿನಿಮಾ ಡೈಲಾಗ್ ಗಳೇ ನೆನಪಿಗೆ ಬರ್ತಿವೆ.

" ಹೌದು ನಾನು ಪಾಪಿ, ಲೋಫರ್, ವರ್ಸ್ಟ ನನ್ನ ಮಗ"

 

ಆತ್ಮಸಾಕ್ಷಿ : (ಸೀಟಿ ಹೊಡೆದು) ಈಗಿನ ಸನ್ನಿವೇಶಕ್ಕೆ ತಕ್ಕ ಸಂಭಾಷಣೆ. ಮುಂದುವರೆಸು..

 

ಉಪೇಂದ್ರ : ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಲು ತಿಕ್ಲು...

 

ಆತ್ಮಸಾಕ್ಷಿ : (ಚಪ್ಪಾಳೆ ಹೊಡೆದು) ಶಹಬ್ಬಾಶ್. ತಿಕ್ಲು ಮಕ್ಕಳ ಲೀಡರ್ ನೀನೇ ಅಂತಾ ಅನ್ಸುತ್ತೆ. ಇನ್ನೊಂದು ಡೈಲಾಗ್ ಹೇಳು. ಕೇಳೋಕೆ ಚೆನ್ನಾಗಿರುತ್ತೆ.

 

ಉಪೇಂದ್ರಮಗಾ, ಪ್ರಪಂಚದಲ್ಲಿ 2 ಕ್ಲಾಸ್ ಜನಗಳು, ಬಾಕಿ ಇಡೋರು, ಬಾಕಿ ಇಡ್ದಿರೋರು, ಕೆಲವರು ಪ್ರೀತಿಲಿ ಬಾಕಿ ಇಡ್ತಾರೆ, ಕೆಲವರು ದ್ವೇಷದಲ್ಲಿ ಬಾಕಿ ಇಡ್ತಾರೆ, ಕೆಲವರು ದುಡ್ಡಲ್ಲಿ ಬಾಕಿ ಇಡ್ತಾರೆ, ಕೆಲವರು ಆಸ್ತಿಯಲ್ಲಿ ಬಾಕಿ ಇಡ್ತಾರೆಆದ್ರೆ ನಾನು ಮಾತ್ರ ಯಾವದೂ ಬಾಕಿ ಇಡೋಲ್ಲ, ಎಲ್ಲಾ ವಾಪಸ್ ಕೋಡ್ತೀನಿ.

 

ಆತ್ಮಸಾಕ್ಷಿ : (ಸಿಳ್ಳೆ ಹೊಡೆದು) ಯಸ್.. ದ್ವೇಷವನ್ನೂ ಬಾಕಿ ಇಡದೇ ದ್ವೇಷ ಕಾರಿದ್ದಕ್ಕೆ ನಿನಗೆ ಈಗ ಇಂತಾ ದುಸ್ತಿತಿ ಬಂದಿದೆ. ಮತ್ತೆ ವಾಪಸ್ ಕೊಡ್ತೀನಂತಾ ಹೋಗಿ ಸಿಕ್ಕಾಕಿಕೊಂಡಿದ್ದೀಯಾ. ಹೋಗಲಿ ಇನ್ನೊಂದು ಡೈಲಾಗ್ ಪ್ಲೀಜ್..

 

ಉಪೇಂದ್ರ : "ಪ್ರಪಂಚದಲ್ಲಿ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ"

 

ಆತ್ಮಸಾಕ್ಷಿ : ಅದೇ ಅದೇ ನೀನು ಮಾಡಿದ ತಪ್ಪು. ಪ್ರೀತಿ ಬದನೇಕಾಯಿ ಅಂತಾ ದ್ವೇಷದ ಕೈ ಹಿಡಿದೆ. ಅದೇ ಈಗ ನಿನ್ನ ಕಾಲೆಳೀತಾ ಇರೋದು. ಇರ್ಲಿ, ಒನ್ ಮೋರ್ ಡೈಲಾಗ್ ಪ್ಲೀಜ್..

 

( ಅಷ್ಟರಲ್ಲಿ ಬಾಗಿಲು ಬಡಿದ ಸದ್ದು. ನಂತರ ಡೋರ್ ಬೆಲ್ ಬಾರಿಸಿದ ತಕ್ಷಣ 'ಉಪ್ಪಿಗಿಂತ ರುಚಿ ಬೇರೆ ಇಲ್ಲಾ, ಅಂದುಕೊಂಡೋರು ದಡ್ಡರಲ್ಲಾ..' ಹಾಡಿನ ರಿಂಗ್ ಟೋನ್ ಕೇಳಿ ಬರುತ್ತದೆ)

 

ಪೊಲೀಸ್ : ಯಾರ್ರಿ ಮನೇಲಿದ್ದೀರಿ. ನಾವು ಪೊಲೀಸಿನವರು, ಬಾಗಿಲು ತಗೀರಿ.

 

ಉಪೇಂದ್ರ : ಕೊನೆಗೂ ಬಂದೇ ಬಿಟ್ರು. ಯಾರಲ್ಲಿ.. ಅಡುಗೆ ಬಟ್ರೇ, ಬನ್ನಿ ಇಲ್ಲಿ. ಯಾರೇ ಬಂದು ಕೇಳಿದ್ರೂ ನಾನು ಮನೇಲಿ ಇಲ್ಲಾ ಅಂತಾ ಹೇಳು

 

ಆತ್ಮಸಾಕ್ಷಿ : ಹೋಗು, ಯಾವುದಾದರೂ ಬಿಲ ಸೇರ್ಕೋ. ಉಪ್ಪು ರುಚಿಗೆ ತಕ್ಕಷ್ಟೇ ಇರಬೇಕು. ಹೆಚ್ಚಾದ್ರೆ ಊಟ ತಿನ್ನೊಕಾಗೋದಿಲ್ಲ. ಓಡಯ್ಯಾ ಓಡು.

 

ಉಪೇಂದ್ರ : (ಹಿತ್ತಲಿನತ್ತ ಓಡಿ ಹೋಗುತ್ತಾ) ಯಾಮ್ ಗಾಡ್. ಗಾಡ್ ಇಸ್ ಇನ್ ಟ್ರಬಲ್, ರನ್ ರನ್ ರನ್.. 

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ