ಎತ್ತ ನಾಳ ಪಂಡಿತರ ಜ್ಯೋತಿಷ್ಯ (ಪ್ರಹಸನ-57)
(ಪ್ರಹಸನ-57)
ಎತ್ತ ನಾಳ ಪಂಡಿತರ ಜ್ಯೋತಿಷ್ಯ
******************************************
(ಮಹಾಪಂಡಿತ ರತ್ನ ಜ್ಯೋತಿಷ್ಯ ವಿದ್ವಾನ್ ಶ್ರೀ ಶ್ರೀ ಎತ್ತ ನಾಳ ಜ್ಯೋತಿಷ್ಯಾಲಯ ಅಂತಾ ಬೋರ್ಡ್ ಮುಂದೆ ಖಾವಿ ಧರಿಸಿ ಹಣೆಗೆ ಡಾಳಾಗಿ ವಿಭೂತಿ ಹಾಗೂ ಕುಂಕುಮ ಬಳಿದು, ಕೊರಳಲ್ಲಿ ಜಪಮಣಿಗಳನ್ನು ಹಾಕಿಕೊಂಡ ಪಂಡಿತರು ಗಿರಾಕಿಗಾಗಿ ಕಾಯುತ್ತಿದ್ದಾರೆ)
ಪಂಡಿತರ ಶಿಷ್ಯ : ಬರ್ರಪ್ಪಾ ಬರ್ರಿ, ಬನ್ರಣ್ಣಾ ಬನ್ರಿ. ಯವ್ವಾ ಯಕ್ಕಾ ತಂಗಿ ನೀವಾದ್ರೂ ಬನ್ರಿ, ಜ್ಯೋತಿಷ್ಯ ಹೇಳಲಾಗುತ್ತೆ ಇಲ್ಲಿ ನಿಮ್ಮ ಭವಿಷ್ಯ ಹೇಳಲಾಗುತ್ತೆ.
ಇದ್ದದ್ದು ಇದ್ದಂಗೆ ಮುಂದಾಗೋದನ್ನ ಕಂಡಂಗೆ ಹೇಳ್ತಾರೆ ಬನ್ರಪ್ಪಾ ಬನ್ನಿ.
ವ್ಯಕ್ತಿ : (ಓಡಿ ಬಂದು ಪಂಡಿತರ ಮುಂದೆ ಕೂತು ಕೈ ತೋರಿಸಿ) ಪಂಡಿತರೇ ನಮ್ಮ ಕೈ ಪಕ್ಷದ ಸರಕಾರ ಎಷ್ಟು ವರ್ಷ ಇರುತ್ತೆ ಹೇಳಿ ಪಂಡಿತರೆ.
ಎತ್ತ ನಾಳ ಪಂಡಿತ : ಚೀ ಛೀ ಎತ್ತು ಕೈ. ನಂಗೆ ಈ ಕೈ ಅಂದ್ರೆ ಅಲರ್ಜಿ. ಹಸ್ತ ಕಂಡ್ರೆ ಆಗೂದಿಲ್ಲ. ಅದಕ್ಕss ನಾ ಹಸ್ತ ಗಿಸ್ತಾ ನೋಡಿ ಜ್ಯೋತಿಷ್ಯ ಹೇಳೂದಿಲ್ಲ. ಏನಿದ್ರೂ ಮಾರಿ ನೋಡಿ ಮುಂದಾಗೋದು ಹೇಳ್ತೀನಿ. ಜೈ ವಿಶ್ವಗುರು ಕಾಲಕೇಯಾ..
ವ್ಯಕ್ತಿ : ಆತು, ಮುಖಾ ನೋಡೇ ಹೇಳ್ರೀ ಬ್ಯಾಡ ಅಂದೋರ್ಯಾರು.
ಎತ್ತ ನಾಳ ಪಂಡಿತ : (ಪಗಡೆ ಎಸೆದು ಲೆಕ್ಕ ಹಾಕಿ) ಈ ಕೈ ಸರಕಾರದ ಆಯಸ್ಸು ಇನ್ನು ಬಾಳಂದ್ರ ಬರೀ ಆರಂದ್ರ ಆರು ತಿಂಗಳು ಮಾತ್ರ. ನಾನೇಳೋದು ಸತ್ಯ ಸತ್ಯ ಈ ಕವಡೆ ಆಣೆಯಾಗೂ ಸತ್ಯ.
ವ್ಯಕ್ತಿ : ಏ ಪಂಡಿತಾ, ಸರಕಾರ ಗಟ್ಟಿಯಾಗಿ ಗುಂಡಕಲ್ಲಿನಂತೆ ನಿಂತೈತೆ. ( ಸೀಟಿ ಆಗಮನ) ನೋಡಿ ಸರ್ ಆರೇ ತಿಂಗಳಲ್ಲಿ ಸರಕಾರ ಬೀಳುತ್ತಂತೆ ಸುಳ್ಳು ಹೇಳ್ತಾನೇ ಈ ಬುರಡೇ ಪಂಡಿತಾ.
ಸೀಟಿ : (ಗಂಭೀರವಾಗಿ ಯೋಚಿಸಿ, ಗಡ್ಡಾ ನೀವಿಕೊಂಡು) ನೋಡಿ, ನಮ್ಮ ವಿದ್ವಾನ ಪಂಡಿತರು ಜ್ಯೋತಿಷ್ಯ ಹೇಳ್ತಾರಂದ್ರೆ ಅವರಿಗೆ ಪಕ್ಕಾ ಮಾಹಿತಿ ಇದ್ದೇ ಇರುತ್ತೆ. ಸುಳ್ಳಾಗೋಕೆ ಸಾಧ್ಯವೇ ಇಲ್ಲ.
ವ್ಯಕ್ತಿ : ಅದೆಂಗೆ ಹೇಳ್ತೀರಾ?
ಸೀಟಿ : ನೋಡಿ ಈ ಹಿಂದೆ ಯಡಿಯಪ್ಪಾ ಮತ್ತು ಅವರ ಪುತ್ರ ವಿಜಯಪ್ಪನ ವಿರುದ್ದ ಭ್ರಷ್ಟಾಚಾರ ಅದು ಇದು ಅಂತಾ ಮಾಧ್ಯಮಗಳ ಮುಂದೆ ಜ್ಯೋತಿಷ್ಯ ಪುಂಗಿದ್ರು, ಮುಂದೇನಾಯ್ತು ಅಪ್ಪ ಮನೆಗೆ ಹೋದ್ರು, ಮಗ ಮೂಲೆಗುಂಪಾದ. ಅವತ್ತಿಂದಾ ಈ ನಮ್ಮ ಪಂಡಿತರ ಮೇಲೆ ನನಗೆ ನಂಬಿಕೆ ಜಾಸ್ತಿ.
ವ್ಯಕ್ತಿ : ಓ ಹೋಗ್ರೀ ಹೋಗಿ, ಸದಾ ವಟಗುಡುವ ಇವನನ್ನ ನಂಬಿ ಹಾಳಾದವ್ರು ಎಷ್ಟೋ ಜನ. ( ಥೂ ಎಂದು ಉಗಿದು ಹೋಗುವನು)
ಸೀಟಿ : ಪ್ರಣಾಮಗಳು ಪಂಡಿತರೇ. ನಿಮ್ಮ ದಿವ್ಯದೃಷ್ಟಿಯಂತೆ ಈ ಸರಕಾರ ಆರು ತಿಂಗಳಲ್ಲಿ ಬಿದ್ದು ನಮ್ಮ ಸರಕಾರ ಬಂದ್ರೆ ನಿಮಗಾಗಿ ಜ್ಯೋತಿಷ್ಯ ಸಚಿವಾಲಯ ಹುಟ್ಟಾಕಿ ಮಿನಿಸ್ಟರ್ ಮಾಡೋದಂತೂ ಗ್ಯಾರಂಟಿ.
ಎತ್ತ ನಾಳ ಪಂಡಿತ : ಹೇ.. ನನಗೆ ಮಿನಿಸ್ಟರ್ ಆಗೋ ಆಸೆ ಏನಿಲ್ಲಾ ಬಿಡ್ರಿ, ಏನಿದ್ರೂ ನಾನು ಸಿಎಂ ಕ್ಯಾಂಡಿಡೇಟು.
ಸೀಟಿ : ಅದೆಂಗಾಗುತ್ತೆ ಪಂಡಿತರೇ, ನೀವು ಸಿಎಂ ಆದ್ರೆ ನನ್ನ ಗತಿ ಏನು. ನಾನು ಸಿಎಂ ಸೀಟಿಗೆ ಟಾವೆಲ್ ಹಾಕಿ ಕೂತು ಎಷ್ಟು ವರ್ಷ ಆಯ್ತು.
ಎತ್ತ ನಾಳ ಪಂಡಿತ : ಇದನ್ನ ನಾನು ಹೇಳ್ತಿಲ್ಲಾರೀ ನನ್ನ ಈ ಕವಡೆ ಹೇಳ್ತಿದ್ದಾವೆ. ನಿಮಗೆ ಸಿಎಂ ಆಗೋ ಯೋಗ ಯೋಗ್ಯತೆ ಇಲ್ಲಾ ಅಂತಾ. ನನಗೆ ಆ ಭಾಗ್ಯ ಸಿಗೋದು ಗ್ಯಾರಂಟಿ. ನೀವು ಸೋತ ಶಾಸಕ ಅನ್ನೂದರ ನೆಪ್ಪಿರಲಿ.
ಸೀಟಿ : ಆಯ್ತು ಬಿಡಿ ಜೋತಿಷಿಗಳೇ. ಆ ಕಾಲ ಬಂದಾಗ ನೊಡೋಣಂತೆ. ಈಗ ನಮ್ಮ ಹೂ ಪಕ್ಷದ ಅಧ್ಯಕ್ಷನನ್ನಾಗಿ ನನ್ನ ಮಾಡ್ತಾರೋ ಇಲ್ವೋ ಅದನ್ನ ನಿಮ್ಮ ಕವಡೆ ಕೇಳಿ ಹೇಳ್ರೀ.
ಎತ್ತ ನಾಳ ಪಂಡಿತ : (ಸೀಟಿ ಮುಖ ಕೈಯಲ್ಲಿ ಹಿಡಿದು, ಆಕಡೆ ಈ ಕಡೆ ತಿರುಗಿಸಿ ನೋಡಿ. ಕವಡೆ ಹಾಕಿ, ಬೆರಳುಗಳನ್ನು ಎಣಿಸಿ) ಇಲ್ಲಾ ಸಾಧ್ಯವೇ ಇಲ್ಲ. ವಿಶ್ವಗುರು ಮಹಾಕಾಲಕೇಯನ ಮನಸ್ಸಲ್ಲಿ ನಿಮ್ಮ ಹೆಸರೇ ಇಲ್ಲಾ. ಅಧ್ಯಕ್ಷರಾಗೋ ಅದೃಷ್ಟ ನಿಮಗಿಲ್ಲಾ ಅಂತಾ ಕವಡೆ ಹೇಳ್ತಿದ್ದಾವೆ..
ಸೀಟಿ : ಹೌದಾ,, ಹಂಗಾದ್ರೆ ಯಾರಾಗಬಹುದು? ಇನ್ನೊಮ್ಮೆ ಕವಡೆ ಹಾಕಿ ನೋಡಿ.
ಎತ್ತ ನಾಳ ಪಂಡಿತ : ( ಮತ್ತೆ ಕವಡೆ ದಾಳ) ಆಹಾ..ಆಹಾಹಾ.. ಇಲ್ಲಿ ನೋಡ್ರೀ ಈ ಕವಡೆ ಸಂಖ್ಯಾಗಳು ನನ್ನ ಲಕ್ಕಿ ನಂಬರನ್ನ ತೋರಿಸ್ತಾ ಇವೆ. ಹೂಪಕ್ಷದ ಅಧ್ಯಕ್ಷ ನಾನೇ ಆಗೋದು ಅಂತಾ ಹೇಳಾಕತ್ತಾವೆ. ಇದ್ರಾಗ ಡೌಟೇ ಇಲ್ಲಾ. ನೀವು ಅಧ್ಯಕ್ಷರಾಗೋ ಆಸೆ ಬಿಟ್ಟು ನಡೀರಿ. ಏನರ ಆಗ್ಲಿ ಒಟ್ಟಿನಾಗ ನಿಮ್ಮ ನಸೀಬು ನೆಟ್ಟಗಿಲ್ಲಾ,
ಶಾಸಕಗಿರಿ ಹೋಯ್ತು, ಪಕ್ಷದ ಕಾರ್ಯದರ್ಶಿ ಹುದ್ದೆ ಹೋಯ್ತು. ಇನ್ನು ಏನೇನು ಹೋಗುತ್ತೋ ಆ ಕಾಲಕೇಯನಿಗೇ ಗೊತ್ತು.
ಸೀಟಿ : ಈಗ ಅಧ್ಯಕ್ಷರಾಗೋದು ನೀವೇ, ಮುಂದೆ ಸಿಎಂ ಆಗೋದು ನೀವೇ ಅಂದ್ರೆ ಸಂಘದ ಅಂಗವಾದ ನನ್ನ ಗತಿ ಏನು.
ಎತ್ತ ನಾಳ ಪಂಡಿತ : ಬಾಬಾಬುಡನ್ ಗಿರಿಯೇ ಗತಿ.
ಸೀಟಿ : ಅಯ್ಯೋ ಇದಕ್ಕೆ ಪರಿಹಾರ ಏನಿಲ್ವಾ. ನನಗೆ ಮತ್ತೆ ಅಧಿಕಾರ ದಕ್ಕೋದಕ್ಕೆ ಏನು ಮಾಡಬೇಕು ಅದನ್ನಾದ್ರೂ ಹೇಳಿ ಪಂಡಿತರೇ.
ಎತ್ತ ನಾಳ ಪಂಡಿತ : ಐತೆ, ನನ್ನ ಜ್ಯೋತಿಷ್ಯದೊಳಗ ಎಲ್ಲಾದಕ್ಕೂ ಪರಿಹಾರ ಐತೆ. ಹೋಮ ಮಾಡಿಸಬೇಕಾಗುತ್ತೆ ಹೋಮ. ಆಗ ನಿಮಗೆ ಅಧ್ಯಕ್ಷಗಿರಿ ಸಿಗದೇ ಇದ್ರೂ ಕನಿಷ್ಟ ವಿರೋಧ ಪಕ್ಷದ ನಾಯಕನ ಸ್ಥಾನಾನಾದ್ರೂ ಸಿಕ್ಕಸಿಗುತ್ತೆ.
ಸಿಟಿ ರವಿ : ಆಯ್ತು, ಹೋಮ ಮಾಡಿಸಿ ಪಂಡಿತರೇ.
ಎತ್ತ ನಾಳ ಪಂಡಿತ : ಸುಮ್ಮನೇ ಹೋಮ ಅಲ್ಲಾ ಇದು ರಕ್ತ ಹರಿಸುವ ಯಜ್ಞ. ನಾನಿಲ್ಲಿ ಹೋಮ ಮಾಡುವಾಗ ನೀನಲ್ಲಿ ಕೋಮುಗಲಭೆ ಹಬ್ಬಿಸಬೇಕು. ಊರೂರು ಹತ್ತಿ ಉರಿಯಬೇಕು. ಒಂದಿಷ್ಟು ಹೆಣಗಳು ಬೀಳಬೇಕು. ಮನಸುಗಳು ಒಡೆಯಬೇಕು, ಮನೆಗಳು ಸುಡಬೇಕು. ಇದೆಲ್ಲಾ ನಿನ್ನ ಕೈಲಿ ಮಾಡಿಸೋಕೆ ಆಗುತ್ತಾ.
ಸೀಟಿ : ಇದೆಲ್ಲಾ ನನಗೆ ಮ್ಯಾಟರ್ರಾ. ಇದನ್ನೇ ಮಾಡಿಸಿ ನಾನು ಎತ್ತರೆತ್ತರಕ್ಕೆ ಬೆಳೆದಿದ್ದು. ಆಯ್ತು ಮಾಡಿಸ್ತೇನೆ, ಗಲಭೆ ಹಬ್ಬಿಸ್ತೇನೆ. ಬೆಂಕಿ ಹಚ್ಚಿಸ್ತೇನೆ.
ಎತ್ತ ನಾಳ ಪಂಡಿತ : ಶಹಬ್ಬಾಶ್. ನೀನು ಬೆಂಕಿ ಹಚ್ಚು ನಾನು ತುಪ್ಪಾ ಸುರೀತೇನೆ. ರುದ್ರಯಾಗ ನಡೆದು ಹೋಗಲಿ. ಇದರಿಂದಾ ನಮ್ಮಿಬ್ಬರ ದಾರಿ ಸುಗಮ. ಕರ್ನಾಟಕ ಮಣಿಪುರದಂತೆ ಉರಿದು ಬೂದಿಯಾದರೆ ರಾಷ್ಟ್ರಪತಿ ಆಡಳಿತ ಹೇರೋದು ಗ್ಯಾರಂಟಿ. ಆಗ ಮತ್ತೆ ಚುನಾವಣೆ. ನಾವಿಬ್ಬರೂ ಹಚ್ಚಿದ ಬೆಂಕಿಯ ಬೆಳಕಲ್ಲಿ ಬಹುಮತ ಪಕ್ಕಾ. ಆಗ ನೀನೇ ಅಧ್ಯಕ್ಷ ನಾನೇ ಸಿಎಂ.
ಸೀಟಿ : ವಾರೆವ್ವಾ ಕೂಗುಮಾರಿಗಳಾದ ನಾವಿಬ್ಬರೂ ಒಂದಾದರೆ ಎಲ್ಲವೂ ಸಾಧ್ಯ. ಸಮಾಧಿಗಳ ಮೇಲೆ ಸಿಂಹಾಸನ ಏರಲು ಸಿದ್ದತೆ ಮಾಡಿಕೊಳ್ಳೋಣ.
ಎತ್ತ ನಾಳ ಪಂಡಿತ : ಮತ್ತೆ ನನ್ನ ಭವಿಷ್ಯವಾಣಿ ಸುಳ್ಳಾಗಲು ಸಾಧ್ಯವೇ ಇಲ್ಲ. ಆರು ತಿಂಗಳು, ಅಷ್ಟೇ ಈ ಸರಕಾರದ ಆಯಸ್ಸು. ಮುಂದೆ ನಮಗೆ ಸಿಗೋದೆಲ್ಲಾ ಬರೀ ಯಸಸ್ಸು.
ಸೀಟಿ : ಧನ್ಯನಾದೆ ಪಂಡಿತರೇ. ಅಧಿಕಾರ ಇಲ್ಲದೇ ನಾವು ಹೆಚ್ಚು ದಿನ ಇರಲು ಸಾಧ್ಯವೇ ಇಲ್ಲ. ನೀವು ಮರಣ ಮೃದಂಗ ಯಾಗಕ್ಕೆ ಸಿದ್ದತೆ ಮಾಡಿಕೊಳ್ಳಿ. ನಾನು ರಕ್ತ ತರ್ಪಣಕ್ಕೆ ಹವಿಸ್ಸನ್ನು ಏರ್ಪಾಡು ಮಾಡುತ್ತೇನೆ. ಘನಘೋರ ಯಜ್ಞ ನಡೆದು ಹೋಗಲಿ. ಬರ್ತೇನೆ.. ( ಹೋಗುವನು)
ಎತ್ತ ನಾಳ ಪಂಡಿತ : ಏ ಶಿಷ್ಯಾ.. ಇನ್ನೂ ಎಷ್ಟು ಮಂದಿ ಬಂದಾರಲೇ ಜ್ಯೋತಿಷ್ಯ ಕೇಳೋಕೆ.
ಶಿಷ್ಯ : ಪಂಡಿತರೇ ಸೋಬಕ್ಕ, ಬೊಮ್ಮಣ್ಣ, ಅಸ್ವಸ್ಥ, ಅಸೋಕ ಎಲ್ರೂ ಬಂದಾರ್ರಿ. ಅವರವರ ಕಾರನ್ಯಾಗ ಕೂತು ನೀವು ಕರೀತೀರಿ ಅಂತಾ ಕಾಯ್ತಾ ಇದ್ದಾರೀ. ಹಂಗೆ ಆಳುವ ಪಕ್ಷದ ಒಂದೆರಡು ಅತೃಪ್ತ ಆತ್ಮಗಳೂ ಬಂದು ದೂರದಲ್ಲಿ ಮರೆಯಾಗ ನಿಂತಾವ್ರೀ..
ಎತ್ತ ನಾಳ ಪಂಡಿತ : ಬರ್ಲಿ ಬರ್ಲಿ, ಎಲ್ಲರೂ ಬರ್ಲಿ. ಸೀನಿಯಾರಿಟಿ ಪ್ರಕಾರ ಒಬ್ಬೊಬ್ಬರನ್ನ ಒಳಗ ಬಿಡು ಆಯ್ತಾ.
ಶಿಷ್ಯ : ಹೊರಗೆ ಬಂದು ಬರ್ರಪ್ಪಾ ಬರ್ರಿ. ಜ್ಯೋತಿಷ್ಯ ಕೇಳ ಬನ್ನಿ. ಇದ್ದದ್ದು ಇದ್ದಂಗೆ ಹೇಳುವ ಜ್ಯೋತಿಷ್ಯ, ಮುಂದಾಗೋದನ್ನ ಇಂದೇ ಹೇಳುವ ಭವಿಷ್ಯ. ಒಬ್ಬೊಬ್ಬರೇ ಬರ್ರೀ..
*- ಶಶಿಕಾಂತ ಯಡಹಳ್ಳಿ*
Comments
Post a Comment